ಅವಳ ಕಾಲ್ ಬರುತ್ತಾ?? - ಭಾಗ ೩

ಅವಳ ಕಾಲ್ ಬರುತ್ತಾ?? - ಭಾಗ ೩

ಚಿತ್ರ

ಕೈಯಲ್ಲಿದ್ದ ಬೆಡ್ ಶೀಟ್ ಅನ್ನು ಆ ಕಡೆ ಎಸೆಯುವುದರೊಳಗೆ ಮೊಬೈಲ್ ನ ಡಿಸ್‌ಪ್ಲೇ ಲೈಟ್ ಆರಿತು. ಮೊಬೈಲ್ ಕೈಗೆ ತೆಗೆದುಕೊಂಡರೂ ತಕ್ಷಣ ಯಾವುದೇ ಬಟನ್ ಒತ್ತಲ್ಲಿಲ್ಲ. ಇದೂ ಕೂಡ ಅವಳದ್ದಲ್ಲ ಅನಿಸಿತು. ನೋಡದೇ ಹಾಗೆ ಹೋಗಲೂ ಸಾಧ್ಯವಿಲ್ಲ ನೋಡಿದರೆ ಎಲ್ಲಿ ಮತ್ತೊಮ್ಮೆ ನಿರಾಶೆ ಕಾದಿದೆಯೋ? ಈ ಐದು ದಿನಗಳಲ್ಲಿ ಅದೆಷ್ಟು ಬಾರಿ ನಿರಾಶೆಯಾಗಿದೆಯೋ? ಅಕಸ್ಮಾತ್ ಏನಾದರೂ ಅವಳೇ ಮಾಡಿದ್ದರೆ? ಈ ನಿರಾಶೆಗೆ ಗುಡ್ ಬೈ ಹೇಳಬಹುದಲ್ಲ. ಆಸೆ ಅನ್ನೋದು ಹಾಗೆ. ಕ್ಷಣದಲ್ಲಿ ಮನುಷ್ಯನನ್ನು ಬದಲಾಯಿಸಿಬಿಡುತ್ತೆ. ಮೊಬೈಲ್ ನ ಮಧ್ಯದ ಗುಂಡಿ ಒತ್ತಿದೆ. ೧ ಮೆಸೇಜ್ ರಿಸೀವ್ಡ್ - ಕೆಂಚಿ. ಓದಿದವನಿಗೆ ನಿರಾಸೆಯಾಯಿತು.


ಕೆಂಚಿ ನನ್ನ ಮೊದಲನೆ ಅಕ್ಕ ಸಮುದ್ಯತಾ. ಕೆಂಚಿ ನಾವಿಟ್ಟಿದ್ದ ಅಡ್ಡ ಹೆಸರು. ಅಕ್ಕ ಪ್ರೈಮರೀ ಸ್ಕೂಲ್ ಟೀಚರ್. ಅಂದು ಶನಿವಾರವಾದ್ದರಿಂದ ಬೆಳಗ್ಗೆನೆ ಸ್ಕೂಲ್. ಹಾಗಾಗಿ ಎದ್ದ ತಕ್ಷಣ ನನಗೊಂದು ಸ್ವೀಟ್ ಗುಡ್ ಮಾರ್ನಿಂಗ್ ಮೆಸೇಜ್ ಕಳಿಸಿದ್ದಳು. ಅಕ್ಕನಿಗೆ ನಿರಾಸೆ ಮಾಡುವುದು ಬೇಡವೆಂದು ರಿಪ್ಲೈ ಬಟನ್ ಒತ್ತಿ ವೇರಿ ಗುಡ್ ಮಾರ್ನಿಂಗ್. ಹ್ಯಾವ್ ಎ ನೈಸ್ ಡೇ ಅಂತ ಕಳಿಸಿದೆ. ಮತ್ತೆ ಬಚ್ಚಲು ಮನೆಗೆ ಹೋಗಿ ಸೋಪ್ ಹಾಕಿದ್ದ ಮೈ ತೊಳೆದು, ತಲೆ ವರೆಸಿಕೊಳ್ಳುತ್ತಾ ಆ ನೋಕಿಯಾ ಟ್ಯೂನ್ ಎಲ್ಲಿಂದ ಬಂದದ್ದು ಅಂತ ಯೋಚಿಸಿದೆ. ಪಕ್ಕದ ಸೇಟು ಆಂಟೀ ಮನೆ ಕೆಲಸದವಳು ಕಾಂಪೌಂಡ್‌ನ ಆ ಬದಿಯಲ್ಲಿ ಪಾತ್ರೆ ತೊಳೆಯುತ್ತಾ ಮಾತಾಡುತ್ತಿದ್ದುದು ಕೇಳಿಸಿತು.


