ಅಮಾವಾಸ್ಯೆ ತರ್ಪಣ

ಅಮಾವಾಸ್ಯೆ ತರ್ಪಣ

ಚಿತ್ರ

ಸಂಪ್ರದಾಯಸ್ಥ ಬ್ರಾಹ್ಮಣರು ಪ್ರತಿ ಅಮಾವಾಸ್ಯೆಯ ದಿನ, ಅಮಾವಾಸ್ಯೆ ತರ್ಪಣ ಬಿಡುವುದು ಸಾಮಾನ್ಯವಾಗಿತ್ತು. ನಾನು ಚಿಕ್ಕವನಿದ್ದಾಗ ನನ್ನ ಅಪ್ಪ ಈ ಅಮಾಸ್ಯೆ ತರ್ಪಣ ಬಿಡುತ್ತಿದ್ದನ್ನು ಸಹಜವಾಗಿಯೇ ನೋಡಿದ್ದೇನೆ. ಈ ಅಮಾತರ್ಪಣ ಎಂದರೆ ಮನೆಯಲ್ಲಿಯ ಹಿರಿಯರು ಅಮಾವಾಸ್ಯೆಯಂದು, ಪ್ರಾತಃಕಾಲದ ಆಹ್ನೀಕಗಳನ್ನು ಮುಗಿಸಿ, ನಂತರ ಗತಿಸಿದ ಪಿತೃಗಳಿಗೆ ತರ್ಪಣ ಬಿಡುವುದು.

ನನ್ನ ಹಳ್ಳಿಯಮನೆ ಬಹಳ ವಿಸ್ತಾರವಾದ ತೊಟ್ಟಿಮನೆ. ಬರೀ ವಿಸ್ತಾರ ಇತ್ತೇ ವಿನಃ ಏನೂ ಅನುಕೂಲ ಇರಲಿಲ್ಲ. ಮನೆಮುಂದೆ ಎರಡು ಜಗುಲಿಗಳು, ಅಲ್ಲಿಂದ ಮೆಟ್ಟಿಲುಗಳನ್ನು ಹತ್ತಿ ಬಂದರೆ ಮನೆ ಹೆಬ್ಬಾಗಿಲು, ಈ ಹೆಬ್ಬಾಗಿಲು ಹೆಸರಿಗಷ್ಟೇ ಹೆಬ್ಬಾಗಿಲು ಆದರೆ ಬಾಗಿಲು ಹಿರಿದಾಗಿರುತ್ತಿರಲಿಲ್ಲ. ಬಾಗಿಲಿನ ಚೌಕಟ್ಟು ಭಾರಿಯಾಗಿದ್ದು, ಅದೇಕೋ ಬಾಗಿಲು ಮಾತ್ರ ಬಹಳ ಚಿಕ್ಕದಾಗಿರುತ್ತಿತ್ತು. ನಾನು ಆಕಾಲದಲ್ಲಿ ಕಂಡ ಹಳ್ಳಿಯ ತೊಟ್ಟಿ ಹಟ್ಟಿಗಳೆಲ್ಲದರ ಮುಖ್ಯದ್ವಾರಗಳ ವಿನ್ಯಾಸವು ಹೀಗೆ ಇರುತ್ತಿದ್ದವು.

ಆಗಿನ ಪೀಳಿಗೆಯವರೆಲ್ಲ ಬಹಳ ದೃಢಕಾಯರಾಗಿದ್ದು ಆಜಾನುಬಾಹುಗಳಾಗಿದ್ದರು. ಇಂಥ ಆಜಾನು ಬಾಹು ದೇಹಿಗಳು ಮನೆ ಒಳಕ್ಕೆ ಬರಬೇಕಾದರೆ ಹೆಬ್ಬಾಗಿಲಿನ ಮೂಲಕ ಬರಬೇಕು ತಮ್ಮ ನೀಳ ದೇಹವನ್ನು ಅರ್ಧದಷ್ಟು ಬಗ್ಗಿಸಿ, ಬಾಗಿಲಿನ ಚೌಕಟ್ಟಿಗೆ ತಲೆ ತಾಗದಂತೆ ಒಳಕ್ಕೆ ಬರಬೇಕಾಗಿತ್ತು.

