ಅ ಕಪ್ ಓಫ್ ಕಾಫಿ ... ಸಿಪ್ - ೨೧
ಸಿಪ್ - ೨೧
ಅ ಕಪ್ ಓಫ್ ಕಾಫಿ ... ಒಂದು ಸಿಪ್ ಪ್ರೀತಿಯೊಂದಿಗೆ, ಮತ್ತೊಂದು ಜೀವನ ದೊಂದಿಗೆ....
ಆಕೃತಿ ಬಿಲಾವಲ್ ತಾಟ್ ನಲ್ಲಿ ರಾಗ್ ಬಿಹಾಗ್ ನ ಆರೋಹಣ ಶುರು ಮಾಡಿದಳು. ಕಬೀರರ 'ಬೀಥ್ ಗಯಾ ದಿನ್' ಬಿಹಾಗ್ ನಲ್ಲಿ ತಿಳಿಗೊಳ್ಳುತ್ತಿರುವ ಪಶ್ಚಿಮದಲ್ಲಿ ಸೂರ್ಯನಿಗೆ ವಿರಹದ ವಿದಾಯ ಇಟ್ಟು ಪೂರ್ವದಲ್ಲಿ ಮೂಡುವ ಪೌರ್ಣಮಿಯ ಚಂದ್ರನ ಆಗಮನಕ್ಕೆ ಸ್ವಾಗತ ಕೊರುತಿತ್ತು; ನನಗೆ ಬಿಹಾಗ್ ಹಾಡುತ್ತಿರುವ ಆಕೃತಿಯ ಕೊರಳಿಂದ 'ಕರೆದರೂ ಕೇಳದೆ ಸುಂದರನೆ ಏಕೆ ನನ್ನಲ್ಲಿ ಈ ಮೌನ ' ತೇಲಿ ಬಂದಂತೆ ಕೇಳುತಿತ್ತು. ಸ ನಿ ಧಾ ಪ ಮ ಗಮ ಗ ರಿ ಸ ... ಅವರೋಹಣ ದೊಂದಿಗೆ ಅವಳು ತನ್ನ ಕೀರ್ತನೆಯನ್ನು ಮುಗಿಸಿದ್ದರೂ ಸಪ್ತ ಸ್ವರದ ಮೇಲೆ ತೇಲುತ್ತಿರುವ ನಾನು ಇನ್ನು ಡಯಾಸ್ ಮೇಲೆ ಲ್ಯಾಂಡ್ ಆಗಿರಲಿಲ್ಲ; ಇದು ಅವಳಿಗೆ ಎರಡು ಸುತ್ತು ಹೆಚ್ಚಿನ ಚಪ್ಪಾಳೆ ಗಿಟ್ಟಿಸುವಂತೆ ಮಾಡಿತು. ಒಮ್ಮೆಗೆ ಪ್ರೇಕ್ಷಕರ ಖಾರತಾಳ ನಿಂತಾಗ ಹಾರುತ್ತಿರುವ ಮನಸ್ಸಿಗೆ ಗಂಧರ್ವ ಲೋಕದ ಕಲ್ಪನೆ ಮಾಯವಾಗಿ ಗಂಧರ್ವ ಪಾರ್ಕ್ ಅವೆನ್ಯೂ ನ ಗಾರ್ಡೆನ್ ಹಾಲ್ ಗೋಚರಿಸಲಾರಂಭಿಸಿತು. ಪ್ರೀತಿ ಅದಾಗಲೇ ಸ್ಟೇಜ್ ತಲುಪಿದ್ದಳು.
ಬೆಳ್ಳಿ ಅಂಚಿನ ಕೆಂಪು ಸೀರೆಯಲ್ಲಿ ಇನ್ನೂ ಕೆಂಪು ಕೆಂಪಾಗಿ ಗೋಚರಿಸುತಿದ್ದಳು. ನನಗೆ ಕೊಟ್ಟ ಸ್ವಾತಂತ್ರ್ಯವನ್ನು ಸಂಪೂರ್ಣವಾಗಿ ಉಪಯೋಗಿಸಿ ನನ್ನ ಇಷ್ಟದಂತೆ ನಾನು ಆಕೃತಿಗೆ ನಿರೂಪಕಿಯ ಆಫರ್ ಕೊಟ್ಟೆ; ಸಭಾಕಂಪನ ದ ಸಬೂಬು ಕೊಡುತ್ತಾ ಅವಳು ಅದನ್ನು ನಿರಾಕರಿಸಿದಳು; ಆಕೃತಿ ಇಲ್ಲ ಹೇಳಿದಾಗ ತಲೆಯಲ್ಲಿ ಬಂದ ಎರಡನೇ ಹೆಸರು ಪ್ರೀತಿ; ಅವಳು ಒಲ್ಲೆ ಹೇಳಲಾರಳು ಎಂದು ನನಗೆ ಗೊತ್ತಿತ್ತು. ಇಂಜಿನಿಯರಿಂಗ್ ನ ಫಸ್ಟ್ ಇಯರ್ ನ ಪ್ರೆಶರ್ ಪಾರ್ಟಿಯ ಸಂಜೆಯ ನಿರ್ವಹಣೆ ಅವಳೇ ಮಾಡಿ, ಟೀನ್ ಏಜ್ ಇಂದ ಜಾರುತ್ತಿರುವ ಅದೆಷ್ಟೋ ನವ ತರುಣರ ಹೃದಯಕ್ಕೆ ಕಿಚ್ಚು ಹತ್ತಿಸಿದ್ದು ಐದು ವರ್ಷ ಕಳೆದರೂ ನೆನಪಿನಾಳದಿಂದ ಮಾಸದೆ, ಇನ್ನೂ ಹಸುರಾಗಿ ಉಳಿದಿತ್ತು.
