ಅರ್ಥಹೀನ ವಾಯು ಮಾಲಿನ್ಯ ಪರೀಕ್ಷಣ ಪ್ರಮಾಣ ಪತ್ರ !!
ಬೆಂಗಳೂರಿನಲ್ಲಿ ಮೊಟಾರು ಗಾಡಿ ಓಡಿಸಬೇಕಾದರೆ "ವಾಯು ಮಾಲಿನ್ಯ ಪರೀಕ್ಷಣ ಪ್ರಮಾಣ ಪತ್ರ" ಇರಬೇಕು. ಮೇಲ್ನೋಟಕ್ಕೆ ಇದು ಒಳ್ಳೆಯ ನಿಯಮದಂತೆಯೇ ಕಾಣುತ್ತದೆ. ಆದರೆ ಇದು ಬರಿ ಲಂಚ ಗಿಟ್ಟಿಸಿಕೊಳ್ಳುವುದಕ್ಕೆ ಮಾತ್ರ ಉಪಯೋಗಕ್ಕೆ ಬರುತ್ತೆ ಅಂತ ನನ್ನ ವಾದ. ಕಾರಣಗಳು ಇಂತಿವೆ:
೧. ಒಮ್ಮೆ ಪ್ರಮಾಣ ಪತ್ರ ಮಾಡಿಸಿದರೆ, ಆರು ತಿಂಗಳವರೆಗೆ ಅದು ಸಿಂಧು. ಇನ್ನು ಎರಡೆ ದಿನಗಳನಂತರ ಪೋಲೀಸರು ಕೇಳಿದರೂ ನೂರುರುಪಾಯಿ ದಂಡ. ಇದರಲ್ಲಿ ಅರ್ಥ ಇದೆಯೆ? ಎರಡೇ ದಿನದಲ್ಲಿ, ಗಾಡಿ ಅಷ್ಟು ಹದಗೆಡಲು ಸಾಧ್ಯವೆ? ಇದು ಸಾರ್ವಜನಿಕರ ಮರೆವನ್ನೇ ನೆಪವಾಗಿಟ್ಟುಕೊಂಡು ಅವರಿಗೆ ಮಾಡುವ ಮೋಸ ಅಲ್ಲವೆ?
೨. ಪ್ರಮಾಣ ಪತ್ರದಲ್ಲಿನ ಕಾರ್ಬನ್ ಮೊನಾಕ್ಸೈಡ್ ಹಾಗು ಹೈಡ್ರೊ ಕಾರ್ಬನ್ ಮಿತಿಗಳು ತೀರಾ ಅವೈಜ್ಞಾನಿಕ. ಉದಾಹರಣೆಗೆ ನನ್ನ ಮೂರು ವರ್ಷ ಹಳೆಯ ಬೈಕನ್ನು ತಗೊಳ್ಳಿ.
ಕಾರ್ಬನ್ ಮೊನಾಕ್ಸೈಡ್ ನ ಗರಿಷ್ಠ ಮಿತಿ ೩.೫ ಆದರೆ ನನ್ನ ಬೈಕು ಉಗುಳುವುದು ಕೇವಲ ೦.೨೧
ಹೈಡ್ರೊ ಕಾರ್ಬನ್ ನ ಗರಿಷ್ಠ ಮಿತಿ ೪೫೦೦ ಆದರೆ ನನ್ನ ಬೈಕು ಹೊರಬಿಡುವುದು ಕೇವಲ ೮೧
ಅಂದರೆ, ನನ್ನ ಬೈಕಿನಂತಹ ಹತ್ತು ಹದಿನೈದು ಬೈಕುಗಳು ಬಿಡುವ ಹೊಗೆ, ನನ್ನ ಬೈಕೊಂದೇ ಬಿಟ್ಟರೂ ನಾನು ಯಾವ ಕಾನೂನನ್ನು ಮುರುದಿರುವುದಿಲ್ಲ. ಇಂತಹ ಕಾನೂನುಗಳಿಂದ ಆಗುವ ಪ್ರಯೋಜನವಾದರೂ ಏನು? ನನಗೆ ಕೆಲವೊಮ್ಮೆ ಕಪ್ಪು ಹೊಗೆ ಬಿಡುವ ಆಟೊಗಳ ಚಾಲಕರನ್ನು ಹಿಗ್ಗಾಮುಗ್ಗವಾಗಗಿ ಬಯ್ಯುವ ಮನಸಾಗುತ್ತದೆ. ಆದರೆ ಸರಿಯಾಗಿ ಯೋಚಿಸಿದರೆ ತಿಳಿಯುತ್ತೆ, ಅವರೂ ಕೂಡ ಯಾವ ಕಾಯ್ದೆಯನ್ನೂ ಉಲ್ಲಂಘಿಸಿಲ್ಲ ಅಂತ.
೩. ಕಾರಿದ್ದವರಿಗಂತೂ ಇನ್ನೂ ಹೆಚ್ಚು ತೊಂದರೆ. ೨೦೦೦ ಇಸವಿಗಿಂತ ಹಳೆಯ ಕಾರಾದರೆ, ವಿಶೇಷ ಯಂತ್ರದಲ್ಲಿ ಪರೀಕ್ಷೆ ಮಾಡಬೇಕಂತೆ. ಆ ಯಂತ್ರದಲ್ಲಿ ಮಾತ್ರ ಇರುವ ವಿಶೇಷ ಏನೆಂದು ನಾನು ಕೆಳಿದ ಯಾರಿಗೂ ತಿಳಿಯದು. ಅಂತಹ ಯಂತ್ರ ಇಲ್ಲದ ಪರೀಕ್ಷಣ ಕೇಂದ್ರದವರು ಬಾಗಿಲಿಗೆ ಬಂದ ಗ್ರಾಹಕನನ್ನು ಏಕೆ ಬೇಡ ಎನ್ನುತ್ತಾರೆ ಹೇಳಿ? ತಯಾರಾದ ವರ್ಷ ೨೦೦೦ ದ ನಂತರ ಅಂತ ಬರೆದು ಪ್ರಮಾಣ ಪತ್ರ ಕೊಟ್ಟೇ ಬಿಡುತ್ತಾರೆ. ಪೋಲೀಸರು ಹಿಡಿದರೆ ಸಿಕ್ಕಿಬೀಳುವುದು ಅವರಲ್ಲ ತಾನೆ.
ಇಷ್ಟೆಲ್ಲಾ ನ್ಯೂನತೆ ಗಳಿರುವ ಈ ಕಾನೂನನ್ನು ಸರ್ಕಾರ ಪುನರ್ಪರಿಶೀಲಿಸಬೇಕಲ್ಲವೆ?
Comments
Re: ಅರ್ಥಹೀನ ವಾಯು ಮಾಲಿನ್ಯ ಪರೀಕ್ಷಣ ಪ್ರಮಾಣ ಪತ್ರ !!