ಅಮರ ಮಧುರ ಪ್ರೇಮ = ಭಾಗ 2

ಅಮರ ಮಧುರ ಪ್ರೇಮ = ಭಾಗ 2

ಅಂದು ಕಾಲೇಜ್ ಫೆಸ್ಟ್. ಇಡೀ ಕಾಲೇಜ್ ಥಳಥಳಿಸುತ್ತಿತ್ತು. ಎಲ್ಲೆಡೆ ಬಣ್ಣ ಬಣ್ಣದ ಕಾಗದಗಳಿಂದ, ಪೋಸ್ಟರ್ ಗಳಿಂದ ಕಂಗೊಳಿಸುತ್ತಿತ್ತು. ಪ್ರೇಮ ಮತ್ತು ಮಧುರ ಇಬ್ಬರೂ

ಒಂದೇ ರೀತಿಯ ಬಟ್ಟೆ ಧರಿಸಿ ಸ್ವಲ್ಪ ಹೆಚ್ಚೇ ಅನಿಸುವಂತೆ ಅಂದವಾಗಿ ಕಾಣುತ್ತಿದ್ದರು. ಪ್ರೇಮ ಮಧರಳನ್ನು ಕರೆದುಕೊಂಡು ತಾನು ತಾಲೀಮು ನಡೆಸುತ್ತಿದ್ದ ಜಾಗಕ್ಕೆ ಕರೆದುಕೊಂಡು ಹೋದಳು. ಅಲ್ಲಿ ಆಗಲೇ ಎಲ್ಲರೂ ಬಂದು ಕೊನೆಯ ಹಂತದ ತಾಲೀಮಿನಲ್ಲಿ ತೊಡಗಿದ್ದರು. ಇವರಿಬ್ಬರ ಆಗಮನದಿಂದ ಎಲ್ಲರೂ ಇವರಿಬ್ಬರ ಕಡೆ ಆಶ್ಚರ್ಯದಿಂದ ನೋಡುತ್ತಾ ನಿಂತಿದ್ದರು.

 ಕೆಲವರಿಗೆ ಅವರು ಅವಳಿಗಳೆಂದು ಗೊತ್ತಿದ್ದರೂ ಮಿಕ್ಕವರಿಗೆ ಗೊತ್ತಿರಲಿಲ್ಲ. ಅವರೆಲ್ಲರೂ ಇಬ್ಬರನ್ನೂ ಬಿಟ್ಟ ಕಣ್ಣು ಬಿಟ್ಟ ಹಾಗೆ ನೋಡುತ್ತಿದ್ದರು. ಅಮರ್ ಗೆ ಪ್ರೇಮ ಅವಳಿ ಎಂದು ಗೊತ್ತಿದ್ದರೂ ಮಧುರಳನ್ನು ಮುಖತಃ ಭೇಟಿ ಮಾಡಿರಲಿಲ್ಲ.  ಪ್ರೇಮ, ಮಧುರಳನ್ನು ಎಲ್ಲರಿಗೂ ಪರಿಚಯಿಸುತ್ತಾ ಅಮರನ ಬಳಿ ಬಂದು ಅಮರ್ ಇವಳು ನನ್ನ ಅಕ್ಕ ಮಧುರ ಎಂದು ಹೇಳಿದಾಗ ಅಮರ್ ತನ್ನ ಕೈ ಚಾಚಿ ಮಧುರಳ ಕೈ ಕುಲುಕಿ ಹಾಯ್ ಎಂದ. ಮಧುರ ಕೂಡ ಹಾಯ್ ಎಂದು ಸ್ವಲ್ಪ ಹೊತ್ತು ಮಾತಾಡಿ ಮಧುರ ಅಲ್ಲೇ ಒಂದು ಕಡೆ ಕೂತು ಇವರ ತಾಲೀಮನ್ನು ನೋಡುತ್ತಿದ್ದಳು.

