ಅಮರ‌..ಮಧುರ..ಪ್ರೇಮ = ಭಾಗ 23

ಅಮರ‌..ಮಧುರ..ಪ್ರೇಮ = ಭಾಗ 23

ಅಮರನ ಜೊತೆ ಮಾತನಾಡಿ ಒಂದು ವಾರ ಕಳೆದಿದ್ದರೂ ಅವನಿಂದ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ. ಪ್ರೇಮ ಮತ್ತು ಮಧುರ ಇಬ್ಬರೂ ಅವನ ಉತ್ತರಕ್ಕೆ ಕಾತುರದಿಂದ ಕಾದು ಕುಳಿತಿದ್ದರು. ಹತ್ತು ದಿವಸ ಕಳೆದರೂ ಅವನಿಂದ ಪ್ರತಿಕ್ರಿಯೆ ಬರದಿದ್ದಾಗ ಮಧುರ ಅಮರನಿಗೆ ಕರೆ ಮಾಡಿದಳು. ಹಾಯ್ ಅಮರ್ ನಾನು ಹೇಳಿದ ವಿಷಯದ ಬಗ್ಗೆ ಏನಾದರೂ ಯೋಚನೆ ಮಾಡಿದೆಯ? ಪ್ರೇಮ ನಿನ್ನ ನೆನಪಲ್ಲಿ ಪ್ರತಿ ದಿನ ಕೊರಗುತ್ತಿದ್ದಾಳೆ. ದಯವಿಟ್ಟು ಆದಷ್ಟು ಬೇಗ ನಿನ್ನ ನಿರ್ಧಾರ ತಿಳಿಸು ಅಮರ್.

 

ಮಧು ನಾನು ಅಪ್ಪ ಅಮ್ಮನ ಜೊತೆ ಮಾತಾಡಿದ್ದೇನೆ. ಅವರು ಇಂದು ಸಂಜೆ ಅವರ ನಿರ್ಧಾರವನ್ನು ತಿಳಿಸುತ್ತಾರೆ. ಆ ನಂತರ ನಾನು ನಿಮಗೆ ತಿಳಿಸುತ್ತೇನೆ.ಬೈ ಮಧು.

 

ಅಂದು ಸಂಜೆ ಅಮರ್ ಮಧುರಗೆ ಕರೆ ಮಾಡಿ ಮಧು ಅಪ್ಪ ಅಮ್ಮ ಒಪ್ಪಿಗೆ ಕೊಟ್ಟಿದ್ದಾರೆ. ಅವರು ಮುಂದಿನ ವಾರ ಬಂದು ನಿಮ್ಮ ಮನೆಯಲ್ಲಿ ಮಾತಾಡುತ್ತಾರೆ. ಮುಂದಿನದನ್ನು ಅವರೇ ನಿರ್ಧರಿಸುತ್ತಾರೆ. ಓಹ್ ತುಂಬಾ ಥ್ಯಾಂಕ್ಸ್ ಅಮರ್ ನನ್ನ ಮಾತಿಗೆ ಬೆಲೆ ಕೊಟ್ಟು ಈ ನಿರ್ಧಾರ ತೆಗೆದುಕೊಂಡಿದ್ದಕ್ಕೆ. ನನಗೆ ಬಹಳ ಸಂತೋಷ ಆಗುತ್ತಿದೆ ಅಮರ್. ಅಮರ್ ದಯವಿಟ್ಟು ಈ ವಿಷಯವನ್ನು ಪ್ರೇಮಗೆ ನೀವೇ ತಿಳಿಸಿಬಿಡಿ.

 

ಮಧು ನಿಮ್ಮ ಮಾತಿಗೆ ಬೆಲೆಕೊಟ್ಟು ಒಪ್ಪಿದ್ದೇನೆ ಅಷ್ಟೇ ಹೊರತು ನನ್ನ ಮನಸಾರೆ ನಾನು ಈ ನಿರ್ಧಾರ ತೆಗೆದುಕೊಂಡಿಲ್ಲ. ನಾನು ಎಂದಿಗೂ ಇಷ್ಟ ಪಡುವುದು ನಿಮ್ಮನ್ನೇ. ಅವಳನ್ನು ಮದುವೆ ಆಗು ಎಂದಿರಿ. ಆಗುತ್ತಿದ್ದೇನೆ. ಅದು ಬಿಟ್ಟು ಬೇರೇನನ್ನು ನನ್ನನ್ನು ಕೇಳಬೇಡಿ. ಅಪ್ಪ ಅಮ್ಮ ಬಂದ ಮೇಲೆ ಫೋನ್ ಮಾಡುತ್ತೇನೆ. ಬೈ.