ಕೊಟ್ಟ ಆಫರ್ ಅನ್ನು ಪೂರ್ಣ ಮನಸ್ಸಿಂದ ಸ್ವೀಕರಿಸುತ್ತಾ ಅವಳು "ವೈಭು ನಾನು ತಯಾರಿದ್ದೇನೆ, ಆದರೆ ನಾನು ನನ್ನ ಡ್ಯಾನ್ಸ್ ಪೋರ್ಫಾರ್ಮನ್ಸ್ ಕೊಡ್ಬೇಕು, ನಡುವಲ್ಲಿ ದೀಪಕ್ ಸ್ಕಿಟ್ ಗೂ ಬಾ ಅಂದಿದ್ದಾನೆ, ಅಲ್ಲೂ ನಾನು ಹೆಜ್ಜೆ ಹಾಕಬೇಕಂತೆ.." ಅಂದಳು.
"ಸ್ಕಿಟ್ ನಲ್ಲೂ, ಡ್ಯಾನ್ಸ್ ನಲ್ಲೂ ಇದ್ದಿಯಾ.. ಎರಡು ಆಫರ್ ಆಗಲೇ.. ಅದರ ಮೇಲೆ ನಂದೊಂದು .. ಬ್ಯುಸಿ ಆರ್ಟಿಸ್ಟ್ ಅಪ್ಪ....?"
"ಸಿಲ್ಸಿಲಾ ಯೇ ಚಾಹತ್ ಕಾ... ನಲ್ಲಿ ಸೋಲೋ ಪೆರ್ಫಾರ್ಮನ್ಸ್; ಸ್ಕಿಟ್ ನಲ್ಲಿ ಏನೋ ಗೆಸ್ಟ್ ಅಪಿಯರನ್ಸ್ ಅಂತೆ, ಪರವಾಗಿಲ್ಲ ನಿನಗೂ ನಾನು ಹೆಲ್ಪ್ ಮಾಡ್ತೇನೆ"
"ಗೆಸ್ಟ್ ಅಪಿಯರೆನ್ಸ್ ಕೊಡುವಷ್ಟು ದೊಡ್ಡ ಆರ್ಟಿಸ್ಟ್ ಆದಿ ಅಷ್ಟು ಬೇಗ !!" ಅಂದು, ಆ ದಿನ ಅವಳನ್ನು ಗೇಲಿ ಮಾಡಿದ್ದೆ. ಹೋಸ್ಟ್ ಹಂಟ್ ನಲ್ಲಿ ಬೇರೆ ಯಾರು ನನಗೆ ಸೂಟ್ ಅನಿಸಲಿಲ್ಲ; ಕೊನೆಗೆ ಪ್ರೀತಿಯನ್ನೇ ಒಪ್ಪಿಸಿದೆ; ದಿನೇಶ್ ಗೆ ಹೇಳಿ ಮೊದಲಿದ್ದ ಅವಳ ಸೋಲೋ ಡ್ಯಾನ್ಸ್ ಅನ್ನು ಕೊನೆಗೆ ಹಾಕಿದೆ.
ನೀಲಿ ರವಕೆಯ ಮೇಲೆಯೆಲ್ಲಾ ಹರಡಿಕೊಂಡಿರುವ ಕೂದಲು; ಹಣೆಯ ಮೇಲೆ ಇಟ್ಟ ಬೊಟ್ಟು ಇವತ್ತು ಪ್ರೀತಿಯನ್ನು ಅವಳ ನೈಜ್ಯ ಸೌಂದರ್ಯದ ಘನಿ ಮಾಡಿತ್ತು. ಬೈತಲೆಯ ನಡುವಲ್ಲಿ ಇಳಿ ಬಿಟ್ಟ ರೋಲ್ದ್ ಗೋಲ್ಡ್ ನ 'ಮಾಂಗ್ ತಿಕಾ' ದಲ್ಲಿ ಪೋಣಿಸಿದ ಸಾದಾ ವಜ್ರ ಕೊಹಿನೂರು ಹೊಳೆದಂತೆ ಹೊಳೆಯುತ್ತಿತ್ತು.ಮೇಲಿನ ಕೊಹಿನೂರಿಗೆ ಕುಂದಣ ವೆಂಬಂತೆ ಕೆಳಗಿನ ಜೋತಿರ್ಮಯಿ ಎರಡು ಕಣ್ಣುಗಳು ಡಯಾಜ್ ಗೆ ಹೆಚ್ಚಿನ ಆಕರ್ಷಣೆ ನೀಡಿತ್ತು.ಕೆಂಪು ಸುತ್ತಿನ ಸುಂದರಿಯ ನಡುವೆ ಈ ಡಂಬು ನ ಆಗಮನವಾಯಿತು.
ನೂರು ಉದ್ಯೋಗಿಗಳು, ಅವರ ಸಂಭಂದಿಗಳು, ಕೆಂಪು ಹೊದಿಕೆಯ ಚೀರ್ ಮೇಲೆ ವಿರಾಜಮಾನರಿದ್ದರು, ಕಂದಮ್ಮ ಗಳು ಯಾವುದರ ಪರಿವಿಲ್ಲದೆ ಬದಿಯಲ್ಲೇ ಇದ್ದ ಪಾರ್ಕ್ ನಲ್ಲಿ ಆಡುತಿದ್ದರು. ಒಂದು ದೀರ್ಘ ಶ್ವಾಸ ಒಳ ತೆಕ್ಕೊಂಡು "ಹಿಯರ್ ಐ ವೆಲ್ಕಮ್ ಅವರ್ ಬಿಲೋವ್ದ್ ಸಿಇಓ ಮಿಸ್ಟರ್ ಮುರುಗನ್ ಟು ದಿ ಡಯಾಜ್" ಎಂದು ಆಮಂತ್ರಿಸಿದೆ. ಸಂಬಳ ಕೊಡುತಿದ್ದ ಧಣಿ ಯನ್ನು ಎಲ್ಲರೂ ತಮ್ಮ ಕರತಾಳದಿಂದ ಸ್ಟೇಜ್ ಗೆ ತಳ್ಳಿದರು.
