ಅಮ್ಮ ಅಂದ್ರೆ ಅದೇನೋ ಮೈಪುಳಕ, ; ಕಾಣುವ ತವಕ ಇಂದಿಗೂ ಇದೆ  !

ಅಮ್ಮ ಅಂದ್ರೆ ಅದೇನೋ ಮೈಪುಳಕ, ; ಕಾಣುವ ತವಕ ಇಂದಿಗೂ ಇದೆ  !

ಚಿತ್ರ

ನನಗೋ ಈಗ ೭೭ ತುಂಬಿ ೭೮ ನೇ ವರ್ಷ ಶುರುವಾಗೋ ಸಮಯ; ಆದ್ರೂ, ದಿನಾನೂ ಆ ಮಹಾ ತಾಯಿ, ನಮ್ಮನ ಜ್ಞಾಪಕ ಬರ್ದೇ ಇರಲ್ಲ.ನಾವು ನಾಲ್ಕುಮಂದಿ ಮಕ್ಳೂ ಅಮ್ಮನಿಗೆ ಆಗಾಗ ಸಹಾಯಮಾಡುತ್ತಿದ್ದೆವು. ಕೆಲವು ವೇಳೆ ಅಮ್ಮ ಹೇಳಿದ ಮಾತುಗಳು ನಮಗೆ ಚುಚ್ಚುತ್ತಿದ್ದವು. ಅದೇನೋ ಹೇಳ್ತಾರಲ್ಲ, "ಆಳ್ಮಾಡೊದ್ ಹಾಳು, ಮಗ ಮಾಡೋದ್ ಮಧ್ಯಮ ; ತಾನ್ ಮಾಡೊದ್ ಉತ್ತಮ " ಗೊತ್ತಾಯ್ತಲ್ಲ. ದಿನದಲ್ಲಿ ಅದೆಷ್ಟ್ ಗಾದೆಗಳ್ನ ಹೇಳೋಳು ಅವ್ಳು ಅಂತ ಈಗ್ ಲೆಕ್ಕ ಹಾಕಿದ್ರೆ, ಪ್ರತಿ ಒಂದ್ ಗಂಟೆಗೆ, ೪ ಆದೃ ಇರೋದು ಅಂತ ನನ್ನ ಲೆಕ್ಕ ! " ಒಂದ್ ಹೆತ್ತೋಳು ನಾಕ್ ಹೆತ್ತೊಳ್ಗೆ ಬುದ್ಧಿ ಹೇಳಕ್ ಬಂದ್ಳಂತೆ", "ಸರಿಮನೆಂ ಸೇರ್ ಹಾಕ್ಕೊಂಡ್ರೆ, ನೆರೆಮನೆಮ್ ನೇಣ್ ಹಾಕ್ಕೊಂಡ್ರಂತೆ", "ಖಂಡ್ಗ ತಿಂದೃ ಖಳೆ ಇಲ್ಲ ," " ಕದ ತಿನ್ನೊನ್ಗೆ ಹಪ್ಳೀಡೆ " ಇತ್ಯಾದಿ, ಇತ್ಯಾದಿ. ಅಮ್ಮನಿಗೆ ಬಹಳ ಬೇಸರವಾದಾಗ ತನ್ನನ್ನೇ ಬೈದುಕೊಳ್ಳುತ್ತಾ "ಒಂದು ಹೆಣ್ಣುಮಗು ಇದ್ದಿದ್ದರೆ ಚೆನ್ನಾಗಿತ್ತು," ಅಂತ ಪೇಚಾಡಿಕೊಂಡ ಕ್ಷಣಗಳನ್ನು ನಾನು ಗಮನಿಸಿದ್ದೇನೆ ! ಆದರೂ ಎಂದೂ ಅವಳು ನಮ್ಮನ್ನು ಬೈದೊ, ಅವಹೇಳನ ಮಾಡೊ ಸನ್ನಿವೇಶ ಬರಲೇ ಇಲ್ಲ.

"ನೀರ್ ಸೇದೋಸಮಯದಲ್ಲಿ ಹಾಥ್ ಬಟಾನ " ಅಂತಾರಲ್ಲ ಹಾಗೆ ಕೈಕೊಡುವುದು.(ಇದಕ್ಕೆ ಅರ್ಥ ಬೇರೆ, ಅಂದರೆ ಮೋಸಮಾಡುವುದು ಅಂತ ತಾನೆ) ಮತ್ತೊಂದು, ರುಬ್ಬುವಾಗ, ಬೀಸುವಾಗ, ಅಥವಾ ಕುಟ್ಟುವಾಗ, ಇಲ್ಲವೇ ನೆಲ ಗುಡಿಸುವಾಗ, ಮನೆಗೆ ಕುಡಿಯುವ ನೀರಿನ ಸರಬರಾಜು, ಮತ್ತೆ ಮನೆ ಸಾರಿಸುವುದು, ಸುಣ್ಣಬಳಿಯುವುದು, ಕೆಮ್ಮಣ್ಣು ಬಳಿಯುವುದು, ಕಟ್ಟಿಗೆ ಸೀಳಿ ಅಟ್ಟದ ಮೇಲೆ ಒಟ್ಟುವುದು ಇತ್ಯಾದಿ, ಇತ್ಯಾದಿ. ಒಂದ್ ಕಡೆ ಈಗ ಕೂತ್ಕೊಂಡು ಅವನ್ನೆಲ್ಲಾ ಯೋಚಸ್ತಾ ಹೋದ್ರೆ, ಒಬ್ಬ ಆಗಿನ ಕಾಲದ ನಮ್ಮಮ್ಮನಂಥ ಸದ್ಗ್ಗೃಹಿಣಿಗೆ, ತುರುಸ್ಕೊಳ್ಳಕ್ಕೆ ಪುರುಸೊತ್ತಿರುತಿರಲಿಲ್ಲ ಅನ್ನಬಹುದೇನೋ ! ಸಾರಿ, ಆಪದ ಬಳ್ಬಾರ್ದಾಗಿತ್ತು. ಸಾದ್ಯವೇ ಇಲ್ಲ. ಈ ಪರಿಸ್ತಿತಿಯಲ್ಲಿ ಆದೇ ಸರಿಯಾದ ಅಪ್ಪಟವಾದ ಸರಿಹೊಂದುವ ಪದ ! ಹಳ್ಳಿಗಳಲ್ಲಿ ಆಯಾ ಪದಗಳ್ನ ಬಳಸ್ದಿದ್ರೆ, ಅವ್ರಿಗೆ ಅರ್ಥ ಆಗೋದಾದೃ ಹೇಗೆ ಪಾಪ !

