ಅಮ್ಮಂದಿರ ಹಳೆಬಾಟಲಿ ಪ್ರೀತಿ

ಅಮ್ಮಂದಿರ ಹಳೆಬಾಟಲಿ ಪ್ರೀತಿ

ನನ್ನ ಪ್ರಿಯ ಮಿತ್ರನೊಬ್ಬ ಕಳೆದ ವಾರಾಂತ್ಯದಲ್ಲಿ ಊರಿಗೆ ಹೊರಡುತ್ತಿದ್ದ. ಯುಕೆಯಿಂದ ಭಾರತಕ್ಕೆ ಪ್ರಯಾಣಿಸಬೇಕಾದರೆ, ವಿಮಾನದಲ್ಲಿ ೨೫ ಕೆಜಿಗಿಂತ ಹೆಚ್ಚು ಲಗೇಜ್ ಇರುವಂತಿಲ್ಲ. ಅವನಲ್ಲಿ ಅದಾಗಲೇ ಲಗೇಜ್ ೩೦ ಕೆಜಿಗಿಂತ ಹೆಚ್ಚಿತ್ತು!, ನನ್ನ ಪ್ರಾಜೆಕ್ಟ್ ಮ್ಯಾನೇಜರ್ ಅವರ ಸಂಬಂಧಿ ಮಕ್ಕಳಿಗಾಗಿ ರಿಮೋಟ್ ಕಂಟ್ರೋಲ್ಲರ್ ಚಾಲಿತ ಅಗ್ನಿಶಾಮಕ (ಆಟದ) ಟ್ರಕ್ ಒಂದನ್ನು ಅವನ ಮೂಲಕ ತರಿಸುತ್ತಿದ್ದರು. ಅವನಲ್ಲಿ ಅದನ್ನು ಹಿಡಿಸುವಂತ ಸೂಟ್ ಕೇಸ್ ಇಲ್ಲವಾಗಿ, ನಾನು ನನ್ನ ದೊಡ್ಡ ಸೂಟ್ ಕೇಸಿನಿಂದ ನನ್ನೆಲ್ಲ ಗಜಿಬಿಜಿಗಳನ್ನು ಖಾಲಿ ಮಾಡಿ ಕೊಡಬೇಕಾಯ್ತು. ಅವನ ಪರಿಸ್ಥಿತಿ ಇಂತಿದ್ದರೂ, ಅವನು ಒಂದು ಹಳೆಯ ಪರ್ಲ್ ಪೆಟ್ ಬಾಟಲಿ ಮತ್ತು ಹಲ್ದೀರಾಮ್ಸ್ ಸ್ವೀಟಿನ ಒಂದು (ಬಳಸಿ ಬಿಸಾಡಬೇಕಾದ) ಡಬ್ಬವನ್ನು ಜತನದಿಂದ ತುಂಬಿಸಿಕೊಡ. ಪರ್ಲ್ ಪೆಟ್ ಜಾರ್ ದೊಡ್ಡ ಬಾಯಿಯದು. ಅದರೊಳಗೆ ಕೈ ಹಾಕಿ ಸ್ಕ್ರಬ್ಬರ್ ಉಪಯೋಗಿಸಿ ಕ್ಲೀನ್ ಮಾಡಿರಬೇಕು; ತನ್ನ ಪಾರದರ್ಶಕತೆಯನ್ನು ಕಳೆದುಕೊಂಡು ಹಳೆಯ ಜಮಾನಾದ ಬಾಟಲಿಯಂತೆ ಕಾಣುತ್ತಿತ್ತು. ಅದ್ಯಾಕಯ್ಯ ನಿನಗೆ, ಬಿಸಾಡಬಾರದೇ ಎಂದು ನಾನಂದರೆ, ಅವು ಅವನು ಕಳೆದ ಬಾರಿ ಬಂದಾಗ ತಂದವೆಂದೂ, ಅವನ್ನು ಏಕೆ ಬಿಟ್ಟು ಬಂದಿದ್ದೀಯ ಎಂದು ಅವನ ಅಮ್ಮ ದಬಾಯಿಸಿದ್ದಾರೆಂದೂ, ಈ ಬಾರಿ ಹುಡುಕಿ ತರಲು ಅಪ್ಪಣೆಯಾಗಿದೆಯೆಂದು ಹೇಳಿದ. ಅದನ್ನು ಕೇಳಿ ಪ್ರಪಂಚದಲ್ಲಿ ಅಮ್ಮಂದಿರೆಲ್ಲರೂ ಒಂದೇ ಅಚ್ಚಿನಲ್ಲಿ ತಯಾರಿಸಲ್ಪಟ್ಟಿದ್ದಾರೆಂಬ ಬಗ್ಗೆ ನನ್ನ ಕೊನೆಯ ಸಂಶಯವೂ ಅಲ್ಲಿಗೆ ಪರಿಹಾರವಾಯಿತು.

