ಅವ್ವ ... ನನ್ನವ್ವ

ಅವ್ವ ... ನನ್ನವ್ವ

ಹೊತ್ತು ಮೂಡುವ ಮೊದಲೆ
ಮತ್ತೆ ಬಾಗಿಲ ತೊಳೆದು
ಸುತ್ತು ರಂಗೋಲಿಯಲಿ
ಮುತ್ತಿನ ಹಾಗೆ ಮನೆಯ
ಸಿಂಗರಿಸುವಳು ನನ್ನವ್ವ
ಅವಳಿಗೆ ಸುಸ್ತಾಗುವುದೇ ಇಲ್ಲ |

ತಣ್ಣನೆಯ ನೀರಲ್ಲಿ ಮಿಂದು
ಮಡಿಯ ಉಡುಗೆಯ ಧರಿಸಿ
ಕಣ್ಮುಚ್ಚಿ ಧ್ಯಾನಿಸುತ ದೇವರನು ನನ್ನ
ಮಣ್ಣು , ಮಕ್ಕಳು, ಪತಿಯ ಕಾಪಾಡು ತಾಯೆ
ಎಂದು ಬೇಡುವಳು ನನ್ನವ್ವ ಅವಳಿಗೆ
ತನ್ನ ನೆನಪಾಗುವುದೇ ಇಲ್ಲ |

ಅಡುಗೆ ಮಾಡುತ ಬಡಿಸಿ
ಮನೆಯ ಕೆಲಸವ ಮುಗಿಸಿ
ಬುತ್ತಿಯನು ಹೊತ್ತು ನಡೆವಳು ಹೊಲಕೆ
ನನ್ನವ್ವ ಅವಳಿಗೆ ಹಸಿವಾಗುವುದೇ ಇಲ್ಲ |

ಬೆಳೆದ ಬೆಳೆಯನು ಕಣ್ತುಂಬಿಕೊಳ್ಳುತ್ತ
ಕಳೆಯ ಹುಲ್ಲನ್ನು ಹೊರೆ ಮಾಡಿ ತನ್ನ
ಬಳೆಯ ಸದ್ದಿಗಾಗಿ ಕಾಯುತಲಿರುವ
ಎಳೆಯ ಕರುಗಳಿಗುಣಿಸಿ ತನ್ನ ತಾಯ್ತನವ
ತೋರುವಳು ನನ್ನವ್ವ
ಅವಳಿಗೆ ಸುಸ್ತಾಗುವುದೇ ಇಲ್ಲ |

ಕುಲದ ಒಂದೇ ಕಸುಬು
ಹೊಲದ ದುಡಿಮೆಯ ಮಾಡಿ
ಸಾಕಾಗಿ ಬಂದ ನನ್ನಪ್ಪನಿಗೆ
ಒಲವ ತೋರುತ ರಮಿಸಿ
ಏನನ್ನೋ ನೆನೆದು ಮತ್ತೆ
ಒಳಗೋಡುವಳು ನನ್ನವ್ವ
ಅವಳಿಗೆ ಸುಸ್ತಾಯಿತೇ ? ಎಂದು
ಕೇಳುವವರಿಲ್ಲ .
ಅದಕ್ಕೇ ಏನೋ ನನ್ನವ್ವನಿಗೆ ಸುಸ್ತಾಗುವುದೇ ಇಲ್ಲ ||

Rating
Average: 3 (1 vote)

Comments