ಅಮೇರಿಕಾದ ಸ್ವಾತಂತ್ರ್ಯ ಸಂಗ್ರಾಮ
ಅಮೇರಿಕ ಜಗತ್ತಿನ ಸೂಪರ್ ಪವರ್ ಮಾತ್ರವಲ್ಲ, ಅದೊಂದು ಹೈಪರ್ ಪವರ್ ಎಂಬ ವಿಷಯ ಅಂತರಾಷ್ಟ್ರೀಯ ವಿದ್ಯಮಾನಗಳಿಂದ ತಿಳಿದಿರುವ ವಿಷಯ. ಇಂದು ಜುಲೈ ೪ ಅಮೇರಿಕಾ ಸಾಮ್ರಾಜ್ಯಶಾಹಿ ಶಕ್ತಿಯಿಂದ ಮುಕ್ತಿ ಪಡೆದುಕೊಂಡು, ಸರ್ವ ಸ್ವತಂತ್ರ ದೇಶವಾದ ದಿನ.
ಭಾರತದಂತೆಯೇ, ಅಮೆರಿಕಾ ಕೂಡ ಬ್ರಿಟಿಷ್ ಸಾಮ್ರಾಜ್ಯಶಾಹಿಯ ವಸಾಹತುವಾಗಿತ್ತು. ಯುರೋಪ್ನಲ್ಲಿ 'ಏಳು ವರ್ಷಗಳ ಯುದ್ಧ' ಮುಗಿದ ಮೇಲೆ ಉತ್ತರ ಅಮೆರಿಕಾದಲ್ಲಿ ಫ್ರೆಂಚ್ ಪ್ರಭಾವ ಕಡಿಮೆಯಾಗಿತ್ತು. ಅಮೆರಿಕಾದಲ್ಲಿ ನೆಲೆಯಾಗಿದ್ದ ಜನರಿಗೆ ಸ್ವ ಆಡಳಿತದ ಆಸೆ ಇದ್ದರೂ, ಬ್ರಿಟಿಷ್ ಸೈನ್ಯ, ನೌಕಾದಳ ಅಮೆರಿಕಾವನ್ನು ತನ್ನ ಕಪಿಮುಷ್ಠಿಯಲ್ಲಿಟ್ಟುಕೊಂಡಿತ್ತು. ಈ ಬ್ರಹತ್ ಸೈನ್ಯದ ನಿರ್ವಹಣೆಗಾಗಿ ಬ್ರಿಟಿಷ್ ಸರಕಾರ ಅಮೆರಿಕಾದ ಮೇಲೆ ಹೆಚ್ಚುವರಿ ತೆರಿಗೆಗಳನ್ನು ಹೇರಿತು. ಬ್ರಿಟಿಷ್ ಪಾರ್ಲಿಮೆಂಟ್ನಲ್ಲಿ ಅಮೆರಿಕಾವನ್ನು ಪ್ರತಿನಿಧಿಸಲು ಯಾವೊಬ್ಬ ಪ್ರತಿನಿಧಿಯೂ ಇರಲಿಲ್ಲವಾದ ಕಾರಣ, ಅಮೆರಿಕನ್ನರು ನೇರ ಕಾರ್ಯಾಚಾರಣೆಗಿಳಿದರು.
1773ರಲ್ಲಿ ಬೊಸ್ಟನ್ ಬಂದರಿನಲ್ಲಿ ಬಂದಿಳಿದ ಹಡಗುಗಳಿದ್ಧ ಟೀ ಹುಡಿಯ ಬಾಕ್ಸ್ಗಳನ್ನು ಸಮುದ್ರಕ್ಕೆ ಎಸೆಯುವ ಮೂಲಕ, ಅಮೆರಿಕನ್ನರು ತಮ್ಮ ಪ್ರತಿರೋಧ ವ್ಯಕ್ತಪಡಿಸಿದರು. ಈ ಘಟನೆ ಇತಿಹಾ ಸದ ಪುಟಗಳಲ್ಲಿ 'ಬೋಸ್ಟನ್ ಟೀ ಪಾರ್ಟಿ' ಎಂಬ ಹೆಸರಿನಿಂದ ಚಿರಪರಿಚಿತ. ಇದರಿಂದ ಉದ್ರಿಕ್ತಗೊಂಡ ಬ್ರಿಟಿಷ್ ಸರಕಾರ ಮಸಾಚ್ಯುಸೆಟ್ಸ್ಅನ್ನು ಸೈನಿಕ ಆಡಳಿತಕ್ಕೆ ಒಳಪಡಿಸಿತು.
