"ಅವಸಾನ"(ಕಥೆ) ಅಂತಿಮ ಭಾಗ

"ಅವಸಾನ"(ಕಥೆ) ಅಂತಿಮ ಭಾಗ


                                         


          ಆ ದಿನ ಚಿಂಕ್ರನಿಂದ ಅವಮಾನಗೊಂಡ ಭಾಸ್ಕರನ್ ನಾಯರ್ ಕಣಿವೆಬೈಲಿನಲ್ಲಿರುವ ತನ್ನ ಬಿಡಾರಕ್ಕೆ ಹೋಗುವ ದಾರಿಯಲ್ಲಿ ತುಕ್ರನ ಮನೆಯಲ್ಲಿ ಕಂಠಪೂರ್ತಿ ಕುಡಿದು ತನ್ನ ಮನೆಗೆ ಹೋಗಿ ಬಿದ್ದುಕೊಂಡ.  ಹಸಿದ ಹೊಟ್ಟೆಗೆ ತುತ್ತು ಅನ್ನ ಹಾಕುವವರಿಲ್ಲ, ಅಮ್ಮು ಕುಟ್ಟಿಯನ್ನು ನೆನೆಸಿಕೊಂಡು ಅಮ್ಮೂ ಎಂದು ಬಿಕ್ಕಳಿಸಿದ. ಕೊನೆ ಕೊನೆಗೆ ಆಕೆಯನ್ನು ಕೆಟ್ಟದಾಗಿ ನಡೆಸಿಕೊಂಡ ಬಗ್ಗೆ ಬೇಸರಪಟ್ಟ. ಮಾಧವಿಯ ಮುಖ ಕಣ್ಮುಂದೆ ತೇಲಿ ಬಂತು. ಅವಡುಗಚ್ಚಿ ' ಹಾದರಗಿತ್ತಿ ' ನನ್ನ ಮರ್ಯಾದೆಯನ್ನು ಹರಾಜು ಹಾಕಿ ಬಿಟ್ಟಳು, ಅವಳನ್ನು ಆ ವೇಲಾಯುಧನ್ ನ ಜೊತೆ ಹೋಗಲು ಬಿಡಬಾರದಿತ್ತು, ಅವರಿಬ್ಬರನ್ನು ಮುಗಿಸದೆ ಎಂತಹ ತಪ್ಪು ಮಾಡಿಬಿಟ್ಟೆ. ಹಾಗೆ ಮಾಡಿದ್ದರೆ ಈ ಅವಮಾನ ವಿರುತ್ತಿರಲಿಲ್ಲ. ನನಗೆ ಪದೆ ಪದೆ ವ್ಯಂಗ್ಯವಾಡಿ ಅವಮಾನ ಗೊಳಿಸುತ್ತಿದ್ದ ಚಿಂಕ್ರನಿಗೆ ಸರಿ ಯಾಗಿಯೆ ಮಾಡಿದ್ದೇನೆ. ನನಗೇನು ಈತನ ಹುಳುಕು ಗೊತ್ತಿಲ್ಲವೆ,, ಇನ್ನೇನಾದರೂ ನನ್ನ ಸುದ್ದಿಗೆ ಬರಲಿ ಕಳ್ಳ ಸೂಳೆ ಮಗನ ಕೈಯೋ ಕಾಲೋ ಕಡಿದು ಸದಾ ನನ್ನನ್ನು ಜ್ಞಾಪಿಸಿ ಕೊಳ್ಳುವಂತೆ ಮಾಡುತ್ತೇನೆ . ಹೀಗೆಯೆ ಲಂಗು ಲಗಾಮು ಇಲ್ಲದೆ ಸಾಗಿತ್ತು ಆತನ ಯೋಚನಾ ಸರಣಿ. ಮೊದಲೆ ವಿಕ್ಷಿಪ್ತ ಗೊಂಡಿದ್ದ ಭಾಸ್ಕರನ್ ನಾಯರ್ ಮೇಲಾಗಿ ಒಳಗೆ ಸೇರಿರುವ ಪರಮಾತ್ಮ ಕುಮ್ಮಕ್ಕು ಬೇರೆ, ಭಾಸ್ಕರನ್ ನಾಯರನ ಯೋಚನಾ ಸರಣಿಯ ಕೋಶಗಳು ಒಂದೊಂದಾಗಿ ಬಿಚ್ಚಿ ಕೊಳ್ಳುತ್ತಿದ್ದವು.


