ಅಯ್ಯಪ್ಪ ದೀಕ್ಷೆಯ ಪರಮಾರ್ಥ
ಅಯ್ಯಪ್ಪ ದೀಕ್ಷೆಯನ್ನು ಕೈಗೊಂಡರೆ ಆಪತ್ತುಗಳು ಸನಿಹ ಸುಳಿಯುವುದಿಲ್ಲವೆನ್ನುತ್ತಾರೆ. ಯಕ್ಷರು, ಗಂಧರ್ವರು, ದೇವತೆಗಳು, ಋಷಿಮುನಿಗಳು, ಕಿನ್ನರ ಮೊದಲಾದ ಕಿಂಪುರುಷರು ...ಹೀಗೆ ಎಲ್ಲರನ್ನೂ ತನ್ನ ಕಣ್-ದೃಷ್ಟಿಯಿಂದ ಭಯಪೀಡಿತರನ್ನಾಗಿಸುವ ಶನೇಶ್ವರನು ಕೂಡಾ ಅಯ್ಯಪ್ಪ ಸ್ವಾಮಿಯ ದೀಕ್ಷೆಯನ್ನು ಕೈಗೊಂಡವರೆಡೆಗೆ ನೋಡಲು ಕಂಪಿಸುತ್ತಾನಂತೆ. ಇವುಗಳು ನಮಗೆ ಪುರಾಣದ ಪ್ರಕಾರ ಹೇಳಲ್ಪಟ್ಟಿರುವ ಪ್ರಯೋಜನಗಳಾದರೆ, ನಸುಕಿನಲ್ಲೇ ಏಳುವುದು, ತಣ್ಣೀರಿನಲ್ಲಿ ಸ್ನಾನ ಮಾಡುವುದು, ಒಪ್ಪೊತ್ತಿನ ಊಟ, ನೆಲದ ಮೇಲೆ ಮಲಗುವುದು, ದೇವಾಲಯಗಳನ್ನು ಸಂದರ್ಶಿಸುವುದು, ವನಯಾತ್ರೆ, ಬರಿಗಾಲಿನಲ್ಲಿ ಓಡಾಡುವುದು, ಮಿತಹಾರವನ್ನು ಸೇವಿಸುವುದು ಇವೆಲ್ಲಾ ವಿವಿಧ ರೀತಿಯ ರೋಗರುಜಿನಗಳನ್ನು ನಿಯಂತ್ರಣಗೊಳಿಸಿ ನಮಗೆ ಆರೋಗ್ಯಭಾಗ್ಯವನ್ನು ಕೊಡುತ್ತವೆ. ಎಲ್ಲರೂ ಒಂದೇ ರೀತಿಯಾದ ವಸ್ತ್ರಗಳನ್ನು ಧರಿಸುವುದು, ಸಾಮೂಹಿಕವಾಗಿ ಭೋಜನ ಮಾಡುವುದು ಇವೆಲ್ಲಾ ಅನೇಕದಲ್ಲಿ ಏಕತೆಯನ್ನು ತರುವುದಕ್ಕೆ ಪ್ರತೀಕಗಳಾದರೆ, ಅಯ್ಯಪ್ಪ ಮಾಲೆಯನ್ನು ಧರಿಸುವುದು, ಆ ನಿಯಮಗಳನ್ನು ಪಾಲಿಸುವುದರಲ್ಲಿ ಆಸಕ್ತಿಕರವಾದ ಅನೇಕ ಆಧ್ಯಾತ್ಮಿಕ ರಹಸ್ಯಗಳು ಅಡಗಿವೆ; ಅದರೆಡೆಗೆ ಒಮ್ಮೆ ನೋಟವನ್ನು ಹರಿಸೋಣ....