 ಮಧುರಳ ಸೌಮ್ಯ ಸ್ವಭಾವದಿಂದ ಅಮರ್ ಆಕರ್ಷಿತನಾಗಿದ್ದ. ಪದೇ ಪದೇ ಮಧುರಳನ್ನು ನೋಡುತ್ತಾ ಡಾನ್ಸ್ ಮಾಡುತ್ತಿದ್ದ. ಪ್ರೇಮ ಕೂಡ ನೋಡಲು ಮಧುರಳ ಹಾಗೆಯೇ ಇದ್ದರೂ ಮಧುರಳಲ್ಲಿ ಅದೇನೋ ಹೆಚ್ಚು ಆಕರ್ಷಣೆ ಕಾಣುತ್ತಿತ್ತು. ಮಧುರಳ ಕಣ್ಣಿನಲ್ಲಿ ವಿಶೇಷವಾದ ಹೊಳಪಿತ್ತು.

 ಇಷ್ಟು ದಿವಸದಿಂದ ಪ್ರೇಮಳ ಜೊತೆ ಓಡಾಡುತ್ತಿದ್ದರೂ ಅವಳಲ್ಲಿ ಕಾಣದ ಹೊಳಪನ್ನು ಮಧುರಳಲ್ಲಿ ಕಂಡಿದ್ದ ಅಮರ್. ಮೊದಲ ಭೇಟಿಯಲ್ಲೇ ಮಧುರಳ ಮೇಲೆ ಪ್ರೀತಿ ಹುಟ್ಟಿಬಿಟ್ಟಿತ್ತು ಅಮರನ ಮನಸಿನಲ್ಲಿ.

ಕಾರ್ಯಕ್ರಮ ಮುಗಿಯುವ ಹೊತ್ತಿಗೆ ರಾತ್ರಿ ಹನ್ನೊಂದು ಘಂಟೆ ಆಗಿತ್ತು. ಪ್ರೇಮ ಮತ್ತು ಮಧುರ ಇಬ್ಬರೂ ಹೊರಡುವ ಹೊತ್ತಿಗೆ ಅಮರ್ ಬಂದು ನಾನು ನಿಮ್ಮಿಬ್ಬರನ್ನೂ ಡ್ರಾಪ್ ಮಾಡುತ್ತೇನೆ ಎಂದಿದ್ದಕ್ಕೆ ಮಧುರ ಬೇಡ ಅಮರ್ ನಾವು ಆಟೋದಲ್ಲಿ ಹೋಗುತ್ತೇವೆ ಎಂದಳು. ಕೂಡಲೇ ಪ್ರೇಮ

ಮಧು ಇಷ್ಟು ಹೊತ್ತಿನಲ್ಲಿ ಆಟೋದಲ್ಲಿ ಯಾಕೆ ಆರಾಮಾಗಿ ಅಮರ್ ಜೊತೆ ಹೋಗೋಣ. ಅವನೂ ನಮ್ಮ ಪೀಜೀಯ ಹಾದಿಯಲ್ಲೇ ಹೋಗುವುದು ಎಂದು ಮಧುರಳ ಕೈ ಹಿಡಿದು ಅಮರನ ಜೊತೆ ಕಾರಿನತ್ತ ಹೆಜ್ಜೆ ಹಾಕಿದರು. ಮಧುರಳಿಗೆ ಇದೆಲ್ಲ ಇಷ್ಟವಿಲ್ಲದಿಲ್ಲದಿದ್ದರೂ ಒಲ್ಲದ ಮನಸಿನಿಂದ ಅಮರನ ಕಾರನ್ನು ಹತ್ತಿದ್ದಳು.

