ಅಮರ್ ಅಕ್ಬರ್ ಆಂತೋಣಿಗೆ ಶುಭಾಶಯಗಳು

ಅಮರ್ ಅಕ್ಬರ್ ಆಂತೋಣಿಗೆ ಶುಭಾಶಯಗಳು

ಅಮರ್ ಅಕ್ಬರ್ ಆಂತೋಣಿಗೆ ಶುಭಾಶಯಗಳು
---------------------------------------

ಈ ಹೆಸರು ಕೇಳಿದಾಕ್ಷಣ ಎಂತಹವರಿಗೂ ನೆನಪಾಗುವುದು ಅಮಿತಾಭ್ ಬಚ್ಚನ್, ವಿನೋದ್ ಖನ್ನಾ ಹಾಗೂ ರಿಷಿ ಕಪೂರ್ ಅಭಿನಯಿಸಿರುವ ಮನಮೋಹನ್ ದೇಸಾಯಿಯವರ ಸೂಪರ್ ಹಿಟ್ ಚಿತ್ರ. ಯಾಕೆಂದರೆ, ನಮಗೆಲ್ಲರಿಗೂ 20ನೇ ಶತಮಾನದ ಭಾಷೆಯೆಂದೇ ಪರಿಗಣಿತವಾಗಿರುವ ಸಿನಿಮಾದೊಂದಿಗೆ ನಮ್ಮೆಲ್ಲರ ನೆನಪನ್ನು ತಳುಕು ಹಾಕುವುದು ಅಭ್ಯಾಸವಾಗಿಬಿಟ್ಟಿದೆ. ಈ ಅಭ್ಯಾಸ 21ನೇ ಶತಮಾನದ ಭಾಷೆಯಾದ ಮಾಹಿತಿ ತಂತ್ರಜ್ಞಾನದ ಕಾಲದಲ್ಲೂ ನಮ್ಮನ್ನು ಬಿಟ್ಟು ಹೋಗಿಲ್ಲ.

25-30 ವರ್ಷಗಳ ಹಿಂದೆಯೇ ಸರ್ವಧರ್ಮ ಸಮನ್ವಯ ಸಾಧಿಸುವ ಪ್ರಯತ್ನವನ್ನು ಚಿತ್ರದ ಮೂಲಕ ಹೇಳುವ ಪ್ರಯತ್ನಗಳು ನಡೆದಿತ್ತು ಎಂದರೆ ಅಚ್ಚರಿ ಮೂಡುತ್ತದಲ್ಲವೇ? ಇಂತಹ ಪ್ರಯತ್ನಗಳು ಒಂದಲ್ಲ ಒಂದು ರೀತಿಯಲ್ಲಿ ನೂರಾರು ವರ್ಷಗಳಿಂದ ನಡೆದುಕೊಂಡು ಬಂದೇ ಇದೆ. ಇತಿಹಾಸದಲ್ಲಿ ಅಜ್ಞಾನಿಗಳಾಗಿರುವ ಭಾರತದ ಜನರಿಗೆ ಈಗಿನ ಮಾಹಿತಿ ತಂತ್ರಜ್ಞಾನ ಯುಗದಲ್ಲಿ 'ಸಂಸ್ಕೃತಿಯ ವಿಸ್ಮೃತಿ'ಯೇ ಆವರಿಸಿದೆಯಂದರೇ ತಪ್ಪಾಗಲಾರದು. ಅದು ಸರಿ, ಈಗ ಈ ಅಮರ್ ಅಕ್ಬರ್ ಆಂತೋಣಿ ಯಾಕೆ ನೆನಪಾದರು ಎಂದು ಎಂತಹವರಿಗೂ ಆಶ್ಚರ್ಯವಾಗಬಹುದು. ಅದಕ್ಕೆ ಕಾರಣವಿದೆ. ಇಂದು ಯಾವ ದಿನ ಎಂದು ನಮ್ಮ ಅಮರ್‌ನನ್ನು ಕೇಳಿ?

