ಅರವತ್ತರ ಭಾರತದ ಅರಳು ಮರುಳು

ಅರವತ್ತರ ಭಾರತದ ಅರಳು ಮರುಳು

ಅರವತ್ತರ ಭಾರತದ ಅರಳು ಮರುಳು

ಕಳೆದ ಶುಕ್ರವಾರ(3.8.07) ಎಚ್.ಗಣಪತಿಯಪ್ಪನವರ 84ನೇ ಹುಟ್ಟುಹಬ್ಬ. ಸಾಗರದಲ್ಲಿ ನಡೆದ ಈ ಸಮಾರಂಭದಲ್ಲಿ ಒಬ್ಬ ಅತಿಥಿಯಾಗಿ ಭಾಗವಹಿಸಿದ ಹೆಮ್ಮೆ ನನ್ನದು. ಈ ವಾರ ತನ್ನ ಅರವತ್ತನೇ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿರುವ ಸ್ವತಂತ್ರ ಭಾರತದಲ್ಲಿ, ಇಂತಹ ಮರೆತು ಹೋದ-ಮತ್ತು ಒಂದರ್ಥದಲ್ಲಿ ತಮ್ಮನ್ನು ತಾವೇ ಮರೆತುಕೊಂಡಿರುವ - ಮಹಾನುಭಾವರ ಹುಟ್ಟು ಹಬ್ಬವನ್ನು ಸಾರ್ವಜನಿಕವಾಗಿ ಆಚರಿಸುವ ಜನ - ಅದೂ ಯುವ ಜನ - ಇನ್ನೂ ಇದ್ದಾರೆ ಎನ್ನುವುದೇ, ಈ ಭಾರತ ಸಾಗುತ್ತಿರುವ ಹಾದಿಯ ಬಗ್ಗೆ ನಾವೆಲ್ಲ ಆಸೆ ಕಳೆದುಕೊಳ್ಳದಿರುವುದಕ್ಕೆ ಕಾರಣವಿರಬಹುದು!

ಅಂದ ಹಾಗೆ, ಯಾರು ಈ ಗಣಪತಿಯಪ್ಪ? ಸ್ವಾತಂತ್ರೋತ್ತರ ಕರ್ನಾಟಕದಲ್ಲಿನ ಪ್ರಥಮ ಜನಾಂದೋಲನವೆನಿಸಿಕೊಂಡ ಕಾಗೋಡು ಸತ್ಯಾಗ್ರಹದ ರೂವಾರಿ ಇವರು. ಎಪ್ಪತ್ತರ ದಶಕದಲ್ಲಿ ದೇವರಾಜ ಅರಸು ಕಾಲದಲ್ಲಿ ಜಾರಿಗೆ ಬಂದ ನಿಜವಾದ ಭೂ ಸುಧಾರಣಾ ಕಾನೂನುಗಳ ಮೂಲಕ ಉಳುವವನೇ ನೆಲದೊಡೆಯನಾದ ಕ್ರಾಂತಿಗೆ ಈ ಸತ್ಯಾಗ್ರಹ ಭೂಮಿಕೆ ಸಿದ್ಧ ಪಡಿಸಿತು ಎಂದು ಹೇಳಲಾಗುತ್ತದೆ. ಈಗ ನಿಂತು ರಾಜಕೀಯ ವಿಮರ್ಶೆ ಮಾಡುವವರಿಗೆ ಆ ಸತ್ಯಾಗ್ರಹದ ಅನೇಕ ಮಿತಿಗಳು ಕಾಣಬಹುದು ಆದರೆ, ಆಗ ನಾಗರಿಕ ಜೀವನದ ಸಂಪರ್ಕವೇ ಇಲ್ಲದ ಆ ಮಲೆನಾಡಿನ ಮೂಲೆಯೊಂದರಲ್ಲಿ. ಭೂ ಮಾಲೀಕರ ದಬ್ಬಾಳಿಕೆಯನ್ನು ಪ್ರಶ್ನಿಸುವ ಪರಿವೆಯೇ ಇಲ್ಲದೆ ಮೂಕ ಪಶುಗಳಂತೆ ದುಡಿದು ಹೀನಾಯ ಸ್ಥಿತಿಯಲ್ಲಿ ಬದುಕುತ್ತಿದ್ದ ಸಮುದಾಯವೊಂದರಲ್ಲಿ, ಸ್ವಾಭಿಮಾನದ ಪ್ರಜ್ಞೆಯನ್ನು ಜಾಗೃತಗೊಳಿಸಿ ತಮ್ಮ ಶೋಷಣೆಯನ್ನು ಪ್ರಶ್ನಿಸುವಂತೆ ಮಾಡಿದ ದೊಡ್ಡ ಜನಶಕ್ತಿ ಗಣಪತಿಯಪ್ಪ. ಗಣಪತಿಯಪ್ಪ ಹೀಗೆ ಮೂಡಿಸಿದ ಎಚ್ಚರವನ್ನೇ ಶಾಂತವೇರಿ ಗೋಪಾಲ ಗೌಡ ಹಾಗೂ ಅವರ ಸಮಾಜವಾದಿ ಪಕ್ಷದ ಕಾರ್ಯಕರ್ತರು ಅಲ್ಲಿ ಒಂದು ಅಭೂತಪೂರ್ವ ಸತ್ಯಾಗ್ರಹವನ್ನಾಗಿ ಮಾರ್ಪಡಿಸಿದ್ದು.

