ಅ ಕಪ್ ಓಫ್ ಕಾಫಿ ... ಸಿಪ್ - ೨೬
ಸಿಪ್ - ೨೬
ಅ ಕಪ್ ಓಫ್ ಕಾಫಿ ... ಒಂದು ಸಿಪ್ ಪ್ರೀತಿಯೊಂದಿಗೆ, ಮತ್ತೊಂದು ಜೀವನ ದೊಂದಿಗೆ....
ತಡರಾತ್ರಿಯವರೆಗೆ ಇಬ್ಬರಿಗೂ ಸಂಪರ್ಕಿಸಲು ಪ್ರಯತ್ನಿಸಿ ಸುಸ್ತಾದೆ, ಒಂದು ನಂಬರ್ ಸಂಪರ್ಕಕ್ಕೆ ಬರುತಿದ್ದರೂ ಅವಳು ಕರೆ ಕಟ್ ಮಾಡುತಿದ್ದಳು, ಇನ್ನೊಬ್ಬಳು ಸಿಮನ್ನೇ ತೆಗೆದಿಟ್ಟಿದ್ದಳು.ಕನಸಿನ್ನಲ್ಲದರೂ ಪ್ರೀತಿಸುವ ಅಂದುಕ್ಕೊಳ್ಳುತ್ತಾ ಮನೆಗೆ ಬಂದವನೇ ಊಟನೂ ಮಾಡದೆ ಕಂಬಳಿ ಹೊದ್ದುಕ್ಕೊಂಡೆ. ತಿರುಗುತ್ತಿರುವ ಫಾನ್ ನೋಡುತ್ತಾ ನೆನಪಿನ ಪುಟವನ್ನು ತಿರುವುತಿದ್ದೆ.ಅಲ್ಲಿ ಚಕ್ರಾವೃತವಾಗಿ ತಿರುಗುತ್ತಿರುವ ಜೇಡನ ಬಲೆಯಲ್ಲಿ ಮನಸ್ಸು ನೆಟ್ಟಿತ್ತು.
ಕೋಪದಲ್ಲಿ ಎಸೆದಿದ್ದ ನೋಕಿಯ 'ಒರು ಮಾಲೈ' ಹಾಡಲು ಶುರು ಮಾಡಿತು.
ಮನೆಯಿಂದ ಅಮ್ಮ ಕರೆ ಮಾಡಿದ್ದರು. ನಾನು ಅವರನ್ನು ಮರೆತರೂ ಅವರು ನನ್ನನ್ನು ಮರೆತಿರಲಿಲ್ಲ.
ಜಗತ್ತಿನಲ್ಲಿ ಅತಿ ದೊಡ್ಡ ಪ್ರೀತಿ ಎಂದರೆ ಒಂದು ಮಾತೃ ಪ್ರೀತಿ.
ಮೊದಲೇ ವ್ಯಾಕುಲತೆಯಲ್ಲಿ ಮುಳುಗಿದ್ದ ನಾನು ಇನ್ನೂ ವ್ಯಾಕುಲ ನಾದೆ. ಅಮ್ಮ "ಏನೋ, ಇನ್ನು ಆಫೀಸ್ ನಲ್ಲಿ ಇದ್ದಿಯಾ...?"
'ಇಲ್ಲ ಮನೆಗ ಬಂದಿರುವೆ' ಅಂತ ಹೇಳೋಣ ಅಂದುಕೊಂಡೆ, ಆದ್ರೆ ಮನೆಗೆ ಬಂದಾದ ಬಳಿಕವು ಯಾಕೆ ಕರೆ ಮಾಡಲಿಲ್ಲ, ನನ್ನ ಆರೋಗ್ಯ ಸರಿ ಇಲ್ಲವೋ ಎಂದು ಅವರು ಚಿಂತಿಸುತ್ತಾರೆ, ಎನ್ನುತ್ತಾ "ಇಲ್ಲಮ್ಮ ಇನ್ನೂ ಆಫೀಸ್ ನಲ್ಲಿದ್ದೇನೆ" ಎಂದು ಸುಳ್ಳು ಹೇಳಿದೆ.