 

ಅರೆ ಇದೇನಿದು ಅಮರ್ ಹೀಗೆ ಮಾತಾಡುತ್ತಿದ್ದಾನೆ. ಮನಸಿನಲ್ಲಿ ನನ್ನನ್ನು ಮೆಚ್ಚಿಕೊಂಡು ಅವಳೊಂದಿಗೆ ಹೇಗೆ ಸಂಸಾರ ಮಾಡುತ್ತಾನೆ. ಇದು ಯಾಕೋ ಸರಿ ಹೊಂದುತ್ತಿಲ್ಲ ಎಂದು ಆಲೋಚಿಸುತ್ತಿದ್ದ ಮಧುರ ಮತ್ತೆ ಪುನಃ ಒಮ್ಮೆ ಮದುವೆ ಆದರೆ ನಂತರ ಎಲ್ಲ ಸರಿ ಹೋಗುತ್ತದೆ ಎಂದು ತನಗೆ ತಾನೇ ಸಮಾಧಾನ ಮಾಡಿಕೊಂಡಳು. ಅಮರ್ ಒಪ್ಪಿಗೆ ಸೂಚಿಸಿದ್ದನ್ನು ಪ್ರೇಮಗೆ ಬಂದು ತಿಳಿಸಿದಳು. ಪ್ರೇಮಳ ಸಂತಸಕ್ಕೆ ಪಾರವೇ ಇರಲಿಲ್ಲ. ಕೂಡಲೇ ಅಮರ್ ಗೆ ಕರೆ ಮಾಡೋಣ ಎಂದುಕೊಂಡಳು. ಆದರೆ ಮಧುರ ಅವಳನ್ನು ತಡೆದು ಪ್ರೇಮ ಎರಡು ಮೂರು ದಿನ ಅವನು ವಿದೇಶಕ್ಕೆ ಹೋಗುತ್ತಿದ್ದಾನಂತೆ ಬಂದ ಮೇಲೆ ನಿನ್ನ ಜೊತೆ ಮಾತಾಡುತ್ತಾನಂತೆ ಎಂದು ಸುಳ್ಳು ಹೇಳಿದಳು.

 

ಅಮರ್ ಅಪ್ಪ ಅಮ್ಮ ಊರಿಗೆ ಬಂದ ವಿಷಯ ತಿಳಿದು ಮಧುರ ತನ್ನ ತಂದೆ ತಾಯಿಗೂ ವಿಷಯ ತಿಳಿಸಿ ಅವರನ್ನು ಊರಿಗೆ ಕರೆಸಿಕೊಂಡಳು. ಇಬ್ಬರ ಅಪ್ಪ ಅಮ್ಮಂದಿರು ಭೇಟಿ ಮಾಡಿ ಒಂದು ವಾರಕ್ಕೆ ಸರಿಯಾಗಿ ನಿಶ್ಚಿತಾರ್ಥ ಎಂದು ನಿಗದಿಪಡಿಸಿದರು. ಇಷ್ಟಾದರೂ ಅಮರನ ಮುಖದಲ್ಲಿ ನಗು ಇರಲಿಲ್ಲ. ಅದನ್ನು ಗಮನಿಸಿದ ಪ್ರೇಮ ಯಾಕೆ ಅಮರ್ ನೀನು ಸರಿಯಾಗಿ ಮಾತಾಡುತ್ತಿಲ್ಲ, ಮುಖದಲ್ಲಿ ನಗು ಇಲ್ಲದವನಂತೆ ಇದ್ದೀಯ ಎಂದು ಕೇಳಿದ್ದಕ್ಕೆ ಅವಳಿಗೆ ಸರಿಯಾಗಿ ಉತ್ತರ ಕೊಡದೆ ಹೊರಟು ಹೋದ.  ಪ್ರೇಮಳ ಮನಸಿನಲ್ಲಿ ಏನೋ ಕಳವಳ ಕಾಡುತ್ತಲೇ ಇತ್ತು.