ಅವರು ಮೇಲೆ ಬಂದಂತೆ ನಾನು ಸ್ಟೇಜ್ ನ ಬಲ ಬದಿಗೂ ಪ್ರೀತಿ ಎಡ ಬದಿಗೆ ಮರಳಿದೆವು. ಬಿಹಾಗ್ ಸುಳಿಯಿಂದ ಹೊರ ಬಂದಿದ್ದರೂ ಆಕೃತಿ ಇನ್ನೂ ಸ್ಟೇಜ್ ಮೇಲಿಂದ ಕೆಳಗಿಳಿದಿರಲಿಲ್ಲ. ಅದೇ ತನ್ನ ತಮಿಳಿಯನ್ ಪೋಶಾಕಿನಲ್ಲಿದ್ದ ಆಕೃತಿಯನ್ನು ಅಲ್ಲಿ ಕಂಡು "ಏನು .. ಇನ್ನೂ ಇಲ್ಲೇ ಇದ್ದಿಯಾ..?"
"ನೀಲಿ ಕುಪ್ಪಸದ ಹದ್ದೊಂದು ನನ್ನ ಗಿಳಿಗೆ ಹೊಂಚು ಹಾಕುತ್ತಿದೆ; ಎಲ್ಲಿ ಅದನ್ನು ಹಾರಿಸಿ ಹೋಗುತ್ತದೆ ಎಂದು ಈ ತಿಳಿ ಹಸಿರು ಬಣ್ಣದ ಗಿಳಿ ಕಾವಲು ಕೂತಿದೆ"
"ಅಮ್ಮಾ, ಪೋಸ್ಸಿಸ್ಸಿವ್ ಪಾರ್ಟಿ ... ಏನು ಆಗಲ್ಲ"
"ಹೌದು ವೈಭು ನಾನು ಪೋಸ್ಸಿಸ್ಸಿವ್ ನೇ, ನಿನಗೋಸ್ಕರ ಏನೂ ಮಾಡಲು ಸಿದ್ದ" ಎಂದು ತನ್ನ ಕಣ್ಣುಗಳಿಂದ ಇನ್ನೆರಡು ಹನಿ ಜಾರಿಸಿದಳು.
ಅದನ್ನು ಒರೆಸುತ್ತಾ "ಹೇ ರಾಜಾ ... ಬಿ ಚಿಲ್ , ಏನು ಆಗಲ್ಲ, ಆ ಹದ್ದಿಗೆ ಆಗಲೇ ಜೋಡಿ ಸಿಕ್ಕಾಗಿದೆ, ಈ ಗಿಳಿಗೆ ಏನು ಮಾಡಲ್ಲ" ಅಂದೆ.
ಕಣ್ಣಿ ನಿಂದ ಇನ್ನೂ ಹನಿ ಜಾರುತಿದ್ದವು, ಡಯಾಜ್ ನಲ್ಲಿ ಸಿಇಓ ಏನೇನೋ ಪ್ಲಾನ್ಸ್ ಗಳನ್ನೂ ಒದರುತಿದ್ದ; ಆಕೃತಿಯ ಮೌನವೇ ಹಿತ ವೆನಿಸುತಿತ್ತು ವಿನಃ ಅವನ ಕನಸಿನ ಗೋಪುರ ಯಾವುದೇ ಭಾವನೆ ಮೂಡಿಸಲಿಲ್ಲ.
ತಿಳಿ ಹಸುರಿನ ಗಿಳಿಯ ಮುಖವನ್ನು ಬಳಿಗೆ ತಂದು ಅದರ ಹಣೆಗೆ ಒಂದು ಮುತ್ತನ್ನಿಟ್ಟೆ.ಕೈಯಲ್ಲಿ ಕೈಗಳಿದ್ದವು. ಕ್ಷಣದಲ್ಲೇ ಅವಳು ಎಚ್ಚರವಾದಳು ನನ್ನನ್ನು ಎಬ್ಬಿಸಿ ನಾನು ಎಂದೂ ಕೇಳ ಬಯಸುತಿದ್ದ ಅದೇ ಮೂರು ಶಬ್ದವನ್ನು ಇವತ್ತು ನಾನು ಬೇಡಿ ಪಡೆಯುವ ಮುಂಚೆ ಹೇಳಿದಳು. ಕೈಯ ಹಿಡಿತ ಇನ್ನೂ ಗಟ್ಟಿಯಾಯಿತು. ಕಣ್ಣು ಗಳು ಜೊತೆ ಯಾದವು, ವಿರಹಕ್ಕೆ ಜಾರಿದ್ದ ಹನಿಗಳು ಈಗ ಸಂತೋಷಕ್ಕೆ ಬಾಗಿ ಬಳುಕಿ ಕೆಳಗೆ ಇಳಿಯುತಿದ್ದವು.
ಇನ್ನೊಂದು ಮುತ್ತಿಟ್ಟೆ, ಸುರಿಮಳೆಗೈದು ತಿಳಿ ಹಸುರಿನ ಗಿಳಿಯನ್ನು ಕಡು ಹಸಿರಿಗೆ ತಿರುಗಿಸ ಬೇಕೆಂದು ಮನ ಆಡಿಕೊಳ್ಳುತಿತ್ತು. ಅಷ್ಟರಲ್ಲಿ ಕರತಾಳನ ಹೆಚ್ಚಾಯಿತು; ಹುಚ್ಚಾದ ಮನಸ್ಸು ಮತ್ತೆ ಎಚ್ಚೆತ್ತುಕೊಂಡಿತು. ಕೈಯ ನಡುವಿಂದ ಅವಳು ತನ್ನ ಕೈ ಬಿಡಿಸಿಕೊಂಡಳು. ಅಂಗೈಗೆ ಮುತ್ತಿಟ್ಟು ದಯಾಜ್ ಗೆ ನಡಿ ಎಂದೂ ಆಜ್ಞೆ ಮಾಡಿದ್ದು ಅಸ್ಪಷ್ಟವಾಗಿ ಗೋಚರಿಸಿತು, ಕಣ್ಣು ಮಬ್ಬಾಗಿತ್ತು; ಸಂತೋಷದ ಹನಿಗಳು ನನ್ನಲ್ಲೂ ನನಗರಿವಿಲ್ಲದಂತೆ ಮೂಡಿತ್ತು.