ಮರು ಮಾತಿಗೆ ಅಮ್ಮ "ನಿನ್ನ ಮೇನೇಜರ್ ಗೆ ಕರುಣೆನೆ ಇಲ್ಲ, ಕತ್ತೆ ದುಡಿಸಿಕ್ಕೊಂಡಂತೆ ನಿನ್ನನ್ನು ದುಡಿಸಿಕೊಳ್ಳುತಿದ್ದಾನೆ. ವೈಭು ಇವತ್ತಿನ ಕೆಲಸ ಸಾಕು, ಬೆಳಗ್ಗೆ ಬೇಗ ಬಂದಿದ್ದಿಯಲ್ಲ, ಎಂಟರಿಂದ ಹನ್ನೊಂದು ಅಂದರೆ ದಿನದ ಹದಿನೈದು ಗಂಟೆ ಆಯಿತು, ಮನೆಗೆ ಹೋಗಿ ಮಲಗಿಕೋ ಕಂದಾ" ಅಂದರು.
ಅವರ ಮಾತಿನಿಂದ ಚೆಂಡಿ ಯಾಯಿತು ಮನಸ್ಸು. ನಿನ್ನೆ ರಾತ್ರಿ ಅವರಿಗೆ ಬೆಳಗ್ಗಿನ ಮೀಟಿಂಗ್ ಬಗ್ಗೆ ಹೇಳಿದ್ದೆ, ಜೀವ ಮನೆಯಲ್ಲಿದ್ದರು ಅವರ ಆತ್ಮ ನನ್ನೊಂದಿಗೆ ಇತ್ತು. ಅದು ನನ್ನ ಪ್ರತಿ ಆಗು ಹೋಗುಗಳನ್ನು ಗಮನಿಸುತ್ತಿತ್ತು.
ನಾನು "ಇಲ್ಲ ಅಮ್ಮಾ, ಆಯಿತು, ಇನ್ನೇನೋ ಹೊರಟೆ ಮನೆಗೆ" ಅಂದೆ.
"ಈಗ ಉಟಕ್ಕೆ ಏನು ಮಾಡ್ತೀಯಾ..? ಇಷ್ಟು ಹೊತ್ತಿಗೆ ಆ ಡಬ್ಬವಾಲನ ಡಬ್ಬ ಇಂಗಿ ಹೋಗಿರಬಹುದು, ಹೊರಗೆ ಏನಾದ್ರೂ ಸಿಕ್ಕರೆ ತಿಂದು ಹೋಗು."
"ಇಲ್ಲ ಅಮ್ಮ , ಊಟ ಆಗ್ಲೇ ಒಂಬತ್ತಕ್ಕೆ ಮುಗಿಸಿದೆ"
"ಸುಳ್ಳು ಹೇಳ್ತಾ ಇದ್ದಿಯಾ"
"ಇಲ್ಲಮ್ಮಾ, ನಿಜಾ ಆಗಲೇ ಮುಗ್ಸಿದೆ"
"ಏನು ಗಾಡಿನಾ... ಹಾಳು ಮೂಳು ತಿಂದು ಹೊಟ್ಟೆ ಹಾಳು ಮಾಡಿಕ್ಕೊಳ್ತೀಯ"
"ಇಲ್ಲಮ್ಮಾ ಆಗ್ಲೇ ಮೆನೆಜೆರ್ ಒಟ್ಟಿಗೆ ಹೋಗಿ ಹೋಟೆಲ್ ನಲ್ಲಿ ಊಟ ಮುಗಿಸಿದೆ, ನಂತರ ಅವರು ನನ್ನನ್ನು ಮನೆಗೆ ಬಿಟ್ತಾರೆ ಅಂತ ಹೇಳಿದ್ರು, ಆದ್ರೆ ಕೆಲಸ ಮುಗಿದಿಲ್ಲ ಹೇಳಿ ಊಟ ಮುಗಿಸಿ ಓಪಸ್ ಇಲ್ಲಿಗೆ ಬಂದೆ" ಅಂದು ಇನ್ನೊಂದು ಸುಳ್ಳು ಹೇಳಿದೆ.ಒಂದು ದಿನಾನು ಕೆಲಸದ ವಿಷಯ ಬಿಟ್ಟು ಬೇರೆ ವಿಷಯ ಮಾತನಾಡದ ಡೆಮೆಜೆರ್ ಗೆ ಸುಮ್ನೆ ಕ್ರೆಡಿಟ್ ಕೊಟ್ಟೆ.
"ಹೋಗು ಕಂದಾ ನಾಳೆ ಮಾಡು ಕೆಲಸ, ಇಲ್ಲನ್ತಾದ್ರೆ ನಂಗೆ ನಿದ್ದೆ ಬರಲ್ಲ"
"ನೀನು ಸುಮ್ನೆ ನನ್ನ ಬಗ್ಗೆ ಆಲೋಚನೆಮಾಡಿ ತಲೆ ಕೆಡಿಸ್ಕೊಳ್ತಿದ್ದಿಯ, ನಂಗೆ ಏನೂ ಆಗಲ್ಲ."
