ಅಮರ..ಮಧುರ..ಪ್ರೇಮ = ಭಾಗ 20
ಅಮರ್ ನಿನ್ನ ಬಳಿ ಒಂದು ಮುಖ್ಯವಾದ ವಿಷಯ ಮಾತಾಡಬೇಕು ಕಣೋ. ನಾನು ನಿನ್ನನ್ನು ನಮ್ಮೊಡನೆ ಬಾ ಎಂದು ಏಕೆ ಒತ್ತಾಯ ಮಾಡುತ್ತಿದ್ದೇನೆ ಎಂದರೆ ಅಲ್ಲಿ ನಿಮ್ಮಪ್ಪ ನಿನಗಾಗಿ ಒಂದು ಹುಡುಗಿಯನ್ನು ಹುಡುಕಿದ್ದಾರೆ ಕಣೋ. ಅವಳ ಜೊತೆ ನಿನಗೆ ಮದುವೆ ಮಾಡಬೇಕೆಂದು ನಿರ್ಧರಿಸಿದ್ದಾರೆ ಕಣೋ. ಆ ಹುಡುಗಿಯ ತಂದೆ ಭಾರತೀಯರೇ ಆದರೆ ಅವರು ಅಮೆರಿಕಾದಲ್ಲಿ ಸುಮಾರು ೨೫ ವರ್ಷಗಳಿಂದ ಅಲ್ಲೇ ನೆಲೆಸಿದ್ದಾರೆ. ಅವರದೇ ಒಂದು ಮಲ್ಟಿ ಮಿಲಿಯನ್ ಕಂಪನಿ ಇದೆ. ಅವರು ನಿಮ್ಮ ತಂದೆಯ ಕಂಪನಿಯ ಜೊತೆ ಒಡಂಬಡಿಕೆ ಮಾಡಿಕೊಂಡಿದ್ದಾರೆ. ಅವರ ಮಗಳು ಮೆಡಿಸಿನ್ ಮುಗಿಸಿ ಅಲ್ಲೇ ಡಾಕ್ಟರ ಆಗಿದ್ದಾಳೆ. ಕಳೆದ ಬಾರಿ ನಮ್ಮ ಮನೆಗೆ ಬಂದಿದ್ದಾಗ ನಿನ್ನ ಫೋಟೋ ನೋಡಿ ಅವರೇ ಮದುವೆಯ ಬಗ್ಗೆ ಮಾತಾಡಿದರು. ನಿಮ್ಮಪ್ಪ ಆಗಲಿ ಎಂದು ಹೇಳಿದ್ದಾರೆ ಕಣೋ.
ಹ್ಹ...ಹ್ಹ...ಹ್ಹ... ಅಮ್ಮ ಇದು ನನ್ನ ಮದುವೆ ವಿಷಯ. ಅದು ಹೇಗೆ ನನ್ನನ್ನು ಕೇಳದೆ ನಿಮ್ಮ ಪಾಡಿಗೆ ನೀವು ನಿರ್ಧಾರ ತೆಗೆದುಕೊಂಡಿದ್ದೀರಿ. ಅಮ್ಮ ಈ ವಿಷಯದ ಬಗ್ಗೆ ನಾನೇ ನಿಮ್ಮ ಬಳಿ ಮಾತಾಡಬೇಕು ಎಂದು ಅಂದುಕೊಂಡಿದ್ದೆ. ಒಳ್ಳೆಯದಾಯಿತು ನೀವೇ ಈ ವಿಷ್ಯ ತೆಗೆದಿದ್ದು. ಅಮ್ಮ, ನಾನು ಒಂದು ಹುಡುಗಿಯನ್ನು ಪ್ರೀತಿಸುತ್ತಿದ್ದೇನೆ. ಮಧುರ ಎಂದು, ಕಾಲೇಜಿನಲ್ಲಿ ನನ್ನ ಜೂನಿಯರ್. ಅವಳೂ ನನ್ನನ್ನು ಇಷ್ಟ ಪಡುತ್ತಿದ್ದಾಳೆ. ಜಪಾನ್ ಇಂದ ಬಂದ ಮೇಲೆ ನಾನೇ ಹೇಳಬೇಕು ಎಂದಿದ್ದೆ. ನಾನು ಮದುವೆ ಎಂದು ಆದರೆ ಅವಳನ್ನೇ ಆಗುವುದು. ನನಗೆ ಜಪಾನ್ ಗೆ ಹೋಗಲು ಇಷ್ಟವಿಲ್ಲದಿದ್ದರೂ ಅಪ್ಪನ ಬಲವಂತಕ್ಕೆ ಅಲ್ಲಿಗೆ ಹೋಗಿ ಬಂದೆ. ಈಗ ಮದುವೆ ನನ್ನ ಇಷ್ಟದಂತೆ ನಡೆಯಬೇಕು. ನೀನೆ ಹೇಗಾದರೂ ಮಾಡಿ ಅಪ್ಪನ ಮನವೊಲಿಸಬೇಕು. ಪ್ಲೀಸ್ ಅಮ್ಮ ಮಧುರ ಇಲ್ಲದಿದ್ದರೆ ನನಗೆ ಬದುಕಲು ಆಗಲ್ಲ...ನೀನೆ ಏನಾದರೂ ಮಾಡಬೇಕು.