ಹಿಡಿತ ಬಿಡಿಸಿ ನಾನು, ಮೂಡುತಿದ್ದ ಕಣ್ಣ ಹನಿಯನ್ನು ಅಲ್ಲೇ ಚಿವುಟಿ, ಎದ್ದ ಪುಳುಕದ ಅಲೆಯಿಂದ ಇನ್ನಷ್ಟು ಉಲ್ಲಸಿತನಾಗಿ ಸ್ಟೇಜ್ ನ ನಡುಬಾಗ ಪ್ರವೆಶಿದೆ, ನಿರೂಪಣೆಯಲ್ಲಿ ಈ ವರೆಗೆ ಇಲ್ಲದ ಹುರುಪು ನನ್ನ ಜೊತೆ ಸೇರಿತ್ತು. ಮುಂದಿನ ಕಾರ್ಯಕೃಮ ಕ್ಕೆ ಸ್ಟೇಜ್ ಗೆ ಡ್ರಮ್ಮರ್ ನಿಕೆಥ್ ಅನ್ನು ಕರೆದೆ. ಮುಂದಿನ ಎರಡು ನಿಮಿಷದಲ್ಲಿ ನಿಕೇತನ ತಾಳದ ಧಾಟಿಗೆ ಹಿಡಿ ಸಭೆ ಶರಣಾಯಿತು. ಆಡುತಿದ್ದ ಮಕ್ಕಳು ಈಗ ಆಟ ಬಿಟ್ಟು ಇವನ ಜೊತೆಯಾದರು. ಹಸುರ ಗಿಳಿ ಸ್ಟೇಜ್ ಬಿಟ್ಟು ಜನರ ನಡುವಲ್ಲಿ ಕುಳಿತಿದ್ದಳು.
ಡ್ರಂ ಆದ ಬಳಿಕ ಗ್ರೂಪ್ ಡ್ಯಾನ್ಸ್ ಮತ್ತು ಸ್ಕಿಟ್, ಹೀಗೆ ಕಾರ್ಯಕ್ರಮ ಮುಂದುವರಿಯಿತು. ದೀಪಕ್ ನಿರೂಪಿಸಿದ ಸ್ಕಿಟ್ ಶೋಲೆಯ ಎರಡನೇ ಅವತರಣಿಕೆ ಚೆನ್ನಾಗಿ ಮೂಡಿಬಂತು. ನಡುವಲ್ಲಿ ಪ್ರೀತಿ ಬಸಂತಿಯ ಗೆಸ್ಟ್ ಅಪಿಯರೆನ್ಸ್ ನಾಟಕವನ್ನು ಇನ್ನೂ ಎತ್ತರಕ್ಕೆ ಏರಿಸಿತು.
"ಸಿಲ್ಸಿಲಾ ಯೇ ಪ್ಯಾರ್ ಕಾ" ಹಾಡು ಶುರು ವಾಯಿತು, ಕೆಂಪು ನೀಲಿ ಪೋಷಾಕಿನಲ್ಲಿ ಪ್ರೀತಿ ಸುಂದರವಾಗಿ ಕಾಣುತಿದ್ದಳು, ಲೈಟಿಂಗ್ ನವರು ಸ್ಟೇಜ್ ನಲ್ಲಿನ ಎಲ್ಲ ದೀಪವನ್ನು ಆರಿಸಿದರು, ಅವಳ ಕೈಯಲ್ಲಿ ಹಚ್ಚಿದ್ದ ಹಣತೆಯ ಬೆಳಕಿನಲ್ಲಿ ನೃತ್ಯ ಇನ್ನೂ ಸುಂದರವಾಗಿ ಮೂಡಿ ಬಂತು.ಎಲ್ಲರೂ ಅವಳ ಹಾವ ಭಾವಕ್ಕೆ ಮರುಳಾಗಿದ್ದರು, ಒಂದು ಜೋಡಿ ಕಣ್ಣು ಮಾತ್ರ ಅವಳನ್ನು ಗಮನಿಸುವುದನ್ನು ಬಿಟ್ಟು ನನ್ನನ್ನೇ ದಿಟ್ಟಿಸಿ ನೋಡುತಿದ್ದವು, ಹಚ್ಚ ಗಿಳಿಯ ಆ ತಿಳಿ ಕಣ್ಣು ಹಣತೆಯ ದೀಪದಲ್ಲಿ ನನ್ನನ್ನೇ ದಿಟ್ಟಿಸುತಿದ್ದದ್ದು ಸ್ಪಷ್ಟವಾಗಿ ಗೋಚರಿಸುತ್ತಿತ್ತು.
ಮತ್ತೆ ನನ್ನ ಕಣ್ಣುಗಳನ್ನು ಬಳುಕುತ್ತಿರುವ ಪ್ರೀತಿಯೆಡೆಗೆ ತಿರುಗಿಸಿ ಮತ್ತೆ ಗಿಳಿಯ ಕಡೆಗೆ ತಿರುಗಿಸಿದೆ, ಕೆಂಪು ಕವರಿನ ಚೇರ್ ಇತ್ತೇ ವಿನಃ ಅಲ್ಲಿ ಆ ಗಿಳಿ ಮಾಯವಾಗಿತ್ತು. "ಪೋಸ್ಸಿಸಿವ್ ಪಾರ್ಟಿ " ಅನ್ನುತ್ತ ಮತ್ತೆ ಕಣ್ಣನ್ನು ತಿರುಗುತ್ತಿರುವ ಕೆಂಪು ಗಾಗ್ರದ ಬೆಳ್ಳಿ ಪಟ್ಟೆಯ ಕಡೆಗೆ ತಂದೆ. ಪ್ರೀತಿ ಹಾಡಿನಲ್ಲಿ ನೂರು ಪ್ರತಿಶತ ಮುಳುಗಿದ್ದಳು, ಪ್ರೇಕ್ಷಕರೂ ಕಣ್ಣ ರೆಪ್ಪೆ ಬಡಿಯದೇ ತಮ್ಮ ನೂರು ಪ್ರತಿಶತ ಇನ್ವೊಲ್ವ್ ಮೆಂಟ್ ಕೊಡುವಲ್ಲಿ ನಿರತ ರಾಗಿದ್ದರು.