ಗುರುಬ್ರಹ್ಮನಾಗಿ ಅವತರಿಸಿದ ಅಯ್ಯಪ್ಪ ಸ್ವಾಮಿಗೆ ಬ್ರಹ್ಮಚರ್ಯ ದೀಕ್ಷೆಯೆನ್ನುವುದು ಅತ್ಯಂತ ಪ್ರಿಯವಾದುದು. ಮಂಡಲಕಾಲವೆಂದರೆ ೪೧ ದಿನಗಳ ಕಠೋರ ಬ್ರಹ್ಮಚರ್ಯ ದೀಕ್ಷೆಯನ್ನು ಅಕುಂಠಿತವಾಗಿ ಪಾಲಿಸುವ ಭಕ್ತರ ಸಕಲ ಅಭೀಷ್ಟಗಳನ್ನು ಅಯ್ಯಪ್ಪ ಸ್ವಾಮಿ ತೀರಿಸುತ್ತಾನೆನ್ನುವುದು ಭಕ್ತರ ದೃಢ ನಂಬಿಕೆ.
ನರನನ್ನು ಹರನನ್ನಾಗಿಸುವ ಮಹತ್ತರವಾದ ಸಾಧನೆಯೇ ಅಯ್ಯಪ್ಪನ ದೀಕ್ಷೆ. ಆಧ್ಯಾತ್ಮಿಕ ಮಾರ್ಗದಲ್ಲಿ ಪಯಣಿಸಿಬೇಕೆನ್ನುವ ಮೋಕ್ಷಕಾಮಿಗಳಾದ ಜಿಜ್ಞಾಸುಗಳಿಗೆ ಜೀವನ ಪರ್ಯಂತ ಸಾಗಬೇಕಾದ ಹಾದಿಗೆ ದಾರಿದೀಪದಂತೆ ಅನುಭವವನ್ನು ಒದಗಿಸುವುದು ಕೂಡಾ ಈ ಅಯ್ಯಪ್ಪನ ದೀಕ್ಷೆಯೇ.
ಅಯ್ಯಪ್ಪ ದೀಕ್ಷೆಯ ಒಳ ಅರ್ಥ
ಸೃಷ್ಟಿಯಲ್ಲಿ ಮಹೋನ್ನತವಾಗಿ ಗೋಚರಿಸುವ ಮಾನವನಿಂದ ಹಿಡಿದು ಕ್ರಿಮಿಕೀಟಗಳವರೆಗೂ ಪ್ರತಿ ಜೀವಿಯೂ ಪಂಚಭೂತಾತ್ಮಕವಾದದ್ದು. ಪಂಚಭೂತಗಳಿಗೆ ಹೊರತಾಗಿ ಬೇರೇ ಏನೂ ಇಲ್ಲವೆನ್ನುವುದು ವಿವಾದಾತೀತ ಸತ್ಯ. ಆದ್ದರಿಂದ ಚರವಾಗಲಿ ಅಥವಾ ಅಚರ ಜೀವಿಯಾಗಲಿ...ಗೋಚರವಾಗುವ ಪ್ರತಿಯೊಂದು ಜೀವಿಯಲ್ಲೂ ಅಗೋಚರನಾದ ಪರಮಾತ್ಮನನ್ನು ಕಾಣುವುದೇ ಅಯ್ಯಪ್ಪ ದೀಕ್ಷೆಯ ಪರಮಾರ್ಥ.
ತನ್ನೊಳಗೆ ಅಯ್ಯಪ್ಪನನ್ನು ಕಾಣಬೇಕು ಮತ್ತು ತನ್ನೊಂದಿಗೆ ಈ ಜಗತ್ತಿನಲ್ಲಿರುವ ಇತರೆಲ್ಲಾ ಜೀವಿಗಳಲ್ಲೂ ಅಯ್ಯಪ್ಪನನ್ನು ಕಾಣುವಂತಾಗಬೇಕು. ಹೀಗಾಗಿ ಪ್ರತಿಯೊಬ್ಬರನ್ನೂ ಸ್ವಾಮಿ ಎಂದು ಕರೆಯಬೇಕು...ಅದು ಹಡೆದ ತಂದೆ-ತಾಯಿಗಳಿರ ಬಹುದು; ಕಟ್ಟಿಕೊಂಡ ಹೆಂಡತಿ ಇರಬಹುದು, ಹೊಟ್ಟೆಯಲ್ಲಿ ಹುಟ್ಟಿದ ಮಕ್ಕಳಿರಬಹುದು; ಇವರನ್ನೆಲ್ಲಾ ದೀಕ್ಷಾ ಸಮಯದಲ್ಲಿ ಸ್ವಾಮಿಗಳೆಂದೇ ಕರೆಯಬೇಕು. ಇದರಿಂದಾಗಿ ಏಕಾತ್ಮತಾಭಾವ ವೃದ್ಧಿಯಾಗಿ...ನಾನು, ನೀನು, ನನ್ನದು, ನಿನ್ನದು ಎನ್ನುವ ಭಾವನೆಗಳು ಶೂನ್ಯವಾಗಿ ಎಲ್ಲವೂ ಒಂದೇ ಅಥವಾ ಅದ್ವೈತವೆನ್ನುವ ವೇದಾಂತ ಭಾವನೆ ಪ್ರಚುರವಾಗುತ್ತದೆ. ಪ್ರಪಂಚದಲ್ಲಿರುವ ಎಲ್ಲಾ ಧರ್ಮಗಳು ಬೋಧಿಸುವುದು ಇದನ್ನೇ!