ಶುಭ್ರವಾದ ಖಾದಿ ಕಚ್ಚೆ ಪಂಚೆ, ಜುಬ್ಬಾ, ನೆಹರೂ ಕೋಟು ಮಾತ್ರವಲ್ಲದೆ, ಕಾಂಗ್ರೆಸ್ ಟೊಪ್ಪಿಗೆಯನ್ನೂ ಧರಿಸಿ ಇಂದೂ ನಿರ್ಭಿಡೆಯಿಂದ ಕಾಂಗ್ರೆಸ್ಸಿಗರಾಗಿ ಕಾಣಿಸಿಕೊಳ್ಳುವ ಎಂಭತ್ತನಾಲ್ಕರ ಹರೆಯದ ಈ ಸುಂದರ ಸದೃಢ ಕಾಯದ ಗಣಪತಿಯಪ್ಪನವರನ್ನು ನೋಡಿದಾಗ, ಕಾಂಗ್ರೆಸ್ಸಿನವರನ್ನು ನೋಡಿದಾಗಲೆಲ್ಲ ನೆತ್ತಿಗೆ ಏರುವ ಸಿಟ್ಟು ಸ್ವಲ್ಪ ಇಳಿಯತೊಡಗುತ್ತದೆ. ಹೌದು, ಕಾಂಗ್ರೆಸ್ಸಿನವರು ಹಿಂದೊಮ್ಮೆ ಹೀಗೂ ಗೌರವಾನ್ವಿತರಾಗಿ ಇದ್ದರು ಎಂಬ ನೆನಪು ಆಗತೊಡಗುತ್ತದೆ ಹಾಗೂ ಗಾಂಧಿ ಕಟ್ಟಿದ ಆಂದೋಲನ ಜನರ ವಿಶ್ವಾಸ ಗಳಿಸಿಕೊಂಡದ್ದು ಸುಮ್ಮನಲ್ಲ ಎಂಬ ಅರಿವು ಮೂಡತೊಡಗುತ್ತದೆ! 1942ರ 'ಭಾರತ ಬಿಟ್ಟು ತೊಲಗಿ' ಚಳುವಳಿಯಲ್ಲಿ ಭಾಗವಹಿಸಿ ಸರ್ಕಾರಿ ಸೇವೆಯಿಂದ ಹೊರದೂಡಲ್ಪಟ್ಟು, ಆಗಿನ ಮುಂಬೈ ಪ್ರಾಂತ್ಯದ ಸಿದ್ದಾಪುರದಿಂದ ಮೈಸೂರು ಪ್ರಾಂತ್ಯದ ಶಿವಮೊಗ್ಗ ಜಿಲ್ಲೆಗೆ ತಲೆ ತಪ್ಪಿಸಿಕೊಂಡು ಬಂದ ಇಪ್ಪತ್ತರ ಹರೆಯದ ಗಣಪತಿಯಪ್ಪ, ಆಗ ಅರಣ್ಯದಲ್ಲಿ ಹೆಂಡ ಇಳಿಸುವ ಮತ್ತು ಭೂ ಮಾಲೀಕರ ಬಳಿ ಗೇಣಿ ಮಾಡುವ ಕೆಲಸಗಳಿಗೇ ಸೀಮಿತಗೊಂಡಿದ್ದ ಅಲ್ಲಿನ ದೀವರ ಸಮುದಾಯದ ಬಹುಶಃ ಏಕೈಕ ವಿದ್ಯಾವಂತ. ಆ ವಿದ್ಯೆಯೇ ಆತನನ್ನು ಮೇಲ್ಜಾತಿ ಭೂಮಾಲಿಕರ ಪ್ರಭುತ್ವದ ನಡುವೆಯೂ ವಿಚಲಿತನನ್ನಾಗಿ ಮಾಡದೆ ತನ್ನ ಜಾತಿಯವರನ್ನು ಜಾತಿ ಹೆಸರು ಬಿಟ್ಟು, 'ಸಾಗರ ತಾಲ್ಲೂಕು ರೈತ ಸಂಘ' ಎಂಬ ಹೆಸರಲ್ಲಿ ಸಂಘಟಿಸಲು ಸಾಧ್ಯವಾದದ್ದು. ಆ ಸಂಘಟನೆಯೊಳಗಿಂದಲೇ ಈಗಿನ ಕಾಗೋಡು ತಿಮ್ಮಪ್ಪ, ಬಂಗಾರಪ್ಪ ಮುಂತಾದ ಅಸ್ಪೃಶ್ಯೇತರ ಕೆಳ ಜಾತಿಗಳ ನಾಯಕತ್ವ - ಅದು ಇಂದು ಇತರ ಜಾತಿಗಳ ನಾಯಕತ್ವಗಳಂತೆಯೇ ಯಾವ ಮಟ್ಟವನ್ನಾದರೂ ಮುಟ್ಟಿರಲಿ - ಮೂಡುವಂತಾದದ್ದು. ಇದರಲ್ಲಿ ಗೋಪಾಲ ಗೌಡ ಹಾಗೂ ಅವರ ಸಮಾಜವಾದಿ ಚಳುವಳಿಯ ದೊಡ್ಡ ಪಾಲು ಇರುವುದಾದರೂ, ಸ್ವಾತಂತ್ರ್ಯೋತ್ತರ ಭಾರತದ ಸಂಸದೀಯ ರಾಜಕಾರಣದ ಸಾಮಾಜಿಕ ಸ್ವರೂಪವನ್ನು ಬದಲಿಸಿ, ಪ್ರಜಾಪ್ರಭುತ್ವಕ್ಕೆ ನಿಜವಾದ ಅರ್ಥ ನೀಡಿದ ಈ ಪ್ರಯತ್ನದಲ್ಲಿ, ಗಣಪತಿಯಪ್ಪ ಈಗಲೂ ಕಷ್ಟಪಟ್ಟು ಪ್ರತಿನಿಧಿಸುತ್ತಿರುವಂತೆ ತೋರುವ ಗಾಂಧಿ ರಾಜಕಾರಣದ ಪಾತ್ರ ಗಮನಾರ್ಹವಾದದು ಎಂಬುದು ಇಲ್ಲಿ ಪ್ರಸ್ತುತ.

ಹಾಗೆ ನೋಡಿದರೆ, ಗಣಪತಿಯಪ್ಪ ಇಂದು ಗಾಂಧಿ ರಾಜಕಾರಣದ ಅವನತಿಯ ಗುಟ್ಟನ್ನೂ ಹೇಳುವ ರಾಜಕೀಯ ಸಂಕಥನವೊಂದರ ನಾಯಕನಂತೆಯೂ ಇದ್ದಾರೆ! ಅವರ ಮಾತುಗಳನ್ನೀಗ ಕೇಳುತ್ತ ಹೋದರೆ, ಯಾರಿಗೆ ಬೇಕು ಈ ಶುದ್ಧ ಹಸ್ತ, ಸರಳ ಸಭ್ಯ ಬದುಕು - ಅದು ಸಮಕಾಲೀನ ಜೀವನದ ರಾಜಕೀಯ ಸಂಕೀರ್ಣತೆಗಳಿಗೆ ಸ್ಪಂದಿಸದೇ ಹೋಗುವಂತಿದ್ದರೆ ಎನ್ನಿಸಿದರೆ ಆಶ್ಚರ್ಯವಿಲ್ಲ. ಕಾಗೋಡು ಸತ್ಯಾಗ್ರಹದ ನಂತರದಲ್ಲೇ ನಡೆದ ರಾಜ್ಯದ ಮೊದಲ ಸಾರ್ವತ್ರಿಕ ಚುನಾವಣೆಗಳಲ್ಲಿ ಸಾಗರ ವಿಧಾನ ಸಭಾ ಕ್ಷೇತ್ರದಿಂದ ಸಮಾಜವಾದಿ ಪಕ್ಷದ ಅಭ್ಯರ್ಥಿಯಾಗಿ ಗೋಪಾಲ ಗೌಡರನ್ನು ನಿಲ್ಲಿಸಿ ಗೆಲ್ಲಿಸಿದ ಗಣಪತಿಯಪ್ಪ, ಗೋಪಾಲ ಗೌಡರು ಎಷ್ಟು ಒತ್ತಾಯಿಸಿದರೂ ಸಮಾಜವಾದಿ ಪಕ್ಷ ಸೇರಲು ನಿರಾಕರಿಸಿ ಸ್ಥಳೀಯ ಕಾಂಗ್ರೆಸ್ ಪುಡಿ ರಾಜಕಾರಣದಲ್ಲೇ ಈವರೆಗೆ ಕಾಲ ಕಳೆದಿದ್ದಾರೆ! ಗೋಪಾಲ ಗೌಡರೊಮ್ಮೆ ಈ ಬಗ್ಗೆ ಹತಾಶೆಯಿಂದ 'ನಿಮ್ಮಂತಹವರಿಗೆ ಗುಂಡು ಹಾಕದ ಹೊರತು ಸಮಾಜವಾದಿ ಚಳುವಳಿ ಬೆಳೆಯುವುದಿಲ್ಲ' ಎಂದು ಹಸಿ ಹುಸಿಯಾಗಿ ರೇಗಿದ್ದೂ ಉಂಟಂತೆ! ನನಗೆ ಕುತೂಹಲವಾಗಿ, ಮೊನ್ನೆ ಅವರನ್ನು ನೀವು ಸಮಾಜವಾದಿ ಪಕ್ಷವನ್ನೇಕೆ ಸೇರಲಿಲ್ಲ ಎಂದು ಕೇಳಿದೆ. ಅದಕ್ಕವರು ಬೋಳು ಬೋಳಾಗಿ ನಗುತ್ತಾ, ಕಡಿದಾಳು ಮಂಜಪ್ಪನವರನ್ನು ಬಿಟ್ಟು ಬರಲಾಗಲಿಲ್ಲ ಎಂದರು. ಅವರ ಧ್ವನಿಯಿಂದಲೇ ಇದು ಬರೀ ಸಬೂಬು ಎನ್ನಿಸಿ ನಾನು, 'ನಿಮ್ಮ ಅತಿ ಸಭ್ಯತೆ ಅತಿ ಸಜ್ಜನಿಕತೆಗಳೇ, ಸಮಾಜವಾದಿಗಳ ನೇರ ಮುಖಾಮುಖಿಯ ರಾಜಕಾರಣದಿಂದ ದೂರವಿರುವಂತೆ ಮಾಡಿತು ಅಲ್ಲವೇ?' ಎಂದು ಕೇಳಿದಾಗ ಅವರು ಮತ್ತಷ್ಟು ಬೋಳು ಬೋಳಾಗಿ ನಕ್ಕು; ಮುಖ ಮೇಲೆತ್ತಿ ಬಾಯಿಗೆ ಮುಂಗೈ ಇಳಿಸುವ ಭಂಗಿ ತೋರಿಸುತ್ತಾ, ಸಮಾಜವಾದಿಗಳ ಈ ಅಭ್ಯಾಸ ತಮಗೆ ಸರಿ ಬರಲಿಲ್ಲ ಎಂದು ಮಾರ್ಮಿಕವಾಗಿ ನುಡಿದರು!

