ಅಸ್ತಿ ಕಶ್ಚಿತ್ ವಾಗ್ವಿಶೇಷಃ? ಅಥವಾ, ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ....

ಅಸ್ತಿ ಕಶ್ಚಿತ್ ವಾಗ್ವಿಶೇಷಃ? ಅಥವಾ, ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ....

ಕೆ.ಎಸ್.ನರಸಿಂಹಸ್ವಾಮಿಯವರಿಗೂ, ಮೈಸೂರು ಅನಂತ ಸ್ವಾಮಿಯವರಿಗೂ ಹೆಂಡತಿಯೊಬ್ಬಳು
ಮನೆಯೊಳಗಿದ್ದರೆ ಅದೇ ಕೋಟಿ ರೂಪಾಯಿ ಅನ್ನೋದು ನಮ್ಮೆಲ್ಲರಿಗೂ ಗೊತ್ತು. ಅವರಂತೆ ಎಷ್ಟೋ
ಜನಗಳಿಗೂ ಅದೇ ಭಾವನೆಯಿದ್ದರೂ, ಆ ರೀತಿ ಹೊಸ ಪದ್ಯಗಳನ್ನು ಹಾಡಿಲ್ಲ ಅಷ್ಟೇ.
ದಾರಿತಪ್ಪುತ್ತಿದ್ದ ಗಂಡಸರನ್ನು ಸರಿದಾರಿಗೆ ತಂದವರು ಹಲವರು, ಮತ್ತೆ ಸರಿಯಾದ
ದಾರಿಯಲ್ಲೇ ಇದ್ದವರನ್ನು ಇನ್ನೂ ಸಾಧಕರನ್ನಾಗಿ ಮಾಡಿದವರು ಇನ್ನಷ್ಟು
ಮಹಿಳೆಯರಿದ್ದಾರೆ. ರಾಮಕೃಷ್ಣ ಪರಮಹಂಸ, ಮಹಾತ್ಮಾ ಗಾಂಧಿ ಮೊದಲಾದವರ ಜೀವನದಲ್ಲಿ ಅವರ
ಹೆಂಡತಿಯರು ವಹಿಸಿದ ಪಾತ್ರ ಎಲ್ಲರಿಗೂ ತಿಳಿದೇ ಇದೆ.

ಇನ್ನೂ ಸ್ವಲ್ಪ ಹಿಂದೆ
ಹೋಗಿ ನೋಡಿದರೆ, ಹೆಂಡತಿಯಿಂದ ಭಾರೀ ಬದಲಾವಣೆ ಹೊಂದಿ, ಅದರಿಂದ ಕನ್ನಡ ಸಾಹಿತ್ಯಕ್ಕೂ,
ಕರ್ನಾಟಕ ಸಂಗೀತಕ್ಕೂ ಅಸಾಮಾನ್ಯ ಕೊಡುಗೆ ಕೊಟ್ಟವರು ಪುರಂದರದಾಸರು. ಸರಸ್ವತೀಬಾಯಿಯ
ಮೂಗುತಿಯ ಕಥೆ ಎಲ್ಲರಿಗೂ ಗೊತ್ತು. ಅದನ್ನು ನಂಬುವುದೋ ಬಿಡುವುದೋ ಅದು ಅವರವರಿಗೆ
ಬಿಟ್ಟದ್ದು. ಇದರ ಸತ್ಯಾಸತ್ಯತೆಗಳನ್ನು ಬದಿಗಿಟ್ಟರೂ, ಹೆಂಡತಿಯೇ ತನ್ನ ಬದಲಾವಣೆಗೆ
ಮುಖ ಕಾರಣವಾದದ್ದನ್ನು ಪುರಂದರ ದಾಸರೇ ಒಂದು ಕೀರ್ತನೆಯಲ್ಲಿ ಹೀಗೆ ಹೇಳುತ್ತಾರೆ:

ಪಲ್ಲವಿ:

