ಅಮರ..ಮಧುರ..ಪ್ರೇಮ = ಭಾಗ 18
ಒಂದೂವರೆ ವರ್ಷದಿಂದ ಒಂದೊಂದು ದಿನವನ್ನೂ ಒಂದೊಂದು ಯುಗದಂತೆ ಕಳಿಯುತ್ತಿದ್ದ ಅಮರನಿಗೆ ಮಧುರಳ ಮಾತು ಕೇಳಿದಾಗಿನಿಂದ ಅವಳನ್ನು ನೋಡುವ ಕಾತುರ ಹೆಚ್ಚಾಗಿ ದಿನಗಳನ್ನು ಕಳೆಯುವುದು ಇನ್ನೂ ಕಷ್ಟವಾಯಿತು. ಒಂದೆಡೆ ಅವಳು ಒಪ್ಪಿಗೆ ಏನೋ ಕೊಟ್ಟಿದ್ದಾಳೆ ಆದರೆ ಅವರ ಅಪ್ಪನನ್ನು ಹೇಗೆ ಒಪ್ಪಿಸುವುದು. ಅದೂ ನನ್ನ ಹಿನ್ನಲೆ ಗೊತ್ತಾದರೆ ಅಂತೂ ಖಂಡಿತ ಅವರು ನನ್ನಂತ ಸಿರಿವಂತನಿಗೆ ಹೆಣ್ಣನ್ನು ಕೊಡಲು ಒಪ್ಪುವುದಿಲ್ಲ. ಹಣದ ಮದದಲ್ಲಿ ಅವಳನ್ನು ಪ್ರೀತಿಸಿರುವುದಾಗಿ ತಿಳಿಯುತ್ತಾರೆ. ಏನಪ್ಪಾ ಮಾಡುವುದು ಎಂದು ಆಲೋಚಿಸುತ್ತಾ ದಿನಗಳನ್ನು ತಳ್ಳುತ್ತಿದ್ದ.
ಮೂರನೇ ವರ್ಷದ ಪರೀಕ್ಷೆಯಲ್ಲಿ ಓದಿನಲ್ಲಿ ಚೇತರಿಸಿಕೊಂಡಿದ್ದ ಪ್ರೇಮ ಮತ್ತೆ ಓದಿನ ಬಗ್ಗೆ ಆಸಕ್ತಿ ಕಡಿಮೆ ಮಾಡಿದ್ದಳು. ಈ ವಿಷಯ ಮಧುರಳ ಗಮನಕ್ಕೆ ಬಂದು ಪ್ರೇಮ, ನಾನು ನಿನ್ನಲ್ಲಿನ ಬದಲಾವಣೆಗಳನ್ನು ಗಮನಿಸುತ್ತಲೇ ಇದ್ದೀನಿ. ಕಳೆದ ಬಾರಿ ಚೆನ್ನಾಗಿ ಪರೀಕ್ಷೆ ಬರೆದು ಈಗ ನೋಡಿದರೆ ಮತ್ತೆ ಓದಿನಲ್ಲಿ ನಿನ್ನ ಆಸಕ್ತಿ ಕಡಿಮೆ ಆಗಿದೆ. ನಿನಗೆ ಆಗಲೇ ಇದರ ಪರಿಣಾಮ ಏನಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದೇನೆ. ಆದರೂ ನೀನ್ಯಾಕೆ ಹೀಗೆ ಮಾಡ್ತಾ ಇದ್ದೀಯ ಅರ್ಥವೇ ಆಗುತ್ತಿಲ್ಲ. ಪ್ರೇಮ ಇದು ನಮ್ಮ ಜೀವನದ ಮಹತ್ವದ ಘಟ್ಟ. ಇನ್ನೊಂದು ಆರು ತಿಂಗಳು ಕಠಿಣ ಶ್ರಮ ಹಾಕಿಬಿಡು ಆಮೇಲೆ ಯಾರೂ ನಿನ್ನನ್ನು ಒತ್ತಾಯಿಸುವುದಿಲ್ಲ. ಇದ್ದಕ್ಕಿದ್ದಂತೆ ಯಾಕೆ ನೀನು ಹೀಗೆ ವರ್ತಿಸುತ್ತೀಯ. ಆ ಅಮರ್ ಈಗಲೂ ನಿನ್ನ ಜೊತೆ ಸಂಪರ್ಕದಲ್ಲಿ ಇದಾನ? ಅವನಿಂದಲೇ ನೀನು ಹೀಗೆ ಆಗಿರುವುದು. ಮೊದಲು ಅವನಿಗೆ ಹೇಳಬೇಕು ನಿನಗೆ ತೊಂದರೆ ಕೊಡಬೇಡ ಎಂದು.