ನಿಮಗೆ ಸಮಾಜವಾದಿಗಳಲ್ಲಿ ಆಗ ಅದೊಂದನ್ನು ಬಿಟ್ಟು ಬೇರೇನೂ ಕಾಣಲಿಲ್ಲವೇ ಮತ್ತು ಇಂದು ಈ ಅಭ್ಯಾಸ ಎಷ್ಟು ಕಾಂಗ್ರೆಸ್ಸಿಗರಿಗಿಲ್ಲ ಎಂದೇನೂ ನಾನು ಅವರನ್ನು ಕೇಳಲು ಹೋಗಲಿಲ್ಲ. ಏಕೆಂದರೆ, ಇಂತಹ ಪ್ರಶ್ನೆಗಳೆಲ್ಲ ಜುಜುಬಿ ಎನ್ನಿಸುವಷ್ಟರ ಮಟ್ಟಿಗೆ ಇವೊತ್ತಿನ ರಾಜಕಾರಣ ಗಬ್ಬೆದ್ದು ಹೋಗಿದೆ ಎಂಬುದು ಅವರಿಗೂ ಗೊತ್ತು. ಆದರೆ ಅವರಿಗೆ ಗೊತ್ತಾಗದೇ ಹೋಗಿರುವ ವಿಷಯವೆಂದರೆ, ಇದಕ್ಕೆ ಬರೀ ಸಭ್ಯತೆ - ಸಜ್ಜನಿಕೆಯನ್ನೇ ಸಾರ್ವಜನಿಕ ಜೀವನದ ಮುಖ್ಯ ಗುಣವನ್ನಾಗಿ ಪರಿಗ್ರಹಿಸಿ, ಗಾಂಧಿ ರಾಜಕಾರಣದ ಹಲ್ಲನ್ನೇ ಕಳಚಿಟ್ಟ ತಮ್ಮಂತಹವರ ಅತಿ ಮಡಿವಂತಿಕೆಯ ರಾಜಕಾರಣವೇ ಕಾರಣ ಎಂಬುದು. ಹಾಗಾಗಿಯೇ ಅವರು 'ನಕ್ಸಲೀಯರ ಬಳಿ ನನ್ನನ್ನು ಕರೆದುಕೊಂಡು ಹೋಗಿ; ನಾನು ಅವರ ಮನ ಒಲಿಸುವೆ' ಎಂದು ವೀರಾವೇಶದ ಮಾತಾಡುವರಾದರೂ, 'ಆದರೆ ನಾನು ಅವರೊಂದಿಗೆ ಮಾಡಿಕೊಂಡು ಬರುವ ಒಪ್ಪಂದವನ್ನು ಜಾರಿಗೊಳಿಸುವಂತೆ ಸರ್ಕಾರವನ್ನು ಒಪ್ಪಿಸುವುದು ನಿಮ್ಮ ಜವಾಬ್ದಾರಿ' ಎಂದು ಅಂತಿಮ ಜವಾಬ್ದಾರಿಯನ್ನು ನಮಗೇ ಒಪ್ಪಿಸಿಬಿಡುವಷ್ಟು ಅಸಹಾಯಕರು ಕೂಡ... ಇದೆಲ್ಲ ಅವರಿಗೆ ಸ್ಪಷ್ಟವಾಗುವ ಹೊತ್ತಿಗೆ ಕಾಲ ಮಿಂಚಿತ್ತೆಂದು ಕಾಣುತ್ತದೆ. ಇದನ್ನೇ ಕಾಗೋಡು ಸತ್ಯಾಗ್ರಹದಲ್ಲಿ ಭಾಗವಹಿಸಿದ್ದ ಮತ್ತೋರ್ವ ಹಿರಿಯ ಸಮಾಜವಾದಿ ಜಿ.ಸದಾಶಿವರಾಯರು 'ಸ್ವಾತಂತ್ರ್ಯ ಹೋರಾಟ ಸರಿಯಾಗಿ ನಡೆದಿದ್ದರೆ, ಕಾಗೋಡು ಹೋರಾಟದ ಅಗತ್ಯವೇ ಇರುತ್ತಿರಲಿಲ್ಲ' ಎಂದು ವಿಶ್ಲೇಷಿಸುವ ಮೂಲಕ ಕಾಂಗ್ರೆಸ್ ಹಾಗೂ ಸಮಾಜವಾದಿಗಳ ನಡುವೆ ಇದ್ದದ್ದು ಸಭ್ಯತೆ - ಸಜ್ಜನಿಕೆಯ ವ್ಯತ್ಯಾಸವಲ್ಲ, ದೃಷ್ಟಿಕೋನದ ವ್ಯತ್ಯಾಸ ಎಂದು ಸೂಚಿಸಿದ್ದುದು.