ಆದದ್ದೆಲ್ಲ ಒಳಿತೆ ಆಯಿತು ನಮ್ಮ |

ಶ್ರೀಧರನ ಸೇವೆಗೆ ಸಾಧನ ಸಂಪತ್ತಾಯಿತು  ||

 

ಚರಣಗಳು:

ದಂಡಿಗೆ ಬೆತ್ತ ಹಿಡಿಯುವುದಕ್ಕೆ ಮಂಡೆ ಮಾಚಿ ನಾಚುತಿದ್ದೆ |

ಹೆಂಡತಿ ಸಂತತಿ ಸಾವಿರವಾಗಲಿ ದಂಡಿಗೆ ಬೆತ್ತ ಹಿಡಿಸಿದಳಯ್ಯ ||

 

ಗೋಪಾಳ ಬುಟ್ಟಿ ಹಿಡಿಯುವುದಕ್ಕೆ ಭೂಪತಿಯಂತೆ ಗರ್ವಿಸುತಿದ್ದೆ |

ಆ ಪತ್ನೀ ಕುಲ ಸಾವಿರವಾಗಲಿ ಗೋಪಾಳ ಬುಟ್ಟಿ ಹಿಡಿಸಿದಳಯ್ಯ ||

 

ತುಳಸಿ ಮಾಲೆಯ ಹಾಕುವುದಕ್ಕೆ ಅರಸನಾಗಿ ನಾಚುತಿದ್ದೆ |

ಸರಸಿಜಾಕ್ಷ ಪುರಂದರ ವಿಠಲನು ತುಳಸಿ ಮಾಲೆ ಹಾಕಿಸಿದನಯ್ಯ ||

 


ರಚನೆಯಲ್ಲಿ ತಮಗೆ ಹರಿದಾಸನಾಗಲು ಸರಿದಾರಿಗೆ ಹಚ್ಚಿದ ತಮ್ಮ ಹೆಂಡತಿಯನ್ನು 
ಪುರಂದರದಾಸರು, ಆ ಪತ್ನೀ ಕುಲ ಸಾವಿರವಾಗಲಿ ಎಂದು ಮನಃಪೂರ್ತಿಯಾಗಿ ಸ್ಮರಿಸಿದ್ದಾರೆ.
ಹೀಗಾಗಿ, ಮೂಗುತಿ, ಮುದುಕ ಬ್ರಾಹ್ಮಣನ ಕಥೆ ಏನೇ ಇರಲಿ,  ಆಕೆ ತನ್ನ ಗಂಡನ ಮನಸ್ಸು
ಹರಿದಾಸನಾಗುವ ಕಡೆ ಹರಿಸುವಲ್ಲಿ ಪ್ರೇರೇಪಿಸಿದ್ದಂತೂ ಖಂಡಿತ ಎಂದು ತಿಳಿಯುತ್ತದೆ.
ಪುರಂದರ ದಾಸರು ಆ ಮಟ್ಟದಲ್ಲಿ, ಸಂಗೀತ ಹಾಗೂ ಸಾಹಿತ್ಯದಲ್ಲಿ ಸಾಧನೆ ಮಾಡಲು, ಅವರಿಗೆ
ದಾಸರಾಗುವ ಮೊದಲಿನಿಂದಲೂ ಅವರಿಗೆ ಈ ವಿಷಯಗಳಲ್ಲಿ ತಕ್ಕ ಮಟ್ಟಿಗೆ ಪ್ರೌಢಿಮೆ ಇದ್ದು,
ನಂತರ ಇದನ್ನೆ ಅವರು ಪ್ರಮುಖ ಕಾರ್ಯಕ್ಷೇತ್ರವನ್ನಾಗಿ ಮಾಡಿಕೊಂಡಿದ್ದರಿಂದ
ಸಾಧ್ಯವಾಯಿತು ಎಂದು ನನ್ನ ವೈಯಕ್ತಿಕ ಅಭಿಪ್ರಾಯ. ತಮ್ಮ ವ್ಯಾಪಾರದ ಮೇಲೆ ಹೆಚ್ಚು  ಗಮನ
ಹರಿಸುತ್ತಿದ್ದಿರಬಹುದಾದ  ಅವರಿಗೆ, ಹೆಂಡತಿಯ ಪ್ರೇರೇಪಣೆ ತಮ್ಮ ವ್ಯಾಪಾರದಿಂದ
ವಿಮುಖರಾಗಿ, ಹೊಸ ಹಾದಿಯನ್ನು ತುಳಿಯುವಂತೆ ಮಾಡಿದ್ದು ಕನ್ನಡಿಗರೆಲ್ಲರ ಭಾಗ್ಯ
ಎನ್ನಬೇಕು.