     ಭಾಸ್ಕರನ್ ನಾಯರ ಕಣಿವೆ ಬೈಲಿಗೆ ಬಂದ ಪ್ರಾಯದ ದಿನಗಳು, ಎಷ್ಟು ಸೊಗಸಾಗಿದ್ದವು. ಜನಗಳು ಎಷ್ಟು ಮರ್ಯಾದೆ ಕೊಡುತ್ತಿದ್ದರು. ಸ್ವತಃ ಬಿಳಿ ದೊರೆಗಳೆ ಆತನನ್ನು ಮೆಚ್ಚಿ ಕೊಂಡಿದ್ದರು. ಅವರು ದೇಶ ಬಿಟ್ಟು ಹೋದದ್ದೆ ತಡ ದೇಶವೆಲ್ಲ ಸ್ವೇಚ್ಛಾಚಾರದ ಬೀಡಾಗಿ ಹೋಯಿತು. ಸ್ವಾತಂತ್ರ್ಯ ವೆಂದರೆ ಸ್ವೇಚ್ಛಾಚಾರ ವೆಂಬಂತಾಗಿದೆ. ಅಯೋಗ್ಯರೆಲ್ಲ ಮುಂಚೂಣಿಗೆ ಬಂದಿದ್ದಾರೆ. ಉದ್ಧಟತನ ತೋಳ್ಬಲ ನಾಲಿಗೆ ಮುಂದಿದ್ದ ರಾಯಿತು ಆತ ಹೇಳಿದ್ದೆ ವೇದ ವಾಕ್ಯ. ಅದೇ ಪ್ರವೃತ್ತಿಯವರು ಸಮಯ ಸಾಧಕರು ಅವರನ್ನೆ ಹೊಗಳಿ ಅಟ್ಟಕ್ಕೇರಿಸಿ ತಮ್ಮ ಇಷ್ಟಾರ್ಥಗಳನ್ನು ಪೂರೈಸಿ ಕೊಳ್ಳುತ್ತಿದ್ದಾರೆ. ಇದಕ್ಕೆಲ್ಲ ರೋಸಿ ಅಂತಹವ ರೊಂದಿಗೆ ಬೆರೆಯದಿದ್ದುದು ತನ್ನ ತಪ್ಪೆ ಅಥವಾ ತಾನು ಬದುಕಿರಿವುದು ತಪ್ಪೆ ಎಂದು ಆತ್ಮಾವಲೋಕನಕ್ಕಿಳಿದ. ತಾನು ಯಾರಿಗೂ ಏನೂ ತೊಂದರೆ ಮಾಡದಿದ್ದರೂ ತನ್ನ ಏಳಿಗೆ ಸಹಿಸದ ಜನ, ಅವರು ಹುಟ್ಟು ಹಾಕಿದ ಅಂತೆ ಕಂತೆಗಳು ತನ್ನ ಕೌಟುಂಬಿಕ ಜೀವನದ ವೈಫಲ್ಯತೆಗಳನ್ನು ಆಡಿಕೊಳ್ಳುವ ಜನರ ನೀಚತನ ಎಲ್ಲವುಗಳನ್ನು ನೆನೆದು ವಿಷಣ್ಣನಾದ.


     ಸರಿ ಸುಮಾರು ಮಧ್ಯ ರಾತ್ರಿಯ ಸಮಯ ಭಾಸ್ಕರನ್ ನಾಯರ ತನ್ನ ಬಿಡಾರ ಸೇರಿದ. ಹಸಿದ ಹೊಟ್ಟೆ ತಣಿಸಲು ಅಡುಗೆ ಮನೆಗೆ ಹೋದ, ಏನಿದೆ ಅಲ್ಲಿ? ಒಡತಿ ಇಲ್ಲದ ಮನೆ, ಬೆಳಿಗ್ಗೆ ಮಾಡಿಟ್ಟಿದ್ದ ಅನ್ನ ಹಳಸಿ ಹೋಗಿದೆ. ಒಳ ಸೇರಿದ್ದ ಪರಮಾತ್ಮ ಹಸಿವಿನ ಬೇಗೆಯನ್ನು ಇನ್ನಷ್ಟು ಉದ್ದೀಪನ ಗೊಳಿಸಿದ್ದ. ತಣ್ಣಗೆ ಒಂದು ಚೊಂಬು ನೀರು ಕುಡಿದು ಮನೆಯ ಮುಂದೆ ಅಂಗಳದಲ್ಲಿ ಚಾಪೆ ಬಿಡಿಸಿ ಮಲಗಿದ. ನಿದ್ರೆ ಹತ್ತಿರ ಸುಳಿಯ ಲೊಲ್ಲದು. ಏಕೋ ತನ್ನ ಜೀವನ ಹದ ತಪ್ಪುತ್ತಿದೆ, ಯಾರನ್ನೂ ಅಂದು ಸುಖವಿಲ್ಲ, ಈ ಜೀವನ ಯಾತ್ರೆಯನ್ನು ಮುಗಿಸಿ ಬಿಡುವುದೆ ? ಅವನ ಅಂತರಾತ್ಮ ಒಪ್ಪುತ್ತಿಲ್ಲ. ಇನ್ನು ಮುಂದೆ ಕುಡಿತ, ಅಮ್ಮು ಕುಟ್ಟಿ ಮತ್ತು ಮಾಧವಿ ಯರನ್ನು ಮರೆತು ನಿರ್ಲಿಪ್ತನಾಗಿ ಬದುಕಿ ಬಿಡಬೇಕು ಎಂದು ತೀರ್ನಾನಿಸಿ ಮಗ್ಗುಲಾದ.


