ಅಳೆಯಲಾಗದ ಒಲವು
ಆ ಸಂಜೆಯಲಿ ನಿನ್ನಿಂದ ದೂರ ನಡೆವಾಗ
ನನ್ನೆದೆಯಲಿದ್ದ ಒಲವನ್ನು ಅಳೆಯಲಾರೆ.
ಕಾಪಿಟ್ಟ ನೀಲಿ ಕಾನನದಲಿ ಕಣ್ಮರೆಯಾದಾಗ
ಪಡುವಣದ ಬಾನಿನಲಿ ತಾರೆಗಳ ಎಣಿಸಲಾರೆ.
ಇನಿತಾದರೂ ನಗೆಯ ಸುಳಿವಿರಲಿಲ್ಲ, ಅಂದು
ಕಾಣದ ವಿಧಿಯಡೆಗೆ ನಾ ನಡೆಯುವಂದು.
ಬೆನ್ನ ಹಿಂದಿನ ಮುಖಗಳು ಮಸುಕಾಗಿ
ನೀಲಿ ಕಾನನದ ಸಂಜೆಯಲ್ಲಿ ಕರಗಿಹೋದಂದು
ಆ ರಾತ್ರಿ ಬಲು ಸೊಬಗು, ಬಹು ಸೊಬಗು
ಹಿಂದೆಂದು ಕಾಣದ್ದು, ಮುಂದೆ ಕಾಣಬರದು.
ನಿಜ ನುಡಿಯಲೇ, ಆ ಸಂಜೆ ನನ್ನ ಬಳಿ ಉಳಿದದ್ದು..
ನೀಲಿ ಕಾಡಿನ ದೊಡ್ಡಹಕ್ಕಿಗಳು ಮತ್ತದರ ಹಸಿವಿನ ಕೂಗು.
ಬರ್ಟೋಲ್ಟ್ ಬ್ರೆಷ್ಟ್ ಕವಿಯ "Ich habe dich nie je so geliebt " ಪದ್ಯದ ಭಾವಾನುವಾದ.
Rating