 

ಅಂತೂ ನಿಶ್ಚಿತಾರ್ಥದ ದಿನ ಬಂದೆ ಬಿಟ್ಟಿತು. ನಿಶ್ಚಿತಾರ್ಥ ಬೆಂಗಳೂರಿನಲ್ಲೇ ಒಂದು ಹಾಲಿನಲ್ಲಿ ಮಾಡೋಣ ಎಂದು ನಿರ್ಧರಿಸಿದ್ದರು. ಪ್ರೇಮ ಬೆಳಗಿನಿಂದ ನವೋಲ್ಲಾಸದಿಂದ ನಲಿದಾಡುತ್ತಿದ್ದಳು ಬಹಳ ದಿನಗಳ ನಂತರ ಅವಳ ಮುಖದಲ್ಲಿ ನಗು ಕಂಡು ಮಧುರ ಬಹಳ ಸಂತೋಷ ಪಟ್ಟಿದ್ದಳು. ಅವಳನ್ನು ಸಿಂಗರಿಸಿ ದಂತದ ಬೊಂಬೆಯ ಹಾಗೆ ಮಾಡಿದ್ದಳು. ಇತ್ತ ಅಮರ್ ಯಾವುದೇ ಉತ್ಸಾಹ, ಆಸಕ್ತಿ ಇರದೇ ಮಾಮೂಲಿನಂತೆ ಓಡಾಡಿ ಕೊಂಡಿದ್ದ. ನಿಶ್ಚಿತಾರ್ಥದ ಸಮಯಕ್ಕೆ ಪ್ರೇಮ ಮತ್ತು ಅಮರ್, ಹಾಗೂ ಅವರ ತಂದೆ ತಾಯಿಗಳು ಎದುರು ಬದುರಾಗಿ ಕುಳಿತಿದ್ದರು. ಪ್ರೇಮ ನಾಚಿಕೆಯಿಂದ ತಲೆ ತಗ್ಗಿಸಿ ಕುಳಿತಿದ್ದಳು.

 

ಪುರೋಹಿತರು ಮದುವೆಯ ದಿನಾಂಕ ನಿಗದಿ ಪಡಿಸಿ ಲಗ್ನ ಪತ್ರಿಕೆ ಓದುವಾಗ ತಲೆ ಎತ್ತಿ ಅಮರನ ಕಡೆ ನೋಡಿದಳು. ಅಮರನ ಮುಖ ನಿರ್ಭಾವುಕತೆಯಿಂದ ಕೂಡಿತ್ತು. ಅದನ್ನು ನೋಡಿ ಪ್ರೇಮಗೆ ಎಲ್ಲೋ ಏನೋ ಯಡವಟ್ಟು ಆಗುತ್ತಿದೆ ಎಂದೆನಿಸಿತು. ಕಾರ್ಯಕ್ರಮ ಎಲ್ಲ ಮುಗಿದು ಒಬ್ಬೊಬ್ಬರಾಗೆ ಹೊರಡುತ್ತಿದ್ದರು. ಬೆಳಗಿನಿಂದ ಅಮರ್ ಪ್ರೇಮ ಜೊತೆ ಮಾತು ಆಡಿರಲಿಲ್ಲ. ಆದರೂ ಪ್ರೇಮ ಆ ಬೇಸರವನ್ನು ತನ್ನ ಮುಖದಲ್ಲಿ ತೋರುಗೊಡದೆ ನಗುನಗುತ್ತಲೇ ಇದ್ದಳು. ಸ್ವಲ್ಪ ಹೊತ್ತಿನ ನಂತರ ಅಮರ್ ಒಬ್ಬನೇ ಇರುವುದನ್ನು ನೋಡಿ ಪ್ರೇಮ ಅವನ ಬಳಿ ಬಂದು ಅಮರ್ ನಾನೂ ಬೆಳಗ್ಗಿನಿಂದ ನೋಡುತ್ತಲೇ ಇದ್ದೀನಿ ಮುಖದಲ್ಲಿ ನಗು ಇಲ್ಲ, ನನ್ನ ಜೊತೆ ಒಂದು ಮಾತೂ ಆಡಿಲ್ಲ ನನಗೊಂದೂ ಅರ್ಥ ಆಗುತ್ತಿಲ್ಲ ಅಮರ್. ನಿಜವಾಗಿಯೂ ನಿನಗೆ ಈ ಮದುವೆ ಇಷ್ಟ ಇದೆಯಾ ಅಥವಾ ಮಧು ಬಲವಂತ ಮಾಡಿದಳು ಅಂತ ಒಪ್ಪಿಕೊಂಡೆಯ?