     ರಾತ್ರಿ ಎರಡು ಗಂಟೆಯ ಸಮಯ , ಯಾರೋ ತನ್ನನ್ನು ಕೂಗಿ ಕರೆಯುತ್ತಿದ್ದಾರೆ. ಎಂದು ಕಣ್ತೆರೆದು ನೋಡಿದ. ಪೋಲಿಸ್ ಅಧಿಕರಿ ಮಾರಪ್ಪ ತನ್ನ ಸಿಬ್ಬಂದಿ ಹಾಗೂ ಜೇಕಬ್ ಮತ್ತು ತನ್ವೀರ ರೊಂದಿಗೆ ಬಂದು ನಿಂತಿದ್ದಾನೆ. ನಾಯರನಿಗೆ ಒಂದು ಕ್ಷಣ ಏನು ಮಾಡಬೇಕೆಂಬುದು ತೋಚದಾಯಿತು. ಭಾಸ್ಕರನ್ ನಾಯರ ನಿದ್ರೆಯ ಮಂಪರಿನಿಂದ ಎಚ್ಚರವಾದ, ಕುಡಿದ ಅಮಲು ಇಳಿದಿತ್ತು ಮತ್ತೆ ಹೊಟ್ಟೆ ಹಸಿವಿನ ಬಾಧೆ ಅವನನ್ನು ಕಾಡಲು ಪ್ರಾರಂಭಿಸಿತು. ಪೋಲೀಸ್ ಅಧಿಕಾರಿ ಮಾರಪ್ಪ ಚಿಂಕ್ರನ ಘಟನೆಯ ಸಮಸ್ತ ವಿವರವನ್ನು ಹೇಳಿ, ಆತ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿ ಇರುವ ವಿಷಯವನ್ನೂ, ಆತನ ಹೇಳಿಕೆಯ ಆಧಾರದ ಮೇಲೆ ದಾಖಲು ಆದ ಕೊಲೆ ಪ್ರಯತ್ನದ ಆರೋಪದ ಕೇಸಿನ ವಿವರವನ್ನು ವಿವರಿಸಿ ಅವನು ತನ್ನೊಂದಿಗೆ ಬರಬೇಕು ಇಲ್ಲವಾದಲ್ಲಿ ಬಲಪ್ರಯೋಗ ದಿಂದ ಕರೆದೊಯ್ಯಲಾಗುವುದು ಎಂದು ಸೂಚನೆ ನೀಡಿದ. ಆ ಕ್ಷಣದಲ್ಲಿ ಹತಾಶ ಭಾವನೆಯನ್ನು ತಾಳಿದ್ದ ಭಾಸ್ಕರನ್ ನಾಯರ್ ಪೋಲೀಸ್ ಅಧಿಕಾರಿ ಮಾರಪ್ಪನಿಗೆ ಯಾವುದೇ ಪ್ರತಿರೋಧವನ್ನು ತೋರದೆ ಮಾರಪ್ಪ ಮತ್ತು ಆತನ ಸಿಬ್ಬಂದಿ ಯೊಂದಿಗೆ ಶಬ್ಬೀರನ ಖಟಾರಾ ವಾಹನದಲ್ಲಿ ಮಾವಿನಕೊಪ್ಪ ಪೋಲೀಸ್ ಠಾಣೆಗೆ ಸಾಗಿದ.


     ಮತ್ತೆ ನಾಯರನಿಗೆ ಮಬ್ಬು ಆವರಿಸ ತೊಡಗಿತು, ಆತ ಮತ್ತೆ ತನ್ನ ನೆನಪಿನಾಳಕ್ಕೆ ಇಳಿದ. ನಾಲ್ವತ್ತು ವರ್ಷಗಳ ಕಾಲಾವಧಿಯಲ್ಲಿ ಎಷ್ಟೊಂದು ಅಂತರ; ಸ್ವಾತಂತ್ರ ಪೂರ್ವದಲ್ಲಿ ಕಲೆಕ್ಟರ್ ಸ್ಯಾಮುವೆಲ್ ವಾಲ್ಟೇರ್ ಜೊತೆ ಆತನ ಸರಕಾರಿ ವಾಹನದಲ್ಲಿ ಆತನ ನಿಕಟವರ್ತಿಯಾಗಿ, ಮೇಲಾಗಿ ಸ್ನೇಹಿತನಾಗಿ ಪ್ರಯಾಣಿಸುತ್ತಿದ್ದ ಆ ದಿನಗಳೆಲ್ಲಿ, ಈಗ ಒಬ್ಬ ಮಾಮೂಲಿ ಪೋಲೀಸ್ ಅಧಿಕಾರಿಯ ಜೊತೆ ಕೈದಿಯಾಗಿ ಯಾರದೋ ಖಟಾರಾ ವಾಹನದಲ್ಲಿ ಪ್ರಯಾಣ ಮಾಡುತ್ತಿರುವ ಈ ದಿನವೆಲ್ಲಿ, ಇದು ತನ್ನ ತಪ್ಪೆ ಇಲ್ಲ ವಿಧಿಯ ವಿಪರ್ಯಾಸವೆ ? ಸ್ವಾತಂತ್ರ ಪೂರ್ವದಲ್ಲಿ ಅಲ್ಲದೆ ಆ ನಂತರವೂ ತನಗೆ ಇದೇ ಮಾವಿನಕೊಪ್ಪದ ಪೋಲೀಸ್ ಠಾಣೆಯ ಅಧಿಕಾರಿ ಗಳು ಮರ್ಯಾದೆ ತೋರಿಸುತ್ತಿರಲಿಲ್ಲವೆ ? ಮಾರಪ್ಪ ನಾಯರನಿಗೆ ಕೆಳಗೆ ಇಳಿಯಲು ಆಜ್ಞಾಪಿಸಿದ. ಇಳಿದ ಭಾಸ್ಕರನ್ ನಾಯರ್ 'ಸೆಲ್'ನಲ್ಲಿ ಬಂದಿಯಾಗಿ ಒಳ ಸೇರಿದ.