ಇಂದು ಹಿಂದೂ ಜನತೆಗೆ ಒಂದು ಕಾಲದಲ್ಲಿ ಸಂತಸ ಸಂಭ್ರಮ ಸಡಗರಗಳನ್ನು ತರುತ್ತಿದ್ದ, ಇಂದು ಹೆಸರಿಗಷ್ಟೆ ಉಳಿದಿರುವ, ಉಳಿದಿದ್ದರೂ, ತಪ್ಪು ಆಚರಣೆಗೊಳಗಾಗಿರುವ 'ಹೋಳಿ ಹುಣ್ಣಿಮೆ' ಹಬ್ಬ, ಹಳ್ಳಿಯ ಭಾಷೆಯಲ್ಲಿ ಮಾರನ ಹಬ್ಬ, ಕಾಮನ ಹಬ್ಬ ಇತ್ಯಾದಿ. ಎಂದಾನು. ಅದೊಂದೆ ಅಲ್ಲ. ಮತ್ತೆ ಇನ್ನೇನು ಎಂದಿರಾ?

ಅಮರ್‌ಗೆ ಕೇಳಿದ ಪ್ರಶ್ನೆಯನ್ನೇ ನಮ್ಮ ಮುಸ್ಲಿಮ್ ಬಾಂಧವ ಅಕ್ಬರ್‌ನನ್ನು ಕೇಳಿದರೆ, ಅವರು 'ಈದ್ ಮುಬಾರಕ್ ಹೋ ಭಾಯಿ' ಎಂದಾನು.

ಇನ್ನು ನಮ್ಮ ಕ್ರಿಶ್ಚಿಯನ್ ಸಹೋದರ ಆಂತೋಣಿಯನ್ನು ಕೇಳಿದಲ್ಲಿ, 'ಗುಡ್ ಫ್ರೈಡೇ' ಬ್ರದರ್ ಎನ್ನುವನು.

ಏನಾಶ್ಚರ್ಯ ಅಲ್ಲವೇ? ಒಂದೇ ದಿನ ಮೂರೂ ಧರ್ಮಗಳ ಪ್ರಮುಖ ಆಚರಣೆಗಳು. ಹಿಂದೂ ಮುಸ್ಲಿಂ ಕ್ರೈಸ್ತ ಧರ್ಮಗಳ ಪ್ರತಿನಿಧಿಗಳಾದ ಅಮರ್ ಅಕ್ಬರ್ ಆಂತೋಣಿ ಮೂವರೂ ಶುಭಾಶಯ ವಿನಿಮಯ ಮಾಡಿಕೊಳ್ಳಬಹುದಾದ ಈ ಸುಸಂದರ್ಭ ಒದಗಿಬರುವುದು Once in a bluemoon ಎನ್ನಬಹುದು. ಇಂತಹ ಪವಿತ್ರ ಸಂದರ್ಭದಲ್ಲಿ ಕೆಲವು ನುಡಿಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುವ ಆಸೆಯಿಂದ ಬರೆಯಲು ಮುಂದಾಗುತ್ತಿದ್ದೇನೆ. ಓದುತ್ತೀರಲ್ಲ.

ಹಿಂದೂ ಪಂಚಾಗ ಸೌರಮಾನವನ್ನು ಆಧರಿಸಿದ್ದರೆ, ಮುಸ್ಲಿಂ ಪಂಚಾಂಗ ಚಾಂದ್ರಮಾನವನ್ನಾಧರಿಸಿದೆ. ಆಂದರೆ, ಎರಡೂ ಧರ್ಮದವರು ಎಲ್ಲಾ ಪವಿತ್ರ ಹಬ್ಬ ಹರಿದಿನಗಳನ್ನು ನಿಗದಿಗೊಳಿಸುವುದು ಸೂರ್ಯ-ಚಂದ್ರರ ಚಲನೆಯಾಧಾರದ ಮೇಲೆಯೇ. ಆದರೂ, ಹಿಂದೂಗಳು ಹೋಳಿ, ಯುಗಾದಿಯಂತಹ ಹಬ್ಬಗಳನ್ನು ಆಚರಿಸುವುದು ಚಾಂದ್ರಮಾನದ ಆಧಾರದ ಮೇಲೆಯೇ. ಆದರೆ, ಮುಸ್ಲಿಂ ಬಾಂಧವರು ಈ ವಿಚಾರದಲ್ಲಿ ತುಂಬಾ ಕಟ್ಟುನಿಟ್ಟು. ಚಂದ್ರ ಮೂಡುವುದು ಸ್ವಲ್ಪ ಹೆಚ್ಚು ಕಮ್ಮಿಯಾದರೂ ಆ ಹಬ್ಬವನ್ನೇ ಮುಂದೂಡುವರೇ ಹೊರತು, ಯಾವ ಕಾರಣಕ್ಕೂ ಬಾಗುವವರಲ್ಲ. ಇಂದು ನೋಡಿ ಎಂತಹ ಸುದಿನ. ಹಿಂದೂಗಳಿಗೆ 'ಹೋಳಿ ಹುಣ್ಣಿಮೆ'ಯಾದರೆ, ಮುಸ್ಲಿಂ ಬಾಂಧವರಿಗೆ ಈದ್ ಮಿಲಾದ್, ಕ್ರಿಶ್ಚಿಯನ್ ಬಾಂಧವರಿಗೆ ಗುಡ್ ಫ್ರೈಡೇ ಅಂದರೆ ಶುಭ ಶುಕ್ರವಾರ.

