ಅರುಣ ಕೊಲ್ಹಾಟ್ಕರರ ಕವನ

ಅರುಣ ಕೊಲ್ಹಾಟ್ಕರರ ಕವನ

 ಭಾರತದಲ್ಲಿ ಇಂಗ್ಲೀಷಿನಲ್ಲಿ ಬರೆಯುವ ಕವಿಗಳಲ್ಲಿ ನನಗೆ ಮೆಚ್ಚುಗೆಯಾಗುವ ಕವಿಗಳಲ್ಲಿ ಅರುಣ್ ಕೊಲ್ಹಾಟ್ಕರ್ ಒಬ್ಬರು. ಅವರ ಕವನಗಳಲ್ಲಿ ಸಮಕಾಲೀನ ಪ್ರಜ್ನೆ ಪರಂಪರೆಯೊಂದಿಗೆ ಮುಖಾಮುಖಿಯಾಗಿ ಅದನ್ನು ತೀವ್ರ ಪರೀಕ್ಷೆಗೆ ಒಡ್ಡುತ್ತಲೇ ಆಧುನಿಕ ಮನಸ್ಸನ್ನೂ ಕೂಡ ಪರೀಕ್ಷಿಸುವ ಹಾಗೂ ಕಾವ್ಯ ಮುಖೇನ ಅಂದನ್ನು ಇಂದಲ್ಲಿ ಒಂದಾಗಿಸಿಕೊಳ್ಳುತ್ತದೆ. ಹರಿತವಾದ ಕೊಂಚವೂ ಕೊಬ್ಬಿರದ ಸಪೂರ ದೇಹದ ಕವನಗಳನ್ನು ಬರೆದಿದ್ದಾರೆ. ಅವರ ಜೆಜುರಿ ಎಂಬ ಕವನಗುಚ್ಛವು ಬಹಳ ಹೊಗಳಿಕೆಯನ್ನೂ, ತೆಗಳಿಕೆಯನ್ನೂ ಗಳಿಸಿತು. ತೆಗಳುವವರು ಆ ಪದ್ಯದಲ್ಲಿ ನಗರವಾಸಿಯೊಬ್ಬ ಜೆಜುರಿ ಎಂಬ ಬಹುಜನರಿಗೆ ಪೂಜ್ಯವಾದ ಜಾಗಕ್ಕೆ ಹೋಗಿ ಭಕ್ತರನ್ನು, ಅವರ ಭಕ್ತಿಯನ್ನು ಅವಮಾನ ಮಾಡುತ್ತಿರುವುದನ್ನು ಕಂಡಿದ್ದಾರೆ. ಹಾಗೆ ನೋಡಿದರೆ, ಈ ಕವನದಲ್ಲಿ ಹೆಚ್ಚು ವ್ಯಂಗ್ಯಕ್ಕೆ ಒಳಗಾಗುವವ ಆಧುನಿಕನೇ. ಅದಕ್ಕೆ ಉದಾಹರಣೆಯಾಗಿ  ಓಲ್ಡ ವುಮನ್ ಎಂಬ ಕವನ ನೋಡಬಹುದು. ಇದರಲ್ಲಿ ಮುದುಕಿಯೊಬ್ಬಳು ಒಂದು ಮಂದಿರವನ್ನು ತೋರಿಸುತ್ತೇನೆ, ಎಂಟಾಣೆ ಕೊಡು ಎಂದು ನಿರೂಪಕನ ಬೆನ್ನು ಬೀಳುತ್ತಾಳೆ. ಆ ನಿರೂಪಕ ಅವಳನ್ನು ನಿಷ್ಠುರವಾಗಿ ಕಾಣುತ್ತಾನೆ. ಅಷ್ಟರಲ್ಲಿ ಅವಳು ಹೇಳುವ ಒಂದು ಮಾತು ಅವನನ್ನು ನಾಚಿಕೆಗೀಡು ಮಾಡುತ್ತದೆ.
ಈ ಕವನದಲ್ಲಿನ ಜಾಣ್ಮೆ ಮಹತ್ತರವಾದ್ದು. (ನನ್ನ ಅನುವಾದ ಅದನ್ನು ಚೆನ್ನಾಗಿ ಮೂಡಿಸಿಲ್ಲ, ಮನ್ನಿಸಿ). ಖಚಿತ ರೂಪಕಗಳೊಂದಿಗೆ ಚಿಕ್ಕ ಚೊಕ್ಕ ಮೂರು ಸಾಲುಗಳ ಸ್ಟಾನ್ಜಾಗಳಲ್ಲಿ ಇದನ್ನು ಬರೆಯಲಾಗಿದೆ. ಇಲ್ಲಿ 'ತಾನು' ವನ್ನು ನೀನು ಎಂದು ದೂರಗೊಳಿಸಿ ನೋಡಲಾಗಿದೆ. ಆ 'ನೀನು'ವಿನ ಸುಳ್ಳು ಹೆಚ್ಚುಗಾರಿಕೆ ಅಂತ್ಯದಲ್ಲಿ ಚೂರುಚೂರಾಗುವ ಚಿತ್ರ ಸೊಗಸಾಗಿದೆ. ನನ್ನ ಉದ್ಧಟ ಅನುವಾದ:

