ಅವಾಂತರ

ಅವಾಂತರ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಬೆಂಗಳೂರು ಹಬ್ಬ ಇವರ ಸಹಯೋಗದಲ್ಲಿ

"ಸಮಷ್ಟಿ" ನಾಟಕೋಟ್ಸವದಲ್ಲಿ

"ಅವಾಂತರ"ನಾಟಕ
 
ನಾಟಕದ ಬಗ್ಗೆ
ಇದು ಸವಿತಾ ನಾಗಭೂಷಣರವರ 'ಅಜ್ಜಿ ಬಾಯಿಗೆ ಬೆಂಕಿ ಕೊಳ್ಳಿ' ಪಿ.ಲಂಕೇಶರವರ 'ಜಯಂತನ ಸ್ವಗತ' ಹಾಗೂ ಶ್ರೀನಿವಾಸ್ ವೈದ್ಯರವರ 'ಬಿದ್ದೂರಿನ ಬಿಗ್ ಬೆನ್' ಎನ್ನುವ ಮೂರು ಕಥೆಗಳನ್ನು ಆಧರಿಸಿದ ಹಾಸ್ಯ ನಾಟಕ.
 
ಅಜ್ಜಿ ಬಾಯಿಗೆ ಬೆಂಕಿ
ಕೊಳ್ಳಿ ನಾಟಕದಲ್ಲಿ ತಮಾಷೆಯಾಗಿ ಗಲಾಟೆ ಮಾಡುತ್ತ, ಆಂಟಿಯ ಮನೆಗೆ ಬರುವ ಪುಟ್ಟಮಕ್ಕಳು, ಪ್ರಶ್ನೆಗಳ ಮೇಲೆ ಪ್ರಶ್ನೆಗಳನ್ನು ಹಾಕುತ್ತಾ ತಿಳಿ ಹಾಸ್ಯವನ್ನು ಸೃಷ್ಟಿ ಮಾಡಿ,ಕೊನೆಯಲ್ಲಿ ಗಂಭೀರವಾದ ಪ್ರಶ್ನೆಯೊಂದನ್ನು ಮುಂದಿಡುತ್ತವೆ. ಹಿರಿಯರ ಮಾತುಗಳು ಮಕ್ಕಳ ಮನಸ್ಸಿನ ಮೇಲೆ ಯಾವ ಪರಿಣಾಮಗಳನ್ನು ನಿರ್ಮಿಸುತ್ತವೆ ಎನ್ನುವುದನ್ನು ಈ ನಾಟಕವನ್ನು ನಿರೂಪಿಸುತ್ತದೆ.
 

ಜಯಂತನ ಸ್ವಗತ ನಾಟಕದಲ್ಲಿ, ಜಯಂತ ತನ್ನ ತಂದೆ ತಾಯಿಯರ ನಡುವಳಿಕೆಯನ್ನು ಲಘು ಹಾಸ್ಯದಿಂದ ವಿಮರ್ಶಿಸುತ್ತಾ ಹೋಗುತ್ತಾನೆ.70 ರ ಹರೆಯದ ತನ್ನ ಅಪ್ಪ, ಅಮ್ಮನೊಂದಿಗೆ ಸರಸವಾಡುವುದರಿಂದ ಹಿಡಿದು, ತನ್ನ ತಾಯಿಯ ಧೋರಣೆಗಳನ್ನು ಕೂಡ ಅವನು ಖಂಡಿಸುತ್ತಾ ಹೋಗುತ್ತಾನೆ.  ಕೊನೆಯಲ್ಲಿ ಆತನಿಗೆ ಸತ್ಯದರ್ಶನವಾಗುತ್ತದೆ. ಹದಿ ಹರೆಯದಲ್ಲಿ ತಂದೆ ತಾಯಿಗಳ ಬಗ್ಗೆ ಮೂಡುವ ಬಂಡಾಯ ಧೋರಣೆಗಳನ್ನು ಲಘು ಹಾಸ್ಯದಿಂದ ಈ ಕಥೆಯು ವಿಶ್ಲೇಷಿಸುತ್ತಾ ಹೋಗುತ್ತದೆ.

 

ಬಿದ್ದೂರಿನ ಬಿಗ್ ಬೆನ್ ನಾಟಕದಲ್ಲಿ ಚುನಾವಣೆಯ ಕೆಲಸಕ್ಕಾಗಿ ಕುಗ್ರಾಮವೊಂದಕ್ಕೆ ಹೋಗಿರುವ ಶೀನನಿಗೆ, ಬೆಂಗಳೂರಿಗೆ ಬರುವ ಕೊನೆಯ ಬಸ್ ಕೂಡ ಮಿಸ್ ಆಗಿ, ಅನಿವಾರ್ಯತೆಯಿಂದ ತನ್ನ ಗೆಳೆಯ ಪರಮೇಶಿಯ ಮನೆಯಲ್ಲಿ ಉಳಿಯುವ ಪ್ರಸಂಗ ಬಂದೊದಗುತ್ತದೆ. ತನ್ನ ಗಡಿಯಾರ ನಿಂತು ಹೋಗಿ, ಊರಲ್ಲಿ ಎಲ್ಲೂ ಗಡಿಯಾರಗಳು ಸಿಗದೇ, ಗೌಡರ ಕೋಣ ಬೆಳಿಗ್ಗೆ ಆರು ಘಂಟೆಗೆ ಅರಚುವುದನ್ನು ಕಾಯುವುದೊಂದೇ ಮುಂದಿನ ಬಸ್ ಹಿಡಿಯುವ ಮಾರ್ಗವಾದಾಗ ಆತನ ತಳಮಳ ಹೆಚ್ಚಾಗುತ್ತದೆ. ಇದರ ಜೊತೆಗೆಬಿದ್ದೂರಿನ ಸೊಳ್ಳೆಗಳು ಶೀನನ ಪರಿಸ್ಥಿತಿಯನ್ನು ಅಧೋಗತಿಗೆ ಇಳಿಸಿ ಕರಾಳ ರಾತ್ರಿಯನ್ನಾಗಿ ಪರಿವರ್ತಿಸುತ್ತವೆ. ಶ್ರಿನಿವಾಸ ವೈದ್ಯರ ಬರವಣಿಗೆಯಲ್ಲಿನ ಎಂದಿನ ಹಾಸ್ಯ ಈ ನಾಟಕವನ್ನು ಪ್ರಹಸನವಾಗಿಸುತ್ತದೆ.