ಒಳಕ್ಕೆ ಬರುವಾಗಲೆಲ್ಲ ಬಾಗಿಲಿನ ಹತ್ತಿರ ಬಂದಾಗಲೇ ಬಗ್ಗಿ, ಬಾಗಿಲುದಾಟಿ ಮನೆ ಒಳಕ್ಕೆ ಬಂದಮೇಲೆ ನೆಟ್ಟಗಾಗಿ ಮುಂದೆ ಬರಬೇಕು. ಅನೇಕ ಸಲ ಹೀಗೆ ಈ ರೀತಿ ಸರ್ಕಸ್ ಮಾಡುವಾಗ ಇನ್ನೇನು ಬಾಗಿಲುದಾಟಿಯಾಗಿದೆ ಎಂದು ತಿಳಿದು ತಲೆ ಎತ್ತಿಬಿಡುತ್ತಿದ್ದರು. ಆಗ ಧಡಾರ್ ಎಂದು ನೆತ್ತಿ ಬಾಗಿಲಿಗೆ ಬಡಿದು ಅಸಹನೀಯ ವೇದನೆ ಪಡುತ್ತಿದ್ದರು. ಈ ರೀತಿ ನನ್ನ ಹಳ್ಳಿಯಲ್ಲಿ ಯಾರಾದರೂ ಬಾಗಿಲಿಗೆ ತಲೆ ಹೊಡಿಸಿಕೊಳ್ಳುವುದನ್ನು ದಿನಕ್ಕೆ ಒಂದು ಬಾರಿಯಾದರೂ ನೋಡಬಹುದಾಗಿತ್ತು. ಚಿಕ್ಕಮಕ್ಕಳಾದ ನಮಗೆ ಹಿರಿಯರು ಹೀಗೆ ಬಾಗಿಲಿಗೆ ತಲೆ ಹೊಡಿಸಿಕೊಳ್ಳುವುದನ್ನು ನೋಡಿದಾಗಲೆಲ್ಲ ನಗು ತಡೆಯಲು ಆಗುತ್ತಿರಲಿಲ್ಲ. ನಾವು ಸಹಜವಾಗಿ ನಕ್ಕರೆ ಈ ಹಿರಿಯರಿಗೆ, ತಲೆ ಬಡಿದ ನೋವಿನ ಜತೆಗೆ ಅಸಾಧ್ಯವಾದ ಕೋಪ ಬರುತ್ತಿತ್ತು. ಅವರುಗಳ ಕೋಪ ಮತ್ತು ನೋವಿನಿಂದ ಪಡುವ ಪಾಡನ್ನು ಕಂಡು ನಮಗೆಲ್ಲ ಮತ್ತಷ್ಟು ನಗು. ಕೆಲವರಂತೂ ಕೈಗೆ ಸಿಕ್ಕರೆ ನಕ್ಕ ಹುಡುಗನ ಕೆನ್ನೆಗೆ ಬಾರಿಸಿ ಬಿಡುತ್ತಿದ್ದರು. ಆದರೆ ಆ ರೀತಿ ಏಟು ತಿನ್ನುವವರು ತೀರ ಕಡಿಮೆ. ಏಕೆಂದರೆ ಚಿಕ್ಕ ಹುಡುಗರಾದ ನಾವುಗಳು ಇವರು ಬಾರಿಸಲು ಕೈಯೆತ್ತುವುದರೊಳಗೆ ಛಂಗೆಂದು ನೆಗೆದು ಆ ಸ್ಥಳದಿಂದ ಮಾಯವಾಗಿ ಬಿಡುತ್ತಿದ್ದೆವು.

ಹುಡುಗರಾದ ನಮಗೆ ಒಬ್ಬ ಹಿರಿಯರು ಈ ರೀತಿ ನೋವಿನಿಂದ ನರಳಿದಾಗ ಏಕೆ ನಗುಬರುತ್ತಿತ್ತು. ಅದಕ್ಕೆ ಏನು ಕಾರಣ ಎಂದು ಎಷ್ಟೋ ಸಲ ಗಾಢವಾಗಿ ಯೋಚಿಸಿದ್ದೇನೆ. ಇದರ ಮನೋವೈಜ್ಞಾನಿಕ ಹಿನ್ನೆಲೆ ಏನು ಇರಬಹುದು ಎಂದೂ ಯೋಚಿಸಿದ್ದೇನೆ. ಬಹುಶಃ ಈ ರೀತಿ ಹುಡುಗರು ನಗುವುದಕ್ಕೆ ಬಹುಶಃ ಆಗಿನ ಹಿರಿಯರ ನಡವಳಿಕೆ ಕಾರಣವಾಗಿರಬೇಕು.

ನನಗೆ ತಿಳಿದಂತೆ ಆಗೆಲ್ಲ ಯಾವ ತಂದೆ ತಾಯಿಯಾಗಲೀ ಏಳೆಂಟು ವರ್ಷ ಹರೆಯದ ಮಕ್ಕಳೊಂದಿಗೆ ಸರಸವಾಗಿ ಮಾತನಾಡಿದ್ದೇ ಇಲ್ಲ. ಮಕ್ಕಳು ಆಗೆಲ್ಲ ಹಿರಿಯ ಆಜ್ಞಾಪಾಲಕರೇ ವಿನಃ, ಅವರೊಂದಿಗೆ ಸಂಭಾಷಣೆ ಮಾಡುವ ಹಕ್ಕುದಾರರಾಗಿರಲಿಲ್ಲ. ಆದ್ದರಿಂದ ಈ ರೀತಿ ಯಾವಾಗಲೂ ಗುರ್ರೆಂದು ಗಂಭೀರ ವದನರಾಗಿ ಪಡ್ಡೆ ಹುಡುಗರಿಗೆ ಬರೀ ಅಪ್ಪಣೆಗಳನ್ನು ಮಾತ್ರ ದಯಪಾಲಿಸುತ್ತಿದ್ದ ದೊಡ್ಡವರು ಬಾಗಿಲಿಗೆ ತಲೆ ಬಡಿಸಿಕೊಂಡು ನೋವಿನಿಂದ ಒದ್ದಾಡಿದಾಗ ಅದನ್ನು ಕಂಡ ಹುಡುಗರಿಗೆ ಒಳಗೊಳಗೇ ಒಂದು ರೀತಿಯ Sadistic Pleasure ಸಿಗುತ್ತಿತ್ತು ಎಂದು ಕಾಣುತ್ತದೆ. ಇದಕ್ಕಾಗಿಯೇ ಅದು ನಗುವಾಗಿ ಹೊರಹೊಮ್ಮುತ್ತಿತ್ತು ಎಂದು ನನಗೆ ಅನಿಸುತ್ತದೆ.

