ಅರಳಿಕಟ್ಟೆಯ ಹುಡುಕಾಟದಲ್ಲಿ ಒಂದು ಸಂಜೆ - ಕನಸುಗಳ ನನಸಾಗಿಸುತ್ತಾ...

ಅರಳಿಕಟ್ಟೆಯ ಹುಡುಕಾಟದಲ್ಲಿ ಒಂದು ಸಂಜೆ - ಕನಸುಗಳ ನನಸಾಗಿಸುತ್ತಾ...

"ಅರಳಿಕಟ್ಟೆ"  ಕಣ್ಣಿಗೆ ಬಿದ್ದೊಡನೆ ನಿಮ್ಮಲ್ಲನೇಕರಿಗೆ ಕಿವಿ ಚುರುಕಾಗಿಯೂ, ಮತ್ತೆ ಕೆಲವರಿಗೆ ಎದ್ದು ಹೊರಗೆ ಓಡಲೇ ಅದರೆಡೆಗೆ ಎಂದು ಅನಿಸಿರಬೇಕಲ್ಲವೇ? ಮಕ್ಕಳಿಗೆ ಆಟವಾಡಲು ಇದರ ನೆರಳೂ,  ಯುವಕರಿಗೆ ಮತ್ತು ಕೆಲಸವಿಲ್ಲದ ಕೆಲವು ಹಿರಿಯರಿಗೆ ಜೂಜಿನ ಅಡ್ಡವಾಗಿಯೋ, ಹೆಂಗಳೆಯರಿಗೆ ನಾಗರಕಲ್ಲು ಇತ್ಯಾದಿಗಳ ಪೂಜಾ ಸ್ಥಳವಾಗಿಯೋ ಪರಿಚಯವಿರುವ ಈ ಕಟ್ಟೆ ನನ್ನಿಂದ, ನನ್ನ ಜೀವನದಿಂದ ಬಹಳ ದೂರವೇ ಉಳಿದು ಬಿಟ್ಟಿದೆ.

ನಗರವಾಸಿಯಾಗಿರುವುದು ಮೊದಲನೇ ಕಾರಣವಾಗಿಯೂ, ಚಿಕ್ಕವನಿಂದ ಸುತ್ತಮುತ್ತಲಿನ ಪ್ರಪಂಚದ ಜೊತೆ ಅಷ್ಟಾಗಿ  ಬೆರೆಯದೇ "ರಿಸರ್ವ್ಡ್" ಅನ್ನೋ ತರ ಬೆಳೆದು, ನಾನೊಬ್ಬ ಕೂಪ ಮಂಡೂಕ ಅಂತ ತಿಳಿಯಲಿಕ್ಕೆ ಹೈಸ್ಕೂಲಿನ ಮೆಟ್ಟಿಲತ್ತುವವರೆಗೆ ಕಾಯಬೇಕಾಯ್ತು. ಮನೆಯ ಹತ್ತಿರವಿರುವ ಎಲ್ಲ ವಸ್ತುಗಳೂ ನನ್ನಿಂದ ದೂರವೇ, ನನ್ನ ಪ್ರಾಥಮಿಕ ಶಾಲೆಯೊಂದನ್ನು ಬಿಟ್ಟು.. ಹೊರಗಷ್ಟು ಮಾತಿಲ್ಲ, ಕಥೆಯಿಲ್ಲ. ಹೇಳಿದರೆ ಸುತ್ತಮುತ್ತಲಿನವರು ನನ್ನ ದನಿಯನ್ನು ಕೇಳೋದು ತುಂಬಾನೇ ಅಪರೂಪ. ಕೆಲಸಕ್ಕೆ ಸೇರಿದ ನಂತರವಂತೂ ಇನ್ನೊಂದು ಹೊಸ ಲೋಕದಲ್ಲೇ ಮುಳುಗಿದ್ದೇನೆಂದು ಹೇಳಬಹುದು. ಹೀಗಾದಾಗ ಮನೆಯ ಬಳಿಯಿರುವ ಅರಳಿಕಟ್ಟೆ ಮಾರು ದೂರ ಸರಿದಂತೆಯೇ ಹೊರತು ನನಗೆ ಅದರ ಕೆಳಗೆ ಕುಳಿತೇಳುವ ಭಾಗ್ಯವಿಲ್ಲ.

