ಅಮರ‌..ಮಧುರ..ಪ್ರೇಮ = ಭಾಗ 19

ಅಮರ‌..ಮಧುರ..ಪ್ರೇಮ = ಭಾಗ 19

ಮಧುರಳ ಮಾತುಗಳಿಂದ ಅಮರ್ ಬಹಳ ನೊಂದುಕೊಂಡಿದ್ದ. ಇದನ್ನು ಆದಷ್ಟು ಬೇಗ ಪರಿಹರಿಸಕೊಳ್ಳದಿದ್ದರೆ ಮುಂದೆ ನಡೆಯುವ ಅನಾಹುತಗಳಿಗೆ ಪರೋಕ್ಷವಾಗಿ ನಾನೇ ಕಾರಣವಾಗಬೇಕಾಗುತ್ತದೆ ಎಂದು ಆಲೋಚಿಸಿ ಪ್ರೇಮ ಮೊಬೈಲಿಗೆ ಕರೆ ಮಾಡಿದ. ಬಹಳ ದಿನಗಳ ನಂತರ ಪ್ರೇಮ ನಂಬರ್ ರಿಂಗಾಯಿತು. ಹಲೋ ಎಂದ ಪ್ರೇಮ ದನಿಯಲ್ಲಿ ಯಾವುದೇ ಚೈತನ್ಯ ಇರಲಿಲ್ಲ. ಅದನ್ನು ಮನಗಂಡ ಅಮರ್, ಪ್ರೇಮ ಏನಾಗಿದೆ ನಿನಗೆ ಯಾಕೆ ಹೀಗೆಲ್ಲ ವರ್ತಿಸುತ್ತಿದ್ದೀಯ? ನಾನು ನಿನಗೆ ಎಷ್ಟು ಬಾರಿ ಹೇಳಿದ್ದೇನೆ ಬಲವಂತವಾಗಿ ಮಾಡಿದರೆ ಅದು ಪ್ರೀತಿ ಆಗುವುದಿಲ್ಲ ಅದು ಬೇರೆಯೇ ಆಗುತ್ತದೆ, ನಿನಗಿನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ....ಹ್ಮ್ ಬೇಡ ಬಿಡು ನಿನಗೆ ಅರ್ಥವಾಗುತ್ತದೆ ಎಂದು ಕೊಳ್ಳುತ್ತೇನೆ.  ಪ್ರೇಮ ನೀನು ಹೀಗೆ ವರ್ತಿಸುತ್ತಿರುವುದರಿಂದ ಮಧುರ ಎಷ್ಟು ನೊಂದುಕೊಂಡಿದ್ದಾಳೆ ಎಂಬ ಊಹೆಯಾದರೂ ಇದೆಯಾ ನಿನಗೆ? ಪ್ರೇಮ ದಯಮಾಡಿ ನನ್ನ ಮಾತು ಕೇಳು ನನ್ನ ಮನಸಿನಲ್ಲಿ ನಿನ್ನ ಬಗ್ಗೆ ಒಳ್ಳೆಯ ಸ್ನೇಹಿತೆ ಎಂಬ ಭಾವನೆ ಬಿಟ್ಟರೆ ಬೇರೆ ಯಾವುದೇ ಭಾವನೆ ಇಲ್ಲ. ಇನ್ನಾದರೂ ನನ್ನ ಮಾತು ಕೇಳಿ ಇದನ್ನೆಲ್ಲಾ ಬಿಟ್ಟು ಮೊದಲಿನಂತೆ ಇರು. ನೀನು ಮೊದಲು ಹೇಗೆ ನಗುನಗುತ್ತಾ ಲವಲವಿಕೆಯಿಂದ ಇದ್ದೆಯೋ ಹಾಗಿದ್ದರೆನೆ ಚಂದ. 