ಉದಾ ಹರಣೆಗೆ, ನಾನ್ ಕೆರೆಕಡೆ ಹೋಗ್ತೀನಿ ಅಂದ್ರೆ ಗೊತ್ತಾಗೋದು ಪಾಯಖಾನೆಗೆ ಹೋಗೊ ಆಸಾಮಿ ಇವ, ಅಂತ ! ತಂಬಿಗೆ ತೊಗೊಂಡ್ ಹೋಗ್ತೀನಿ ಅಂದ್ರೋ, "ಅದ್ಯಾಕ್ ಈಗ ತಂಬಿಗೆ.." ಕೊಡಿಲ್ಲಿ. ಬೇರೆ ಏನಾದ್ರು ಕೆಲ್ಸ ನೋಡ್ಲಕೊ ಹೋಗು, ತಂಬಿಕೆ ತೊಗೊಂಡ್ ಹೋಗ್ತಾನಂತೆ, ಪೆದ್ದ ಅಂತ ಗೋಣ್ ಮುರ್ಯೋರು " ! ಬೆಂಗಳೂರಿನ ಜನ, ಅಂದ್ರೆ ನಮ್ಮ ಸೋದರ್ಮಾವ, ಮೊದಲಾದವರು, "ಇಲ್ಲಿ ಕಕ್ಕಸ್ ಗೆ ಹೋಗೊದೆಲ್ಲಿ " ? ಅಂದಾಗ ನಾವೆಲ್ಲೇ ನಕ್ಕಿದ್ದೆವು. ಯಾಕೆ ಅಂತ ನಮಗೂ ಗೊತ್ತಿರ್ಲಿಲ್ಲ. ಮನೇಲ್ಹೋಗಕ್ ಸಾಧ್ಯವೇ, ಕೆರೆ ಅಂಗ್ಳ ಇರೋದ್ಯಾತಕ್ಕೆ, ಊರಿನ್ ಜನವೆಲ್ಲಾ ಅಲ್ಗೇ ಹೋಗ್ತಾರಪ್ಪ. "ಇದೇನು ಮಾತು ಅಂತ". ಇದು ನಮ್ಮ ಧೋರಣೆಯಾಗಿತ್ತು. ಮಾವನಿಗೋ ಪ್ರಾಣಸಂಕಟ. "ಎಲ್ರೂ ಓಡಾಡೊ ಜಾಗ್ದಲ್ಲಿ ಹ್ಯಾಗೋ ಹೋಗೊದು", ಸುಬ್ಬಿ ನಿನಗಾದೃ ಗೊತ್ತಾಗಲ್ವೆ. ಏನಾದೃ ವ್ಯವಸ್ಥೆ ಮಾಡಮ್ಮ. ಅನ್ನೊರು. 