 
ಲೇಖಕರ ಬಗ್ಗೆ
ಚಿಕ್ಕಮಗಳೂರಿನಲ್ಲಿ ಜನಿಸಿದ ಸವಿತಾ ನಾಗಭೂಷಣರವರು ಅಂಚೆ ಇಲಾಖೆಯಲ್ಲಿ ಉದ್ಯೋಗಿ ಯಾಗಿದ್ದು ಸ್ವಯಂ ನಿವೃತ್ತಿಯನ್ನು ಪಡೆದಿರುತ್ತಾರೆ,. ಇವರ ಕೃತಿಗಳು ಸ್ತೀಲೋಕ, ನಾ ಬರುತ್ತೇನೆ ಕೇಳು,  ಚಂದ್ರನನ್ನು ಕರೆಯಿರಿ ಭೂಮಿಗೆ, ಹಳೆ ಮಗಳು, ಆಕಾಶ ಮಲ್ಲಿಗೆ ಮತ್ತು ಜಾತ್ರೆಯಲ್ಲಿ ಶಿವ. ಇವರು ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಎಂ.ಕೆ.ಇಂದಿರಾ ಪ್ರಶಸ್ತಿ, ಗೀತಾದೇಸಾಯಿ ದತ್ತಿ ಬಹುಮಾನ ಮತ್ತು ಬಿ.ಎಚ್. ಶ್ರೀಧರ ಪ್ರಶಸ್ತಿಗಳಿಂದ ಪುರಸ್ಕೃತರಾಗಿದ್ದಾರೆ.
 
ಪಿ.ಲಂಕೇಶ್ ಬರಹಗಾರರಾಗಿ, ನಾಟಕಗಾರರಾಗಿ, ವಿಮರ್ಶಕರಾಗಿ, ನರ್ದೇಶಕರಾಗಿ ಹಾಗೂ ಪತ್ರಕರ್ತರಾಗಿ ಕನ್ನಡಿಗರೆಲ್ಲರಿಗೂ ಪರಿಚಿತರು. ಸಂಕ್ರಾಂತಿ, ತೆರೆಗಳು, ಗುಣಮುಖ ಮುಂತಾದವು ಇವರ ಶ್ರೇಷ್ಟ ನಾಟಕಗಳು. ಇವರ "ಕಲ್ಲು ಕರಗುವ ಸಮಯ"ಎನ್ನುವ ಕಥಾ ಸಂಕಲನವು ಸಾಹಿತ್ಯ ಅಕಾಡೆಮಿ ಪ್ರಶಸ್ತಿಯಿಂದ ಪುರಸ್ಕೃತಗೊಂಡಿದೆ.
 
ಧಾರವಾಡದಲ್ಲಿ ಜನಿಸಿದ ಶ್ರೀನಿವಾಸ ವೈದ್ಯರು ಕೂಡ ಕೆನರಾ ಬ್ಯಾಂಕಿನ ಉದ್ಯೋಗಿಯಾಗಿದ್ದು, ಅಸಿಸ್ಟಂಟ್ ಜನರಲ್ ಮ್ಯಾನೇಜರ್ ಆಗಿ ನಿವೃತ್ತಿ ಹೊಂದಿರುತ್ತಾರೆ. ಇವರ ಕೃತಿಗಳು ತಲೆಗೊಂದು ತರತರ, ಮನಸುಖರಾಯನ ಮನಸ್ಸು, ರುಚಿ ಪುಳಿಯೋಗರು, ಹಳ್ಳ ಬಂತು ಹಳ್ಳ, ಅಗ್ನಿ ಕಾರ್ಯ ಇತ್ಯಾದಿ. ಇವರು ರಮಾನಂದ ಪ್ರಶಸ್ಥಿ ಹಾಗೂ ಕೇಂದ್ರ ಮತ್ತು ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ಥಿಗಳಿಂದ ಪುರಸ್ಕೃತರಾಗಿರುತ್ತಾರೆ.
 
 
ಸ್ಥಳ: ರಂಗ ಶಂಕರ
ದಿನಾಂಕ: 20:02:2009 ಸಂಜೆ  7:30 ಕ್ಕೆ
ನಾಟಕ ರೂಪ ಮತ್ತು ನಿರ್ದೇಶನ: ಸತೀಶ್
ಟಿಕೇಟ್ ಧರ:50 ರೂಗಳು
ವಿವರಗಳಿಗೆ ಸಂಪರ್ಕಿಸಿ: www.samashti.com
 
Rating
No votes yet