ಅಮರ ಮಧುರ ಪ್ರೇಮ...ಭಾಗ 3

ಅಮರ ಮಧುರ ಪ್ರೇಮ...ಭಾಗ 3

ಕಾಲೇಜ್ ಫೆಸ್ಟ್ ಮುಗಿದ ಒಂದು ತಿಂಗಳಿನಲ್ಲಿ ಪರೀಕ್ಷೆಗಳು ಶುರುವಾಗುವುದರಲ್ಲಿತ್ತು. ಈ ಬಾರಿಯ ಪರೀಕ್ಷೆ ಮುಗಿದರೆ ಅಮರ್ ಕೊನೆಯ ವರ್ಷಕ್ಕೆ ಕಾಲಿಡುತ್ತಿದ್ದ, ಪ್ರೇಮ ಮತ್ತು ಮಧುರ ಎರಡನೇ ವರ್ಷಕ್ಕೆ ಕಾಲಿಡುತ್ತಿದ್ದರು. ಮಧುರ ಸತತ ಶ್ರಮದಿಂದ ಓದುವುದರಲ್ಲಿ ಸಾಕಷ್ಟು ಸುಧಾರಣೆ ಕಂಡಿದ್ದಳು. ಇತ್ತ ಪ್ರೇಮ ಅಮರನ ಮೇಲೆ ಪ್ರೀತಿಯಿಂದ ಸದಾಕಾಲ ಅದೇ ಧ್ಯಾನದಲ್ಲಿ ಮುಳುಗಿ ಓದುವುದರಲ್ಲಿ ಆಸಕ್ತಿ ಕಡಿಮೆ ಮಾಡಿಕೊಂಡಿದ್ದಳು. ಪರೀಕ್ಷೆಗಳು ಹತ್ತಿರವಾಗುತ್ತಿದ್ದಂತೆ ಇಬ್ಬರೂ ಪೀಜೀ ಬಿಟ್ಟು ಆಚೆಯೇ ಬರದೆ ಓದುತ್ತಿದ್ದರು. 


ಪ್ರೇಮಳಿಗೆ ಓದಿನಲ್ಲಿ ಆಸಕ್ತಿ ಕಡಿಮೆ ಆಗಿರುವುದನ್ನು ಗಮನಿಸಿದ ಮಧುರ ಒಂದು ದಿನ ಓದುತ್ತಿದ್ದಾಗ ಸುಮ್ಮನೆ ಪುಸ್ತಕ ನೋಡುತ್ತಾ, ಪ್ರೇಮ ಇತ್ತೀಚಿಗೆ ಯಾಕೋ ನಿನ್ನ ನಡುವಳಿಕೆ ಸರಿ ತೋರುತ್ತಿಲ್ಲ, ಮೂರು ಹೊತ್ತು ಆ ಅಮರನ ಧ್ಯಾನದಲ್ಲೇ ಮುಳುಗಿರುತ್ತೀಯ. ನನಗೇನೂ ಗೊತ್ತಿಲ್ಲ ಎಂದು ತಿಳಿದಿದ್ದೀಯ? ಯಾಕೋ ನೀನು ಅಗತ್ಯಕ್ಕಿಂತ ಹೆಚ್ಚೇ ಅವನೆಡೆಗೆ ವಾಲುತ್ತಿದ್ದೀಯ ಎನಿಸುತ್ತಿದೆ. ಓದಿನಲ್ಲೂ ನಿನ್ನ ಆಸಕ್ತಿ ಕಡಿಮೆ ಆಗುತ್ತಿದೆ. ಯಾವಾಗಲೂ ಫೋನ್ ನಲ್ಲಿ ಅವನ ಜೊತೆ ಮಾತು ಇಲ್ಲ ಚಾಟಿಂಗ್ ನಲ್ಲಿ ಇರ್ತೀಯ. ಇದೆಲ್ಲ ಒಳ್ಳೇದಲ್ಲ ಪ್ರೇಮ. ಅವನು ದುಡ್ಡಿರುವ ಮನೆಯವನು, ಅಪ್ಪ ಅಮ್ಮ ನಮ್ಮನ್ನು ನಂಬಿ ಇಲ್ಲಿ ಕಳುಹಿಸಿರುವುದು ಓದಲು. ನೀನು ಅದು ಬಿಟ್ಟು ಲವ್ವು ಗಿವ್ವು ಎಂದು ಕೂತರೆ ಅಪ್ಪ ಅಮ್ಮನಿಗೆ ಅವಮಾನ ಮಾಡಿದಂತೆ. ಮೊದಲು ಓದಿನ ಕಡೆ ಗಮನ ಕೊಡು ಅದೆಲ್ಲ ಆಮೇಲೆ ಎಂದಳು.