ಆದ್ರೆ, ನಮ್ಮಮ್ಮ ಹೊಳಲ್ಕೆರೆಗೆ ಬಂದು ಈಗಾಗ್ಲೆ ದಶಕಗಳ ಮೇಲಾಗಿದೆ. ಇಲ್ಲಿನ್ ನೀರ್ ಕುಡ್ದು ಅವಳ್ ಉಸ್ರಾಡೋದು, ಯೋಚ್ನೆ ಮಾಡೊದೂ ಹೊಳಲ್ಕೆರೆ ಜನದ್ ತರ್ಹವೇ ! ಹಾಗೆ ಕ್ಷೀಣವಾಗಿ ನಗೋದ್ ಬಿಟ್ರೆ ಏನೂ ಹೇಳ್ತಿರ್ಲಿಲ್ಲ. "ನೋಡಣ್ಣ, ನಾಳೆ ಹೊತ್ತಿಗ್ ಮುಂಚೆ ಏದ್ದು, ಕೆರೆಕಡೆ ಹೋಗಿ ಎಲ್ಲ ತೀರಿಸ್ಕೊಂಡ್ ಬರಬಾರ್ದೆ". "ಇಲ್ಲಿ ಮನೇಲಿ ಕಕ್ಕಸ್ ಕಟ್ಸೊ ವಿಚಾರ್ ಯಾರ್ಮುಂದಾದ್ರು ಹೇಳ್ಗೀಳಿಯ ; ಬಿದ್ದು ನಕ್ಕಾರು " ಅಂದ್ಬಿಡೊದೆ ! ನಮ್ ಮಾವ "ಸರಿಹೋಯ್ತು. ನಾವಿನ್ನು ಹೆಚ್ಚು ದಿನ ಈ ಊರ್ನಲ್ಲಿ ಇದ್ದಹಾಗೇ ಬಿಡಮ್ಮ; ರಂಗಣನ್ ಕಿವಿಗ್ ಹಾಕ್ಬೇಡ" ."ಅದ್ಸರಿ, ಬೊಂಬಾಯ್ ಪಟ್ಣದಲ್ಲಿದ್ದೋರು ನೀವೆಲ್ಲ. ಅದೆಂಗ್ ಇಲ್ಲಿ ಈ ತರಹ."... ಮಾತು ಮಧ್ಯದಲ್ಲಿ ನಿಂತೇ ಹೋಯ್ತು. ಅಮ್ಮನ ನಗುವಿನ ಒಂದು "ಮಿಂಚು" ನಮ್ಮ ಮಾವನ ಬಾಯಿಮುಚ್ಚಿಸಿತ್ತು. "ಬೊಂಬಾಯ್ನಲ್ಲಿದ್ದಾಗ ಅಲ್ಲಿನ್ತರ್ಹ; ಇಲ್ಲಿದ್ದಾಗ್ ಇಲ್ಲಿನ್ತರ್ಹ". "ಅಲ್ವೇನಪ್ಪ. ಸೂರಣ್ಣ "? ಸದ್ಯ, " ಬಿ ರೋಮನ್ ಇನ್ ರೋಂ " ಅನ್ನಲಿಲ್ಲ. ನಮ್ ಧರ್ಮಕ್ಕೆ ! ಅಮ್ಮ ಅಷ್ಟಕ್ಕೂ ಕಾನ್ವೆಂಟ್ ಹೋದೋಳಲ್ವ. ಆ ಸಮಯಕ್ಕೆ ಈ ಇಂಗ್ಲೀಷ್ ಗಾದೆ, ತ ಕ್ಷ್ಣ್  ಅವಳ ನೆನಪಿಗೆ ಬರಲಿಲ್ಲ ಅನ್ಸತ್ತೆ. ಇಲ್ದಿದ್ರೆ ಸುಮ್ನೆ ಬಿಡೋಳ ಅವ್ಳು   !

ಸರಿ. ಇನ್ನು ಸಹಾಯದ ವಿಷಯ ; ನಮ್ಮ ಅಣ್ಣಂದಿರು, ನಾಗರಾಜ, ರಾಮಕೃಷ್ಣರ ಸರದಿ ಆದಮೇಲೆ, ಅಂದ್ರೆ, ಅವೃ ಓದಕ್ಕೊ ಕೆಲ್ಸಕ್ಕೊ ಬೇರೆ ಊರ್ಗೆ ಹೋದ್ರು ಅಂದಾಗ, ಅವರ್ ಜಾಗ್ದಲ್ಲಿ ಅವರ ತಮ್ಮಂದಿರು ಆ ಕೆಲ್ಸ ನಿಭಾಯ್ಸಬೇಕಲ್ವ ? ಒಬ್ಳೆ ಅಮ್ಮ ಎಷ್ಟು ಅಂತ ದುಡೀತಾಳೆ ! ಸ್ವಲ್ಪ ದೇಹಧಾರಡ್ಯ ಚೆನ್ನಾಗಿದ್ದ ನನ್ನನ್ನು ಅಮ್ಮ ಸ್ವಲ್ಪ ಮೆಚ್ಚಿಕೊಂಡಿದೃ ಅಂತ ಈಗ ನನಗೆ ಅನ್ನಿಸ್ತಿದೆ ! ಪರವಾಗಿಲ್ಲ ಏನಾದೃ ಅದು ಇದು ಹೇಳಿದ್ರೆ, ಮಾಡ್ಬಲ್ಲ ಅಂತ ! "ಬಂಗಾರ, ವೆಂಕ್ಟೇಶ್ ದೇವೃ, ಸ್ವಲ್ಪ ಹೂರ್ಣ ರುಬ್ಕೊಡಪ್ಪ". ನಾನು ಅದಕ್ಕೆ ರೆಡಿ. ನಂತರ "ಈ ಹಾಳು ಒಲೆ ಉರಿಯೋದೆ ಇಲ್ಲ. ಕಟ್ಗೆ ಎಲ್ಲ ಒದ್ದೆ. ಅಟ್ಟದಿಂದ ಸ್ವಲ್ಪ ಕಟ್ಟಿಗೆ ತೆಗೆದು ಮೊಚ್ನಲ್ಲಿ ಸೋಳ್ಕೊಡಪ್ಪ". ಸರಿ ಅದಕ್ಕೂ ನಾನು," ಎಸ್ " ಅಂತಿದ್ದೆ. ಬೇಜಾರ್ ಮುಖ ಮಾಡ್ಕೊಂಡ್ನೊ ; "ಸರಿ ಬಿಡು ನಾನೆ ಏನಾದೃ ಮಾಡ್ಕೊತಿನಿ." ಅನ್ನೊರು. ಪಾಪ ಊದ್ಕೊಳ್ವೆ ಹಿಡ್ಕೊಂಡ್ ಊದಿ ಊದಿ ಕಣ್ಣಲ್ಲಿ ನೀರು, ಕಣ್ಣೆಲ್ಲ ಕೆಂಪು. ಆಗ, " ಕಾಸ್ಟ ವ್ಯಸನ " ಅಂತ ದೊಡ್ಡೊರ್ ಎಲ್ಲ ಹೇಳೋರು. ಆಗ ಅದರ್ ಅರ್ಥ ಆಗಿರ್ಲಿಲ್ಲ. ಈಗ ಪದಗಳ ಅರ್ಥ ತಿಳೀತಿದೆ.