     ಮಾರನೆ ದಿನ ಮಾರಪ್ಪ ಚಿಂಕ್ರನ ಕೇಸಿನ ಘಟನೆಯ ಕುರಿತು ಭಾಸ್ಕರನ್ ನಾಯರ್ನನ್ನು ವಿಚಾರಿಸಿದ. ಆಗ ನಾಯರ್ ಸರಾಯಿ ಗಡಂಗಿನಲ್ಲಿ ಚಿಂಕ್ರ ತನ್ನೆದುರೆ ತನ್ನ ಹೆಂಡತಿ ಮಾಧವಿಯ ಬಗ್ಗೆ ಕಟಕಿಯಾಡಿದ್ದೆ ತಾನು ಆತನ ಮೇಲೆ ಹಲ್ಲೆ ಮಾಡಲು ಕಾರಣ ಎಂದು ನುಡಿದ. ಆತನ ಹೇಳಿಕೆಯನ್ನು ದಾಖಲಿಸಿಕೊಂಡ ಮಾರಪ್ಪ ಆತನ ದಸ್ತಿಗಿರಿ ಕ್ರಮ ಜರುಗಿಸಿ ಮಾವಿನಕೊಪ್ಪ ನ್ಯಾಯಾಲಯಕ್ಕೆ ಸಿಬ್ಬಂದಿಯ ಬೆಂಗಾವಲಿನಲ್ಲಿ ಹಾಜರು ಪಡಿಸಲ್ಪಟ್ಟ. ನ್ಯಾಯಾಂಗ ಬಂಧನಕ್ಕೆ ಕಳಿಸಲ್ಪಟ್ಟ ನಾಯರ ತನ್ನ ಪರವಾಗಿ ವಾದಿಸಲು ಯಾವುದೆ ಲಾಯರನ್ನು ಇಡಲು ಮನಸು ಮಾಡಲೆ ಇಲ್ಲ. ಒಂದು ರೀತಿಯಲ್ಲಿ ಜೀವನಕ್ಕೆ ವಿಮುಖನಾಗಿ ಬಿಟ್ಟಿದ್ದ. ಒಂದು ಸಲ ದುರ್ಗಾಪುರದ ಜಿಲ್ಲಾ ಬಂದಿಖಾನೆಗೆ ಬಂದ ಉನ್ನಿ ಕೃಷ್ಣನ್ ಮತ್ತು ಮೋಯ್ದುರವರು ನಾಯರನನ್ನು ಕಂಡು ಆತನು ಜೈಲು ಸೇರಿದ್ದದಕ್ಕೆ ಖೇದ ವ್ಯಕ್ತ ಪಡಿಸಿ, ತಾವು ಆತನ ಬಗೆಗೆ ಬಹಳ ಕಳಕಳಿ ಹೊಂದಿರುವುದಾಗಿಯೂ ಆತನ ಕಣಿವೆಬೈಲಿನ ಆಸ್ತಿಯ ಉಸ್ತುವಾರಿಯನ್ನು ತಾವು ನೋಡಿ ಕೊಳ್ಳುವುದಾಗಿಯೂ ಮತ್ತು ಆತನನ್ನು ಜೈಲಿನ ಬಂಧನದಿಂದ ಜಾಮೀನು ನೀಡಿ ಹೊರ ತರುವುದಾಗಿ ಕಳಕಳಿ ವ್ಯಕ್ತ ಪಡಿಸಿದರು. ಆದರೆ ಅವರ ಈ ಸಂಧಾನದ ಮತ್ತು ಸಹಾಯ ಹಸ್ತದ ಹಿಂದಿರುವ ಸ್ವಾರ್ಥವನ್ನು ಗ್ರಹಿಸಿದ ನಾಯರ ಅವರ ಸಲಹೆ ಸಹಾಯ ಗಳನ್ನು ನಿರಾಕರಿಸಿ ಬಿಟ್ಟ.