 

ಪ್ರೇಮ ನಿನ್ನ ಊಹೆ ಸರಿ. ನಿಜವಾಗಿಯೂ ನನಗೆ ಈ ಮದುವೆ ಇಷ್ಟ ಇಲ್ಲ. ನಿನ್ನಕ್ಕ ಬಲವಂತ ಮಾಡಿದಳು ಅಂತ ಅಷ್ಟೇ ನಾನು ಇದಕ್ಕೆ ಒಪ್ಪಿಕೊಂಡದ್ದು. ಈಗಲೂ ನನ್ನ ಮನಸಿನಲ್ಲಿ ಅವಳೇ ತುಂಬಿದ್ದಾಳೆ. ಮುಂದೆಯೂ ಅವಳೇ ಇರುತ್ತಾಳೆ. ಎಂದೆಂದಿಗೂ ಆ ಜಾಗ ನಿನಗೆ ಸ್ವಂತ ಆಗುವುದಿಲ್ಲ ಪ್ರೇಮ.

 

ಅಮರ್ ಹಾಗಿದ್ದರೆ ಈ ನಿಶ್ಚಿತಾರ್ಥಕ್ಕೆ ಏಕೆ ಒಪ್ಪಿಕೊಂಡೆ? ನಿನಗೆ ಇಷ್ಟ ಇಲ್ಲ ಎಂದು ಹೇಳಬಹುದಿತ್ತು. ಈಗ ನನ್ನ ಜೊತೆ ಮದುವೆ ಮಾಡಿಕೊಂಡು ಜೀವನ ಪೂರ್ತಿ ನಾನು ಶಿಕ್ಷೆ ಅನುಭವಿಸಬೇಕ?

 

ಹೌದು ಪ್ರೇಮ ನೀನು ನನಗೆ ಮಾಡಿದ ದ್ರೋಹಕ್ಕೆ ಇದೆ ನಿನಗೆ ನಾನು ಕೊಡುತ್ತಿರುವ ಶಿಕ್ಷೆ. ಜೊತೆಯಲ್ಲೇ ಇದ್ದರೂ ದೂರದ ನೋವನ್ನು ನೀನು ಅನುಭವಿಸಬೇಕು. ಅದಕ್ಕೆ ನಾನು ಮದುವೆಗೆ ಒಪ್ಪಿದ್ದು ಎಂದು ಅಲ್ಲಿಂದ ಹೊರಟು ಬಿಟ್ಟ. ಪ್ರೇಮಗೆ ನಿಂತ ಭೂಮಿ ಬಿರಿದಂತಾಯ್ತು. ತಲೆ ತಿರುಗಿ ಬಿದ್ದು ಬಿಟ್ಟಳು. ತಕ್ಷಣ ಮಧುರ ಮತ್ತು ಅವಳ ಅಪ್ಪ ಅಮ್ಮ ಬಂದು ಅವಳನ್ನು ಎಬ್ಬಿಸಿ ಏನಾಯ್ತು ಪ್ರೇಮ ಎಂದು ಕೇಳಿದ್ದಕ್ಕೆ ಸಾವರಿಸಿಕೊಂಡು ಏನಿಲ್ಲ ಯಾಕೋ ಸುಸ್ತಾಯ್ತು ಅಷ್ಟೇ ಎಂದಳು. ಅವಳು ಸುಧಾರಿಸ್ಕೊಂಡ ಮೇಲೆ ಮಧುರ ಮತ್ತು ಪ್ರೇಮಳನ್ನು ಪೀಜಿಯ ಬಳಿ ಬಿಟ್ಟು ಅಪ್ಪ ಅಮ್ಮ ಊರಿಗೆ ಹೊರಟರು.