ಪರಬ್ರಹ್ಮನು ಒಬ್ಬನೇ
ಅಯ್ಯಪ್ಪ, ಅಲ್ಲಾ, ಏಸು; ಹೀಗೆ ಎಷ್ಟೇ ಹೆಸರುಗಳಿರಲಿ; ಭಾಷೆ ಯಾವುದಾದರೇನು, ಭಾವವದಾವುದರೇನು...... ಪರಬ್ರಹ್ಮವೆನ್ನುವುದು ಒಂದೇ. ಪ್ರತಿ ಜೀವಿಯಲ್ಲೂ ಆ ಪರಬ್ರಹ್ಮನನ್ನು ಕಂಡಾಗ ಸ್ವಾರ್ಥಕ್ಕೆ ಅಲ್ಲಿ ಆಸ್ಪದವಿಲ್ಲ. ಒಬ್ಬ ಭಗವಂತನೇ ಇಷ್ಟು ಕೋಟಿ ಜೀವಿಗಳ ರೂಪದಲ್ಲಿ ವಾಸಿಸುತ್ತಿದ್ದಾನೆಂದೂ ಅದರಲ್ಲಿ ನಾನೂ ಒಬ್ಬನೆನ್ನುವ ಸತ್ಯ ದರ್ಶನವು ಉಂಟಾಗುವುದು. ಈ ಭಾವ ಉಂಟಾದಾಗ ಒಂದು ಸಣ್ಣ ಪಾಪವನ್ನು ಎಸಗುವ ಅಗತ್ಯವುಂಟಾಗುವುದಿಲ್ಲ........ಆಗದು ಕೂಡಾ.
೪೧ ದಿವಸಗಳ ಕಾಲ ಮಂಡಲ ದೀಕ್ಷೆಯನ್ನು ಕೈಗೊಂಡ ಸ್ವಾಮಿಗಳಿಗೆ ಮಾತ್ರವೇ 'ಪದುನೆಟ್ಟಾಂಬಡಿ'ಯನ್ನು ಹತ್ತಿ (ಅಧಿರೋಹಿಸಿ) ಅಯ್ಯಪ್ಪ ಸ್ವಾಮಿಯ ದರ್ಶನ ಮಾಡುವ ಅರ್ಹತೆಯು ಬರುತ್ತದೆ. 'ಪದುನೆಟ್ಟಾಂಬಡಿ' ಎಂದರೆ ಹದಿನೆಂಟು ಮೆಟ್ಟಿಲುಗಳು. ಅರಿಷಡ್ವರ್ಗಗಳಾದ, ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರಗಳು; ಪಂಚಭೂತಗಳಾದ ಭೂಮಿ, ಆಕಾಶ, ನೀರು, ಅಗ್ನಿ, ವಾಯು; ತ್ರಿಗುಣಗಳಾದ ಸತ್ವ, ರಜೋ, ತಮೋ ಗುಣಗಳು; ಮತ್ತು ದರ್ಪ (ಗರ್ವ/ಸೊಕ್ಕು), ವಿದ್ಯೆ, ಅವಿದ್ಯೆ, ಅಹಂಕಾರ; ಇವೆಲ್ಲವಕ್ಕೂ ಆ ಹದಿನೆಂಟು ಮೆಟ್ಟಿಲುಗಳು ಪ್ರತೀಕ.