"ಸರಿ ವೈಭು" ಎನ್ನುತ್ತಾ ಅಮ್ಮ ಕರೆ ಕಟ್ ಮಾಡಿದರು.
ನಿಜ ಪ್ರೀತಿಯ ಅಗಾಧತೆ ಅರ್ಥವಾಗುತ್ತಿತ್ತು, ಹೆತ್ತ ಮಡಿಲಲ್ಲಿ ಹೊರಳಲು ಮನಸ್ಸು ಮಗುವಾಗಿತ್ತು. ದಿಂಬನ್ನು ತಬ್ಬಿ 'ಅಮ್ಮಾ ' ಎನ್ನುತ್ತಿದ್ದಂತೆ ಕಣ್ಣೀರು ಕಟ್ಟೆ ಒಡೆದು ಸರಾಗವಾಗಿ ಹೊರ ಹರಿಯಿತು.
ಇವತ್ತು ನನ್ನೊಂದಿಗೆ ನಡೆದ ವಿಚಾರವನ್ನು ಅವರೊಂದಿಗೆ ಹಂಚುವ ಮನಸ್ಸಾಯಿತು, ಆದರೆ ಜೆನೆರೆಶನ್ ಗ್ಯಾಪ್, ಈ ಜೆನೆರೆಶನ್ ನ ಮನಸ್ಥಿತಿ ಅವರಿಗೆ ಅರ್ಥವಾಗದು, ಹಳ್ಳಿಯಲ್ಲಿ ಬೆಳೆದ ಮುಗ್ದ ಮನಸ್ಸು ಅದು.ಬಿಕ್ಕಳಿಕೆ ಮತ್ತೆ ಹೆಚ್ಚಿತು, ಮನಸ್ಸಿನ ಭಾವನೆಗಳನ್ನು ತೆರೆದಿಡಲು, ಇನ್ನೊಬ್ಬನೊಡನೆ ಹಂಚಲು ಎರಡನೇ ವ್ಯಕ್ತಿಯ ಕೊರತೆ ನನ್ನನ್ನು ಕಾಡಲಾರಂಬಿಸಿತು. ಜೊತೆಗೆ ಬೆಳೆದ ಅಕ್ಕನಿಗೆ ಈ ವಿಷಯ ಹೇಳೋಣ ಎಂದರೆ ಅವಳು ಇದನ್ನು ಪೋಸ್ಸಿಟಿವ್ ಆಗಿ ತೆಗೆಯುವುದಕ್ಕಿಂತ ನೆಗೆಟಿವ್ ಆಗಿ ತೆಗೆಯುವ ಸಾದ್ಯತೆ ಹೆಚ್ಚೇ ಇತ್ತು. ಏನು ಮಾಡುವುದೆಂದು ತೋಚದೆ ಮೌನಿಯಾಗಿ ದಿಂಬನ್ನು ತಬ್ಬಿ ಕುಳಿತಿದ್ದೆ.
ಬಾಗಿಲಿನ ಮೂಲೆಯಲ್ಲಿ ಇಟ್ಟ ಡಬ್ಬವಾಲನ ಡಬ್ಬ ನನ್ನನ್ನು ಕೈ ಬೀಸಿ ಕರಿಯುತಿತ್ತು, ಹಸಿವಿತ್ತು , ತಿನ್ನಲು ಮನಸ್ಸಿಲ್ಲ, ಆದ್ರೆ ಅಮ್ಮನ ಮಾತಿಗೆ ನಾನು ತಿನ್ನಲೇ ಬೇಕು, ಅವರಿಗಂದ ಸುಳ್ಳು ನಿಜ ಮಾಡ್ಬೇಕು ಎಂದೆನಿಸಿ ಕ್ಯಾರಿಯರ್ ಅನ್ನು ಪೇಪರ್ ಹಾಸಿ ಬಿಚ್ಚಿ ತಿನ್ನಲು ಕುಳಿತೆ, ಅರ್ದ ರೋಟಿ ಗಂಟಲಿಂದ ಕೆಳಗೆ ಇಳಿಯಲಿಲ್ಲ. ದುಃಖ ಉಮ್ಮಳಿಸಿ ಬರುತಿತ್ತು,ಮನಸ್ಸಿನ ಭಾವನೆ ಯ ಜ್ವಾಲಾಮುಖಿ ಕಣ್ಣಲ್ಲಿ ಲಾವಾರಸವಾಗಿ ಹೊರ ಹರಿಯುತಿತ್ತು.