ನಾನು "ಎಸ್. ಎಸ್. ಎಲ್. ಸಿ ಪರೀಕ್ಷೆ " ಮುಗ್ಸಿ, ಬೆಂಗ್ಳೂರ್ಗೋದ್ಮೇಲೆ, ನನ್ನ ತಮ್ಮ "ಚಂದ್ರ "ನ ವರಸೆ. ಪಾಪ, ಯಾವಾಗ್ಲು ನೆಗಡಿ, ಸೊರ-ಸೊರ ಶಬ್ದ. ಮೂಗ್ನ ತಿಕ್ಕೀ ತಿಕ್ಕೀ ಕೆಂಪ್ಗಾಗಿರೋದು. ಮೊದ್ಲೆ ಅವ್ನು ಬಿಳಿ ಮಿಶ್ರದ ಕೆಂಪುಬಣ್ಣದೋನು. ನಮ್ಮಪ್ಪನ ತರ್ಹ. ಮುಖ ಒಳ್ಳೇಕೆಂಪುಕೋತಿ ತರ್ಹ ಆಗಿರೋದು ! ನಾನು ನಮ್ಮನ ತರಹ ಕಪ್ಪು. ಯಾವ ಬಣ್ಣದ ಬದಲಾವಣೆಯೂ ನನ್ನ ಮೇಲೆ ಪರಿಣಾಮ ಬೀರ್ತಿರ್ಲಿಲ್ಲ ! ಎಲ್ರು ನನ್ನ "ವರಟ" ಅನ್ನೋರು.

ಚಿತ್ರದ ವಿಶೇಷತೆಯೆಂದರೆ, ಅಂದಿನ ಮತ್ತು ಇಂದಿನ ದಿನಗಳನ್ನು ಜೋಡಿಸುವ ಕೆಲಸಮಾಡುತ್ತದೆ ಇದು. ನಮ್ಮ ಎರಡನೆಯ ಲಲಿತತ್ತಿಗೆ ಯಿಂದ ನನ್ನ ಹೆಂಡತಿಯ ಕಾಲದವರೆಗೆ ಹಬ್ಬಿರುವ ಕಾಲದ ಗಣನೆಯನ್ನು ನಾವು ಕಾಣಬಹುದು....

 ಉಗಾದಿ ಹಬ್ಬದ ಸಂಭ್ರಮ  :

ಉಗಾದಿ ಹಬ್ಬದ ಸಂಭ್ರಮನ ಹೇಳೋದ್ರಲ್ಲಿ ಸ್ವಾರಸ್ಯವಿಲ್ಲವೇನೊ ಅನ್ಸತ್ತೆ. ಅದನ್ನ ಅನ್ಭವಿಸ್ಬೇಕು ನೋಡಿ. ಹಳ್ಳಿನಲ್ಲಿ ವಾಸಮಾಡೊರ್ಗೆಲ್ಲ ಉಗಾದಿ ಅಂದ್ರೆ ಭಾರಿ ದೊಡ್ಡಹಬ್ಬ. ಕೆಲ್ವರು ಹೇಳೋಹಾಗೆ ಹೊಸ ಬಟ್ಟೆ ತೊಟ್ಗೊಳೊದು ಅವತ್ತೆ. ಎಣ್ಣೆ ನೀರ್ ಹಾಕ್ಕಂಡು ಒಸ ಬಟ್ಟೆ ಉಟಕಂಡು ರಾಜನ್ತರಹ ಓಡಾಡೊದ್ರಲ್ಲಿ ಏನೇ ಕುಶಿ. ಬೆಳಿಗ್ಯೆ ಮೈಗೆ ಹರಳೆಣ್ಣೆ ಹಚ್ಕಂಡ್ರೆ, ಆಯ್ತು. ತಲೆಮೇಲ್ ಸ್ನಾನಮಾಡಿ ಸಿಗೆಕಾಯ್ನಾಗೆ ಚೆನ್ನಾಗ್ ಉಜ್ಜಿ, ಮೈಯೊಳ್ಗಿನ್ ಎಣ್ಣೆ ತೆಗ್ಯೊವರ್ಗೂ ಅದೇನ್ ಲಗ್ಗೆ ಚಂಡಿನಾಟ ಆಡ್ತಾರೋ ಆದೇವ್ರಿಗೆ ಗೊತ್ತು. ಹೆಡ್ ಅಂಡ್ ಟೈಲ್ ಅಂತ ಕಾಸನ್ ತೂರಿ ಕೆಳ್ಗೆ ಬಿದ್ಕೂಡ್ಲೆ ಕೈಮುಚ್ಕಂಡು ತೆಲೆನೊ ಬಾಲನೊ ಅಂತ ಕೇಳೊದೆ ಚೆನ್ನ. ಅದಕ್ಕೆ ದುಡ್ಡು ಕಟ್ಟಿ ಸೋಲೋದು ಇಲ್ವೆ ಗೆಲ್ಲೊದು. ಇದು ಆದಿನವೆಲ್ಲಾ ನಡಿತಾನೆ ಇರ್ತದೆ.