 

ಈಗ
ಇನ್ನೂ ಸಾವಿರ ವರ್ಷಗಳಷ್ಟು ಹಿಂದೆ ಹೋಗೋಣ. ಸಂಸ್ಕೃತ ಕವಿಗಳ ಮುಂಚೂಣಿಯಲ್ಲಿರುವವನು
ಕಾಳಿದಾಸ. ಇವನ ಹಿಂದೆಯೂ ಒಂದು ದಂತಕಥೆ. ಇದಕ್ಕೆ ಮೂಲ ಯಾವುದೋ ನನಗೆ ತಿಳಿಯದು. ಆದರೆ,
ಅಸಾಮಾನ್ಯವಾದ ಸಾಧನೆ ಮಾಡಿರುವವರ ಹಿಂದೆಲ್ಲ ಹೀಗೊಂದು ಅತಿಮಾನುಷವಾದ ಕಥೆ ಬಂದಿರುವುದು
ನಾವು ಈಗಾಗಲೇ ನೋಡಿರುವ ಸಂಗತಿ. ಪುರಂದರ ದಾಸರೇ ಇರಲಿ, ರಾಮಾಯಣ ಬರೆದ ವಾಲ್ಮೀಕಿಯೇ
ಇರಲಿ ಇಂತಹ ಕಥೆಗಳಿಗೆ ಪಕ್ಕಾದವರೇ.

 

ರಾಜಕುಮಾರಿಯೊಬ್ಬಳಂತೆ.
ತನ್ನ ಮಗನನ್ನು ಮದುವೆಯಾಗೊಲ್ಲಳು ಎಂಬ ರೊಚ್ಚಿನಿಂದ, ಮಂತ್ರಿ ಏನೂ ಅರಿಯದ
ಅವಿದ್ಯಾವಂತನೊಡನೆ ಅವಳ ಮದುವೆಯನ್ನು ಮೋಸದಿಂದ ಮಾಡುತ್ತಾನೆ. ಮದುವೆಯ ದಿನ ರಾತ್ರಿ
ಗಂಡನನ್ನು ಏಕಾಂತದಲ್ಲಿ ಕಂಡ ರಾಜಕುವರಿ ಅಸ್ತಿ ಕಶ್ಚಿತ್ ವಾಗ್ವಿಶೇಷಃ ? ಎಂದು
ಕೇಳುತ್ತಾಳೆ. (ಏನಾದರೂ ಸೊಗಸಾಗಿರುವ ಮಾತಿದೆಯೇ? ಇದ್ದರೆ ಆಡು ಎಂಬರ್ಥದಲ್ಲಿ). ಗಂಡ
ಬ್ಬೆಬ್ಬೆಬ್ಬೆ ಎಂದು ತಡವರಿಸುವುದನ್ನು ಕಂಡಾಗ ತಾನು ಮೋಸ ಹೋದದ್ದು ಅವಳಿಗೆ
ಅರಿವಾಗುತ್ತದೆ. ಅವಳು ಗಂಡನನ್ನು ಕಾಳಿಯ ಗುಡಿಗೆ ಕಳಿಸಿ, ಅವಳಿಂದ
ವಿದ್ಯಾಭಿಕ್ಷೆಯನ್ನು ಕೇಳಲು ಹೇಳುತ್ತಾಳೆ. ಕಾಳಿಯ ಕೃಪೆಗೆ ಪಾತ್ರನಾದ ಗಂಡ,
ಹೆಂಡತಿಯನ್ನೂ ಮರೆತು, ದೇಶಾಂತರ ಹೋಗಿ ಕಾಳಿದಾಸನೆಂಬ ಹೆಸರಿನಲ್ಲಿ
ಪ್ರಖ್ಯಾತನಾಗುತ್ತಾನೆ.

