ಅಮರ ಚಿತ್ರಕಥೆಯ ಅಂಗುಲಿಮಾಲ ಹಾಗೂ ಏಸುಕ್ರಿಸ್ತ

ಅಮರ ಚಿತ್ರಕಥೆಯ ಅಂಗುಲಿಮಾಲ ಹಾಗೂ ಏಸುಕ್ರಿಸ್ತ

ನಿಮಗೆ ಅಂಗುಲಿಮಾಲನ  ಬಗೆಗೆ ಗೊತ್ತು , ಅಲ್ಲವೇ? ಅದೇ, ಗೌತಮ ಬುದ್ಧನ ಕತೆಯಲ್ಲಿ ಬರುವವನು .  ಅವನು ದಾರಿಹೋಕರ ಮೇಲೆ ದಾಳಿ ಮಾಡಿ ಅವರನ್ನು ಕೊಲ್ಲುತ್ತಿದ್ದನು, ಅವರ ಹಣವನ್ನು ಲೂಟಿ ಮಾಡುತ್ತಿದ್ದವನು.  ಅವರ ಬೆರಳು (ಅಂಗುಲಿ)ಗಳನ್ನು ಮಾಲೆ ಮಾಡಿ  ಕೊರಳಿಗೆ ಹಾಕಿಕೊಂಡವನು. ಪ್ರಯಾಣಿಕರು ಅವನನ್ನು ನೋಡಿದ ಕೂಡಲೇ ಓಡಿ ಹೋಗುತ್ತಿದ್ದರು. 

 ಒಂದು ಸಲ  ಒಬ್ಬ ಬೌದ್ಧ ಸನ್ಯಾಸಿಯು ಅವನನ್ನು ನೋಡಿದರೂ ಹೆದರದೆಯೇ  ಮಾಮೂಲಿನಂತೆ ನಡೆದು ಹೋಗುತ್ತಿದ್ದ. ''ಯಾರದು? ನಿಲ್ಲು ! 'ಎ೦ದು ಅಂಗುಲಿಮಾಲನು ಅಬ್ಬರಿಸಿದ.  ಆಗ ಆ ಸನ್ಯಾಸಿಯು " ನಿಲ್ಲಬೇಕಾದುದು ನಾನಲ್ಲ.  ನೀನು,  ಪಾಪಚಕ್ರದಲ್ಲಿ ನೀನು ಸಿಲುಕಿ ನಡೆಯುತ್ತಿದ್ದೀಯಾ. " ಎಂದನು.  ಅವನೇ ಗೌತಮ ಬುದ್ಧನು. ಆಗ ಅಂಗುಲಿಮಾಲನ ಮನಪರಿವರ್ತನೆಯಾಗಿ  ಬುದ್ಧನಿಗೆ ಧರ್ಮಕ್ಕೆ ಶರಣು ಬಂದು  ಅವನ ಶಿಷ್ಯನಾದನು. ಇಷ್ಟು ನನಗೆ ಗೊತ್ತಿತ್ತು. ನಿಮಗೂ ಗೊತ್ತಿದೆ ಅಲ್ಲವೆ?

ಇತ್ತೀಚೆಗೆ  ಅವರ ಚಿತ್ರಕಥೆಯ ಆ್ಯಪ್  - ACK Comics ನಲ್ಲಿ ಅಂಗುಲಿಮಾಲನ ಕುರಿತಾದ ಪುಸ್ತಕ ಸಿಕ್ಕಿತು.  ಅದರಲ್ಲಿ ಅಂಗುಲಿಮಾಲನು ಹುಟ್ಟಿದಾಗಿನಿಂದ  ಆತನು ಸಾಯುವ ತನಕದ ಕತೆ ಇದೆ. ಕತೆಗಿಂತ ಹೆಚ್ಚಾಗಿ ಅದನ್ನು ಹೇಳಿದ ರೀತಿ ನನಗೆ ತುಂಬ ಹಿಡಿಸಿತು.

