"ಅವುಗಳಾಟ ಎಂಥ ಚಂದ"

"ಅವುಗಳಾಟ ಎಂಥ ಚಂದ"

ಮೊನ್ನೆ ದಾರಿಯಲ್ಲಿ ಅನಾಥನಂತೆ ಅಲೆಯುತ್ತಿದ್ದ ಬೆಕ್ಕಿನ ಮರಿಯೊಂದನ್ನು ಕಂಡು ನನ್ನ ಒಂದು ಹಳೆಯ ಕವನ ನೆನಪಾಯ್ತು. ಅದು ಮಕ್ಕಳಿಗಾಗಿಯೇ ಬರೆದದ್ದು . ನೀವೂ ಓದಿ ಪರವಾಗಿಲ್ಲ.....

ಮನೆಯ ಮಹಡಿಯಲಿ ಸೌದೆ ಗೂಡಿನಲಿ
ಇತ್ತೊಂದು ಕರಿಯ ಬೆಕ್ಕು
ಹಚ್ಚಗಿದ್ದ ಬೆಚ್ಚನೆಯ ಮನೆ ಮೇಲೆ
ಚಲಾಯ್ಸಿ ತನ್ನ ಹಕ್ಕು

ಕತ್ತಲಲಿ ಹೊಳೆವ ಭೂತಗಳ ಕಳೆಯ
ತಿಳಿಹಸಿರು ಕಂಗಳೆರಡು
ಎಲ್ಲಿದ್ದೂ ಬಿಡವು ಕೆನೆ ಹಾಲು ಮೊಸರ
ಇದ್ದಿಲ್ಲ ಅವಕೆ ಕುರುಡು

ಒಂದು ಹಗಲು ನಾವಿರದ ದಿನಕೆ
ಹಾಕಿತ್ತು ಮರಿಯ ಮೂರು
ಇಡಿಯ ಗೂಡಿನಲಿ , ಮೇಲೆ ಮಾಡಿನಲಿ
ಅವುಗಳದೆ ಕಾರುಬಾರು

ತಾಯಿ ಬೆಕ್ಕಿಗೆ ,ಹೊರಗೆ ಕಿಟಕಿಯಲಿ
ಬಲಿಯಾಯ್ತು ಗುಬ್ಬಿಯೊಂದು
ದೇಹ ಬಿಚ್ಚಿ ಬಾಯಲ್ಲಿ ಕಚ್ಚಿ
ಹಾಕಿತ್ತು ಅವಕೆ ತಂದು

ಒಂದನ್ನೊಂದು ಬಿಡದಂತೆ ಇರುವ
ಅವುಗಳಾಟ ಎಂಥ ಚಂದ
ಸಾಕಿಹುದು ಅಮ್ಮ ಮರಿಬೆಕ್ಕುಗಳನು
ಮೈದಡವಿ ಪ್ರೀತಿಯಿಂದ

Rating
No votes yet

Comments