ಇಂದು 60ನೇ ಸ್ವಾತಂತ್ರ್ಯೋತ್ಸವದ ಸಂದರ್ಭದ ಹೊತ್ತಿಗೆ, ಸ್ವಾತಂತ್ರ್ಯ ಹೋರಾಟವನ್ನು ಬೇರೆ ಬೇರೆ ನೆಲೆಗಳಲ್ಲಿ ಪುನರ್ವಿಶ್ಲೇಷಿಸುವ ಇಂತಹ ಅನೇಕ ಪ್ರಯತ್ನಗಳು ಆರಂಭವಾಗಿವೆ. ಸ್ವತಂತ್ರ ಭಾರತದ 60 ವರ್ಷಗಳ ಬದುಕು ದಲಿತರ ಹಾಗೂ ಇತರ ಅನೇಕ ವಂಚಿತ ವರ್ಗಗಳ ದೃಷ್ಟಿಯಿಂದ ಅಷ್ಟೇನೂ ಆಶಾದಾಯಕವಾಗಿಲ್ಲ ಎಂಬ ವಾಸ್ತವದ ಹಿನ್ನೆಲೆಯಲ್ಲಿ ಅಂಬೇಡ್ಕರ್ ಹೆಸರು ಮುಂದೆ ಮಾಡಿಕೊಂಡು ಮತ್ತು ಜಾಗತೀಕರಣ ಉಂಟು ಮಾಡಿರುವ ಸಾಂಸ್ಕೃತಿಕ ಅಸ್ಮಿತೆಯ ಗೊಂದಲದ ಹಿನ್ನೆಲೆಯಲ್ಲಿ ಸಾವರ್ಕರ್ - ಗುರೂಜಿಗಳ ಹೆಸರು ಮುಂದೆ ಮಾಡಿಕೊಂಡು; ಗಾಂಧಿ ರಾಜಕಾರಣವನ್ನು - ಅದರ ತತ್ವ ಹಾಗೂ ಆಶಯಗಳನ್ನು - ಅಪಮೌಲ್ಯೀಕರಿಸುವ ಪ್ರಯತ್ನಗಳೂ ನಡೆಯುತ್ತಿವೆ. ಇದಕ್ಕೆ ಹೊಂದಿಕೊಂಡಂತೆ ನಮ್ಮ ಬೇಜವಾಬ್ದಾರಿ ಮಾಧ್ಯಮ ಪ್ರಪಂಚ, ಕೆಲವು ತಿಂಗಳುಗಳ ಹಿಂದೆ ಸಮರ್ಥನೀಯ ಕಾರಣಗಳಿಗಾಗಿಯೇ ನಡೆದ ಬೃಹತ್ ದಲಿತ ಪ್ರತಿಭಟನೆಗಳಿಂದ ಹಾಗೂ ಈಚಿನ ಮಾಯಾವತಿ ವಿಜಯದಿಂದ ಸ್ಫೂತರ್ಿಗೊಂಡು, ತಮ್ಮ ಎಸ್.ಎಂ.ಎಸ್. ಸಮೀಕ್ಷೆಗಾಗಿ 'ರಾಷ್ಟ್ರದಲ್ಲಿ ಗಾಂಧಿ ವಾರಸುದಾರಿಕೆ ಮುಗಿದು, ಅಂಬೇಡ್ಕರ್ ವಾರಸುದಾರಿಕೆ ಆರಂಭವಾಗಿದೆಯೇ?' ಎಂಬಂತಹ ಪ್ರಶ್ನೆಗಳನ್ನೂ ಕೇಳಲಾರಂಭಿಸಿ ಬಿಟ್ಟಿವೆ - ಈಗಾಗಲೇ ಗಾಂಧಿ ವಾರಸುದಾರಿಕೆಯ ಜಾಗವನ್ನು, ಸಾವರ್ಕರ್ - ಗುರೂಜಿ ವಾರಸುದಾರಿಕೆ ಸದ್ದಿಲ್ಲದೆ ಆಕ್ರಮಿಸಿಕೊಳ್ಳತೊಡಗಿದೆ ಎಂಬ ಪರಿವೆಯೇ ಇಲ್ಲದೆ!

ಇಂತಹ ಅಮಾಯಕ ಅಸೂಕ್ಷ್ಮತೆಯಿಂದಾಗಿಯೇ, ಇಂದು ಸಂಪೂರ್ಣವಾಗಿ ವ್ಯಾಪಾರಿ ಶಕ್ತಿಗಳ ಕೈವಶವಾಗಿರುವ ನಮ್ಮ ಮಾಧ್ಯಮ ಪ್ರಪಂಚ, ಮುಂಬೈ ಸ್ಫೋಟ ಪ್ರಕರಣದಲ್ಲಿ ವಿವಿಧ ವಯೋಮಾನಗಳ ನೂರು ಜನರಿಗೆ ವಿವಿಧ ರೀತಿಯ ಅಪರಾಧಗಳಿಗಾಗಿ ಗಲ್ಲು ಶಿಕ್ಷೆಯಿಂದ ಹಿಡಿದು ಮೂರು ವರ್ಷಗಳ ಕಠಿಣ ಶಿಕ್ಷೆಯವರೆಗೆ ದಂಡನೆ ಪ್ರಕಟಿಸಿದ್ದರೂ, ಸಂಜಯ ದತ್ತನನ್ನು ಮಾತ್ರ ಆರಿಸಿಕೊಂಡು, ಆತನ 'ಗಾಂಧಿಗಿರಿ' ಪಾತ್ರವನ್ನು ನೆನಪಿಸಿ ಅನುಕಂಪ ಸೃಷ್ಟಿಸಲು ಆತನನ್ನು 'ಮುನ್ನಾ ಭಾಯಿ' ಎಂದೇ ಕರೆಯುತ್ತಾ; ಆತನಿಗೆ ಕೊಟ್ಟಿರುವ ಆರು ವರ್ಷಗಳ ಕಠಿಣ ಶಿಕ್ಷೆ ಸಮರ್ಥನೀಯವೇ, ಆತ ಸೆರೆಮನೆಯಲ್ಲಿ ಬೆಳಿಗ್ಗೆಯಿಂದ ಸಂಜೆಯವರೆಗೆ ಏನು ಮಾಡುತ್ತಾನೆ, ಆತನಿಗೆ ನೀಡಲಾಗಿರುವ ಶಿಕ್ಷೆಯ ವಿರುದ್ಧ ಎಂತೆಂತಹ ಜನ ಏನೇನು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ ಇತ್ಯಾದಿ ವಿಷಯಗಳ ಬಗ್ಗೆ ಹಗಲೂ ರಾತ್ರಿ ಚಚರ್ೆ - ವರದಿಗಳನ್ನು ನಿರ್ಲಜ್ಜವಾಗಿ ಪ್ರಸ್ತುತ ಪಡಿಸುತ್ತಿದೆ. ಈ ನಿರ್ಲಜ್ಜತನದಿಂದಾಗಿಯೇ ಅದು, 1984ರ ಸಿಖ್ ಹತ್ಯಾಕಾಂಡ, 1993ರ ಬಾಬ್ರಿ ಮಸೀದಿ ಧ್ವಂಸ ಪ್ರಕರಣ ಹಾಗೂ ಮುಂಬೈ ಸ್ಫೋಟ ಪ್ರಕರಣಕ್ಕೆ ಕಾರಣವಾದ ಮುಂಬೈ ಕೋಮು ಗಲಭೆಯ ಅಪರಾಧಿಗಳನ್ನು ಕುರಿತಂತೆ ಏನು ಕ್ರಮ ಕೈಗೊಳ್ಳಲಾಗಿದೆ ಮತ್ತು ಗೋಧ್ರಾ ಹತ್ಯಾಕಾಂಡ ಹಾಗೂ ಆನಂತರದ ಮುಸ್ಲಿಮರ ಮಾರಣ ಹೋಮ ಕಾರ್ಯಕ್ರಮದ ಹಿಂದಿರುವ ನಿಜವಾದ ಅಪರಾಧಿಗಳನ್ನು ಗುರುತಿಸಲು ಏಕಿಷ್ಟು ವಿಳಂಬವಾಗುತ್ತಿದೆ ಎಂಬ ಪ್ರಶ್ನೆಯನ್ನು, 60ವರ್ಷಗಳ ಸ್ವಾತಂತ್ರ್ಯಾಚರಣೆಯ ಸಂದರ್ಭದಲ್ಲಿ ನಡೆಸಬೇಕಾದ ಮುಖ್ಯ ಚರ್ಚೆಯ ಕೇಂದ್ರಕ್ಕೆ ತರುವ ನೈತಿಕತೆಯನ್ನೇ ಕಳೆದುಕೊಂಡಿದೆ. ಬದಲಿಗೆ, ಸಂಜಯ ದತ್ತನ ಶಿಕ್ಷೆಯನ್ನು ಪ್ರಶ್ನಾರ್ಹಗೊಳಿಸುತ್ತಿರುವ ಕಾರ್ಯಕ್ರಮಗಳ ಲಜ್ಜೆಗೇಡಿತನವನ್ನು ಮುಚ್ಚಿಕೊಳ್ಳಲೆಂಬಂತಷ್ಟೇ, ಇದನ್ನು ಚರ್ಚೆಯ ಒಂದು ಉಪ ಪ್ರಶ್ನೆಯೆಂಬಂತೆ ಕೇಳಲಾಗುತ್ತಿದೆ! ಜಾಗತೀಕರಣಗೊಂಡ ಭಾರತದ ಅಭಿವ್ಯಕ್ತಿ ಸಾಮಥ್ರ್ಯದ ಪ್ರತೀಕವೆನಿಸಿರುವ ನಮ್ಮ ಮಾಧ್ಯಮ ಪ್ರಪಂಚದ ಸ್ಥಿತಿಯಿದು!

