ಅವನಿಲ್ಲ

ಅವನಿಲ್ಲ

ಅವನಿಲ್ಲದೇ ಎಂಟು ವರ್ಷ ಕಳೆದು ಹೋಯಿತು. ಎಂಟು ವರ್ಷ ಹೇಗೆ ಕಳೆಯಿತೆಂದು ತಿಳಿಯಲೇ ಇಲ್ಲ ಎಂದು ಸುಳ್ಳು ಹೇಳಲಾರೆ. ಅವನನ್ನು ಈ ಎಂಟು ವರ್ಷಗಳಲ್ಲಿ ಎಷ್ಟು ಬಾರಿ ನೆನೆದಿರಬಹುದು ಎಂಬ ಲೆಕ್ಕವನ್ನೂ ನಾನು ಇಡಲಾರೆ. ಹಾಗೇ, ನಾನು ಎಂಟು ವರ್ಷ ಹಿಂದೆ, ಇದೇ ದಿನ, ಮುಂಜಾನೆ ಬಂದ ಆ ಘೋರ ದೂರವಾಣಿ ಕರೆಯನ್ನೂ ಎಂದೆಂದಿಗೂ ಮರೆಯಲಾರೆ.

ಅವನು ಇದ್ದಿದ್ದು ಒಂದು ಚಿಕ್ಕ ಊರಿನಲ್ಲಿ. ಚಿಕ್ಕ ಊರೆಂದರೆ, ಸಣ್ಣ ಹಳ್ಳಿಯೂ ಅಲ್ಲ, ಭಾರೀ ನಗರವೂ ಅಲ್ಲ - ಆ ರೀತಿಯ ನಡುವಿನ ಮಟ್ಟದ ಒಂದು ಪಟ್ಟಣ. ಅಲ್ಲಿಗೊಂದು ಒಳ್ಳೇ ಶಾಲೆ. ಆ ಊರಿಗೆ ಬಂದಾಗ ಅವನು ಮೂರನೆಯದೋ-ನಾಕನೆಯದೋ ತರಗತಿಯರಲ್ಲಿ ಇದ್ದಿರಬೇಕು. ಶಾಲೆಯ ಎಲ್ಲ ಕಲಿಸುವವರಿಗೂ ಅಚ್ಚುಮೆಚ್ಚಾಗಲು ಅವನಿಗೆ ಹೆಚ್ಚೇನೂ ವೇಳೆ ಬೇಕಾಗಲಿಲ್ಲ. ತನ್ನ ಹೆಸರಿಗೆ ತಕ್ಕಂತೆ, ಎಲ್ಲರ ಮನಸ್ಸನ್ನೂ ಕದ್ದುಬಿಟ್ಟ ಅವನು. ಯಾವ ಪ್ರಬಂಧ ಸ್ಪರ್ಧೆಯಾಗಲಿ, ಚರ್ಚಾಕೂಟವಾಗಲಿ, ಅವನಿಗೆ ಬಹುಮಾನ ಅನ್ನುವುದು ಕಟ್ಟಿಟ್ಟ ಬುತ್ತಿಯೇ. ಪರೀಕ್ಷೆಗಳಲ್ಲಿ, ಬರೇ ಶಾಲೆಗೇಕೆ, ಜಿಲ್ಲೆಗೇ ಮೊದಲಿದ್ದವನು ಅವನು.

