ಅಮರ‌..ಮಧುರ..ಪ್ರೇಮ = ಭಾಗ 10

ಅಮರ‌..ಮಧುರ..ಪ್ರೇಮ = ಭಾಗ 10

ರಾತ್ರಿ ಇಡೀ ನಿದ್ದೆ ಮಾಡದೆ ೨.೩೦ ಕ್ಕೆ ಎದ್ದು ಸ್ನಾನ ಮಾಡಿ ಹೊಸ ಬಟ್ಟೆ ತೊಟ್ಟು ಸಿದ್ಧನಾಗಿ ಪದೇ ಪದೇ ವಾಚ್ ಕಡೆ ನೋಡುತ್ತಿದ್ದ ಅಮರ್. ಮನೆಯಲ್ಲಿ ಸುಮ್ಮನೆ ಅಡ್ಡಾಡುವ ಬದಲು ಕಾರ್ ತೆಗೆದುಕೊಂಡು ಒಂದು ಸುತ್ತು ಹಾಕಿ ಅವಳ ಪೀಜೀಯ ಬಳಿ ಹೋಗುವ ಹೊತ್ತಿಗೆ ಸರಿಯಾಗಿರತ್ತೆ ಎಂದು ಯೋಚಿಸಿ ಆಚೆ ಬಂದು ವಾಚ್ಮನ್ ನನ್ನು ಎಬ್ಬಿಸಿ ನಾನು ಆಚೆ ಹೋಗ್ತಾ ಇದ್ದೀನಿ ರಾತ್ರಿ ಬರ್ತೀನಿ ಎಂದು ಹೇಳಿ ಕಾರ್ ತೆಗೆದುಕೊಂಡು ಆಚೆ ಬಂದು ಎಲ್ಲ ಒಂದು ಸುತ್ತು ಹಾಕಿ ಸರಿಯಾಗಿ ೩.೫೦ಕ್ಕೆ ಮಧುರಳ ಪೀಜಿ ಬಳಿ ಬಂದು ಮಧುರಗೆ ಕರೆ ಮಾಡಿದರೆ ಸ್ವಿಚ್ ಆಫ್ ಎಂದು ಬರುತ್ತಿತ್ತು.

ಒಂದು ಕ್ಷಣ ಅಮರ್ ಗೆ ಗಾಭರಿ ಆಯ್ತು. ಏನಪ್ಪಾ ಇದು ಫೋನ್ ಆಫ್ ಮಾಡಿಟ್ಟುಕೊಂಡಿದ್ದಾಳೆ. ರಾತ್ರಿ ಅಷ್ಟೆಲ್ಲ ಹೇಳಿದ್ದರೂ ಫೋನ್ ಆಫ್ ಮಾಡಿದ್ದಾಳಲ್ಲ ಏನು ಮಾಡುವುದು ಇವಾಗ ಎಂದು ಮತ್ತೊಮ್ಮೆ ಟ್ರೈ ಮಾಡಿದರೆ ಆಗಲೂ ಆಫ್ ಬರುತ್ತಿತ್ತು. ಬಹುಶಃ ಇನ್ನೂ ಎದ್ದಿಲ್ಲವೇನೋ ಛೆ ಈ ಹುಡುಗಿಯರೇ ಹೀಗೆ ಸಮಯ ಪರಿಪಾಲನೆ ಮಾಡಲು ಬರುವುದಿಲ್ಲ. ನಾವು ಮಾತ್ರ ಕಮಂಗಿಗಳ ಹಾಗೆ ಊಟ ನಿದ್ರೆ ಬಿಟ್ಟು ಸದಾಕಾಲ ಅವರ ಬಗ್ಗೆ ಯೋಚನೆ ಮಾಡುತ್ತಿರಬೇಕು. ನಾವು ಟೈಮ್ ಕೊಟ್ಟರೆ ನಾವೇ ಮುಂಚೆ ಬಂದು ಕಾಯಬೇಕು. ಅವರು ಟೈಮ್ ಕೊಟ್ಟರೂ ನಾವೇ ಮುಂಚೆ ಬಂದು ಕಾಯಬೇಕು. ಒಳ್ಳೆ ನಾಯಿಪಾಡು ಆಗೋಯ್ತು.