 ದಾರಿಯಲ್ಲಿ ಅಮರ್ ಮಧುರಳನ್ನು ಕುರಿತು, ನನಗೆ ನೀವಿಬ್ಬರೂ ಅವಳಿಗಳೆಂದು ತಿಳಿದಿತ್ತು. ಆದರೆ ಇಷ್ಟು ಹೋಲಿಕೆ ಎಂದು ಗೊತ್ತಿರಲಿಲ್ಲ ಎಂದು ಹಿಂದಕ್ಕೆ ತಿರುಗಿ ಹೇಳಿದ. ತಕ್ಷಣ ಹಿಂದೆ ಕೂತಿದ್ದ ಇಬ್ಬರೂ ಒಬ್ಬರ ಮುಖವನ್ನೊಬ್ಬರು ನೋಡಿಕೊಂಡು ನಕ್ಕರು. ಅಮರ್ ನಾನು ಪ್ರೇಮ ಕಣೋ ಅವಳು ಮಧುರ ಎಂದು ಹೇಳಿದಳು.

 ನೋಡಿದಿರಾ ನೀವಿಬ್ಬರೂ ಮೌನವಾಗಿದ್ದಾರೆ ಯಾರು ಯಾರು ಎಂದು ಕಂಡು ಹಿಡಿಯುವುದು ಬಹಳ ಕಷ್ಟ. ನಿಮ್ಮಿಬ್ಬರನ್ನು ಕಂಡು ಹಿಡಿಯಬೇಕೆಂದರೆ ನಿಮ್ಮ ಮಾತಿನಿಂದಲೇ ಕಂಡು ಹಿಡಿಯಬೇಕು. ಯಾಕೆಂದರೆ ಪ್ರೇಮ ಸದಾಕಾಲ ಮಾತಾಡುತ್ತಿರುತ್ತಾಳೆ ಮತ್ತು ಗಂಡುಬೀರಿಯಂತೆ ವರ್ತಿಸುತ್ತಾಳೆ. ಆದರೆ ಮಧುರ ಅವರದು ಸೌಮ್ಯ ಸ್ವಭಾವ ಹೆಚ್ಚು ಮಾತಾಡುವುದಿಲ್ಲ ಎಂದು ತನ್ನ ಮುಂದಿದ್ದ ಕನ್ನಡಿಯಲ್ಲಿ ಹಿಂದಕ್ಕೆ ಮಧುರಳ ಮುಖವನ್ನು ನೋಡುತ್ತಿದ್ದ.

ತಕ್ಷಣ ಪ್ರೇಮ ಯಾಕಪ್ಪ ಹೇಗಿದೆ ಮೈಗೆ ನಾನು ನಿನ್ನ ಕಣ್ಣಿಗೆ ಗಂಡು ಬೀರಿ ಹಾಗೆ ಕಾಣಿಸುತ್ತೇನ? ಇರಲಿ ಇರಲಿ...ಎಂದು ಮಧುರಳ ಮುಖ ನೋಡಿದಳು. ಮಧುರ ಏನೂ ಮಾತಾಡದೆ ಸುಮ್ಮನೆ ನಗುತ್ತಿದ್ದಳು.

ಅಮರ್ ಪದೇ ಪದೇ ಮಧುರಳನ್ನು ಕುರಿತು ಏನೇನೋ ಕೇಳುತ್ತಿದ್ದ, ಆದರೆ ಮಧುರ ಎಷ್ಟು ಬೇಕೋ ಅಷ್ಟು ಮಾತ್ರ ಉತ್ತರಿಸಿ ಸುಮ್ಮನಾಗಿಬಿಡುತ್ತಿದ್ದಳು. ಅಷ್ಟರಲ್ಲಿ ಪೀಜೀ ಬಂದು ಇಬ್ಬರೂ ಕೆಳಗಿಳಿದು ಅಮರ್ ಥ್ಯಾಂಕ್ಸ್ ಎಂದು ಹೇಳಿ ಬೀಳ್ಕೊಟ್ಟು ಪೀಜೀಯ ಒಳಗೆ ಹೋದರು.