ಈ ಪ್ರಶ್ನೆ 60 ವರ್ಷಗಳ ಸ್ವತಂತ್ರ ಭಾರತ ತಾನು ಸಾಗಿ ಬಂದಿರುವ ಹಾದಿಯನ್ನೊಮ್ಮೆ ಹಿಂದಿರುಗಿ ನೋಡುವ ಹಾಗೂ ಆ ಮೂಲಕ ಈ 60 ವರ್ಷಗಳ ಸಾಧನೆಯನ್ನು ಪುನರ್ಮೌಲ್ಯೀಕರಣಕ್ಕೊಳಪಡಿಸುವ ದೃಷ್ಟಿಯಿಂದಲಾದರೂ ಮುಖ್ಯವಾಗಬೇಕಿದೆ. ಅನೇಕ ರಾಷ್ಟ್ರೀಯ ಮಾನಸಿಕ ಬಿರುಕುಗಳಿಗೆ, ತಾರತಮ್ಯಗಳಿಗೆ, ಹಿಂಸಾಚಾರಗಳಿಗೆ ಕಾರಣವಾಗಿರುವ ಅಸಮ ನ್ಯಾಯ ವಿತರಣೆಯ ಪ್ರಶ್ನೆ ಇದರಲ್ಲಡಗಿದೆ. ಅನೇಕ ಸಮುದಾಯಗಳಿಂದು ತಾವು ನಿಜವಾಗಿಯೂ ರಾಷ್ಟ್ರೀಯ ಜೀವನದಲ್ಲಿ ಸಮಾನ ಹಕ್ಕುಗಳೊಂದಿಗೆ ಬದುಕುವ ಸ್ಥಿತಿ ಇದೆಯೇ ಎಂದು ಕೇಳಿಕೊಳ್ಳುವಂತಹ ವಾತಾವರಣ ನಿರ್ಮಾಣವಾಗಿದೆ. ಹಾಗಾಗಿ ಇದು ಭಾರತದ ಭವಿಷ್ಯದ ಪ್ರಶ್ನೆಯೂ ಆಗಿದೆ. ಮುಂದೆ ಭಾರತವನ್ನು ಅಂಬೇಡ್ಕರ್ ವಾರಸುದಾರಿಕೆಯಲ್ಲೋ, ಸಾವರ್ಕರ್ - ಗುರೂಜಿ ವಾರಸುದಾರಿಕೆಯಲ್ಲೋ ಅಥವಾ ಇವರೆಡರ ಜಾಣ ಸಂಯೋಜನೆಯಂತಿರುವ ಮಾಯಾವತಿ ವಾರಸುದಾರಿಕೆಯಲ್ಲೋ ಕಟ್ಟ ಹೊರಟಿರುವವರು, ಈವರೆಗೆ ಸ್ವತಂತ್ರ ಭಾರತವನ್ನು ನಿಜವಾಗಿಯೂ ಗಾಂಧಿ ವಾರಸುದಾರಿಕೆಯಲ್ಲಿ ಕಟ್ಟಲಾಯಿತೇ ಎಂಬ ಪ್ರಶ್ನೆಯನ್ನು ದಾಟಿಕೊಂಡೇ ಮನ್ನಡೆಯಬೇಕಾಗಿದೆ. ಸ್ವಾತಂತ್ರ್ಯೋತ್ತರ ಕಾಂಗ್ರೆಸ್ಸಿನ ತಪ್ಪು - ಒಪ್ಪುಗಳನ್ನು ಗಾಂಧಿ ವಾರಸುದಾರಿಕೆಯ ಕೊರಳಿಗೆ ಕಟ್ಟುವವರಿಗೆ, ಗಾಂಧಿ ವಾರಸುದಾರಿಕೆಯೆನ್ನುವುದರ ಅರ್ಥವೇ ತಿಳಿದಿರಲಾರದು. ಏಕೆಂದರೆ, ಒಮ್ಮೆ ನೆಹರೂ ಯುಗ ಆರಂಭವಾದೊಡನೆ ಆಡಳಿತ ವಲಯದಲ್ಲಿ ಗಾಂಧಿ ವಾರಸುದಾರಿಕೆ ಎನ್ನುವುದೇ ಅಸಂಗತವಾಯಿತು. ಇದೊಂದು ರೀತಿಯಲ್ಲಿ, ಗಣಪತಿಯಪ್ಪನವರಂತಹವರ ಅತಿ ಸಭ್ಯತೆ - ಸಜ್ಜನಿಕೆಗಳ ಮೂಲಕ ವ್ಯಕ್ತವಾದ ಗಾಂಧಿವಾದಿಗಳ ಸಾಮೂಹಿಕ ಆತ್ಮಹತ್ಯೆ ಇದ್ದಂತೆ!

ನೆಹರೂ ಎಂಬ ಬ್ರಿಟಿಷ್ ವಾರಸುದಾರನ ಕಾಲದಲ್ಲಿ ಆರ್ಥಿಕ ನೀತಿಗಳ ನೆಲೆಯಲ್ಲಿ ಗಾಂಧಿ ವಾರಸುದಾರಿಕೆಗೆ ತಿಲಾಂಜಲಿ ನೀಡಲಾಯಿತಾದರೆ; ಇಂದಿರಾ ಗಾಂಧಿ ಎಂಬ 'ದುರ್ಗಾ ಮಾತೆ'ಯ ಕಾಲಕ್ಕೆ ಈಶಾನ್ಯ ರಾಜ್ಯಗಳ, ಜಮ್ಮು-ಕಾಶ್ಮೀರ ಹಾಗೂ ಪಂಜಾಬ್ ರಾಜ್ಯಗಳ ಪ್ರಾದೇಶಿಕ ರಾಜಕಾರಣದ ಮೇಲೆ ದಬ್ಬಾಳಿಕೆ ನಡೆಯುವ ಮೂಲಕ ಗಾಂಧಿ ವಾರಸುದಾರಿಕೆಯ ಜಾಗದಲ್ಲಿ ಸಾವರ್ಕರ್ - ಗುರೂಜಿ ವಾರಸುದಾರಿಕೆಯನ್ನು ಬೆಳೆಸುವ ಪ್ರವೃತ್ತಿಯನ್ನು ಆರಂಭಿಸಲಾಯಿತೆಂದು ಹೇಳಬಹುದು. ನಂತರ ರಾಜೀವ್ ಗಾಂಧಿ ಎಂಬ ಹುಂಬ ಪ್ರಧಾನಿ ಮಂತ್ರಿಯ ಕಾಲಕ್ಕೆ, ಷಾ ಬಾನು ಪ್ರಕರಣದಲ್ಲಿ ಕಾಂಗ್ರೆಸ್ ವರ್ತಿಸಿದ ರೀತಿ ಹಾಗೂ ಬಾಬ್ರಿ ಮಸೀದಿಯ ಆವರಣದಲ್ಲಿನ ವಿವಾದಾಸ್ಪದ ಮಂದಿರದ ಬಾಗಿಲು ತೆಗೆಸಿ ಪೂಜೆಗೆ ಅವಕಾಶ ಮಾಡಿಕೊಟ್ಟ ಮತ್ತು ನರಸಿಂಹರಾವ್ ಎಂಬ ಚಾಣಾಕ್ಷ ರಾಜಕಾರಣಿಯ ಕಾಲಕ್ಕೆ ಅಲ್ಲಿ ಕರಸೇವೆಗೆ ಅನುಮತಿ ನೀಡಿದ ಸಮಯ ಸಾಧಕ ರಾಜಕಾರಣವು, ಸಾವರ್ಕರ್ - ಗುರೂಜಿ ವಾರಸುದಾರಿಕೆಯ 'ಹಿಂದುತ್ವ'ದ ರಾಜಕಾರಣಕ್ಕೆ ದೊರೆತ ಪರೋಕ್ಷ ಅಂಗೀಕಾರವೇ ಆಗಿತ್ತು. ನಂತರ ಬಿ.ಜೆ.ಪಿ. ನೇತೃತ್ವದ ಎನ್.ಡಿ.ಎ. ಸರ್ಕಾರದ ಮೂಲಕ ಅದಕ್ಕೆ ಅಧಿಕೃತ ಮನ್ನಣೆ ದೊರಕಿತಷ್ಟೆ. ಇಂದು ಸೋನಿಯಾ ಗಾಂಧಿ - ಮನಮೋಹನ ಸಿಂಗರ ಸರ್ಕಾರದ ಆರ್ಥಿಕ ನೀತಿಗಳನ್ನು ನೋಡಿದರೆ - ಅದು ಕಾಂಗ್ರೆಸ್ ಹೆಸರಿನ ಪಕ್ಷವೊಂದರ ನೇತೃತ್ವದ ಸರ್ಕಾರ ಎಂಬೊಂದು ಕಾರಣಕ್ಕೇ - ಅದನ್ನು ಗಾಂಧಿ ವಾರಸುದಾರಿಕೆಯ ಸರ್ಕಾರ ಎನ್ನಲಾದೀತೆ?
ಹೀಗಾಗಿ ಈ 60 ವರ್ಷಗಳಲ್ಲಿ ವಿಶ್ವಾಸಾರ್ಹತೆ ಕಳೆದುಕೊಂಡಿರುವುದು ಗಾಂಧಿ ವಾರಸುದಾರಿಕೆ ಎಂದು ಹೇಳುವವರು ಅಸಂಬದ್ಧವಾಗಿ ಮಾತನಾಡುತ್ತಿದ್ದಾರೆ ಎಂದೇ ಹೇಳಬೇಕು. ವಾಸ್ತವಾಗಿ, ಈ 60 ವರ್ಷಗಳಲ್ಲಿ ಗಾಂಧಿ ವಾರಸುದಾರಿಕೆಯನ್ನು ಆರಂಭಿಸುವ ಪ್ರಯತ್ನಗಳು ವಿಫಲವಾಗಿವೆ ಎಂದು ಹೇಳಬೇಕು. ಸಮಾಜವಾದಿ ಚಳುವಳಿ, ಕ್ರೋಢೀಕೃತಗೊಳ್ಳಲಾಗದ ಅದರ ತಾತ್ವಿಕತೆ ಹಾಗೂ ಸಡಿಲ ಸಂಘಟನೆಯ ಕಾರಣಗಳಿಂದ ವಿಫಲವಾದರೆ, ಜೆ.ಪಿ. ಚಳುವಳಿ ಮೂಲಕ ವ್ಯಕ್ತವಾದ ಪ್ರಯತ್ನ ಅದರ ತಾತ್ವಿಕ ಹಾಗೂ ಸಂಘಟನಾತ್ಮಕ ಸ್ಥೂಲತೆಯಿಂದಾಗಿಯೇ ಗರ್ಭಪಾತಕ್ಕೊಳಗಾಯಿತು. ನಂತರ ವಿ.ಪಿ.ಸಿಂಗ್ ಬಂಡಾಯದ ಮೂಲಕ ಹುಟ್ಟಿಕೊಂಡ ಜನತಾ ದಳದ ರೂಪದ ಇತ್ತೀಚಿನ - ಹದಿನೈದು ವರ್ಷಗಳ ಹಿಂದಿನ - ಪ್ರಯೋಗ, ಒಂದು ಕಡೆ ಭಾಜಪದಿಂದ, ಇನ್ನೊಂದು ಕಡೆ ಕಮ್ಯುನಿಸ್ಟರಿಂದ ಬೆಂಬಲ ಪಡೆದು ಬದುಕುವ ತನ್ನ ಹುಟ್ಟಿನ ದೋಷದಿಂದಾಗಿಯೇ ಕಣ್ಮುಚ್ಚುವಂತಾಯಿತು. ಹೀಗೆ ಗಾಂಧಿ ವಾರಸುದಾರಿಕೆ ಎನ್ನುವುದು, ಈ 60 ವರ್ಷಗಳಲ್ಲಿ ಪ್ರಭುತ್ವದ ಅನಾಚಾರಗಳ ಎದುರು ಜನಶಕ್ತಿಯ ಬಂಡಾಯದ ರೂಪದಲ್ಲಷ್ಟೇ, ಆಗಾಗ್ಗೆ ಅಭಿವ್ಯಕ್ತಗೊಳ್ಳುತ್ತಾ ಬಂದಿದೆ.