ಸಮಯ ೪.೨೦ ಇನ್ನೂ ಅವಳ ಫೋನ್ ಸ್ವಿಚ್ ಆಫ್ ಆಗೇ ಇದೆ. ಪೀಜೀ ಒಳಗೆ ಹೋಗೋಣ ಎಂದರೆ ಅದು ಹುಡುಗಿಯರ ಪೀಜೆ ಅದೂ ಅಲ್ಲದೆ ಈ ಹೊತ್ತಿನಲ್ಲಿ ಹೋದರೆ ತಪ್ಪಾದೀತು, ಪ್ರೀತಿ ಮಾಡಿದ ತಪ್ಪಿಗೆ ಕಾಯಬೇಕು ಅಷ್ಟೇ ಎಂದುಕೊಂಡು ಕಾರಲ್ಲಿ ಹಾಡು ಹಾಕಿಕೊಂಡು ಸ್ಟೇರಿಂಗ್ ಮೇಲೆ ಕೈ ಬೆರಳಿನಿಂದ ತಾಳ ಹಾಕುತ್ತ ಪೀಜೀ ಕಡೆನೇ ನೋಡುತ್ತಿದ್ದ.  ೪.೩೦ ಕ್ಕೆ ಸರಿಯಾಗಿ ಪೀಜೀಯಿಂದ ಯಾರೋ ಆಚೆ ಬಂದರು. ಯಾರೆಂದು ನೋಡಿದರೆ ಅವಳೇ ಮಧುರ. ಯಾವತ್ತೂ ಚೂಡಿದಾರ್ ಬಿಟ್ಟು ಬೇರೆ ಹಾಕಿದ್ದನ್ನು ನೋಡಿರಲಿಲ್ಲ. ಇವತ್ತು ನೋಡಿದರೆ ಅಂದು ಕಾಫಿ ಡೇ ಗೆ ಪ್ರೇಮ ಹಾಕಿಕೊಂಡು ಬಂದಿದ್ದ ಅದೇ ರೀತಿಯ ಜೀನ್ಸ್ ಅದರ ಮೇಲೊಂದು ಬಿಳಿ ಬಣ್ಣದ ಟೀ ಶರ್ಟ್ ಹಾಕಿ ಬಂದಿದ್ದಳು. ಮಧುರಳನ್ನು ಒಮ್ಮೆ ಹಾಗಿ ನೋಡಿ ಆಶ್ಚರ್ಯ ಸಂತೋಷ ಎಲ್ಲ ಒಟ್ಟಿಗೆ ಆಯಿತು.

ಮಧುರ ಅತ್ತ ಇತ್ತ ನೋಡುತ್ತಾ ಚಕಚಕನೆ ಬಂದು ಕಾರನ್ನು ಏರಿ ಅಮರ್ ಮೊದಲು ಕಾರು ಶುರು ಮಾಡಿ ಇಲ್ಲಿಂದ ಹೊರಡು ಎಂದಳು. ಯಾಕೆ ಮಧು ಏನಾಯ್ತು? ಮೊದಲು ಹೊರಡು ಆಮೇಲೆ ಹೇಳ್ತೀನಿ.