ಅರಳೀಮರ, ಕಟ್ಟೆ, ಅದರ ನೆರಳು, ಅದರ ಸುತ್ತಲಿನ ದೇವಾಲಯ, ಅಲ್ಲಿ ಕಟ್ಟುವ ಬಣ್ಣ ಬಣ್ಣದ ತಾಯತಗಳು, ಅದರ ನೆರಳಿನಲ್ಲಾದ ಯಾರದೋ ಮದುವೆ ಇತ್ಯಾದಿ ಪುಸ್ತಕವೋ, ಯಾವುದೋ ಚಲನಚಿತ್ರದ ನೆನಪೋ, ದೂರದರ್ಶನದ ಧಾರಾವಾಹಿಯೋ ಹೀಗೆ ಹಲವಾರು ಇತರೆ ಮೂಲದಿಂದ ಮಾತ್ರ ಪದಗಳ, ದೃಶ್ಯದ ಇಲ್ಲವೇ ಶ್ರಾವ್ಯ ಸಂದೇಶದ ಮೂಲಕ ಆಸ್ವಾದಿಸಿದ್ದೇ ಆಗಿದೆ. 

ಮತ್ತೆ, ಇವತ್ತೇನಪ್ಪ ಇದರ ಬಗ್ಗೆ ಬರೀಲಿಕ್ಕಿಟ್ಟುಕೊಂಡಿದ್ದೇನೆ ಅಂತೀರಾ? ವಿಷಯ ಅಲ್ಲೇ ಇರೋದು. ಮೇಲಿನ ಚಿತ್ರ ನೋಡ್ತಿದ್ದೀರಲ್ಲಾ, ಅದರಲ್ಲೊಂದು ಮರವಿದೆ ನೋಡಿ, ಅದರ ಕೆಳಗೆ ಸಣ್ಣದೊಂದು ಮಂಟಪವನ್ನೂ ಕಟ್ಟಿದ್ದಾರೆ. ಕಾಣುತ್ತಿದೆ ಅಲ್ವಾ? ಇದನ್ನು ನಾನು ಕಂಡದ್ದು ಹರಿ, ಚಾಮರಾಜ್ ಸವಡಿ ಮತ್ತು ಅನಿಲನ ಜೊತೆ ಎರಡು-ಮೂರು ವಾರಗಳ ಹಿಂದೆ ಸಿದ್ದರ ಬೆಟ್ಟಕ್ಕೆ ಹೋಗಿದ್ದಾಗ. ಮಾವಿನ ಹಣ್ಣಿನ ಸವಿ ಸವಿಯಲಿಕ್ಕಾಗುವುದೇ ಅಂತ ಕಾರನ್ನು ನಿಲ್ಲಿಸಿ ನಾವೆಲ್ಲಾ ನೆಗಲಾಲದ ಒಂದು ಮಾವಿನ ಮರದ ಬಳಿ ನಿಂತ ಸ್ಥಳದಲ್ಲಿ. ನನ್ನ ಕ್ಯಾಮೆರಾ ಕೈನಲ್ಲೇ ಇದ್ದಿದ್ದರಿಂದ ತಟ್ಟನೇ ತೆಗೆದ ಈ ಚಿತ್ರದ ಬಗ್ಗೆ ಒಂದು ಸಣ್ಣ ಮಾತುಕತೆ ನನ್ನ ಮತ್ತು ಚಾಮರಾಜರ ನಡುವೆ. ಎಷ್ಟು ಚೆಂದವಿದ್ದಿರಬಹುದಲ್ಲವೇ ಈ ಮರದ ಕೆಳಗೆ ಕೂತು ಅದರ ನೆಳಲ ಸವಿ ಉಂಡವರಿಗೆ, ಅಲ್ಲೇ ತಪಸ್ಸು ಮಾಡಿದವರಿಗೆ, ವಿದ್ಯೆಕಲಿತವರಿಗೆ, ಆಟವಾಡಿದವರಿಗೆ ಎಂದು.