ಮನೆಯಲ್ಲಿ ದೊಡ್ಡವರೆಲ್ಲ ಕುಳಿತು ಮಾತನಾಡುವಾಗ ಪಡ್ಡೆಹುಡುಗರಿಗೆ ಯಾವ ರೀತಿಯಾದ ಪಾತ್ರವೂ ಇರುತ್ತಿರಲಿಲ್ಲ. ಅವರ ಮುಂದೆ ಕುಳಿತುಕೊಳ್ಳಲೂ ಸಹ ಅವಕಾಶ ಇರುತ್ತಿರಲಿಲ್ಲ.

ಮಕ್ಕಳನ್ನು ಮುದ್ದಿಸಿವುದೆಲ್ಲ ಮಗುವಿಗೆ ಸುಮಾರು ಎರಡು – ಮೂರು ವರ್ಷ ವಯಸ್ಸು ಇರುವಾಗ ಮಾತ್ರ. ಎಳೆ ವಯಸ್ಸಿನಲ್ಲಿ ಅದಕ್ಕೆ ಇವರು ಮುದ್ದಿಸಿದರೆ ಏನು ತಿಳಿಯುತ್ತಿತ್ತೋ ಅಥವಾ ಅದನ್ನು ಅನುಭವಿಸಿ ಸಂತೋಷಪಡುತ್ತಿತ್ತೋ ಯಾರಿಗೆ ಗೊತ್ತು. ಹಾಗೇ ಸಂತಸವಾಗಿದ್ದರೂ ಆ ಅನುಭವವನ್ನು ಮನದಾಳದಲ್ಲಿ ದಾಖಲಿಸಿ ಪುನಃ ರೀಕಾಲ್ (recall) ಮಾಡಿ ಅನುಭವಿಸುವುದು, ನನಗೆ ತಿಳಿದಮಟ್ಟಿಗೆ ಸಾಧ್ಯವಾಗಿಲ್ಲ. ಮನೋವಿಜ್ಞಾನಿಗಳು ಇದರ ಬಗ್ಗೆ ಹೆಚ್ಚಿನ ಪಾಂಡಿತ್ಯ ಪೂರ್ಣ ವಿಶ್ಲೇಷಣೆ ನೀಡಬಹುದು. ಆದರೆ ನನ್ನಂಥ ಅಜ್ಞನಿಗೆ ಇದರ ಬಗ್ಗೆ ಹೆಚ್ಚು ತಿಳಿದಿಲ್ಲ.

Parental Care ಎಂದು ಈ ಕಾಲದಲ್ಲಿ ಹೇಳಲ್ಪಡುವ ವಿಚಾರ ಆ ಕಾಲದಲ್ಲಿ ಈಗ ಕಾಣಿಸುವಷ್ಟು ಮಟ್ಟಿಗೆ ಪ್ರಕಟವಾಗುತ್ತಿರಲಿಲ್ಲ. ಈಗ ಒಂದು ಮಗುವನ್ನು Pre-nursery, UKG and LKG ಹೀಗೆ ಹಲವಾರು ವಿಧವಾದ ಕೆ.ಜಿ, ಕ್ವಿಂಟಾಲ್ ರೀತಿಯಲ್ಲಿ ಗಮನಿಸುತ್ತಾರೆ.

ನ್ಯೂಕ್ಲಿಯಸ್ ಫ್ಯಾಮಿಲಿ, ಒಂದೇ ಮಗು ಅಥವಾ ಹೆಚ್ಚೆಂದರೆ ಎರಡು ಮಕ್ಕಳಿರುತ್ತಾರೆ ಒಂದು ಸಂಸಾರಕ್ಕೆ. ಈ ಕಾರಣಕ್ಕೆ ತಂದೆ ತಾಯಂದಿರು ಮಕ್ಕಳ ಕಡೆ ಬಹಳ ಹೆಚ್ಚಿನ ಗಮನ ಕೊಡಬಲ್ಲರು. Micro Family Concept ಜನ ಮಾನಸದಲ್ಲಿ ಮೂಡಿರಲಿಲ್ಲ. ಮಹಾಕವಿ ಅಡಿಗರ ಮಾತಿನಲ್ಲಿ ಹೇಳುವುದಾದರೆ

“ಹುಟ್ಟಿದ್ದಕ್ಕಷ್ಟು ಗಟ್ಟಿಸಿದನು

ಗಟ್ಟಿಸಿದ್ದಕ್ಕಷ್ಟು ಹುಟ್ಟಿಸಿದನು” ಎಂಬಂತೆ ಇತ್ತು.