ಅಮರ್, ನಿನಗೆ ನನ್ನ ಭಾವನೆಗಳು ಅರ್ಥ ಆಗುವುದಿಲ್ಲ. ನೀನು ಹೇಳಿದ್ದೆಲ್ಲ ಹೇಳಲು ಕೇಳಲು ಬಲು ಸುಲಭ. ಆದರೆ ಒಮ್ಮೆ ನನ್ನ ಸ್ಥಾನದಲ್ಲಿ ನಿಂತು ಅದನ್ನೆಲ್ಲ ಅಳವಡಿಸಿಕೊಳ್ಳಲು ಪ್ರಯತ್ನಿಸು ಆಗ ಅದರ ವೇದನೆ ಏನೆಂದು ತಿಳಿಯುತ್ತದೆ. ಅಮರ್, ನಾನೂ ಪ್ರತಿ ಬಾರಿ ನಿನ್ನನ್ನು ಮರೆಯಲು ಪ್ರಯತ್ನಿಸುತ್ತೇನೆ ಆದರೆ ಏನು ಮಾಡುವುದು ಅದು ನನ್ನ ಕೈಯಲ್ಲಿ ಆಗುತ್ತಿಲ್ಲ.  ಒಂದು ವೇಳೆ ಮಧುರ ನನ್ನ ಅಕ್ಕ ಆಗಿರದೆ ಸ್ನೇಹಿತೆ ಆಗಿದ್ದರೆ ಬಹುಶಃ ನಾನು ನಿನ್ನನ್ನು ಮರೆತು ಬಿಡುತ್ತಿದ್ದೆನೇನೋ, ಯಾಕೆಂದರೆ ಮದುವೆ ಆದ ಮೇಲೆ ನೀವು ಎಲ್ಲೋ ಹೋಗಿರುತ್ತೀರಿ ಆಗ ನನಗೆ ಅದರ ಬಗ್ಗೆ ಯೋಚನೆಯೇ ಬರುವುದಿಲ್ಲ. ಆದರೆ ಅವಳು ನನ್ನ ಸ್ವಂತ ಅಕ್ಕ, ನಾಳೆ ನಿಮ್ಮಿಬ್ಬರ ಮದುವೆ ಆದರೆ ತಂಗಿ ಆಗಿ ನನ್ನ ಎದುರಿನಲ್ಲೇ ಮದುವೆ ಆಗುತ್ತದೆ, ನಾನೇ ಓಡಾಡಬೇಕು, ಅಷ್ಟಕ್ಕೆ ಮುಗಿಯುತ್ತದ? ಅದಾದ ನಂತರವೂ ನೀವು ನನ್ನೆದುರೇ ಇರುತ್ತೀರ? ಅದೆಲ್ಲ ನೋಡಿಕೊಂಡು ನನ್ನ ಕೈಲಿ ಆಗಲ್ಲ ಅಮರ್. ಅದೆಲ್ಲ ನೆನೆಸಿಕೊಂಡರೆ ನನಗೆ ಮೈಯೆಲ್ಲಾ ಉರಿಯುತ್ತದೆ ಅಮರ್. ಮಧುರ ನನ್ನ ಸ್ವಂತ ಅಕ್ಕನೆ ಇರಬಹುದು ಆದರೂ ಅದನ್ನು ಸಹಿಸಲು ನನ್ನಿಂದ ಆಗುವುದಿಲ್ಲ. ಅಮರ್, ನನ್ನ ಮಾತುಗಳನ್ನು ಕೇಳುತ್ತಿದ್ದರೆ ಒಳ್ಳೆ ಸೈಕೋ ಹಾಗೆ ಮಾತಾಡುತ್ತಿದ್ದೀನಿ ಅನಿಸುತ್ತಿದೆಯ ಆದರೆ ಏನು ಮಾಡಲಿ ಅಮರ್ ನನಗೆ ನಿನ್ನನ್ನು ಬಿಟ್ಟಿರಲು ಆಗುತ್ತಿಲ್ಲ ಎಂದು ಗಂಟಲು ತುಂಬಿ ಬಂದು ಅಳಲು ಶುರು ಮಾಡಿದಳು.