ಆದರೆ, ಇಂತಹ ಬಂಡಾಯಗಳ ಮೂಲಕವೇ ಅದು, ಕಳೆದ 60 ವರ್ಷಗಳಲ್ಲಿ ಭಾರತದ ಸ್ವಾತಂತ್ರ್ಯ ಹಾಗೂ ಪ್ರಜಾಪ್ರಭುತ್ವಗಳು ಅನೇಕ ವಕ್ರತೆ - ವಿಕ್ಷಿಪ್ತತೆಗಳ ನಡುವೆಯೂ ಉಳಿದುಕೊಂಡು ಬರಲು ನೆರವಾಗಿದೆ ಎಂಬುದನ್ನೂ ನಾವು ಮರೆಯುವಂತಿಲ್ಲ. ಅಷ್ಟೇ ಅಲ್ಲ. ಕಳೆದ ಹದಿನೈದು ವರ್ಷಗಳ ಅಸಮಾನ ನ್ಯಾಯ ವಿತರಣೆಯ ಕಾರಣಗಳಿಂದಾಗಿ ಈಗ ರಾಷ್ಟ್ರೀಯ ಬದುಕಿನಲ್ಲಿ ಕಾಣಿಸಿಕೊಳ್ಳಲಾರಂಭಿಸಿರುವ ಬಿರುಕುಗಳನ್ನು ಇಂತಹ ಮತ್ತೊಂದು ಜನಶಕ್ತಿಯ ಬಂಡಾಯವನ್ನು ಆಯೋಜಿಸುವ ಮೂಲಕವೇ ಮುಚ್ಚುವುದು ಅನಿವಾರ್ಯವಾಗಿದೆ. ಏಕೆಂದರೆ, ಸದ್ಯಕ್ಕೆ ಮುಖ್ಯವಾಹಿನಿಯ ರಾಜಕೀಯ ಆಡಳಿತ ಮಾದರಿಗಳಿಗೆ ಪರ್ಯಾಯ ಮಾದರಿಗಳೆಂಬಂತೆ ನಮ್ಮ ಕಣ್ಮುಂದೆ ಈಗ ಕಾಣಿಸಿಕೊಂಡಿರುವ ಮಾಯಾವತಿಯವರ ತತ್ವಹೀನ ಜಾತಿ ರಾಜಕಾರಣ ಹಾಗೂ ತೃತೀಯ ಶಕ್ತಿಯೆಂದು ಹೇಳಿಕೊಳ್ಳುವ ಪಕ್ಷಗಳ ಊಳಿಗಮಾನ್ಯ ಕೌಟುಂಬಿಕ ರಾಜಕಾರಣಗಳೆರಡೂ, ಈ ಬಿರುಕುಗಳ ಪ್ರಯೋಜನ ಪಡೆದು ಮೂಡಿದ ಮಾದರಿಗಳೇ ಆಗಿವೆ.

ಹೀಗಾಗಿ ಇಂದು ಗಾಂಧಿ ವಾರಸುದಾರಿಕೆಯ ಸ್ಫೂರ್ತಿಯಿಂದಲೇ ಒಡಮೂಡಿ ಬರಬೇಕಾದ ಜನಶಕ್ತಿಯ ಬಂಡಾಯ, ಇಂತಹ ಪ್ರತಿಕೂಲ ಪರಿಸ್ಥಿತಿಯಲ್ಲೂ ಗಣಪತಿಯಪ್ಪನವರಂತಹರನ್ನು ಗುರುತಿಸಿ ಹೆಮ್ಮೆ ಪಡುವ ಸೂಕ್ಷ್ಮತೆ ಉಳಿಸಿಕೊಂಡಿರುವ ಜಾತ್ಯತೀತ ಯುವಜನರ ನೇತೃತ್ವದಲ್ಲೇ ಆರಂಭವಾಗಬೇಕಿದೆ. ಏಕೆಂದರೆ, ಗಣಪತಿಯಪ್ಪ ಹಾಗೂ ಇತ್ತೀಚೆಗೆ 80 ವರ್ಷ ತುಂಬಿದ ಎಚ್.ಎಸ್.ದೊರೆಸ್ವಾಮಿಯವರಂತಹ ಗಾಂಧಿವಾದಿಗಳು ಕಾಲನ ಒತ್ತಡಗಳಿಗೆ ಸಿಕ್ಕಿ ರಾಜಕೀಯ ಶಕ್ತಿ ಕಳೆದುಕೊಂಡಿದ್ದರೂ, ನೈತಿಕ ಶಕ್ತಿಯ ನಿಧಿಗಳಾಗಿಯೇ ಉಳಿದಿದ್ದಾರೆ. ಗಾಂಧಿ ಮೂಲತಃ ಒಂದು ನೈತಿಕ ಶಕ್ತಿಯಾಗಿಯೇ ಇಂದು ಕ್ರಿಯಾಶೀಲವಾಗಬೇಕಾಗಿರುವ ಅಗತ್ಯದ ಹಿನ್ನೆಲೆಯಲ್ಲಿ ಗಾಂಧಿ ವಾರಸುದಾರಿಕೆ, ರಾಷ್ಟ್ರಾದ್ಯಂತ ಇನ್ನೂ ಅಳಿದುಳಿದಿರುವ ಇಂತಹ ಗಾಂಧಿವಾದಿಗಳ ನೈತಿಕ ಬಲದಿಂದಲೇ ಮತ್ತೆ ತನ್ನ ಅಭಿವ್ಯಕ್ತಿಯನ್ನು ಕಂಡುಕೊಳ್ಳಬೇಕಿದೆ.

ಈ 60 ವರ್ಷಗಳ ಎಲ್ಲ ರೀತಿಯ ರಾಜಕೀಯ ಪ್ರಯೋಗಗಳ ಅಂತಿಮ ಪರಿಣಾಮವೆಂಬಂತೆ ಮೂಡಿ ನಿಂತಿರುವ ಜಾಗತೀಕರಣವೆಂಬ ನವ ಸಾಮ್ರಾಜ್ಯಶಾಹಿಯಲ್ಲಿ ಅಸಮಾನತೆ ಹಾಗೂ ಅಶ್ಲೀಲತೆಗಳು ಅಂತರ್ಗತವಾಗಿವೆ ಎಂಬ ಸತ್ಯ ಇಂದು ನಿಧಾನವಾಗಿ ಗೋಚರವಾಗುತ್ತಿರುವ ಹಿನ್ನೆಲೆಯಲ್ಲಿ, ಮುಂದಿನ ದಿನಗಳಲ್ಲಿ ಗಾಂಧಿ ವಾರಸುದಾರಿಕೆ ಒಂದು ಪೂರ್ಣ ಪ್ರಮಾಣದ ರಾಜಕೀಯ ಶಕ್ತಿಯಾಗಿ ತನ್ನ ವಿಶ್ವಾಸಾರ್ಹತೆಯನ್ನು ಸಾಧಿಸಿಕೊಳ್ಳುವ ಎಲ್ಲ ಸಾಧ್ಯತೆಗಳು ತೆರೆದಿವೆ. ಅದು ಈವರೆಗೆ ತಾನು ನಡೆಸಿರುವ ಪ್ರಯೋಗಗಳ ಮೂಲಕ ಸಾಧಿಸಿಕೊಂಡಿರುವ ಎಲ್ಲ ಅನುಸಂಧಾನಗಳ ಸಾಧ್ಯತೆಗಳೊಡನೆ ಪ್ರಕಟಗೊಳ್ಳುವ ಅಗತ್ಯ ಹಾಗೂ ಅನಿವಾರ್ಯತೆ ಉಂಟಾಗಿದೆ. ಈ ದಿಸೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿರುವ ದೊಡ್ಡ ಕಾರ್ಯ ಪಡೆಯೇ ರಾಷ್ಟ್ರಾದ್ಯಂತ ಕ್ರಿಯಾಶೀಲವಾಗಿದೆ. ಮೇಧಾ ಪಾಟ್ಕರ್ ಇಂತಹ ಕಾರ್ಯಪಡೆಯ ಸಾಮಥ್ರ್ಯ - ಸಾಧ್ಯತೆಗಳ ಒಂದು ಬಹಿರಂಗ ಪ್ರತೀಕವಷ್ಟೆ. ಆ ಪ್ರತೀಕ ರಾಷ್ಟ್ರಾದ್ಯಂತ ವಿಸ್ತರಿಸಿಕೊಂಡು ಜನಶಕ್ತಿಯ ಒಂದು ಸ್ಫೋಟವನ್ನು ಸಾಧಿಸುವ ದಿನಕ್ಕಾಗಿ ರಾಷ್ಟ್ರ ಕಾಯುತ್ತಿದೆ.