ಅವ್ಯಾಹತವಾಗಿ ಮಕ್ಕಳು ಜನಿಸುತ್ತಿದ್ದುವು. ಆಯಸ್ಸು ಗಟ್ಟಿಯಾಗಿದ್ದರೆ ಸಂಘರ್ಷದ ಬದುಕಿನಲ್ಲಿ ಬದುಕಿ ಮುಂದೆ ಬರುತ್ತಿದ್ದವು. ಇಲ್ಲದಿದ್ದರೆ ಅಲ್ಪಾಯುಷ್ಯದಲ್ಲೇ ತೀರಿಕೊಳ್ಳುತ್ತಿದ್ದವು. ನಾನು ಕಂಡ ಹಾಗೆ ಪ್ರತಿಯೊಬ್ಬರ ಮನೆಯಲ್ಲೂ ಒಂದೋ, ಮಕ್ಕಳು ಹುಟ್ಟುವ ಸಂಭ್ರಮ. ಇಲ್ಲದಿದ್ದರೆ ಯಾವುದೋ ಒಂದು ಮಗುವಿನ ಮರಣ – ನೀರಿನಲ್ಲಿ ಮುಳುಗಿಯೋ ಅಥವಾ ಹಿತ್ತಲಿನ ಪೊದರಿನಲ್ಲಿ ಹಾವುಚೇಳು ಕಡಿದೋ ಅಥವಾ ಯಾವುದೋ ತಿಳಿಯದ ರೋಗಗಳಿಂದ ಪೀಡಿತವಾಗಿ ಸರಿಯಾಗಿ ಔಷಧೋಪಚಾರಗಳಿಲ್ಲದೆ ಮರಣಿಸುತ್ತಿದ್ದವು. ಮಕ್ಕಳ ಜನನ ಮತ್ತು ಮರಣ ಬಹುಸಾಧಾರಣವಾಗಿ ಮತ್ತು ಯಾಂತ್ರಿಕವಾಗಿ ನಡೆಯುತ್ತಿದ್ದ ಕಾಲವದು. ಬದುಕುಳಿದರೆ ಮಾತ್ರ ಅವು ದೀರ್ಘಾಯುಷಿಯಾಗಿ ದೃಢಕಾಯರಾಗಿ ಬೆಳೆಯಲು ಅಂದಿನ ದಿನಗಳಲ್ಲಿ ಅವಕಾಶವಿತ್ತು. ತಿನ್ನುವ ಅನ್ನ, ಸೇವಿಸುವ ಗಾಳಿ, ಕುಡಿಯುವ ನೀರು ಇವೆಲ್ಲ ಯಾವ ಕಲಬೆರಕೆಯಿಲ್ಲದೆ ಮಾಲಿನ್ಯಕ್ಕೆ ಒಳಗಾಗದೇ ಯಥೇಚ್ಛವಾಗಿ ಸಿಗುತ್ತಿದ್ದರಿಂದ, ಮಕ್ಕಳು ಆರೋಗ್ಯವಂತರಾಗಿ ಬೆಳೆಯುತ್ತಿದ್ದವು. ಅರ್ಧ ಕಿ.ಮೀದೂರ ಕ್ರಮಿಸಲೂ ಸಹ ಈಗಿನಂತೆ ವಾಹನ ಉಪಯೋಗಿಸುತ್ತಿರಲಿಲ್ಲ. ಪಡ್ಡೆಹುಡುಗರಂತೂ ಒಂದೆರಡು ಕಿ.ಮೀ ದೂರವನ್ನು ಓಡುತ್ತಲೇ ಕ್ರಮಿಸುತ್ತಿದ್ದರು. ದಿನವಿಡೀ ಗದ್ದೆ, ಹೊಲ ಅಥವಾ ಶಾಲೆಗೆ ನಡೆದುಕೊಂಡೇ ಹೋಗಬೇಕಾಗಿದ್ದರಿಂದ ಬೇರೆ ವ್ಯಾಯಾಮದ ಅವಶ್ಯಕತೆಯೇ ಇರುತ್ತಿರಲಿಲ್ಲ. ಅಂದಿನ ಜೀವನಕ್ರಮ ಈಗಿನಂತೆ ಒಂದು ಬಗೆಯ ಅವಸರ, ಧಾವಂತದಿಂದ ಕೂಡಿರಲಿಲ್ಲ. ಆಗಿನ ಜೀವನಕ್ರಮ ಒಂದು ಬಗೆಯ ನಿಧಾನವಾದ ಲಯದಲ್ಲಿ ನಡೆಯುತ್ತಿತ್ತು. ಇಷ್ಟೆಲ್ಲಾ ಪೀಠಿಕಾ ಪ್ರಕರಣ ಏಕೆಂದರೆ, ಅದು ಶುರು ಆದದ್ದು ಮನೆ ಹೆಬ್ಬಾಗಿಲಿನಿಂದ. ಆ ಬಾಗಿಲ ವಿಷಯ ಬಂದಾಗ ಅದು ನನ್ನ ನೆನಪುಗಳನ್ನು ಆಳವಾಗಿ ಕೆದಕಿ, ಇಷ್ಟೆಲ್ಲಾ ಚಿತ್ರಗಳನ್ನು ಮೇಲಕ್ಕೆ ತಂದು ಬಿಟ್ಟಿತು. ಈಗ ಮನೆ ಹೆಬ್ಬಾಗಿಲಿನಿಂದ ಪುನಃ ಪ್ರಾರಂಭ ಮಾಡುತ್ತೇನೆ.