ಪ್ರೇಮ ಇನ್ನು ಮೂರು ತಿಂಗಳಲ್ಲಿ ನಾನು ಭಾರತಕ್ಕೆ ಮರಳುತ್ತಿದ್ದೇನೆ. ಅಷ್ಟರೊಳಗೆ ನಿಮ್ಮ ಪರೀಕ್ಷೆಗಳು ಮುಗಿದಿರುತ್ತದೆ. ನಿಜವಾಗಿಯೂ ನೀನು ನನ್ನ ಮೇಲೆ ಇಟ್ಟಿರುವ ಪ್ರೀತಿ ನಿಜವೇ ಆಗಿದ್ದರೆ ನನ್ನ ಮಾತಿಗೆ ಗೌರವ ಕೊಟ್ಟು ನನಗೊಂದು ಪ್ರಾಮಿಸ್ ಮಾಡುತ್ತೀಯ?. 


ಏನು ಅಮರ್ ನನ್ನ ಪ್ರೀತಿಯನ್ನು ಪರೀಕ್ಷೆ ಮಾಡುತ್ತಿದ್ದೀಯ?


ಪ್ರೇಮ ಅದೆಲ್ಲ ಬಿಡು ಪ್ರಾಮಿಸ್ ಮಾಡುತ್ತೀಯ ಹೇಳು?


ಹೇಳು ಅಮರ್. ನೋಡು ಪ್ರೇಮ, ನಾನು ಬರುವವರೆಗೂ ನೀನು ಓದಿನ ಕಡೆ ಬಿಟ್ಟು ಇನ್ಯಾವುದರ ಕಡೆ ಗಮನ ಕೊಡಬಾರದು ಹಾಗೆ ದುಡುಕಿ ಯಾವ ಅನಾಹುತ ಕೂಡ ಮಾಡಿಕೊಳ್ಳಬಾರದು. ನಿನಗೆ ನಿಜಕ್ಕೂ ನನ್ನ ಮೇಲೆ ಪ್ರೀತಿ ಇದ್ದರೆ ಇವೆರಡನ್ನೂ ನೀನು ನಡೆಸಿಕೊಡಬೇಕು.  ಮುಂದಿನ ವಿಷಯ ನಾನು ಅಲ್ಲಿಗೆ ಬಂದ ಮೇಲೆ ನಿರ್ಧರಿಸೋಣ. ಅಲ್ಲಿಯವರೆಗೂ ನೀನು ಅಪ್ಪಿ ತಪ್ಪಿ ಯಾವುದೇ ಕೆಟ್ಟ ನಿರ್ಧಾರ ತೆಗೆದುಕೊಳ್ಳಬಾರದು.


ಹ್ಹ..ಹ್ಹ...ಹ್ಹ...ಅಮರ್, ಪರವಾಗಿಲ್ಲ ಕಣೋ ಇಷ್ಟಾದರೂ ಕಾಳಜಿ ಇದೆಯಲ್ಲ ನನ್ನ ಮೇಲೆ. ನಂಗೆ ಗೊತ್ತೋ ಕಣೋ ನೀನು ಅಲ್ಲಿಂದ ಬಂದ ಮೇಲೂ ಮಧುರಳನ್ನೇ ಮದುವೆ ಆಗಲು ಪ್ರಯತ್ನಿಸುತ್ತೀಯ. ನೀನೇನೂ ಹೆದರಬೇಡ ನಾನು ಏನೂ ಅನಾಹುತ ಮಾಡಿಕೊಳ್ಳುವುದಿಲ್ಲ. ನನ್ನ ಮನಸು ಹಾಗೇನೆ. ಅತಿಯಾಗಿ ದುಃಖವಾದಾಗ ಏನೇನೋ ಮಾತಾಡುತ್ತೀನಿ.ಹಾಗೆಂದ ಮಾತ್ರಕ್ಕೆ ಮಾತಾಡಿದ್ದೆಲ್ಲ ಮಾಡುವ ಹಾಗಿದ್ದರೆ ಇಷ್ಟು ಹೊತ್ತಿಗೆ ಏನೇನೋ ಆಗಿರುತ್ತಿತ್ತು. 


