ಅಭಿಜ್ಞಾನ್ - ಐಶ್ವರ್ಯರ ಹಣೆಬರಹ
ಚಿತ್ರ
ಎರಡು ವರ್ಷದ ಬಾಲಕ ಅಭಿಜ್ಞಾನ್ ಕಿಂಡರ್ ಗಾರ್ಟನ್ ಶಾಲೆಯಲ್ಲಿ ಎಲ್ಲರೊಂದಿಗೆ ಮುಕ್ತವಾಗಿ ಬೆರೆಯುತ್ತಿರಲಿಲ್ಲ ಮತ್ತು ಅವನ ವರ್ತನೆ ಸ್ವಲ್ಪ ವಿಚಿತ್ರವಾಗಿತ್ತೆಂದು ಶಾಲೆಯವರು ಗಮನಿಸಿದರು. ಅವನ ವಿಚಿತ್ರವೆನಿಸುವ ವರ್ತನೆಯನ್ನು ಶಿಶು ರಕ್ಷಣಾ ಸಮಿತಿಯ ಗಮನಕ್ಕೆ ತರಲಾಯಿತು. ಶಿಶು ರಕ್ಷಣಾ ಸಮಿತಿಯವರು ಅಭಿಜ್ಞಾನನ ವಿಚಿತ್ರ ವರ್ತನೆಗೆ ಕಾರಣವನ್ನು ಹುಡುಕಲು ಯತ್ನಿಸಿದರು. ಇದಕ್ಕಾಗಿ, ಆ ಬಾಲಕನ ಮನೆಗೆ ಭೇಟಿಕೊಡುವುದೇ ಸೂಕ್ತವೆಂದು ನಿರ್ಣಯಿಸಿ, ಪ್ರತಿವಾರ ಒಂದು ಗಂಟೆ, ಆ ಹುಡುಗನ ಮನೆಗೆ ಭೇಟಿ ಇತ್ತರು.
ಈ ಕತೆ ವಿಚಿತ್ರವೆನಿಸುತ್ತದಾ? ಇದು ನಮ್ಮ ದೇಶದ ಕತೆ ಅಲ್ಲ. ಮಕ್ಕಳ ಪಾಲನೆ ಪೋಷಣೆಗೆ ಅತ್ಯುನ್ನತ ಮಟ್ಟವನ್ನು ನಿಗದಿಪಡಿಸಿ, ಉನ್ನತ ಮೌಲ್ಯಗಳನ್ನು ಮಕ್ಕಳ ದಿನಚರಿಯಲ್ಲಿ ಅಳವಡಿಸುತ್ತದೆಂದು ಹೇಳಲಾಗುವ ನಾರ್ವೆದೇಶದ ಕತೆ ಇದು. ವಿಶ್ವದಲ್ಲೇ ಅತ್ಯುತ್ತಮ ಮಾನವ ಜೀವನ ಮಟ್ಟ ಹೊಂದಿರುವ ದೇಶಗಳಲ್ಲಿ ಒಂದಾಗಿರುವ ನಾರ್ವೆ ದೇಶದಲ್ಲಿ, ಮಕ್ಕಳ ಪಾಲನೆ ಪೋಷಣೆಯ ಕುರಿತು ಅತ್ಯಂತ "ಬಿಗಿಯಾದ" ಕಾನೂನುಗಳಿವೆ.