ಮಾಲಧಾರಣೆಗೆ ಸಂಭಂದಿಸಿದಂತೆ ಅಕುಂಠಿತ ದೀಕ್ಷೆಯನ್ನು ಕೈಗೊಂಡ ಭಕ್ತರು ಮೇಲೆ ಹೇಳಲ್ಪಟ್ಟಿರುವ ಎಲ್ಲಾ ವಿಷಯಗಳನ್ನೂ ಅಧಿಗಮಿಸಬಲ್ಲರು ಮತ್ತು ಸ್ವಾಮಿಯ ದರ್ಶನವನ್ನು ಪಡೆಯಬಲ್ಲರು. ಪದುನೆಟ್ಟಾಂಬಡಿಯ ಮಹತ್ವವು ಇದೇ ಆಗಿದೆ.
ನಾರಿಕೇಳ ಸ್ವಾಮಿ ಯಾರು?
ಹದಿನೆಂಟು ಬಾರಿ ಮಾಲಧಾರಣೆ ಮಾಡಿದ ಸ್ವಾಮಿಯನ್ನು ನಾರಿಕೇಳ ಸ್ವಾಮಿ* ಎನ್ನುತ್ತಾರೆ. ಈ ಸ್ವಾಮಿಯು ಕರಿಮಲೆಯಲ್ಲಿ ಒಂದು ತೆಂಗಿನ ಸಸಿಯನ್ನು ನಾಟಿ ಮಾಡಬೇಕು. ಇದು ಬಹು ಹಿಂದಿನಿಂದಲೂ ನಡೆದು ಬಂದಿರುವ ಆಚಾರ; ಇದಕ್ಕೆ ಪ್ರತ್ಯೇಕವಾದ ಕಾರಣವೂ ಇದೆ. ತೆಂಗಿನಕಾಯಿಯನ್ನು ಕೇರಳಿಗರು (ನಾರಿಕೇಳ ದೇಶದವರು ?) ಕಲ್ಪವೃಕ್ಷವೆಂದೇ ಭಾವಿಸಿ ಅದನ್ನು ಪೂಜಿಸುತ್ತಾರೆ. ಪರಿಪೂರ್ಣತೆಗೆ ಚಿಹ್ನೆಯಾಗಿ ಇದನ್ನು ಆರಾಧಿಸುತ್ತಾರೆ. ಆದ್ದರಿಂದ ಹದಿನೆಂಟು ಸಾರಿ ಮಾಲಧಾರಣೆ ಮಾಡಿ ಅಯ್ಯಪ್ಪನನ್ನು ದರ್ಶಿಸಿದ ಸ್ವಾಮಿಯು ಪರಿಪೂರ್ಣತೆಗೆ ಚಿಹ್ನೆಯಾಗಿರುವ ಈ ಕಲ್ಪವೃಕ್ಷ ಅಥವಾ ತೆಂಗಿನ ಗಿಡವನ್ನು ನೆಡುವುದು ಇಲ್ಲಿಯ ಸಂಪ್ರದಾಯವಾಗಿದೆ. ಹೀಗೆ ೧೮ ಪರ್ಯಾಯಗಳು ಅಂದರೆ ೧೮ ವರ್ಷಗಳು ಅಕುಂಠಿತವಾಗಿ ಮಾಲೆಯನ್ನು ಧರಿಸಿದ ಭಕ್ತರಿಗೆ ದೀಕ್ಷಾ ಕಾಲದಲ್ಲಿ ಮಾತ್ರವಲ್ಲದೆ ತಮ್ಮ ಜೀವಿತ ಕಾಲವೆಲ್ಲಾ ಜೀವಿಗಳನ್ನು ಪರಮಾತ್ಮನ ಅಂಶವಾಗಿ ನೋಡುವುದು ಅಭ್ಯಾಸವಾಗುತ್ತದೆ. ಆವಾಗ ಅವರಿಗೆ ಪ್ರತಿಯೊಬ್ಬರೂ ದೈವ ಸ್ವರೂಪರಾಗುತ್ತಾರೆ ಮತ್ತು ತಾನೂ ಸಹ ದೇವರ ಸ್ವರೂಪನಾಗುತ್ತಾನೆ. ಇದೇ ಮುಕ್ತಿ ಪಥ, ಮೋಕ್ಷಕ್ಕೆ ದಾರಿ.