ಅಲ್ಲಿಂದ ಹೊರಟು ಹೈವೇಯನ್ನು ಹಿಡಿದಾಗ ಮಧುರ ಸ್ವಲ್ಪ ಸಮಾಧಾನವಾದಳು. ಯಾಕೆ ಮಧು, ಒಂಥರಾ ಇದ್ದೆ ಪೀಜೀ ಬಳಿ ಏನಾದರೂ ತೊಂದರೆ ಆಯ್ತಾ?. ಅದೇನಿಲ್ಲ ಅಮರ್ ಸುಮ್ಮನೆ ಯಾರಾದರೂ ನೋಡಿದರೆ ತೊಂದರೆ ಆಗುತ್ತದೆ ಎಂದುಕೊಂಡು ಮೊದಲು ಹೊರಡು ಎಂದು ಹೇಳಿದ್ದು. ಅದು ಸರಿ ಮಧು ಫೋನ್ ಯಾಕೆ ಆಫ್ ಮಾಡಿದ್ದೆ. ನನಗೆಷ್ಟು ಕಳವಳ ಆಯ್ತು ಗೊತ್ತ. ಎಲ್ಲಿ ನೀನು ಬರುತ್ತೀಯೋ ಇಲ್ಲವೋ ಎಂದುಕೊಂಡಿದ್ದೆ. ಅದೂ ಅಲ್ಲದೆ ನಿನ್ನದು ಮಹಿಳಾ ಪೀಜೀ ಆಮೇಲೆ ಒಳಗೆ ಬಂದರೆ ಎಲ್ಲಿ ಒದೆ ತಿನ್ನಬೇಕೋ ಎಂದು ಸುಮ್ಮನಾದೆ.

ಅಮರ್ ಪ್ರತಿದಿನ ರಾತ್ರಿ ನನಗೆ ಫೋನ್ ಆಫ್ ಮಾಡುವ ಅಭ್ಯಾಸ. ನೆನ್ನೆಯೂ ಯಾವುದೋ ಧ್ಯಾನದಲ್ಲಿ ಆಫ್ ಮಾಡಿದ್ದೆ. ಅದೇನೋ ಗೊತ್ತಿಲ್ಲ ಸರಿಯಾಗಿ ನಾಲ್ಕಕ್ಕೆ ಎಚ್ಚರ ಆಯ್ತು. ಇಲ್ಲದಿದ್ದರೆ ಆರಾಮಾಗಿ ಎಂಟಕ್ಕೆ ಏಳುವವಳು ನಾನು. ಅದು ಬಿಡು ಈಗ ಬಂದಿದ್ದು ಆಯ್ತಲ್ಲ...ಮತ್ತೆ ಸಾಹೇಬರು ರಾತ್ರಿ ಪೂರ ಪಾರ್ಟಿ ಜೋರು ಅನ್ಸತ್ತೆ, ಕಣ್ಣುಗಳು ಟ್ರಾಫಿಕ್ ಸಿಗ್ನಲ್ ನ ಲೈಟ್ ಹೊಳೆದಂತೆ ಕೆಂಪಗೆ ಹೊಳೆಯುತ್ತಿದೆ. ಏನು ಖುಷಿಲಪ್ಪ ಪಾರ್ಟಿ ಮಾಡಿದ್ರಿ?

ಪಾರ್ಟಿಯೂ ಇಲ್ಲ ಏನೂ ಇಲ್ಲ. ರಾತ್ರಿ ಪೂರ ನಿದ್ದೆ ಬಂದಿಲ್ಲ ಅದಕ್ಕೆ ಅಷ್ಟೇ ಹಾಗಿದೆ. ಅದು ಸರಿ ಮಧು ಏನಿವತ್ತು ಅಪರೂಪಕ್ಕೆ ಡ್ರೆಸ್ ಕೋಡ್ ಬದಲಾಯಿಸಿಬಿಟ್ಟಿದ್ದೀಯ. ಮೊಟ್ಟ ಮೊದಲ ಬಾರಿಗೆ ನಿನ್ನನ್ನು ಈ ಡ್ರೆಸ್ನಲ್ಲಿ ನೋಡುತ್ತಿರುವುದು. ನಿನಗೆ ಬಹಳ ಚೆನ್ನಾಗಿ ಕಾಣುತ್ತಿದೆ. ಹೌದು, ಒಮ್ಮೆ ಪ್ರೇಮ ಕೂಡ ಇದೆ ರೀತಿ ಡ್ರೆಸ್ ಹಾಕಿ ಬಂದಿದ್ದಳು ಕಾಲೇಜಿಗೆ. ನೀವಿಬ್ಬರೂ ಪ್ರತಿ ಬಾರಿ ಒಂದೇ ರೀತಿ ಬಟ್ಟೆ ತೆಗೆದುಕೊಳ್ಳುತ್ತೀರ?