ಅವನು ಹುಟ್ಟಿದಾಗ ಅನೇಕ ಅಪಶಕುನಗಳು ಆದವು . ಜ್ಯೋತಿಷಿಗಳು  ಹೇಳಿದರು - "ಅವನು ಭಾರೀ ದರೋಡೆಕೋರ ಆಗಲಿದ್ದಾನೆ,   ಅವನಿಂದ ಜನಕ್ಕೆ ಭಾರೀ ತೊಂದರೆ ಆಗಲಿದೆ" ಎ೦ದು .  ಸಮಾಜದ ಹಿತಕ್ಕಾಗಿ ಒಂದು ಸಂಸಾರವು ತ್ಯಾಗ ಮಾಡಬೇಕು ಎಂದು ತಂದೆಯು ಆ ಕೂಸನ್ನು ಕೊಲ್ಲಲು ಬಯಸಿ ರಾಜನ ಬಳಿ ಹೋಗಿ ಈ ಎಲ್ಲ ಸಂಗತಿ ಹೇಳಿ ಕೂಸನ್ನು ಕೊಲ್ಲಲು ಅವನ ಅನುಮತಿ ಕೇಳಿದ.  ರಾಜ  ಹೇಳಿದ  - "ನಿಷ್ಪಾಪಿ ಮುಗ್ಧ ಮಗುವನ್ನು ಕೊಲ್ಲುವುದು ಏಕೆ?  ಪ್ರತಿಯೊಂದು ಜೀವದಲ್ಲೂ ಒಳ್ಳೆಯತನ ಇದ್ದೇ ಇರುತ್ತದೆ  ಎ೦ದು ಬುದ್ಧನಿಂದ ನಾನು ತಿಳಿದಿದ್ದೇನೆ.  ಅವನಿಗೆ ಒಳ್ಳೆಯ ಶಿಕ್ಷಣ ಕೊಡಿಸು. ನಿನ್ನ ಮಾರ್ಗದರ್ಶನದಲ್ಲಿ ಅವನು ಒಳ್ಳೆಯ ನಾಗರಿಕನೇ ಆಗುತ್ತಾನೆ ಎಂಬ ವಿಶ್ವಾಸ ನನಗಿದೆ ".  ಆ ತಂದೆಯು "ಸರಿ, ಪ್ರಭೂ, ಅವನು ಒಳ್ಳೆಯವನಾಗುವ ಹಾಗೆ ನನ್ನ ಕೈಲಾದ ಎಲ್ಲ ಪ್ರಯತ್ನ ಮಾಡುವೆ   "   ಎ೦ದು ಮರಳಿದ. 

 

ಮುಂದೆ ಆ ಹುಡುಗ ಬೆಳೆದು ದೊಡ್ಡವನಾದ, ಜಾಣನಾದ , ಒಳ್ಳೆಯವನೂ ಆದ.  ಜ್ಯೋತಿಷ್ಯ ತಪ್ಪಿರಬೇಕು ಎಂದು ತಂದೆ ಅಂದುಕೊಂಡ. ಆದರೆ ಅವನ ಮೇಲಿನ ಅಸೂಯೆಯಿಂದ ಸಹಪಾಠಿಗಳು ಅವನ ಗುರುವಿಗೆ ತಪ್ಪು ಅಭಿಪ್ರಾಯ ಮೂಡಿಸಿ ಅವನನ್ನು ಗುರುಕುಲದಿಂದ ಹೊರಗೆ ಹಾಕಿಸಿದರು. ಜನರು  ಅವನನ್ನು ಗುರುವಿನಿಂದ ಬಹಿಷ್ಕೃತ ನು ಎ೦ದು ನಿಂದಿಸಿದರು. ತಂದೆಯೂ ಕೂಡ ಸತ್ಯವನ್ನು ತಿಳಿಯಲು ಪ್ರಯತ್ನಿಸಲಿಲ್ಲ,   ಮಗನ ಜತೆ ಮಾತೂ ಆಡದೆ ಮನೆಗೆ ಸೇರಿಸಲಿಲ್ಲ.  ಇದರಿಂದೆಲ್ಲ  ರೋಸಿ ಹೋಗಿ ಅವನು ಸಮಾಜದ ಮೇಲೆ ರೊಚ್ಚಿಗೆದ್ದು  ಅವನು ದರೋಡೆಕಾರನಾದ, "ಅಂಗುಲಿಮಾಲ"ನಾದ. 

