ಅಪ್ಪ..

ಅಪ್ಪ..

ಮಧ್ಯಾಹ್ನವಾಗಿತ್ತು. ಅಡುಗೆ ಮಾಡಿ ಮುಗಿಸಿ ಮನೆಯಲ್ಲಿ ಒಂಟಿಯೆನಿಸಿ ಊರಿನ ನೆನಪಾಯಿತು. ಮಧ್ಯಾಹ್ನ ಮನೆಯಲ್ಲಿ ಯಾಕಿದ್ದಾನೆ ಅಂತ ಅನಿಸಬಹುದು ನಿಮಗೆ. ಬೆಂಗಳೂರಿಗೆ ಬಂದು ೭ ವರ್ಷವಾದರೂ ನನಗೆ ನೈಟ್ ಶಿಫ್ಟ್ ಬಿಟ್ಟು, ಬೆಳಗಿನ ಕೆಲಸ ಹುಡುಕುವ ಆಸಕ್ತಿ ಇನ್ನೂ ಬಂದಿಲ್ಲ ನೋಡಿ. ಬೆಂಗಳೂರು ಟ್ರಾಫಿಕ್ ನೆನೆಸಿಕೊಂಡಾಗಲೆಲ್ಲಾ, ಕಿಂಚಿತ್ ಮನೆಗೆ ಬರುವಾಗಾದರೂ ಆರಾಮವಾಗಿ ಉಸಿರಾಡಬಹುದಲ್ಲ ಅಂತಾಣಿಸುತ್ತದೆ. ಹೆಚ್ಚು ಟ್ರಾಫಿಕ್ ಇರುವುದಿಲ್ಲ. ಇರಲಿ ವಿಷಯದ ಆಚೆಗೆ ಯೋಚಿಸುವುದು ಬೇಡ. ಊರಿನ ಸ್ಥಿರ ದೂರವಾಣಿಗೆ ಕರೆ ಮಾಡಿದೆ. ನಮ್ಮೂರ ಫೋನ್ ಸ್ಥಿರವೇ. ಒಂಥರಾ ಹಳೆಯ ಕನ್ನಡ ಸಿನೆಮಾಗಳಲ್ಲಿ ಹೀರೋವಿನ ತಾಯಿಯೋ ತಂದೆಯೋ ಆಸ್ಪತ್ರೆಯಲ್ಲಿ ಸೀರಿಯಸ್ ಆಗಿ ಹೃದಯಾಘಾತ ಆಗಿ ಮಲಗಿ ಎರಡು ನಿಮಿಷಕ್ಕೆ ಪಕ್ಕದ ಹೃದಯದ ಬಡಿತದ ರೀತಿಗಳನ್ನು ತೋರಿಸುವ ಉಪಕರಣದಲ್ಲಿ ನೇರ ಸರಳರೇಖೆ ಬಂದ ಹಾಗೆಯೇ. ಲೈನ್ ಸಿಕ್ಕಿದರೆ ಸಿಕ್ಕಿತು, ಇಲ್ಲವಾದರೆ ಸಿಗುವುದೇ ಇಲ್ಲ. ಹಾಗಾಗಿ ಅಪರೂಪಕ್ಕೊಮ್ಮೆ ಮನೆಯವರೊಂದಿಗೆ ಮಾತನಾಡುವುದು. ಅಂದರೆ ಅವಕಾಶ ಸಿಗುವುದೇ ಅಪರೂಪ.
ಹಾಗೆಯೇ ಒಂಟಿ ಭಾವ ಮನದಲ್ಲಿ ತುಂಬಿ, ಭಾವಾವೇಶವ ಕಳೆಯಲು ಮನೆಗೆ ಕರೆ ಮಾಡಿದ್ದೆ. ಅದೃಷ್ಟವಶಾತ್  ಇಂದು ಫೋನ್ ಸಿಕ್ಕಿತ್ತು. ಯಾವಾಗಲೂ ಫೋನ್ ಎತ್ತುತ್ತಿದ್ದ ರಜಿನಿ (ಅಮ್ಮನಿಗೆ ನಾನು ಅಮ್ಮ ಎನ್ನುವುದಿಲ್ಲ. ಹೆಸರು ಹೇಳಿಯೇ ಕರೆಯುವುದು ಸಣ್ಣಕ್ಕಿದ್ದಾಗಲಿಂದ ಬೆಳೆದು ಬಂದ ಅಭ್ಯಾಸ), ಇಂದು ಫೋನ್ ಎತ್ತಲಿಲ್ಲ. ಸುಮಾರ್ ಹೊತ್ತಾದ ಮೇಲೆ ಅಪ್ಪ ಫೋನ್ ಎತ್ತಿ ಹಲೋ ಎಂದಾಕ್ಷಣ ನನ್ನ ಯೋಚನೆಗಳೆಲ್ಲಾ ಬದಲಾದವು. ಅಪ್ಪನ ಹತ್ತಿರ ನಾನು ಅಷ್ಟು ಆರಾಮಾಗಿ ಮಾತನಾಡಲಾರೆ. ಅಪ್ಪ ಅಂದರೆ ಸಣ್ಣಲ್ಲಿಂದಲೂ ಸ್ವಲ್ಪ ಭಯವೇ. ಅವರ ಗಾಂಭೀರ್ಯ, ಮಾತಿನ ಶೈಲಿ, ತಪ್ಪು ಮಾಡಿದಾಗಲೆಲ್ಲ ಕೊಡುತ್ತಿದ್ದ ಬೆಲ್ಟ್ ಏಟು ಇಂದಿಗೂ ಕೂಡ ನನಗೆ ಸ್ನೇಹಿತನಂತೆ ವರ್ತಿಸಲು ಬಿಡುವುದೇ ಇಲ್ಲ. ಹಟಾತ್ತಾಗಿ ಅಡಿಕೆ ಕೊಯಿಲಿನ ವಿಚಾರ ಎತ್ತಿಕೊಂಡು ತೋಟದ ಬೇಸಾಯ "ಈ ಸಾರಿ ಬೇಸಾಯಕ್ಕೆ ಹೊರಗಿನಿಂದ ಜನರನ್ನು ಕರೆಸಿದ್ದೇನೆ, ದಿನಗೂಲಿಗೆ ಬರುವವರಿಗೆ ಅಡುಗೆ ಮಾಡಿ ಹಾಕುವ ತಲೆನೋವಿಲ್ಲ.. ಅವರ ನೂರು ಬೇಡಿಕೆಗಳನ್ನು ಪೂರೈಸುವ ರಗಳೆಯಿಲ್ಲ. ರಜಿನಿಗೂ ಆರಾಮು. ಅಡಿಕೆ ಬೆಲೆ ಕೂಡ ಚೆನ್ನಾಗಿಯೇ ಇದೆ. ಗೋಟಡಕೆ ಒಳ್ಳೆ ಬೆಳೆಗೆ ನಿನ್ನೆ ತಾನೇ ಹೋಯಿತು. ಹಸ ಬೆಟ್ಟೆ ಅಡಿಕೆ ಆರಿಸಬೇಕು ಮಾರಾಯ, ಗೋಪು ಬೇರೆ ಹೊರಗಿನ ಅಡುಗೆ ಕೆಲಸದಲ್ಲಿ ಬ್ಯುಸಿ ಆಗಿದ್ದಾನೆ. ಎಂತ ಕಥೆಯೋ ನಮ್ಮದು. ನಾವೇ ಆರಿಸಬೇಕು ಭಾರೀ ಕಷ್ಟ ಉಂಟು ಮಾರಾಯ" ಅಂತ ಒಂದೇ ಉಸಿರಿಗೆ ಮಾತನಾಡಿ ಮತ್ತೊಮ್ಮೆ ಉಸಿರೆಳೆದು.. 'ಮಾಣಿ, ನಿನಗೊಂದು ಒಳ್ಳೆ ಹುಡುಗಿಯೇ ಸಿಗುತ್ತಿಲ್ಲವಲ್ಲಾ' ಅಂದಾಗ ತೀರಾ ಗಂಭೀರವಾಗಿ ಮಾತನಾಡುವ ಅಪ್ಪನ ಸ್ವರದಲ್ಲಿದ್ದ ಒಂದು ಪುಟ್ಟ ಮಗುವಿನ ಮುಗ್ಧತೆ ನನ್ನ ಹೃದಯಕ್ಕೆ ತಾಕಿತ್ತು. ತೀರಾ ಎರಡು ವರ್ಷಗಳಲ್ಲಿ ನನ್ನ ಹೃದಯವನ್ನು ಚಪ್ಪಲಿಯಂತೆ ತುಳಿದು, ನನ್ನ ಅವಮಾನಿಸಿ ಕಣ್ಣ ಮುಚ್ಚೇ ಆಟದಲ್ಲಿ ಕಳೆದೆ ಹೋಗಿದ್ದ ವ್ಯಕ್ತಿಗಳು ಅಪ್ಪನಿಗೆ ಗೊತ್ತಿದ್ದರು. ಎಂದಿಗೂ ಸದಾ ನಗುತ್ತಾ ಪಕ್ಕದವರು ನನ್ನನ್ನು ಚುಡಾಯಿಸಿದರೂ ಸಹ, ಅವರೊಂದಿಗೆ ಸೇರಿ ನನ್ನನ್ನೇ ಚುಡಾಯಿಸಿಕೊಂಡು ನಗುವಂಥ ನಾನು, ಅದೊಂದು ದಿನ ಅಪ್ಪನಿಗೆ ಮಾತ್ರ ಫೋನ್ ಮಾಡಿ 'ಅಪ್ಪ, ನಿಮ್ಮ ಮಗ ಕೆಟ್ಟವನೇ'? ಅಂತ ಕಣ್ಣು ತುಂಬಿಕೊಂಡಾಗ. 