ಮುದುಕಿ

ಮುದುಕಿ
ಅಂಗಿ ಅಂಚನು ಹಿಡಿದು
ಬೆನ್ನು ಬೀಳುತ್ತಾಳೆ

ಅವಳು ಬೇಡುತ್ತಿರುವುದು ಎಂಟಾಣೆ
ಕುದುರೆಲಾಳದ ಮಂದಿರವನ್ನು
ನಿನಗೆ ತೋರಿಸಲು

ನೀನದನ್ನು ಅದಾಗಲೇ ನೋಡಿಯಾಗಿದೆ
ಆದರೂ ಕುಂಟುತ್ತ ಬರ್ತಾಳೆ ಹಿಂದೆಯೇ
ಬಿಗಿಯಾಗಿ ಹಿಡಿದು ಅಂಗಿ ಅಂಚನು

ಹೋಗಗೊಡುವುದಿಲ್ಲ ನಿನ್ನ
ಗೊತ್ತಲ್ಲ, ಮುದುಕಿಯರ ಪರಿ,
ಹತ್ತಿಹೂವಂತೇ ಅಂಟಿಕೊಳ್ಳುತ್ತಾರೆ.

ತಿರುಗಿ ಬಿದ್ದು ನೀನವಳನ್ನು
ಎದುರಿಸುತ್ತೀಯ, ಈ ಆಟ ಮುಗಿಸುವ
ಖಡಾಖಂಡಿತ ನಿಲುವಲ್ಲಿ

ಅವಳಾಗ ಹೇಳ್ತಾಳೆ: 'ಇನ್ನೇನು
ಮಾಡಿಯಾಳು ಮುದುಕಿಯೊಬ್ಬಳು,
ಇಂಥ ದರಿದ್ರ ಕಲ್ಲುಗುಡ್ಡದಲ್ಲಿ?'

ನೀನು ನೋಡುವೆ ನಿರಾಳ ಆಕಾಶ
ಅವಳ ಗುಂಡುಕೊರೆದ ತೂತಿನಂತಹ
ಕಣ್ಣುಗಳ ಮೂಲಕ

ನೀನು ನೋಡುತ್ತಿರುವಂತೇ
ಅವಳ ಕಣ್ಣುಗಳ ಸುತ್ತ ಸುರುವಾಗುವ
ಸುಕ್ಕುಗಳು ಹಬ್ಬುತ್ತವೆ ಚರ್ಮದಾಚೆಗೂ

ಗುಡ್ಡಗಳು ಸುಕ್ಕಾಗಿ
ಮಂದಿರಗಳು ಸುಕ್ಕಾಗಿ
ಆಕಾಶ ಕಳಚಿ ಬೀಳುತ್ತದೆ

ಗ್ಲಾಸು ಬಿದ್ದೊಡೆವ ಗೌಜಲ್ಲಿ
ಏಕಾಕಿ ನಿಂತ
ಮುರಿಯದ ಒಂದು ಮುದಿ ಜೀವ

ಮತ್ತು ನೀನು
ಅವಳ ಕೈಲಿನ
ಚಿಲ್ಲರೆ ನಾಣ್ಯ

Rating
No votes yet