ಪ್ರೇಮ ಪುಸ್ತಕದಿಂದ ತಲೆಯನ್ನು ಮೇಲೆತ್ತದೆ ಮಧುರ ಹೌದು ನೀನಂದಂತೆ ನಾನು ಅವನನ್ನು ಇಷ್ಟ ಪಡುತ್ತಿದ್ದೇನೆ, ಅವನಿಲ್ಲದೆ ನನಗೆ ಬದುಕಲು ಆಗಲ್ಲ. ಅವನು ಸಿರಿವಂತನೆ ಇರಬಹುದು ಆದರೆ ಅವನಲ್ಲಿ ಆ ದರ್ಪ ಇಲ್ಲ. ತುಂಬಾ ಒಳ್ಳೆಯ ಹುಡುಗ. ಈ ವಿಷಯಕ್ಕೆ ನಾನು ನಿನ್ನ ಸಹಾಯವನ್ನೇ ಕೇಳೋಣ ಎಂದಿದ್ದೆ. ಈಗ ನಿನಗೆ ವಿಷಯ ಗೊತ್ತಾಗಿದೆ. ನೀನೆ ಹೇಗಾದರೂ ನನ್ನ ಪ್ರೀತಿ ಗೆಲ್ಲಲು ಸಹಾಯ ಮಾಡಬೇಕು ಮಧುರ ಪ್ಲೀಸ್....ಮಧುರಗೆ ಪ್ರೇಮಳ ಮಾತು ಕೇಳಿ ಆಶ್ಚರ್ಯವಾಗದಿದ್ದರೂ ಕೋಪ ಬಂದು ಪುಸ್ತಕ ಮುಚ್ಚಿಟ್ಟು ಪ್ರೇಮ ಮೊದಲು ನೀನು ಓದಿನ ಕಡೆ ಗಮನ ಕೊಟ್ಟು ಮೊದಲು ಕಾಲೇಜ್ ಮುಗಿಸೋಣ ಆಮೇಲೆ ಈ ಪ್ರೀತಿ ಪ್ರೇಮ ಎಲ್ಲ...ಹಾಗಾದರೆ ನೀನು ನನ್ನ ಪ್ರೀತಿಗೆ ಸಹಾಯ ಮಾಡ್ತೀಯ ಎಂದಾಯ್ತು ತಾನೇ ಎಂದು ಪ್ರೇಮ ಬಂದು ಮಧುರಳ ಕುತ್ತಿಗೆ ಬಳಸಿ ಕೆನ್ನೆಗೊಂದು ಮುತ್ತು ಕೊಟ್ಟಳು.ಡೋಣ ಮೊದಲು ಕಾಲೇಜ್ ಮುಗಿಯಲಿ ಆಮೇಲೆ ನೋಡೋಣ ಎಂದು ಇಬ್ಬರೂ ಓದುವುದರಲ್ಲಿ ಮಗ್ನರಾದರು.


ಇತ್ತ ಅಮರನ ಪರಿಸ್ಥಿತಿಯೂ ಭಿನ್ನವಾಗಿರಲಿಲ್ಲ. ಸದಾಕಾಲ ಮಧುರಳ ನೆನಪಲ್ಲೇ ಇರುತ್ತಿದ್ದ. ಮೊದಲಿಗಿಂತ ಹೆಚ್ಚಾಗೆ ಪ್ರೇಮಳ ಜೊತೆ ಸಲುಗೆ ಇಂದ ಇರುತ್ತಿದ್ದ ಏಕೆಂದರೆ ಅವಳೇ ಇವನ ಆಟಕ್ಕೆ ದಾಳ ಆಗುವವಳು. ಆದರೆ ಪ್ರೇಮಗೆ ಇದರ ಅರಿವಿರಲಿಲ್ಲ. ಅವನು ಹೆಚ್ಚು ಸನಿಹವಾದಂತೆ ಅವನೂ ತನ್ನನ್ನು ಇಷ್ಟ ಪಡುತ್ತಿದ್ದಾನೆಂಬ ಭ್ರಮೆಯಲ್ಲೇ ಇದ್ದಳು. 


ಅಂದು ಪರೀಕ್ಷೆಯ ಕೊನೆ ದಿವಸ. ಎಲ್ಲರೂ ಪರೀಕ್ಷೆಯನ್ನು ಚೆನ್ನಾಗಿ ಮಾಡಿದ ಸಂತಸದಲ್ಲಿದ್ದರು. ಇನ್ನೆರೆಡು ವಾರ ರಜ. ಮರುದಿನದಿಂದ ಪ್ರೇಮ ಮತ್ತು ಮಧುರ ಊರಿಗೆ ಹೊರಡುವುದರಲ್ಲಿದ್ದರು. ಪ್ರೇಮಳಿಂದ ಈ ವಿಷ್ಯ ತಿಳಿದಿದ್ದ ಅಮರ್ ಪ್ರೇಮಗೆ ಮೊದಲೇ ಅಂದು ಸಂಜೆ ಕಾಫಿ ಡೇ ಗೆ ಹೋಗೋಣ ಎಂದು ಹೇಳಿದ್ದ. ಪ್ರೇಮ ಕೂಡ ಸಂತಸದಲ್ಲಿದ್ದಳು. ಸಂಜೆ ಪೀಜೀಯಿಂದ ಹೊರಡುವ ಸಮಯಕ್ಕೆ ಅಮರ್ ಕರೆ ಮಾಡಿ ಪ್ರೇಮ ಮಧುರಳನ್ನು ಕರೆದುಕೊಂಡು ಬಾ ಎಂದುಹೇಳಿದ.