ಅಭಿಜ್ಞಾನ್ ಮನೆಗೆ ಪ್ರತಿ ವಾರ ಭೇಟಿ ಇತ್ತ ಶಿಶು ರಕ್ಷಣಾ ಸಮಿತಿಯು ಹಲವಾರು ವಿಚಾರಗಳನ್ನು ಗಮನಿಸಿತು. ಅಭಿಜ್ಞಾನ್ ನಿಗೆ ಒಂದು ತಂಗಿ ಇರುವಳು - ಅವಳ ಹೆಸರು ಐಶ್ವರ್ಯ - ಎದೆಹಾಲು ಕುಡಿಯುವ ವಯಸ್ಸು - ಐದು ತಿಂಗಳು. ಆದರೆ, ಅವರಿಬ್ಬರನ್ನೂ ಅವರ ತಾಯಿಯಾದ ಸಾಗರಿಕಾಳು ಜತನದಿಂದ ನೋಡಿಕೊಳ್ಳುತ್ತಿಲ್ಲವೆಂದು ಶಿಶು ರಕ್ಷಣಾ ಸಮಿತಿಯು ಅಭಿಪ್ರಾಯಪಟ್ಟಿತು. "ಮಕ್ಕಳನ್ನು ಆಕೆ ನಿರ್ಲಕ್ಷ್ಯದಿಂದ ನೋಡಿಕೊಳ್ಳುತ್ತಿದ್ದು, ಮಕ್ಕಳನ್ನು ಉತ್ತಮ ರೀತಿಯಲ್ಲಿ ಬೆಳೆಸುವ ಅರ್ಹತೆ ಆಕೆಗೆ ಇಲ್ಲ" ಎಂಬ ವರದಿಯನ್ನು ಆ ಸಮಿತಿ ಸರಕಾರಕ್ಕೆ ನೀಡಿತು. ಸಾಗರಿಕಾಳ ಪತಿ, ಮಕ್ಕಳ ತಂದೆಯಾದ ಅನುರೂಪ್ ಭಟ್ಟಾಚಾರ್ಯನು ೨೦೦೬ರಿಂದ ನಾರ್ವೆಯ ಒಂದು ಬಹುರಾಷ್ಟ್ರೀಯ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ನಾಲ್ಕುಮಂದಿ ಸದಸ್ಯರ ಈ ಕುಟುಂಬಕ್ಕೆ ಆತನೇ ಯಜಮಾನ. ಅವನ ಹೇಳಿಕೆಯ ಪ್ರಕಾರ, ಬಾಲ ರಕ್ಷಣಾ ಸಮಿತಿಯು ಈ ಕುಟುಂಬದಲ್ಲಿ ಕೆಲವು ಕುಂದು ಕೊರತೆಗಳನ್ನು ಗಮನಿಸಿತಂತೆ. ಅವೆಂದರೆ, ಮಕ್ಕಳು ತಂದೆಯ ಜೊತೆಯಲ್ಲಿ ಮಲಗುತ್ತಾರೆ, ಮಕ್ಕಳಿಗೆ ಕೈಯಲ್ಲಿ ಆಹಾರವನ್ನು ತಿನ್ನಿಸಲಾಗುತ್ತದೆ,ಅಗತ್ಯಕ್ಕಿಂತ ಹೆಚ್ಚು ಆಹಾರವನ್ನು ಒತ್ತಾಯದಿಂದ ಮಕ್ಕಳಿಗೆ ತಿನ್ನಿಸಲಾಗುತ್ತಿದೆ, ತಾಯಿ ಸಾಗರಿಕಾಳು ಬೇಗನೆ ಆಯಾಸಗೊಂಡು, ಉದ್ವೇಗಕ್ಕೆ ಒಳಗಾಗುತ್ತಾಳೆ.ಇ.ಇ.
ಈ ವಿವರಗಳನ್ನು ಮಕ್ಕಳ ತಂದೆ ನೀಡಿರುವಂತಹದ್ದು. ನಾರ್ವೆ ಸರಕಾರದ ಯಾವುದೇ ಸಂಸ್ಥೆಯೂ ವಿವರಗಳನ್ನು/ಕಾರಣಗಳನ್ನು ನೀಡಿಲ್ಲ, ಏಕೆಂದರೆ, ಆ ರೀತಿ ಕಾರಣಗಳನ್ನು ಬಯಲುಮಾಡುವುದು ಅಲ್ಲಿನ ವೈಯಕ್ತಿಕ ಗೌಪ್ಯತೆಗೆ ಅಗೌರವ ಸೂಚಿಸಿದಂತಾದೀತು.
