ಅವಳ ಕಾಲ್ ಬರುತ್ತಾ?? - ಭಾಗ ೧

ಅವಳ ಕಾಲ್ ಬರುತ್ತಾ?? - ಭಾಗ ೧

ಚಿತ್ರ

ಅವಳು ಹುಟ್ಟಿದಾಗಿನಿಂದ ನನಗೆ ಪರಿಚಯ. ಆದರೂ ಮಾತು ಕಮ್ಮಿ. ಯಾವುದೋ ಮದುವೆ ಮನೆಯಲ್ಲೋ, ಗೃಹ ಪ್ರವೇಶದಲ್ಲೋ, ಉಪನಯನದಲ್ಲೋ ಹೀಗೆ ಯಾವುದೋ ಒಂದು ಕಾರ್ಯಕ್ರಮದಲ್ಲಿ ಭೇಟಿಯಾದಾಗ ಹಾಯ್ ಹೇಗಿದ್ಯಾ? ಇಷ್ಟರಲ್ಲೇ ನಮ್ಮ ಮಾತು ಮುಗಿದಿರುತ್ತಿತ್ತು. ಅಪರೂಪಕ್ಕೊಮ್ಮೆ ಅವರ ಮನೆಗೆ ಹೋದರೂ ನಾವು ಮಾತಾಡುತ್ತಿದ್ದುದ್ದು ಅಷ್ಟಿಕ್ಕಷ್ಟೇ.

ಹೀಗಿರುವಾಗ ಅದ್ಯಾವಾಗಿಂದ ಅವಳು ಇಷ್ಟವಾದಳು ಅನ್ನೋದು ನನಗೂ ಸರಿಯಾಗಿ ಗೊತ್ತಿಲ್ಲ. ಯಾವಾಗ ಮನಸ್ಸು ಅವಳ ಮನೆಗೆ ಆಗಾಗ ಹೋಗಲು ಬಯಸಿತೋ ಆಗಲೇ ಗೊತ್ತಾದ್ದದ್ದು ಅವಳೆಂದರೆ ನನಗೆ ಇಷ್ಟ ಅಂತ. ಬಯಸಿದಾಗಲ್ಲೆಲ್ಲ ಹೋಗಕ್ಕೆ ಆಗದ್ದಿದ್ದರೂ, ೧೦-೧೨ ದಿನಕ್ಕೊಮ್ಮೆ ಅವರ ಮನೆಗೆ ಹೋಗುತ್ತಿದ್ದೆ. ಆಗೆಲ್ಲ ನನ್ನ ಕಣ್ಣುಗಳು ಅವಳನ್ನೇ ಹುಡುಕುತ್ತಿತ್ತು. ಅವಳ ಅಮ್ಮನಿಗೆ ನನ್ನ ಮೇಲೆ ಏನೋ ಪ್ರೀತಿ ವಿಶ್ವಾಸ. ಹೋದಾಗಲ್ಲೆಲ್ಲ ಏನಾದರು ತಿನ್ನುವುದಕ್ಕೆ ಕೊಟ್ಟು ಕಾಫಿ ಕೊಟ್ಟು ೨-೩ ತಾಸು ಅದು ಇದು ಮಾತಾಡಿಸುತ್ತಿದ್ದಳು.


ಹಾಗೆ ಮಾತಾಡಿಸುವಾಗ ಮದುವೆ ವಿಚಾರ ಬಂದಾಗ ನನ್ನ ಮನಸಿನಲ್ಲಿರುವುದನ್ನ ಅವರಿಗೆ ಹೇಳಿಬಿಡಬೇಕು ಎಂದು ಎಷ್ಟೋ ಸಲಿ ಅಂದುಕೊಂಡೆ. ಆದರೆ ನನಗ್ಯಾಕೋ ಅಷ್ಟೊಂದು ಧೈರ್ಯ ಬರಲೇ ಇಲ್ಲ. ಅದಕ್ಕಿಂತ ಹೆಚ್ಚಾಗಿ ಅವರು ನನ್ನ ಮೇಲಿಟ್ಟಿರುವ ವಿಶ್ವಾಸ ಕಳೆದುಕೊಳ್ಳುತ್ತೀನೋ ಅನ್ನುವ ಭಯ. ಏನಾದರೂ ಹೆಚ್ಚು ಕಮ್ಮಿಯಾದರೆ ಅವರ ಮನೆಗೂ ಹೋಗುವಂತಿಲ್ಲ. ಅವ್ಳನ್ನು ನೋಡಲೂ ಸಾಧ್ಯವಾಗಲ್ಲ. ಅವಳನ್ನು ಇನ್ನು ಮುಂದೆ ನೋಡದೇ ಇರಲು ಅಸಾಧ್ಯ. ಹಾಗಾಗಿ ನಾನು ಅವರಿಗೆ ಏನೂ ಹೇಳಲೇ ಇಲ್ಲ. ಮೊದಲಿನಂತೆ ಆಗಾಗ ಅವಳ ಮನೆಗೆ ಹೋಗುತ್ತಿದ್ದೆ. ಅವಳನ್ನು ನೋಡುತ್ತಿದ್ದೆ. ಒಂದು ಒಳ್ಳೇ ನನಗೆ ಅನುಕೂಲವಾಗುವಂತ ಸಮಯ / ಸಂದರ್ಭಕ್ಕೆ ಕಾಯುತ್ತಿದ್ದೆ.