 

ಪಾಪ,
ಕಾಳಿದಾಸನಿಗೆ ಹೆಂಡತಿಯೇ ಮರೆತು ಹೋದರೂ, ಅವಳು ಕೇಳಿದ ಪ್ರಶ್ನೆ ಕಿವಿಯಲ್ಲಿ ಗುಞ್
ಗುಡುತ್ತಿತ್ತೇನೋ! ಅದಕ್ಕೆ ಅವನು ಈ ಪದಗಳಿಂದಲೇ ಪ್ರಾರಂಭವಾಗುವ ಕಾವ್ಯಗಳನ್ನು
ಬರೆದನಂತೆ. ಇದನ್ನು ನೋಡಿದರೆ, ಕಾಳಿದಾಸನ ಕೃತಿಗಳನ್ನು ನೋಡಿದ ನಂತರ, ಅದರ ಮೊದಲಲ್ಲಿ
ಬರುವ ಪದಗಳನ್ನು ಉಪಯೋಗಿಸಿ, ರೋಮಾಂಚಕವಾದ ಕಥೆಯೊಂದನ್ನು ಹೆಣೆಯಲಾಗಿದೆ ಎಂದು ನನ್ನ
ಅನಿಸಿಕೆ. ಅದೇನೇ ಇರಲಿ, ಈ ಮೂರು ಶ್ಲೋಕಗಳನ್ನು ಇಲ್ಲಿ ನೋಡೋಣ.

 

ಕಾಳಿದಾಸನ ಕುಮಾರಸಂಭವ ಈ ಪದ್ಯದಿಂದ ಪ್ರಾರಂಭವಾಗುತ್ತದೆ:

 

ಅಸ್ತ್ಯುತ್ತರಸಸ್ಯಾಮ್ ದಿಶಿ ದೇವತಾತ್ಮಾ ಹಿಮಾಲಯೋ ನಾಮ ನಗಾಧಿರಾಜಃ

ಪೂರ್ವಾಪರೌ ತೋಯನಿಧೀವಗಾಹ್ಯಾ ಸ್ಥಿತಃ ಪೃಥಿವ್ಯಾ ಇವ ಮಾನದಂಡಃ

 

(ಉತ್ತರದಿಕ್ಕಿನಲ್ಲಿ ಹಿಮಾಲಯವೆಂಬ ಪರ್ವತಗಳ ರಾಜನಿದ್ದಾನೆ. ಎರಡೂ ಕಡೆ (ತುದಿಯಲ್ಲೂ) ಸಮುದ್ರಗಳಿರುವ ಇವನು, ಭೂಮಿಗೇ ಅಳತೆಗೋಲಿನಂತಿದ್ದಾನೆ)

 

ಕಾಳಿದಾಸನಿಗೇನಾದರೂ space
travel ಗೊತ್ತಿತ್ತೇ? ಆಕಾಶದಿಂದ, ಹಿಮಾಲಯ ಹೇಗೆ ಕಾಣುತ್ತದೆ ಎಂಬುದನ್ನು ಅವನು ಗೂಗಲ್
ಅರ್ಥ್ ನಲ್ಲೇನಾದರೂ ನೋಡಿದ್ದನೇ? ;-) ಈ ಬಗೆಯ ಕಲ್ಪನೆ - ಭೂಮಿಯನ್ನು ಅಳೆಯುವ
ಅಳತೆಗೋಲು ಎಂಬಂತಹ ಉಪಮೆಗಳಿಂದಲೇ ಅವನು ಉಪಮಾಲೋಲನೆಂಬ ಹೆಸರು ಗಳಿಸಿದ್ದಾನೆ)

 

ಇನ್ನು ಮೇಘದೂತದ ಮೊದಲ ಶ್ಲೋಕ ನೋಡಿ.