ನಾರ್ವೆ ದೇಶದ ಕಾನೂನಿನ ಪ್ರಕಾರ, ೧೧.೫.೨೦೧೧ರಂದು, ಅವರ ಇಬ್ಬರು ಮಕ್ಕಳನ್ನು, ತಂದೆ-ತಾಯಿಯರಿಂದ ಬೇರ್ಪಡಿಸಿ, ಬಾರ್ನ್ ವೆರ್ನ್ ಎಂಬ ಶಿಶು ಪಾಲನಾ ಸಂಸ್ಥೆಯ ವಶಕ್ಕೆ ನೀಡಲಾಯಿತು. ಮಕ್ಕಳಿಗೆ ೧೮ ವರ್ಷ ಆಗುವ ತನಕ, ಮಕ್ಕಳಿಬ್ಬರೂ ಈ ಸಂಸ್ಥೆಯ ಆಶ್ರಯದಲ್ಲೇ ಬೆಳೆಯಬೇಕೆಂದು ನಾರ್ವೆಯ ನ್ಯಾಯಾಲಯ ಆದೇಶ ಮಾಡಿದೆ. ಜೊತೆಗೆ, ತಂದೆ-ತಾಯಿಯರು ವರ್ಷಕ್ಕೆ ಒಂದು ಬಾರಿ, ಒಂದು ಗಂಟೆಯ ಅವಧಿ ಕಾಲ ಮಕ್ಕಳ ಜೊತೆ ಕಳೆಯಬಹುದು ಎಂದು ಸಹಾ ಆ ಆದೇಶ ವಿಧಿಸುತ್ತದೆ. ಮಕ್ಕಳ ತಾಯಿಯಾದ ಸಾಗರಿಕಾಳು ತುಂಬಾ ಆಯಾಸಗೊಳ್ಳುತ್ತಿದ್ದು, ಬೇಗನೆ ಉದ್ವೇಗಕ್ಕೆ ಒಳಗಾಗುವುದರಿಂದ, ಅವಳಿಗೆ ಮಕ್ಕಳನ್ನು ಸಾಕುವ ಅರ್ಹತೆ ಇಲ್ಲ ಎಂಬುದೇ ಈ ಪರ್ಯಾಯ ವ್ಯವಸ್ಥೆ ಏರ್ಪಡಿಸಲು ಮುಖ್ಯವಾದ ಕಾರಣವಾಗಿದೆ. ಮಕ್ಕಳ ತಂದೆ ತಾಯಿಯರು, ಬೇರೆಯಾಗಿ ವಾಸಿಸತೊಡಗಿದರೆ, ಮಕ್ಕಳನ್ನು ತಂದೆಯ ವಶಕ್ಕೆ ಕೊಡಬಹುದು ಎಂದು ಸಹಾ ನಾರ್ವೆಯ ಕೋರ್ಟ್ ಅಭಿಪ್ರಾಯ ಪಟ್ಟಿದೆ. ಶಿಶು ಪಾಲನಾ ಕೇಂದ್ರದ ವಶದಲ್ಲಿರುವ ಮಕ್ಕಳನ್ನು ಬೇರೆ ಬೇರೆಯಾಗಿ ಬೆಳೆಸಬೇಕೆಂದೂ, ಬೇರೆ ಬೇರೆ ಪೋಷಕರ ಬಳಿ ಮಕ್ಕಳನ್ನು ಬಿಡುವಂತೆಯೂ ಆದೇಶಿಸಲಾಗಿದೆ.
