ಅರ್ಹತೆ
ರೂಮಲ್ಲಿ ಒಮ್ಮೊಮ್ಮೆ ಮಾಡಿದ ಅನ್ನ ಉಳಿದು ಹಳಸಿ ಹೋದಾಗಲೆಲ್ಲ ಬಾಲ್ಯ ನೆನಪಾಗುತ್ತದೆ. ಮನೆಗೆ ಬರುತ್ತಿದ್ದ ಕೆಲಸದವರ ಮಕ್ಕಳಿಗೆ ಅಮ್ಮ ಹಾಕುತ್ತಿದ್ದ ಬಿಸಿ ಬಿಸಿ ಅನ್ನ, ಸಾರು, ಉಪ್ಪಿನಕಾಯಿಯನ್ನ ಚಪ್ಪರಿಸಿ ಚೆಂದವಾಗಿ ಉಂಡು ಹಿತ್ತಲಿನಿಂದ ತಂದ ಬಾಳೆಯ ಎಲೆ ಎಷ್ಟು ಸ್ವಚ್ಚವಾಗಿತ್ತೋ ಅಷ್ಟೇ ಸ್ವಚ್ಛವಾಗಿ ಊಟ ಮಾಡಿದ ಅನಂತರವೂ ಸಹ ಮಡಿಚಿ ಎಸೆದು ನೆಲ ಸಾರಿಸಿ ಒರೆಸಿ ಹೋಗುತ್ತಿದ್ದ ಅವರ ಶಿಸ್ತನ್ನು ಅಮ್ಮ ನನಗೆ ಕರೆದು ತೋರಿಸುತ್ತಿದ್ದಳು. ನೋಡು, ಊಟ ಎಷ್ಟು ಚೆಂದ ಮಾಡುತ್ತಾನೆ ಈ ಹುಡುಗ, ನೀನೋ ಇದ್ದೀಯಾ.. ತಟ್ಟೆಯಲ್ಲಿ ಅನ್ನ ಬಿಡುತ್ತೀಯಾ. ಬೆಲೆ ಇಲ್ಲ ಅನ್ನದ್ದು.. ಅದರ ಕಷ್ಟ ನಿನಗೆ ಗೊತ್ತಿಲ್ಲ. ಆವಾಗಿಂದ ನಾನು ಸಹ ಎಷ್ಟು ಬೇಕೋ ಅಷ್ಟೇ ಹಾಕಿಸಿಕೊಂಡು ಊಟ ಮಾಡಿ, ತಿಂದ ತಟ್ಟೆಯನ್ನು ತೊಳೆದಿಡಲು ಶುರು ಮಾಡಿದೆ. ಇಂದಿಗೂ ಅನ್ನ ಉಳಿದು, ಚೆಲ್ಲಲು ಪ್ಲಾಸ್ಟಿಕ್ ಕವರ್ ಬಿಚ್ಚುವಾಗ, ಪಾಪ ಪ್ರಜ್ಞೆ ಕಾಡುತ್ತದೆ. ಅದೇ ಬಾಲ್ಯದ ಅಮ್ಮನ ಮಾತು ನೆನಪಾಗುತ್ತದೆ.
'ಹಸಿವು'.. ಈ ಪದದ ಅರ್ಥ ತಿಳಿದವ 'ಅನ್ನ' ಎಂಬುವುದನ್ನು ದೇವರಿನಂತೆ ಕಾಣಬಲ್ಲ. ಯಾಕೆಂದರೆ ಅದರ ಬೆಲೆಯನ್ನು ಆತ ಅರಿತಿರುತ್ತಾನೆ. ಬಡತನ ದಾರಿದ್ರ್ಯವಲ್ಲ, ಅದು ಹಲವು ಪಾಠಗಳನ್ನು ಕಲಿಸುತ್ತದೆ. ಒಂದು ಕಾಲದ ನಂತರ ನಮ್ಮ ಮನೆಯೂ ಸಾಲದಲ್ಲಿ ಬಿದ್ದು ಕಷ್ಟ ಉಂಡಿದೆ, ಎಷ್ಟೋ ಸರಿ ಬಸ್ ಚಾರ್ಜ್ ಕೊಡಲು ದುಡ್ಡಿಲ್ಲದೇ ನನ್ನ ಶಾಲೆಗೆ ಕಲಿಸಲು ಹಿಂದೆ ಮುಂದೆ ಯೋಚಿಸಬೇಕಾದ ಕ್ಷಣಗಳೂ ಅಪ್ಪ ಅಮ್ಮನಿಗೆ ಬಂದಿವೆ.. ಆದರೂ ಕಷ್ಟ ಪಟ್ಟು ನನ್ನನ್ನು ಈ ಸ್ಥಿತಿಗೆ ತಂದಿದ್ದಾರೆ. ಧನ್ಯ ನಾನು.
ಪ್ರೀತಿ.. ನಾನು ಜೀವನದಲ್ಲಿ ಇವೆಲ್ಲವನ್ನೂ ಮರೆತು ಕೆಲ ವ್ಯಕ್ತಿಗಳಿಗೆ ನೀಡಿದ್ದೇನೆ. ಅದರ ಬೆಲೆಯನ್ನು ಸಹ ಮರೆತು, ಹೃದಯದೊಂದಿಗೆ ಆಡಿದ್ದಾರೆ. ಪೆಂಗ್ವಿನ್ಗಳು, ಕಾಂಗರೂ ಇಲಿಗಳಂತೆಯೆ 'hibernation' ಅನ್ನುವಂತಹ ಗತಿಯನ್ನು ನನ್ನದೇ ಜೀವನಕ್ಕೂ ಅಳವಡಿಸಿಕೊಂಡು ಕತ್ತಲಿಗೂ ನನ್ನನ್ನು ನೂಕಿಕೊಂಡಿದ್ದೇನೆ. ಮೊದಲಾರ್ಧ ಕಥೆ ಅಲ್ಲ, ಜೀವನದ ಒಂದು ಗತಿ. ಯಾಕೆ ಹೇಳಿದೆ?
ಪ್ರೀತಿ ಅನ್ನುವುದು ಕುರುಡಿರಬಹುದು.. ಆದರೆ ಕುರುಡನಿಗೆ ನೀಡುವ ದೃಷ್ಟಿ ಜೀವನದ ಅತ್ಯಂತ ಸಾರ್ಥಕ ಕ್ಷಣವಾಗಬಲ್ಲದು. ಆ ಸಾರ್ಥಕ್ಯ, ನಾವು ಅದನ್ನ ಕಳೆದುಕೊಂಡವರಿಗೆ ನೀಡಿದಾಗ ಮಾತ್ರ ದೊರಕುತ್ತದೆ. ಭಾವನೆಗಳನ್ನು ಅಳೆದು, ತೂಗಿ, ಅದರ ಬೆಲೆ ಅರಿಯುವಂತಹ ವ್ಯಕ್ತಿಗಳಿಗೆ ನೀಡಬೇಕು. ಏನಂತೀರಾ?
Comments
ಉ: ಅರ್ಹತೆ
ಜೀವನಾನುಭವ ಬರುವುದು ಹೀಗೇನೇ! ಚೆನ್ನಾಗಿದೆ.
In reply to ಉ: ಅರ್ಹತೆ by kavinagaraj
ಉ: ಅರ್ಹತೆ
Dhanyavaadagalu kaviyavare :)