ದೇವರಿಗೆ ದೀಪ ಹಚ್ಚಿ ಸಂಧ್ಯಾವಂದನೆ ಮಾಡುತ್ತಾ ಕುಳಿತೆ. ಮನಸ್ಸು ಈಗ ಅವಳೇನು ಮಾಡುತ್ತಿರಬಹುದು? ಎದ್ದಿದ್ದಾಳಾ? ಮಲಗಿದ್ದಾಳಾ? ಅವರಪ್ಪನ ಜೊತೆ ಜಾಗಿಂಗೆ ಹೋಗಿರಬಹುದಾ? ಏನೇನೋ ಯೋಚಿಸುತ್ತಿತ್ತು. ಮನಸ್ಸಿಗೆ ಲಗಾಮು ಹಾಕಲು ಮೂಗು ಹಿಡಿದು ಪ್ರಾಣಾಯಾಮ ಮಾಡಲು ಶುರುಮಾಡಿದೆ. ಪೂರಕ, ಕುಂಭಕ ಮತ್ತು ರೇಚಕ - ಪ್ರಾಣಾಯಾಮದ ಕ್ರಮ. ಮೂರು ಬಾರಿ ಪ್ರಾಣಾಯಾಮ ಮುಗಿಸುವ ಹೊತ್ತಿಗೆ ಮನಸ್ಸು ಹತೋಟಿಗೆ ಬರುತ್ತಿತ್ತು. ಇನ್ನೂ ೪ ಬಾರಿ ಉಸಿರು ಬಿಗಿ ಹಿಡಿದು ಕುಳಿತೆ. ಸಂಧ್ಯಾವಂದನೆ ಪೂರ್ತಿ ಮುಗಿಸಿ ದೇವರಿಗೆ ನಮಸ್ಕಾರ ಮಾಡಿ ತಿಮ್ಮಪ್ಪ ನೀನೇ ಕಾಯಪ್ಪ ಅಂತ ಬೇಡಿಕೊಂಡೆ. ಸಂಕಟ ಬಂದಾಗ ತಾನೇ ವೆಂಕಟರಮಣ!


ಕಾಫಿ ಕುಡಿಯಬೇಕೆನಿಸಿತು. ಫ್ರೆಶ್ ಆಗಿ ಡಿಕಾಕ್ಶನ್ ಹಾಕಿದೆ. ಆದರೆ ರಾತ್ರಿಯ ಹಾಲು ಒಡೆದುಹೋಗಿತ್ತು. ಟಿ-ಶರ್ಟ್ ಧರಿಸಿ ಉಟ್ಟಿದ್ದ ಪಂಚೆಯಲ್ಲಿಯೇ ಹೊರಬಂದೆ. ಬಾಗಿಲು ಸಾರಿಸುತ್ತಿದ್ದ ಪಕ್ಕದ ಮನೆಯ ಶೈಲೂ ಆಂಟೀ ಆಶ್ಚರ್ಯವಾಗಿ ನೋಡಿದರೂ ಅವ್ರೊಂದಿಗೆ ಮಾತನಾಡದೇ ಬರೀ ಸ್ಮೈಲ್ ಮಾಡಿ ಗೇಟ್ ಬಳಿ ಬಂದೆ. ಎದುರು ಮನೆ ಮೊದಲನೆ ಮಹಡಿಯಲ್ಲಿ ನಿಂತ ಸಂಯುಕ್ತ ಕೈ ಬೀಸಿ ಹಾಯ್ ಅಂದಳು. ನಾನು ಸುಮ್ಮನೇ ಹುಬ್ಬೇರಿಸಿ ಏನೇ? ಎಂಬಂತೆ ಸಂಜ್ಞೆ ಮಾಡಿದೆ. ಎಲ್ಲೋ ೪ ದಿನದಿಂದ ಕಾಣಲೇ ಇಲ್ಲ ಅಂದಳು. ಅಯ್ಯೋ ಹೋಗೆ ಅಂತ ನಾನು ಮುಂಗೈ ಬೀಸುತ್ತಾ ಸಂಜ್ಞೆ ಮಾಡಿ ಹೊರಟುಬಿಟ್ಟೆ.