ಈಗ ಸುಮಾರು ಎಂಟು ತಿಂಗಳುಗಳಿಂದ, ಕೋರ್ಟ್ ಆದೇಶದಂತೆ ತನ್ನ ತಂದೆ ತಾಯಿಯರಿಂದ ದೂರವಗಿರುವ ಅಭಿಜ್ಞಾನನು, ಶಿಶು ಪಾಲನಾ ಕೇಂದ್ರದ ಸುಪರ್ದಿನಲ್ಲಿ, ಬೇರೆ ಪೋಷಕರ ಬಳಿ ಬೆಳೆಯುತ್ತಿದ್ದಾನೆ. ಅವನು ಈಗಾಗಲೇ ತನ್ನ ಮಾತೃಭಾಷೆಯನ್ನು ಮರೆಯುವ ಹಂತಕ್ಕೆ ಬಂದಿದ್ದಾನೆ. ಅವನ ತಂಗಿ ಐಶ್ವರ್ಯಳು ಶಿಶುಪಾಲನಾ ಕೇಂದ್ರದ ಸುಪರ್ದಿಗೆ ಬಂದಾಗ ಅವಳಿಗೆ ಐದು ತಿಂಗಳ ವಯಸ್ಸು. ಕಳೆದ ಮೇ ತಿಂಗಳಿನಿಂದ ಅಲ್ಲೇ ಬೆಳೆಯುತ್ತಿರುವ ಆ ಪಾಪುವಿಗೆ ಈಗ ಒಂದು ವರ್ಷ ತುಂಬಿದೆ. ನಾರ್ವೆಯ ಕಾನುನಿನ ಪ್ರಕಾರ, ಅವಳಿಗೆ ಅತ್ಯುತ್ತಮ ಆಹಾರ ಮತ್ತು ಇತರ ಸೌಲಭ್ಯಗಳು ದೊರಕುತ್ತಿವೆ. ತನ್ನ ೧೮ನೆಯ ವಯಸ್ಸಿನ ತನಕ, ತಂದೆ ತಾಯಿಯರಿಂದ ದೂರವಿದ್ದು, ಅಲ್ಲಿನ ಸರಕಾರೀ ಸಂಸ್ಥೆಯ ಆಶ್ರಯದಲ್ಲಿ ಅವಳು ಬೆಳೆಯಬೇಕಾಗಿದೆ. ಈ ಬಾಲಕಿಗೆ, ಕೋರ್ಟ್ ಆದೇಶದಂತೆ, ವರ್ಷಕ್ಕೊಮ್ಮೆ ಮಾತ್ರ ತಂದೆ ತಾಯಿಯರ ದರ್ಶನ ಭಾಗ್ಯ. ಈ ಮಧ್ಯೆ, ಇವಳ ಹೆತ್ತವರ ವೀಸಾಕ್ಕೆ ಸಂಬಂಧಿಸಿದಂತೆ, ಮತ್ತೊಂದು ಬೆಳವಣಿಗೆ ಆಗಿದೆ. ಅವರ ವೀಸಾ ಅವಧಿ ಮುಂದಿನ ತಿಂಗಳಿಗೆ ಮುಗಿಯುವುದರಿಂದ, ಅವರು ಭಾರತಕ್ಕೆ ವಾಪಸಾಗುವುದಾದರೆ, ತಮ್ಮ ಇಬ್ಬರೂ ಮಕ್ಕಳನ್ನು ನಾರ್ವೆ ದೇಶದ ಶಿಶು ಪಾಲನಾ ಸಂಸ್ಥೆಯ ವಶದಲ್ಲಿ ಬಿಟ್ಟುಬರಬೇಕಾದೀತು.
ಸಾಗರಿಕಾಳ ತಂದೆ- ತಾಯಿಯರು (ಮಕ್ಕಳ ಅಜ್ಜ-ಅಜ್ಜಿ, ಈಗ ಪಶ್ಚಿಮ ಬಂಗಾಳದಲ್ಲಿದ್ದಾರೆ) ಈ ಮಕ್ಕಳನ್ನು ಹೆತ್ತವರ ವಶಕ್ಕೆ ಅಥವಾ ತಮ್ಮ ವಶಕ್ಕೆ ಪಡೆಯುವ ಕುರಿತು ಪ್ರಯತ್ನ ನಡಿಸಿದ್ದಾರೆ. ಅವರು ಭಾರತದ ರಾಷ್ಟ್ರಪತಿಗಳನ್ನು ಭೇಟಿ ಮಾಡಿ,ಈ ಎಳೆ ಕಂದಮ್ಮಗಳು, ಹೆತ್ತವರಿಂದ ದೂರವಾಗಿ, ನಾರ್ವೆ ದೇಶದ ಶಿಶುಪಾಲನಾ ಕೇಂದ್ರದಲ್ಲಿರುವ ವಿಚಾರದ ಕುರಿತು ಗಮನ ಸೆಳೆದು, ಈ ಕುರಿತು ಸಹಾಯ ಮಾಡುವಂತೆ ಮನವಿ ಮಾಡಿದ್ದಾರೆ. ಭಾರತದ ವಿದೇಶಾಂಗ ಸಚಿವಾಲಯವು ನಾರ್ವೆ ಸರಕಾರಕ್ಕೆ ಈ ಕುರಿತು ಎರಡು ಪತ್ರಗಳನ್ನು ಬರೆದಿದೆ : ೨೮.೧೨.೨೦೧೧ರಂದು ಮತ್ತು ೫.೧.೨೦೧೨ರಂದು. ಈ ವರೆಗೆ ನಾರ್ವೆ ಸರಕಾರದಿಂದ ಯಾವ ಉತ್ತರವೂ ಬಂದಿಲ್ಲ. ನಾರ್ವೆಯ ಮಹಾರಾಜರ ಮಧ್ಯಪ್ರವೇಶದಿಂದ, ಅಭಿಜ್ಞಾನ್-ಐಶ್ವರ್ಯರನ್ನು ಅವರ ಹೆತ್ತವರ ಅಥವಾ ಅಜ್ಜ-ಅಜ್ಜಿಯರ ವಶಕ್ಕೆ ತರಲು ಪ್ರಯತ್ನಗಳು ನಡೆಯುತ್ತಿವೆ.
