ಅವಳ ಕಾಲ್ ಬರುತ್ತಾ?? - ಭಾಗ ೨

ಅವಳ ಕಾಲ್ ಬರುತ್ತಾ?? - ಭಾಗ ೨

ಚಿತ್ರ

ಆ ನಾಲ್ಕನೇ ದಿನದ ರಾತ್ರಿಯೂ ನನಗೆ ನಿದ್ರೆ ಬರಲ್ಲಿಲ್ಲ. ನಿದ್ದೆ ಇಲ್ಲದೇ ಕಣ್ಣೆಲ್ಲಾ ಕೆಂಪಾಗಿತ್ತು. ಯಾಕಾದಾರೂ ಕೆಲಸಕ್ಕೆ ಇಷ್ಟು ದಿನ ರಜ ಕೊಟ್ರೋ ಅನಿಸಿಬಿಡ್ತು. ಕೆಲ್ಸವಾದರೂ ಇದ್ದಿದ್ದ್ರೆ ನಾನು ಅವಳ ಬಗ್ಗೆ ಅಷ್ಟೊಂದು ಯೋಚಿಸುತ್ತಿರಲ್ಲಿಲ್ಲವೇನೋ?? ಆ ನಾಲ್ಕು ದಿನ ಗಡಿಯಾರದ ಮುಳ್ಳಿನ ಪ್ರತಿಯೊಂದು ನಡೆಯನ್ನು ನಾನು ದಿಟ್ಟಿಸುತ್ತಾ ಕೂತುಬಿಟ್ಟಿದ್ದೆ. ಈ ಕಾಲಗರ್ಭದಲ್ಲಿ ಏನೇನು ಅಡಗಿದೆಯೋ? ನಾಲ್ಕು ದಿನ ನಾಲ್ಕು ಯುಗ ಕಳೆದಂತೆ ಭಾಸವಾಗುತ್ತಿತ್ತು.


ಮೊಣಕಾಲೂರಿ ಮಂಡಿಯ ಮೇಲೆ ನಿಂತು ಟೇಬಲ್ ಗೆ ತಲೆ ಆನಿಸಿ ಅವಳ ಫೋಟೋವನ್ನೇ ದಿಟ್ಟಿಸುತ್ತಿದ್ದೆ. ಪಕ್ಕದ ಮನೆಯ ಬೆಕಮ್ ಅಂಕಲ್ ಮನೆಯ ಹಳೆಯ ಕಾಲದ ಗೋಡೆ ಗಡಿಯಾರ ಐದು ಬಾರಿಸಿತು. ಆಗಲೇ ಬೆಳಗ್ಗೆ ಐದಾಗಿಬಿಟ್ಟೀತೆ? ಅಂತ ಅರ್ಧ ಕಣ್ಣು ಮುಚ್ಚಿ ಸಣ್ಣದಾಗಿ ತಲೆಯಾಡಿಸುತ್ತಿದ್ದ ನನಗೆ ಅವಳ ಫೋಟೋ ಪಕ್ಕದಲ್ಲೇ ಬಿದ್ದಿದ್ದ ಗೆಳೆಯನ ಐಡೀ ಕಾರ್ಡ್ ಕಣ್ಣಿಗೆ ಬಿತ್ತು.