ಇಲ್ಲ ಸಲ್ಲದ ಆಲೋಚನೆಗಳು ಲಗಾಮಿಲ್ಲದ ಮನಸ್ಸಿಗೆ ಲಗ್ಗೆ ಇಡುತಿದ್ದವು,
'ಇದರಿಂದ ಮುಕ್ತಿ ಹೇಗೆ..? ಅ ಸಿಪ್ ಆಫ್ ಹಾಟ್ ಡ್ರಿಂಕ್ಸ್..?'
'ಹೌದು, ಮೊನ್ನೆ ಸಂಜೆಯಿಂದ ರಾತ್ರಿ ಅದದ್ದೆ ಗೊತ್ತಾಗಲಿಲ್ಲ, ಬೆಳಗ್ಗಿನಿಂದ ಹೊಸ ಮನುಷ್ಯನಾಗಿದ್ದೆ.'
'ಪ್ರೀತಿಯಲ್ಲಿ ಬಿದ್ದವರಿಗೆ ಅದರಿಂದ ಹೊರಬರಲು ಶಾಶ್ವತ ಪರಿಹಾರ ತಿಳಿಯದು, ಆದ್ರೆ ಒಂದು ಹಾಟ್ ಸಿಪ್ ಟೆಂಪರರಿ ಪರಿಹಾರ ಒದಗಿಸುತ್ತದೆ'
ಮನಸ್ಸಿನ ಇನ್ನೊಂದು ಮೂಲೆಯಲ್ಲಿ "ವೈಭು ನೀನು ದೇವದಾಸ್ ಆದಿಯೇನೋ... ಆಫ್ಟ್ರೋಲ್ ಒಂದು ಹುಡುಗಿಗೊಸ್ಕರ..?" ಎಂಬ ಪ್ರಶ್ನೆ ಎದ್ದಿತು.
ಮೌನವೇ ಉತ್ತರವಿತ್ತು ಗೊಂದಲದ ಗೂಡಿನಲ್ಲಿ. ಕೆರಿಯರ್ ನಲ್ಲಿದ್ದ ಅನ್ನ ರೋಟಿ ಎಲ್ಲ ಡಸ್ಟ್ ಬಿನ್ ಗೆ ಹಾಕಿ ತೊಳೆದು, ಜೆಕ್ಕೆಟ್ ತೊಟ್ಟು ಬೈಕ್ ಏರಿ ಸೀದಾ ನಡುರಾತ್ರಿಯ ಔಷದಿ ಅಂಗಡಿಯತ್ತ ಬೈಕ್ ಓಡಿಸಿದೆ.
ಶುಕ್ರವಾರ ಶನಿವಾರ ರಾತ್ರಿ ಒಂದು-ಎರಡರ ತನಕ ತೆರೆದಿರುವ ಬಾರ್ ಬಾಗಿಲುಗಳು ಸೋಮವಾರ ಬಾಗಿಲು ಹಾಕಿದ್ದವು. ಒಂದು ರೋಡ್ ಬಿಟ್ಟು ಇನ್ನೊಂದು ಹೀಗೆ ರೋಡ್ ರೋಡ್ ಸುತ್ತಿದೆ. ಇಲ್ಲ, ಇಡಿ ಪುಣೆಯಲ್ಲಿ ಎಣ್ಣೆ ಕೊಡುವವರು ನನಗೆ ಕಾಣಲಿಲ್ಲ ಒಂದು ಗಂಟೆಯ ನಡುರಾತ್ರಿಯಲ್ಲಿ. ಕೊನೆಯದಾಗಿ ಸ್ಟೇಶನ್ ಬಳಿ ಇರುವ ವೈನ್ ಶಾಪ್ ನೋಡಿ ಹೋಗೋಣ ಎಂದು ಅಲ್ಲಿಗೆ ಬೈಕ್ ಹಾಯಿಸಿದೆ. ಅದೂ ಬಂದಾಗಿತ್ತು.ಬೈಕ್ ತಿರುಗಿಸಿ ಬಂದದಾರಿಯಲ್ಲೇ ಮರಳುವ ಎನ್ನುವಷ್ಟರಲ್ಲಿ ಇನ್ನೂ ಸರಿಯಾಗಿ ಮೀಸೆ ಮೂಡದ ಹುಡುಗನ ಕೈಯಲ್ಲಿ ಕಪ್ಪಗಿನ ಪ್ಲಾಸ್ಟಿಕ್ ಗಾಡಿಯನ್ನು ಆಫ್ ಮಾಡಿಸಿತು.