ಹ್ಮ್...ಅಮರ್ ನಿಮ್ಮಪ್ಪನ ವಿಷ್ಯ ನಿನಗೆ ಗೊತ್ತು. ಅವರು ಒಮ್ಮೆ ಯಾರಿಗಾದರೂ ಮಾತು ಕೊಟ್ಟರೆ ಅದು ನೆರವೇರಲೇ ಬೇಕು. ಈಗ ನೀನು ನೋಡಿದರೆ ಹೀಗೆ ಹೇಳ್ತಾ ಇದ್ದೀಯ...ನೋಡ್ತೀನಪ್ಪ ಅವರ ಬಳಿ ಒಮ್ಮೆ ಮಾತಾಡಿ ಹೇಳುತ್ತೇನೆ. ಅವರು ಒಪ್ಪಿದರೆ ಸರಿ. ಇಲ್ಲದಿದ್ದರೆ ನಾನೇನು ಮಾಡಲು ಸಾಧ್ಯವಿಲ್ಲ. ನೀನು ಯಾರನ್ನು ಮದುವೆ ಆದರೂ ನನಗೆ ಸಂತೋಷ. ಒಟ್ಟಿನಲ್ಲಿ ನೀನು ಚೆನ್ನಾಗಿ ಇರಬೇಕು ಅಷ್ಟೇ.
ಮರುದಿನ ಬೆಳಿಗ್ಗೆ ಅಮರ್ ಒಳ್ಳೆಯ ನಿದ್ದೆಯಲ್ಲಿದ್ದ ಮೊಬೈಲ್ ಹೊಡೆದುಕೊಳ್ಳುತ್ತಿತ್ತು. ಅದರ ಸದ್ದಿಗೆ ನಿದ್ರೆಯಿಂದ ಎಚ್ಚೆತ್ತು ನೋಡಿದರೆ ಮಧುರ ಕರೆಮಾಡಿದ್ದಳು ತಕ್ಷಣ ಹಾಸಿಗೆಯಿಂದ ಎದ್ದು ಫೋನ್ ತೆಗೆದುಕೊಂಡು ಹಾಯ್ ಮಧು. ಎಲ್ಲಿ ಹೋಗಿದ್ದೆ ಮಧು, ಇಪ್ಪತ್ತು ದಿನದಿಂದ ನಿನ್ನ ಜೊತೆ ಮಾತಾಡಲು ಎಷ್ಟು ಪ್ರಯತ್ನಿಸಿದೆ ಗೊತ್ತ ಎಂದು ಗದ್ಗದಿತನಾದ. ಅಮರ್ ಇದು ನಿನ್ನದ ನಂಬರ್? ನಾವು ಊರಲ್ಲಿ ಇರಲಿಲ್ಲ ಕಣೋ. ಇವತ್ತಷ್ಟೇ ಇಲ್ಲಿಗೆ ಬಂದಿದ್ದೇನೆ. ಇಲ್ಲಿಗೆ ಬಂದು ಫೋನ್ ಆನ್ ಮಾಡಿದ ತಕ್ಷಣ ಮಿಸ್ಡ್ ಕಾಲ್ ಮೆಸೇಜ್ ಇದ್ದದ್ದು ನೋಡಿ ಯಾವ ನಂಬರ್ ಎಂದು ಗೊತ್ತಾಗದೆ ಫೋನ್ ಮಾಡಿದೆ. ಸಾರಿ ಅಮರ್...ಪರೀಕ್ಷೆಗಳು ಮುಗಿದ ತಕ್ಷಣ ಊರಿಗೆ ಹೊರಟು ಬಿಟ್ಟೆವು. ನಿನಗೆ ತಿಳಿಸಲೂ ಆಗಲಿಲ್ಲ ಕಣೋ. ಹೌದು ಯಾವಾಗ ಬಂದೆ ಜಪಾನ್ ನಿಂದ? ಎಲ್ಲಿದ್ದೀಯ? ಹೇಗಿದ್ದೀಯ?