ಮಧು ಇದರಲ್ಲಿ ಅಮರನದು ಏನೂ ತಪ್ಪಿಲ್ಲ. ಅವನ ಪಾಡಿಗೆ ಅವನು ಜಪಾನ್ ನಲ್ಲಿ ಇದ್ದಾನೆ. ಯಾಕೋ ನನಗೆ ಓದಲು ಮನಸಾಗುತ್ತಿಲ್ಲ. ಸುಮ್ಮನೆ ನನ್ನನು ಬಲವಂತ ಮಾಡಬೇಡ. ನನಗೆ ಹೇಗೆ ಬೇಕೋ ಹಾಗೆ ಇರಲು ಬಿಟ್ಟು ಬಿಡು ಮಧು. ಇಲ್ಲವಾದರೆ ಒತ್ತಡದಲ್ಲಿ ಸಿಲುಕಿ ನಾನೇನು ಆಗುತ್ತೇನೋ ನನಗೆ ಗೊತ್ತಿಲ್ಲ. ಯಾಕೆ ಸುಮ್ಮನೆ ತಲೆ ತಿನ್ನುತ್ತೀಯ. ಮುಂದೆ ನನ್ನ ಹಣೆ ಬರಹ ಹೇಗೆಂದು ಇದೆಯೋ ಹಾಗೆ ಆಗುತ್ತದೆ. ಅದರ ಬಗ್ಗೆ ಯಾರೂ ತಲೆ ಕೆಡಿಸಿಕೊಳ್ಳುವುದು ಬೇಕಾಗಿಲ್ಲ.
ಪ್ರೇಮಳಿಂದ ಈ ರೀತಿಯ ಮಾತುಗಳನ್ನು ನಿರೀಕ್ಷಿಸಿರದ ಮಧುರಗೆ ಶಾಕ್ ಕೊಟ್ಟಂತಾಗಿತ್ತು. ಎಂದೂ ಇಷ್ಟು ಕಟುವಾಗಿ ಮಾತಾಡದ ಪ್ರೇಮ ಯಾಕಿಂದು ಇಷ್ಟು ಕಟುವಾಗಿ ವರ್ತಿಸಿದಳೆಂದು ಮನತುಂಬಿಬಂದು ಕಣ್ಣಿನಿಂದ ನೀರು ಸುರಿಯತೊಡಗಿತು. ಪ್ರೇಮ ಆವೇಶದಲ್ಲಿ ಮಾತಾಡಿ, ನಂತರ ತನ್ನ ತಪ್ಪಿನ ಅರಿವಾಗಿ ಮತ್ತೆ ಮಧುರಳ ಬಳಿ ಬಂದು ಮಧು ಐ ಅಂ ಸಾರಿ ಮಧು. ನಾನು ಹಾಗೆ ಮಾತಾಡಬಾರದಿತ್ತು ನನ್ನನ್ನು ಕ್ಷಮಿಸು. ಏನೋ ಆವೇಶದಲ್ಲಿ ಮಾತಾಡಿಬಿಟ್ಟೆ. ನಿನ್ನ ಮನಸಿಗೆ ಬಹಳ ನೋವಾಗಿದೆ ಎಂದು ಗೊತ್ತು..ಎಷ್ಟು ಮಾತಾಡಬಾರದು ಎಂದು ಕಂಟ್ರೋಲ್ ಮಾಡಿಕೊಂಡರೂ ಆಗಲಿಲ್ಲ ಮಧು ಎಂದು ಬಿಕ್ಕಲು ಶುರು ಮಾಡಿದಳು.