ಎದುರಿಂದ ಶಾಪ್ ಏನೋ ಬಂದಿತ್ತು, ಎಣ್ಣೆ ಸರಬರಾಜು ಹಿಂದಿನ ಬಾಗಿಲಿನಿಂದ ಅರಾಮಾಗೆ ನಡೆಯುತ್ತಿತ್ತು. ಹಿಂದಿನ ಬಾಗಿಲು ಅರ್ದ ತೆರೆದಿತ್ತು. ಮೊದಲಿಗೆ ಹೊರಗೆ ನಿಂತ ವ್ಯಕ್ತಿಗೆ ಹಣ ಕೊಟ್ಟು ಬೇಕಾದ ಐಟಂ ಹೇಳಿದರೆ ಅವನು ಒಳಗಿಂದ ಹೇಳಿದ ಐಟಂ ತಂದು ಕೊಡುತಿದ್ದ. ಕೈಗೆ ಇನ್ನೂರು ರುಪಾಯಿ ಕೊಟ್ಟು ಒಂದು ಕ್ವಾಟರ್ ತಂದು ಕೊಡಲು ಹೇಳಿದೆ. ಎರಡೇ ನಿಮಿಷದಲ್ಲಿ ಅವನು ಪೇಪರ್ ನಲ್ಲಿ ಸುತ್ತಿ ಮಾಲನ್ನು ನನ್ನ ಕೈಯಲ್ಲಿ ಇಟ್ಟಿದ್ದನು.
ಬೈಕ್ ಏರಿ ಮತ್ತೆ ರೂಂ ನ ದಾರಿ ಹಿಡಿದೆ. ಹೈವೇ ಯಲ್ಲಿ ಸಾಗುತಿದ್ದಂತೆ, ಬದಿಯಲ್ಲಿನ ಬಯಲು ಮತ್ತೆ ಕಾಲೇಜ್ ದಿನವನ್ನು ನೆನಪಿಸುತ್ತಿತ್ತು., ತಲೆಯ ಮೇಲೆ ಪೂರ್ಣ ಚಂದಿರ ನನ್ನ ಪರಿಸ್ತಿತಿ ನೋಡಿ ಮುಖವನ್ನರಳಿಸಿ ನಗುತಿದ್ದ. ಬೈಕನ್ನು ಹೈವೇ ಇಂದ ಹೊರ ಹೋಗುವ ಕಿರುದಾರಿಗೆ ತಿರುಗಿಸಿದೆ. ಮುಂದೆ ಆ ದಾರಿ ನಡುವಲ್ಲೇ ಡಾಮರು ಕಳೆದು ಕಾಲುದಾರಿ ಯಾಯಿತು. ಬೈಕನ್ನು ಅಲ್ಲೇ ಇಟ್ಟು ಬದಿಯಲ್ಲಿದ್ದ ಬಯಲಲ್ಲಿ ಒಂಟಿಯಾಗಿ ನಡೆಯಲು ಶುರುಮಾಡಿದೆ. ನಡುವಲ್ಲಿ ಒಂದು ಬಂಡೆಯಲ್ಲಿ ಕುಳಿತು ಬಾಟಲ್ ತೆರೆದೆ.
ಮತ್ತೆ ಮನಸ್ಸು "ದೇವದಾಸ ನಾಗ್ತಿದ್ದಿಯೇನೋ, ವೈಭು ..?" ಎಂದು ಪ್ರಶ್ನೆ ಕೇಳುತಿತ್ತು.
ತಲೆಯಲ್ಲಿ ಈಗ ಯಾವುದೇ ಟೆನ್ಶನ್ ಇರಲಿಲ್ಲ, ಯಾವುದೇ ನೋವಿರಲಿಲ್ಲ, ಧ್ವೇಷ ವಿರಲಿಲ್ಲ. ಎಲ್ಲ ಈ ಎರಡು ಗಂಟೆಯಲ್ಲಿ ಆವಿಯಾಗಿ ಬತ್ತಿ ಹೋಗಿತ್ತು. ಕೈಯಲ್ಲಿದ್ದ ಬಾಟಲ್ ನ ಕೊರ್ಕ್ ತೆರೆದಾಗಿತ್ತು. ಇನ್ನೇನೋ ಗುಟುಕಿಸಬೇಕು ಅನ್ನುವಷ್ಟರಲ್ಲಿ
ನನ್ನ ಬಗ್ಗೆ ಚಿಂತಿಸುತಿದ್ದ ಅಮ್ಮನ ನೆನಪಾಯಿತು.
'ಹೌದು, ನಾನು ಅವರ ನಂಬಿಕೆಗೆ ಧ್ರೋಹ ಬಗೆಯುತಿದ್ದೇನೆ. ಅವರು ನನ್ನನ್ನು ಯಾವುದೇ ದುರಭ್ಯಾಸ ವಿಲ್ಲದ ಅಪ್ಪಟ ಚಿನ್ನ ಎಂದು ನಂಬಿದ್ದಾರೆ...'