ನನ್ನಮ್ಮನಿಗೂ ಖಾಲಿ ಬಾಟಲಿಗಳ ಹುಚ್ಚು ವಿಪರೀತ. ಹಾರ್ಲಿಕ್ಸ್ ಮತ್ತು ಬೂಶ್ಟ್ ಪೇಯಗಳ ದಪ್ಪ ಗಾಜಿನ ಅಗಲ ಬಾಯಿಯ ಬಾಟಲಿಗಳ ಮೇಲೆ ವಿಶೇಷ ಪ್ರೀತಿ. ನಮ್ಮ ಮನೆಯಲ್ಲಿ ಕೆಲವು ಬಾಟಲಿಗಳು ನನಗಿಂತ ಹೆಚ್ಚು ವಯಸ್ಸಾದವು ಇವೆ. ಸಹಜವಾಗಿ ನನ್ನಮ್ಮನಿಗೆ ಅವುಗಳ ಮೇಲೆ ನನ್ನ ಮೇಲೆ ಇದ್ದದುಕ್ಕಿಂತ ಹೆಚ್ಚು ಮಮತೆ ಇದೆ. ಸಭೆ ಸಮಾರಂಭ ಮುಗಿದ ಮೇಲೆ ಕೆಲವೊಮ್ಮೆ ಹತ್ತಿರದ ಸಂಬಂಧಿಗಳು ಸಾರು, ಸಾಂಭಾರುಗಳು ಉಳಿದಿದ್ದರೆ ರಾತ್ರಿಗೆ ತೆಗೆದುಕೊಂಡು ಹೋಗುವುದಿದೆ. ಅಂಥ ಮನೆಗಳಿಗೆ ಆಮೇಲೆ ಯಾವಾಗಲಾದರೂ ಹೋದರೆ, ಖಾಲಿ ಬಾಟಲಿಗಳನ್ನು ಮತ್ತೆ ಕೇಳಿ ಪಡೆಯಲು ಯಾವುದೇ ಸಂಕೋಚವೂ ಇಲ್ಲ ನನ್ನಮ್ಮನಿಗೆ.
ನಾನು ಬೆಂಗಳೂರಿಗೆ ಹೋದ ಮೇಲೆ ನಮಗೆ ಆಗಾಗ್ಯೆ ಬಾಟಲಿಗಳಲ್ಲಿ ತಿಂಡಿ ತೀರ್ಥಗಳು ಸರಬರಾಜಾಗುವವಷ್ಟೆ. ಇಷ್ಟರೊಳಗೆ ನಿಮಗೆ ಅಂದಾಜಾಗಿರುವಂತೆ ನನಗೆ ಖಾಲಿ ಬಾಟಲಿಗಳ ಮೇಲೆ ವಿಶೇಷ ಆಸ್ಥೆ ಇಲ್ಲ. ನಾನು ಅವುಗಳನ್ನು ತೊಳೆಯದೆ ನನ್ನ ಬಿಡಾರದಲ್ಲಿ ಪೇರಿಸಿಡುತ್ತಿದ್ದೆ. ಅವುಗಳಲ್ಲಿರುವುದನ್ನು ಅರ್ಧವಷ್ಟೆ ಮುಗಿಸಿ, ತೊಳೆಯದೆ 'Bangalore's largest kitchen' ಎಂದು ನಾವು ಅಂದುಕೊಂಡಿದ್ದ ನಮ್ಮ ಕಿಚನ್ ನಲ್ಲಿ ಗುಂಪುಗೂಡಿಸಿ ಇಡುತ್ತಿದ್ದೆ. ಎಷ್ಟು ಬಾರಿ ಹೇಳಿದರೂ ಅವನ್ನು ಹಿಂದೆ ತರುತ್ತಲೂ ಇರಲಿಲ್ಲ. ನನ್ನಣ್ಣ ಸ್ವಲ್ಪ ವಿಧೇಯ, ಅವುಗಳನ್ನೆಲ್ಲ ಕೂಡಿಸಿ ಬ್ಯಾಗ್ ತುಂಬ ತುಂಬಿಸಿ ತರುತ್ತಿದ್ದ. ಈ ವಿಚಾರದಲ್ಲಿ ನನ್ನಮ್ಮನಿಗೆ ಅಣ್ಣನ ಮೇಲೆ ಸ್ವಲ್ಪ ಹೆಚ್ಚು ಪ್ರೀತಿ, ವಿಶ್ವಾಸಗಳು ಇವೆ. 'ಅಣ್ಣ ಒಳ್ಳೆಯವನು/ಪಾಪ ನಿನ್ನ ಹಾಗೆ ಅವನಿಗೆ ದೊಡ್ಡಸ್ತಿಕೆ ಇಲ್ಲ' ಎಂದು ಅವನ ಎದುರೇ ಹೇಳಿ ಅವನು ತನ್ನ ಸ್ವಭಾವವನ್ನು ಬದಲಿಸದ ಹಾಗೆ ನೋಡಿಕೊಳ್ಳುವ ಸೂಕ್ಶ್ಮತೆ ಬೇರೆ ಇದೆಯೆನ್ನಿ.
ನನ್ನಮ್ಮನ ಮೇಲೆ ಒಂದು ಹಳೆಯ (much repeated) ಜೋಕ್ ಇದೆ - ಅಮ್ಮನಿಗೆ ಒಂದು ಖಾಲಿ ಬಾಟಲಿ ಮತ್ತು ಇನ್ನೊಂದು ಬೂಸ್ಟ್ ತುಂಬಿದ ಏಕರೂಪದ ಬಾಟಲಿಗಳ ಮಧ್ಯೆ ಆಯ್ಕೆಯ ಅವಕಾಶ ಇದ್ದರೆ ಅವಳು ಖಾಲಿ ಬಾಟಲಿಯನ್ನೇ ಆಯ್ದು ಕೊಳ್ಳುತ್ತಾಳೆ!. ಇದು ವಾಸ್ತವಕ್ಕೆ ಹತ್ತಿರವಾದ ವಿಷಯ.
ನನಗೆ ಇತೀಚೆಗೆ ಸಾಫ್ಟ್ ವೇರ್ ಪೊಗರು ಬಂದ ಮೇಲೆ ನಾನು, ನಿನಗೆ ಬೇಕಾದಷ್ಟು ಬಾಟಲಿಗಳನ್ನು ಖರೀದಿಸಿ ಕೊಡುತ್ತೇನೆ ಎಂದರೆ ಅಮ್ಮನಿಗೆ ಅದು ಬೇಡ. ಬಾಟಲಿಗಳು ಬೇರೆ ಯಾವುದಾದರೂ ಉತ್ಪನ್ನದೊಂದಿಗೆ ಬಂದಿದ್ದು, ಆ ಪುಡಿಯೋ, ದ್ರವವೋ ಮುಗಿದ ಮೇಲೆ ತೊಳೆದೊಣಗಿಸಿ ಉಪಯೋಗಿಸಿದರಷ್ಟೆ ಹೆಚ್ಚಿನ ಸಮಾಧಾನ!.
ಪ್ಲಾಸ್ಟಿಕ್ ಕವರುಗಳ ನನ್ನಮ್ಮನ ಆಸಕ್ತಿಯ ಎರಡನೆಯ ವಿಷಯ. ಪೇಟೆಯಿಂದ ತಂದ ಕವರುಗಳನ್ನೆಲ್ಲ (ಅಗತ್ಯವಿದ್ದರೆ ತೊಳೆದು ಒಣಗಿಸಿ) ಇಟ್ಟುಕೊಳ್ಳುತ್ತಾಳೆ. ನಾವು/ತಂದೆ ಬೇಕೆಂದಾಗ ಒದಗಿಸುವದಕ್ಕೇ ಅವನ್ನು ಸಂಗ್ರಹಿಸುತ್ತಿದ್ದೇನೆ ಎಂದು ಸಮಜಾಯಿಶಿ ಇದೆ !.