ಅರ್ಧ ಲೀಟರ್ ಹಾಲಿನ ಪೊಟ್ನ ಹಿಡಿದು ಮನೆ ಕಡೆ ಬಂದಾಗ ಸಂಯುಕ್ತ ಗೇಟ್ ಬಳಿ ಬಂದು ನಿಂತುಬಿಟ್ಟಿದ್ದಳು. ಸುಮ್ಮನೇ ಗೇಟ್ ಸರಿಸಿ ಒಳಹೋಗಲು ಒಂದು ಹೆಜ್ಜೆ ಇಟ್ಟೆ. ಅವಳು ಕೈ ಅಡ್ಡ ಮಾಡಿ ಮಾತಾಡೋ, ಎಲ್ಲೋ ಹೋಗಿದ್ದೆ? ಯಾಕೋ ಕಣ್ಣೆಲ್ಲಾ ಕೆಂಪಾಗಿದೆ? ಅಂತ ನಾಕಾರು ಪ್ರಶ್ನೆಗಳನ್ನು ಎಸೆದಳು. ನಿಂಗ್ಯಾಕೆ ಅವೆಲ್ಲ, ಸುಮ್ನೇ ದಾರಿ ಬಿಡೆ ಅಂತ ಬೈಬೇಕೆನಿಸಿದರೂ ಅಯ್ಯೋ ಹುಡುಗಿ ಬೆಳಗ್ಗೆ ಬೆಳಗ್ಗೆ ಯಾಕೆ ಅಂತ ಸುಮ್ಮನಾದೆ. ಈ ಹುಡುಗೀರೆಂದರೆ ಹುಡುಗರಿಗೆ ಅದೇನೋ ಒಂದು ಸಾಫ್ಟ್ ಕಾರ್ನರ್. ಅದರಲ್ಲೂ ಹುಡುಗಿ ಚೆಂದಗಿದ್ದರೆ ಅಷ್ಟೇ, ತಪ್ಪು ಅವಳದೇ ಇದ್ದರೂ ಇವರೇ ಮೈಮೇಲೆ ಎಳೆದುಕೊಂಡು ಬಿಡುತ್ತಾರೆ. ತಂಗಿ ಈಗ ಬೇಡ ಆಮೇಲೆ ಹೇಳುತ್ತೇನೆ ಈಗ ದಾರಿ ಬಿಡು ಅಂದೆ. ತಂಗಿ-ಗಿಂಗಿ ಅಂದರೆ ಜಾಡ್ಸಿ ಒದಿತೀನಿ ಅಂದು ಅವಳ ಹೈ ಹೀಲ್ಡ್ಸ್ ಇಂದ ನನ್ನ ಪಾದಕ್ಕೆ ಒತ್ತಿಬಿಟ್ಟಳು. ನೋವಾದರೂ ತೋರ್ಪಡಿಸದೇ, ಅಲ್‌ನೋಡೇ ನಿಮ್ಮಪ್ಪ ಅಂದೆ. ಎಲ್ಲಿ ಎಲ್ಲಿ ಅಂದು ಅವಳು ಹುಡುಕುತ್ತಿರಲು ನಾನು ಗೇಟ್ ಸರಿಸಿ ಮನೆ ಸೇರಿಬಿಟ್ಟೆ. ಈಗ ಟ್ಯೂಷನ್‌ಗೆ ಹೊತ್ತಾಯಿತು, ಆಮೇಲೆ ನೋಡ್ಕೊತೀನಿ ನಿನ್ನ ಅಂದು ಕೈನೆಟಿಕ್ ಹತ್ತಿ ಹೊರಟುಹೋದಳು. ಕಾಲಿಗೆ ನೋವಾಗುತ್ತಿದ್ದರೂ ಹೃದಯಕ್ಕಾದ ನೋವಿಗೆ ಹೋಲಿಸಿದರೆ ಇದೇನು ಮಹಾ ಅನಿಸಿ ಕಾಫಿ ತಯಾರು ಮಾಡಲು ಅಡುಗೆ ಮನೆಗೆ ಹೋದೆ.