ಎಲ್ಲಕ್ಕಿಂತ ಹೆಚ್ಚಂದ್ರೆ, ಬೈಗಿನ್ ಕಡೆ ಊರಿನ್ ಜನಎಲ್ಲಾ ಆಕಾಶ್ದ್ ಕಡೆ ದಿಟ್ಟಿಸ್ ನೋಡಿದ್ದೆ ನೋಡಿದ್ದು. ನಾವು ನಮ್ಮ ಮನೆ ಬಾವಿ ಕಡೆ ಕಟ್ಟೆಮೇಲ್ ಕೂತು, ಕಣ್ಣಿನ ಮೇಲೆ ಕೈ ಮುಷ್ಟಿ ಇಟ್ಟು ಆಕಾಶದ್ ಕಡೆ ನೋಡ್ತಿದ್ವಿ. ಪಾಡ್ಯದ್ ದಿನ ಚಂದ್ರ ಒಳ್ಳೆ ಗೀರಿಟ್ಟಂಗಿರೊದು. ಆಕಡೆ ಈಕಡೆ ನೋಡೊದ್ರೊಳ್ಗೆ ಮುಳ್ಗೆ ಹೋಯ್ತು ಅನ್ನೊ ಸೊಲ್ಲು ತಪ್ತಿರ್ಲಿಲ್ಲ. ಸ್ವಾಮಿ ಕಾಣಿಸ್ತೇನಪ್ಪ ಎಂಕ್ಟೇಸಣ್ಣ, ನಾಗಣ್ಣ, ರಾಮ್ಕ್ರಿಷ್ಣಪ್ಪ, ಸೊಮೇರೆಲ್ಲಿ ಒಳಗ್ ಕುಂಥ್ಗಂಡ್ ಏನ್ ಮಾಡ್ತಿಯಪ್ಪ. ಬಾ ಒರ್ಗೆ. ಬನ್ನಿ ಒರಾಕಡ್ಗೆ. ಅಂತಿದೃ. ಅಗೋ ಕಿಟ್ಟಣ್ಣರ್ ಬಂದೃ ನೋಡ್ರಿ. ಅವರ್ ಬಂದ್ರೆ, ಸೋಮಿ ಕಂಡಾಂತ್ಲೆ, ನೂರಕ್ಕೆ ನೂರು ಪಾಲು. ಔದು. ಏನ್ ಸಮಾಚಾರ. ಎಲ್ನೋಡಿದ್ರಿ. ನಮ್ಗು ವಸಿ ತೋರ್ಸಿ ಮಾಪ್ರಬು. ನಾನು ಅಲ್ಲೆ ಮೆಟ್ಲಮೇಲೆ ಆಕಡೆ ಸಿದ್ರಾಮಣ್ಣನ ಹತ್ರ ಮಾತಾಡ್ತಿದ್ದೆ ನೊಡವ. ಅಲ್ನೊಡು, ಅಂತ ನಮ್ ಬೀಡಿ ವೆಂಕ್ಟಪ್ಪನ್ ಮಾತು ಬಂತು. ಅಲ್ಲೇ ದಿಟ್ಸಿ ಮ್ಯಾಲಕ್ ನೋಡ್ದೆ. ಅಲ್ಲೇ ಕಾಣಿಸ್ತಲ್ಲವಾ. ನಿನ್ಗೆ ಕಾಣ್ಲಿಲ್ಲೇನು. ಯಾರ್ಗೂ ಇನ್ನೂ ಕಾಣಿಸ್ಲಿಲ್ವಾ ? ತಡಿ. ಆ ಮರ ಇದ್ಯಲ್ಲವಾ. ಅದ್ರ ಮ್ಯಾಲೇ ನನ್ನ ಬೆಳಕಡೆ ನೋಡ್ಕಂಡ್ ಮೇಲಕ್ ಹೋತು. ಗಾಣಿಗ್ರ ತಿಪ್ಪಯ್ಯನ ಮನೆ ಕಡೆ ಓದಿಯ. ಸರಿಗ್ ನನ್ನ ಬೆಳ್ನೇ ಗುರ್ತಗಿಟ್ಗ. ತಿಳಿತಾ. 

