ಅಲೆಮಾರಿಯಾದಾಗಿನ ಅವಿಸ್ಮರಣೀಯ ಅನುಭವಗಳು - ಭಾಗ ೪
ಅಂತೂ ಹೇಗೋ ಕಷ್ಟಪಟ್ಟು ಗರ್ಭಗುಡಿಯ ಜನದಟ್ಟಣೆಯಿಂದ, ಅದರಲ್ಲೂ ಅಲ್ಲಿದ್ದ
ದೇವದಾಸಿಯರು, ಗೊರವರು, ಭಿಕ್ಷುಕರಿಂದ ತಪ್ಪಿಸಿಕೊಂಡು ಬಾಗಿಲಿನ ಹತ್ತಿರ ನನಗಾಗಿ
ಅತ್ತಿತ್ತ ನೋಡುತ್ತಿದ್ದ ಕಾಕಾನ ಹತ್ತಿರ ಹೋದೆ. ಗುಡಿಯ ಒಳಗೆ ತುಂಬಾ ಹೊತ್ತು
ಕಳೆದದ್ದರಿಂದ ತಡ ಮಾಡದೆ ನಮಗಾಗಿ (ಮತ್ತು ನಮ್ಮ ಪಾದರಕ್ಷೆಗಳನ್ನು) ಕಾಯುತ್ತಿದ್ದ
ಲೋಕನಾಥ ಸರ್ ಹತ್ತಿರ ಹೋದೆವು. ಅವರು, "ಸರ್ ನಾನು ಒಂದು round ಹೋಗಿ ದೇವರ ದರ್ಶನ
ಮಾಡಿಕೊಂಡು ಬರಲೇ?" ಅಂತ ಕೇಳಿದರು. ಕಾಕಾನಿಗಿಂತ ಮುಂಚೆ ನಾನೆ, "ಆಗಲಿ ಸರ್, ಈಗ
ಪಾದರಕ್ಷೆಗಳನ್ನು ಕಾಯುವ ಸರದಿ ನಮ್ಮದು" ಎಂದೆ. ಜಾತ್ರೆಯೆಲ್ಲಾ ಸುತ್ತಾಡಿ
ಸುಸ್ತಾಗಿದ್ದ ನನ್ನ ಕಾಲುಗಳಿಗೆ ಕುಳಿತುಕೊಳ್ಳಲು ಜಾಗ ಸಿಕ್ಕರೆ ಸಾಕಾಗಿತ್ತು.
ಜನದಟ್ಟಣೆ ಸ್ವಲ್ಪ ಕಡಿಮೆಯಾಗಿದ್ದರಿಂದ ಬಾಗಿಲಿನ ಮುಂದಿದ್ದ ಮೆಟ್ಟಿಲಿನ ಮೇಲೆ ಸ್ವಲ್ಪ
ಜಾಗ ಕಂಡಿತು. ಸಾವಿರಾರು ಜನ ತುಳಿದಾಡಿದ್ದರೂ ಆ ಜಾಗ ಅಷ್ಟೊಂದು ಕೊಳೆಯಾಗಿ
ಕಾಣಲಿಲ್ಲಿ. ಅಲ್ಲಿದ್ದ ಧೂಳನ್ನು ಝಾಡಿಸಿ ಅಲ್ಲೆ ಕುಳಿತು ನಿಟ್ಟುಸಿರು ಬಿಟ್ಟೆ.