(* ೧ನೇ ವರ್ಷ - ಕನ್ಯೆ ಸ್ವಾಮಿ, ೨ನೇ ವರ್ಷ - ಕತ್ತಿ ಸ್ವಾಮಿ, ೩ನೇ ವರ್ಷ - ಘಂಟಾ ಸ್ವಾಮಿ, ೪ನೇ ವರ್ಷ - ಗದಾ ಸ್ವಾಮಿ, ೫ನೇ ವರ್ಷ - ಪೆರು ಸ್ವಾಮಿ, ೬ನೇ ವರ್ಷ - ಜ್ಯೋತಿ ಸ್ವಾಮಿ, ೭ನೇ ವರ್ಷ - ಸೂರ್ಯ ಸ್ವಾಮಿ, ೮ನೇ ವರ್ಷ - ಚಂದ್ರ ಸ್ವಾಮಿ, ೯ನೇ ವರ್ಷ - ತ್ರಿಶೂಲ ಸ್ವಾಮಿ, ೧೦ನೇ ವರ್ಷ - ವಿಷ್ಣುಚಕ್ರ ಸ್ವಾಮಿ, ೧೧ನೇ ವರ್ಷ - ಶಂಖಧರ ಸ್ವಾಮಿ, ೧೨ನೇ ವರ್ಷ - ನಾಗಾಭರಣ ಸ್ವಾಮಿ, ೧೩ನೇ ವರ್ಷ - ಶ್ರೀಹರಿ ಸ್ವಾಮಿ, ೧೪ನೇ ವರ್ಷ - ಪದ್ಮ ಸ್ವಾಮಿ, ೧೫ನೇ ವರ್ಷ - ಶ್ರೀ ಸ್ವಾಮಿ, ೧೬ನೇ ವರ್ಷ - ಶ್ರೀ ಶಬರಿ (ರಾತಿಗಿರಿ) ಸ್ವಾಮಿ, ೧೭ನೇ ವರ್ಷ - ಓಂಕಾರ ಸ್ವಾಮಿ, ೧೮ನೇ ವರ್ಷ - ನಾರಿಕೇಳ ಸ್ವಾಮಿ)
ಇರುಮುಡಿ ಅಂದರೆ ಏನು?
ತೆಂಗಿನಕಾಯಿಯಲ್ಲಿ ಇರುವ ಮೂರು ಕಣ್ಣುಗಳಲ್ಲಿ ಒಂದು ಕಣ್ಣಿಗೆ ರಂಧ್ರ ಮಾಡಿ ಅದರಲ್ಲಿರುವ ಎಳನೀರನ್ನು ಹೊರತೆಗೆಯಬೇಕು. ಹೀಗೆ ಬರಿದಾದ ಕಾಯಿಯೊಳಗೆ ತುಪ್ಪವನ್ನು ತುಂಬಿಸಿ ಅದನ್ನು ಇರುಮುಡಿಯಲ್ಲಿ ಇರಿಸುತ್ತಾರೆ. ಅಯ್ಯಪ್ಪನ ಸನ್ನಿಧಾನದಲ್ಲಿ ಆ ತೆಂಗಿನ ಕಾಯಿಯನ್ನು ಒಡೆದು ಅದರಲ್ಲಿರುವ ತುಪ್ಪದಿಂದ ಸ್ವಾಮಿಗೆ ಅಭಿಷೇಕ ಮಾಡಿಸುತ್ತಾರೆ. ನವನೀತವು (ಬೆಣ್ಣೆಯು*) ಆತ್ಮಕ್ಕೆ ಪ್ರತೀಕವಾದರೆ, ತೆಂಗಿನ ಕಾಯಿಯು ದೇಹ ಅಥವಾ ಕಾಯಕ್ಕೆ ಪ್ರತೀಕ, ಸ್ವಾಮಿಯ ಸನ್ನಿಧಿಯಲ್ಲಿ ಅಹಂಕಾರವನ್ನು ಒಡೆಯುವುದು ಅಂದರೆ ದೇಹವೆಂಬ ಭಾವನೆಯನ್ನು ನಾಶಗೊಳಿಸಿ ಆತ್ಮದಿಂದ ಅಯ್ಯಪ್ಪನನ್ನು ಅಭಿಷೇಕ ಮಾಡುವುದು ಇದರ ಹಿಂದಿರುವ ಗೂಡಾರ್ಥ.