ಸಂಜೆ ತಂಪು ಗಾಳಿಯಲ್ಲಿ ನಾನು ಮತ್ತು ಅಮರ್ ಇಬ್ಬರೇ ಕಾಫಿ ಡೇ ನಲ್ಲಿ ಆರಾಮಾಗಿ ಕಾಫಿ ಕುಡಿಯುತ್ತ ಮಾತಾಡಬಹುದು ಎಂದು ಕನಸುಗಳನ್ನು ಕಟ್ಟಿಕೊಂಡಿದ್ದ ಪ್ರೇಮಗೆ ಈಗ ಜೊತೆಯಲ್ಲಿ ಮಧುರಳನ್ನು ಕರೆದುಕೊಂಡು ಬಾ ಎಂದು ಯಾಕೆ ಹೇಳಿದ ಅಮರ್ ಎಂದೋ ಆಲೋಚಿಸುತ್ತಲೇ ಮಧುರಳ ಬಳಿ ಹೋಗಿ ಮಧುರ ಅಮರ್ ಫೋನ್ ಮಾಡಿದ್ದ ನಾವಿಬ್ಬರೂ ಅವನ ಜೊತೆ ಕಾಫಿ ಡೇ ಗೆ ಹೋಗಬೇಕಂತೆ ಬರುತ್ತೀಯ?


ಪ್ರೇಮ ನನಗೆ ಇದೆಲ್ಲ ಇಷ್ಟ ಆಗಲ್ಲ ಎಂದು ಹೇಳಿದ್ದೆ ತಾನೇ ಬೇಕಾದರೆ ನೀನು ಹೋಗಿಬಾ. ಅಸಲಿಗೆ ನೀನು ಹೋಗುವುದೂ ನನಗೆ ಇಷ್ಟ ಇಲ್ಲ ನಿನಗೆ ಹೋಗಲೇ ಬೇಕು ಎಂದಿದ್ದಾರೆ ಹೋಗಿ ಬಾ. 


ಮಧು ಪ್ಲೀಸ್ ಮಧು...ನನ್ನ ಸ್ವೀಟ್ ಸಿಸ್ಟರ್ ಅಲ್ವ ಪ್ಲೀಸ್ ಬಾರೆ...ಪರೀಕ್ಷೆ ಮುಂಚೆ ನೀನು ಸಹಾಯ ಮಾಡ್ತೀನಿ ಅಂತ ಹೇಳಿದ್ದೆ ತಾನೇ...ಪ್ಲೀಸ್ ಬಾ ಮಧು...


ಹಲೋ ನಾನು ಹೇಳಿದ್ದು ನಮ್ಮ ಕಾಲೇಜ್ ಜೀವನ ಮುಗಿದ ಮೇಲೆ ನೋಡೋಣ ಎಂದಿದ್ದು...ಈಗ ದಯವಿಟ್ಟು ನನ್ನನ್ನು ಬಲವಂತ ಮಾಡಬೇಡ ನೀನು ಹೋಗಿ ಬಾ..


ಕಾಫಿಡೇ ನಲ್ಲಿ ಅಮರ್ ಹೇಳಿದ್ದ ಸಮಯಕ್ಕೆ ಮುಂಚೆಯೇ ಬಂದು ಮೂರು ಚೇರ್ ಇರುವ ಒಂದು ಟೇಬಲ್ ನಲ್ಲಿ ಕುಳಿತು ಒಂದು ಸಲ ವಾಚ್ ಕಡೆ ನೋಡುವುದು ಮತ್ತೊಂದು ಸಲ ಬಾಗಿಲಿನ ಕಡೆ ನೋಡುವುದು ಮಾಡುತ್ತಿದ್ದ. ಪ್ರೇಮ ನೀಲಿ ಜೀನ್ಸ್ ಮೇಲೆ ಬಿಳಿ ಬಣ್ಣದ ಟೀ ಶರ್ಟ್ ಧರಿಸಿ ತನ್ನ ಕೂದಲನ್ನು ಗಾಳಿಗೆ ಬಿಟ್ಟು ಬಂದಳು. ಅವಳು ಒಳಗೆ ಬಂದ ತಕ್ಷಣ ಹುಡುಗರ ಕಣ್ಣುಗಳು ಅವಳೆಡೆಗೆ ಹೊರಳಿದವು. 