ಹಲವಾರು ಭಕ್ತಾದಿಗಳು "ಏಳ್ ಕೋಟಿಗ್ ಏಳ್ ಕೋಟಿಗೇ" (ನೋಡಿ ಭಾಗ ೨)
ಎನ್ನುತ್ತ ದೇವರ ದರ್ಶನಕ್ಕೆಂದು ಬೆಟ್ಟ ಹತ್ತುತ್ತಲೇ ಇದ್ದರು. ಬಾಗಿಲಿನ ಹತ್ತಿರವೇ
ಕುಳಿತಿದ್ದ ನಾನು ಪ್ರತಿಯೊಬ್ಬರನ್ನೂ ಅತ್ಯಂತ ಕುತೂಹಲದಿಂದ ನೋಡುತ್ತಿದ್ದೆ. ಗುಡಿಯಿಂದ
ಹೊರಬರುತ್ತಿದ್ದ ಪ್ರತಿಯೊಬ್ಬರಿಗೂ ಅಲ್ಲಿದ್ದ ಫಕೀರರಿಂದ ನವಿಲುಗರಿಯ ಬೆತ್ತದ
ಆಶೀರ್ವಾದ! ಫಕೀರರು ಮೂಲತಃ ಮುಸ್ಲಿಮರಾದರೂ, ಜಾತ್ರೆಗಳಲ್ಲಿ, ಹಳ್ಳಿಯ ಯಾವುದೇ
ಸಮಾರಂಭದಲ್ಲಿ ಬಂದು ಜನರನ್ನು ಆಶೀರ್ವಾದಿಸಿ, ಅವರಿಂದ ಅಲ್ಪ ಸ್ವಲ್ಪ "ಧರ್ಮ"
ಪಡೆದುಕೊಂಡು ಜೀವನ ಸಾಗಿಸುತ್ತಾರೆ. ಉಳಿದ ಸಮಯದಲ್ಲಿ, ಹಳ್ಳಿಗಳಲ್ಲಿರುವ ಬಸದಿಗಳಲ್ಲೇ
ತಮ್ಮ ವಾಸ, ಅಲ್ಲಿಯ ಜನರೇ ಅವರಿಗೆ ಅನ್ನದಾತರು. ಅಂತಹ ಜೀವನ ನಡೆಸಿದಾಗಲೇ ತಮಗೆ
ಮುಕ್ತಿ ಎಂಬ ಬಲವಾದ ನಂಬಿಕೆ ಬೇರೆ. ಫಕೀರರದೂ ಒಂದು ಫೋಟೊ ಕ್ಲಿಕ್ಕಿಸಿದೆ.
ಅಲ್ಲಿಯವರೆಗು ತೆಗೆದಿದ್ದ ಫೋಟೊಗಳನ್ನು ಕಾಕಾನಿಗೆ ತೋರಿಸಿ, ಫೋಟೋದಲ್ಲಿದ್ದ ಅಥಿರಥ
ಮಹಾರಥರ ಬಗ್ಗೆ ಮತ್ತಷ್ಟು ವಿವರಗಳನ್ನು ತಿಳಿದುಕೊಳ್ಳುತ್ತಿದ್ದೆ.
ಮೇಲಿನ
ಚಿತ್ರದಲ್ಲಿ, (ಕ್ರಮವಾಗಿ ಎಡದಿಂದ) ದಮಡೆ, ತಂಬೂರಿ, ಮತ್ತು ಕಿನ್ನರಿ ಹಿಡಿದ
ವ್ಯಕ್ತಿಗಳು ಕೇವಲ ಸಂಗೀತಗಾರರಲ್ಲ. ಅವರಲ್ಲಿನ ಪ್ರತಿಭೆ ಕೇವಲ ಸಂಗೀತಕ್ಕೆ
ಸೀಮಿತವಾದುದಲ್ಲ. ಜೀವನದ ಉದ್ದಗಲಗಳನ್ನು ಕೇವಲ ಒಂದೆ ಒಂದು ಹಾಡಿನಲ್ಲಿ ಹಿದಿದಿಡಬಲ್ಲ
ಪ್ರತಿಭಾ ಶಿಖಾಮಣಿಗಳು. ಭಾರತದ ಜಾನಪದ ಸಾಹಿತ್ಯ ಶ್ರೀಮಂತವಾಗಿದ್ದು ಇಂತಹ
ಪ್ರತಿಭೆಗಳಿಂದಲೆ. ಇವರನ್ನು ತತ್ವ ಪದ (devotional songs) ಹಾಡುವವರು ಅಥವ ದೇವರ
ಆರಾಧಕರು ಎಂದು ಕರೆಯುತ್ತಾರೆ. ಜಾನಪದ ಸಾಹಿತ್ಯ, ಸಂಗೀತ ಮತ್ತು ಸಂಸ್ಕೃತಿಯನ್ನು
ಮತ್ತಷ್ಟು ಶ್ರೀಮಂತಗೊಳಿಸುವ ಮಹತ್ವಾಕಾಂಕ್ಷೆಯಲ್ಲಿ ತಮ್ಮ ಇಡೀ ಜೀವನವನ್ನು ಬಡತನದ