ಹೌದು ಅಮರ್ ಇಬ್ಬರೂ ಒಂದೇ ರೀತಿ ಬಟ್ಟೆ ಕೊಳ್ಳುತ್ತೀವಿ. ಅವಳ ಬಳಿಯೂ ಇದೆ ರೀತಿ ಬಟ್ಟೆ ಇದೆ. ಆದರೆ ನಾನು ಇಂಥಹ ಡ್ರೆಸ್ ಗಳು ಜಾಸ್ತಿ ಬಳಸಲ್ಲ ಅಷ್ಟೇ.

ಮಾತಾಡುತ್ತ ಮಾತಾಡುತ್ತ ಭದ್ರ ತಲುಪಿದರು. ಭದ್ರ ತಲುಪಿದಾಗ ಮಳೆ ಸಣ್ಣದಾಗಿ ಹನಿಯುತ್ತಿತ್ತು. ಎಲ್ಲೆಡೆ ಮೋಡ ಕವಿದ ವಾತಾವರಣ, ಹಚ್ಚ ಹಸಿರು, ತಣ್ಣನೆ ಗಾಳಿ ವಾರದ ದಿನ ಆದ್ದರಿಂದ ಜನ ಕೂಡ ಹೆಚ್ಚಾಗಿ ಇರಲಿಲ್ಲ. ಕಾರಿನಿಂದ ಇಳಿದ ಮಧುರ ಆ ವಾತಾವರಣ ಕಂಡು ವೌ ಎಂದು ಉದ್ಗಾರ ತೆಗೆದು ಅಮರ್, ನನಗೆ ಈ ವಾತಾವರಣಕ್ಕೆ ಕಣೋ ಈ ಜಾಗ ಬಹಳ ಹಿಡಿಸಿರುವುದು. ಅದೂ ಈ ಮಳೆಗಾಳದಲ್ಲಂತೂ ಇಲ್ಲಿ ಅದ್ಭುತವಾಗಿರುತ್ತದೆ. ಈ ಮಳೆಯಲ್ಲಿ ಹಿನ್ನೀರಿನಲ್ಲಿ ಬೋಟ್ ರೈಡಿಂಗ್ ಹೋದರಂತೂ ಅದರ ಮಜವೇ ಬೇರೆ...ದಟ್ ವಿಲ್ ಬಿ ಸೊ ರೋಮಾಂಟಿಕ್..

ಮಧುರ ಮನಬಿಚ್ಚಿ ಮಾತಾಡಿದ್ದು ಕೇಳಿ ಅಮರ್ ಗೆ ಬಹಳ ಸಂತೋಷ ಆಯಿತು. ಮಧು ನಿನಗೆ ಈ ಜಾಗ ಅಷ್ಟು ಇಷ್ಟಾನ? ಮಧು ನಿನಗೊಂದು ವಿಷಯ ಗೊತ್ತ ನಾನು ವಾರಕ್ಕೊಮ್ಮೆ ಇಲ್ಲಿ ಬರುತ್ತಿರುತ್ತೇನೆ. ಇಲ್ಲಿ ನಮ್ಮದೇ ಆದ ರೆಸಾರ್ಟ್ ಇದೆ. ಅದಕ್ಕೆ ಹುಡುಗರು ನನ್ನ ಜೊತೆ ಇಲ್ಲಿಗೆ ಬರಬೇಕೆಂದು ಕೊಂಡಿದ್ದು.  ವಾರಕ್ಕೊಮ್ಮೆ ಬಂದು ಎಲ್ಲ ಪರಿಶೀಲಿಸಿಕೊಂಡು ಹೋಗುತ್ತೇನೆ. ಕಂ ವಿ ವಿಲ್ ಗೋ ಟು ದಿ ರೆಸಾರ್ಟ್ ಎಂದು ರೆಸಾರ್ಟ್ ಬಳಿ ಕರೆದುಕೊಂಡು ಬಂದ. ದೊಡ್ಡದಾದ ಬೋರ್ಡಿನಲ್ಲಿ ರಿವರ್ ವ್ಯೂ ರೆಸಾರ್ಟ್ ಎಂಬ ಬೋರ್ಡ್ ಇವರನ್ನು ಸ್ವಾಗತಿಸಿತ್ತು.  ಇವರ ಕಾರು ಒಳಗೆ ಬಂದ ತಕ್ಷಣ ಅಲ್ಲಿನ ಉಸ್ತುವಾರಿ ನೋಡಿಕೊಳ್ಳುವ ಬಹದ್ದೂರ್ ಬಂದು ಅವರ ಲಗೇಜ್ ಎಲ್ಲ ತೆಗೆದುಕೊಂಡು ಒಳಗೆ ಹೋದ.

