ಅಮ್ಮನ ದಿನ

ಅಮ್ಮನ ದಿನ

ನೆನ್ನೆ ಪೇಪರ ಓದಲಿಲ್ಲ. ಗಡಿಬಿಡಿಯಲ್ಲಿ ನೆನಪೂ ಬರಲಿಲ್ಲ
ಆದರೂ ಯಾವುದೋ ಕೆಲಸದ ಮೇಲೆ ಜಯನಗರಕ್ಕೆ ಹೋಗಿ ಬರುವಾಗ ಅಮ್ಮನ ಮನೆಗೆ ಹೋಗಬೇಕಾಗಿ ಬಂತು.

ಸಮಯ ಅನ್ನುವುದು ಬಹಳ ಕಟುಕ ಒಂದು ಘಂಟೆ ಒಂದು ನಿಮಿಷದಂತೆ ಮುಗಿದುಹೋಗಿತ್ತು

"ಅಮ್ಮ ನಾವು ಹೋಗ್ಬೇಕು ಬೇರೆ ಕೆಲಸ ಇದೆ" ಅಂದೆ

ಅಮ್ಮ "ಸರಿ " ಅಂತ ಆಕಡೆ ತಿರುಗಿಕೊಂಡೇ ಹೇಳಿದಳು

ಯಾಕಮ್ಮ ಈ ಕಡೆ ತಿರುಗಿ ನೋಡು ಅಂತ ಅವಳನ್ನು ಎಳೆದುಕೊಂಡರೆ ಅವಳ ಕಣ್ಣಲ್ಲಿ ಧಾರಾಕಾರ ನೀರು.

ನನಗೆ ದಿಗ್ಭ್ರಮೆ

"ಯಾಕಮ್ಮ ಅಳ್ತಿದೀಯಾ. ಏನಾಯಿತು." ಅಂತ ಕೇಳಿದೆ

ಮಾತಿಲ್ಲ ಕತೆ ಇಲ್ಲ ಬರೀ ಅಳು

"ಕೊನೆಗೆ ಗಂಡು ಮಕ್ಕಳಾಗಲಿ ಹೆಣ್ಣು ಮಕ್ಕಳ್ಖಾಗಲಿ ಅವರವರ ಸಂಸಾರ ಬಂದ ಮೇಲೆ ಎಲ್ಲಾ ಮರೀತಾರೆ" ಅಂದಾಗ ನೆನಪಿಸಿಕೊಂಡೆ ಇವತ್ತು ಅಮ್ಮನ್ ಬರ್ತ್ ಡೆ ಅಲ್ಲ ಮತ್ತೆ .

ಅಷ್ಟ್ರಲ್ಲಿ ನನ್ನ ಅಕ್ಕ ಬಂದು ಪೇಪರ್ ತೋರಿಸಿದಳು

ಇವತ್ತು ಮದರ್ಸ್ ಡೆ

ನಾನು ಕಾಲೇಜಿನಲ್ಲಿದ್ದಾಗಿನಿಂದಲೂ ಅಮ್ಮನ ದಿನಕ್ಕೆ ಮರೀದಲೆ ಉಡುಗೊರೆ ಕೊಡ್ತಿದ್ದೆ . ನಂತರ ಕೆಲಸಕ್ಕೆ ಸೇರಿದ ಮೇಲೆ ಅವಳನ್ನು ಹೊರಗಡೆ ಕರೆದುಕೊಂಡು ಹೋಗ್ತಿದ್ದೆ. ಅವತ್ತು ಅಡಿಗೆಗೆ ರಜಾ . ಮದುವೆಯಾದ ಮೇಲೂ ಮೊದಲೆರೆಡು ವರ್ಷ ಮರೆತಿರಲಿಲ್ಲ .

ಆದರೆ ಇಂದು ಮೂರನೆ ವರ್ಷ ಮರೆತಿದ್ದೆ

ಹೌದು ನಮ್ಮ ಹಾಳು ಕೆಲಸದ ಗಡಿಬಿಡಿ ಅದನ್ನು ನೆನಪಿಸಿಕೊಳ್ಳಲೂ ಬಿಡಲಿಲ್ಲ.

ಈಗ ತಿಳಿದರೂ ಏನೂ ಮಾಡುವಂತಿರಲಿಲ್ಲ . ಏಕೆಂದರೆ ಅಪಾಯಿಂಟ್‌ಮೆಂಟ್ ಆಗಲೆ ಬುಕ್ ಆಗಿತ್ತು

ಅಮ್ಮನಿಗೆ ಏನಾದರೂ ಕೊಡಿಸುವಂತೆ ಅಕ್ಕನಿಗೆ ಹೇಳಿ ಮುಂದಿನ ವಾರ ಎಲ್ಲಾದರೂ ಹೋಗೋಣ ಎಂದು ಅಮ್ಮನಿಗೆ ಸಮಾಧಾನ ಮಾಡಿ ಬಂದರೂ ನನಗೆ ಸಮಾಧಾನವಿರಲಿಲ್ಲ

ಆದರೂ ರಜಾವಿದ್ದರೂ ಬಿಡುವಿಲ್ಲದ ಈ ದುಡಿತ , ಹೆಸರು , ಹಣ ಮಾಡುವ ತುಡಿತವಿರುವ ತನಕ ಇಂತಹದಕ್ಕೆ ರಾಜಿಯಾಗಲೇಬೇಕು ಅಂತ ಇವರಿಂದ ಅನ್ನಿಸಿಕೊಂಡು ಸುಮ್ಮನಾದೆ

Rating
No votes yet