(*ಇಲ್ಲಿ ನವನೀತ ಅಂದರೆ ಬೆಣ್ಣೆಯ ರೂಪಾಂತರವಾದ ತುಪ್ಪವನ್ನು ಉಪಯೋಗಿಸುತ್ತಾರೆ. ಕೃಷ್ಣನನ್ನು ನವನೀತ ಚೋರನೆಂದು ಏಕೆ ಕರೆಯುತ್ತಾರೆನ್ನುವುದು ನನಗೂ ಕೂಡಾ ಇದರಿಂದ ತಿಳಿಯಿತು)
ಇರುಮುಡಿಯ ಅಂತರಾರ್ಥ
ಇರುಮುಡಿ ಎಂದರೆ ಎರಡನ್ನು ಸೇರಿಸಿ ಹಾಕುವ ಗಂಟು/ಮುಡಿ. ಯಾತ್ರಾ ಸಮಯದಲ್ಲಿ ಈ ಎರಡು ಮುಡಿಗಳಲ್ಲಿ, ಒಂದು ನಮಗಾಗಿ ಇನ್ನೊಂದು ಸ್ವಾಮಿಗಾಗಿ ಎಂದು ತಿಳಿಯಬಹುದು..... ಅಥವಾ ಒಂದು ಇಹಕ್ಕಾಗಿ ಮತ್ತೊಂದು ಪರಕ್ಕಾಗಿ. ಇಹಪರಗಳ ಅಣುಅಣುವಿನಲ್ಲೂ ಅಯ್ಯಪ್ಪನ ವಿಶ್ವವ್ಯಾಪಕತೆಯನ್ನು ಕಾಣುವ ಅಥವಾ ದರ್ಶಿಸುವ ವರವನ್ನು ಪಡೆಯುವುದೇ ಅಯ್ಯಪ್ಪನ ದರ್ಶನ ಮತ್ತು ಜ್ಯೋತಿ ದರ್ಶನ.
ಅಯ್ಯಪ್ಪನನ್ನು ಧರ್ಮಶಾಸ್ತ ಎಂದು ಏಕೆ ಕರೆಯುತ್ತಾರೆ?
ಮಾನವ ಪೀಳಿಗೆಯನ್ನು ಹಿಡಿದು ಪೀಡಿಸುತ್ತಿರುವ ಅರಿಷಡ್ವರ್ಗಗಳ ನಾಶವನ್ನು ಮಾಡಿ, ಧರ್ಮವನ್ನು ಸ್ಥಾಪಿಸುವುದಕ್ಕಾಗಿ ಹರಿಹರ ಸುತನಾದ ಅಯ್ಯಪ್ಪನು ಅವತಾರವೆತ್ತಿದನು. ಧರ್ಮವನ್ನು ಎತ್ತಿಹಿಡಿಯುವುದಕ್ಕಾಗಿ/ಶಾಸಿಸುವುದಕ್ಕಾಗಿ ಅವತಾರವೆತ್ತಿರುವುದರಿಂದ ಅಯ್ಯಪ್ಪ ಸ್ವಾಮಿಯನ್ನು ಧರ್ಮಶಾಸ್ತ ಎನ್ನುತ್ತಾರೆ.
----------------------------------------------------------------------------------------------------------------------------
ಅಯ್ಯಪ್ಪ ಸ್ವಾಮಿಯ ದೀಕ್ಷೆಯಲ್ಲಿ ಅನುಸರಿಸಬೇಕಾದ ನಿಯಮಗಳು
೧) ತಣ್ಣೀರಿನಲ್ಲಿ ಸ್ನಾನ ಮಾಡುವುದು ಮೊದಲನೇ ನಿಯಮ
೨) ಸೂರ್ಯೋದಯ ಅಥವಾ ಸೂರ್ಯಾಸ್ತಕ್ಕೆ ಮುಂಚಿತವಾಗಿ ಅಯ್ಯಪ್ಪನ ಪೂಜಾ ಕಾರ್ಯವನ್ನು ಮುಗಿಸುವುದು ಮತ್ತೊಂದು ನಿಯಮ.