ಸೂರ್ಯ ಚಂದ್ರರನ್ನು ಹಿಂದೂ ಮುಸ್ಲಿಂ ಪಂಚಾಂಗಗಳು ಆಧರಿಸಿದ್ದರೂ, ಗುಣಸ್ವಭಾವಗಳಲ್ಲಿ ಮಾತ್ರ ಇದು ತದ್ವಿರುದ್ಧ. ಸೂರ್ಯನನ್ನು ಆರಾಧಿಸುವ ಹಿಂದೂಗಳು ಸ್ವಭಾವತಃ ಚಂದ್ರನಂತೆ ಶಾಂತ ಸ್ವಭಾದವರಾದರೆ(ಈಗ ಹಾಗಿಲ್ಲ), ಮುಸ್ಲಿಂ ಬಾಂಧವರು ಸೂರ್ಯನಂತೆ ಉರಿಯುವವರು. ಅವರ ಶಾಂತಿ ಸಂಯಮದ ತಾಪಮಾನ ಕಾವೇರಿದ ಪರಿಣಾಮವಾಗಿಯೇ ಇಂದು ವಿಶ್ವದೆಲ್ಲೆಡೆ 'ಭಯೋತ್ಪಾದನೆ' ಎಂಬ ರಾಕ್ಷಸ ತಾಂಡವವಾಡುತ್ತಿರುವುದು. ಇದು ಖಂಡಿತವಾಗಿಯೂ ಮೂಲಭೂತವಾದವಲ್ಲ. ಸಂಕುಚಿತ ದೃಷ್ಟಿಕೋನವಲ್ಲ. ವಾಸ್ತವವನ್ನು ಶಬ್ದಗಳಲ್ಲಿ ಹಿಡಿದಿಡುವ ಪ್ರಯತ್ನವಷ್ಟೆ.

ಒಂದೆಡೆ ಇಡೀ 'ವಿಶ್ವವೇ ಒಂದು ಗ್ರಾಮದಂತೆ' ಎನ್ನುವ ಜಾಗತೀಕರಣದ ಘೋಷಣಾ ವಾಕ್ಯ ಎಲ್ಲೆಡೆ ಮೊಳಗುತ್ತಿದ್ದರೆ, ಮತ್ತೊಂದೆಡೆ, ಧರ್ಮದ ಹೆಸರಿನಲ್ಲಿ 'ಭಯೋತ್ಪಾದನೆ'ಯೆಂಬ ಪೆಡಂಭೂತ ಇಡೀ ವಿಶ್ವವನ್ನೇ ಆವರಿಸಿ ಮಾನವಕುಲವನ್ನೇ ತಲ್ಲಣಗೊಳಿಸುತ್ತಿದೆ. ಮೊದಲನೆಯದು ಅನಿವಾರ್ಯವೆನಿಸಿ ಅದನ್ನು ಸಮರ್ಥವಾಗಿ ಎದುರಿಸಿ ನಿಲ್ಲಲು ಮಾರ್ಗೋಪಾಯಗಳನ್ನು ರೂಪಿಸುವ ಅಗತ್ಯವನ್ನು ಸಾರುತ್ತಿದ್ದರೆ, ಮತ್ತೊಂದು ಕ್ಯಾನ್ಸರ್‌ನಂತೆ ಇಡೀ ವಿಶ್ವದ ದೇಹವನ್ನು ಒಂದೆಡೆ ಆಕ್ರಮಿಸಿಕೊಳ್ಳುತ್ತಾ, ತುರ್ತು ಶಸ್ತ್ರಚಿಕಿತ್ಸೆ ಕೈಗೊಳ್ಳಬೇಕಾದ ಜರೂರನ್ನು ಒತ್ತಿಹೇಳುತ್ತಿದೆ.