ಔದು. ಕಿಟ್ಟಣ್ಣ. ಕಾಣ್ತ್ ಕಣಪಾ. ಬೇಗ್ ನೋಡ್ರಿ ಎಲ್ಲ. ಇನ್ನೇನ್ ಮುಳ್ಗ ಓಗೊ ಅಂಗೈತೆ. ನಾಳೆ ವೈನಾಗ್ ಕಾಣ್ಸದೆ ಕಣಪಾ.. ಚಂದ್ರಪ್ಪ, ವೆಂಲ್ಟೇಸ್ ಅಣ್ಣ, ತಗಳಿ. ಎಲೆನ. ರಂಗಪ್ಪರೆಲ್ಲಪ. ನಮಸ್ಕಾರಮಾಡ್ದೆ ಕಣಪ್ಪ. ಸೋಮಿ ಕಾಣ್ಸ್ತು. ಇ ವರ್ಸದ ಕೆಲ್ಸ ಮುಗ್ದಂಗಾತಪ. ಓದ್ವರ್ಸಾನೂ ಇಂಗೆ ಇತ್ತಪ. ತಲೆಮ್ಯಾಗೆಲ್ಲ. ಮೌಡ ಇರ್ಲಿಲ್ವ . ಜ್ಯಾಪ್ಕ ಇಲ್ಲೇನು ?
ಸಾಯಂಕಾಲದ ಹೊಗೆ ಅದೇನ್ ಕತ್ಲೂ ಅಂದ್ರೆ ಕತ್ಲು. ದಾರಿ ದೀಪಗಳಿಲ್ಲ. ಎಮ್ಮೆ ಹೊಡ್ಕೊಂಡ್ ಬರೋರು ಕೋಲ್ತೊಗೊಂಡ್ ಅವುಗಳ್ನ್ಬ ಮನೆಕಡೆ ತರೋವಾಗ್ ಮಾಡೊ ಸದ್ದು ಗದ್ಲ ಬಿಟ್ರೆ, ಎಲ್ಲ ಮೌನವಾದ ವಾತಾವರಣ. ನಮ್ಮ ಮನೆ ಲಾಂದ್ರದ ಬೆಳಕು ಸ್ವಲ್ಪ ಪ್ರಖರವಾಗಿರೋದು. ಅಮ್ಮ ಸಾಯಂಕಾಲ ಲಾಂದ್ರದ ಹರಳ್ನ ಬೂದಿಯಿಂದ ತಿಕ್ಕಿ ಹೊಳಪು ಕೊಟ್ಟಿರೊಳು. ಎರ್ಡು ಲಾಂದ್ರ ಅಂತೂ ನಮ್ಮನೆಗೆ ಸಾಲ್ದು. ಒಂದ್ ಪೆಟ್ರೋ ಮ್ಯಾಕ್ಸ್ ದೀಪನ ಅಟ್ಟದ್ ಗೋಡೆಗೆ ತೂಘಾಕಿರ್ತಿದೃ, ಅದ್ಯಾಕೊ ಅವಗಳ್  ಬಳ್ಕೆ ಯಾವಾಗ್ ಮಾಡೊರು ನನಗಂತೂ ತಿಳೀದೆ ತಿಳೀದು !

"ಅಪ್ಪ ದೀಕ್ಷೆ ತೆಗೆದುಕೊಂಡರು".

ಆಗ *ಅಪ್ಪಾವರ ವಯಸ್ಸು, ಎಷ್ಟೇ ಆಗಿರಲಿ,  **ಅಮ್ಮನ ವಯಸ್ಸು ೧೩ ವರ್ಷ ಕಡಿಮೆಯಲ್ಲವೇ !. ನಾವು ೧೯೪೨, (ಚಂದ್ರ)  ೧೯೪೪ (ನಾನು) ರಲ್ಲಿ ಜನ್ಮಿಸಿದಾಗ,  ಅಪ್ಪನಿಗೆ ಕ್ರಮವಾಗಿ ೪೭ ಮತ್ತು  ೪೯ ವರ್ಷ ವಯಸ್ಸಾದರೆ, ಅಮ್ಮನಿಗೆ ೩೫, ಮತ್ತು ೩೭ ವರ್ಷಗಳು ! ಮಾನಸಿಕ ಸ್ಥಿತಿಯಲ್ಲಿ ಅದೆಷ್ಟು ಅಂತರವನ್ನು ನಾವು ಪಟ್ಟಿಮಾಡಬಹುದು. ಅವಳ ಭಾವನೆಗಳು ಗರಿಗೆದರಿ ಜೀವನದ ಸಂಭ್ರಮ ಕೌತುಕವನ್ನು ಕೊಳ್ಳೆಹೊಡೆಯುವ ವಯಸ್ಸು ಅವಳದಾದರೆ, ಅಪ್ಪ ತಮ್ಮ ಬಿರುಸಿನ ಜೀವನ-ಖಾತೆಯನ್ನು ಮುಚ್ಚಿ ವಾನಪ್ರಸ್ಥಾಶ್ರಮದ ತಯಾರಿಯಲ್ಲಿರುವ ಪ್ರಸಂಗ,  ನಮ್ಮ ಕಣ್ಣೆದುರಿಗೆ ಕಾಣಿಸುತ್ತಿತ್ತು. ಇಷ್ಟನ್ನು ಅರ್ಥಮಾಡಿಕೊಳ್ಳಲು ಈ ಮಂಕ ವೆಂಕಟೇಶನಿಗೆ,  ೬೪ ವರ್ಷಗಳು ಬೇಕಾಯಿತು. ಅವನ್ನು ಸರಿಯಾದ ಸಮಯದಲ್ಲಿ ಸರಿಯಾಗಿ,  ಮಂಡಿಸುವ ಶಕ್ತಿಯನ್ನು ಆ ದಯಾಮಯನಾದ ಭಗವಂತನು ಕೊಟ್ಟಿದ್ದಾನೆನ್ನಿಸುತ್ತಿದೆ  ! ಮತ್ತೆ ಇದು ಕೇವಲ ನನ್ನ ವ್ಯಕ್ತಿಗತ ಅನ್ನಿಸಿಕೆ. ಇದಕ್ಕೆ ನಾನೇ ಜವಾಬ್ದಾರ ಸಹಿತ ! ನಾನೇನೂ ಹೊಸದನ್ನು ಹೇಳುತ್ತಿಲ್ಲ. "ಬ್ಲಾಗ್ " ಗಳು ಇರುವುದು ಇದಕ್ಕೆ ಅಲ್ಲವೇ ! 