ನಾರ್ವೆ ದೇಶದಲ್ಲಿ ಜಾರಿಯಲ್ಲಿರುವ ಕಾನೂನು ಪಾಲನೆಯ ಅಂಗವಾಗಿ, ಈ ಮಕ್ಕಳನ್ನು ಶಿಶು ಪಾಲನಾ ಕೇಂದ್ರದ ವಶಕ್ಕೆ ಒಪ್ಪಿಸಲಾಗಿರುವುದು ಸರಿಯಷ್ಟೆ. ಆ ಮಕ್ಕಳನ್ನು ತುಂಬಾ ಜತನದಿಂದ ಸಾಕಿ, ದೊಡ್ಡವರನ್ನಾಗಿ ಮಾಡಿ, ಉತ್ತಮ ಪ್ರಜೆಗಳನ್ನಾಗಿ ರೂಪಿಸುವುದೇ ಆ ದೇಶದ ಕಾನೂನಿನ ಗುರಿ. ಭಾರತ ದೇಶದಲ್ಲಿ ಬಳಕೆಯಲ್ಲಿರುವ ಪದ್ದತಿಗಳನ್ನು ಆ ದೇಶದಲ್ಲೂ ಪಾಲಿಸಿದರೆ,( ಉದಾ: ಕೈಯಿಂದ ಊಟ ಮಾಡಿಸುವುದು, ತಂದೆಯ ಜೊತೆ ಮಕ್ಕಳು ಮಲಗುವುದು, ಮಕ್ಕಳಿಗೆ ಗದರಿಸಿ, ನೀತಿಪಾಠ ಹೇಳುವುದು ಇತ್ಯಾದಿ ಇತ್ಯಾದಿ) ಮಕ್ಕಳು ಮುಂದೆ ಉತ್ತಮ ನಾಗರಿಕರು ತಯಾರಾಗಲು ಸಾಧ್ಯವಿಲ್ಲ ಎಂಬ ಭಾವನೆಯಿಂದ ನಾರ್ವೆಯಲ್ಲಿ, ಈ ರೀತಿಯ ಕಾನೂನುಗಳನ್ನು ಮಾಡಿರಬಹುದು.
ಅಭಿಜ್ಞಾನ್ ಮತ್ತು ಐಶ್ವರ್ಯಾ ತಮ್ಮ ತಾಯ್ನಾಡಿನಿಂದ ಮತ್ತು ಹೆತ್ತವರಿಂದ ದೂರಾಗಿ, ೧೮ ವರ್ಷ ವಯಸ್ಸಾಗುವ ತನಕ ಬೆಳೆಯಬೇಕಾದ್ದು ಅವರಿಬ್ಬರ ಹಣೆಬರಹವಿರಬಹುದು.
ಚಿತ್ರಕೃಪೆ : ಫೇಸ್ ಬುಕ್.ಡಾಟ್.ಕಾಂ
Rating