ಆಗಲೇ ಜ್ಞಾಪಕ ಬಂದದ್ದು ಇವತ್ತು ಶನಿವಾರವೆಂದು. ಕ್ರಿಸ್ಮಸ್‌ಗೆಂದು ೮ ದಿನ ರಜ ಕೊಟ್ಟಾಗ ಉಳಿದ ೭ ದಿನಗಳ ರಜ ಹಾಕಿ ೧೫ ದಿನಗಳಿಗೆಂದು ಊರಿಗೆ ಹೋಗಿದ್ದ ಗೆಳೆಯ ಅಂದು ವಾಪಸಾಗಲಿದ್ದ. ಸಂಜೆ ಇಬ್ಬರೂ ಕೂಡಿ ಗೆಳತಿಯೊಬ್ಬಳ ರಿಸೆಪ್ಶನ್ ಗೆ ಹೋಗೋದಿತ್ತು. ಅವನು ನನ್ನ ಈ ಪರಿಸ್ಥಿತಿಯಲ್ಲಿ ನೋಡಿದರೆ ಖಂಡಿತ ಪ್ರಶ್ನೆಗಳ ಸುರಿಮಳೆಗೈಯುತ್ತಾನೆ. ನನ್ನಿಂದ ಎಲ್ಲಾ ವಿಷಯ ತಿಳಿದುಕೊಳ್ಳುತ್ತಾನೆ. ಈ ವಿಷಯ ಅವನಿಗೆ ತಿಳಿದರೆ ಸುಮ್ಮನೇ ಕೂಡುವ ಆಸಾಮಿಯಂತು ಅವನಲ್ಲ. ಅವನಿಗೆ ಯಾವುದೇ ಸಂಶಯ ಬರಬಾರದು. ಅದಿಕ್ಕಾದರೂ ನಾನು ಈಗ ನಿದ್ದೆ ಮಾಡಿ ಫ್ರೆಶ್ ಆಗಬೇಕು ಅಂತ ಅನಿಸಿದ್ದೆ ತಡ, ಹಾಸಿಗೆಯನ್ನು ತರಲು ರೂಮಿಗೆ ಓಡಿದೆ. ಗೋಡೆಗೆ ನೇತು ಹಾಕಿದ್ದ ಅಜ್ಜಿಯ ಫೋಟೋ ಕೆಳಗಿದ್ದ ಸ್ಟೂಲ್ ಮೇಲೆ ನಾಕು ದಿನದ ಕೆಳಗೆ ಮಡಚಿಟ್ಟಿದ್ದ ಹಾಸಿಗೆಯ ಮೇಲೆ ಕೈ ಹಾಕಿ ಎತ್ತಿಕೊಳ್ಳೋದಿಕ್ಕೆ ಮುಂಚೆ ಅಜ್ಜಿಯನ್ನೊಮ್ಮೆ ನೋಡಿದೆ.