ಪ್ರೇಮ ಇನ್ನೊಂದು ಮಾತು, ಫೋನ್ ಆಫ್ ಮಾಡಬೇಡ. ನಾನು ಇಲ್ಲಿಯವರೆಗೂ ನಿನ್ನ ಜೊತೆ ಮಾತಾಡಲು ಅದೆಷ್ಟು ಬಾರಿ ಪ್ರಯತ್ನಿಸಿದೇನೋ ಅಂತೂ ಕಡೆಗೆ ಇವತ್ತು ಸಿಕ್ಕಿತು. ಓಕೆ ಪ್ರೇಮ ನಾನು ಇನ್ನೊಮ್ಮೆ ಕರೆ ಮಾಡುತ್ತೇನೆ ಬೈ.


ನೋಡನೋಡುತ್ತಿದ್ದಂತೆ ಪರೀಕ್ಷೆಗಳು ಬಂದೆ ಬಿಟ್ಟವು. ಮಧುರ ಅಂತೂ ಹಗಲು ರಾತ್ರಿ ಎನ್ನದೆ ಓದುತ್ತಿದ್ದಳು. ಕ್ಯಾಂಪಸ್ ಇಂಟರ್ವ್ಯೂ ನಲ್ಲಿ ಮಧುರಗೆ HP ಯಲ್ಲಿ ಕೆಲಸ ಆಗಿದ್ದರೆ, ಪ್ರೇಮ ಗೆ Que Infotec ಕಂಪನಿಯಲ್ಲಿ ಕೆಲಸ ಆಗಿತ್ತು. ಇಬ್ಬರೂ ತಮ್ಮ ತಮ್ಮ ಪ್ರಯತ್ನದಿಂದ ಪರೀಕ್ಷೆಗಳನ್ನು ಮುಗಿಸಿಕೊಂಡರು.  


ಪರೀಕ್ಷೆಗಳು ಮುಗಿದ ತಕ್ಷಣ ಇಬ್ಬರೂ ಊರಿಗೆ ಹೊರಟರು. ಇತ್ತ ಅಮರ್ ಜಪಾನ್ ನಲ್ಲಿ ಎರಡು ವರ್ಷ ಮುಗಿಸಿ ಮಧುರಳನ್ನು ನೋಡುವ ಆತುರ ಮತ್ತು ಕಾತುರದಿಂದ ಬಂದವನಿಗೆ ನಿರಾಶೆ ಕಾದಿತ್ತು. ಯಥಾಪ್ರಕಾರ ಇಬ್ಬರ ಮೊಬೈಲ್ ಗಳು ಆಫ್ ಆಗಿದ್ದವು. ಅಮರನ ಮನದಲ್ಲಿ ಹತಾಶೆಯ ಭಾವ ಮನೆ ಮಾಡಿತ್ತು. ಛೆ ಅವಳಿಗಾಗಿ ನಾನು ಅಲ್ಲಿಂದ ಬರುತ್ತಿದ್ದೇನೆ ಎಂದು ಗೊತ್ತಿದ್ದರೂ ಯಾಕೆ ಹೀಗೆ ಮಾಡುತ್ತಾಳೆ. ಕನಿಷ್ಠ ಪಕ್ಷ ಹೋಗುವ ಮುನ್ನ ಒಂದು ಫೋನ್ ಮಾಡಿಯಾದರೂ ಹೋಗಬಾರದ. ಇನ್ನೇನು ಪರೀಕ್ಷೆಗಳು ಮುಗಿದಿವೆ ಸೀದಾ ಅವರ ಊರಿಗೆ ಹೋಗಿಬಿಡಲ? ಹೇಗಿದ್ದರೂ ಇಂದು ಅಲ್ಲದಿದ್ದರೂ ಮುಂದೆಯಾದರೂ ಅವಳ ಅಪ್ಪ ಅಮ್ಮನ ಜೊತೆ ಮಾತಾಡಬೇಕು. ಅದು ಈಗಲೇ ಆಗಿಬಿಡಲಿ. ಅಬ್ಬಬ್ಬ ಎಂದರೆ ಮಧುರ ಕೋಪ ಮಾಡಿಕೊಳ್ಳಬಹುದು ಪರವಾಗಿಲ್ಲ ಅವಳಿಗೆ ಹೇಗೋ ಸಮಾಧಾನ ಮಾಡಬಹುದು. ಆದರೆ ಅವಳ ಅಡ್ರೆಸ್ಸ್?? ಕಾಲೇಜಿನಲ್ಲಿ ಇದ್ದೆ ಇರುತ್ತದೆ ಎಂದು ಯೋಚಿಸಿ ಕಾಲೇಜಿನ ಬಳಿ ಬಂದು ತನಗೆ ಪರಿಚಯವಿದ್ದ ಅಟೆ೦ಡರ್ ಗಾಗಿ ಹುಡುಕಾಡಿದ. ಆದರೆ ಅವನು ಕಾಲೇಜು ಬಿಟ್ಟ ನಂತರ ಎಲ್ಲರೂ ಬದಲಾಗಿದ್ದರು. ಹಾಗಾಗಿ ಇವನಿಗೆ ಅಡ್ರೆಸ್ಸ್ ಸಂಪಾದಿಸಲು ಸಾಧ್ಯವಾಗಲಿಲ್ಲ. ಮತ್ತಷ್ಟು ನಿರಾಶಾಭಾವದಲ್ಲಿ ಮನೆಗೆ ಹೋದ.