ಅಮಾವಾಸ್ಯೆ ಬಂದರೆ ಸಾಕು ಆ ದಿನ ನನ್ನ ಅಪ್ಪ ಹಿತ್ತಲಿನ ಭಾವಿಯಲ್ಲಿ ನೀರು ಸೇದಿ ಸ್ನಾನ ಮಾಡಿ, ಸಾವಕಾಶವಾಗಿ ನಡುಹಜಾರದಲ್ಲಿ ಕುಳಿತು ನಾಮಧಾರಣೆ ಮಾಡಿಕೊಂಡು ತರ್ಪಣಕ್ಕೆ ಅಣಿಯಾಗುತ್ತಿದ್ದರು. ಈ ಕಾರ್ಯಕ್ರಮ ಶುರುವಾಗುವಾಗ, ಎಲ್ಲರಿಗೂ ಮನೆಯ ಹೆಬ್ಬಾಗಿಲಿನಿಂದ ಒಳಕ್ಕೆ ಪ್ರವೇಶವನ್ನು ನಿಷೇಧಿಸಲಾಗುತ್ತಿತ್ತು. ಏನಿದರೂ ಪಕ್ಕದ ಹಿತ್ತಲ ಬಾಗಿಲನ್ನು ಉಪಯೋಗಿಸಬೇಕು. ಕೆಲವು ದೊಡ್ಡವರು ಹೆಬ್ಬಾಗಿಲಿನಿಂದ ಒಳಗೆ ಬರಬಹುದಾಗಿತ್ತು. ಹುಡುಗರಿಗಂತೂ ಪ್ರವೇಶ  ಕಡ್ಡಾಯವಾಗಿ ನಿಷೇಧ. ನನ್ನಂಥ ಪಡ್ಡೆಗಳಿಗೆ ಈ ತರ್ಪಣ ಬಿಡುವಾಗ ಅಪ್ಪ ಏನು ಮಾಡುತ್ತಾರೆ ಎಂದು ತಿಳಿಯುವ ಕುತೂಹಲ. ಆದರೆ ನನ್ನ ಕುತೂಹಲವನ್ನು ಕೇಳುವವರಾರೂ ಇರಲಿಲ್ಲ. ಆಗೆಲ್ಲ ದೊಡ್ಡವರ ಮಾತೆಂದರೆ ಸುಗ್ರೀವಾಜ್ಞೆ. ಉಲ್ಲಂಘಿಸುವ ಮಾತೇ ಇಲ್ಲ. ಹೀಗೆ ಒಂದು ಅಮಾವಾಸ್ಯೆ ದಿನ ಅಪರಾನ್ಹ, ನನ್ನ ತಂದೆ ಹಜಾರದಲ್ಲಿ ಕುಳಿತು ತರ್ಪಣ ಮಾಡಲು ಸಿದ್ಧರಾಗಿದ್ದಾರೆ. ಬೆಳಿಗ್ಗಿನಿಂದ ಹಿತ್ತಲ ಬಾಗಿಲ ಮೂಲಕವೇ ಓಡಾಡಿಕೊಂಡಿದ್ದ ನನಗೆ ಇಂದು ಹೇಗಾದರೂ ಮಾಡಿ ಮುಂದಿನ ಬಾಗಿಲಿನಿಂದ ಒಳಗೆ ನುಗ್ಗಿಬಿಡಬೇಕು. ಅಪ್ಪ ಏನು ಮಾಡುತ್ತಿದ್ದಾನೆ ಎಂದು ನೋಡಿಯೇ ಬಿಡಬೇಕು ಎಂಬ ಛಲ ಬಂತು. ಹಾಗೆ ಹೀಗೆ ಸಂದರ್ಭ ನೋಡಿಕೊಂಡು ಅರ್ಧ ಓರೆಯಾಗಿ ಮುಚ್ಚಿದ್ದ ಹೆಬ್ಬಾಗಿಲನ್ನು ತಳ್ಳಿಕೊಂಡು ಇದ್ದಬದ್ದ ಧೈರ್ಯವನ್ನು ಒಗ್ಗೂಡಿಸಿ ಒಳಕ್ಕೆ ನುಗ್ಗಿಯೇ ಬಿಟ್ಟೆ. ಇನ್ನೇನು ನಡು ಹಜಾರದಲ್ಲಿ ತರ್ಪಣ ಮಾಡುತ್ತಿದ್ದ ಅಪ್ಪನ ಹಿಂಬದಿಯಿಂದ ಹಿತ್ತಲಕಡೆ ಓಡೋಣ ಎಂದು ಒಳಗೆ ನುಗ್ಗಿದ ನನ್ನನ್ನು ಅಲ್ಲಿಯೇ ಇದ್ದ ನನ್ನ ತಾಯಿ ನ್ನನ ಕೈಹಿಡಿದು ತಡೆದುಬಿಟ್ಟಳು. “ಏಯ್ ಏನೋ ಗೂಳಿ ತರಾ ನುಗ್ಗುತ್ತಿದ್ದೀಯಾ, ಹೋಗೋ ಹಿಂದೆ” ಎಂದು ಗದರಿದಳು.