ನಾನು ಕೆಲಸಕ್ಕೆಂದು ಊರು ಬಿಟ್ಟು ಹೋಗುತ್ತೀನಿ ಅಂದಾಗ, ಅಲ್ಲೇ ಮನೆ ಮಾಡು ನಾನು ನಿನ್ನ ಜೊತೆ ಇರ್ತೀನಿ, ನಿನಗೆ ಅಡುಗೆ ತಿಂಡಿ ಮಾಡಿಹಾಕ್ತೀನಿ ಅಂತ ಅಜ್ಜಿಯೂ ನನ್ನ ಜೊತೆ ಬಂದುಬಿಟ್ಟಿದ್ದರು. ಮನೆಯಲ್ಲಿ ಕೊನೆಯ ಮೊಮ್ಮಗನಾಗಿ ಹುಟ್ಟಿದ್ದ ನನ್ನ ಮೇಲೆ ಅಜ್ಜಿಗೆ ಇನ್ನಿಲ್ಲದ ಪ್ರೀತಿ. ಪ್ರತಿದಿನ ಬೆಳಗ್ಗೆ ಐದಕ್ಕೆಲ್ಲ ಎದ್ದು ನನಗೆ ಸ್ನಾನಕ್ಕೆ ನೀರು ಕಾಯಿಸಿಕೊಟ್ಟು, ತಿಂಡಿ ಮಾಡಿಕೊಟ್ಟು, ಊಟ ಡಬ್ಬಿಗೆ ಹಾಕಿಕೊಟ್ಟು ನನ್ನನ್ನು ೮ ಗಂಟೆಗೆ ಆಫೀಸ್ ಗೆ ಹೋಗಲು ತಯಾರು ಮಾಡುತ್ತಿದ್ದುದೇ ಅಜ್ಜಿ. ಅಜ್ಜಿಗೆ ಮನೆಯಲ್ಲಿ ಒಬ್ಬಳಿಗೆ ಇರಲು ಬೇಜಾರು. ಹಾಗಾಗಿ ನಾನು ಆಫೀಸ್ ಗೆ ಹೋಗುವಾಗ ಅಜ್ಜಿಯನ್ನು ಲಾಲ್‌ಬಾಗ್ ಹತ್ತಿರ ಇದ್ದ ನನ್ನ ದೊಡ್ಡಪ್ಪನ ಮನೆಗೆ ಡ್ರಾಪ್ ಮಾಡಿ ಹೋಗುತ್ತಿದ್ದೆ. ಮತ್ತೆ ಸಂಜೆ ಏಳಕ್ಕೆ ಆಫೀಸಿನಿಂದ ವಾಪಸಾಗುವಾಗ ಕರೆದುಕೊಂಡು ಬರುತ್ತಿದ್ದೆ. ದೊಡ್ಡಪ್ಪನ ಸಂಸಾರ ದೊಡ್ಡದೇ ಇತ್ತು. ಅವರಿಗೆ ಮೂರು ಮಕ್ಕಳು. ವಯಸ್ಸಾಗಿದ್ದ ಅವರ ಅತ್ತೆ-ಮಾವರನ್ನು ದೊಡ್ಡಪ್ಪ ತಮ್ಮ ಮನೆಯಲ್ಲೇ ಇರಿಸಿಕೊಂಡಿದ್ದರು. ಹಾಗಾಗಿ ಅಜ್ಜಿಗೆ ಮಗನ ಮನೆಯಲ್ಲಿರಲು ಏನೋ ಸಂಕೋಚ. ಒಂದು ರಾತ್ರಿಯೂ ಅಲ್ಲಿ ಉಳಿಯುತ್ತಿರಲ್ಲಿಲ್ಲ.


ಅಜ್ಜಿಯ ಫೋಟೋ ನೋಡಿದ ತಕ್ಷಣ ಯಾಕೋ ಅಜ್ಜಿಯ ಸಾವು ನೆನಪಾಗಿಬಿಟ್ಟಿತು. ಎಲ್ಲರೊಂದಿಗೆ ಲವಲವಿಕೆಯಿಂದ ಮಾತಾಡಿಕೊಂಡು, ಉತ್ಸಾಹದ ಚಿಲುಮೆಯಾಗಿ, ಯಾವುದೇ ಕಾಯಿಲೆ ಕಸಾಲೆ ಇಲ್ಲದೇ ಗುಂಡು ಕಲ್ಲಂತಿದ್ದ ಅಜ್ಜಿ ಒಂದು ದಿನ ಬೆಳಗ್ಗೆ ಆರಕ್ಕೆ ನನ್ನನ್ನು ಎಬ್ಬಿಸಿ, ಇವತ್ತು ಆಫೀಸ್ ಗೆ ರಜ ಹಾಕಿ  ಈಗಲೇ ನನ್ನನ್ನು ಊರಿಗೆ ಕರೆದುಕೊಂಡು ಹೋಗು ಅಂತ ಹಟ ಮಾಡಿಬಿಟ್ಟಿತು. ಆಯಿತಜ್ಜಿ ರಜ ಹಾಕ್ತೀನಿ, ಆದರೆ ಈಗಲೆ ಏನು ಅರ್ಜೆಂಟು, ಸ್ನಾನ ಮಾಡಿ  ತಿಂಡಿ ತಿಂದು ಹೋಗೋಣ ಅಂದೆ. ಅಜ್ಜಿ ನನ್ನದು ಸ್ನಾನ ಆಗಿದೆ ನೀನು ಅಲ್ಲೇ ಮಾಡು, ನಡಿ ಈಗ ಅಂತ ಆಗಲೇ ಸಿದ್ದಪಡಿಸಿಟ್ಟುಕೊಂಡಿದ್ದ ತನ್ನ ಬ್ಯಾಗ್ ಅನ್ನು ಎತ್ತಿಕೊಂಡು ಹೊರಟೇಬಿಟ್ಟರು. ಬೇರೆ ದಾರಿ ಇಲ್ಲದೇ ಕೈಗೆ ಸಿಕ್ಕ ಪ್ಯಾಂಟ್ ಏರಿಸಿ ವಾಲೇಟ್ ಮೊಬೈಲ್ ನು ಜೇಬಿಗಿಳಿಸಿ ಮನೆ ಬೀಗ ಹಾಕಿ ಅಜ್ಜಿಯ ಹಿಂಬಾಲಿಸಿದೆ.