ರೇಖೆಯ ಕೇಳಗೇ ಕಳೆಯುತ್ತಿದ್ದಾರೆ. ಊರೂರು ತಿರುಗಾಡಿ, ಪ್ರತಿಯೊಂದು ಮನೆಯ ಮುಂದೆ
ನಿಂತು ತತ್ವಪದಗಳನ್ನು ಹಾಡಿ, ಜನರು ಕೊಡುವ ಆಹಾರ, ಧವಸ ಧಾನ್ಯ, ಅಲ್ಪ ಸ್ವಲ್ಪ
ದುಡ್ಡಿನಿಂದಲೇ ಜೀವನ ಕಳೆಯಬೇಕು. ಈ ಜನಾಂಗದ ಕೆಲವರಿಗೆ, ವ್ಯವಸಾಯಕ್ಕೆಂದೇ ಸಾಕಷ್ಟು
ಭೂಮಿಯಿದ್ದರೂ, ಊರೂರು ತಿರುಗಾಡಿ ತಮ್ಮ ಹಾಡಿನ ಮೂಲಕ ಭಕ್ತಿಯ ಮಹಾಪೂರ ಹರಿಸಿ
ತಲೆತಲಾಂತರದಿಂದ ಬಂದ ಕಲೆಯನ್ನು ಉಳಿಸಿ ಬೆಳೆಸಿದಾಗಲೇ ತಮಗೆ ಮುಕ್ತಿ ಎಂಬ ನಂಬಿಕೆ!
ಸರಕಾರ ಇಂತಹ ಜನಾಂಗದ ಬಗ್ಗೆ ಆಸಕ್ತಿ ತೋರಿಸಿ, ಅವರ ಕಲೆಗೆ ಪ್ರೋತ್ಸಾಹ ಕೊಡುವುದರ
ಜೊಜ್ಜೊತೆಗೆ, ಅವರ ಬದುಕಿಗೂ ಒಂದು ಆಧಾರವೇನಾದರು ಮಾಡಿಕೊಟ್ಟರೆ ನಮ್ಮ ದೇಶದ ಕಲೆ,
ಸಂಸ್ಕೃತಿಯನ್ನು ರಕ್ಷಿಸುವುದರ ಜೊತೆಗೆ, ಇಂತಹ ಜನರಿಗೆ ಒಂದು ಹೊಸ ಜೀವನವನ್ನೂ
ಕೊಟ್ಟಂತಾಗುತ್ತದೆ.
ದೇವರ
ದರ್ಶನಕ್ಕೆಂದು ಹೋದ ಲೋಕನಾಥ ಸರ್ ಬಾಗಿಲಿನಿಂದ ಹೊರಬರುತ್ತಿದ್ದಂತೆಯೇ ಫಕೀರರಿಂದ
ಅವರಿಗೂ ನವಿಲು ಗರಿಯ ಬೆತ್ತದ ಆಶೀರ್ವಾದವಾಯಿತು. ಅವರ ಹತ್ತಿರ ಚಿಲ್ಲರೆ ಹಣ ಇನ್ನೂ
ಇತ್ತು ಅಂತ ಕಾಣುತ್ತೆ. ಫಕೀರರ ಪುಣ್ಯ! ದೇವರ ದರ್ಶನದ ಮಹತ್ಕಾರ್ಯವಂತೂ ಮುಗಿಯಿತು.
ದಿನವಿಡೀ ತಿರುಗಾಡಿದ್ದರೂ ಜಾತ್ರೆಯ ಚಪಲ ನನ್ನನ್ನು ಇನ್ನೂ ಬಿಟ್ಟಿರಿಲಿಲ್ಲ. ಬೆಟ್ಟ
ಇಳಿಯಲು ಸಜ್ಜಾದೆ. ಅಷ್ಟರಲ್ಲಿ ಛತ್ರಿ ಹಿಡಿದು ನಿಂತಿದ್ದ 'ಕೊಡೆಕಲ್ ಬಸವ'ನ
ದರ್ಶನವಾಯಿತು. ಒಂದೇ ಜಾಗದಲ್ಲಿ ಎಷ್ಟು ಹೊತ್ತು ಬೇಕಾದರು ನಿಲ್ಲುವ ಈ ವ್ಯಕ್ತಿಗೆ
'ಸಾರುವ ಅಯ್ಯನವರು' ಅಥವ 'ಐಗೋಳು' ಅಂತ ಹೆಸರು. ಜನರ ಭವಿಶ್ಯ ನುಡಿಯುವುದೇ ಇವನ
ಉದ್ಯೋಗ. ಪೌರಾಣಿಕವಾಗಿ, ಹಿಂದೆ ಯಾವ ಯುಗದಲ್ಲಿ ಏನಾಯಿತು, ಮುಂದೆ ಏನಾಗುತ್ತದೆ,
ಎನ್ನುವುದರ ಬಗ್ಗೆ ಅಪಾರವಾದ ಜ್ಞಾನ ಬೇರೆ. ಆದರೆ ಯಾವುದೂ ವೈಜ್ಞಾನಿಕವಾದುದಲ್ಲ.