ಅವಳು ಒಬ್ಬಳೇ ಬಂದಿದ್ದು ಅಮರನಿಗೆ ತಣ್ಣೀರು ಎರಚಿದಂತಾಗಿತ್ತು. ಪ್ರೇಮ ಬಂದು ಕುರ್ಚಿಯಲ್ಲಿ ಕುಳಿತು ಹಾಯ್ ಅಮರ್ ಎಂದಳು. ಅಷ್ಟರಲ್ಲಿ ಅಲ್ಲಿಗೆ ಬಂದ ಬೇರರ್ ಗೆ ಎರಡು ಕಾಫಿ ಒಂದು ಪೇಸ್ತ್ರಿ ಹೇಳಿ ಕುಳಿತಿದ್ದರು. ಸ್ವಲ್ಪ ಹೊತ್ತು ಅದೂ ಇದ್ದೂ ಮಾತಾದ ಮೇಲೆ ಅಮರ್ ಕೇಳಿದ ಎಲ್ಲಿ ಪ್ರೇಮ ಮಧುರಳನ್ನು ಕರೆದುಕೊಂಡು ಬಾ ಎಂದಿದ್ದೆ. ಅವಳು ಬರಲಿಲ್ಲವ?


ಇಲ್ಲ ಅಮರ್ ಅವಳಿಗೆ ಯಾಕೋ ತಲೆ ನೋವು ಅನ್ನುತ್ತಿದ್ದಳು ಅದಕ್ಕೆ ಬರಲಿಲ್ಲ. ನಾನು ಬಂದಿದ್ದೀನಲ್ಲ ನನ್ನ ಜೊತೆ ಮಾತಾಡಬಹುದಲ್ಲವ?


ಆದರೆ ನನಗೆ ಬೇಕಿದ್ದಿದ್ದು ಮಧುರ ಎಂದು ಮನಸಿನಲ್ಲಿ ಅಂದುಕೊಂಡ ಅಮರ್ ಹಾಗಲ್ಲ ಸುಮ್ನೆ ಕೇಳಿದೆ ಅಷ್ಟೇ, ಮತ್ತೆ ನಾಳೆ ಹೋಗ್ತಾ ಇದ್ದೀರಾ ಊರಿಗೆ?


ಹೌದು ಅಮರ್ ನಾಳೆ ಹೋಗ್ತಾ ಇದೀವಿ, ಇನ್ನ ಎರಡು ವಾರ ನಿನ್ನನ್ನು ನೋಡದೆ ಇರಬೇಕಲ್ಲ ಎಂದು ಬೇಜಾರಾಗುತ್ತಿದೆ ಅಮರ್...ಏನಂದೆ ಪ್ರೇಮ? ಏನಿಲ್ಲ ಎರಡು ವಾರ ಯಾರನ್ನೂ ನೋಡಲು ಭೇಟಿ ಮಾಡಲು ಆಗುವುದಿಲ್ಲವಲ್ಲ ಅದಕ್ಕೆ ಬೇಸರ ಆಗುತ್ತಿದೆ ಎಂದೇ ಅಷ್ಟೇ ಎಂದು ಮಾತನ್ನು ತಿರುಚಿದಳು. 


ಅಮರನಿಗೆ ಮಧುರ ಇಲ್ಲದ ಆ ಸಂಜೆ ಕಳೆ ಹೀನವಾಗಿತ್ತು. ಕಾಫಿ ಆದ ತಕ್ಷಣ ಹೊರಡೋಣ ಪ್ರೇಮ ಎಂದ. ಅಮರ್ ಇನ್ನೂ ಬಂದು ಅರ್ಧ ಗಂಟೆ ಆಗಿಲ್ಲ ಆಗಲೇ ಹೋಗಬೇಕ ಎಂದು ಪ್ರೇಮ ಕೇಳಿದ್ದಕ್ಕೆ, ಇಲ್ಲ ಪ್ರೇಮ ಸ್ವಲ್ಪ ಅರ್ಜೆಂಟ್ ಕೆಲಸ ಇದೆ ನೀನು ಬರುವುದಕ್ಕೆ ಸ್ವಲ್ಪ ಮುಂಚೆ ಫೋನ್ ಬಂದಿತ್ತು. ಅಲ್ಲಿಗೆ ಹೋಗಬೇಕು ಬಾ ನಿನ್ನನ್ನು ಡ್ರಾಪ್ ಮಾಡಿ ನಾನು ಹೋಗುತ್ತೇನೆ ಎಂದು ಅಲ್ಲಿಂದ ಹೊರಟರು.    

Rating
No votes yet