ಅಪ್ಪನ ಹೆಸರು ಆಗಿಬರುವುದಿಲ್ಲವೇ?

ಅಪ್ಪನ ಹೆಸರು ಆಗಿಬರುವುದಿಲ್ಲವೇ?

ನೆನ್ನೆ ಸಂಜೆ ಹೀಗೆ ಗೆಳೆಯರು ಹರಟೆ ಹೊಡೆಯುತ್ತಿದ್ದಾಗ ಮತ್ತೊಬ್ಬ ಗೆಳೆಯ ಕೈಯಲ್ಲಿ ಒಂದು ದಿನಪತ್ರಿಕೆಯ ಚೂರನ್ನು ಹಿಡಿದುಕೊಂಡು ಬಂದು ದಿವಿನಾಗಿ ಎಲ್ಲರನ್ನೂ ಉದ್ದೇಶಿಸಿ ನನ್ನ ಹೆಸರು ದಿನಪತ್ರಿಕೆಯಲ್ಲಿ ಬಂದಿದೆ ಎಂದ.  ನಾವೆಲ್ಲಾ ಅವನನ್ನು ಒಂದೊಂದು ರೀತಿ ಛೇಡಿಸಲು ಶುರುವಿಟ್ಟುಕೊಂಡೆವು. ಏನು ಘನಂದಾರಿ ಕೆಲಸ ಮಾಡಿದೆಯಪ್ಪ ಪತ್ರಿಕೆಯಲ್ಲಿ ಬರುವಂಥದ್ದು.  ಯಾವುದಾದರೂ ದರೋಡೆ ಮಾಡಿದೆಯ, ಏನಾದರೂ ಕೊಲೆ ಮಾಡಿದೆಯ, ಅಥವಾ ನಿತ್ಯಾನಂದನ ಹಾಗೆ ಏನಾದರೂ ಕೆಲಸ ಮಾಡಿದೆಯ ಎಂದು ಒಬ್ಬೊಬ್ಬರು ಒಂದೊಂದು ರೀತಿ ರೇಗಿಸಲು ಶುರು ಮಾಡಿದೆವು.

ಆಮೇಲೆ ಅವನೇ ಹೇಳಿದ ಅಯ್ಯೋ ಹೇಳೋದು ಕೇಳ್ತಿರೋ ಇಲ್ವೋ ಎಂದಾಗ ಸರಿ ಹೇಳಪ್ಪ ಎಂದೆವು.  ಆಗ ಅವನು ಹೇಳಿದ ವಿಷಯ ಕೇಳಿ ನಮಗೆ ಆಶ್ಚರ್ಯವಾಯಿತು. ನನ್ನ ಹೆಸರನ್ನು ಬದಲಾಯಿಸಿಕೊಂಡಿದ್ದೇನೆ ಅದನ್ನು ದಿನಪತ್ರಿಕೆಯಲ್ಲಿ ಹಾಕಿಸಿದ್ದೇನೆ ಎಂದ. ಏನೆಂದು ಬದಲಾಯಿಸಿದ್ದೀಯ, ಏತಕ್ಕೆ ಬದಲಾಯಿಸಿದ್ದೀಯ, ಯಾರು ಹೇಳಿದರು ಬದಲಾಯಿಸುವುದಕ್ಕೆ ಹೀಗೆ ಒಟ್ಟಿಗೆ ಮೂರು ಪ್ರಶ್ನೆಗಳನ್ನು ಬಾಣದ ರೀತಿಯಲ್ಲಿ ಅವನ ಮೇಲೆ ಪ್ರಯೋಗಿಸಿದೆವು.

ಅದಕ್ಕೆ ಅವನಿಂದ ಬಂದ ಉತ್ತರ ಮತ್ತಷ್ಟು ವಿಚಿತ್ರವಾಗಿತ್ತು. ನನ್ನ ಪೂರ್ತಿ ಹೆಸರನ್ನೇನು ಬದಲಾಯಿಸಿಲ್ಲ. ಆದರೆ ನನ್ನ ಹೆಸರಿನ ಮುಂದೆ S ಎಂದು Initial ಇತ್ತಲ್ಲ ಅದನ್ನು ಮಾತ್ರ ತೆಗೆಸಿ ಹಾಕಿದ್ದೇನೆ ಅಷ್ಟೇ. ಕೂಡಲೇ ನಾವು ಮತ್ತೊಂದು ಪ್ರಶ್ನೆ ಹಾಕಿದೆವು S ಎಂದರೆ ಏನು ನಿಮ್ಮ ಊರಿನ ಹೆಸರ ಎಂದು ಕೇಳಿದ್ದಕ್ಕೆ ಇಲ್ಲ ಅದು ನನ್ನ ತಂದೆಯ ಹೆಸರು ಎಂದ. ನಮಗೆ ಈಗ ಇನ್ನಷ್ಟು ಆಶ್ಚರ್ಯವಾಯಿತು. ಅವನೇ ಮುಂದುವರೆಸಿ ಹೇಳಿದ. ಅದು ಬೇರೇನಿಲ್ಲ ಮೊನ್ನೆ ಹಾಗೆ ಸುಮ್ಮನೆ ಒಬ್ಬರು ಜ್ಯೋತಿಷಿಗಳ ಬಳಿ ನನ್ನ ಜಾತಕ ತೆಗೆದುಕೊಂಡು ಹೋಗಿದ್ದೆ. ಅವರು ಎಲ್ಲ ಪರೀಕ್ಷಿಸಿ ನಿಮ್ಮ ಹೆಸರಲ್ಲಿ ದೋಷವಿದೆ. ನಿಮ್ಮ ಹೆಸರಿನ ಮುಂದೆ ಇರುವ ಆ S ಅನ್ನು ತೆಗೆಸಿಬಿಡಿ . ಆಗ ನಿಮ್ಮ ದೆಸೆ  ತಿರುಗುತ್ತದೆ ಎಂದು ಹೇಳಿದರು. ಅದಕ್ಕೆ ತೆಗೆಸಿಬಿಟ್ಟೆ ಎಂದ. ನಮಗೆ ಏನು ಮಾತನಾಡಬೇಕೋ ಗೊತ್ತಾಗಲಿಲ್ಲ.

ಸ್ವಾಮಿ ಅಪ್ಪನ ಹೆಸರು ತೆಗೆಸಿ ಹಾಕಿದರೆ ಅದೃಷ್ಟ ಒಲಿಯುತ್ತದೆಯೇ ?
Rating
No votes yet

Comments