(ಅರವಿಂದ್) ಅಡಿಗ, ಬುಕರ್ ಪ್ರೈಜ್ ಮತ್ತು ನೆನಪುಗಳು

(ಅರವಿಂದ್) ಅಡಿಗ, ಬುಕರ್ ಪ್ರೈಜ್ ಮತ್ತು ನೆನಪುಗಳು

ಮೊನ್ನೆ ಮನೆಗೆ ಹೋಗುತ್ತಿದ್ದಾಗಲೇ ನಾನು ಅರವಿಂದ್ ಅಡಿಗರ ಹೆಸರು ಮೊದಲು ಕೇಳಿದ್ದು. ಬುಕರ್ ಪ್ರಶಸ್ತಿ ಪಡೆದಾತ ಕನ್ನಡದವರು, ಮಂಗಳೂರಿನವರು ಅಂತ ತಿಳಿದು ಸಂತೋಷವಾಯಿತು. ಮತ್ತೆ ಮರುದಿನ ಅವರ ಚಿತ್ರವನ್ನ ನೋಡಿದಾಗ ಇದೇನೋ ಪರಿಚಿತ ಮುಖವಲ್ಲ ಅನ್ನಿಸಿತು. ಆದರೆ ಜೀವಮಾನದಲ್ಲಿ ನಾನು ಮಂಗಳೂರಿಗೆ ಹೋಗಿರುವುದು ಒಂದೇ ಸಲ. ಹಾಗಾಗಿ ಇದು ಹೇಗೆ ಸಾದ್ಯ ಅನ್ನಿಸಿದಾಗ ೧೯೮೪ರ ಲೇಖಕ್-ವರ್ಷದ ವಿದ್ಯಾರ್ಥಿ ಸ್ಪರ್ಧೆಯ ನೆನಪಾಯಿತು.

ಆ ಕಾಲದಲ್ಲಿ ಎಮ್.ಎಸ್.ಐ.ಎಲ್. ನವರು ವರ್ಷದ ವಿದ್ಯಾರ್ಥಿ ಸ್ಪರ್ಧೆ ಎಂಬ ಕಾರ್ಯಕ್ರಮವನ್ನು ನಡೆಸುತ್ತಿದ್ದರು. ಆ ವರ್ಷ ನಾನು ಮೊದಲ ಹಂತದ ಬರವಣಿಗೆಯ ಪರೀಕ್ಷೆ ದಾಟಿ, ಮಡಿಕೇರಿಯಲ್ಲಿ ನಡೆದ ವಿಭಾಗ ವಲಯಕ್ಕೆ ಆಯ್ಕೆಯಾಗಿದ್ದೆ.  ಮೈಸೂರು, ದಕ್ಷಿಣಕನ್ನಡ, ಕೊಡಗು, ಚಿಕ್ಕಮಗಳೂರು, ಹಾಸನ ಮತ್ತು ಮಂಡ್ಯ - ಈ  ಆರು ಜಿಲ್ಲೆಯಿಂದ ಒಟ್ಟು ಇಪ್ಪತ್ತು ವಿದ್ಯಾರ್ಥಿಗಳಿಗೆ ಅಲ್ಲಿ ೪-೫ ದಿನ ಒಟ್ಟಿಗೆ ವಿವಿಧ ಚಟುವಟಿಕೆಗಳು, ಸ್ಪರ್ಧೆಗಳು ನಡೆದವು. ಅದರಲ್ಲಿ ಕೆಲವರು ಮುಂದೆ ರಾಜ್ಯ ಮಟ್ಟದ ಕೊನೆಯ ಹಂತಕ್ಕೆ ಹೋದರು. ನಾನು ಆ ಮಟ್ಟಕ್ಕೆ ಹೋಗಲಿಲ್ಲವಾದರೂ, ವಲಯ ಮಟ್ಟದಲ್ಲಿ (ಉಳಿದವರಲ್ಲಿ) ಮೊದಲ ಬಹುಮಾನವೂ ಬಂದಿತ್ತು.

ಅಲ್ಲೇ ನಾನು ಆನಂದ್ ಅಡಿಗನನ್ನು ಭೇಟಿ ಆಗಿದ್ದು. ಮಂಗಳೂರಿಂದ ಬಂದಿದ್ದ ಆತ  ನನಗಿಂತ ಒಂದು ವರ್ಷ ಕಿರಿಯ. ಆ ವರ್ಷವೇ ಅವನು ಎಸ್.ಎಸ್.ಎಲ್.ಸಿ  ಓದುತ್ತಿದ್ದ. ಅವನು ಓದುತ್ತಿದ್ದಿದ್ದು ಮಂಗಳೂರಿನ ಅಲೊಯ್ಶಿಯಸ್ ನಲ್ಲಿ. . ಅವನೊಂದಿಗೆ ಗೆಳೆತನವೂ ಆಗಿತ್ತು. ನನ್ನ ಶಾಲೆಗೂ ಆ ಶಾಲೆಗೂ  ಸ್ವಲ್ಪ ಕೊಟ್ಟು-ಕೊಳ್ಳುವ ( ಅಂದರೆ ಉಪಾಧ್ಯಾಯರ ವರ್ಗಾವಣೆ ) ಆಗುತ್ತಿತ್ತು. ಹಾಗಾಗಿ ಆ ಶಾಲೆಯ ವಿಷಯ ಸ್ವಲ್ಪ ನನಗೆ ಗೊತ್ತೂ ಇತ್ತು. ಆಮೇಲೆ ಆ ವರ್ಷದ ಕೊನೆಯಲ್ಲಿ ಆತ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಕರ್ನಾಟಕಕ್ಕೇ ಮೊದಲ ಸ್ಥಾನ ಕೂಡ ಗಳಿಸಿದ್ದ. ನಂತರ ಒಂದೆರಡು ವರ್ಷ ಆನಂದ್ ಜೊತೆ ಆಗಾಗ ಪತ್ರ ವ್ಯವಹಾರವೂ ಇತ್ತು (ಆಗಿನ್ನೂ ಇ-ಮೆಯ್ಲ್ ಕಾಲ ಬಂದಿರಲಿಲ್ಲ!).ಮತ್ತೆ ಆ ಕೊಂಡಿ ಕಳಚಿಹೋಗಿ - ಈಗ ಆನಂದ್ ಎಲ್ಲಿರುವ ಅನ್ನುವ ವಿಷಯ ನನಗೆ ತಿಳಿಯದು.

ಅದೇಕೋ ಈ ಅರವಿಂದ್ ಅಡಿಗ, ನನ್ನ ನೆನಪಿನ ಆನಂದ್ ಅಡಿಗನನ್ನೇ ಹೋಲುತ್ತಾರಲ್ಲ ಅಂತ ಷಡಕ್ಷರೀ ಮಂತ್ರ ಉಪಯೋಗಿಸಿದೆ ನೋಡಿ - ತಕ್ಷಣವೇ ಈ ಕೊಂಡಿ ಸಿಕ್ಕಿತು:

http://www.deccanherald.com/Content/Oct162008/national2008101695458.asp

ನನ್ನ ಊಹೆ ನಿಜವೂ ಆಗಿತ್ತು. ಅರವಿಂದ್ ಅಡಿಗ ನನ್ನ ಗೆಳೆಯನಾಗಿದ್ದ ಆನಂದ್ ಅಡಿಗನ ತಮ್ಮ :) ಅಂತ ಗೊತ್ತಾಯ್ತು.

-ಹಂಸಾನಂದಿ

 

 

 

Rating
No votes yet