ಅಮೇರಿಕವೆಂಬ ಹೆಣದ ಬಟ್ಟೆ
ಅನಿವಾಸಿ ಅಮೇರಿಗನ್ನಡಿಗರ (ಭಾರತೀಯರ) ಬದುಕನ್ನು ತಿಳಿಹಾಸ್ಯದ ವಿಡಂಬಣೆಯಲ್ಲಿ ಬಿಚ್ಚುತ್ತಾ ಸಾಗುವ ಕತೆ, ಅಂತ್ಯದ ವೇಳೆಗೆ ವಾಂತಿ ಬರುವಂತೆ ಮಾಡಿ ಉಸಿರುಗಟ್ಟಿಸುತ್ತದೆ. ಶ್ರೀಧರ, ರಶ್ಮಿ ಮತ್ತು ನಾಗೇಶರೆಂಬ ಮೂರು ಪಾತ್ರಗಳಲ್ಲಿ - ನಾಗಮಂಗಲದಂಥ ಹಳ್ಳಿ ಮತ್ತು ಅಮೇರಿಕದಂಥ ಆಧುನಿಕತೆ; ಅಮೇರಿಕದ ಸಾಫ್ಟ್ ವೇರ್ ಮತ್ತು ವೈದ್ಯಕೀಯ ಕ್ಷೇತ್ರದಲ್ಲಿ ಭಾರತೀಯರ ಬದುಕು; ಗಂಡು-ಹೆಣ್ಣುಗಳ ಮಾನಸಿಕ ಮತ್ತು ದೈಹಿಕ ಸಂಬಂಧಗಳು; - ಇವುಗಳನ್ನು ಸಂಕೀರ್ಣವಾಗಿ ಬಿಚ್ಚುತ್ತಾ, ಬಿಡುಗಡೆ ಮತ್ತು ಪಲಾಯನದ ನಡುವಿನ ವ್ಯತ್ಯಾಸ ಮರೆತು ಹೋಗಿರುವ ನಮ್ಮ ಪೀಳಿಗೆಯ ಬದುಕನ್ನು ತೆರೆದಿಟ್ಟು ನೂರಾರು ಪ್ರಶ್ನೆಗಳನ್ನು ಬಡಿದೆಬ್ಬಿಸುತ್ತಾರೆ, ಕಾಗಿನೆಲೆ.
ನಾಗಮಂಗಲದಲ್ಲಿ ಬೆಳೆವ ರಶ್ಮಿ ಮತ್ತು ಶ್ರೀಧರ - ಅವಳಿ ಜವಳಿ; ರಶ್ಮಿ ಸಾಫ್ಟ್ ವೇರಿಯಾದರೆ, ಶ್ರೀಧರ ಡಾಕ್ಟರಾಗುತ್ತಾನೆ; ಮೊದಲು ರಶ್ಮಿ, ನಂತರ ಶ್ರೀಧರ ಅಮೇರಿಕಕ್ಕೆ ಬರುತ್ತಾರೆ. ಇಬ್ಬರ ಪ್ರಪಂಚಗಳು ಸಂಪೂರ್ಣ ಬೇರೆ ಬೇರೆ. ಒಮ್ಮೆಯೂ ಭೇಟಿಯಾಗುವುದಿಲ್ಲ, ಮತ್ತು ಫೋನಿನಲ್ಲಿ ಸಿಗುವುದೂ ಕಡಿಮೆಯೇ. ನಾಗೇಶ ಇವರಿಗೆ ನಾಗಮಂಗಲದಲ್ಲಿ ನೆರೆಯವ, ವಯಸ್ಸಿನಲ್ಲಿ ದೊಡ್ಡವ, ಆತನೂ ಸಾಫ್ಟ್ ವೇರಿಯಾಗಿ ಅಮೇರಿಕದಲ್ಲಿರುತ್ತಾನೆ. ಶ್ರೀಧರನ ಪ್ರಪಂಚದಲ್ಲಿ ಬೆಟ್ಟಿ ಎಂಬ ಬಿಳಿ ಹೆಣ್ಣು ಬರುತ್ತಾಳೆ, ಘೂಗೆ ಎಂಬ ಮುಂಬೈನ ಡಾಕ್ಟರ್ (ರಸಿಕ ಮತ್ತು ಹೃದ್ರೋಗಿ) ಬರುತ್ತಾನೆ. ರಶ್ಮಿಯ ಜೀವನದಲ್ಲಿ ನಾಗೇಶ ಬರುತ್ತಾನೆ. ಅಮೇರಿಕದ ವೈದ್ಯಕೀಯ ಮತ್ತು ಸಾಫ್ಟ್ ವೇರ್ ಲೋಕದಲ್ಲಿ ನಡೆವ ದಿನನಿತ್ಯದ ವ್ಯವಹಾರಗಳು, ಹರಟೆಗಳು, ಹಾದರಗಳು, ಏರಿಳಿತಗಳು - ಇವುಗಳನ್ನು ತಿಳಿಹಾಸ್ಯದ ವಿಡಂಬಣೆಯಲ್ಲಿ ಬಣ್ಣಿಸುತ್ತಾ, ಈ ಮೂರೂ ಪಾತ್ರಗಳನ್ನು ಪರಿಚಯಿಸುತ್ತ ಬೆಳೆಸುತ್ತ ಹೋಗುತ್ತಾರೆ. ಕಾದಂಬರಿಯ ಉತ್ತರಾರ್ಧದಲ್ಲಿ ನಡೆಯುವ ಘಟನೆಗಳು ಮತ್ತು ಅವು ಉಂಟು ಮಾಡುವ ತಲ್ಲಣಗಳೇ ಕಾದಂಬರಿಯ ಜೀವಾಳ.