ಈ ಗಲಾಟೆಯನ್ನು ಕೇಳಿದ ನನ್ನ ಅಪ್ಪ ತಿರುಗಿನೋಡಿ “ಯಾಕೆ ಅವನನ್ನು ತಡೆಯುತ್ತೀಯೆ, ಏಯ್ ಬಾರೋ ಇಲ್ಲಿ ಬಾ ಪಕ್ಕದಲ್ಲಿ ಕೂರು” ಅಂದರು. ನನ್ನ ಅಪ್ಪನ ಈ ಮಾತನ್ನು ಕೇಳಿ ನನ್ನ ತಾಯಿಗೆ ದಿಗ್ಭ್ರಮೆ ಆಯಿತು. ತರ್ಪಣ ಬಿಡುವಾಗ ಮಗುವನ್ನು ಪಕ್ಕದಲ್ಲಿ ಕೂಡಿಸುವುದೆಂದರೆ ಎಂಥಾ ಅಪಚಾರ ಎಂದು ಭ್ರಮಿಸುತ್ತಿದ್ದಾಗಲೇ ನಾನು ಅಮ್ಮನ ಕೈ ಬಿಡಿಸಿಕೊಂಡು ಬಹಳ ವಿನಯದಿಂದ ಅಪ್ಪನ ಬಳಿ ಕೂತೆ. ನನಗೆ ಆಗ ಮನಸ್ಸಿನಲ್ಲಿ ಭಯ ಮತ್ತು ಆಶ್ಚರ್ಯ ಎರಡೂ ಏಕಕಾಲಕ್ಕೆ ಉಂಟಾಯಿತು.

ಪಕ್ಕದಲ್ಲಿದ್ದ ನನ್ನನ್ನು ಕುರಿತು ನನ್ನ ಅಪ್ಪ ಹೇಳಿದ ಮಾತುಗಳಿವು. ಚಿಕ್ಕಂದಿನಲ್ಲಿ ಕೇಳಿದ  ಆ ಮಾತುಗಳೂ ಇಂದೂ ನನ್ನ ಕಿವಿಗಳಲ್ಲಿ ಮಾರ್ದನಿಸುತ್ತಲಿವೆ. ನನ್ನ ಅಪ್ಪನ ಆ ಮಾತುಗಳನ್ನು ಅಂದು ನಾನು ಕೇಳಿದಂತೆಯೇ, ಯಾವ ಮಾರ್ಪಾಡುಗಳೂ ಮಾಡದೆ, ನನ್ನ ಮನದಾಳದಿಂದ ರಿಕಾಲ್ ಮಾಡಿ ನಿಮ್ಮ ಮುಂದೆ ಇಡುತ್ತಿದ್ದೇನೆ.

“ನೋಡೋ ಈ ಅಮಾವಾಸ್ಯೆ ತರ್ಪಣ ಅಂದರೆ ನಮ್ಮ ಪಿತೃಗಳಿಗೆ ಅವರ ಹೆಸರುಗಳನ್ನು ಹೇಳಿ ಎಳ್ಳು ನೀರು ಬಿಡುವ ತರ್ಪಣ ನಾನು ನನ್ನ ತಂದೆಗೆ ಪಿತಾ ತರ್ಪಯಾಮಿ ಎಂದು ತರ್ಪಣ ಬಿಡುತ್ತೇನೆ. ಹೀಗೆ ಮಾತಾ, ಮಾತಾಮಹ, ಪ್ರಪ್ರಿತಾಮಹ ಎಂದು, ಅಪ್ಪ, ಅವರ ಅಪ್ಪ, ತಾಯಿಯ ಅಪ್ಪ, ತಾಯಿಯ ತಾತ ಹೀಗೆ ತರ್ಪಣ ಬಿಡುತ್ತೇನೆ. ಇದೆಲ್ಲ ಆದನಂತರ ಕಡೆಯಲ್ಲಿ ಜ್ಞಾತಾ, ಅಜ್ಞಾತಪಿತೃನ್ ತೃರ್ಪಯಾಮಿ ಅಷ್ಟಲ್ಲದೇ, ಜ್ಞಾತಾ ಅಜ್ಞಾತಾಪಿತೃ ಪತ್ನೀ.., ಎಂದು ಹೇಳಿ ತರ್ಪಣ ಬಿಟ್ಟು, ಈ ಕಾರ್ಯವನ್ನು ಮುಗಿಸುತ್ತೇನೆ.”

“ಈ ಜ್ಞಾತಾ ಅಜ್ಞಾತ ಪಿತೃ ತರ್ಪಯಾಮಿ ಅಂದರೇನು ಗೊತ್ತೋ ನಿನಗೆ”

“ನಿನಗೆ, ನಾನು ಅಂದರೆ ನಿನ್ನ ಅಪ್ಪ ಗೊತ್ತು. ನನಗೆ ನನ್ನ ಅಪ್ಪ ಅಂದರೆ ನಿನ್ನ ತಾತ ಗೊತ್ತು. ನೀನು ನಿನ್ನ ತಾತನನ್ನು ನೋಡಿಲ್ಲ. ಏಕೆಂದರೆ ನೀನು ಹುಟ್ಟುವ ಮೊದಲೇ ಅವನು ತೀರಿಕೊಂಡಿದ್ದ ನಾನೂ ನಿನ್ನಹಾಗೆ ನನ್ನ ತಾತನನ್ನು ಕಂಡಿಲ್ಲ. ಆದರೆ ತಾತನೊಬ್ಬನಿದ್ದ ಎಂದು ಅವನನ್ನು ಕಂಡಿದ್ದ ನನ್ನ ಅಪ್ಪನಿಂದ ಕೇಳಿತಿಳಿದಿದ್ದೇನೆ.”