ಕಣ್ಣು ಬಾಟಲ್ ಒಳಗೆ ತೇಲುತಿದ್ದ ನೊರೆಯಲ್ಲಿನ ಮೇಲಿನ ಚಂದ್ರನ ಬಿಂಬವನ್ನು ನೋಡುತ್ತಿತ್ತು, ಚಂದ್ರನಲ್ಲಿ ಅಮ್ಮನ ನಗುವ ಮುಖ ಕಾಣುತಿತ್ತು, ಆ ನಗುವಿಗೆ ಕಾರಣ ನಾನಾಗಿದ್ದೆ ;
'ನಾನೇ ಆ ನಗುಮುಖವನ್ನು ಯಾಕಾಗಿ ಬಾಡಿಸಲಿ..?'
'ಟೆಂಪರರಿ ರಿಲೀಫ್ ಗಾಗಿ ಪೆರ್ಮನೆಂಟ್ ಸುಖಕ್ಕೆ ಏಕೆ ಮಸಿ ಬಳಿಬೇಕು..?' ಪ್ರಶ್ನೆಗಳೆಲ್ಲ ಏಳಲಾರಂಬಿಸಿದವು.
'ಮೋಜಿಗಾಗಿ ಕುಡಿ, ಆದರೆ ಅದು ಜೂಜು ಆದರೆ ನಿನ್ನನ್ನೇ ಒದ್ದು ಬಿಡುತ್ತದೆ'' ಎಂಬೆಲ್ಲ ಸಿದ್ಧಾಂತಗಳು ನಗುವ ಆ ನೊರೆಯಲ್ಲಿ ತೇಲಿ ಬರುತಿತ್ತು. ಕೆಳಗೆ ಬಿದ್ದ ಕೊರ್ಕ್ ಅನ್ನು ಮೇಲೆತ್ತಿದೆ. ಬಾಟಲ್ ಅನ್ನು ಕೆಳಗೆ ಚೆಲ್ಲಿದೆ, ಎಣ್ಣೆ ಭೂಮಿಯೊಳಗೆ ಇಳಿಯಿತು, ನಗುವ ಮೊಗ ಮರೆಯಾಯಿತು; ಇಷ್ಟು ಹೊತ್ತು ಬಾಡಿದ್ದ ನನ್ನ ಮುಖದಲ್ಲಿ ಹೊಸ ವಿಶ್ವಾಸ ಮತ್ತು ಏನೋ ಸಾಧಿಸಿದ ಸಾರ್ಥಕತೆ ನಗಲು ಶುರುಮಾಡಿತು.
'ಏಕಾಂತದಲ್ಲಿ ಮನಸ್ಸು ಹುಚ್ಚಾಗುತ್ತದೆ, ಹುಚ್ಚಾದ ಮನಸ್ಸು ಏಕಾಂತದಲ್ಲೇ ಮೆಚ್ಯೂರ್ ಆಗುತ್ತೆ'
ಹೌದು ನನಗೆ ಬಾಲ್ಯದಿಂದಲೂ ಪ್ರಿಯವಾದ ಏಕಾಂತ ಇವತ್ತು ನನ್ನ ಕೈ ಹಿಡಿದಿತ್ತು. ಮನಸ್ಸು ಪ್ರಫುಲ್ಲ ವಾಗಿತ್ತು. ಚಂದಿರನ ಕೆಳಗೆ ತೇಲಾಡಲು ಮಗುವಾಗಿತ್ತು. ತೆರೆದ ಬಯಲು ಮನಸ್ಸಿನ ಬಾವನೆಯನ್ನು ಬಿಚ್ಚಿಡುವ ಕೆನ್ವಾಸ್ ನಂತೆ ಭಾಸವಾಗುತಿತ್ತು. ಅತಿ ಪ್ರಿಯವಾದ ಏಕಾಂತವನ್ನು ಮುದ್ದಿಸಿ ಮುತ್ತಿಡುತಿದ್ದೆ. ಮೇಲೆ ಚಂದಿರ ನೊಬ್ಬನೇ ನನ್ನ ನಾಟಕದ ಒಂಟಿ ಪ್ರೇಕ್ಷಕ ನಾಗಿದ್ದ.