ಮಧು ನಾನು ಬಂದು ಇಪ್ಪತ್ತು ದಿನ ಆಯ್ತು. ಬಂದ ದಿನದಿಂದ ನಿನ್ನ ಜೊತೆ ಮಾತಾಡಲು ಹವಣಿಸುತ್ತಿದ್ದೆ. ಈಗ ನಾನು ನಮ್ಮ ಮನೆಯಲ್ಲೇ ಇದ್ದೇನೆ. ಅಮೆರಿಕಾದಿಂದ ಅಪ್ಪ ಅಮ್ಮ ಬಂದಿದ್ದಾರೆ. ಮಧು ನಿನ್ನ ಬಳಿ ತುಂಬಾ ಮಾತಾಡಬೇಕು ಎಲ್ಲಿ ಸಿಗುತ್ತೀಯ ಹೇಳು. ನಾನೇ ಬಂದು ನಿನ್ನನ್ನು ಪಿಕಪ್ ಮಾಡುತ್ತೇನೆ. ಮಧು, ನಿನ್ನ ಬಳಿ ತುಂಬಾ ಮುಖ್ಯವಾದ ವಿಷಯ ಮಾತಾಡಬೇಕು. ಫೋನ್ ನಲ್ಲಿ ಹೇಳಕ್ಕೆ ಆಗಲ್ಲ ಹೇಳು ಎಲ್ಲಿ ಸಿಗುತ್ತೀಯ ಎಂದು.
ಅಮರ್ ನನಗೂ ನಿನ್ನನ್ನು ನೋಡಬೇಕು ಎಂದೆನಿಸುತ್ತಿದೆ ಕಣೋ. ಸರಿ ಒಂದು ಕೆಲಸ ಮಾಡು ೧೨ ಗಂಟೆ ಹೊತ್ತಿಗೆ ಕಾಲೇಜ್ ಬಳಿ ಬಾ. ಅಲ್ಲೇ ಸಿಗೋಣ. ಓಕೆ ಮಧು ೧೨ ಕ್ಕೆ ಸರಿಯಾಗಿ ಕಾಲೇಜ್ ಬಳಿ ಬರುತ್ತೇನೆ ಬೈ. ಬೈ ಅಮರ್..
ಸರಿಯಾಗಿ ಹನ್ನೆರಡು ಗಂಟೆಗೆ ಅಮರ್ ಕಾಲೇಜಿನ ಬಳಿ ಬಂದ. ಮಧುರ ಇನ್ನೂ ಬಂದಿರಲಿಲ್ಲ. ಮಧುರಳಿಗೆ ಫೋನ್ ಮಾಡಿದರೆ ಅವಳು ಬರುತ್ತಿದ್ದೇನೆ ಅಮರ್ ಇನ್ನೊಂದು ಐದು ನಿಮಿಷ ಎಂದಳು. ಅವಳು ಬರುವ ತನಕ ಕಾಲೇಜ್ ಸುತ್ತಿ ಬರೋಣ ಎಂದು ಒಳಗೆ ಹೋದ. ಕಾಲೇಜ್ ಗೆ ರಜೆ ಇದ್ದದ್ದರಿಂದ ಯಾರೂ ಇರಲಿಲ್ಲ. ಅಮರನಿಗೆ ಕಾಲೇಜ್ ನೆನಪುಗಳು ಮರುಕಳಿಸಿದವು. ಮೊದಲೆರಡು ವರ್ಷ ಸ್ನೇಹಿತರ ಜೊತೆ ಕಳೆದ ದಿನಗಳು ಸುತ್ತಿದ ಟ್ರಿಪ್ ಗಳು, ಕಾಲೇಜ್ ಫೆಸ್ಟ್ ಗಳು, ನಂತರದ ಎರಡು ವರ್ಷದಲ್ಲಿ ಮಧುರಳನ್ನು ಭೇಟಿ ಮಾಡಿದ್ದು, ಪ್ರೆಮಳನ್ನು ಭೇಟಿ ಮಾಡಿದ್ದು. ಅವರ ಜೊತೆ ಗೆಳೆತನ, ಮಧು ಜೊತೆ ಪ್ರೀತಿ ಬೆಳೆದಿದ್ದು, ಅವಳ ಜೊತೆ ಭದ್ರ ಗೆ ಹೋಗಿದ್ದು, ಅವಳ ಬರ್ತ್ ಡೇ ಸೆಲೆಬ್ರೇಟ್ ಮಾಡಿದ್ದು ಎಲ್ಲ ಒಮ್ಮೆ ಕಣ್ಣ ಮುಂದೆ ಬಂದು ತುಟಿಯ ಮೇಲೊಂದು ನಗು ಮೂಡಿತು. ಅಷ್ಟರಲ್ಲಿ ಮಧುರ ಕರೆ ಮಾಡಿದಳು. ಅವಳ ಕಾಲ್ ಕಟ್ ಮಾಡಿ ಆಚೆ ಬಂದು ನೋಡಿದರೆ ಮಧು ನಿಂತಿದ್ದಳು. ಎರಡು ವರ್ಷದ ನಂತರ ಮಧುರಳನ್ನು ನೋಡಿ ಹೃದಯ ತುಂಬಿ ಬಂದು ಅವಳ ಬಳಿ ಹೋಗಿ ಬಿಗಿಯಾಗಿ ಅವಳನ್ನು ತಬ್ಬಿಕೊಂಡ. ಅಮರನ ಭಾವನೆಗಳನ್ನು ಅರ್ಥಮಾಡಿಕೊಂಡ ಮಧುರ ಏನೂ ಮಾತಾಡದೆ ಸುಮ್ಮನೆ ಇದ್ದಳು.