“ಹೀಗೆ ಎಲ್ಲಿಯವರೆಗೆ ತಿಳಿಯಬಹುದು, ಬಹುಶಃ ಒಂದೇಳು ತಲೆಮಾರಿನವರೆಗೆ ಹೋಗಬಹುದು. ಅದಕ್ಕೂ ಹಿಂದೆ ಯಾವನು ಪಿತೃ? ಎಲ್ಲಿದ್ದ? ಇದೊಂದು ತಿಳಿಯದು. ಈ ಸಮಸ್ಯೆಯಿಂದಲೇ ನಮ್ಮ ಹಿಂದಿನವರು ಜ್ಞಾತ ಅಂದರೆ ತಿಳಿದಿರುವ ಮತ್ತು ಅಜ್ಞಾತ ಎಂದರೆ ತಿಳಿಯದಿರುವ ಎಲ್ಲಾ ಪಿತೃಗಳಿಗೂ ತರ್ಪಯಾಮಿ ಎಂದು ಹೇಳಿದ್ದಾರೆ. ಸಾಲದ್ದಕ್ಕೆ ಅಜ್ಞಾತ ಪಿತೃಗಳ ಅಜ್ಞಾತ ಪತ್ನಿಯರನ್ನೂ ಸೇರಿಸಿದ್ದಾರೆ. ಅದರಿಂದ ಎಲ್ಲಿಯವರೆಗೆ ತಿಳೀದಿದೆಯೋ ಅಲ್ಲಿವರೆಗೆ ಮಾತ್ರ ಕುಲಗೋತ್ರ ಎಲ್ಲ. ಅದರ ಹಿಂದಿನದೆಲ್ಲ ಅಜ್ಞಾತ, ಗೊತ್ತಾಯಿತ. ಇದು ಈಗ ನಿನಗೆ ತಿಳಿಯುವುದಿಲ್ಲ. ಮುಂದೆ ನಿನಗೆ ವಯಸ್ಸಾದ ಮೇಲೆ, ತನಗೆ ತಾನೇ ತಿಳಿಯುತ್ತದೆ. ಈಗ ಹೋಗು ನಿನ್ನ ಕೆಲಸ ನೋಡು” ಎಂದು ಬಿಟ್ಟರು.

ಇದನ್ನು ಕೇಳಿ ನನ್ನ ತಾಯಿ ನನ್ನ ಅಪ್ಪನೊಂದಿಗೆ ವಾದಕ್ಕೆ ಶುರುಮಾಡಿದರು. “ಸುಮ್ಮನೆ ನಿಮ್ಮ ವಿತಂಡಾವಾದದಿಂದ ಹುಡುಗನಿಗೆ ಏನೇನೋ ಹೇಳಿಕೊಡಬೇಡಿ. ಜ್ಞಾತಾ ಅಜ್ಞಾತ ಪಿತೃ ಎಂದರೆ, ಮಕ್ಕಳಿಲ್ಲದೇ ನಮ್ಮ ವಂಶದಲ್ಲಿ ಆಗಿಹೋದವರಿಗೆ ಇರಬೇಕು. ಪಿತೃಗಳೆಲ್ಲಾ ನೀವು ಹೇಳುವಂತೆ ಅಜ್ಞಾತರಲ್ಲ” ಎಂದು ತಗಾದೆ ತೆಗೆದರು.

ಅದಕ್ಕೆ ನನ್ನ ಅಪ್ಪ, “ನೀನು ಹೇಳುವ ಹಾಗೆಯೂ ಇರಬಹುದು ಆದರೆ ನಾನು ಹೇಳಿದ್ದೂ ಸುಳ್ಳಲ್ಲ. ಅದು ವಾಸ್ತವ” ಎಂದರು.

