ಅವರು ಹಾಗೆ, ನಾವ್ಯಾಕೆ ಹೀಗೆ?

ಅವರು ಹಾಗೆ, ನಾವ್ಯಾಕೆ ಹೀಗೆ?

ಜಾರ್ಜ್ ಬುಶ್ ತನ್ನ ಎಂಟು ವರ್ಷಗಳ ಅಧಿಕಾರಾವಧಿಯಲ್ಲಿ ಅತ್ಯಾಧುನಿಕ ದುರ್ಬೀನು ಹಿಡಿದು ಗುಡ್ಡ ಕಣಿವೆ, ಹಳ್ಳ ಕೊಳ್ಳ ಬಿಡದೆ ಹುಡುಕಾಡಿದರೂ ಸಿಗದ ಒಸಾಮಾ ಬಿನ್ ಲಾದೆನ್ ನನ್ನು ತನ್ನ ಅಧಿಕಾರಾವಧಿಯ ಉತ್ತರಾರ್ಧದಲ್ಲೇ ಕೆಡವಿ ಬೀಳಿಸಿದ ಕೀರ್ತಿ ಒಬಾಮಾರದು. “ನನ್ನ” ನಿರ್ದೇಶನದ ಮೇರೆಗೆ “ನಾವಿಕ ಸೀಲ್ - ೬” ರ ವಿಶೇಷ ಪಡೆಗಳು ಒಸಾಮಾನನ್ನು ಬಲಿ ಹಾಕಿ ಜಲಸಮಾಧಿ ಮಾಡಿದರು ಎನ್ನುವ ಮಾತಿನಲ್ಲಿ “ನನ್ನ” ಎನ್ನುವ narcissistic ಮಾತೊಂದು ಬಿಟ್ಟರೆ ಒಬಾಮಾ ಬೇರಾವುದೇ ಶೌರ್ಯ ಪ್ರದರ್ಶನ ಮಾಡಲಿಲ್ಲ. ಒಸಾಮಾನನ್ನು ಬಲಿ ಹಾಕಿದ ಕೂಡಲೇ ಜಾರ್ಜ್ ಬುಶ್ ರಿಗೆ ಫೋನಾಯಿಸಿ ಇನ್ನು ಈ ಭೂಮಿಯ ಮೇಲೆ ಒಸಾಮಾ ನಡೆಯುವುದನ್ನು ನೋಡಲಾರಿರಿ ಎನ್ನುವ  ಸಂದೇಶ ನೀಡಿದರು ಅಧ್ಯಕ್ಷ ಒಬಾಮ. ದೇಶಕ್ಕೆ, ವಿಶ್ವಕ್ಕೆ ಈ ವಿಷಯವನ್ನ ಹೊರಗೆಡಹುವ ಮೊದಲೇ ತನ್ನ ಪಕ್ಷದವನಲ್ಲದ ರಿಪಬ್ಲಿಕನ್ ಪಕ್ಷದ ಹಿಂದಿನ ಅಧ್ಯಕ್ಷ ಬುಶ್ ನಿಗೆ ಈ ಸಂದೇಶ ರವಾನೆ ಮಾಡಿದ್ದು ಏಕೆ? ಈ ರಾಜಕಾರಣಕ್ಕೆ ನಿಷ್ಕೃಷ್ಟವಾಗಿ  bipartisan politics ಎಂದು ಕರೆಯುತ್ತಾರೆ ಅಮೆರಿಕೆಯಲ್ಲಿ. ದೇಶದ ಭದ್ರತೆ, ಸಮಗ್ರತೆ, ಮುಂತಾದ ಗಂಭೀರ ವಿಚಾರಗಳು ಬಂದಾಗ ಅಮೆರಿಕೆಯಲ್ಲಿ ಎಲ್ಲಾ ಪಕ್ಷಗಳೂ ಒಂದು. ಅವರೆಲ್ಲರ ಪಕ್ಷ ಒಂದೇ. ಅದುವೇ ಅಮೇರಿಕನ್. put america first, ಅಮೆರಿಕೆಯ ರಾಜಕಾರಣಿಗಳ ಧ್ಯೇಯ ವಾಕ್ಯ. ಅವರುಗಳ ಏಕೋದ್ದೇಶ. ದೇಶ ಉರಿಯುವಾಗ ಬಾಣಲೆ ಎತ್ತಿ ಕೊಂಡು ಬಂದು ಕಜ್ಜಾಯ ಹುರಿಯಲು ಮುಂದಾಗೋಲ್ಲ ಅಲ್ಲಿನ ರಾಜಕಾರಣಿಗಳು. ಹಾಗೇನಾದರೂ ಮಾಡಿದರೆ ಇ- ಮೇಲ್ ಮೂಲಕ ಬರುತ್ತವೆ ಎಕ್ಕಡಗಳು. ಮುಂದಿನ ಬಾರಿ ಆರಿಸಿ ಬರುವ ಆಸೆ ಕನಸಾಗುತ್ತದೆ.    
 