ಅವನು ನನಗಿಂತ ಎಂಟು ವರ್ಷ ದೊಡ್ಡವನು. ಚಿಕ್ಕ ವಯಸ್ಸಿಗೇ ಬಹಳ ವಿಷಯಗಳನ್ನು ಅರಿತಿದ್ದ ಅವನು, ಅದೇ ರೀತಿ ನಾನೂ ಆಗಬೇಕೆಂಬ ಬಯಕೆಯನ್ನು ನನಗೆ ಗೊತ್ತೊಲ್ಲದೇ ಮೂಡಿಸಿದ್ದ. ಲೈಬ್ರರಿಗೆ ತಾನು ಹೋಗುವಾಗ ನನ್ನನ್ನೂ ಕರೆದೊಯ್ದು, ನನ್ನ ಮುಂದೆ ಪುಸ್ತಕಗಳನ್ನು ಹಾಕಿ ಓದಲು ಹೇಳುತ್ತಿದ್ದ. ನನಗೆ ಓದುವ ಹುಚ್ಚು ಹತ್ತಿಸಿದ್ದೇ ಅವನು ಅನ್ನೋದು ನನ್ನ ನೆನಪು. ಅವನ ಜೊತೆ ನಾನು ಹೋಗುತ್ತಿದ್ದರೆ, ನನಗೆ ಎಲ್ಲರೂ ನನ್ನನ್ನೇ ನೋಡ್ತಾ ಇದ್ದಾರೆ, ಅನ್ನೋ ಅನಿಸಿಕೆ. ನಾನು ಆ ಶಾಲೆಯೆ ಸೇರಿದ ವರ್ಷ ಅವನು ಆ ಶಾಲೆಯಿಂದ ಹೊರಬಿದ್ದ. ಅದೂ ಎಸ್.ಎಸ್.ಎಲ್.ಸಿ.ಯಲ್ಲಿ ರಾಜ್ಯಕ್ಕೇ ಮೂರನೇ ಸ್ಥಾನ ಪಡೆದು. ಹಾಗಾಗಿ, ನಾನು, ಅವನು ಒಂದು ಶಾಲೆಯಲ್ಲಿ ಯಾವತ್ತೂ ಹೋಗಿದ್ದೇ ಇಲ್ಲ. ಹಾಗಿದ್ದ್ರೂ, ಎಷ್ಟೋ ಜನ ಕಲಿಸುವವರು ಅವನ ಬಗ್ಗೆ ನನ್ನಲ್ಲಿ ವಿಚಾರಿಸಿಕೊಳ್ಳುವವರೇ. ಶಾಲೆಯಲ್ಲಿ ನನಗೆ ಅಂತ ಒಂದು ವ್ಯಕ್ತಿತ್ವ, ಬರುವ ವೇಳೆಗೆ, ಅವನು ಮೊದಲ, ಎರಡನೆ ಪ್ರಿಯೂನಿವರ್ಸಿಟಿ ಪರೀಕ್ಷೆಗಳೆರಡರಲ್ಲೂ ರಾಜ್ಯಕ್ಕೇ ಹತ್ತರೊಳಗೇ ಬಂದು ಹೆತ್ತವರಿಗೆ ಹೆಮ್ಮೆ ತಂದ. ಎಲ್ಲ ಪತ್ರಿಕೆಗಳಲ್ಲೂ ಅವನ ಚಿತ್ರ. ಆದರೂ, ಹಮ್ಮು -ಬಿಮ್ಮಿಲ್ಲದ ಸ್ವಭಾವ ಅವನದು. ತನಗೇನು ಗೊತ್ತು ಅನ್ನುವುದನ್ನು ವಾಚ್ಯವಾಗಿ ತೋರಿಸಿಕೊಳ್ಳದೆಯೇ, ಅದರ ಅನುಭವ ಮಾತ್ರ ಮಾಡಿಸುವ ಅವನ ಗುಣ ಹಲವರಲ್ಲಿ ಕಾಣಸಿಗದು.

ನಾನು ಮಿಡಲ್ ಸ್ಕೂಲ್ ಗೆ ಬಂದಾಗಲೇ, ಅವನು ವೈದ್ಯಕೀಯ ಓದಲು, ಪರಊರಿಗೆ ತೆರಳಿ ಆಗಿತ್ತು. ಆದರೂ, ಬಂದಾಗಲೆಲ್ಲ, ತನ್ನ ತಿಂಗಳ ಖರ್ಚಿಗೆ ಅಪ್ಪ ಕಳಿಸಿದ್ದ ದುಡ್ಡಿನಲ್ಲೇ ಹಣ ಮಿಗಿಸಿ, ಅಲ್ಲಿ ಇಲ್ಲಿ - ಪುಸ್ತಕ ಪ್ರದರ್ಶನಗಳಲ್ಲಿ ಕಂಡ ಪುಸ್ತಕಗಳನ್ನು, ಮುಖ್ಯವಾಗಿ ವಿಜ್ಞಾನ ಸಂಬಂಧೀ ವಿಷಯಗಳಲ್ಲಿ ತಂದುಕೊಡುತ್ತಿದ್ದ. ನನ್ನ ಓದುವ ಆಸೆಗೆ ನೀರೆರೆಯುತ್ತಿದ್ದ. ಶಾಲೆಯಲ್ಲಿ ನನ್ನ ಪ್ರಗತಿ ಕೇಳಿ ಸಂತಸಪಡುತ್ತಿದ್ದ, ಯಾವಾಗಲೂ ಹುರಿದುಂಬಿಸುತ್ತಿದ್ದ.