ಮಧುರ ಪ್ರೇಮಳ ತಲೆ ನೇವರಿಸಿ ಪ್ರೇಮ ನಾವೆಲ್ಲಾ ಹೇಳುವುದು ನಿನ್ನ ಒಳ್ಳೆಯದಕ್ಕೆ ಕಣೆ. ಅಪ್ಪ ನಮ್ಮನ್ನು ಓಡಿಸಲು ಎಷ್ಟು ಕಷ್ಟ ಪಟ್ಟಿದ್ದಾರೆ ಎಂದು ನಿನಗೆ ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಅವರ ಶ್ರಮಕ್ಕೆ ನಾವು ಕೊಡಬೇಕಾದ ಉಡುಗೊರೆ ಏನು ಗೊತ್ತ? ನಾವು ಚೆನ್ನಾಗಿ ಓದಿ ಅವರಿಗೆ ಕೀರ್ತಿ ತರಬೇಕು. ಆದರೆ ನೀನು ಹೀಗೆ ಮಾಡಿದರೆ ಅವರ ಕನಸೆಲ್ಲ ನುಚ್ಚು ನೂರಾಗುತ್ತದೆ ಪ್ರೇಮ. ಇದರ ಮೇಲೂ ನೀನು ತಿದ್ದಿಕೊಳ್ಳದಿದ್ದರೆ ಇನ್ನು ಮುಂದೆ ನಿನಗೆ ಏನೂ ಹೇಳುವುದಿಲ್ಲ. ನಿನಗೆ ಹೇಗೆ ಬೇಕೋ ಹಾಗೆ ಇರಬಹುದು. ನಾನೇನಾದರೂ ತಪ್ಪು ಮಾತಾಡಿದ್ದರೆ ದಯವಿಟ್ಟು ನನ್ನನ್ನು ಕ್ಷಮಿಸು ಪ್ರೇಮ.
ಎಂದೂ ಈ ರೀತಿ ಮಾತಾಡದ ಪ್ರೇಮ ಇಂದು ಈ ರೀತಿ ಮಾತಾಡಿದ್ದಾಳೆ ಎಂದರೆ ಅವಳು ಮತ್ತು ಅಮರನ ನಡುವೆ ಏನೋ ಜಗಳ ನಡೆದಿದೆ. ಆದರೆ ಅದು ಮಾಮೂಲಿ ಅಷ್ಟಕ್ಕೇ ಅವಳು ಈ ರೀತಿ ಪ್ರತಿಕ್ರಿಯಿಸುವುದಿಲ್ಲ. ಬೇರೆ ಏನೋ ನಡೆದಿರಬೇಕು. ಈಗಲೇ ಕೇಳಿದರೆ ಅವಳು ಖಂಡಿತ ಮುಚ್ಚಿಡುತ್ತಾಳೆ. ನಿಧಾನವಾಗಿ ಅವಳ ಮನಸು ಸರಿಹೋದ ಮೇಲೆ ಕೇಳಬೇಕು.
ಅಮರನಿಗೆ ಮಧುರ ಒಪ್ಪಿಗೆ ಕೊಟ್ಟಿದ್ದನ್ನು ತನ್ನ ತಾಯಿಯ ಮುಂದೆ ಹೇಳೋಣ ಎಂದುಕೊಂಡ. ಆದರೆ ಇನ್ನೂ ಅವಳ ಅಪ್ಪನ ಜೊತೆ ಮಾತಾಡಬೇಕು, ಅವರು ಒಪ್ಪಬೇಕು ಅವೆಲ್ಲ ಏನೂ ಆಗದೆ ನನ್ನ ಪಾಡಿಗೆ ನಾನು ಎಲ್ಲರ ಮುಂದೆ ಹೇಳಿಕೊಂಡು ಬಂದು ಆಮೇಲೆ ನಾನಂದುಕೊಂಡ ಹಾಗೆ ನಡೆಯದಿದ್ದರೆ ಸುಮ್ಮನೆ ನಗೆಪಾಟಲಿಗೀಡಾಗಬೇಕಾಗುತ್ತದೆ. ಮಧುರಗೂ ಕೆಟ್ಟ ಹೆಸರು. ಬೇಡ ಈಗಲೇ ಹೇಳುವುದು ಬೇಡ. ಮೊದಲು ಅವಳ ಓದು ಮುಗಿದು ಅವಳಿಗೊಂದು ಕೆಲಸ ಅಂತ ಸಿಕ್ಕಿದರೆ ಆಮೇಲೆ ಹೇಳುವುದು ಒಳ್ಳೆಯದು ಎಂದು ಆಲೋಚಿಸಿದ. ಆದರೆ ಪ್ರೇಮಗೆ ವಿಷಯ ತಿಳಿಸೋಣ ಆಮೇಲೆ ಅವಳು ಅದಕ್ಕೂ ಕೂಗಾಡುತ್ತಾಳೆ. ಅದೂ ಅಲ್ಲದೆ ಅವಳು ನನಗೆ ಎಷ್ಟು ಸಹಾಯ ಮಾಡಿದ್ದಾಳೆ ಎಂದು ಪ್ರೇಮಗೆ ಕರೆ ಮಾಡಲು ಪ್ರಯತ್ನಿಸಿದರೆ ಅವಳ ನಂಬರ್ ಸ್ವಿಚ್ ಆಫ್ ಎಂದು ಬರುತ್ತಿತ್ತು. ಮತ್ತೊಮ್ಮೆ ಹೇಳಿದರೆ ನಡೆಯುತ್ತೆ ಎಂದು ಸುಮ್ಮನಾದ.