ಒಂದು ವಾರ ಸತತವಾಗಿ ಮಧುರ ನಂಬರ್ ಗೆ ಹಾಗೆ ಪ್ರೇಮಳ ನಂಬರ್ ಗೆ ಪ್ರಯತ್ನಿಸಿದರೂ ಏನೂ ಪ್ರಯೋಜನವಾಗಲಿಲ್ಲ. ಅವರ ಸ್ನೇಹಿತರನ್ನು ಯಾರಾದರನ್ನು ಸಂಪರ್ಕಿಸೋಣ ಎಂದರೆ ಮಧುರಳ ಆಜ್ಞೆಯಂತೆ ಅವಳ ಯಾರ ಸ್ನೇಹಿತರಿಗೂ ನಮ್ಮಿಬ್ಬರ ವಿಷಯ ಗೊತ್ತಾಗಬಾರದು ಎಂದು ಹೇಳಿದ್ದರಿಂದ ಯಾರನ್ನೂ ಪರಿಚಯ ಮಾಡಿಕೊಂಡಿರಲಿಲ್ಲ. ಇನ್ನು ಪ್ರೇಮ ಸ್ನೇಹಿತರನ್ನು ಒಂದಿಬ್ಬರನ್ನು ಸಂಪರ್ಕಿಸಿದರೆ ಅವರ್ಯಾರಿಗೂ ಅವರ ಅಡ್ರೆಸ್ಸ್ ಗೊತ್ತಿಲ್ಲ ಎಂದು ತಿಳಿಸಿದರು. ಅಮರನಿಗೆ ಏನು ಮಾಡಬೇಕೆಂದೇ ಗೊತ್ತಾಗಲಿಲ್ಲ. ಅಷ್ಟರಲ್ಲಿ ಒಂದು ದಿವಸ ಅಮರನ ಅಪ್ಪ ಅಮ್ಮ ಯಾವುದೋ ಕೆಲಸದ ನಿಮಿತ್ತ ಬೆಂಗಳೂರಿಗೆ ಬಂದು ಮಗನನ್ನು ನೋಡಲು ಬಂದರು. ಅಮರನ ಅಮ್ಮ ಅವನನ್ನು ನೋಡಿ ಬಹಳ ನೊಂದುಕೊಂಡು ಏನೋ ಅಮರ್ ಯಾಕೋ ಇಷ್ಟು ಇಳಿದು ಹೋಗಿದ್ದೀಯ? ಕಣ್ಣುಗಳು ನೋಡು ಹೇಗೆ ಕಾಂತಿಹೀನವಾಗಿದೆ? ಅಮರ್ ನೀನು ಏನೋ ಮುಚ್ಚಿಡುತ್ತಿದ್ದೀಯ ನನ್ನ ಬಳಿ. ಏನೆಂದು ಹೇಳು ಅಮರ್. ನಿನ್ನ ಅವಸ್ಥೆ ನೋಡಲು ಆಗುತ್ತಿಲ್ಲ ಎಂದು ಕಣ್ಣಲ್ಲಿ ನೀರು ತುಂಬಿಕೊಂಡರು.