ಆದರೆ, ಇದಕ್ಕಾಗಿ ಸಾಮಾಜಿಕ ವಾತಾವರಣ ಹಾಗೂ ರಾಜಕೀಯ ಭೂಮಿಕೆಯನ್ನು ಸಿದ್ಧಪಡಿಸಬೇಕಾದ ನಮ್ಮ ಮಾಧ್ಯಮಗಳನ್ನು ನೋಡಿ. ಇಪ್ಪತ್ತು ನಾಲ್ಕು ತಾಸುಗಳೂ ಸುದ್ದಿ ಪ್ರದರ್ಶನಗಳ ಆಟಗಳ ಮೂಲಕ ಮೇಲ್ವರ್ಗ ಹಾಗೂ ಮಧ್ಯಮ ವರ್ಗಗಳನ್ನು ಹಾಗೂ ಸಿನೆಮಾ - ಮೆಗಾ ಧಾರಾವಾಹಿ - ಜನಪ್ರಿಯ ಜೀವನ ಶೈಲಿಯ ಸ್ಪರ್ಧೆಗಳ ಮೂಲಕ ಕೆಳ ಮಧ್ಯಮ ಹಾಗೂ ಬಡ ವರ್ಗಗಳನ್ನು ಸೆರೆ ಹಿಡಿದು ಹಾಕಿ; ತಮ್ಮ ಭ್ರಷ್ಟಾಚಾರ ವಿರೋಧಿ ಸಾಹಸಗಳ ಮೂಲಕ ಹಾಗೂ ಅನ್ಯಾಯಕ್ಕೊಳಗಾದವರಿಗೆ ಪರಿಹಾರ ದೊರಕಿಸಿಕೊಡುವ ಸಮಾಜ ಕಲ್ಯಾಣೋದ್ದೇಶದ 'ಇಂಪ್ಯಾಕ್ಟ್' ಕಾರ್ಯಕ್ರಮಗಳ ಮೂಲಕ ಮಿನಿ ಸರ್ಕಾರಗಳಂತೆ ಕಾರ್ಯ ನಿರ್ವಹಿಸುತಿರುವ ನಮ್ಮ ಮಾಧ್ಯಮಗಳು, ಜನರ ಪಾಲಿಗೆ ವಾಸ್ತವ ಸತ್ಯಗಳ ಸ್ವಸಂಸ್ಪರ್ಶದ ಅಗತ್ಯವೇ ಇಲ್ಲದಂತೆ ಮಾಡಿ, ಈಗ ಮಾಧ್ಯಮ ಭಾರತವೆಂಬ 'ಮಿಥ್ಯಾ ಭಾರತ'ವೊಂದನ್ನು ಸೃಷ್ಟಿಸಿವೆ. ವಾಸ್ತವ ಚಿತ್ರವೇ ಕಾಣದಂತೆ ಅದರ ಮೇಲೆ ಅದರ ಬಣ್ಣದ ಪ್ರತಿಬಿಂಬವನ್ನು ಸ್ಥಾಪಿಸುವ ಒಂದು ದೊಡ್ಡ ಮಾಯಾ ಬಝಾರ್ ಇಂದು ಉದ್ಯಮದ ಹೆಸರಲ್ಲಿ ಬೆಳೆದು ನಿಂತಿದೆ! Medium is the Message ಎಂಬ ಆಧುನಿಕ ಮಾಧ್ಯಮ ತಜ್ಞರ ಮಾತು, ಹೀಗೆ ಆಭಾಸಕರ ರೀತಿಯಲ್ಲಿ ನಿಜವಾಗತೊಡಗಿದೆ... ನಮ್ಮಗಳ ಬದುಕೇ ಈಗ ವಾಸ್ತವತೆಯ ಗುರುತ್ವ ಕೇಂದ್ರ ಕಳೆದುಕೊಂಡು ಈ ಮಾಯಾ ಬಝಾರ್‍ನ ಪ್ರತಿವಾಸ್ತವತೆಯ ಸರಕಾಗಿ ಹೋಗಿದೆ. ಹಾಗಾಗಿಯೇ ಇಂದು ಮಾಧ್ಯಮ ಪ್ರತಿನಿಧಿಗಳ ನೂಕು ನುಗ್ಗಲು. ಸಾರ್ವಜನಿಕ ಸಮಾರಂಭಗಳಿರಲಿ, ಮದುವೆಗಳಂತಹ ಕೌಟುಂಬಿಕ ಸಮಾರಂಭಗಳಲ್ಲೂ, ಬಂದ ಜನ ಸಾಲುಗಟ್ಟಿ ನಿಂತ ಇವರ ಹಿಂಭಾಗಗಳನ್ನಷ್ಟೇ ನೋಡಿ ಹೋಗುವ ಪರಿಸ್ಥಿತಿ!

ಇದು ಅರವತ್ತರ ಭಾರತಕ್ಕೆ ಬಡಿದಿರುವ ಅರಳು ಮರುಳಲ್ಲದೆ ಮತ್ತೇನು?

ಅಂದಹಾಗೆ: ರಾಷ್ಟ್ರಕ್ಕೆ ಈ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ನಮ್ಮ ಪ್ರಧಾನ ಮಂತ್ರಿಗಳ ಕೊಡುಗೆಯೆಂದರೆ, ಎಂಟು ವರ್ಷಕ್ಕೆ ಮಗ ದಂಟು ಅಂದ ಹಾಗೆ, ಪ್ರಧಾನಮಂತ್ರಿಯಾದ ಮೂರು ವರ್ಷಗಳ ನಂತರ ಮನಮೋಹನ ಸಿಂಗರು ರಾಜಕಾರಣಿಯಂತೆ ಮಾತಾಡತೊಡಗಿರುವುದು! ಮೊನ್ನೆ ಕರ್ನಾಟಕಕ್ಕೆ ಬಂದಿದ್ದ ಅವರು, ಅಕ್ಟೋಬರ್ ನಂತರ ರಾಜ್ಯದಲ್ಲಿ ಏನಾದರೂ ಆಗಬಹುದು ಎಂದು ಮಾರ್ಮಿಕವಾಗಿ ನುಡಿದು, ದೇವೇಗೌಡ ಹಾಗೂ ಸದಾನಂದ ಗೌಡರಿಬ್ಬರ ಎದೆಯಲ್ಲೂ ಬತ್ತ ಕುಟ್ಟತೊಡಗುವಂತೆ ಮಾಡಿ ಹೋಗಿದ್ದಾರೆ.

Rating
No votes yet