     ಒಂದು ದಿನ ಕನಕಗಿರಿಯ ಸೇಂಟ್ ಲೂಯಿ ಚರ್ಚನ ಫಾದರ್ ರೆವರೆಂಡ್ ಲೋಬೋರವರು ಭಾಸ್ಕರನ್ ನಾಯರನನ್ನು ನೋಡಲು ಬಂದಿಖಾನೆಗೆ ಬಂದರು. ಅವರ ಅಂತಃಕರಣ ಭರಿತ ನಡುವಳಿಕೆಗೆ ಮತ್ತು ಸಾಂತ್ವನಕ್ಕೆ ಮನಸೋತ ಭಾಸ್ಕರನ್ ನಾಯರ್. ತನ್ನ ಎಲ್ಲ  ದುಃಖವನ್ನು ಅವರಲ್ಲಿ ತೋಡಿಕೊಂಡ. ಸೇಂಟ್ ಲೂಯಿ ಚರ್ಚಆಗಲಿ ಲೋಬೋ ರವರರಾಗಲಿ ಅತನಿಗೆ ಅಪರಿಚಿತರಾಗಿರಲಿಲ್ಲ. ಕಲೆಕ್ಟರ್ ಸ್ಯಾಮುವೆಲ್ ವಾಲ್ಟೇರ್ ಜೊತೆಗೆ ಹಲವು ಸಲ ಆ ಚರ್ಚಗೆ ಹೋಗಿ ಬಂದಿದ್ದ, ವಾಲ್ಟೆರ್ಗೆ ಹತ್ತಿರದವನೆಂಬ ಕಾರಣಕ್ಕೆ ಚರ್ಚನಲ್ಲಿ ಆತನಿಗೆ ವಿಶೇಷ ಗೌರವಾದರಗಳೂ ಇದ್ದವು. ಹೀಗಾಗಿ ಒಂದು ಧೃಢ ನಿರ್ಧಾರಕ್ಕೆ ಬಂದ ನಾಯರ ತನ್ನ ಕಣಿವೆ ಬೈಲಿನ ಸಮಸ್ತ ಆಸ್ತಿಯ ಉಸ್ತುವಾರಿಯನ್ನು ನೋಡಿ ಕೊಳ್ಳುವಂತೆ ಫಾದರ್ ಲೋಬೋ ರವರನ್ನು ಕೇಳಿ ಕೊಂಡ. ಕೇಸನ್ನು ನಡೆಸಲು ಲಾಯರನ್ನು ನೇಮಿಸಿಕೊಳ್ಳಲು ಹೋಗಲೆ ಇಲ್ಲ. ಪ್ರಕರಣ ವಿಚಾರಣೆಗೆ ಬಂದು ನ್ಯಾಯಾಲಯವು ಆರೋಪಿಯ ಹೇಳಿಕೆಯನ್ನು ದಾಖಲು ಮಾಡಿಕೊಳ್ಳುವ ದಿನ ಭಾಸ್ಕರನ್ ನಾಯರ ತಾನು ಚಿಂಕ್ರನನ್ನು ಹೊಡೆದುದನ್ನು ಒಪ್ಪಿಕೊಂಡು ತಾನು ಹೊಡೆಯಲು ಕಾರಣವಾದ ಸಂಗತಿಯನ್ನು ಸಹ ವಿವರಿಸಿದ. ಆತನ ವಾದವನ್ನು ಒಪ್ಪದ ನ್ಯಾಯಾಲಯ ಚಿಂಕ್ರ ಆತನ ವೈಯಕ್ತಿಕ ವಿಷಯ ಆಡಿಕೊಂಡ ಬಗ್ಗೆ ಆತನ ಮೇಲೆ ದೂರು ಕೊಟ್ಟು ಕಾನೂನು ಕ್ರಮ ಜರುಗಿಸ ಬೇಕಿತ್ತು. ಅದು ಬಿಟ್ಟು ಆತನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಕಾನೂನು ಕೈಗೆತ್ತಿ ಕೊಂಡದ್ದು ತಪ್ಪು ಎಂದು ನಿರ್ಧರಿಸಿ ಆತನ ತಪ್ಪೊಪ್ಪಿಗೆಯ ಆಧಾರದ ಮೇಲೆ ಜಿಲ್ಲಾ ಸೆಶನ್ಸ್ ನ್ಯಾಯಾಲಯವು ನಾಯರನಿಗೆ ಹತ್ತು ವರ್ಷಗಳ ಸಜೆ ವಿಧಿಸಿತು. ನ್ಯಾಯಾಲಯದ ಶಿಕ್ಷೆಯನ್ನು ಪೂರ್ಣವಾಗಿ ಅನುಭವಿಸಿ ಹೊರಬಂದ ಭಾಸ್ಕರನ್ ನಾಯರ ಕಣಿವೆ ಬೈಲಿಗೆ ಮರಳಿ ಬಂದ. ಆಗ ಆತ ಮೊದಲಿನ ಭಾಸ್ಕರನ್ ನಾಯರ ಆಗಿರಲಿಲ್ಲ. ಕುಡಿತವನ್ನು ಪೂರ್ತಿಯಾಗಿ ಬಿಟ್ಟಿದ್ದ, ಅಮ್ಮು ಕುಟ್ಟಿ ಮತ್ತು ಮಾಧವಿಯರನ್ನು ತನ್ನ ಮನೋ ಲೋಕದಿಂದ ಕಿತ್ತು ಹಾಕಿ ಎಷ್ಟೋ ಕಾಲವಾಗಿತ್ತು. ಮಾಗಿದ ವಯಸ್ಸು ಜೀವನ ಕಲಿಸಿದ ಅನುಭವದ ಪಾಠಗಳು ಆತನಿಗೆ ಬಹಳಷ್ಟು  ವಾಸ್ತವ ಬದುಕಿನ ದರ್ಶನ ಮಾಡಿಸಿದ್ದವು. ದೇಶ ಬದಲಾಗಿತ್ತು ಊರು ಬದ ಲಾಗಿತ್ತು ಜನ ಸಹ ಬದಲಾಗಿದ್ದರು. ನಾಯರ ಸಹ ಊರಿಗೆ ಹೊಸಬನಾಗಿದ್ದ. ಜೇಲಿನಿಂದ ಬಂದ ಭಾಸ್ಕರನ್ ನಾಯರನನ್ನು ವೃದ್ಧ ಫಾದರ್ ಲೋಬೊ ರವರು ಚರ್ಚಗೆ ಕರೆಸಿಕೊಂಡು ಆತ ಇನ್ನು ಎಲ್ಲಿಯೂ ಹೋಗಬಾರ ದೆಂದೂ ಅಲ್ಲಿಯೆ ಇರಬೇಕೆಂದು ಆಗ್ರಹ ಪಡಿಸಿದರು.


     '  ನಾಯರ ನಿನ್ನ ಕೋರಿಕೆಯಂತೆ ನಿನ್ನ ಆಸ್ತಿಯ ಜವಾಬ್ದಾರಿಯನ್ನು ನಾವು ನೋಡಿಕೊಂಡಿದ್ದೇವೆ. ಹತ್ತು ವರ್ಷದ ನಿನ್ನ ಜಮೀನಿನ ಬೆಳೆಗಳ ಮಾರಾಟದ ಹಣವನ್ನು ಬ್ಯಾಂಕ್ ನಲ್ಲಿ ಕಾಯಂ ಠೇವಣಿ ಖಾತೆಯಲ್ಲಿ ಇರಿಸ ಲಾಗಿದೆ. ನಿನ್ನ ಮನೆಯನ್ನು ಸುವ್ಯವಸ್ಥಿತವಾಗಿದೆ. ಅವುಗಳನ್ನು ನೀನು ತೆಗೆದುಕೊಂಡು ನೆಮ್ಮದಿ ಯಾಗಿ ಜೀವನ ನಡೆಸು,ನಿನ್ನ ಸಹಾಯಕ್ಕೆ ನಾವಿದ್ದೇವೆ ' ಎಂದರು.