 

ಅಪ್ಪ ಅಮ್ಮ ಹೋದ ಬಳಿಕ ಪೀಜಿಗೆ ಬಂದು ಊಟ ಮಾಡಿ ಸ್ವಲ್ಪ ಹೊತ್ತು ಅದೂ ಇದೂ ಮಾತಾಡಿ ಮಲಗಿದರು. ಬೆಳಗಿನ ಜಾವ ಬಾತ್ ರೂಂ ಗೆಂದು ಹೋದ ಪ್ರೇಮ ಎಷ್ಟು ಹೊತ್ತಾದರೂ ಆಚೆ ಬರದಿದ್ದಾಗ ಮಧುರಗೆ ಗಾಭರಿ ಆಯ್ತು. ಬಾಗಿಲ ಬಳಿ ಬಂದು ಪ್ರೇಮ...ಪ್ರೇಮ ಎಂದು ಸುಮಾರು ಸಲ ಕೂಗಿದರೂ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಕೂಡಲೇ ಹೋಗಿ ವಾರ್ಡನ್ ಗೆ ವಿಷಯ ತಿಳಿಸಿ ವಾಚ್ಮನ್ ನನ್ನು ಕರೆದುಕೊಂಡು ಬಂದು ಬಾಗಿಲು ಒಡೆದು ನೋಡಿದರೆ ಒಳಗೆ ಪ್ರೇಮ ಪ್ರಜ್ಞೆ ಇಲ್ಲದೆ ಬಿದ್ದಿದ್ದಾಳೆ. ಪಕ್ಕದಲ್ಲೇ ನಿದ್ರೆ ಮಾತ್ರೆಯ ಖಾಲಿ ಬಾಟಲ್ ನೋಡಿ ಮಧುರಗೆ ಜಂಘಾಬಲವೇ ಉಡುಗಿ ಹೋಯಿತು. ಕೂಡಲೇ ಅಂಬ್ಯುಲೆನ್ಸ್ ಗೆ ಕರೆ ಮಾಡಿ ಪ್ರೇಮಳನ್ನು ಆಸ್ಪತ್ರೆಗೆ ಸೇರಿಸಿ ಅಮರ್ ಗೆ ಕರೆ ಮಾಡಿದಳು.

ಅಮರ್ ಮತ್ತು ಮಧುರ ಆಸ್ಪತ್ರೆಯ ಹಾಲಿನಲ್ಲಿ ಕುಳಿತಿದ್ದಾಗ ಮಧುರಳ ಅಪ್ಪ ಅಮ್ಮ ಊರಿಂದ ಬಂದರು. ಗಾಭರಿಯಿಂದ ಇದ್ದ ಅವರನ್ನು ಕೂಡಿಸಿ ಅವರಿಗೆ ಕುಡಿಯಲು ನೀರು ಕೊಟ್ಟು ಪ್ರಾಣಾಪಾಯದಿಂದ ಪಾರಾಗಿದ್ದಾಳೆ ನಾಳೆ ಡಿಸ್ಚಾರ್ಜ್ ಮಾಡುವುದಾಗಿ ಹೇಳಿದ್ದಾರೆ ಎಂದ ಮೇಲೆ ಸಮಾಧಾನವಾದರು. ಎಲ್ಲರ ಮನದಲ್ಲೂ ಒಂದೇ ಗೊಂದಲ ಏತಕ್ಕಾಗಿ ಆತ್ಮಹತ್ಯೆ ಪ್ರಯತ್ನ ಮಾಡಿದಳು ಎಂದು...ಆದರೆ ಅಮರನಿಗೆ ಮಾತ್ರ ತಾನು ಅವಳನ್ನು ನಿರಾಕರಿಸಿದ್ದೇ ಕಾರಣ ಎಂದು ಗೊತ್ತಿತ್ತು

 

Rating
No votes yet