ಈ ಕಾದಂಬರಿ ಕನ್ನಡ ಸಾಹಿತ್ಯಕ್ಕೆ ವಿಶಿಷ್ಟವಾದದ್ದು. ಹಳ್ಳಿಯಿಂದ ಬೆಂಗಳೂರಿಗೆ ಬಂದ ಕೈಲಸಂ ರ ಬೋರೇಗೌಡನ ಹಾಡು, ಹನೇಹಳ್ಳಿಯಿಂದ ಮುಂಬೈಗೆ ಬಂದ ಚಿತ್ತಾಲರ ಶಿಕಾರಿ ಕಾದಂಬರಿ, ಭಾರತದಿಂದ ಇಂಗ್ಲಂಡಿಗೆ ಹೊರಟು ನಿಂತ ಶಾಂತಿನಾಥ ದೇಸಾಯಿಯವರ ಕ್ಷಿತಿಜದ ಕತೆ - ಹೀಗೆ ಬೆಳೆಯುತ್ತಿರುವ ಆಧುನಿಕ ಕನ್ನಡ ಸಾಹಿತ್ಯಕ್ಕೆ ಅಮೇರಿಕದಲ್ಲೇ ನೆಲೆಸಿರುವ ಮೊದಲ ಪೀಳಿಗೆಯ ಯುವ ಕನ್ನಡಿಗರ ಕಾದಂಬರಿಯನ್ನು ಕಾಗಿನೆಲೆ ಸೇರಿಸಿದ್ದಾರೆ. ಕಾದಂಬರಿಯಲ್ಲಿ ಯಥೇಚ್ಛವಾಗಿ ಇಂಗ್ಲೀಷ್ ಪದಗಳನ್ನು ಸಕಾರಣವಾಗಿಯೇ ಯಾವ ಮಡಿಯಿಲ್ಲದೇ ಉಪಯೋಗಿಸಿ, ಕೆಲವೇ ಕೆಲವು ಇಂಗ್ಲೀಷ್ ಶಬ್ದಗಳನ್ನು ಪ್ರಯತ್ನಪೂರ್ವಕವಾಗಿ ಕನ್ನಡೀಕರಿಸಿ (ಡಾಕ್ಟರ್ = ಧನ್ವಂತ್ರಿ, ಸಾಫ್ಟ್ ವೇರ್ = ಮೃದುಯಂತ್ರಿ, ಕಾಲೇಜ್ = ಗುರುಕುಲ, ಲ್ಯಾಪ್ ಟಾಪ್ = ತೊಡೆಮೇಲಿಗ, ವಾರ್ಡು = ಪಾಳಯ) ಕಾದಂಬರಿಗೆ ಹೊಸ ಭಾಷೆಯನ್ನೇ ತರುತ್ತಾರೆ. ಅವರು ಧನ್ವಂತ್ರಿ, ಪಾಳಯ ಅಂತ ಬರೆಯದೇ ಡಾಕ್ಟರ್, ವಾರ್ಡು ಅಂತ ಬರೆದಿದ್ದರೆ ಕಾದಂಬರಿ ಈಗ ಮಾಡುವ ಪರಿಣಾಮವನ್ನು ಮಾಡುತ್ತಿರಲಿಲ್ಲವೇನೋ ಅಂತ ಅನಿಸದೇ ಇರದು. (ಅವರೇ ಮುನ್ನುಡಿಯಲ್ಲಿ ಬರೆದಿರುವಂತೆ) ಇಂಗ್ಲೀಷ್ ಭಾಷೆ ಮತ್ತು ಸಂಸ್ಕೃತಿ ನಮ್ಮಲ್ಲಿ ಮಾಡಿರುವ ವಿಪ್ಲವ ಮತ್ತು ಅತಂತ್ರ ಸ್ಥಿತಿಯನ್ನು, ನಮ್ಮದಲ್ಲದ್ದನ್ನು ನಮ್ಮದಾಗಿಸಿಕೊಳ್ಳುವ ಕ್ರಿಯೆ ಮಾಡುವ ಕಿರಿಕಿರಿಯನ್ನು ಈ ಕನ್ನಡೀಕರಣ ಕನ್ನಡಿ ಹಿಡಿಯುತ್ತದೆ.