ಹೆಗಲನ್ನು ಯಾರೋ ಹಿಸುಕಿದಂತಾಗಿ ತಿರುಗಿ ನೋಡಿದೆ. ಹಸಿರು ಗಿಳಿ ಮತ್ತೆ ಸ್ಟೇಜ್ ಮೇಲೆಗೆ ಹಾರಿ ಬಂದಿತ್ತು.
ನಾನು "ಹೇ ಪೋಸ್ಸೇಸ್ಸಿವ್ ಪಾರ್ಟಿ .. ಏನಮ್ಮ ಪುನಃ ಲಗಾಮು ಎಳೆಯಲು ಬಂದಿಯಾ...?"
"ಓಯ್ ಡಂಬು, ಲಗಾಮು ಇಲ್ಲ ಏನೂ ಇಲ್ಲ, ಇನ್ನೇನೋ ಕೊನೆಯ ಚರಣದಲ್ಲಿದೆ ನೃತ್ಯ, ನಂತರ ನನ್ನ ಹಾಡು ಅದಕ್ಕಾಗಿ ಮೇಲೆ ಬಂದೆ" ಎನ್ನುತ್ತಾ ಮೌನವಾಗಿಯೇ ನಕ್ಕಳು.
ಐದು ನಿಮಿಷ ಇಪ್ಪತ್ತಾರು ಸೆಕಂಡ್ ನ ಆ ಹಾಡು ಮುಗಿದದ್ದೇ ಗೊತ್ತಾಗಲಿಲ್ಲ, ಸಭಿಕರೆಲ್ಲ ಒನ್ಸ್ ಮೋರ್ ಎನ್ನುತ್ತಾ ಚಪ್ಪಾಳೆ ತಟ್ಟುತಿದ್ದರು. ಲೈಟ್ ಬಾಯ್ ಸ್ಟೇಜ್ ನ ಫೋಕಸ್ ಲೈಟ್ ಆನ್ ಮಾಡಿದ. ಪ್ರೀತಿ ಉರಿಯುತಿದ್ದ ಹಣತೆಯನ್ನು ನಂದಿಸಿದಳು. ಶುಬ್ರವಾದ ಕಣ್ಣಲ್ಲಿ ಹನಿ ಜಾರಿದ್ದು ನಡುಸ್ಟೇಜ್ ನಲ್ಲಿ ಮೈಕ್ ಹಿಡಿದ ನನಗೆ ಸ್ಪಷ್ಟವಾಗಿ ಕಾಣುತಿತ್ತು, ಆ ಹನಿಗೆ ಕಾರಣ ಹುಡುಕಲು ಸಮಯವಿಲ್ಲದೆ ನಾನು "ಕಾರ್ಯಕೃಮ ವನ್ನು ಮುಗಿಸುವ ಮುಂಚೆ ಡಿ- ಫ್ಯಾಕ್ಟರ್ ೨೦೦೫ ನ ಪ್ರೈಸ್ ದಿಷ್ಟ್ರಿಬ್ಯುಶನ್ ಗೆ ಮೆಚ್ಚಿನ ಸಿ ಇ ಓ ಅನ್ನು ಮತ್ತೊಮ್ಮೆ ಸ್ಟೇಜ್ ಗೆ ಅಮಂತ್ರಿಸುವೆ" ಎಂದೂ ಹೇಳುತ್ತಾ ಮೈಕ್ ಅನ್ನು ಓಫ್ಫ್ ಮಾಡಿದೆ.
ಡಯಾಜ್ ನಲ್ಲಿ ನಾನು ಒಬ್ಬೊಬ್ಬರ ಹೆಸರು ಓದುತಿದ್ದಂತೆ ಮುರುಗನ್ ಒಬ್ಬೊಬ್ಬರಿಗೆ ಪ್ರಶಸ್ತಿ ಪತ್ರ ಮತ್ತು ಶೀಲ್ಡ್ ಕೊಟ್ಟರು. ಆಕೃತಿಯ ಕೈಯಲ್ಲಿ ಎರಡು ಶಿಲ್ದ್ ಗಳಿದ್ದವು, ಪ್ರೀತಿ ನಾಲ್ಕು ಇವೆಂಟ್ ನಲ್ಲಿ ಶಿಲ್ದ್ ಪಡೆದು ಡಿ- ಫ್ಯಾಕ್ಟರ್ ೨೦೦೫ ಪೆರ್ಫಾರ್ಮಾರ್ ಅವಾರ್ಡ್ ತನ್ನದಾಗಿಸಿದಳು. ದೊಡ್ಡದಾದ ಇನ್ನೊಂದು ಶಿಲ್ದ್ ಸ್ವಿಕರಿಸಲು ಬಂದ ಅವಳ ಮುಖದಲ್ಲಿ ವ್ಯಾಕುಲತೆ ಇನ್ನೂ ಎದ್ದು ಕಾಣುತಿತ್ತು. ಡ್ಯಾನ್ಸ್ ಗೆಂದು ಹಾಕಿದ್ದ ರಂಗು ಗಲ್ಲದಲ್ಲಿ ಅಲ್ಲಲ್ಲಿ ಚದುರಿತ್ತು. ಕೃತಕ ನಗೆ ಮೂಡಿಸಿ ತನ್ನ ಡಿ- ಫ್ಯಾಕ್ಟರ್ ೨೦೦೫ ಪೆರ್ಫಾರ್ಮಾರ್ ಅವಾರ್ಡ್ ಸ್ವೀಕರಿಸಿದಳು, ಹಲವು ELTP ಗಳು ತಮ್ಮ ಮೊಬೈಲ್ ನಲ್ಲಿ ಸಿಕ್ಕ ಚಾನ್ಸ್ ಹೇಳಿ ಆ ಕೃತಕ ನಗುವನ್ನು ಸೆರೆ ಹಿಡಿದರು.