ಅಮರನ ರೆಸಾರ್ಟ್ ಇದ್ದದ್ದು ಪುಟ್ಟದಾದ ದ್ವೀಪವೊಂದರಲ್ಲಿ.  ಹಿನ್ನೀರಿನ ದಡದಿಂದ ಮರದ ಸೇತುವೆಯೊಂದನ್ನು ನಿರ್ಮಿಸಿ ಆ ಕಡೆ ಇರುವ ದ್ವೀಪಕ್ಕೆ ಹೋಗುವಂತೆ ದಾರಿ ಮಾಡಿದ್ದರು. ಆ ದ್ವೀಪದಲ್ಲಿ ನಿಂತು ನೋಡಿದರೆ ಇಡೀ ಭದ್ರದ ವಿಹಂಗಮ ನೋಟ ಕಾಣುತ್ತಿತ್ತು. ಅಮರ್, ಇಟ್ಸ್ ರಿಯಲ್ಲಿ ಬ್ಯೂಟಿಫುಲ್ ಕಣೋ. ಥ್ಯಾಂಕ್ ಯೂ ಸೊ ಮಚ್. ನೀನು ಹೇಳಲೇ ಇಲ್ಲ ನಿನಗೆ ಇಲ್ಲೊಂದು ರೆಸಾರ್ಟ್ ಇದೆ ಎಂದು. ಇಟ್ಸ್ ಅಮೆಜಿ೦ಗ್ ಕಣೋ. ಸೂಪರ್ ಆಗಿದೆ ಕಣೋ ಈ ಜಾಗ ಈ ರೆಸಾರ್ಟ್. ಥಾಂಕ್ ಯೂ ಅಮರ್...

ಮಧು ನೀನು ಪದೇ ಪದೇ ಥ್ಯಾಂಕ್ಸ್ ಎನ್ನಬೇಡ. ನನಗೆ ಏನೋ ಒಂದು ರೀತಿ ಮುಜುಗರ ಆಗುತ್ತದೆ. ಮೊದಲು ನೀನು ಫ್ರೆಶ್ ಅಪ್ ಆಗು ಆಮೇಲೆ ತಿಂಡಿ ತಿಂದು ಬೋಟಿಂಗ್ ಹೋಗೋಣ.  ನಿನಗೆ ತಿಂಡಿ ಏನು ಬೇಕೋ ಬಹದ್ದೂರ್ ಗೆ ಹೇಳು ಅವನು ರೆಡಿ ಮಾಡುತ್ತಾನೆ. ಹಾಗೆ ಮಧ್ಯಾಹ್ನದ ಊಟಕ್ಕೂ ಏನು ಬೇಕೋ ಹೇಳು. ಇಲ್ಲಿ ಒಳ್ಳೆಯ ಹೋಟೆಲ್ ಯಾವುದೂ ಇಲ್ಲ. ಅವನೇ ಒಳ್ಳೆಯ ಅಡಿಗೆ ಮಾಡುತ್ತಾನೆ.  ಅಮರ್ ಏನಾದರೂ ಸರಿ ಹೊಟ್ಟೆ ತುಂಬಿದರೆ ಸಾಕು ಹ್ಹ ಹ್ಹ ಹ್ಹ.... ಓಕೆ ಮಧು ನಾನು ಫ್ರೆಶ್ ಅಪ್ ಆಗಿ ಬರುತ್ತೇನೆ ರೆಡಿಯಾಗಿರು

Rating
No votes yet

Comments