ಇನ್ನೊಂದು ಮಾತು. ಇಂಗ್ಲೀಷಿನಲ್ಲಿ ಬರೆಯುವ ಅವಾರ್ಡು ವಿಜೇತ ಭಾರತೀಯರ (ನಿವಾಸಿ ಮತ್ತು ಅನಿವಾಸಿ) ಎಷ್ಟೋ ಕತೆ ಕಾದಂಬರಿಗಳಿಗಿಂತ ಈ ಕಾದಂಬರಿ ತುಂಬ ಚೆನಾಗಿ ಮೂಡಿಬಂದಿದೆ. ಏಕೆಂದರೆ, ಆ ಬರಹಗಾರರು ಬರೆಯುವಾಗ ಅವರ ದೄಷ್ಟಿಯಲ್ಲಿರುವವರು ಪಾಶ್ಚಾತ್ಯರು, ಪಶ್ಚಿಮವನ್ನು ಮೆಚ್ಚಿಸುವ ಉದ್ದೇಶವಿರುವವರು. ಕಾಗಿನೆಲೆಯವರಿಗೆ ಆ ಭಯವೇ ಇಲ್ಲ, ಅವರು ಕನ್ನಡದವರನ್ನೂ ಮೆಚ್ಚಿಸಬೇಕಿಲ್ಲ, ಪಶ್ಚಿಮವನ್ನೂ ಮೆಚ್ಚಿಸಬೇಕಿಲ್ಲ. ಅಮೇರಿಗನ್ನಡದ ಯುವಜನತೆಯ ಸುಖ, ಭಯ, ದಿಗಿಲುಗಳನ್ನು ಯಾವ ಮುಲಾಜಿಲ್ಲದೇ ತಮ್ಮ ಟ್ರೇಡ್ ಮಾರ್ಕ್ ಶೈಲಿಯಲ್ಲಿ ಬ್ಲಾಗಿನ ಬರಹಗಳಂತೆ ಬರೆದು ಮುಗಿಸುತ್ತಾರೆ.
ಶ್ರೀಧರ ಮತ್ತು ನಾಗೇಶನ ಪಾತ್ರ ತುಂಬ ವಾಸ್ತವಿಕವಾಗಿ ಬಂದಿವೆ; ಕಾದಂಬರಿಯಲ್ಲಿನ ತುಂಬ ಸೂಕ್ಷ್ಮ ಪಾತ್ರ ರಶ್ಮಿಯದು -ಪಾತ್ರ ಸ್ವಲ್ಪ ಕೃತಕ ಎನಿಸಿದರೂ ಅದು ಕಾದಂಬರಿಯ ವಸ್ತುವಿಗೆ ಅನಿವಾರ್ಯವಾಗಿದೆ. ಯಾವುದನ್ನೂ ವ್ಯಾಚ್ಯ ಮಾಡದೇ ಕಾದಂಬರಿ ಎಷ್ಟೊಂದು ದಿಟ್ಟ ಪ್ರಶ್ನೆಗಳನ್ನು ಎತ್ತುತ್ತೆ!