ಮುಂದೆ ಒಂದು ದಿನ ಭಗವಾನ್ ಬುದ್ಧನೊಂದಿಗೆ ನಾನು ಆರಂಭದಲ್ಲಿ ಬರೆದ ಮಾತುಕತೆ ಆಗಿ  ತನ್ನ ಪಾಪಗಳನ್ನು ಒಪ್ಪಿಕೊಂಡು ಬಹಳ   ಪಶ್ಚಾತ್ತಾಪ ಪಟ್ಟು  ಅವನ ಶಿಷ್ಯನಾದನು. 

ಸರಿ. ಮುಂದೆ ಏನು ಆಯಿತು ? ಸನ್ಯಾಸಿಯಾಗಿ ದೇಶ ಪರ್ಯಟನೆ ಮಾಡುತ್ತ ತನ್ನ ದೇಶಕ್ಕೆ ಮರಳಿದನು. ಆಗ ಅಲ್ಲಿಯ ಜನರು ಅವನು ಅಂಗುಲಿಮಾಲ ಎಂದು ಗುರುತಿಸಿ ಅವನ ಮೇಲೆ ಆಕ್ರಮಣ ಮಾಡಿ ಸಾಯುವ ಹಾಗೆ ಹೊಡೆದರು. 
ಅವನು ಯಾವುದೇ ಪ್ರತಿರೋಧ ತೋರಲಿಲ್ಲ. ಸುಮ್ಮನೆ ಹೊಡೆಸಿಕೊಂಡನು.  ಅವನನ್ನು ಗೌತಮ ಬುದ್ಧನು ಆರೈಕೆ ಮಾಡಿದನು.  ಅವನು ಅಂಗುಲಿಮಾಲನನ್ನು  ಕೇಳಿದನು - "ಅವರು ನಿನ್ನನ್ನು ಹೊಡೆದಾಗ ಕೋಪ ಬರಲಿಲ್ಲವೆ?" 

ಅಂಗುಲಿಮಾಲನು ಹೇಳಿದನು - "ಇಲ್ಲ , ಗುರುವೇ. ನಾನು ಜನರನ್ನು ಕೊಲ್ಲುತ್ತಿದ್ದಾಗ ನಾನು ಏನು ಮಾಡುತ್ತಿದ್ದೇನೆ ಎಂದು ನಾನು ತಿಳಿಯಲಿಲ್ಲ. ಅವರು ಕೂಡ ತಾವು ಏನು ಮಾಡುತ್ತಿದ್ದೇವೆ ಎ೦ದು ತಿಳಿಯರು ಅಷ್ಟೇ . ನನ್ನಲ್ಲಿ ಅವರ ಬಗ್ಗೆ ಯಾವುದೇ ಕೋಪವಾಗಲೀ ವೈರ ಭಾವವಾಗಲೀ ಇಲ್ಲ. ನನ್ನ ಮನಸ್ಸು   ಪ್ರಶಾಂತವಾಗಿದೆ. " ಎ೦ದು ಹೇಳಿ ಕೊನೆಯುಸಿರನ್ನು ಎಳೆದನು. 

ಇವೂ ಯೇಸು ಕ್ರಿಸ್ತನನ್ನು ಶಿಲುಬೆಗೇರಿಸಿದಾಗ ಯೇಸುವು  ಹೇಳಿದ ಮಾತುಗಳು!

ಎಲ್ಲರಿಗೂ  ಏಸುಕ್ರಿಸ್ತ ನ ಜನ್ಮದಿನದ  ಹಾಗೂ ಹೊಸವರುಷದ ಶುಭಾಶಯಗಳು.

Rating
Average: 4.5 (2 votes)