ಎರಡು ಮೂರು ಬಾರಿ ಪ್ರೇಮ ಬಳಿ ಮಾತಾಡಲು ಪ್ರಯತ್ನಿಸಿದರೂ ಅವಳ ನಂಬರ್ ಸ್ವಿಚ್ ಆಫ್ ಎಂದು ಬರುತ್ತಿತ್ತು. ಒಮ್ಮೆ ಮಧುರಳ ಬಳಿ ಮಾತಾಡಬೇಕಾದರೆ ಮಧು, ಯಾಕೆ ಪ್ರೇಮ ಸ್ವಿಚ್ ಆಫ್ ಮಾಡಿಕೊಂಡಿದ್ದಾಳೆ. ಅವಳ ಜೊತೆ ಮಾತಾಡಲು ಪ್ರಯತ್ನಿಸಿದೆ ಆದರೆ ಸತತವಾಗಿ ಅವಳ ಫೋನ್ ಸ್ವಿಚ್ ಆಫ್ ಎಂದು ಬರುತ್ತಿದೆ. ಯಾಕೆ ಏನಾಯ್ತು? ಏನಾದರೂ ತೊಂದರೆ ಆಗಿದ್ಯ?
ಅಮರ್ ಹೊಸ ವಿಷಯ ಏನಲ್ಲ, ಅದೇ ಹಳೆ ವಿಷ್ಯ, ನಿನ್ನ ನೆಪದಲ್ಲಿ ಮತ್ತೆ ಓದಿನ ಕಡೆ ಆಸಕ್ತಿ ಕಳೆದುಕೊಂಡಿದ್ದಾಳೆ. ಅದೂ ಅಲ್ಲದೆ ಇತ್ತೀಚಿಗೆ ಯಾಕೋ ಅವಳ ವರ್ತನೆ ಸರಿಯಾಗಿಲ್ಲ. ನಿನ್ನೊಡನೆ ಏನಾದರೂ ಜಗಳ ಆಯ್ತಾ? ಸದಾ ನಿನ್ನದೇ ಧ್ಯಾನದಲ್ಲಿ ಇರುತ್ತಾಳೆ? ಅಮರ್, ನೀನಿಲ್ಲದೆ ಇದ್ದರೆ ಅವಳು ಏನಾಗಿ ಬಿಡುತ್ತಾಳೋ ಅಂತ ಭಯ ಆಗ್ತಿದೆ. ಅಮರ್ ಅದಕ್ಕೆ ಬಹಳ ಆಲೋಚಿಸಿ ಒಂದು ನಿರ್ಧಾರಕ್ಕೆ ಬಂದಿದ್ದೇನೆ. ನೀನೆ ಅದಕ್ಕೆ ಸಹಕರಿಸಬೇಕು.