ಮೈಕನ್ನು ಮತ್ತೆ ಕೈಗೆತ್ತಿಕೊಂಡು "ಹಿಯರ್ ವೀ ಕಂಕ್ಲೂಡ್ ಡಿ- ಫ್ಯಾಕ್ಟರ್ ೨೦೦೫ ವಿಥ್ ಅ ಸುಪರ್ಬ್ ಸಾಂಗ್, ಲೆಟ್ ಅಸ್ ವೆಲ್ಕಮ್ ನೈಟೆನ್ಗಲ್ ಆಫ್ ಡ್ರೀಮ್ ಟೆಕ್, ಆಕೃತಿ" ಅಂದೆ.
ಆಕೃತಿ ತನ್ನ ಪ್ರಿಯ ರಾಗ ಭೈರವಿಯಲ್ಲಿ 'ಲಾಗ ಚುನರಿಮೆ ಧಾಗ್' ಹಾಡನ್ನು ಹಾಡಿ ಆಲಾಪಿಸುತಿದ್ದಳು, ಭೈರವಿ ನನ್ನ ಪ್ರಿಯ ರಾಗವೂ ಹೌದು, ಹಲವು ಭಾವನೆಗೆ ಪ್ರೇರಣೆ ನೀಡುವ ರಾಗ.
ಭೈರವಿ- ಶಾಸ್ತ್ರೀಯ ಸಂಗೀತದಲ್ಲಿ ವಿಶೇಷ ಸ್ತಾನ ಪಡೆದ ರಾಗ, ಅದರೂ ಎಲ್ಲೆಂದರಲ್ಲಿ ಹಾಡಲಾಗದ ರಾಗ; ಎಲ್ಲ ಸಂಗೀತ ಕಾರ್ಯಕ್ರಮದಲ್ಲಿ ಅದಕ್ಕೆ ಸಿಗುವ ಗೌರವೇನೋ ಸಿಗುತ್ತದೆ, ಆದರೆ ಕಲಾವಿದನಿಗೆ ಆ ರಾಗ ಎಷ್ಟೇ ಪ್ರಿಯ ವೆನಿಸಿದರು ಆ ರಾಗದ ಎರಡು ಹಾಡುಗಳನ್ನು ಹಾಡುವಂತಿಲ್ಲ, ಬೇಕಿದ್ದರೆ ಆಲಾಪವನ್ನು ತಿರುತಿರುತಿರುಗಿಸಿ ಎರಡು ನಿಮಿಷದ ಹಾಡನ್ನು ಎರಡುಗಂಟೆ ಎಳೆಯಬಹುದು. ಕೊನೆಯಲ್ಲಿ ಹಾಡುವ ಈ ರಾಗ ಮೊದಲು ಕೊಟ್ಟ ಎಲ್ಲ ಸುಖವನ್ನು ಮರೆಸಿಬಿಡುತ್ತದೆ. ಮತ್ತು ತನ್ನದೇ ಮಂಪರಿನಲ್ಲಿ ಸಭೆಯನ್ನು ಮುಳುಗಿಸಿಬಿಡುತ್ತದೆ.
ಭೈರವಿ ಇನ್ನೂ ಮುಂದುವರಿದಿತ್ತು, ಸಂಗೀತ ಬಲ್ಲದವರು ಹಸಿದ ಹೊಟ್ಟೆಗೆ ಕುರಿ ಕೋಳಿ ಇಳಿಸಲು ಶುರು ಮಾಡಿದರು. ಬದಿಯಲ್ಲಿ ಶೋಶಿಯಲ್ ಡ್ರಿಂಕ್ ಅಂತ ಕರೆಸಿಕೊಳ್ಳುವ ಬೀರ್ ನ ಸರಬರಾಜು ಇತ್ತು. ವೋಡ್ಕಾ ವೈನ್ ನಂತಹ ಸೋಶಿಯಲ್ ಡ್ರಿಂಕ್ ಗಳು ಸಿಪ್ ಸಿಪ್ ಆಗಿ ದೊಡ್ಡ ಗುಡಾಣದ ಹೊಟ್ಟೆಗಳಲ್ಲಿ ಇಳಿಯುತಿದ್ದವು.ಸಂಗೀತ ರಸಿಕ ಕೆಲವು ತಲೆಗಳು ಇನ್ನೂ ಭೈರವಿಯ ದಾಟಿನಲ್ಲಿ ತೂಗುತಿದ್ದವು.
ಭೈರವಿ ಮುಗಿದಂತೆ ಡಿ.ಜೆ ಫ್ಲೂರ್ ಶುರು ವಾಯಿತು. ಬಿಸಿರಕ್ತದ ಯುವಕ ಯುವತಿಯರು ಅದಕ್ಕೆ ಹೆಜ್ಜೆ ಹಾಕುತಿದ್ದರೆ, ಒಳಗೆ ಸೇರಿದ ದೇವರು ವರ್ಷ ದಾಟಿದ ಹಳೆ ಬಾಡಿಗಳನ್ನು ಕುಣಿಯುವಂತೆ ಮಾಡಿತ್ತು. ಹೆಂಗಸರು ತಮ್ಮ ತಮ್ಮ ಗಂಡನಿಗೆ ಸಾಥ್ ಕೊಡುತ್ತ ಸಿಪ್ ಇಳಿಸಿ ಡಿ.ಜೆ ಫ್ಲೂರ್ ನಲ್ಲಿ ಕುಣಿಯುತಿದ್ದರು.