ನನಗೆ ಅವಳ ಮೇಲಿನ ಪ್ರೀತಿ ಅಧಿಕವಾಗುತ್ತಾ ಹೋಯಿತು. ರಾತ್ರಿ ಸರಿಯಾಗಿ ನಿದ್ದೆ ಬರಲ್ಲಿಲ್ಲ, ಊಟ ಸೇರಲ್ಲಿಲ್ಲ. ಯಾಕೋ ಯಾವುದರಲ್ಲಿಯೂ ಆಸಕ್ತಿ ಇರಲ್ಲಿಲ್ಲ. ಯಾವಾಗಲೂ ಬೇಜಾರು. ಕಥೆ ಕಾದಂಬರಿಗಳ ಪುಸ್ತಕ ಓದುತ್ತಾ ಕೂತಿದ್ದರೂ ಮನಸಿನ ಯಾವುದೋ ಮೂಲೆಯಲ್ಲಿ ಅವಳ ಬಗೆಗಿನ ಚಿಂತನೆ ಜಾಗೃತವಾಗಿರುತ್ತಿತ್ತು. ಇದಕ್ಕೆಲ್ಲಾ ಕಾರಣ ಅವಳೆ. ಆದದ್ದಾಗಲಿ ಯಾವುದಾದರೂ ಒಂದು ನಿರ್ಧಾರಕ್ಕೆ ಬಂದು ಬಿಡ್ಲೆ ಬೇಕು ಅನ್ನೋ ಹಟಕ್ಕೆ ಬಿದ್ದು ಅಂದು ಬೆಳಗ್ಗೆನೆ ಅವರ ಮನೆಗೆ ಹೋದೆ.


ಕಾಲಿಂಗ್ ಬೆಲ್ ಮಾಡಿದ ತಕ್ಷಣ ಬಾಗಿಲು ತೆಗದಳು ಅವಳು. ಇಬ್ಬರಿಗೂ ಆಶ್ಚರ್ಯ. ಅವಳೆ ಸಾವರಿಸಿಕೊಂಡು ನನ್ನನ್ನು ಒಳ ಬರಮಾಡಿಕೊಂಡಳು. ಮನೆಯಲ್ಲಿ ಅವಳನ್ನು ಹೊರತುಪಡಿಸಿ ಬೇರಾರೂ ಇರಲ್ಲಿಲ್ಲ. ಅವಳಮ್ಮನ ಜೊತೆ ಮಾತಾಡಲು ಹೋಗಿದ್ದ ನನಗೆ ಕೊಂಚ ಬೇಸರವಾದರೂ, ಅವಳನ್ನೇ ಕೇಳಿದರಾಯಿತು ಎನ್ನುವ ಸಮಾಧಾನವಾಯಿತು. ನನಗಾಗಿ ಕಾಫಿ ಮಾಡಿ ತಂದಳು. ಬೈ ಟು ಮಾಡಿ ಇಬ್ಬರು ಕಾಫಿ ಹೀರುತ್ತಾ ಮಾತಿಗೆ ತಡವರಿಸುತ್ತಾ ಕೂತೆವು. ನಾನೇ ಧೈರ್ಯ ಮಾಡಿ ಈಗ ನಾನು ಹೇಳುವ ವಿಚಾರ ಯಾರಿಗೂ ಹೇಳಬಾರದೆಂದು ಅವಳ ಕೈಲಿ ಪ್ರಾಮಿಸ್ ಮಾಡಿಸಿಕೊಂಡೆ. 