ಅಮ್ಮ ಅದೆಲ್ಲ ಏನೂ ಇಲ್ಲ ನೀನು ಆರಾಮಾಗಿದೀಯ? ಹಾ ಅಮರ್ ನನಗೇನಾಗಿದೆ...ನಾನು ಚೆನ್ನಾಗೆ ಇದ್ದೀನಿ.  ಅಮರ್ ಒಂದು ವಿಷಯ ನೀನು ಯಾಕೆ ಅಲ್ಲಿಗೆ ಬಂದು ನಮ್ಮ ಜೊತೆ ನೆಲೆಸಬಾರದು. ಎಷ್ಟು ದಿವಸ ಅಂತ ಹೀಗೆ ಇಲ್ಲಿ ಒಂಟಿಯಾಗಿ ಹೋಟೆಲ್ ಊಟ ತಿಂದು ಬದುಕುತ್ತೀಯ? ನಿಮ್ಮಪ್ಪನ ಬಗ್ಗೆ ನೀನು ಚಿಂತಿಸುವುದಿಲ್ಲ ಅದು ನನಗೆ ಗೊತ್ತು. ನನ್ನ ಸಲುವಾಗಿ ಆದರೂ ಅಲ್ಲಿಗೆ ಬರಬಾರದ? ಹೇಗಿದ್ದರೂ ಜಪಾನ್ ನಲ್ಲಿ ಎರಡು ವರ್ಷ ಕಳೆದಿದ್ದೀಯ.  ಅಲ್ಲಿಯೇ ಬಂದು ನಿಮ್ಮಪ್ಪನ ಜೊತೆ ಕಂಪನಿ ನೋಡಿಕೊಳ್ಳಬಹುದಲ್ಲವ?


ಅಮ್ಮ, ಈಗಷ್ಟೇ ನೀನೆ ಹೇಳಿದೆ ಅಪ್ಪನ ಬಗ್ಗೆ ನಾನು ಚಿಂತಿಸುವುದಿಲ್ಲ ಎಂದು...ಅದು ನಿಜ, ಹಾಗಿದ್ದ ಮೇಲೆ ಅಲ್ಲಿ ಬಂದು ನಾನು ಹೇಗೆ ಅವರ ಜೊತೆ ಕೆಲಸ ಮಾಡಲಿ. ನೋಡಮ್ಮ ನಾನು ಇಲ್ಲೇ ಇದ್ದು ಇಲ್ಲಿರುವ ಕಂಪನಿ ನೋಡಿಕೊಳ್ಳುತ್ತೇನೆ. ನನಗೆ ಅಲ್ಲಿಗೆ ಬರಲು ಇಷ್ಟವಿಲ್ಲ. ನಿನ್ನ ಬಗ್ಗೆ ನನಗೆ ಪ್ರೀತಿ ಇಲ್ಲ ಎಂದೇನಿಲ್ಲ. ಹೇಗಿದ್ದರೂ ನೀವೇ ಅವಾಗವಾಗ ಬರುತ್ತಿರುತ್ತೀರಾ ಅಷ್ಟು ಸಾಕು. ಈ ವಿಷಯದಲ್ಲಿ ನನ್ನನ್ನು ಬಲವಂತ ಮಾಡಬೇಡಮ್ಮ

Rating
No votes yet