ಅಜ್ಜಿಯ ನೆನೆಪು ಅಮರ. ಈಗ ಅದನ್ನೆಲ್ಲ ನೆನಪು ಮಾಡುತ್ತಾ ಕೂತರೆ ಗೆಳೆಯನಿಂದಾಗುವ ಅನಾಹುತ ತಪ್ಪಿಸಲು ಸಾಧ್ಯವಿಲ್ಲ ಅನಿಸಿತು. ಹಾಸಿಗೆ ಎತ್ತಿ ಕೆಳಗೆ ಉರುಳಿಸಿದೆ. ಸ್ಟೂಲ್ ಮೇಲಿದ್ದ ತಲೆದಿಂಬನ್ನು ಹಾಸಿಗೆ ಮೇಲೆ ಬಿಸಾಕಿದೆ. ಇನ್ನೇನು ಹಾಸಿಗೆ ಮೇಲೆ ಬೀಳಬೇಕು, ಆದರೆ ಯಾಕೋ ಮನಸ್ಸು ತಡೆಯಲ್ಲಿಲ್ಲ. ಸೀದಾ ಬಚ್ಚಲು ಮನೆಗೆ ಹೋಗಿ ಹಲ್ಲುಜ್ಜಿ ಒಂದು ಕೊಡ ನೀರ್ ಹೊಯ್ದು ಕೊಂಡೆ. ಸೋಪ್ ಹಾಕದೆ ಸ್ನಾನ ಮುಗಿಯುವುದುಂಟಾ? ಗೂಡಿನಲ್ಲಿದ್ದ ರೆಡ್ ಕಲರ್ ಸೋಪ್ ಬಾಕ್ಸ್ ನ ಮುಚ್ಚಲ ತೆಗೆದು ಸೋಪ್ ಎತ್ತಿಕೊಂಡೆ. ನಿನ್ನೆಯಷ್ಟೇ ಓಪನ್ ಮಾಡಿದ್ದರಿಂದ ಸೋಪ್ ಮೇಲೆ ಕೆತ್ತಿದ್ದ ಡವ್ ಸ್ಪಷ್ಟವಾಗಿ ಕಾಣುತ್ತಿತ್ತು. ಆದರೆ ನನ್ನ ಕೆಂಪು ಕಣ್ಣಿಗೆ ಅದು ಲವ್ ಅಂತ ಕಾಣಿಸಿತು. 