     ಫಾದರ್ ಲೋಬೋ ರವರ ಕೋರಿಕೆಯನ್ನು ಮನ್ನಿಸದ ನಾಯರ್ ತನ್ನ ಬ್ಯಾಂಕಿನ ಖಾತೆಯಲ್ಲಿ ಅವರು ಇರಿಸಿಟ್ಟಿದ್ದ ಸಮಸ್ತ ಹಣ, ಮನೆ ಮತ್ತು ಸಮಸ್ತ ಆಸ್ತಿಯನ್ನು ತನ್ನ ಸ್ವಇಚ್ಛೆಯಿಂದ ' ಕನಕಗಿರಿ ಸೇಂಟ್ ಲೂಯಿ ಎಜ್ಯಕೇಶನ್ ಟ್ರಸ್ಟ್ 'ಗೆ ಬರೆದು ಕೊಟ್ಟ. ತನ್ನ ಜಮೀನಿನಲ್ಲಯೆ ತಾನೇ ಕೂಲಿಯ ಆಳಾಗಿ ಶಕ್ತಿ ಇರುವಷ್ಟು ದಿನ ದುಡಿದ. ನಂತರದಲ್ಲಿ ಮಾಗಿದ ವಯಸ್ಸು ಆನೆಕಾಲು ರೋಗದಿಂದ ಜರ್ಝರಿತಗೋಂಡ ಆತನನ್ನು ಫಾದರ್ ಲೋಬೋ ರವರು ಬಹಳ ಚೆನ್ನಾಗಿ ನೋಡಿ ಕೊಂಡರು. ಜೀವನದ ಕೊನೆಗಾಲದಲ್ಲಿ ಸಂತನಂತೆ ಬಾಳಿದ ಬಾಸ್ಕರನ್ ನಾಯರ್ ವೃದ್ಧಾಪ್ಯದ ಕಾಯಿಲೆಯಿಂದ ನರಳಿ ಮೃತಪಟ್ಟ.


                                                                  *


     ಭಾಸ್ಕರನ್ ನಾಯರನ ಜೀವನವನ್ನು ಮೆಲುಕು ಹಾಕುತ್ತ ನಡೆದಿದ್ದ ತಿಮ್ಮಪ್ಪಯ್ಯ ಕಣಿವೆ ಬೈಲಿನ ನಾಯ ರನ ಬೀಡಾರವನ್ನು ತಲುಪಿದ್ದರು. ಆಗಲೆ ಜಿಟಿ ಜಿಟಿಯಾಗಿ ಬೀಳುತ್ತಿದ್ದ ಸೋನೆ ಮಳೆ ಜೋರಾಗಿ ಹನಿಯಲು ಪ್ರಾರಂಭಿಸಿತು. ನಾಯರನ ಮನೆಯ ಮುಂದೆ ಅನೇಕ ಜನ ಬಂದು ಸೇರಿದ್ದರು. ತಮ ತಮಗೆ ತೋಚಿದಂತೆ ನಾಯರನ ಜೀವನವನ್ನು ಕುರಿತು ಮಾತನಾಡಿ ಕೊಳ್ಳುತ್ತಿದ್ದರು. ಆತನು ಬದುಕಿರುವಾಗ ಅಂತೆ ಕಂತೆಗಳನ್ನು ಸೃಷ್ಟಿಸಿದವರೂ ಈಗ ಭಾಸ್ಕರನ್ ನಾಯರನನ್ನು ಹೊಗಳಿ ಮಾತನಾಡುತ್ತಿದ್ದರು. ಮನುಷ್ಯ ಬದುಕಿದ್ದಾಗ ನೆಮ್ಮದಿ ಯಿಂದಿರಲು ಬಿಡದೆ ಸತ್ತಮೇಲೆ ಹೊಗಳುವುದು ಮಾನವ ಸ್ವಭಾವ. ಅಲ್ಲಿ ನೆರೆದಿದ್ದವರಲ್ಲಿ ಯಾರೂ ಕೊನೆಗಾಲದಲ್ಲಿ ನಾಯರಗೆ ತುತ್ತು ಅನ್ನ ಗುಟುಕು ನೀರು ಕೊಟ್ಟವರಲ್ಲ. ನಾಯರನ ಮನೆಯ ಹೊರ ಜಗುಲಿಯಲ್ಲಿ ಕನಕಗಿರಿಯ ಸೇಂಟ್ ಲೂಯಿ ಚರ್ಚನ ವಯೋವೃದ್ಧ ಫಾದರ್ ರೆವರಂಡ್ ಲೋಬೋ ರವರು, ಸೇಂಟ್ ಲೂಯಿ ಎಜ್ಯುಕೇಶನ್ ಟ್ರಸ್ಟ್ನ ಅಧ್ಯಕ್ಷ ಡೆವಿಡ್ ಸಿಮಯೋನ್ ರವರು ಮತ್ತು ಪದಾಧಿಕಾರಿಗಳು, ಕಣಿವೆ ಬೈಲಿನ ಎಸ್ಟೇಟ್ ಮ್ಯಾನೇಜರ್ ಮತ್ತು ಇತರರು ಸೇರಿದ್ದರು. ಮಾವಿನಕೊಪ್ಪ ಪೋಲೀಸ್ ಠಾಣೆಯ ಅಧಿಕಾರಿ ನಂಜಪ್ಪ ತಮ್ಮ ಸಿಬ್ಬಂದಿಯೊಂದಿಗೆ ಬಂದಿದ್ದರು. ನಾಯರನ ಮರಣದ ವಿಷಯ ತಿಳಿದ ಫಾದರ್ ಲೋಬೋ ರವರು ಅವರನ್ನು ಕರೆಸಿದ್ದರು. ನಾಯರನ  ಶವ ಸಂಸ್ಕಾರದ ವಿಷಯವಾಗಿ ಅಲ್ಲಿ ಚರ್ಚೆ ನಡೆದಿತ್ತು.