ನಾನು ಆಕೃತಿ ಬದಿಯಲ್ಲೇ ಕುಳಿತು ಊಟ ಮುಗಿಸಿ ಎಲ್ಲ ನೋಡಿ ಆನಂದಿಸುತಿದ್ದೆವು. ೧೨ ಗಂಟೆ ಬಾರಿಸುತಿದಂತೆ ಮತ್ತೆ ಎಲ್ಲ ಲೈಟ್ ಗಳು ಆರಿಸಿದ ಲೈಟ್ ಬಾಯ್, ಡಿ.ಜೆ ನಿಂತಿತು. "ವೆಲ್ಕಮ್ ೨೦೦೬" ಎಂದು ದಿನೇಶ್ ಚೀರುತಿದ್ದ, ಉಳಿದವರು ಹೆಪ್ಪಿ ನ್ಯೂ ಇಯರ್ ಎಂದು ಒಬ್ಬರನೊಬ್ಬರು ಅಭಿನಂದಿಸುತಿದ್ದರು.
ಹತ್ತು ನಿಮಿಷದಲ್ಲಿ ಎಲ್ಲ ತಿಳಿಯಾಯಿತು, ಸೇರಿದ್ದ ಸಭೆ ಗುಂಪು ಗುಂಪಾಗಿ ವಿಸರ್ಜಿಸುತಿದ್ದವು. ಪ್ರೀತಿ ನಮ್ಮಿಬ್ಬರ ಬಳಿ ಬಂದು ಕುಳಿತುಕ್ಕೊಂಡಳು, ಅಮಲು ಏರಿತ್ತು. ಅವಳು "ವೈಭೂ ಐ ಅಂ ಡಿಚೆಡ್!! ನಾನು ನಿನ್ನನ್ನು ಎಕ್ಸೆಪ್ಟ್ ಮಾಡಿದ್ರೆ ನನಗೆ ಈ ಗತಿ ಬರ್ತಿರಲಿಲ್ಲ.. ಸಾರೀ ವೈಭು ನಾನು ನಿಂಗೆ ಹುರ್ಟ್ ಮಾಡಿದೆ" ಎನ್ನುತ್ತಾ ಕೆನ್ನೆಗೊಂದು ಮುತ್ತಿಟ್ಟಳು. ಏನು ನಡೆಯುತ್ತಿದೆ ತಿಳಿಯಲಿಲ್ಲ. ಆಕೃತಿ ಕೆಂಡಾಮಂಡಲಳಾದಳು.
ನಾನು ಸುದಾರಿಸುತ್ತ "ಹೇ ಪ್ರೀತಿ ನಿನಗೆ ಅಮಲೇರಿದೆ ಎನೇನೋ ಮಾತಾದಬೇಡ, ಬಾ ಹೋಗೋಣ ಮನೆಗೆ" ಎಂದೆ. ಮೇಲೆಳಲಾಗದಷ್ಟು ನಶೆಯಲ್ಲಿದ್ದ ಅವಳನ್ನು ನಾನು ಆಕೃತಿ ಸೇರಿಸಿ ಮೇಲೆತ್ತಿದೆವು.
ಅವಳನ್ನು ನಡುವಲ್ಲಿ ಕುಳ್ಳಿರಿಸಿ ನಾನು ಮುಂದೆ ಪ್ರೀತಿ ಹಿಂದೆ ಕುಳಿತುಕ್ಕೊಂಡೆವು. ನಾವಿಬ್ಬರೂ ಮೌನದಲ್ಲಿದ್ದೆವು ಅವಳು ಅಮಲಲ್ಲೇ ಮಾತಾಡುತಿದ್ದಳು "ಹೇ ವೈಭು, ನೀನು ಎಷ್ಟು ಒಳ್ಳೆಯವನು, ನಿನ್ನನ್ನು ನಾನು ಒಪ್ಪ ಬೇಕಿತ್ತು ಅವತ್ತು, ಐ ಲವ್ ಯು ಕಣೋ" ಎಂದು ಹಿಂಬದಿಯಿಂದ ಬೆನ್ನಿಗೆ ಮುತ್ತಿಟ್ಟಳು.
ಮೌನದಲ್ಲಿದ್ದ ನಾನು "ಪ್ರೀತಿ ನಾನು ಈಗ ಆಕೃತಿಯನ್ನು ಪ್ರೀತಿಸುತ್ತ ಇದ್ದೇನೆ, ನಿಂಗೆ ವಿವೇಕ್ ಪ್ರೀತಿಸ್ತಾ ಇದ್ದಾನೆ , ಯಾಕೆ ಈ ತಾರಾ ಆಡ್ತಾ ಇದ್ದಿಯಾ..?ಸುಮ್ನೆ ಕೂತ್ಕೊಂಡಿರು.." ಅಂದೆ.
"ವಿವೆಕತನ ಇಲ್ಲದ ವಿವೇಕ್ ಎಲ್ಲಿ ನೀನೆಲ್ಲಿ,,, ಇಟ್ಸ್ ಓಕೆ ನೀನು ಆಕೃತಿ ಯಾವನಾದರೂ ಪರವಾಗಿಲ್ಲ, ನಿನ್ನ ಜೀವನದಲ್ಲಿ ನನಗೂ ಸಲ್ಪ ಸಮಯ ಕೊಟ್ಟರೆ ಸಾಕು, ಇಬ್ಬರ ನಡುವೆ ಹೀಗೆ ಇರುತ್ತೇನೆ" ಎನ್ನುತ್ತಾ ಇನ್ನೊಂದು ಮುತ್ತಿಟ್ಟಳು. ಇನ್ನೂ ಮಾತಾಡುವುದು ಸೂಕ್ತವಲ್ಲ ಎನ್ನುತ್ತಾ ನಾನು ನನ್ನ ಪಾಡಿಗೆ ಗಾಡಿ ಓಡಿಸುತಿದ್ದೆ, ಚಳಿ ಹೆಚ್ಚುತ್ತಿತ್ತು, ಆದರೂ ಹಿಂದಿನಂತೆ ಬೆಚ್ಚನೆಯ ಅನುಭವ ವಾಗುತ್ತಿರಲಿಲ್ಲ.