ಈಗಾಗಲೇ ಎರಡು ಮಾರಣಾಂತಿಕ ಮಹಾವಿಶ್ವಸಮರಗಳನ್ನು ಕಂಡಿರುವ ವಿಶ್ವ, ಮೂರನೇ ಮಹಾಸಮರದ ರೂಪದಲ್ಲಿ ಈ ಭಯೋತ್ಪಾದನೆಯನ್ನು ಕಾಣುತ್ತಿದೆಯೇನೋ. ದುರಂತವೆಂದರೆ, ಯಾವುದರ ಹೆಸರಿನಲ್ಲಿ ಸಮರ ನಡೆದರೂ ಬಲಿಯಾಗುವುದು ಅಮಾಯಕ ಜೀವಗಳೇ. ಜರ್ಮನ್ ಸರ್ವಾಧಿಕಾರಿ ಹಿಟ್ಲರ್ ಎರಡನೇ ಮಹಾವಿಶ್ವಸಮರ ನಡೆಸಿದ್ದಕ್ಕೆ ಒಂದು ಕಾರಣ ಸರ್ವಾಧಿಕಾರಿಯಾಗಿ ಇಡೀ ವಿಶ್ವವನ್ನು ತನ್ನ ಮುಷ್ಟಿಯಲ್ಲಿರಿಸಿಕೊಳ್ಳಬೇಕೆಂಬ ಅಧಿಕಾರ ಲಾಲಸೆಯಾದರೆ, ಮತ್ತೊಂದಕ್ಕೆ ನೆಪವಾಗಿದ್ದು ಕ್ರಿಶ್ಚಿಯನ್ ಧರ್ಮದ ಸಂರಕ್ಷಣೆ.

ಈಗ ನಡೆಯುತ್ತಿರುವ 'ಜಿಹಾದ್'(ಧರ್ಮ ಯುದ್ಧ)ಗೂ ಕಾರಣ ಇಸ್ಲಾಂ ಧರ್ಮದ ಸಂರಕ್ಷಣೆ. ಭಾರತದಲ್ಲಿ ಇದಕ್ಕೆ ಪ್ರತಿಯಾಗಿ ಹುಟ್ಟುಕೊಂಡಿರುವ ಹಿಂದೂ ಮೂಲಭೂತವಾದಿಗಳ ಮಾರಣಹೋಮಕ್ಕೆ ಸಾಕ್ಷಿಯಾಗಿ ನಿಂತದ್ದು ಗೋಧ್ರಾ ದುರಂತ. 'ದಯವಿಲ್ಲದ ಧರ್ಮವದಾವುದಯ್ಯಾ?, ದಯವೇ ಬೇಕು ಸಕಲ ಪ್ರಾಣಿಗಳೆಲ್ಲರಲ್ಲಿಯೂ' ಎಂಬ ಯುಗಪುರುಷ ಬಸವೇಶ್ವರರ ವಚನವೇ ಸಾರುವ ಹಾಗೆ ಎಲ್ಲಾ ಧರ್ಮಗಳ ಮೂಲಸಾರವೇ ಈ ದಯೆ. ಆದರೆ, ಇಂದು ಆಗುತ್ತಿರುವುದಾದರೂ ಏನು?