ನಿನ್ನ ಕಂಡರೆ ಇಷ್ಟ ನನ್ನನ್ನು ಮದುವೆಯಾಗು ಎಂದು ಕೇಳಲು ನನಗೆ ಧೈರ್ಯ ಸಾಕಾಗಲ್ಲಿಲ್ಲ. ಅವಳು ಎನ್ನೆನ್ನುವಳೊ ಎಂಬ ಅಂಜಿಕೆ. ನನಗೆ ಮದುವೆ ಮಾಡಲು ಮನೆಯಲ್ಲಿ ಹೆಣ್ಣು ಹುಡುಕುತ್ತಿದ್ದಾರೆ ಅಂದೆ. ಅವಳು ನನಗೂ ಗೊತ್ತು ಎಂದಷ್ಟೇ ಉತ್ತರಿಸಿದಳು. ನಮ್ಮಿಬ್ಬರ ಜಾತಕ ಕೂಡಿಬಂದು ನನ್ನ ಅಮ್ಮ ನಿಮ್ಮನೆಗೆ ಬಂದು ಹೆಣ್ಣು ಕೇಳಿದರೆ ನಿನ್ನ ಅಭಿಪ್ರಾಯವೇನು? ನನ್ನನ್ನು ಕೇಳಿದರೆ ಹಿರಿಯರ ಅಭ್ಯಂತರ ಏನೂ ಇಲ್ಲದ್ಡಿದ್ದರೆ ನೀನು ನನಗೆ ಒಪ್ಪಿಗೆ ಎಂದೆ. ನನಗೆ ಆ ರೀತಿಯ ಭಾವನೆಗಳು ಇಲ್ಲ ಎಂದಳು. ಈಗೆ ಹೇಳಬೇಕೆಂದೇನೂ ಇಲ್ಲ. ಯೋಚಿಸಲು ಸಮಯ ತೊಗೊ. ಬೇಕಾದರೆ ಮತ್ತೆ ಎಲ್ಲಾದರೂ ಕೂತು ಮಾತಾಡೋಣ ಅಂದೆ. ಇನ್ನೆಷ್ಟು ಸಮಯ ಆದರೂ ಸರಿ.. ನನಗೆ ನಿನ್ನ ಮೇಲೆ ಆತರಹದ ಭಾವನೆ ಬರುವುದಿಲ್ಲ. ಇದೆ ನನ್ನ ಕೊನೆ ಮಾತು ಅಂದಳು. ಯಾಕೋ ಅದು ಅವಳ ಸ್ವಂತ ನಿರ್ಧಾರವಲ್ಲ, ಯಾರದೋ / ಯಾವುದೋ ಒತ್ತಡಕ್ಕೆ ಮಣಿದು ಹೀಗೆ ಹೇಳುತ್ತಿದ್ದಾಳೆ ಅನಿಸಿತು. ಆದರೂ ಆ ಕ್ಷಣದಲ್ಲಿ ನನಗೆ ಹೇಳಲು ಏನೂ ತೋಚಲ್ಲಿಲ್ಲ. ಸರಿ ಹಾಗಿದ್ದರೆ, ಈ ವಿಷಯವನ್ನು ಇಲ್ಲೇ ಇವತ್ತೇ ಮರೆತುಬಿಡೋಣ ಅಂದೆ. ಸುಮ್ಮನೇ ತಲೆಯಾಡಿಸಿದಳು. ೫-೧೦ ನಿಮಿಷ ಕಳೆದಾದ ಮೇಲೆ ನಾನು ಅವಳ ಮನೆಯಿಂದ ನಿರ್ಗಮಿಸಿದೆ.


ಮನೆಗೆ ಬಂದು ಮಾಡಿದ ಮೊದಲ ಕೆಲಸ ಅಂದರೆ ಪಿಕಾಸದಲ್ಲಿ ನನ್ನದೊಂದು ಚೆಂದ ಫೋಟೋ ಹುಡುಕಿ ಪ್ರಿಂಟ್ ಹಾಕಿಸಿದೆ. ಎಷ್ಟೋ ದಿನದಿಂದ ನನ್ನ ಜಾತಕ ಮತ್ತು ಫೋಟೋ ಕಳುಹಿಸಿಕೊಡಲು ಕೇಳುತ್ತಿದ್ದ ಅಕ್ಕನಿಗೆ ಫೋನ್ ಮಾಡಿ ಫೋಟೋ ಜಾತಕ ಎರಡನ್ನೂ ಕೊರಿಯರ್ ಮಾಡಿದೀನಿ ಅಂದೆ. ಯಾಕೋ ಇದ್ದಿಕ್ಕಿದ್ದಂತೆ ಸಾಹೇಬರು ಬದಲಾದಂಗಿದೆ ಅಂತ ಅವಳು ಕಿಚಾಯಿಸಿದರೂ, ಅಕ್ಕನಿಗೆ ಆ ವಿಷಯ ತಿಳಿಯುವುದು ಬೇಡ ಅನಿಸಿ, ಹಾಗೇನೂ ಇಲ್ಲಕ್ಕ ಎಂದಷ್ಟೇ ಹೇಳಿ ಲೈನ್ ಕಟ್ ಮಾಡಿಬಿಟ್ಟೆ.

ಆ ರಾತ್ರಿ ಬೇಕಂತಲೇ ಅವಳಿಗೆ ಮೆಸೇಜ್ ಮಾಡಿ ನನ್ನ ನಂಬರ್ ಇಟ್ಟುಕೊಂಡಿರು ಎಂದೆ. ಇದಾಗಿ ಇವತ್ತಿಗೆ ನಾಲ್ಕನೇ ದಿನ. ನನ್ನ ಮೊಬೈಲ್ ರಿಂಗಣಿಸಿದಾಗಲ್ಲೆಲ್ಲ ಅದು ಅವಳದೇ ಇರಬಹುದೇನೋ ಅಂದುಕೊಂಡು ಫೋನ್ ತೆಗೆದರೆ ಪ್ರತೀಬಾರಿಯೂ ನಿರಾಶೆಯೇ ಆಗುತ್ತಿದೆ. ಇಂದಲ್ಲ ನಾಳೆ ಅವಳ ಕಾಲ್ ಬರಬಹುದೆಂಬ ನನ್ನ ಆಸೆ ಇನ್ನೂ ಜೀವಂತವಾಗಿದೆ.
                                                                                                ಅವಳ ಕಾಲ್ ಬರುತ್ತಾ??

Rating
No votes yet

Comments