ಅಹ್ವಾನ

ಅಹ್ವಾನ

ಸಂಪದ ಬಳಗದ ಸಿನೆಮಾಪ್ರಿಯರಿಗೆ ನಮಸ್ಕಾರಗಳು.

ನನ್ನ ಈ ಬ್ಲಾಗಿನ ಉದ್ದೇಶ ನಿಮ್ಮೆಲ್ಲರನ್ನು ಎರಡು ವಿಶೇಷ ಕಾರ್ಯಕ್ರಮಗಳಿಗೆ ಆಹ್ವಾನಿಸುವುದು. ಮೊದಲನೆಯದು ಚಲನಚಿತ್ರ ನಿರ್ಮಾಣದ ಕಾರ್ಯಾಗಾರ. ಎರಡನೆಯದು ಪುಸ್ತಕ ಬಿಡುಗಡೆ ಸಮಾರಂಭ. ವಿವರಗಳು ಹೀಗಿದೆ:

೧. ಲೇಸ್ ಚಲನಚಿತ್ರ ಸಮಾಜವು ಪ್ರತಿ ವರ್ಷದಂತೆ ಈ ಸಲವೂ ಮೂರು ದಿನಗಳ ಚಿತ್ರ ನಿರ್ಮಾಣ ಕಾರ್ಯಾಗಾರವನ್ನು ಡಿಸೆಂಬರ್ 28, 29, 30ರಂದು ಆಯೋಜಿಸುತ್ತಿದೆ. ಕನ್ನಡ ಚಿತ್ರರಂಗದ ನುರಿತ ಕಲಾವಿದರು, ತಂತ್ರಜ್ಞರು ಭಾಗವಹಿಸಲಿದ್ದು ಚಿತ್ರನಿರ್ಮಾಣದ ಪ್ರಾಥಮಿಕ ಪಾಠಗಳನ್ನು ಪ್ರಾತ್ಯಕ್ಷಿಕೆಗಳ ಮೂಲಕ ಹೇಳಿಕೊಡಲಿದ್ದಾರೆ. ವಿಶ್ವ ಖ್ಯಾತ ಕಿರುಚಿತ್ರಗಳನ್ನು ಈ ಅವಧಿಯಲ್ಲಿ ತೋರಿಸಲಾಗುವುದು. ಮೂರೇ ದಿನಗಳಲ್ಲಿ ಯಾರೂ ಎಕ್ಸ್‍ಪರ್ಟ್‍ಗಳಾಗಲು ಸಾಧ್ಯವಿಲ್ಲವಾದರೂ ಬರಹದಿಂದ ತೆರೆಯವರೆಗೆ ಯಾವ್ಯಾವ ಹಂತಗಳಿವೆ, ಈ ಮಾಧ್ಯಮದ ಸಾಧ್ಯತೆಗಳೇನು ಎಂಬುದರ ಪರಿಚಯ ಮಾಡಿಕೊಡಲಾಗುವುದು. ಸ್ಥಳ ಸುಚಿತ್ರ ಫಿಲ್ಮ್ ಸೊಸೈಟಿ ಸಭಾಂಗಣ, ಬನಶಂಕರಿ ಎರಡನೇ ಹಂತ. ಈ ಕಾರ್ಯಾಗಾರಕ್ಕೆ ಪ್ರವೇಶ ಶುಲ್ಕವಿರುತ್ತದೆ.