 

ಕಶ್ಚಿತ್ ಕಾಂತಾ ವಿರಹ ಗುರುಣಾ ಸ್ವಾಧಿಕಾರಾತ್ ಪ್ರಮತ್ತಃ

ಶಾಪೇಣ ಅಸ್ತಂಗಮಿತ ಮಹಿಮಾ ವರ್ಷ ಭೋಗ್ಯೇಣ ಭರ್ತುಃ |

ಯಕ್ಷಶ್ಚಕ್ರೇ ಜನಕ ತನಯಾ ಸ್ನಾನ ಪುಣ್ಯೋದಕೇಷು

ಸ್ನಿಗ್ಧಃ ಛಾಯಾ ತರುಷು ವಸತಿಂ ರಾಮಗಿರ್ಯಾಶ್ರಮೇಷು ||

 

ಗೂಗಲ್
ಅರ್ತ್ ಬಳಸಿಲ್ಲದಿದ್ದರೂ, ಭಾರತದ geography ಚೆನ್ನಾಗಿ ಅರಿತಿದ್ದ ಕಾಳಿದಾಸ.
ವಿದರ್ಭದ ರಾಮಗಿರಿ (ಈಗಿನ ರಾಮ್‍ಟೆಕ್, ಮಹಾರಾಷ್ಟ್ರ) ದಿಂದ ಹಿಮಾಲಯದ ಅಲಕಾಪುರಿಗೆ
ಹೋಗುವ ದಾರಿಯನ್ನು ಅವನು ಮೇಘದೂತದಲ್ಲಿ ಚೆನ್ನಾಗಿ ವರ್ಣಿಸುತ್ತಾನಂತೆ.

 

ಇನ್ನು ಕೊನೆಯದು ಅವನ ರಘುವಂಶ. ಈ ಪದ್ಯ ಹೀಗಿದೆ:

 

 

ವಾಗರ್ಥಾವಿವ ಸಂಪೃಕ್ತೌ ವಾಗರ್ಥ ಪ್ರತಿಪತ್ತಯೇ |

ಜಗತಃ ಪಿತರೌ ವಂದೇ ಪಾರ್ವತೀಪರಮೇಶ್ವರೌ ||

 

ಮಾತು
ಮತ್ತು ಅರ್ಥದಂತೆ ಸದಾ ಜೊತೆಯಾಗಿರುವ ಪಾರ್ವತೀಪರಮೇಶ್ವರರನ್ನು ಸ್ಮರಿಸುವ ಈ ಪದ್ಯವೇ
ಸೂಚಿಸುತ್ತಿದೆ - ಅರ್ಥವಿಲ್ಲದೇ ಮಾತಿಗೆ ಬೆಲೆಯಿಲ್ಲ, ಅಂತೆಯೇ ಪಾರ್ವತಿಯಿಲ್ಲವೇ
ಪರಮೇಶ್ವರನಿಗೂ ಬೆಲೆಯಿಲ್ಲ ಎಂದು! ಅಂತಹದ್ದರಲ್ಲಿ, ಹೆಂಡತಿಯೊಬ್ಬಳು ಮನೆಯೊಳಗಿದ್ದರೆ
ನನಗದೆ ಕೋಟಿ ರುಪಾಯಿ ಎಂದು ನರಸಿಂಹಸ್ವಾಮಿಯವರು ಹೇಳಿದ್ದರಲ್ಲಿ ಆಶ್ಚರ್ಯವೇನಿದೆ?

 

ಹಾಗೇ, ಅರ್ಥವಿಲ್ಲದ ಮಾತೂ ಕೂಡ ಬೇಡ ತಾನೇ? ಹಾಗಾದರೆ, ಇಲ್ಲಿಗೆ ಮುಗಿಸುವುದೊಳಿತು :)

 

-ಹಂಸಾನಂದಿ

Rating
Average: 4 (1 vote)

Comments