1775ರಲ್ಲಿ ಅಮೆರಿಕನ್ನರು ಜಾರ್ಜ್ ವಾಷಿಂಗ್ಟನ್ ರನ್ನು ಅಮೆರಿಕಾ ವಸಾಹತುಗಳ ಮಹಾದಂಡನಾಯಕರೆಂದು ಘೋಷಿಸಿದರು. ಸೋಲೇ ಕಾಣದ ಬ್ರಿಟಿಷ್ ಸೈನ್ಯಕ್ಕೆ ಅಮೆರಿಕನ್ನರು ಸಾಲು ಸಾಲು ಸೋಲಿನ ರುಚಿ ತೋರಿಸಿದರು. 1778ರಲ್ಲಿ ಅಮೆರಿಕಾಕ್ಕೆ ಫ್ರೆಂಚರ ಸಹಾಯಹಸ್ತ ದೊರಕಿ ಆನೆಬಲ ಬಂದತ್ತಾಗಿತ್ತು.
ಲೆಕ್ಸಿಂಗ್ಟನ್, ಸರಟೋಗಗಳಲ್ಲಿ ಸೋಲು ಅನುಭವಿಸಿದ ಬ್ರಿಟಿಷರಿಗೆ ಆಶಾಕಿರಣವಾಗಿ 1780ರಲ್ಲಿ ಲಾರ್ಡ್ ಕಾರ್ನ್ವಾಲಿಸ್ ಚಾರ್ಲ್ಸ್ಟೌನ್ ಪಟ್ಟಣವನ್ನು ವಶಪಡಿಸಿಕೊಂಡ. ಆದರೆ ಇದು ಅಲ್ಪಕಾಲದ ಯಶಸ್ಸು, 1781ರ ಅಕ್ಟೋಬರ್ನಲ್ಲಿ ಕಾರ್ನ್ವಾಲಿಸ್ ಯಾರ್ಕ್ಟೌನ್ ನಲ್ಲಿ ಅಮೆರಿಕನ್ನರಿಗೆ ಶರಣಾಗತನಾದ. ಯುದ್ಧ ಅಂತ್ಯವಾಗಿದ್ದು 1781ರಲ್ಲೇ ಆದರೂ, ಆರು ವರ್ಷಗಳ ಹಿಂದೆಯೇ ಅಂದರೆ 4 ಜುಲೈ 1776ರಲ್ಲಿಯೇ ಅಮೆರಿಕಾದ 13 ವಸಾಹತುಗಳ ಪ್ರತಿನಿಧಿಗಳು ಅಮೆರಿಕಾದ ಸ್ವಾತಂತ್ರ್ಯ ಘೋಷಣೆಗೆ ಸಹಿ ಹಾಕಿ ಬ್ರಿಟನ್ ಜೊತೆಗಿನ ಎಲ್ಲ ರಾಜಕಿಯ ಸಂಬಂಧಗಳನ್ನು ಕೊನೆಗೊಳಿಸಿದರು. ವಾಷಿಂಗ್ಟನ್, ಜೆಫರ್ಸನ್ ಮುಂತಾದವರು ಅಮೆರಿಕಾ ಕ್ರಾಂತಿಯ ರೂವಾರಿಗಳು. ಜುಲೈ 4 ಅಮೆರಿಕಾ ಮಾತ್ರವಲ್ಲ ವಿಶ್ವಕ್ಕೆ ಸ್ಪೂರ್ತಿಯಾದ ದಿನ. ಸೂರ್ಯ ಮುಳುಗದ ಸಾಮ್ರಾಜ್ಯವನ್ನು ಸೋಲಿಸುವ ಮೂಲಕ, ಅಮೆರಿಕಾದ ಕ್ರಾಂತಿ ಮುಂದೆ ಅನೇಕ ದೇಶಗಳ ಸ್ವಾತಂತ್ರ್ಯ ಸಂಗ್ರಾಮಗಳಿಗೆ ಮಾದರಿಯಾಯಿತು.
(ಚಿತ್ರ ಕೃಪೆ: www.lookandlearn.com)
Comments
ಉ: ಅಮೇರಿಕಾದ ಸ್ವಾತಂತ್ರ್ಯ ಸಂಗ್ರಾಮ
ಇತಿಹಾಸದ ಪುಟಗಳ ಈ ಮಾಹಿತಿಗೆ ಧನ್ಯವಾದಗಳು. ಇಂದು ಇದೇ ಅಮೆರಿಕಾ ಇತರ ದೇಶಗಳ ವೈಯಕ್ತಿಕ ವಿಷಯಗಳಲ್ಲಿ ಮೂಗು ತೂರಿಸುತ್ತಿರುವುದು, -ತನ್ನ ಗ್ರಸ್ಥಾನವನ್ನು ಉಳಿಸಿಕೊಳ್ಳುವ ಸಲುವಾಗಿ- ಮಾತ್ರ ಸರಿಯಲ್ಲ.
In reply to ಉ: ಅಮೇರಿಕಾದ ಸ್ವಾತಂತ್ರ್ಯ ಸಂಗ್ರಾಮ by kavinagaraj
ಉ: ಅಮೇರಿಕಾದ ಸ್ವಾತಂತ್ರ್ಯ ಸಂಗ್ರಾಮ
ಖಂಡಿತ ಕವಿನಾಗರಾಜರವರೇ.. ನಿಮ್ಮ ಅಭಿಪ್ರಾಯಕ್ಕೆ ನನ್ನ ಸಹಮತವಿದೆ..