ಎರಡು ನಿಮಿಷ ಅವರಿಬ್ಬರ ನಡುವೆ ಮೌನವೇ ಮಾತಾಗಿತ್ತು. ನಂತರ ಅಪ್ಪುಗೆ ಸಡಿಲಿಸಿದ ಅಮರ್ ಮಧು...ಮಧು...ಎಂದು ಮಾತುಗಳು ಆಚೆ ಬರದೆ ಅವಳನ್ನೇ ನೋಡುತ್ತಾ ನಿಂತುಬಿಟ್ಟ. ಮಧು ಐ ಲವ್ ಯೂ ಮಧು..ಐ ಲವ್ ಯೂ ಸೊ ಮಚ್. ಎರಡು ವರ್ಷದಿಂದ ನಿನ್ನನ್ನು ನೋಡದೆ ನಾನು ಹೇಗಾಗಿದ್ದೆ ಗೊತ್ತ...ಮಧು ಇನ್ನು ನನ್ನ ಕೈಲಿ ನಿನ್ನ ಬಿಟ್ಟಿರಲು ಆಗಲ್ಲ...ನಾನು ಆಗಲೇ ನಮ್ಮ ಮನೆಯಲ್ಲಿ ನಮ್ಮಿಬ್ಬರ ವಿಷಯದ ಬಗ್ಗೆ ಮಾತಾಡಿದ್ದೇನೆ. ಇನ್ನು ನೀನು ಯಾವಾಗ ಎಂದರೆ ಆಗ ಬಂದು ನಿಮ್ಮ ಮನೆಯಲ್ಲಿ ಮಾತಾಡುತ್ತೇನೆ.
ಅಮರ್, ನಾನೂ ನಿನ್ನ ಬಳಿ ಒಂದು ಮುಖ್ಯವಾದ ವಿಷಯ ಮಾತಾಡಬೇಕಿತ್ತು. ಇದನ್ನು ನೀನು ಹೇಗೆ ಸ್ವೀಕರಿಸುತ್ತೀಯೋ ಗೊತ್ತಿಲ್ಲ. ಆದರೆ ಈಗಲೇ ಈ ವಿಷಯವನ್ನು ಹೇಳದಿದ್ದರೆ ಮುಂದೆ ದೊಡ್ಡ ಅನಾಹುತವೇ ನಡೆಯಬಹುದೇನೋ.ಮಧು ಏನು ಮಾತಾಡುತ್ತಿದ್ದೀಯ ನೀನು? ಯಾವುದರ ಬಗ್ಗೆ ಮಾತಾಡುತ್ತಿದ್ದೀಯ? ನನಗೊಂದೂ ಅರ್ಥವಾಗುತ್ತಿಲ್ಲ. ಯಾಕೆ ನೀನು ಪ್ರತಿ ಬಾರಿ ಒಗಟೊಗಟಾಗಿ ಮಾತಾಡುತ್ತೀಯ. ಏನೆಂದು ಸ್ಪಷ್ಟವಾಗಿ ಹೇಳು..
Comments
ಉ: ಅಮರ..ಮಧುರ..ಪ್ರೇಮ = ಭಾಗ 20
In reply to ಉ: ಅಮರ..ಮಧುರ..ಪ್ರೇಮ = ಭಾಗ 20 by vinuhegde
ಉ: ಅಮರ..ಮಧುರ..ಪ್ರೇಮ = ಭಾಗ 20
In reply to ಉ: ಅಮರ..ಮಧುರ..ಪ್ರೇಮ = ಭಾಗ 20 by makara
ಉ: ಅಮರ..ಮಧುರ..ಪ್ರೇಮ = ಭಾಗ 20
In reply to ಉ: ಅಮರ..ಮಧುರ..ಪ್ರೇಮ = ಭಾಗ 20 by vinuhegde
ಉ: ಅಮರ..ಮಧುರ..ಪ್ರೇಮ = ಭಾಗ 20