ಬದಿಯ ಗಾಜಿನಿಂದ ಆಕೃತಿಯನ್ನು ನೋಡಿದೆ, ಕಣ್ಣುಗಳಿಂದ ಹರಿವು ಸರಾಗವಾಗಿ ಸಾಗುತಿತ್ತು, ಹೆಗಲ ಮೇಲೆ ಪ್ರೀತಿ ಮಲಗಿದ್ದಳು.
ನಲವತ್ತು ನಿಮಿಷದಲ್ಲಿ ಹಾಸ್ಟೆಲ್ ತಲುಪಿ ಪ್ರೀತಿಯನ್ನು ಎಬ್ಬಿಸಿದೆ. ಚಳಿ ಒಳಗಿನ ನಶೆಯನ್ನು ಇಳಿಸಿತ್ತು ಪ್ರೀತಿ ವಾಸ್ತವಕ್ಕೆ ಮರಳಿದ್ದಳು. "ಬಾಯ್ ಪ್ರೀತಿ" ಎನ್ನುತ್ತಾ ಬೈಕ್ ಸ್ಟಾರ್ಟ್ ಮಾಡಿದೆ. ಪ್ರೀತಿ ಬೈಕಿಂದ ಎದ್ದರೂ ಆಕೃತಿ ನನ್ನ ಸಮೀಪಿಸಿರಲಿಲ್ಲ, ಕೊಪದಲ್ಲೇ ಕೆಂಪಾಗಿದ್ದಳು.
ಪ್ರೀತಿ ನನಗೆ ಬಾಯ್ ಎನ್ನುತ್ತಾ "ವೈಭು ನಿಮ್ದಿಬ್ಬರ್ದ್ದು ಮೇಡ್ ಫಾರ್ ಈಚ್ ಅದರ್ ಜೋಡಿ, ಆಲ್ ದಿ ಬೆಸ್ಟ್, ನಿನ್ನ ಪಡಿ ಬೇಕಾದ್ರೆ ಆಕೃತಿ ಪುಣ್ಯ ಮಾಡಿರಬೇಕು, ನಾನು ಲುಕ್ ಕಳಕೊಂಡು ಬಿಟ್ಟೆ" ಅಂದಳು ನಿರಾಶೆಯಿಂದ.
"ಥ್ಯಾಂಕ್ಸ್ ಪ್ರೀತಿ, ಟೆಕ್ ಕೇರ್" ಎನ್ನುತ್ತಾ ಅಕ್ಸಲೇಟರ್ ಏರಿಸಿದೆ. ಪ್ರೀತಿ "ಹೋಲ್ಡ್ ಆನ್ , ಒಂದು ನಿಮಿಷ"ಅಂದಳು.
"ಏನಾಯ್ತು ಈಗ...?"
"ನಿನ್ನ ಬ್ಲೂ ಟೂತ್ ಆನ್ ಮಾಡು ಸರ್ಪ್ರೈಸ್ ಇದೆ" ಅಂದಳು.
ಮೊಬೈಲ್ ಗೆ ಯಾವುದೋ ಫೈಲ್ ಕಳುಹಿಸಿ ನಮಗೆ ಬಾಯ್ ಹೇಳುತ್ತಾ ಹಾಸ್ಟೆಲ್ ಗೆಟ್ ಪ್ರವೇಶಿಸಿದಳು. ಅವಳು ಆಚೆ ಹೋಗುತಿದ್ದಂತೆ ಆಕೃತಿ ಕೈಯಿಂದ ಮೊಬೈಲ್ ಕಸಿದುಕ್ಕೊಂಡಳು. ನಾನು ಸುಮ್ಮನಾದೆ. ಬೈಕ್ ಶುರು ಮಾಡಿ ಗೇರ್ ಏರಿಸಿದೆ. ಮರುಕ್ಷಣದಲ್ಲಿ ಅವಳು ನನ್ನ ಅಪ್ಪಿ ಕುಳಿತಿದ್ದಳು. ಮೊಬೈಲ್ ಅನ್ನು ನನ್ನ ಮುಂದೆ ಇಟ್ಟಳು.
ಎರಡು ಗಿಳಿಗಳ ಪ್ರೇಮ ಸಲ್ಲಾಪ ಅಲ್ಲಿತ್ತು. ಗಂಡು ಗಿಳಿ ಹೆಣ್ಣು ಗಿಳಿಯ ಹಣೆಗೆ ಮುತ್ತಿಡುವ ಚಿತ್ರ ನನ್ನ ಮೊಬೈಲ್ ಸ್ಕ್ರೀನ್ ನಲ್ಲಿ ಅಲಂಕರಿಸಿತ್ತು. ಸ್ಟೇಜ್ ನಲ್ಲಿ ಬಲ ಬದಿಯ ಮೂಲೆಯಲ್ಲಿ ಬಿಡಿಸಿದ ಚಿತ್ರ ಎಡಬದಿಯಿಂದ ಪ್ರೀತಿ ತನ್ನ ಕೆಮರಾ ದಲ್ಲಿ ಸೆರೆ ಹಿಡಿದಿದ್ದಳು, ಈಗ ಅದು ನನ್ನ ಮೊಬೈಲ್ ಆಕ್ರಮಿಸಿತ್ತು.
ಹುಡುಕುತಿದ್ದ ಬೆಚ್ಚನೆಯ ಅನುಭವ ಮತ್ತೆ ಸಿಕ್ಕಂತಾಯಿತು, ಎರಡು ಗಿಳಿಗಳು ಒಂದನ್ನೊಂದು ಮುದ್ದಿಸುತಿತ್ತು, ಗಂಟೆ ಒಂದು ದಾಟಿದರೂ , ಒಂಟಿ ರಸ್ತೆಯಲ್ಲಿ ಸ್ವಚ್ಚಂದವಾಗಿ ಹಾರುತ್ತಿತ್ತು.
ಮುಂದಿನ ಸಿಪ್