ಈಗ ಬನ್ನಿ ಭಾರತಕ್ಕೆ. “ನಿನ್ನ ತಲೆ ಹೋದರೂ ಪರವಾಗಿಲ್ಲ ನನ್ನ ತಲೆಯ ಮೇಲಿನ ಪೇಟ intact ಆಗಿದ್ದರೆ ಸಾಕು” ಎನ್ನುವ ರಾಜಕಾರಣಕ್ಕೆ ಸುಸ್ವಾಗತ. ೨೦೦೮ ನವೆಂಬರ್ ೨೬ ಕ್ಕೆ ವಿಶ್ವವನ್ನೇ ನಡುಗಿಸಿದ, ಪಾಕಿಸ್ತಾನದ ಭಯೋತ್ಪಾದಕರು ಮುಂಬೈಯಲ್ಲಿ ನಡೆಸಿದ ಮಾರಣ ಹೋಮ ಎರಡೂ ದೇಶಗಳು ಯುದ್ಧ ತಯಾರಿ ನಡೆಸುವಷ್ಟು ತೀವ್ರ ಪರಿಣಾಮ ಬೀರಿತು. ಮೂರು ದಿನಗಳ ಕಾಲ ಮುಂಬೈ ನಗರವನ್ನು ಒತ್ತೆಯಾಗಿರಿಸಿಕೊಂಡಿದ್ದ ಕೊಲೆಗಡುಕರು ನಮ್ಮ ಯೋಧರ ಗುಂಡುಗಳಿಗೆ ಒಬ್ಬೊಬ್ಬರಾಗಿ ಉರುಳಿದರು. ಎಲ್ಲಾ ಭಯೋತ್ಪಾದಕರೂ ಹತರಾಗಿ ಮುಂಬೈ ಮತ್ತೊಮೆ ಸುರಕ್ಷಿತ ಸ್ಥಿತಿಗೆ ಮರಳಿದಾಗ ನಮ್ಮ ಪ್ರಧಾನಿಗಳೂ, ವಿರೋಧ ಪಕ್ಷದ ನಾಯಕರೂ ಮುಂಬೈಗೆ ಧಾವಿಸಿ ಬಂದರು. ಬಂದಿದ್ದು ದೊಡ್ಡ ವಿಷಯವಲ್ಲ. ಅವರು ಬಂದ ರೀತಿ ಮಾತ್ರ ವಿಶೇಷವಾದದ್ದು. ಇಡೀ ವಿಶ್ವಕ್ಕೆ ನಾವು ಯಾವ ಪಕ್ಷಗಳಿಗೆ ಸೇರಿದ್ದರೂ ನಾವು ಭಾರತೀಯರು ಒಂದು ಎಂದು ತೋರಿಸಲು ಈ ಮಹನೀಯರುಗಳು ಒಟ್ಟಿಗೆ ಬರಲಿಲ್ಲ. ಬೇರೆ ಬೇರೆ ವಿಮಾನಗಳಲ್ಲಿ ಆಗಮಿಸಿದರು. ಈ ಇಬ್ಬರೂ ನಾಯಕರು ತಮ್ಮ ಹೇಳಿಕೆಗಳಲ್ಲಿ ದೇಶ ಒಗ್ಗಟ್ಟಾಗಿದೆ ಎಂದು ಸಾರಿದರೂ ಕೆಲವೊಂದು ಸಂದರ್ಭಗಳಲ್ಲಿ ಚಿಕ್ಕ ಪುಟ್ಟ ಸಂಗತಿಗಳು ಬೃಹದಾಕಾರವಾಗಿ ಗೋಚರಿಸುತ್ತವೆ. ಮುಂಬೈ ಮಾರಣ ಹೋಮಕ್ಕೆ ಮೊದಲು ಕಂದಹಾರಕ್ಕೆ ಅಪಹರಿಸಿಕೊಂಡು ಹೋದ ನಮ್ಮ ವಿಮಾನ, ಸಂಸತ್ ಭವನದ ಮೇಲೆ ನಡೆದ ಧಾಳಿ ಹೀಗೆ ಹಲವು ಯಾತನಾಮಯ ಸಂದರ್ಭಗಳಲ್ಲಿ ನಮ್ಮ ಒಗ್ಗಟು ಸಾಕಾಗಲಿಲ್ಲವೇನೋ ಎನ್ನುವಷ್ಟು ಐಕ್ಯತೆಯಿಂದ ಕೂಡಿರಲಿಲ್ಲ.

ಅಮೇರಿಕೆಯಿಂದ ನಾವು ಕಲಿಯುವುದು ಬಹಳಷ್ಟಿದೆ. ದೇಶ ಒಗ್ಗಟ್ಟಾಗಿದ್ದರೆ ನಾವು ಯಾರಿಗೂ ಭಯ ಪಡುವ ಅವಶ್ಯಕತೆ ಇಲ್ಲ, ಯಾರ ಬೆಂಬಲವನ್ನೂ ನಿರೀಕ್ಷಿಸುವ ಗತಿಗೇಡು ಸಹ ಬರುವುದಿಲ್ಲ. ನಮಗೆ ಸರಿ ಎನಿಸಿದ್ದನ್ನು ನಿರ್ಭಯವಾಗಿ, ನಿರ್ಭಿಡೆಯಿಂದ ಮಾಡಬಹದು ದೇಶದ ರಕ್ಷಣೆಯನ್ನು.         
 
 


 

Rating
No votes yet