ನಮ್ಮ ತಲೆಮಾರಿನ ಸಾಫ್ಟ್ ವೇರಿಗರಿಗೆ ಪಾತ್ರೆ-ಪಗಡಿ, ಉಡುಗೆ-ತೊಡುಗೆ, ಅನ್ನ, ದುಡ್ಡುಗಳ ನಿಜವಾದ ಬೆಲೆ ಗೊತ್ತಿಲ್ಲ ಎಂದೇ ಹೇಳಬೇಕು. ಪಾತ್ರೆಗಳು ಬಿಡಿ, ಕ್ಯಾಮರಾಗಳನ್ನು ಈಗ ವರುಷಕ್ಕೊಂದರಂತೆ ಬದಲಾಯಿಸುತ್ತಾರೆ.
ನಿತ್ಯಬಳಕೆಯ ವಸ್ತುಗಳನ್ನು ಅವುಗಳ ಆರ್ಥಿಕ ಮೌಲ್ಯವನ್ನು ನೋಡದೆ ಪ್ರೀತಿಸುವುದು ಹಿಂದಿನವರಿಗೆ ಸಾಧ್ಯವಾದಂತೆ ಮುಂದಿನವರಿಗೆ ಸಾಧ್ಯವಾಗದೇ ಹೋಗಬಹುದೇನೋ...

ವಸಂತ್ ಕಜೆ

Rating
No votes yet

Comments