ಹೊಳಲ್ಕೆರೆಯ ದಿನವಿಡಿ ಎರಡುಹೊತ್ತಿನ ಊಟಕ್ಕೆ ಕೈಕಾಲು ಹೊಡೆಯಬೇಕಾದ ಜೀವನ ಶೈಲಿಯನ್ನು, ಅಲ್ಲಿನ ನಾಗರಿಕರು ಕಂಡುಕೊಂಡಿದ್ದರು. ಅದೇ ಜೀವನ-ಸತ್ಯವೂ ಆಗಿತ್ತು. ಅದರಲ್ಲಿ ಎರಡುಮಾತಿಲ್ಲ. ಈ "ಜೀವನ ನಿರ್ವಹಣಾ ಮೂಸೆ" ಯಲ್ಲಿ ನಮ್ಮ ಅಪ್ಪ, ಅಮ್ಮನೂ ಸೇರಿದ್ದರು. ನಮ್ಮೂರಿನ ವಾಸಿಗಳು, ತಮ್ಮ ದಿನನಿತ್ಯದ ಕಷ್ಟದ ಜೀವನ ಶೈಲಿಯಲ್ಲಿಯೇ ಪ್ರೀತಿ, ಪ್ರಣಯ, ಸಾಮರಸ್ಯ, ವಿರಸ, ಸಮರಸ, ಗೊಂದಲ, ಮತ್ತು ಜೀವನಾದರ್ಶಗಳನ್ನು ಕಾಣಬೇಕಾಗಿತ್ತು. ಅದನ್ನು ಅಲ್ಲಿನ ಜನ ಕಂಡುಕೊಂಡಿದ್ದರು ಸಹಿತ ! ಸಮಯದ ಬೆಲೆಯನ್ನು ಅವರಷ್ಟು ಚೆನ್ನಾಗಿ ಬಲ್ಲ, ತಮ್ಮಜೀವನದಲ್ಲಿ ಅಳವಡಿಸಿಕೊಂಡ ನೈಜ-ವ್ಯಕ್ತಿಗಳು ಪಟ್ಟಣಗಳಲ್ಲೂ ದೊರಕುವುದು ದುರ್ಲಭವೆಂದು ನನ್ನ ಅನಿಸಿಕೆ. ಅದು ಸತ್ಯ ಸಹಿತ !

ಅಪ್ಪ, ಅಮ್ಮ ಒಂದೆಡೆ ಕುಳಿತು ತಮ್ಮ ಸಮಸ್ಯೆ, ಮತ್ತು ಜೀವನದ ಆಗುಹೋಗುಗಳ ಬಗ್ಗೆ ಚಿಂತಿಸಲು ಸಮಾಲೋಚಿಸಲು ಸಮಯವನ್ನು ಬಹಳ ಕಷ್ಟದಿಂದ ಸಂಪಾದಿಸುತ್ತಿದ್ದರು. ಅಪ್ಪನಿಗೆ ಸಮಯ ಸಿಗುತ್ತಿತ್ತು. ಅದರೆ ಅಮ್ಮನ ಕೆಲಸಕ್ಕೆ ಕೊನೆ-ಮೊದಲಿಲ್ಲ. ಅವಳ ಜೀವನ ಖಾತೆಯಲ್ಲಿ, ಆ ವಯಸ್ಸಿಗೇ ೬ ಮಕ್ಕಳು ಅದೆಷ್ಟು "ಮೈ ಇಳಿದವೊ", ಸರಿಯಾದ ದಾಖಲೆಗಳಿಲ್ಲ. ಮೈ ಝರ್ಝರಿತವಾಗಿತ್ತು. "ಮುಟ್ಟಿನ ಕಾಯಿಲೆಯಿಂದ ಅಮ್ಮ ಬೇಸತ್ತಿದ್ದರು".  ಆದರೆ ಭಾವನೆಗಳು ಇನ್ನೂ ಹಸಿರಾಗಿದ್ದವು. ಚಂದ್ರ, ಚಿಕ್ಕವನು ಸರಿ. ನಾನು ೨ ವರ್ಷ ದೊಡ್ಡವನು. ಕೆಲವು  ಗಮನಿಸುವ ಮತ್ತು ಅವನ್ನು ಸಮಯಬಂದಾಗ ನೆನೆಯುವ ಸಾಮರ್ಥ್ಯಗಳು ನನಗೇ ಆಶ್ಚರ್ಯವನ್ನು ತಂದಿವೆ !