ಅತ್ಯಂತ ಸಂಪ್ರದಾಯಸ್ಥರಾಗಿ, ಪ್ರತಿ ಅಮಾವಾಸ್ಯೆಗೂ, ತಪ್ಪದೇ ಪಿತೃತರ್ಪಣ ಮಾಡಿ, ಎಲ್ಲ ಸಂಪ್ರದಾಯಗಳನ್ನೂ ಮತ್ತು ಅವುಗಳು ವಿಧಿಸಿದ್ದ ಕಟ್ಟುಪಾಡುಗಳನ್ನೂ ತಪ್ಪದೇ ಅನುಸರಿಸುತ್ತಿದ್ದ ನನ್ನ ಅಪ್ಪನ ಮನಸ್ಸಿನಲ್ಲಿದ್ದದ್ದು ಇಂಥ ಕ್ರಾಂತಿಕಾರಿಯಾದ ವಿಚಾರಧಾರೆ. ವೈಚಾರಿಕತೆ ಬರೀ ಇಂದಿನವರ ಸ್ವತ್ತಲ್ಲ. ವಿಚಾರವಾದಿ ಬುದ್ಧಿಜೀವಿ ಅಂದ ತಕ್ಷಣ ನಮ್ಮ ಕಣ್ಣಮುಂದೆ ಬರುವುದು, ಕುರುಚಲು ಗಡ್ಡಬಿಟ್ಟು ಉದ್ದನೆನಿಲುವಂಗಿ ಧರಿಸಿ, ಹೆಗಲಿಗೊಂದು ಹಸುಬೆ ಚೀಲ ನೇತುಹಾಕಿಕೊಂಡು ಹಳೆಯದೆಲ್ಲವನ್ನೂ ಧಿಕ್ಕರಿಸಿ / ತಿರಸ್ಕರಿಸಿ, ಹೊಸದೇನನ್ನೂ ಸರಿಯಾಗಿ ಹೇಳಲಾಗದ ಒಂದು ಜೋಭದ್ರ ಮುಖ. ನಾನು ಜನಿವಾರವನ್ನು ಕಿತ್ತು ಹಾಕಿಬಿಟ್ಟೆ. ನಾನು ಜಾತಿ ಚೌಕಟ್ಟನ್ನು ಮೀರಿದ್ದೇನೆ ಎಂದು ದಪ್ಪಗಂಟಲಿನಿಂದ ಕೂಗೆಬ್ಬಿಸಿ, ಬುದ್ಧಿಜೀವಿಯ ಮುಖವಾಡ ಧರಿಸಬೇಕಿಲ್ಲ ಜನಿವಾರ ಕಿತ್ತು ಬಿಸುಟಾಕ್ಷಣಕ್ಕೆ ಯಾರೂ ಬಸವಣ್ಣನವರಾಗುವುದಿಲ್ಲ. ಬಟ್ಟೆಕಿತ್ತೆಸೆದು ಬತ್ತಲೆಯಾದವರು ಯಾರೂ ಗೊಮ್ಮಟನಾಗಿಲ್ಲ. ವೈಚಾರಿಕತೆ, ಕ್ರಾಂತಿಕಾರಿ ಚಿಂತನೆ ಅತ್ಯಂತ ಸಂಪ್ರದಾಯಸ್ಢಥರ ಮನದಲ್ಲೂ ಆಗಲೇ ಮೂಡುತ್ತಿತ್ತು, ನಿಮ್ಮ ಚಿಂತನಾ ಪಥ ಹೇಗೆ ಸಾಗುತ್ತಿದೆ ಎಂಬುದು ಮುಖ್ಯವೇ ಹೊರತು ನಿಮ್ಮ ಬಾಹ್ಯ ವೇಷಗಳು ಮುಖ್ಯವಲ್ಲ. ಇದಕ್ಕಿಂತ ಭಿನ್ನವಾಗಿ, ಇದನ್ನೂ ಮೀರಿದ ವಿಚಾರಗಳಿದ್ದರೆ ಅದು ಸಹೃದಯರಾದ ಓದುಗರಿಗೆ ಬಿಟ್ಟಿದ್ದು. ಎಷ್ಟೇ ಸಂಪ್ರದಾಯಸ್ಥನಾಗಿ, ಅದಕ್ಕೆ ತಕ್ಕ ವೇಷ, ಭೂಷಣ ಆಚಾರಗಳನ್ನು ಪಾಲಿಸುತ್ತಿದ್ದವನ ಮನದಲ್ಲಿಯೂ ವೈಚಾರಿಕತೆಯ ಕಿಡಿ ಹೊತ್ತುತ್ತಿತ್ತು ಎಂದು ವೇದ್ಯವಾಗಿದೆ.

ಚಿತ್ರ: ಗಂಗೂಲಿ ಬಿಸ್ವರೂಪ

Rating
No votes yet

Comments

Submitted by kavinagaraj Tue, 03/11/2014 - 09:00

ಒಂದು ಹಳ್ಳಿಮನೆಯ ಸಂಪ್ರದಾಯಸ್ಥ ನಡವಳಿಕೆಯ ಸುಂದರ ಚಿತ್ರಣ. ಆಗೆಲ್ಲಾ ಉಪ್ಪು ಮಣ್ಣಿನ ಗೋಡೆ ಕಟ್ಟುತ್ತಿದ್ದು ಸಾಮಾನ್ಯವಾಗಿ ಚಿಕ್ಕ ಬಾಗಿಲುಗಳು ಇರುತ್ತಿದ್ದವು. ಸುಮಾರು 5-6 ಅಡಿ ಅಗಲದ ಗೋಡೆಗಳು, ಕಿಟಕಿ ಇರುವಲ್ಲಿ ಇಬ್ಬರು ಧಾರಾಳವಾಗಿ ಕೂರುವಷ್ಟು ಸ್ಥಳ, ಕೆತ್ತನೆಯ ದಪ್ಪ ಭಾರದ ಬಾಗಿಲುವಾಡ, ಕಬ್ಬಿಣದ ಚಿಲಕ, ಈಗಿನವರು ಬಹುಷಃ ಕಂಡಿರಲಾರರು!

Submitted by naveengkn Tue, 03/11/2014 - 15:05

ಮನೆಯ‌ ಚಿತ್ರಣ‌ ಅದ್ಭುತವಾಗಿತ್ತು, ನೆನಪುಗಳ‌ ನಿಖರತೆಗೆ ಮರುಹೊದೆನು,
ಧನ್ಯವಾದಗಳೊಂದಿಗೆ ನವೀನ್ ಜೀ ಕೇ