 ರಾತ್ರಿ ಮಲಗಿದಾಗ ಪ್ರೇಮ ಮಧುರಳನ್ನು, ಮಧು ಸಕತ್ತಾಗಿ ಇತ್ತಲ್ವ ಎಲ್ಲ ಕಾರ್ಯಕ್ರಮಗಳು. ಅದರಲ್ಲೂ ನಮ್ಮ ಡಾನ್ಸ್ ಅಂತೂ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಇದೆಲ್ಲ ಅಮರನ ಶ್ರಮದಿಂದಲೇ ಸಾಧ್ಯವಾದದ್ದು. ಒಂದು ತಿಂಗಳಿನಿಂದ ಈ ಕಾರ್ಯಕ್ರಮದ ಸಲುವಾಗಿ ಬಹಳ ಕಷ್ಟಪಟ್ಟು ಕೆಲಸ ಮಾಡಿದ್ದ. ಒಮ್ಮೊಮ್ಮೆ ಅಂತೂ ಅವನು ಮನೆಗೆ ಹೋಗುವಾಗ ರಾತ್ರಿ ಹನ್ನೆರಡು ಆಗುತ್ತಿತ್ತು. ಇಡೀ ಕಾರ್ಯಕ್ರಮದ ಜವಾಬ್ದಾರಿ ಜೊತೆ ನಮ್ಮ ಡಾನ್ಸ್ ಕೂಡ ಎಲ್ಲವನ್ನೂ ಚೆನ್ನಾಗಿ ನಿಭಾಯಿಸಿದ. ಎಲ್ಲರೂ ಅವನನ್ನು ಅಭಿನಂದಿಸುತ್ತಿದ್ದರು. ಮುಂದಿನ ಬಾರಿಯೂ ಅವನಿಗೆ ವಹಿಸಿಕೊಡುವ ಸಾಧ್ಯತೆ ಇದೆ ಎಂದು ಎಲ್ಲರೂ ಹೇಳುತ್ತಿದ್ದಾರೆ. ಅಂತೂ ನಿರೂಪಿಸಿಬಿಟ್ಟ ಅವನು ಕಾಲೇಜ್ ಹೀರೋ ಎಂದು ಒಂದೇ ಸಮನೆ ಹೊಗಳುತ್ತಿದ್ದಳು.

 ಏನೇ ಪ್ರೇಮ ಒಂದೇ ಸಮ ಹೊಗಳುತ್ತಿದ್ದೀಯ ಅವನನ್ನು, ಏನು ವಿಷ್ಯ? ವಿಷಯನ ಏನೂ ಇಲ್ಲಪ್ಪ. ಅವನ ಕೆಲಸ ಇಷ್ಟ ಆಗಿ ಮೆಚ್ಚುಗೆ ವ್ಯಕ್ತ ಪಡಿಸಿದೆ ಅಷ್ಟೇ.

 ಅಷ್ಟೇನ ಇನ್ನೇನಾದರೂ ಇದೆಯಾ?

 ಹಲೋ ಇನ್ನೇನು ಇಲ್ಲ, ಈಗ ಮಲಗೋಣವೇ?

 ಇತ್ತ ಮನೆ ತಲುಪಿದ ಅಮರ್ ಗೆ ರಾತ್ರಿ ಇಡೀ ಮಧುರಳದ್ದೆ ಚಿಂತೆ ಆಗಿತ್ತು. ಇಷ್ಟು ದಿವಸ ಯಾವ ಹುಡುಗಿಗೂ ಸೋಲದ ನಾನು ಇಂದೇಕೆ ಅವಳ ಬಗ್ಗೆ ಇಷ್ಟು ಯೋಚಿಸುತ್ತಿದ್ದೇನೆ. ಅದೂ ಅಲ್ಲದೆ ಪ್ರೇಮ ಕೂಡ ನೋಡಲು ಮಧುರಳಂತೆ ಇದ್ದರೂ, ಪ್ರೇಮಳ ಜೊತೆ ನಾನು ಹತ್ತಿರವಾಗಿದ್ದರೂ ಮೂಡದ ಪ್ರೀತಿ ಮಧುರಳನ್ನು ನೋಡಿದ ಕೂಡಲೇ ಪ್ರೀತಿ ಉಂಟಾಗಿದ್ದಕ್ಕೆ ಕಾರಣ ಏನಿರಬಹುದು?