ಎಲ್ಲಾ ಬರಿ ಓಳು! ಆದರೂ, ತಲೆತಲಾಂತರದಿಂದ ಬಂದ ಒಂದು ನಂಬಿಕೆಯನ್ನು ಅಷ್ಟೊಂದು
ನಿಯತ್ತಿನಿಂದ ಮುಂದುವರಿಸಿಕೊಂಡು ಹೋಗುತ್ತಿರುವ ಅಯ್ಯನಿಗೆ ಶರಣೆನ್ನಲೇಬೇಕು.
ಬೆಟ್ಟದಿಂದ
ಕೆಳಗಿಳಿಯಿತ್ತಿದ್ದಂತೆಯೇ ಊರಿಂದ ಬಂದಿದ್ದ ಚಂದು (ಇನ್ನೊಬ್ಬ) ಕಾಕಾ ಮತ್ತು
ನಮ್ಮೂರಿನವರೇ ಆದ 'ತಾತಪ್ಪ' ಅಜ್ಜರನ್ನು ಅನಿರೀಕ್ಷಿತವಾಗಿ ಭೆಟ್ಟಿಯಾದೆವು. ಆಗಲೆ
ಮುಸ್ಸಂಜೆಯಾಗಿತ್ತು. ಜಾತ್ರೆಯಲ್ಲಿ ತಿರುಗಿ ಸುಸ್ತಾಗಿದ್ದ ನನಗೆ, ಸೂರ್ಯ ಬೆಟ್ಟದ ಯಾವ
ಮೂಲೆಯಿಂದ ಮರೆಯಾದನೋ ಗೊತ್ತಾಗಲಿಲ್ಲ. ಜನದಟ್ಟಣೆಯಲ್ಲಿ ಮುನ್ನುಗ್ಗುತ್ತಿದ್ದಂತೆಯೇ
ಹೃದಯ ಹಿಂಡುವ ದೃಶ್ಯವೊಂದನ್ನು ಕಂಡೆ.
ಒಬ್ಬ
ವ್ಯಕ್ತಿ, ತನ್ನ ತುಟಿಯಲ್ಲಿ ಕಬ್ಬಿಣದ ತಂತಿಯನ್ನು ಚುಚ್ಚಿಕೊಂಡಿದ್ದ, ಕೊರಳಲ್ಲಿ
ರುದ್ರಾಕ್ಷಿ, ಒಂದು ಕೈಯಲ್ಲಿ ವಿಭೂತಿ, ಇನ್ನೊಂದು ಕೈಯಲ್ಲಿ ಅಗ್ನಿಯ ಜ್ವಾಲೆ,
ನಿಂತಿರುವುದು? ಕಬ್ಬಿಣದ ಮೊಳೆಗಳ ಮೇಲೆ! ಇವರನ್ನು "ಪುರುವಂತರು" ಅಥವ "ವೀರಘಾಸಿಯವರು"
ಅಂತ ಹೆಸರು. ಅವರ ಉದ್ಯೋಗವೇ ಇದೆ. ಜಾತ್ರೆಯಲ್ಲಿ, ಸಂತೆಗಳಲ್ಲಿ, ಹಳ್ಳಿಯಲ್ಲಿ ನಡೆಯುವ
ಸಮಾರಂಭಗಳಲ್ಲಿ ಈ ಥರ ಸ್ವಹಿಂಸೆ ಮಾಡಿಕೊಂಡೆ ಜೀವನ ನಡೆಸಬೇಕು. ಯಾಕೆ ಹೀಗೆ? ಅವರ
ಇತಿಹಾಸ ಇನ್ನೂ ತಿಳಿದುಕೊಳ್ಳಬೇಕಾಗಿದೆ.