     ' ಭಾಸ್ಕರನ್ ನಾಯರನ ಸಾವಿನ ಕುರಿತು ಸಂಶಯ ವಿದ್ದರೆ ದೂರು ಕೊಡಿ, ಅಂದರೆ ಪ್ರಕರಣ ದಾಖಲಿಸಿ ಶವ ತನಿಖಾ ಕ್ರಮ ಹಾಗೂ ವೈದ್ಯರಿಂದ ಶವ ಪರೀಕ್ಷೆ ಮಾಡಿಸಿ ಆತನ ಶವವನ್ನು ಅವರ ಮತ ಪದ್ಧತಿಯಂತೆ ಸಂಸ್ಕಾರ ಮಾಡಲು ಅವನ ಸಂಬಂಧಿಕರಿಗೆ ಇಲ್ಲದಿದ್ದರೆ ಅವನ ಹಿತ ಚಿಂತಕರಿಗೆ ಅಥವಾ ಸ್ನೇಹಿತರಿಗೆ ಬಿಟ್ಟು ಕೊಡಲಾಗುವುದು ' ಎಂದು ಪೋಲೀಸ್ ಅಧಿಕಾರಿ ನಂಜಪ್ಪ ಹೇಳಿದರು.


     ಮೃತನ ' ಪೋಸ್ಟ ಮಾರ್ಟಂ' ಜರುಗಿಸಬೇಕೆ  ಬೇಡವೆ ಎನ್ನುವ ಜಿಜ್ಞಾಸೆ ಅಲ್ಲಿ ತಲೆದೋರಿತ್ತು. ಪರ ಮತ್ತು ವಿರೋಧ ಅಭಿಪ್ರಾಯಗಳು ಅಲ್ಲಿ ಉದ್ಭವಿಸಿದ್ದವು. ಎಲ್ಲರೂ ಒಮ್ಮತದ ಅಭಿಪ್ರಾಯಕ್ಕೆ ಬಂದು ಭಾಸ್ಕರನ್ ನಾಯರನ ಎರಡನೆ ಹೆಂಡತಿ ಮಾಧವಿಗೆ ಸುದ್ದಿ ಮುಟ್ಟಿಸಲು ವೇಲಾಯುಧನ್  ನ ಬೀಡಾರಕ್ಕೆ ಹೇಳಿ ಕಳಿಸಿದರು. ಆದರೆ ಅಲ್ಲಿಂದ ನಕಾರಾತ್ಮಕ ಉತ್ತರ ಬಂದಾಗ ಅಲ್ಲಿ ನೆರೆದಿದ್ದ ಗಣ್ಯರು ಭಾಸ್ಕರನ್ ನಾಯರನ ಶವ ಸಂಸ್ಕಾರ ಜರುಗಿಸಲು ತೀರ್ಮಾನಿಸಿದರು. ಫಾದರ್ ಲೋಬೋ ರವರು ತಮ್ಮ ಚರ್ಚನಲ್ಲಿ ಕೆಲಸದ ಉಸ್ತುವಾರಿ ನೋಡಿ ಕೊಳ್ಳುತ್ತಿದ್ದ ಕೇರಳ ಮೂಲದ ತಂಗಚ್ಚನ್ ಗೆ ಭಾಸ್ಕರನ್ ನಾಯರನ ಶವದ ಅಂತ್ಯ ಸಂಸ್ಕಾರದ  ಜವಾಬ್ದಾರಿಯನ್ನು ವಹಿಸಿ ಕೊಟ್ಟರು.


