ಅಮ್ಮ…

ಅಮ್ಮ…

ಅಮ್ಮನೊಡನೆ ಕಣ್ಣಲ್ಲಿ
ಕಣ್ಣಿಟ್ಟು ಮಾತನಾಡಲಾಗುತ್ತಿಲ್ಲ,
ಯಾವ ಸ್ಕೂಲಿಗೆ ಹೋಗದಿದ್ದರೂ
ನನ್ನ ಕಣ್ಣನ್ನು ಚೆನ್ನಾಗಿ ಓದಬಲ್ಲಳು…

ಕೈತುತ್ತು ನೀಡುತಿರುವಾಗ
ಅವಳ ಸಾವಿರ ಕಾಳಜಿಯ ಪ್ರಶ್ನೆಗಳು,
ಉತ್ತರಿಸುವಾಗ ಮೂಡಿದ
ಗದ್ಗದತೆಯನ್ನು ಅನ್ನದಗುಳು
ನುಂಗುವ ನೆಪದಲ್ಲಿ ಮರೆಮಾಚುತ್ತಿದ್ದೇನೆ..

ಯಾಕೋ ಸನಿಹ ಸುಳಿಯಲೂ
ಧೈರ್ಯ ಸಾಲುತಿಲ್ಲ..
ಎದೆಬಡಿತ ಎಲ್ಲವನೂ ಚಾಡಿ
ಹೇಳುವ ಸನ್ನಾಹದಲ್ಲಿದೆ…

ಕಣ್ಣೀರಿನಲಿ ಒದ್ದೆಯಾದ
ಕರ್ಚೀಫು ಒಗೆಯುವಾಗ
ಅದರ ಬಿಸಿಯಿಂದಲೇ ಎಲ್ಲಾ
ಅರ್ಥವಾಗಿರಬೇಕು ಅಮ್ಮನಿಗೆ,

ನಿನ್ನೊಡನೆ ಸೇರಿಸುವೆ ಎಂದು
ಆಶ್ವಾಸನೆ ಕೊಟ್ಟು ಭೂಮಿಗೆ ಕಳುಹಿಸಿ,
ಈಗ ತಲೆ ಮರೆಸಿಕೊಂಡಿರುವ
ದೇವರನು ಹುಡುಕಲು ಆಗಲೇ
ದೇವರಕೋಣೆಯಲಿ
ದೀಪ ಹಚ್ಚಿಟ್ಟಿದ್ದಾಳೆ..!

Rating
No votes yet