ಅಪ್ಪ ಅಮ್ಮ ರೈತರು
ಮೂಡಣದಲಿ ಸೋರ್ಯಬಂದಿಲ್ಲ
ಮಂಜ ಹನಿಯು ಚಳಿಯು ಹೊರಗೆಲ್ಲ
ಆಗಲೆ ಎದ್ದ ನನ್ನಪ್ಪ
ಎದ್ದಳು ನನ್ನಮ್ಮ
ಹಾಲು ಕರೆದು ಕರುವ ಬಿಟ್ಟು
ಅಂಗಳಕೆ ರಂಗೋಲಿ ಇಟ್ಟು
ಭುಜವ ತಟ್ಟಿ ಎಚ್ಚರಿಸಿದಳು
'ಏಳಿಮಕ್ಕಳೆ, ಏಳಿ'
ನಾನು ನನ್ನ ತಂಗಿ
ಎದ್ದು ಹಲ್ಲ ಉಜ್ಜಲು
ಬೆಳಗಾಗಿತ್ತು ಬಿಸಿಲು ತಾಕಿತ್ತು
ಪ್ರತಿದಿನ ಪ್ರಾತಃ ಕಾಲ
ತಪ್ಪದೆ ಏಳುವನು ಅಪ್ಪ
ಚಳಿಗೂ ಮಳೆಗೂ ಲೆಕ್ಕಿಸದೆ
ಹೊಲಕೆ ಹೋಗಿ ಹಸುವಕಟ್ಟಿ
ತೋಟಕ್ಕೊಂದು ಸುತ್ತು ಹಾಕಿ
ನಾನು ತಂಗಿ ಏಳೊ ವೇಳೆಗೆ
ಮನೆಗೆ ಬರುವನು
ಆಟ ಪಾಠ ನಮ್ಮ ಚಿಂತೆ
ಜೀವನ ನಡೆಸುವುದೇ ಅವರ ಚಿಂತೆ
ನಮ್ಮನು ಶಾಲೆಗೆ ಹೊರಡಿಸಿ
ಕೆಲಸಕೆ ಹೊರಡುವರು
ದುಡಿತವನ್ನೇ ನಂಭಿದವರು
ದುಡಿದುಣ್ಣುವರು
ಅಪ್ಪ ಅಮ್ಮ ರೈತರು.
Rating