ಅಕ್ಸೆಸ್ ಕಾರ್ಡ್ ಸ್ವೈಪ್ ಮಾಡಿ ಒಳಗೆ ಹೋಗುವಷ್ಟರಲ್ಲಿ ನಿನ್ನೆಯಿಂದ ನಮ್ಮ ಮೆನೆಜೆರ್ ಆದ ಬಿಮಾರಿ ಸೆಂಟರ್ ಹೆಡ್ ಕರ್ನಲ್ ನ ಕ್ಯಾಬಿನ್ ನಿಂದ ಹೊರಬರುತಿದ್ದ.
ನಾವು ಬೇಗ ಬಂದಾಗ ಮೆನೆಜೆರ್ ಲೆಟ್ ಆಗಿರ್ತಾನೆ , ಲೇಟ್ ಬಂದಾಗ ಆಗ್ಲೇ ಅವನು ಅಲ್ಲಿ ವಕ್ಕರಿಸಿ ಇರ್ತಾನೆ.
"ಗುಡ್ ಮಾರ್ನಿಂಗ್ ಸರ್" ಎಂದು ಅವನಿಗಲ್ಲದಿದ್ದರೂ ಅವನಿರುವ ಪೋಸ್ಟ್ ಗೆ ರೆಸ್ಪೆಕ್ಟ್ ಕೊಡುತ್ತ ಅವನನ್ನು ವಂದಿಸಿದೆ.
"ವೈಭವ್, ಇಟ್ಸ್ ಎಲೆವೆನ್ ಥರ್ಟಿ, ಈ ಟೈಮ್ ಗೆ ಆಫೀಸ್ ಗೆ ಬರುವುದಾ ..?"ಅಂದ.
ಬೇಗ ಬಂದಾಗ, ಲೆಟ್ ಆಗಿ ಹೋಗುವಾಗ ಯಾವನೊಬ್ಬ ಇಷ್ಟು ಬೇಗ, ಇಷ್ಟು ಲೆಟ್ ಎಂದು ಕೇಳುವುದಿಲ್ಲ, ಅದೇ ಲೇಟ್ ಬಂದು ಬೇಗ ಹೋಗುವಾಗ ಆಫೀಸ್ ನ ಪ್ರತಿ ಗೋಡೆಗೂ ಉತ್ತರಿಸಬೇಕು.
"ಸರ್, ನಾನು ಈ ವಾರದ ೧೫ ಗಂಟೆಯನ್ನು ನಿನ್ನೇನೆ ಮುಗಿಸಿ ಆಗಿದೆ, ಇನ್ನೂ ನಾಲ್ಕು ದಿನದಲ್ಲಿ ೩೦ ಗಂಟೆ ಮುಗಿಸಿದರೆ ಆಯ್ತು , ಫ್ಲೆಕ್ಸಿ ಟೈಮಿಂಗ್" ಎನ್ನುತ್ತಾ ನನ್ನನ್ನು ಸಮರ್ಥಿಸಿಕ್ಕೊಂಡೆ.
ಅವರು "ಕೆಲಸ ಇರ್ಬೇಕಾದ್ರೆ ಫ್ಲೆಕ್ಸಿ ಟೈಮಿಂಗ್ ಅಂತ ಸಬೂಬು ಹೇಳ್ತೀಯ.."
"ನಿನ್ನೇನೆ ಅಪ್ಡೇಟ್ಸ್ ಮಾಡಿ ಹೋಗಿದ್ದೆ, ನಿಮ್ಮನ್ನು ಸಿ.ಸಿ ಯಲ್ಲಿ ಹಾಕಿದ್ದೆ." ಎಂದು ಇನ್ನೊಂದು ಸಮರ್ಥನೆ ನೀಡಿದೆ.
ಅವರು "ಅದು ನನಗೆ ಗೊತ್ತು, ಆದ್ರೆ ನೀನು ಹೋದ ಬಳಿಕ ಬಂದ ಕೆಲಸ ಯಾವಾಗ ಮಾಡ್ತೀಯಾ ..?"
"ಅಂದ್ರೆ, ಹೊಸ ಕೆಲಸ ಬಂದಿದ್ಯಾ ..?"
"ಹೌದು, ಒಬ್ಬರಿಗೂ ಸೇರಿಯಸ್ನೆಸ್ಸ್ ಇಲ್ಲ, ನೀನೊಬ್ಬ, ಅವ ಜೀವನ್ ಮತ್ತೊಬ್ಬ ಎರಡು ವಾರದಿಂದ ಮುಂಬೈ ಗೆ ಹೋಗಿ ಸತ್ತಿದ್ದಾನೆ, ಇನ್ನೂ ಅವಿನಾಶ್ ಯಾವುದಕ್ಕೂ ಸುಖವಿಲ್ಲ... ನಿಮ್ಮ ಮೊಡ್ಯುಲ್ ಅನ್ನು ದೇವ್ರೇ ಕಾಪಾಡಬೇಕು" ಅಂದ. ಇವನೇ ಇಷ್ಟು ದಿನ ಮೊಡ್ಯುಲ್ನ ಜವಾಬ್ದಾರಿ ಹೊತ್ತಂತೆ.