     ಭಾಸ್ಕರನ್ ನಾಯರನ ಬಿಡಾರದ ಒಳಕ್ಕೆ ತಿಮ್ಮಪ್ಪಯ್ಯ ಹೋದರು. ನಡುಮನೆಯಲ್ಲಿ ಒಂದು ಈಚಲು ಚಾಪೆಯ ಮೇಲೆ ಭಾಸ್ಕರನ್ ನಾಯರ ಹೆಣವಾಗಿ ಮಲಗಿದ್ದು, ಆತನ ಬಲಗಾಲು ಆನೇಕಾಲು ರೋಗದಿಂದಾಗಿ ದಪ್ಪವಾಗಿದ್ದುದನ್ನು ಬಿಟ್ಟರೆ ಉಳಿದಂತೆ ಆತನ ಶವ ಸಹಜವಾಗಿತ್ತು. ಭಾಸ್ಕರನ್ ನಾಯರ ಮರಣಿಸಿ ಎರಡು ಮೂರು ದಿನ ಗಳಾಗಿರುವುದು, ಹೆಣವು ಊದಿಕೊಂಡು ಒಡೆದು ದುರ್ನಾತ ಬರುತ್ತಿದೆ ಎಂಬುದು ಜನ ಹುಟ್ಟಿಸಿದು ದಾಗಿದ್ದು, ಅದನ್ನು ನಂಬಿ ತುಕ್ರ ಬಂದು ಹೇಳಿದುದಾಗಿತ್ತು. ತಂಗಚ್ಚನ್ ಮೃತ ಭಾಸ್ಕರನ್ ನಾಯರನ ಶವದ ಅಂತ್ಯ ಸಂಸ್ಕಾರ ಕ್ರಿಯೆಯಲ್ಲಿ ತನ್ನನ್ನು ತೊಡಗಿಸಿಕೊಂಡ. ಆಗಲೆ ಸಂಜೆ ಆವರಿಸ ತೊಡಗಿತ್ತು., ಮಳೆ ಸಣ್ಣಗೆ ಹನಿಯುತ್ತಿತ್ತು. ಕೊಡೆಯನ್ನು ಏರಿಸಿದ ತಿಮ್ಮಪ್ಪಯ್ಯ ಫಾದರ್ ಲೋಬೋ ರವರನ್ನು ಕಂಡು ನಾಯರನ ಕುರಿತು ನಾಲ್ಕು ಮಾತನಾಡಿ ಅವರಿಗೆ ವಿದಾಯ ಹೇಳಿ ತಮ್ಮ ಮನೆಯ ದಾರಿ ಹಿಡಿದರು. ಅವರ ಮನದ ತುಂಬ ಭಾಸ್ಕರನ್ ನಾಯರನೆ ತುಂಬಿ ಕೊಂಡಿದ್ದು, ಅವರಿಗೂ ತಮ್ಮ ಸಾವು ಹತ್ತಿರ ಬರುತ್ತಿದೆ, ಇನ್ನು ಕೆಲವು ವರ್ಷಗಳ ನಂತರ ವಾದರೂ ತಾವು ಜೀವನದ ಸತ್ಯವಾದ ಸಾವನ್ನು ಎದುರಿಸಲೆ ಬೇಕು ಎನ್ನುವುದರ ಅರಿವು ಅವರಿಗಾಯಿತು. ಆಧ್ಯಾತ್ಮಿಕ ಚಿಂತನಾ ಧಾರೆಯಲ್ಲಿ ಬೆಳೆದು ಬಂದ ತಾವೆ ಸಾವನ್ನು ನೆನೆದು ಇಷ್ಟು ವಿಷಾದ ಪಡುತ್ತಿರ ಬೇಕಾದರೆ, ಜೀವನವನ್ನು ತೀವ್ರ ವಾಗಿ ವ್ಯಾಮೋಹಿಸಿ ಬದುಕಿದ ಭಾಸ್ಕರನ್ ನಾಯರ್ ತನ್ನ ಏಕಾಂಗಿ ಜೀವನವನ್ನು ಎಷ್ಟು ವೇದನೆಯಿಂದ ಕಳೆದಿರ ಬಹುದು ? ಎನ್ನುವ ಪ್ರಶ್ನೆ ಅವರನ್ನು ಕಾಡ ತೊಡಗಿತು. ತಿಮ್ಮಪ್ಪಯ್ಯ ಬಿದ್ರಕಾನಿನ ತಮ್ಮ ಮನೆಗೆ ಮರಳಿ ಬಂದಾಗ ದಟ್ಟ ಕತ್ತಲು ಆವರಿಸಿತ್ತು. ಜೀರುಂಡೆಗಳ ಸಮೂಹಗಾನ, ಕಪ್ಪೆಗಳ ಒಟಗುಡುವಿಕೆ ಭಾಸ್ಕರನ್ ನಾಯರನ ಸಾವಿಗೆ ಚರಮ ಗೀತೆ ಹಾಡು ತ್ತಿರುವಂತಿತ್ತು. ತಿಮ್ಮಪ್ಪಯ್ಯ ಸ್ನಾನಾಹ್ನಿಕವನ್ನು ಮುಗಿಸಿ ದೇವರಿಗೆ ನಮಸ್ಕರಿಸಿ ಭಾಸ್ಕರನ್ ನಾಯರಗೆ ಸದ್ಗತಿ ಯನ್ನು ಕರುಣಿಸುವಂತೆ ಕೇಳಿ ಕೊಂಡರು. ಕನಕಗಿರಿಯ ಕಣಿವೆಬೈಲಿಗೆ ಜೀವ ಮತ್ತು ಹೆಸರನ್ನು ತಂದಿದ್ದ ಭಾಸ್ಕರನ್ ನಾಯರನ ' ಅವಸಾನ ' ವಾಗಿತ್ತು.


  
                                                                                                   ( ಮುಗಿಯಿತು )


ಮೊದಲ ಮೂರು ಭಾಗಗಳಿಗೆ ಲಿಂಕ್


ಭಾಗ_೧ sampada.net/blog/%E0%B2%85%E0%B2%B5%E0%B2%B8%E0%B2%BE%E0%B2%A8-%E0%B2%95%E0%B2%A5%E0%B3%86-%E0%B2%AD%E0%B2%BE%E0%B2%97-1/19/06/2012/37117
 
 ಭಾಗ_೨sampada.net/blog/%E0%B2%85%E0%B2%B5%E0%B2%B8%E0%B2%BE%E0%B2%A8-%E0%B2%95%E0%B2%A5%E0%B3%86-%E0%B2%AD%E0%B2%BE%E0%B2%97-2/21/06/2012/37137


ಭಾಗ_೩sampada.net/blog/%E0%B2%85%E0%B2%B5%E0%B2%B8%E0%B2%BE%E0%B2%A8-%E0%B2%95%E0%B2%A5%E0%B3%86-%E0%B2%AD%E0%B2%BE%E0%B2%97-3/23/06/2012/37163

Rating
No votes yet

Comments