ಇದೆಲ್ಲವನ್ನೂ ತಪ್ಪಿಸಿ ದಯವೆಂಬ ಧರ್ಮವನ್ನು ಮಾತ್ರ ನಮ್ಮದಾಗಿಸಿಕೊಂಡು ಮಾನವರೆಲ್ಲರೂ ಒಂದೇ ಎಂದು ಭ್ರಾತೃತ್ವದಿಂದ ಬಾಳ್ವೆ ನಡೆಸುವುದರೊಂದಿಗೆ ವಿಶ್ವದಲ್ಲಿ ಶಾಂತಿಯನ್ನು ಮರುಪ್ರತಿಷ್ಟಾಪಿಸಬೇಕಿರುವ ಈ ಸಂದರ್ಭದಲ್ಲಿ ನಮ್ಮ ನಾಡಿನ ರಾಷ್ಟ್ರಕವಿ ಶ್ರೀ ಜಿ.ಎಸ್.ಶಿವರುದ್ರಪ್ಪನವರ 'ಪ್ರೀತಿ ಇಲ್ಲದ ಮೇಲೆ'
ಕವನವನ್ನು ಹಿಂದೂ ಮುಸ್ಲಿಂ ಕ್ರೈಸ್ತ ಮತಬಾಂಧವರೆಲ್ಲರಿಗೂ ಪವಿತ್ರ ದಿನವಾದ ಈ ಹುಣ್ಣಿಮೆ ಇಡೀ ವಿಶ್ವಕ್ಕೆ ಶಾಂತಿಯ ಬೆಳಕನ್ನು ನೀಡಲಿ ಎಂದು ಹಾರೈಸುತ್ತಾ ಅರ್ಪಿಸುತ್ತಿದ್ದೇನೆ.

'ಪ್ರೀತಿಯಿಲ್ಲದ ಮೇಲೆ-
ಹೂವು ಅರಳೀತು ಹೇಗೆ?
ಮೋಡ ಕಟ್ಟೀತು ಹೇಗೆ?
ಹನಿಯೊಡೆದು ಕೆಳಗಿಳಿದು
ನೆಲಕ್ಕೆ ಹಸಿರು ಮೂಡೀತು ಹೇಗೆ?

ಪ್ರೀತಿಯಿಲ್ಲದ ಮೇಲೆ-
ಮಾತಿಗೆ ಮಾತು ಕೂಡೀತು ಹೇಗೆ?
ಅರ್ಥ ಹುಟ್ಟೀತು ಹೇಗೆ?
ಬರೀ ಪದಕ್ಕೆ ಪದ ಜತೆಗಿದ್ದ ಮಾತ್ರಕ್ಕೆ
ಪದ್ಯವಾದೀತು ಹೇಗೆ?

ಪ್ರೀತಿಯಿಲ್ಲದ ಮೇಲೆ-
ದಕ್ಷಿಣಾಫ್ರಿಕದ ಕಗ್ಗತಲಿಗೆ
ಬೆಳಕು ಮೂಡೀತು ಹೇಗೆ?
ಸೆರೆಮನೆಯ ಕಂಬಿಯ ನಡುವೆ
ಕಮರುವ ಕನಸು ಕೊನರೀತು ಹೇಗೆ?
ಬಿಳಿ ಜನರ ಕರಾಳ ಕಪ್ಪು ಹೃದಯಕೆ
ಕ್ರಿಸ್ತನ ಕರುಣೆ ಅರ್ಥವಾದೀತು ಹೇಗೆ?

ಪ್ರೀತಿಯಿಲ್ಲದ ಮೇಲೆ-
ಸಂಶಯದ ಗಡಿಗಳುದ್ದಕ್ಕು
ಸಿಡಿಗುಂಡುಗಳ ಕದನ ನಿಂತೀತು ಹೇಗೆ?
ಜಾತಿ-ಮತ-ಭಾಷೆ-ಬಣ್ಣಗಳ ಗೋಡೆಯ ನಡುವೆ
ನರಳುವ ಪಾಡು ತಪ್ಪೀತು ಹೇಗೆ?
ನಮ್ಮ ನಿಮ್ಮ ಮನಸ್ಸು
ಮರುಭೂಮಿಯಾಗದ ಹಾಗೆ
ತಡೆಗಟ್ಟುವುದು ಹೇಗೆ?

ಪ್ರೀತಿ ಇಲ್ಲದ ಮೇಲೆ.......!

Rating
No votes yet