ಓದು ಮುಗಿಸಿ ಊರಿಗೆ ಮರಳಿ, ಜನರ ನೆಚ್ಚಿನ ವೈದ್ಯನಾಗಿ ಹೆಸರು ಗಳಿಸಿದ. ಆದರೆ, ಅದರಲ್ಲಿ ಸಮಾಧಾನ ಸಿಗಲಿಲ್ಲವೇನೋ ಅವನಿಗೆ. ಮುಂದೆ ಓದಲು ಹೋದವನು, ಒಂದೆಡೆಯಿಂದ ಇನ್ನೊಂದೆಡೆ ಹೋಗುತ್ತಲೇ ಇದ್ದ. ಬೆಂಗಳೂರಿನ ಒಂದೆರಡು ಭಾರೀ ಆಸ್ಪತ್ರೆಗಳಲ್ಲಿ ಓದು ಮುಂದುವರೆಸಿದವನು, ಅಲ್ಲಿಂದ ಇಂಗ್ಲೆಂಡ್,ಅಮೆರಿಕಾ ಅಂತ ಹಾರಿಬಿಟ್ಟ. ಮತ್ತೆ ಅವನೊಡನೆ ಬಹಳ ಸಮಯ ಒಟ್ಟಿಗೆ ಕಲೆಯುವ ಅವಕಾಶವೇ ನನಗೆ ಸಿಗಲಿಲ್ಲ. ಅಷ್ಟರಲ್ಲಿ ಓದು ಮುಗಿಸಿ, ನಾನೂ ಊರೂರು ಸುತ್ತುತ್ತಿದ್ದೆನಲ್ಲ! ನಾನೂ ಅಮೆರಿಕೆಗೆ ಬಂದ ನಂತರ ಸುಮಾರು ಒಂದು ವರ್ಷದವರೆಗೂ ಅವನನ್ನು ಭೇಟಿ ಮಾಡಲೇ ಇಲ್ಲ. ಅವನಿಗೆ ಕೆಲಸ ಮತ್ತು ಸಂಸಾರದ ಗಡಿಬಿಡಿ. ನನಗೋ ಹೊಸ ಸ್ಥಳದಲ್ಲಿ, ಹೊಂದಿಕೊಳ್ಳುವ ತಾಪತ್ರಯ. ಒಮ್ಮೆ ಮಾತ್ರ, ನಮ್ಮ ಮನೆಗೆ ಭೇಟಿಕೊಟ್ಟ ಅವನು- ಏನೋ ಕೆಲಸದ ನಿಮಿತ್ತ ನಮ್ಮ ಊರಿಗೆ ಬಂದಾಗ. ಅಷ್ಟೇ. ಅವನನ್ನು ಮರಳಿ ಸ್ಯಾನ್ ಫ್ರಾನ್ಸಿಸ್ಕೋ ವಿಮಾನ ನಿಲ್ದಾಣಕ್ಕೆ ಕಳಿಸಿಬಂದದ್ದು, ಅವನಿಗೆ ಕೈ ಬೀಸಿದ್ದು ಇನ್ನೂ ಈಗ ಒಂದು ಗಳಿಗೆಯ ಹಿಂದೆಯೋ ಎನ್ನುವಷ್ಟು ನಿಚ್ಚಳವಾಗಿದೆ.