ಕೈಯಲ್ಲಿ ಕಾಫಿ ಲೋಟ ಹಿಡಿದು ರೂಮಲ್ಲಿ ಅವಳ ಫೋಟೋ ಇಟ್ಟಿದ್ದ ಟೇಬಲ್ ಮುಂದೆ ಚೇರ್ ಮೇಲೆ ಕುಳಿತೆ. ಅಂದ ಹಾಗೆ ಸಂಯುಕ್ತ ೪ನೇ ಸೆಮ್ ಬಿ.ಇ ಕಂಪ್ಯೂಟರ್ ಸೈನ್ಸ್ ಬಿಎಂಎಸ್ ಕಾಲೇಜ್. ಮೂರು ತಿಂಗಳಿಂದ ನನ್ನ ಹಿಂದೆ ಬಿದ್ದಿದ್ದಾಳೆ. ಹುಡುಗಿ ಚೆಂದ ಇದಾಳೆ ಅಂತ ಅವತ್ತು ನಾನೇ ಹಾಯ್ ಅಂದು ತಪ್ಪು ಮಾಡಿಬಿಟ್ಟೇನಾ? ತಲೇಲಿ ಅಂತದೊಂದು ಪ್ರಶ್ನೆ ಸಂಯುಕ್ತನ ನೋಡಿದಾಗಲ್ಲೆಲ್ಲ ಜಾಗೃತವಾಗಿಬಿಡುತ್ತೆ. ಎರಡು ಗುಟುಕು ಸ್ಟ್ರಾಂಗ್ ಕಾಫಿ ಒಳಗೆ ಇಳಿದಂತೆ ಸಂಯುಕ್ತ ವಿಷಯ ಹಾಗೆ ಸರಿದು ಹೋಯಿತು.

ಕಾಫಿ ಕುಡಿಯುತ್ತಾ ಅವಳ ಫೋಟೋವನ್ನೇ ದಿಟ್ಟಿಸುತ್ತಿದ್ದೆ. ಅಂದು ಅವಳು ಮಾಡಿಕೊಟ್ಟ ಕಾಫೀನೂ ಇದೇ ಟೇಸ್ಟ್ ಇತ್ತಲ್ವಾ? ಅನಿಸಿತು. ಆಹಾ.. ನಿನ್ನೆ ಕುಡಿದ ಕಾಫಿಯ ಟೇಸ್ಟೇ  ನೆನಪಿಲ್ಲ. ವಾರದ ಕೆಳಗೆ ಅವಳು ಮಾಡಿಕೊಟ್ಟಿದ್ದ ಕಾಫಿಯ ರುಚಿ ನೆನಪಿದ್ಯಂತೆ! ಮನಸ್ಸು ವ್ಯಂಗ್ಯ ಮಾಡಿತು. ನಾನು ಮಾಡಿಕೊಂಡ ಕಾಫಿ ಇನ್ನೂ ಚೆನ್ನಾಗಿದೆ ಅಂತ ಮನಸ್ಸಿಗೆ ತೇಪೆ ಹಾಕುವ ಪ್ರಯತ್ನ ಮಾಡಿದೆ.
ಗಂಟೆ ಏಳಾಗಿತ್ತು. ಈಗ ಮಲಗದಿದ್ದರೆ ಮುಂದಾಗುವ ಪರಿಣಾಮ ಸರಿ ಇರಲ್ಲ ಎನಿಸಿ ಹಾಸಿಗೆ ಮೇಲೆ ಉರುಳಿದೆ. ದಿಂಬಿನ ಪಕ್ಕ ಮೊಬೈಲ್ ಬಿಸಾಕಿ ಬೆಡ್ ಶೀಟ್ ಸರಿ ಪಡಿಸಿಕೊಂಡು ಮುಸಕ ಹಾಕಿಕೊಂಡೆ. ಅವಳ ಬಗ್ಗೆ ಎಳ್ಳಷ್ಟೂ ಯೋಚಿಸಬಾರದು ಸುಮ್ಮನೇ ಮಲಗಿ ನಿದ್ದೆ ಮಾಡಬೇಕು ಅಂತ ಮನಸ್ಸಿಗೆ ಅಪ್ಪಣೆ ನೀಡಿದೆ.

ಪ್ರಾಣಾಯಾಮದ ಪರಿಣಾಮವೋ ಏನೋ? ಮನಸ್ಸು ನಿಯಂತ್ರಣದಲ್ಲಿದೆಯೆನಿಸಿತು. ಕಣ್ಣು ಮುಚ್ಚಿ ಪಕ್ಕಕ್ಕೆ ತಿರುಗಿ ಮಲಗಿದೆ. ತೀರಾ ನಿದ್ದೆ ಬರುವ ಮುನ್ನ ಅನಿಸಿದ್ದು - ಇವತ್ತಾದರೂ ಅವಳ ಕಾಲ್ ಬರುತ್ತಾ?

Rating
No votes yet