ಇವತ್ತು ಮಧ್ಯಾನ್ಹ ನಾನು, ಹರಿ, ಮುರಳಿ ಭೇಟಿಯಾಗುವ ಸಂದರ್ಭ. ಯಾವುದೇ ಮುನ್ಸೂಚನೆಯಿಲ್ಲದೆ ಭೇಟಿಯಾಗಿ, ಉಭಯಕುಶಲೋಪರಿಸಾಂಪ್ರತಾ ಹಾಡಿ, ಅನೇಕ ವಿಷಯಗಳ ಬಗ್ಗೆ ನಮ್ಮ ಅರಿವನ್ನು ಹರಿಯಲು ಬಿಟ್ಟು, ಆಗಿರುವ, ಆಗುತ್ತಿರುವ, ಆಗಬೇಕಿರುವ ಕೆಲಸಗಳ ಜೊತೆಗೆ ಕಲಿತ, ಅರಿತ ಮತ್ತು ತಿಳಿದ ವಿಷಯಗಳ ಸುತ್ತ ಒಂದು ಕಣ್ಣು ಹಾಯಿಸಿ ಕೂತಿದ್ದು ಕಾಂಕ್ರೀಟ್ ಕಟ್ಟಡಗಳ ನಾಡಾಗಿ ಬದಲಾವಣೆಯಾಗಿರುವ ಬೇಸಿಗೆಯ ಬಿಸಿಯ ಧಗೆಗೆ ಹಲವು ಸಾರಿ ನಮ್ಮನ್ನು ತೋಯಿಸುತ್ತಿರುವ ಬೆಂಗಳೂರಿನ ಒಂದು ಮಾಲ್ ನಲ್ಲಿ (ಹೆಸರಿನ ಅವಶ್ಯಕತೆಯಿಲ್ಲ). ಎಲ್ಲಿ ಕೂರೋಣ ಅಂದಿದ್ದಕ್ಕೆ, ಕರೆದ ಹೋಟೇಲಿನ ಬಳಿ ಬರದೆ, ಆಟೋ ಡ್ರೈವರಿನ ದಯೆಯಿಂದ ಸ್ವಲ್ಪ ದೂರದಲ್ಲೇ ಇಳಿದುಕೊಂಡ ಹರಿಯನ್ನು ಕರೆದುಕೊಂಡು ಟ್ರಾಫಿಕ್ ಕಾರಣದಿಂದ ಕೊನೆಗೆ ಪಾರ್ಕಿಂಗ್ ಸಿಕ್ಕರೆ ಸಾಕೆಂದು ಮಾಲ್ ಗೆ ಬಂದು ಕೂತದ್ದಾಯಿತು. ಮರಗಳನ್ನು ಕಡಿದೇ ತೀರುತ್ತೇವೆಂದು ಜನರು ಕುಳಿತಿರುವಾಗ, ಇನ್ನು ನಾ ಮರವನ್ನೆಲ್ಲಿಂದ ಹುಡುಕಿ ತರೋದು?ಮಾಲ್ ನ ಹೊರಗಡೆಯ ಕಟ್ಟೆಯೇ ನೆರಳಿಲ್ಲದ ಅರಳಿಕಟ್ಟೆ ಎಂದುಕೊಳ್ಳಬೇಕಷ್ಟೇ. 