ಅಪ್ಪ, ದಿನಪ್ರತಿ, ಸ್ನಾನಮಾಡಿದಮೇಲೆ ಚಿಕ್ಕ ಸ್ನಾನದ ಮಡಿ-ನೀರು-ಪಂಚೆಯನ್ನುಟ್ಟುಕೊಂಡು ದೇವರಮನೆಗೆ ಹೋಗಿ ದೇವರಿಗೆ ಕೈಮುಗಿದು, ನೇರವಾಗಿ ನಡುಮನೆಯ ಮುಖಾಂತರ "ಜೈ ಜೈ ಗೋವಿಂದ ರಾಧೆ, ಗೋವಿಂದ ರಾಧೆ "ಎಂದು ಹಾಡುತ್ತಾ ಸಣ್ಣದಾಗಿ ಕುಣಿಯುವ ಹೆಜ್ಜೆ ಹಾಕುತ್ತಾ, ತಮ್ಮ ರೂಂಗೆ ಸಾಗುತ್ತಿದ್ದರು. ನಮ್ಮಮ್ಮ ಕಾದಿದ್ದು ಅವರನ್ನು ಬೆರೆತು ಒಂದೆರಡು ಒಳ್ಳೆಯ ಮಾತಾಡಿ ಬೀಳ್ಕೊಡುತ್ತಿದ್ದ ನೋಟ, ನನ್ನನ್ನು ಬೆರಗುಗೊಳಿಸಿತ್ತು ! ನಮ್ಮಮ್ಮನನ್ನು ಅಪ್ಪ ಸರಿಯಾಗಿ ನೋಡಿಕೊಳ್ಳುತ್ತಿಲ್ಲ ಅನ್ನುವ ಭಾವನೆ,  ಚಿಕ್ಕವನಾದ ನನ್ನ ಮನಸ್ಸಿನಲ್ಲಿ ಅಚ್ಚೊತ್ತಿತ್ತು. ಅದ್ಯಾಕೊ ಹಾಗನ್ನಿಸಿದ್ದು,  ನನ್ನ ಕಲ್ಪನೆಯೂ ಅಗಿರಬಹುದು. ಅಮ್ಮ ಅಪ್ಪನ ಜೊತೆಗಾಗಿ ಪರಿತಪಿಸೊಳು. ಆದರೆ ಅಪ್ಪ ನಿರ್ಲಿಪ್ತರಾಗಿರುವಂತೆ ನನಗನ್ನಿಸುತ್ತಿತ್ತು. ಅಲ್ಲೂ ನಮ್ಮಮ್ಮನ ತ್ಯಾಗಮಯ ಚಿತ್ರ, ನನ್ನ ಕಣ್ಣಿನ ಮುಂದೆ ಕಂಪ್ಯೂಟರಿನ ಸ್ಲೈಡ್ ಗಳಂತೆ ನಿಧಾನವಾಗಿ ಜರುಗಿ ಮಾಯವಾಗುತ್ತಿತ್ತು. ಇದನ್ನು ನನ್ನ ಜೊತೆಯಲ್ಲಿದ ನನ್ನ ಪ್ರೀತಿಯ ತಮ್ಮ ಚಂದ್ರ,  ಗಮನಿಸಿರಬಹುದೆ ? ಗೊತ್ತಿಲ್ಲ !

ಅಮ್ಮನ  ಆ ಜೀವನಶೈಲಿಯಲ್ಲಿ, ಒಟ್ಟಾರೆ ಮನರಂಜನೆಯೆಂದರೆ, ಹಾಡುತ್ತಾ ಸ್ನಾನ, ತನ್ನ ಅಡುಗೆ ಕೋಣೆಯಲ್ಲಿ ಏನಾದರೂ ದೇವರನಾಮ ಹಾಡುತ್ತಾ ಆಡುಗೆ ಮಾಡುವುದು, ಹಾಡುತ್ತಾ ಮನೆಗೆಲಸ, ನಂತರ ನಮಗೆ ಊಟ ಬಡಿಸುವುದು, ನೀರುಸೇದುವುದು, ಪಾತ್ರೆ ತೊಳೆಯುವುದು, ಇತ್ಯಾದಿ, ಇತ್ಯಾದಿಗಳ ಬಳಿಕ, ರಾತ್ರಿ ಮಲಗುವುದು, ನಮ್ಮ ಜೊತೆ. ಅಪ್ಪ ತಮ್ಮ ರೂಂನಲ್ಲಿ ಮಲಗುತ್ತಿದ್ದರು. ನಮ್ಮಿಬ್ಬರ ಜೊತೆಯಲ್ಲೇ ಅವಳ ದಿನವೆಲ್ಲಾ ಕಳೆಯುತ್ತಿತ್ತು. ನಮ್ಮ ಬೇಕು-ಬೇಡಗಳು, ನೋವು-ನಲಿವುಗಳು, ನಮ್ಮಿಬ್ಬರ ಜಗಳ, ಚಿಕ್ಕ-ಪುಟ್ಟ ಬಾಲಜೀವನದ ಮನಸ್ತಾಪಗಳು. ಅವನ್ನು ಒಳ್ಳೆಯಮಾತಿನಿಂದ ತಿಳಿಸಿ ಸಮಾಧಾನಮಾಡುವ ಪರಿ,  ಇವೇ ಅವಳ ಸರ್ವಸ್ವವಾಗಿತ್ತು. ವರ್ಷಕ್ಕೆ ಎರಡು ಹತ್ತಿಸೀರೆಗಳನ್ನು ಅಪ್ಪ ಅವಳಿಗಾಗಿ, ನಮಗೆ ಅಂಗಿ, ನಿಕ್ಕರ್ ಹೊಲೆಸಿ  ತಂದುಕೊಡುತ್ತಿದ್ದರು. ತನ್ನ ತವರಿಗೆ ಹೋಗಬೇಕು, ಬೇರೆ ಎಲ್ಲಿಯಾದರೂ ಊರು ಸುತ್ತಿಕೊಂಡು ಬರಬರಬೇಕೆಂದು ಅಪ್ಪಿ-ತಪ್ಪಿ ಅಪ್ಪನನ್ನು ಪೀಡಿಸಿದವಳಲ್ಲ. ವಡವೆ-ವಸ್ತು, ಬೇರೆ ಯಾವುದೂ ಅವಳು ಇಷ್ಟಪಡುತ್ತಿರಲಿಲ್ಲ. ಅವಳಿಗಾಗಿ ಬಹುಶಃ ಕೆಲವಾರು ಕ್ಷಣಗಳನ್ನೂ ಕಳೆಯದ "ಮಹಾತ್ಯಾಗಜೀವಿ",  "ಮಹಾದೇವತೆ",  ಅವಳಾಗಿದ್ದಳು ! 

Rating
Average: 4 (1 vote)