ಕೊನೆಯಿಲ್ಲದ ಕುಂಕುಮ ಭಂಡಾರಗಳ ಮಳಿಗೆಗಳು
ಜಾತ್ರೆಯಲ್ಲಿ ಭರದಿಂದ ಮಾರಾಟವಾಗುವ ಎತ್ತಿನ ಘಂಟೆಗಳು
ತಾತಪ್ಪ
ಅಜ್ಜರಿಗೆ ಜಾತ್ರೆಯಲ್ಲಿ ಸಂತೆ ಮಾಡುವ ಕೆಲಸವೊಂದು ಬಾಕಿ ಇತ್ತು. ಅದೇ ನೆಪದಲ್ಲಿ
ಇನ್ನಷ್ಟು "ಹೀಗೂ ಉಂಟೆ" ದೃಶ್ಯಗಳನ್ನು ಕಂಡೆ. ಎಲ್ಲಿ ನೋಡಿದರಲ್ಲಿ ಕುಂಕುಮ ಭಂಡಾರದ
ರಾಶಿಗಳು, ಪವಿತ್ರವಾದ ಧಾರ (sacred thread) ಗಳ ಸಾಲು, ಫಲಹಾರಗಳ ತೆರೆದ ಅಂಗಡಿಗಳು,
ರೈತರಿಗೆ ಬೇಕಾಗುವ ಸಾಮಾಗ್ರಿಗಳ ಮಳಿಗೆಗಳು, ನಮ್ಮನ್ನು ಸ್ವಾಗತಿಸುತ್ತಿದ್ದವು.
ಜಾತ್ರೆಯಲ್ಲಿ ಮತ್ತಷ್ಟು ತಿರುಗಾಡಿ, ಬಸ್ ಸ್ಟ್ಯಾಂಡ್ ತಲುಪುವಷ್ಟರಲ್ಲಿ
ಏಳೂವರೆಯಾಗಿತ್ತು. ಆಗಲೆ ಸಾಕಷ್ಟು ಜನ ಮೈಲಾಪುರ ಬಿಟ್ಟು ತಮ್ಮ ತಮ್ಮ ಮನೆ
ಸೇರಿಯಾಗಿತ್ತು. ಬಸ್ಸಿನಲ್ಲಿ ಸೀಟು ದಕ್ಕಿಸಿಕೊಳ್ಳುವುದು ಅಷ್ಟೇನು ಕಷ್ಟವಾಗಿರಲಿಲ್ಲ.
ಮನೆ ತಲುಪುವಷ್ಟರಲ್ಲಿ ಒಂಬತ್ತು ಗಂಟೆಯಾಗಿತ್ತು. ಬಿಸಿನೀರಿನ ಮಜ್ಜನದ ನಂತರ ಊಟ ಮಾಡಿ
ಮಲಗಿದರೂ ರಾತ್ರಿಯಿಡೀ ಮೈಲಾಪುರದ ಚಿತ್ರಗಳೇ ನನ್ನನ್ನಾವರಿಸಿಕೊಂಡಿದ್ದವು.
ಕಾಕಾನ(ಮೇಲಿನ
ಚಿತ್ರದಲ್ಲಿ, ಎಡದಿಂದ ಎರಡನೆಯವರು) PhD ಪ್ರಭಂಧ ಜಾನಪದ ಸಾಹಿತ್ಯಕ್ಕೆ
ಸಂಭಂದಿಸಿದ್ದು. ಹೀಗಾಗಿ ಜಾತ್ರೆಯಲ್ಲಿ ಕಂಡ ಹಲವಾರು ವ್ಯಕ್ತಿಗಳು, ಜನಾಂಗಗಳ ಬಗ್ಗೆ
ಎಷ್ಟು ಬೇಕೋ ಅಷ್ಟು ವಿಷಯಗಳನ್ನು ತಿಳಿದುಕೊಳ್ಳಲು ತುಂಬಾ ಸಹಾಯವಾಯಿತು. ಅವರಿಗೆ ನನ್ನ
ಹೃದಯಸ್ಪರ್ಷಿ ವಂದನೆಗಳು.