ಎಂಟು ವರ್ಷದ ಹಿಂದೆ, ಜುಲೈ ೧೯ರಂದು, ಅವನ ಕರೆ ಬಂತು. ಹೊಸ ಕೆಲಸ ಸಿಕ್ಕಿದ್ದನ್ನೂ, ಅದಕ್ಕಾಗಿ ಹೊಸ ಒ-೧ ವೀಸಾದ ಛಾಪಾವನ್ನು ಹಾಕಿಸಿಕೊಂಡು ಬರಲು ಊರಿಗೆ ಹೋಗುತ್ತಿರುವ ವಿಷಯವನ್ನೂ ಅವನು ಹೇಳಿದಾಗ, ಅವನಷ್ಟೇ ನಾನೂ ಸಂತೋಷಪಟ್ಟೆ.

ಆದರೆ ಊರಿಗೆ ಹೋದಮೇಲೆ ನಡೆದದ್ದೇ ಬೇರೆ ಕಥೆ.

ಮರಳಿ ಬರುವ ಕೆಲ ದಿನಗಳ ಮೊದಲು, ತನ್ನ ವಿಮಾನದ ಟಿಕೆಟ್ ಕನ್ಫರ್ಮ್ ಮಾಡಿಸಿಕೊಳ್ಳಲು ಕೆಂಪೇಗೌಡ ರಸ್ತೆಗೆ ಹೋಗಿದ್ದ ಅವನ ಜೀವವನ್ನು ರಾಕ್ಷಸ ಕೆಂಪು ಬಸ್ಸೊಂದು ನುಂಗಿ ಹಾಕಿತು. ಅವನನ್ನು ಸಂಚಾರ ನಿಯಂತ್ರಣ ಪೊಲಿಸ್ ನ ಅಂಕಿ-ಅಂಶದಲ್ಲಿ ಒಂದು ಅಂಕೆಯನ್ನಾಗಿ ಮಾಡಿಬಿಟ್ಟಿತು. ಅವನ ಮನೆಯವರಿಗೆ ಮುಗಿಯದ ಕೃಷ್ಣ ಪಕ್ಷವನ್ನು ತಂದುಬಿಟ್ಟಿತ್ತು

ಆಗಸ್ಟ್, ೨೮, ೧೯೯೯ ಮಧ್ಯಾಹ್ನ ೧:೩೩ ಶ್ರಾವಣ ಕೃಷ್ಣಪಕ್ಷದ ಬಿದಿಗೆ, ರಾಘವೇಂದ್ರ ಸ್ವಾಮಿಗಳ ಆರಾಧನೆಯ ದಿನ.

ಪತ್ರಿಕೆಗಳ ಮುಖಪುಟದಲ್ಲಿ , ಚಿತ್ರ-ಹೆಸರು ಪಡೆದಿದ್ದ ಅವನ ಜೀವನ, ಮತ್ತೆ ಪತ್ರಿಕೆಯ ಅಪಘಾತ ಕಾಲಮ್ ನಲ್ಲಿ ಪಾದಚಾರಿ ಮರಣ ಅನ್ನುವ ತಲೆಬರಹದಲ್ಲಿ ಕೊನೆಯಾಯಿತು.

ವಿಧಿ ಮಾಡಿಸಿದಂತೆ ಆಗುತ್ತೆ - ಆದದ್ದೆಲ್ಲ ಒಳ್ಳೆಯದಕ್ಕೆ ಎಂದುಕೊಳ್ಳಬೇಕು ಎಂದು ತತ್ವಜ್ಞಾನ ಮಾತಾಡುವವರಿದ್ದಾರೆ. ಆದರೆ ಈ ಮಾತಿನ ಮೊದಲ ಭಾಗವನ್ನು ಮಾತ್ರ ನಾನು ಒಪ್ಪಬಲ್ಲೆ. ಎರಡನೇ ಭಾಗವನ್ನು ನಾನು ಎಂದಿಗೂ ಒಪ್ಪಲಾರೆ. ನಾನೇ ಯಾಕೆ, ಹತ್ತಿರದವರನ್ನು ಅಕಾಲದಲ್ಲಿ ಕಳಕೊಂಡ ಯಾರೂ ಒಪ್ಪಲಾರರು.

ಏಕೆಂದರೆ, ಅವನು ನನ್ನ ಅಣ್ಣ.

-ಹಂಸಾನಂದಿ

Rating
No votes yet

Comments