ಬಹುಶಃ ಅವಳ ಆ ಸೌಮ್ಯ ಸ್ವಭಾವವೇ ನನಗೆ ಅವಳಲ್ಲಿ ಪ್ರೀತಿ ಮೂಡಲು ಕಾರಣ ಆಗಿರಬಹುದು.  ಆದರೆ ಮಧುರ ಮನಸಿನಲ್ಲಿ ನಾನು ಸ್ಥಾನ ಸಂಪಾದಿಸಲು ಸಾಧ್ಯವೇ?

ಅವಳ ಮಾತು ನೋಡಿದರೆ ಅವಳಿಗೆ ಪ್ರೀತಿ ಪ್ರೇಮ ಎಂಬುದರಲ್ಲಿ ಆಸಕ್ತಿ ಇದ್ದಂತೆ ತೋರುತ್ತಿಲ್ಲ. 

ಅವಳ ಮನಸಿನಲ್ಲಿ ನನ್ನ ಬಗ್ಗೆ ಪ್ರೀತಿ ಮೂಡಬೇಕೆಂದರೆ ಅದಕ್ಕೆ ಇರುವ ಒಂದೇ ಒಂದು ದಾರಿ ಎಂದರೆ ಪ್ರೇಮ. ಪ್ರೇಮ ಹೇಗಿದ್ದರೂ ನನ್ನ ಜೊತೆ ಚೆನ್ನಾಗಿ ಇದ್ದಾಳೆ. ಅವಳಿಗೆ ನನ್ನ ಬಗ್ಗೆ ಚೆನ್ನಾಗಿ ತಿಳಿದಿದೆ. ಆದ್ದರಿಂದ ಅವಳನ್ನು ಉಪಯೋಗಿಸಿಕೊಂಡು ಮಧುರಳ ಪ್ರೀತಿ ಸಂಪಾದಿಸಬೇಕು ಎಂದುಕೊಂಡು ಹೊದ್ದಿಕೆ ಎಳೆದುಕೊಂಡು ಮಲಗಿದನು.

 ಇತ್ತ ಪ್ರೇಮ ಆದಷ್ಟು ಬೇಗ ಅಮರನಿಗೆ ತನ್ನ ಮನಸಿನಲ್ಲಿರುವ ವಿಷಯ ತಿಳಿಸಬೇಕು. ಆದರೆ ಅವನು ನನ್ನನ್ನು ನನ್ನ ಪ್ರೀತಿಯನ್ನು ಒಪ್ಪುತ್ತಾನೋ ಇಲ್ಲವೋ ಗೊತ್ತಿಲ್ಲ. ಆಗಲೇ ಅವನಿಗೆ ಮನ ಸೋತು ವಿಫಲವಾಗಿರುವ ಬಹಳಷ್ಟು ಹುಡುಗಿಯರು ಇದ್ದಾರೆ. ಇನ್ನು ನನ್ನ ಪ್ರೀತಿಯನ್ನು ಅಂಗೀಕರಿಸುತ್ತಾನ?. ಇದಕ್ಕೆ ಇರುವ ಒಂದೇ ಒಂದು ದಾರಿ ಎಂದರೆ ಮಧುರ. ಹೌದು ಮಧುರಳ ಮೂಲಕ ಅಮರನಿಗೆ ತನ್ನ ಪ್ರೀತಿಯನ್ನು ತಿಳಿಸಬೇಕು. ಏಕೆಂದರೆ ಮಧುರ ಆದರೆ ನನ್ನ ಮನದ ಭಾವನೆಯನ್ನು ಸರಿಯಾಗಿ ತಿಳಿಸುತ್ತಾಳೆ. ಆದರೆ ಮಧುರ ಇದಕ್ಕೆ ಸಮ್ಮತಿಸುತ್ತಾಳ?

 

 

Rating
No votes yet

Comments