ಆ ಕೆಂಪು ಬಣ್ಣದ ಸೋಪ್ ಬಾಕ್ಸೆ ನನ್ನ ಹೃದಯ. ಅದರೊಳಗೆ ಹುಣ್ಣಿಮೆಯ ಚಂದ್ರನಂತೆ ಬೆಳ್ಳಗೆ ಹೊಳೆಯುತ್ತಿರುವ ಸೋಪೆ ಅವಳು. ಆ ಸೋಪು ನನ್ನ ಮೈಮೇಲೆಲ್ಲ ಹರಿದಾಡಿದಂತೆಲ್ಲಾ ಅವಳೇ ನನ್ನ ಮೈಮೇಲೆ ಹರಿದಾಡಿದಂತಾಯಿತು. ಒಂದೇ ಕ್ಷಣದಲ್ಲಿ ನನ್ನ ಎಲ್ಲಾ ಅಂಗಾಂಗಗಳನ್ನು ಸ್ಪರ್ಶ ಮಾಡಿ ಮತ್ತೆ ನನ್ನ ಹೃದಯದೊಳಗೆ ಸೇರಿಕೊಂಡು ಬಿಟ್ಟಳಲ್ಲಾ? - ಹೀಗೆ ಏನೇನೋ ಹುಚ್ಚು ಕಲ್ಪನೆಗಳನ್ನು ಮಾಡಿಕೊಳ್ಳುತ್ತಾ ೬೦ ಕ್ಯಾಂಡಲ್ ಬಲ್ಬ್ ನೇ ನೋಡುತ್ತಾ ನಿಂತಿದ್ದ ನನಗೆ ನೋಕಿಯಾ ಫೋನಿನ ಟ್ಯು ಣು ಣಾ ಣ ಟ್ಯು ಣು ಣಾ ಣ ಟ್ಯು ಣು ಣಾ ಣ ಸದ್ದು ಕೇಳಿಸಿದಂತೆ ಅನಿಸಿತು. ಮೈಮೇಲಿರುವ ಸೋಪನ್ನು ಗಮನಿಸದೇ ಬಾಯ್ಲರ್ ಮೇಲ್ ಹಾಕಿದ್ದ ಟವಲ್ ಅನ್ನು ಸುತ್ತಿಕೊಂಡು ಹೊರಗೋಡಿದೆ.


ಈ ಹಾಳದ್ದು ಮೊಬೈಲ್, ಬೇಕೆನಿಸಿದಾಗ ತಕ್ಷಣಕ್ಕೆ ಸಿಗುವುದೇ ಇಲ್ಲ. ಎಲ್ಲಿ ಬಿಸಾಕಿದೆನೋ ಅಂತ ಗೊಣಗುತ್ತಾ ಮೊಬೈಲ್ ಗಾಗಿ ತಡಕಾಡಿದೆ. ಎಲ್ಲಿಯೂ ಅದರ ಸುಳಿವಿಲ್ಲ. ಯಾವಾಗಲೂ ಇಡುತ್ತಿದ್ದ ಟೀವೀ ಮೇಲೆ, ಅಜ್ಜಿ ಮಾತಾಡಿದಾಗ ಇಡುತ್ತಿದ್ದ ಅಡುಗೆ ಮನೆ ಕಟ್ಟೆ, ಕಂಪ್ಯೂಟರ್ ಟೇಬಲ್, ಹಾಲಿನಲ್ಲಿದ್ದ ಶೆಲ್ಫ್ ಎಲ್ಲಾ ಕಡೆ ಒಂದೇ ಕ್ಷಣದಲ್ಲಿ ಹುಡುಕಾಡಿಬಿಟ್ಟೆ. ಅದರ ಪತ್ತೆಯೇ ಇಲ್ಲ. ಕೊನೆಯದಾಗಿ ಆಗಷ್ಟೇ ಹಾಸಿದ್ದ ಹಾಸಿಗೆಯ ಬೆಡ್ ಶೀಟ್ ನ ಎಳೆದಾಗ, ಆಗಷ್ಟೇ ಕಾಲ್ ಬಂದು ನಿಂತಿರುವ ಹಾಗೆ ಮೊಬೈಲ್ ಡಿಸ್ ಪ್ಲೇ ಹೊಳೆಯಿತ್ತಿತ್ತು.

ಈ ಹೊತ್ತಿನಲಿ ಅವಳು ಕಾಲ್ ಮಾಡಿದಾಳಾ?? ಒಂದು ಕ್ಷಣ ಹಾಗೆ ಆವಾಕ್ಕಾಗಿ ನಿಂತು ಬಿಟ್ಟೆ.
 

Rating
No votes yet

Comments