ಮಧು, ಅವಳ ಜೊತೆ ಜಗಳ ಆಡಲು ನಾನು ಅವಳ ಜೊತೆ ಮಾತಾಡಿ ತುಂಬಾ ದಿನ ಆಯ್ತು. ನಾನು ಕಡೆಯ ಬಾರಿ ಮಾತಾಡಿದಾಗ ಸರಿಯಾಗೇ ಮಾತಾಡಿದ್ದಳು. ಬಿಡು ಏನೋ ನಿರ್ಧಾರ ಮಾಡಿದ್ದೀನಿ ಎಂದೆಯಲ್ಲ ಏನದು ಎಂದು ಹೇಳು. ಅಮರ್, ನನ್ನ ಮಾತು ಸಮಾಧಾನದಿಂದ ಕೇಳಿಸಿಕೋ. ಎಲ್ಲರ ಒಳಿತನ್ನು ಮನಸಿನಲ್ಲಿ ಇಟ್ಟುಕೊಂಡು ನಾನು ಈ ನಿರ್ಧಾರ ತೆಗೆದುಕೊಂಡಿದ್ದೇನೆ. ಅಮರ್, ನೀನು....ನೀನು...ದಯವಿಟ್ಟು ಪ್ರೇಮಳನ್ನು ಮದುವೆ ಆಗಬೇಕು.ಮಧು ನೀನೇನು ಮಾತಾಡ್ತಾ ಇದ್ದೀಯ ಎಂದು ಪ್ರಜ್ಞೆ ಇದ್ಯಾ? ನಿನ್ನ ಪ್ರೀತಿಯನ್ನು ಕೊಂದುಕೊಂಡು ನಿನ್ನ ತಂಗಿಗೆ ನೀನು ದೊಡ್ಡ ತ್ಯಾಗ ಮಾಡುತ್ತಿದ್ದೀನಿ ಎಂದು ಎಣಿಸಿದ್ದೀಯ? ಆದರೆ ಅದು ನನ್ನಿಂದ ಸಾಧ್ಯವಿಲ್ಲ ಮಧು. ಅದರ ಬದಲು ನೀನು ಒಂದು ಸ್ವಲ್ಪ ವಿಷ ತೆಗೆದುಕೊಂಡು ಸತ್ತು ಹೋಗು ಎನ್ನು ಹಿಂದೆ ಮುಂದೆ ಯೋಚಿಸದೆ ತೆಗೆದುಕೊಳ್ಳುತ್ತೇನೆ. ಇದು ಮಾತ್ರ ನನ್ನಿಂದ ಸಾಧ್ಯವಿಲ್ಲ ಮಧು. ಪ್ಲೀಸ್ ಇನ್ನು ಯಾವತ್ತೂ ಇದರ ಬಗ್ಗೆ ಮಾತಾಡಬೇಡ. ಅಮರ್..ಅಮರ್...ದಯವಿಟ್ಟು ನನ್ನ ಮಾತು ಕೇಳು...ನಿನಗೆ ನಿಜವಾಗಿಯೂ ನನ್ನ ಬಗ್ಗೆ ಗೌರವ ಇದ್ದರೆ ನನ್ನ ಮಾತನ್ನು ಕೇಳು. ಅಮರ್ ನಾನು ನೀನು ಮದುವೆ ಆದರೆ ನಾವಿಬ್ಬರು ಸಂತೋಷವಾಗಿರುತ್ತೇವೆ ಅದೇ ನೀನು ಪ್ರೇಮ ಮದುವೆ ಆದರೆ ಎಲ್ಲರೂ ಸಂತೋಷವಾಗಿರುತ್ತಾರೆ. ಅಮರ್ ನೀನೆ ಯೋಚನೆ ಮಾಡು ನಮ್ಮಿಬ್ಬರ ಸ್ವಾರ್ಥಕ್ಕೆ ಎಲ್ಲರ ಸಂತೋಷವನ್ನು ಕಸಿದುಕೊಳ್ಳಬೇಕೆ? ಅಮರ್ ದಯಮಾಡಿ ನನ್ನ ಮಾತು ಕೇಳು. ಇಲ್ಲದಿದ್ದರೆ ಪ್ರೇಮ ಏನು ಬೇಕಾದರೂ ಮಾಡಿಕೊಳ್ಳುತ್ತಾಳೆ. ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ ನಿನಗಾಗಿ ಅವಳೂ ಸಾಯಲೂ ಸಿದ್ಧ.
ಮಧು, ಈ ವಿಷಯದಲ್ಲಿ ನನ್ನ ನಿರ್ಧಾರ ಬದಲಾಗುವುದಿಲ್ಲ. ಮದುವೆ ಎಂದು ಆದರೆ ಅದು ನಿನ್ನ ಜೊತೆ. ಇಲ್ಲದಿದ್ದರೆ ಜೀವನ ಪೂರ್ತಿ ಹೀಗೆ ಇದ್ದುಬಿಡುತ್ತೇನೆ ಹೊರತೂ ಇನ್ಯಾರನ್ನೂ ಮದುವೆ ಆಗಲು ನಾನು ಸಿದ್ಧವಿಲ್ಲ. ದಯವಿಟ್ಟು ಇನ್ನು ಮುಂದೆ ಯಾವತ್ತೂ ಈ ವಿಷಯದ ಕುರಿತ್ತಾಗಿ ನನ್ನ ಬಳಿ ಮಾತಾಡಬೇಡ ಮಧು. ಮನಸಿಗೆ ಬಹಳ ಹಿಂಸೆ ಆಗುತ್ತದೆ