ನಾನ್ಯಾಗೆ ಹೊರಗೆ ಬಂದೆ ಆ ಕೂಪದಿಂದ.. ನನ್ನಿಂದ ಮಾತಾಡ್ಲಿಕ್ಕೆ, ಇಷ್ಟೆಲಾ ಬರೀಲಿಕ್ಕೆ ಹ್ಯಾಗೆ ಸಾಧ್ಯ ಆಗ್ತಿದೆ? ಜೀವನದ ಅನೇಕ ವಿಷಯಗಳ ಬಗ್ಗೆ ನನ್ನ ಅನಿಸಿಕೆಗಳನ್ನು, ಅನುಭವಗಳನ್ನು ಹಂಚಿಕೊಳ್ಳಲಿಕ್ಕಾದರೂ ಸಾಧ್ಯ ಹೇಗಾಯ್ತು?  ಇಂದೂ ಮೊದಮೊದಲಿಗೆ ಚಿಕ್ಕವನಿದ್ದಾಗಿನಿಂದಿರುವ ಅಳುಕು ಮನದಲ್ಲಿ ಮೂಡಿದರೂ ಅದನ್ನು ಹೆದರಿಸಿ ಇತರರೊಡನೆ ಬೆರೆಯಲಿಕ್ಕೆ, ಮಾತಾಡಲಿಕ್ಕೆ, ಕಚೇರಿಯಲ್ಲಿ ಕೆಲಸ ಮಾಡಿ, ಕೆಲಸ ತೆಗೆದುಕೊಳ್ಳಲಿಕ್ಕೆ, ಗೆಳೆಯರನ್ನು ಸಂಪಾದಿಸಲಿಕ್ಕೆ ಹೀಗೆ ಹತ್ತು ಹಲವಾರು ಸಾಧ್ಯತೆಗಳನ್ನು ನೋಡ್ಲಿಕ್ಕೆ ಸಾಧ್ಯವಾಗ್ತಿರೋದನ್ನು ನೋಡಿದ ಮೇಲೆ, ನನಗೂ ಆ ಅರಳಿಕಟ್ಟೆಯ ಸಹವಾಸ ಯಾಕೆ ಮೊದಲೇ ಸಿಗಲಿಲ್ಲ.. ಈಗೇಕೆ ಅದು ನನಗೆ ಎಟುಕದಷ್ಟು ದೂರ ಸಾಗಿದೆ. ಅದನ್ನು ಹುಡುಕಿಕೊಂಡು ನಾನೇ ಅಲ್ಲಿಗೆ ಹೋದರೂ ನನ್ನ ನಿತ್ಯಕರ್ಮಾಧಿಗಳು ನನ್ನನ್ನು ಬಹುಬೇಗ ಆ ಪ್ರಪಂಚದಿಂದ ದೂರ ತಳ್ಳಿಬಿಡುತ್ತವೆ ಅನ್ನಿಸುತ್ತದೆ. ಮೇಲಿನ ಚಿತ್ರದ ಅರಳೀ ಮರವೂ, ಅಲ್ಲಿನ ಕಟ್ಟೆಯೂ ಒಂದು ದಿನದ ಆ ಯಾತ್ರೆಯಲಿ, ಕೆಲ ಘಳಿಗೆಯ ವಿಶ್ರಮತಾಣವಾಗಿ ಮಾತ್ರ ನನ್ನ ಮನದಲ್ಲಿ ಉಳಿದಿದೆ. 

ಕನಸುಗಳು ನನಸಾಗಿಯೂ, ನನಸಾದ ಕನಸುಗಳ ಮಧ್ಯೆ ಹೊಸ ಕನಸುಗಳು, ಅಲ್ಲಲ್ಲಿ ನನಸಾಗಿರೋದು ಬರೀ ನಂಬಿಕೆ ಅಷ್ಟೇ.. ಅದರ ಮಧ್ಯೆ ನೀನು ಸಾಧಿಸದೇ, ಅನುಭವದ ಅವಕಾಶದಿಂದ ವಂಚಿತನಾದಂತಹ ಕೆಲವು ಘಟನೆಗಳನ್ನು ಆಗಾಗ ನೆನಸಿ ಕೊಡುವ ಇಂತಹ ವಿಷಯಗಳನ್ನು ತರ್ಕಕ್ಕೆ ಒಡ್ಡಿದೊಡೆ ನಮ್ಮ ಜೀವನದ ಬ್ಯಾಲೆನ್ಸ್ ಶೀಟಿನ ಆಡಿಟ್ ಮಾಡಿದಂತಾಗಬಹುದಲ್ಲವೇ? ಅನುಭವಿಸದ ವಿಷಯಗಳ ಒಂದು ಪಟ್ಟಿ ದೊರೆತಾಗ ಅದನ್ನು ಅನುಭವಿಸಿಯೇ ತೀರ ಬೇಕೆಂಬ ಹಠದಿಂದಾದರೂ, ಬೇರೆಯವರು ನಿನ್ನಿಂದ ಆ ಕೆಲಸ ಸಾಧ್ಯವಿಲ್ಲ ಎಂದಾಗಲೂ ಅದನ್ನು ಸಾಧಿಸಿ ಕಟ್ಟಿದ ಕನಸುಗಳ ನನಸಾಗಿಸುತ್ತ ಜೀವನವನ್ನು ಮತ್ತಷ್ಟು ಸುಂದರ ಮಾಡಿಕೊಳ್ಳಬಹುದಲ್ಲವೇ?

ಬೆಂಗಳೂರಿನ ಅರಳೀಕಟ್ಟೆಗಳ ಹುಡುಕಾಟ ಕಾಂಕ್ರೀಟ್ ಮಾಲ್ ನಲ್ಲಿ ಕೊನೆಯಾಗದಿರಲಿ ಎಂಬ ಹೊಸ ಕನಸಿನ ಜೊತೆಗೆ...

Rating
No votes yet

Comments