೨. ಹಿಂದಿ ಚಿತ್ರರಂಗ ಕಂಡ ಅದ್ಭುತ ಕಲಾವಿದ ಗುರುದತ್. ಆತನ ಪ್ಯಾಸಾ, ಕಾಗಝ್ ಕೆ ಫೂಲ್, ಸಾಹಿಬ್ ಬೀವಿ ಔರ್ ಗುಲಾಮ್, ಚೌದವೀ ಕಾ ಚಾಂದ್ ನಂತಹ ಚಿತ್ರಗಳನ್ನು ಮರೆಯಲು ಸಾಧ್ಯವಿಲ್ಲ. ಈ ಎಲ್ಲಾ ಚಿತ್ರಗಳ ಛಾಯಾಗ್ರಾಹಕ ಕನ್ನಡಿಗರಾದ ಶ್ರೀ ವಿ.ಕೆ.ಮೂರ್ತಿ ಎಂಬುದು ಬಹಳ ಜನರಿಗೆ ತಿಳಿಯದು. ಮೂರ್ತಿಯವರನ್ನು ಗುರುದತ್‍ನ ಕಣ್ಣು ಎಂದೇ ಕರೆಯುತ್ತಿದ್ದರು. ಮೂರ್ತಿಯವರ ಶಿಷ್ಯ ಗೋವಿಂದ ನಿಹಲಾನಿ 'ತಮಸ್' ಮಾಡುವಾಗ ಮೂರ್ತಿಯವರನ್ನೇ ಛಾಯಾಗ್ರಾಹಕರಾಗಿ ನೇಮಿಸಿ ತಮ್ಮ ಗುರುದಕ್ಷಿಣೆಯನ್ನು ಸಲ್ಲಿಸಿದರು. ಮತ್ತೊಬ್ಬ ಖ್ಯಾತ ನಿರ್ದೇಶಕ ಶ್ಯಾಂ ಬೆನೆಗಲ್‍ರ ಡಿಸ್ಕವರಿ ಆಫ್ ಇಂಡಿಯದಲ್ಲಿ ನಾವು ನೋಡುವದೆಲ್ಲ ಮೂರ್ತಿಯವರು ಸೆರೆಹಿಡಿದ ಚಿತ್ರಗಳನ್ನೇ. ಇಂತಹ ಅದ್ಭುತ ಕಲಾವಿದರನ್ನು ಕನ್ನಡ ಚಿತ್ರರಂಗ ಬಳಸಿಕೊಂಡಿದ್ದು ಒಮ್ಮೆ ಮಾತ್ರ (ಚಿತ್ರ ಹೂವು ಹಣ್ಣು). ಇರಲಿ, ಇದರ ಬಗ್ಗೆ ಇನ್ನೊಮ್ಮೆ ಚರ್ಚಿಸುವ. ಈಗ ವಿಷಯಕ್ಕೆ ಬರುತ್ತೇನೆ. ಖ್ಯಾತ ಕನ್ನಡ ಬರಹಗಾರ್ತಿ ಉಮಾ ರಾವ್ ಇದೀಗ ಮೂರ್ತಿಯವರ ಜೀವನದ ನೆರಳು ಬೆಳಕಿನ ಪಯಣವನ್ನು ತಮ್ಮ 'ಬಿಸಿಲು ಕೋಲು' ಎಂಬ ಕೃತಿಯಲ್ಲಿ ದಾಖಲಿಸಿದ್ದಾರೆ. ಈ ಪುಸ್ತಕದ ಬಿಡುಗಡೆ ಜನವರಿ 1, 2006ರಂದು ಬೆಳಿಗ್ಗೆ 10:30ಕ್ಕೆ ಜಯನಗರ ಎಂಟನೇ ಬ್ಲಾಕ್‍ನಲ್ಲಿರುವ ಜೆ.ಎಸ್.ಎಸ್. ಸಭಾಂಗಣದಲ್ಲಿ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಮೂರ್ತಿಯವರೊಂದಿಗೆ ಗೋವಿಂದ ನಿಹಲಾನಿಯವರು ಭಾಗವಹಿಸಲಿದ್ದಾರೆ. (ಪ್ರವೇಶ ಉಚಿತ).

ಮೇಲಿನ ಎರಡೂ ಕಾರ್ಯಕ್ರಮಗಳ ಬಗ್ಗೆ ಹೆಚ್ಚಿನ ವಿವರಗಳನ್ನು www.lacefilms.org ವೆಬ್‍ಸೈಟ್‍ನಲ್ಲಿ ಪಡೆಯಬಹುದು ಅಥವಾ ಸಂಪರ್ಕಿಸಿ: ಇಮೇಲ್: lacefilms@gmail.com

ಫೋನ್: 9880636487, 9880660101

Rating
No votes yet