ಶ್ರೀಧರ ಪ್ರೇಮಿಸದೇ ಬೆಟ್ಟಿಯನ್ನು ಬಸಿರು ಮಾಡುವುದು, ಬಸಿರು ಗೊತ್ತಾದ ಮೇಲೆ ಮದುವೆಯಾಗಲೇ ಎಂದು ಯೋಚಿಸುವುದು; ರಶ್ಮಿ ಕೂಡ ಪ್ರೇಮಿಸದೇ ನಾಗೇಶನ ಬಸಿರು ಪಡೆದಿರಬಹುದೆಂದು ಓಡಾಡುವುದು, ಹಲುಬುವುದು - ಪ್ರೇಮ, ಲೈಂಗಿಕತೆ ಮತ್ತು ಬಂಧನಗಳ ಹೊಸ ಲೋಕವನ್ನೇ ಅಮೇರಿಕ ತೆರೆಸುತ್ತದೆ. ಇದೇ ರಶ್ಮಿ- ನಾಗೇಶ ಭಾರತದಲ್ಲಿದ್ದರೆ living together ಮಾಡುತ್ತಿದ್ದರೇ; ಶ್ರೀಧರ ನರ್ಸನ್ನು ಬಸಿರು ಮಾಡಿ ಬೆಂಗಳೂರಿನಲ್ಲಿ ಆರಾಮವಾಗಿ ಅದೇ ಆಸ್ಪತ್ರೆಯಲ್ಲೇ ಕೆಲಸ ಮಾಡಿಕೊಂಡು ಬದುಕಲು ಆಗುತ್ತಿತ್ತೇ. ಭಾರತದಲ್ಲಿ ಅಸಾಧ್ಯವೆನಿಸುವಂಥದು ಅಮೇರಿಕದಲ್ಲಿ 'ಸಹಜ' ಎನಿಸಲು ಶುರುವಾಗುತ್ತೆ.
ನಾಗಮಂಗಲದಲ್ಲಿ ಪರಸ್ಪರ ಈರ್ಷೆ ಇದ್ದರೂ ಒಬ್ಬರನ್ನೊಬ್ಬರು ಬಿಟ್ಟುಕೊಡದ (ರಶ್ಮಿಯ ಫೋಟೊ ಪ್ರಕರಣ, ಶ್ರೀಧರನ ಸೈಕಲ್ ಪ್ರಕರಣ) ಅವಳಿಗಳು ಅಮೇರಿಕದಲ್ಲಿ ಪರಸ್ಪರ ಫೋನಿನಲ್ಲೂ ಕ್ಷೇಮ ವಿಚಾರಿಸದ ಸ್ಥಿತಿಗೆ ಬರುವುದು; ತಂದೆ ಸತ್ತಾಗ ಭಾವೋದ್ವೇಗವಿಲ್ಲದೇ ಇಬ್ಬರೂ ವ್ಯವಹಾರದಂತೆ ವರ್ತಿಸುವುದು; ತಾಯಿಯ ವಿಳಾಸವೇ ಗೊತ್ತಿಲ್ಲದಿದ್ದರೂ, ತಾಯಿ ಬದುಕಿದಾಳೋ ಸತ್ತಿದ್ದಾಳೋ ಅರಿವಿಲ್ಲದಿದ್ದರೂ, ತಮ್ಮ ತಮ್ಮ ಕೆಲಸಗಳೇ ಮುಖ್ಯವೆಂದು ಬದುಕುವುದು - ನಮಗೆ ಗೊತ್ತಿಲ್ಲದಂತೇ ಮುಂದುವರಿದ ದೇಶಗಳು ನಮ್ಮನ್ನು ಬದಲಿಸುವ ಪ್ರಕ್ರಿಯೆ ಗಾಬರಿ ಹುಟ್ಟಿಸುತ್ತದೆ.
ಕತೆಯ ಕೊನೆ ಕೊನೆಯಲ್ಲಿ, ನನಗೇಕೋ ಖಾಸನೀಸರ ತಬ್ಬಲಿಗಳು ಕತೆ ತುಂಬ ನೆನಪಾಯಿತು.
ಈ ಕಾದಂಬರಿಯ ಬಗ್ಗೆ ಇತರ ಕೊಂಡಿಗಳು:
ಕಾದಂಬರಿ ಬಿಡುಗಡೆ
ಕಾದಂಬರಿಗೆ ಯು ಆರ್ ಬರೆದ ಮುನ್ನುಡಿ
ವಿಮರ್ಶೆ
ಅವಧಿಯಲ್ಲಿ ಪುಸ್ತಕ ಪರಿಚಯ/
ಕಾದಂಅಬ್ರಿಯ ಕೆಲವು ಪುಟಗಳು