'ಹೇಸು ಮನುಷ್ಯ, ಗಂಡಸಾಗಿ ಅಳುತ್ತೀಯಾ'? "ನಿನ್ನ ಯೋಗ್ಯತೆಗೆ ಸರಿಯಾದುದು ಸಿಗುತ್ತದೆ.. ಸುಮ್ಮನಿರು" ಅಂತ ಸಿಟ್ಟು ಮಾಡಿದ್ದು ಇಂದು ನೆನಪಾಯಿತು. ಅಪ್ಪನ ಗಂಭೀರ ಮುಖಚರ್ಯೆಯ ಮಧ್ಯೆ ತುಂಬಿದ ಮುಗ್ಧ ಭಾವನೆಗಳ ನೆನೆದು ನಾನೂ ಸಹ ಭಾವುಕನಾಗಿದ್ದೆ. ಅಪ್ಪ ಅಲ್ಲಿಗೆ ನಿಲ್ಲಿಸದೆ ಮತ್ತೆ ಮುಂದುವರಿಸಿದ್ದರು, 'ನೋಡು, ಎಲ್ಲರಿಗೂ ಮದುವೆಯಾಗುತ್ತಿದೆ ಅಂತ ನಿನಗೂ ಮದುವೆ ಮಾಡಬೇಕು ಅಂತ ನೀನು ಮದುವೆಯಾಗಬಾರದು. ಒಳ್ಳೆ ಹುಡುಗಿ ಸಿಗಬೇಕು, ಕಾದರೂ ಪರವಾಗಿಲ್ಲ, ಪಡೆದರೆ ನೂರುಕಾಲ ಇರುವಂಥದ್ದು ಪಡೆಯಬೇಕು. ಇಂದು ಪಡೆದು ನಾಳೆ ಅಯ್ಯೋ ಬೇಡ ಅನ್ನುವಂಥದ್ದು ಬೇಡ. ನಿನ್ನ ಜೀವನ ನೀನು ಖುಷಿಯಾಗಿ ಬದುಕುತ್ತಿರು. ದಕ್ಕಬೇಕಾದದ್ದು ದಕ್ಕುತ್ತದೆ'. ಅಂತ ಹೇಳಿ ಮಾತು ನಿಲ್ಲಿಸಿದ್ದರು.
ಅದಕ್ಕೆ ನಾನು, 'ಅಪ್ಪ, ನೀವು ಖುಷಿಯಾಗಿ ಇದ್ದರೆ ಅಷ್ಟೇ ಸಾಕು, ನನಗೆ ನಿಮ್ಮ ಆಯ್ಕೆಯ ಬಗ್ಗೆ ನಂಬಿಕೆಯಿದೆ. ಮಾವನ ಮಗನ ಮದುವೆಗೆ ಅಂತ ನೀವು ತಂದು ಕೊಟ್ಟ ಅಂಗಿಯೇ ಅದಕ್ಕೆ ಗುರುತು. ಹದಿನೈದು ವರ್ಷ ಆದ ಮೇಲೆ ನೀವು ಕೊಟ್ಟ ಅಂಗಿ, ಅದೆಷ್ಟು ಚೆಂದ ಇದೆ. ಇಂದಿಗೂ ಅಂತ ಅಂಗಿ ನಾನು ಕೊಂಡುಕೊಳ್ಳಲಾಗಿಲ್ಲ. ನನ್ನ ಆಯ್ಕೆಗಳು ನನಗೆ ಕೈ ಕೊಟ್ಟಿವೆ. ನಿಮ್ಮ ಮಾತಿಗಾಗಿ ಕಾಯುತ್ತೇನೆ'. ಎಂದು ಮಾತನಾಡಿ ಮುಗಿಸಿದ್ದೆ. 
ನಿಟ್ಟುಸಿರಲ್ಲಿಯೇ ಉತ್ತರಿಸಿದ್ದ ಅಪ್ಪ ರಜಿನಿಯ ಕೈಗೆ ಪೋನ್ ಕೊಟ್ಟಿದ್ದರು.. ರಜಿನಿ, 'ಅಲ್ಲವೋ, ಈ ಹುಡುಗೀರೆಲ್ಲ ಎಲ್ಲಿ ಹೋದರೋ ಮಾರಾಯ' ಅಂತ ನಸುನಕ್ಕಿದ್ದಳು.. ನನ್ನ ಭಾವನೆಗಳ ಮೋಡಗಳು ಕದಡಿ ನಗುವಿನ ಕಿರಣಗಳು ಹೃದಯದ ಮೇಲೆ ಬೀರಿದ್ದವು. ನಕ್ಕು ಅಮ್ಮನೊಂದಿಗೆ ಹರಟೆಯಲ್ಲಿ ನಿರಾಳನಾಗಿದ್ದೆ.

Rating
Average: 5 (1 vote)

Comments

Submitted by kavinagaraj Sat, 01/03/2015 - 08:21

ಸಂಬಂಧಗಳ ನವಿರು ನಿರೂಪಣೆ ಸೊಗಸಾಗಿದೆ.