೩) ಒಪ್ಪೊತ್ತಿನ ಊಟ (ದಿನಕ್ಕೆ ಒಂದೇ ಸಾರಿ ಊಟ ಮಾಡುವುದು)
೪) ಬೆಳಿಗ್ಗೆ ಮತ್ತು ಸಾಯಂಕಾಲ ಕೇವಲ ಉಪಾಹಾರ/ಅಲ್ಪಾಹಾರ ಸೇವಿಸುವುದು.
೫) ನೆಲದ ಮೇಲೆ ಮಲಗುವುದು ಕಡೆಯ ನಿಯಮ.
ಇವಲ್ಲದೆ ಬಹಿರ್ದೆಶೆಗೆ ಹೋಗಿ ಬಂದಾಗ, ಬಹಿಷ್ಠೆಯರಾದ ಸ್ತ್ರೀಯರನ್ನು ಗೊತ್ತಿದ್ದೂ ನೋಡಿದರೂ ಸಹಾ ಅಥವಾ ಸತ್ತವರನ್ನು ನೋಡಿದರೂ ಕೂಡಾ ತಪ್ಪದಲೇ ಸ್ನಾನ ಮಾಡಬೇಕು. ಮನಸ್ಸಿನಲ್ಲಿ ಯಾವಗಲೂ ಭಗವನ್ನಾಮ ಸ್ಮರಣೆಯನ್ನೇ ಮಾಡುತ್ತಿರಬೇಕು. ಎಲ್ಲರಲ್ಲೂ ಅಯ್ಯಪ್ಪನನ್ನೇ ಕಾಣಬೇಕು. ಎರಡೂ ಹೊತ್ತಿನಲ್ಲಿ ದೇವಾಲಯಗಳ ದರ್ಶನ ಮಾಡಬೇಕು. ಯಾರಾದರೂ ಭಜನೆಗೆ ಕರೆದರೆ ಸಾಧ್ಯವಾದಷ್ಟೂ ಭಾಗವಹಿಸಲಿಕ್ಕೆ ಪ್ರಯತ್ನಿಸಬೇಕು. ಎಲ್ಲಕ್ಕಿಂತ ಹೆಚ್ಚಾಗಿ ಮನಸ್ಸು ಪ್ರಫುಲ್ಲವಾಗಿ ನಿಷ್ಕಲ್ಮಶವಾಗಿ ಇರಬೇಕು.
---------------------------------------------------------------------------------------------------------------------------
(ವಿ.ಸೂ.: ಯಾವುದೋ ಒಂದು ಫೈಲಿಗಾಗಿ ತಡಕಾಡುತ್ತಿರ ಬೇಕಾದರೆ ತೆಲುಗು ಪತ್ರಿಕೆ ಸಾಕ್ಷಿಯಲ್ಲಿ ದಿನಾಂಕ ೫-೧೨-೨೦೦೯ರಲ್ಲಿ ಪ್ರಕಟವಾಗಿದ್ದ [ಮೂಲ ಲೇಖಕರು - ಬುರ್ರಾ ನರಸಿಂಹ] ಈ ಲೇಖನ ದೊರೆಯಿತು. ಅದರ ಅನುವಾದದ ಭಾಗವೇ ಈ ಚಿಕ್ಕ ಬರಹ. ಕಾಕತಾಳೀಯವೆಂದರೆ ಇಂದಿನಿಂದ ಶ್ರಾವಣ ಮಾಸ ಪ್ರಾರಂಭವಾಗುತ್ತದೆ ಮತ್ತು ಅನೇಕರು ಶ್ರಾವಣ ಮಾಸದಲ್ಲಿಯೇ ಅಯ್ಯಪ್ಪನ ದೀಕ್ಷೆಯನ್ನು ಕೈಗೊಳ್ಳುತ್ತಾರೆ. ಅಯ್ಯಪ್ಪನ ದೀಕ್ಷೆಯ ಬಗ್ಗೆ ನಾನು ಈ ಹಿಂದೆ ಐದು ಕಂತುಗಳಲ್ಲಿ ಒಂದು ಲೇಖನವನ್ನು ಬರೆದಿದ್ದೆ. ಮೊದಲ ಕಂತಿನ ಕೊಂಡಿಗೆ ಇಲ್ಲಿ ಚಿಟುಕಿಸಿ: http://sampada.net/%E0%B2%B6%E0%B2%AC%E0%B2%B0%E0%B2%BF%E0%B2%AE%E0%B2%B2%E0%B3%86-%E0%B2%AF%E0%B2%BE%E0%B2%A4%E0%B3%8D%E0%B2%B0%E0%B3%86-%E0%B2%85%E0%B2%A5%E0%B2%B5%E0%B2%BE-%E0%B2%85%E0%B2%AF%E0%B3%8D%E0%B2%AF%E0%B2%AA%E0%B3%8D%E0%B2%AA-%E0%B2%B8%E0%B3%8D%E0%B2%B5%E0%B2%BE%E0%B2%AE%E0%B2%BF%E0%B2%AF-%E0%B2%B5%E0%B3%8D%E0%B2%B0%E0%B2%A4%E0%B2%A6-%E0%B2%B9%E0%B2%BF%E0%B2%A8%E0%B3%8D%E0%B2%A8%E0%B2%B2%E0%B3%86-%E0%B2%92%E0%B2%82%E0%B2%A6%E0%B3%81-%E0%B2%9A%E0%B2%BF%E0%B2%82%E0%B2%A4%E0%B2%A8%E0%B3%86-%E0%B2%AD%E0%B2%BE%E0%B2%97-%E0%B3%A7 ಅದರಲ್ಲಿ ಪ್ರಸ್ತಾವಿಸಿರುವ ಅನೇಕ ವಿಷಯಗಳಿಗೆ ಈ ಲೇಖನ ಪೂರಕವಾಗಿದೆ ಮತ್ತು ಕೆಲವೊಂದು ಹೊಸ ವಿಷಯಗಳು ಮತ್ತು ಹೊಸ ದೃಷ್ಟಿ ಕೋನದಿಂದ ಅಯ್ಯಪ್ಪ ಸ್ವಾಮಿಯ ದೀಕ್ಷೆಯನ್ನು ಇದರಲ್ಲಿ ವಿವರಿಸಿದ್ದಾರೆ. ಆಸಕ್ತಿಯುಳ್ಳವರಿಗೆ ಇದು ಸಹಾಯಕವಾಗಬಹುದೆಂದು ಸಂಪದದಲ್ಲಿ ಇದನ್ನು ಪ್ರಕಟಿಸುತ್ತಿದ್ದೇನೆ.)
"ಓಂ ಶ್ರೀ ಸ್ವಾಮಿಯೇ, ಶರಣಂ ಅಯ್ಯಪ್ಪ"
Comments
ಉ: ಅಯ್ಯಪ್ಪ ದೀಕ್ಷೆಯ ಪರಮಾರ್ಥ
In reply to ಉ: ಅಯ್ಯಪ್ಪ ದೀಕ್ಷೆಯ ಪರಮಾರ್ಥ by Chitradurga Chetan
ಉ: ಅಯ್ಯಪ್ಪ ದೀಕ್ಷೆಯ ಪರಮಾರ್ಥ
ಉ: ಅಯ್ಯಪ್ಪ ದೀಕ್ಷೆಯ ಪರಮಾರ್ಥ
In reply to ಉ: ಅಯ್ಯಪ್ಪ ದೀಕ್ಷೆಯ ಪರಮಾರ್ಥ by RAMAMOHANA
ಉ: ಅಯ್ಯಪ್ಪ ದೀಕ್ಷೆಯ ಪರಮಾರ್ಥ
In reply to ಉ: ಅಯ್ಯಪ್ಪ ದೀಕ್ಷೆಯ ಪರಮಾರ್ಥ by makara
ಉ: ಅಯ್ಯಪ್ಪ ದೀಕ್ಷೆಯ ಪರಮಾರ್ಥ
In reply to ಉ: ಅಯ್ಯಪ್ಪ ದೀಕ್ಷೆಯ ಪರಮಾರ್ಥ by RAMAMOHANA
ಉ: ಅಯ್ಯಪ್ಪ ದೀಕ್ಷೆಯ ಪರಮಾರ್ಥ
ಉ: ಅಯ್ಯಪ್ಪ ದೀಕ್ಷೆಯ ಪರಮಾರ್ಥ