ನಿನ್ನೆ ಬಂದವನಿಗೆ ಇಷ್ಟು ಪೋಗರಿದ್ರೆ ಮೊಡ್ಯುಲ್ ಅನ್ನು ಬೆಳೆಸಿದ್ದ ಜೀವನ್ ಗೆ ಎಷ್ಟು ಇರ್ಬೇಕು, ಈಗ ಕಷ್ಟದಲ್ಲಿದ್ದಾನೆ, ಹೆತ್ತಮ್ಮನ ಆರೋಗ್ಯ ಸರಿ ಇಲ್ಲ ಎಂದು ಅವರ ಜೊತೆಗೆ ಇದ್ದ ಜೀವನ್ ನ ಕುರಿತು ಈ ರೀತಿ ಮಾತಾಡಿದ್ದು ನನಗೆ ಸರಿ ಕಾಣಲಿಲ್ಲ.
ನಾನು "ಸರ್ ಜೀವನ್ ನ ಅಮ್ಮನಿಗೆ ಹುಷಾರಿಲ್ಲ, ಹೋಸ್ಪಿಟಲ್ ನಲ್ಲಿದ್ದಾರೆ, ಅವನು ಅರಾಂಸೆ ಬರಲಿ , ನಾನು ಮೊಡ್ಯುಲ್ ನೋಡ್ಕೊಳ್ತೇನೆ ಟೆನ್ಶನ್ ತೆಕೊಳ್ಬೇಡಿ"
"ಎರಡುವಾರ ರಜೆ ಅಂದ್ರೆ ಬಿಲ್ಲಿಂಗ್ ನಲ್ಲಿ ಎಷ್ಟು ಲಾಸ್ ಎಂದು ನಿಂಗೆ ಏನಾದ್ರೂ ಗೊತ್ತಾ... ನಿಮಗೆ ಬರೇ ಒಂದು ರಜೆ, ಕಂಪೆನಿಗೆ ರೆವೆನ್ಯೂನೇ ನಿಲ್ಲುತ್ತೆ"
"ಏನಿಲ್ಲ ದಿನದ ಎಂಟು ಗಂಟೆ, ಗಂಟೆಗೆ ೩೦ ಡಾಲರ್ ಪ್ರಕಾರ ಎರಡುವಾರ ಅಂದರೆ ಹತ್ತು ದಿನದ ೨೪೦೦ ಡಾಲರ್ ಹೆತ್ತವರಿಗಿಂತ ಏನು ಹೆಚ್ಚಲ್ಲ ಬಿಡಿ!!" ಅಂದೆ.
ಮೇನೇಜ್ಮೆಂಟ್ ಲೆವೆಲ್ ನ ಕೆಲ್ಕುಲೇಶನ್ ನನ್ನ ಬಾಯಿಂದ ಕೇಳಿ ಅವರು ದಂಗಾದರು. ಲಕ್ಷ್ಮಿ ಸರ್ ಮೊಡ್ಯುಲ್ ನ ಮೆನೆಜೆರ್ ಆಗಿದ್ದರು ಏನೋ ನಿಜ ಆದ್ರೆ ಬಿಲ್ಲಿಂಗ್, ಡೆಲಿವರಿ ಎಲ್ಲ ಜೀವನ್ ನೇ ಮಾಡುತಿದ್ದ, ಅವನು ರಜೆಯಲ್ಲಿ ಹೋಗುವಾಗ ಎಲ್ಲ ಪ್ರೋಸೆಜರ್ ನನಗೆ ಹೇಳಿದ್ದ.
ನನ್ನ ಮಾತಿಂದ ದಂಗಾದ ಅವರು "ಕಂಪೆನಿ ಕಾನ್ಫಿಡೆನ್ಶಿಯಲ್ ವಿಷಯ, ಹೀಗೆ ಓಪನ್ ಆಗಿ ಮಾತಾಡ್ಬಾರ್ದು"ಎಂದು ನನ್ನ ಬಾಯಿ ಮುಚ್ಚಿಸಿದರು.
ನಾನು "ಸೊರ್ರಿ ಸರ್"ಎಂದು ತಲೆ ತಗ್ಗಿಸಿದೆ. 9 .X ವ್ಯಕ್ತಿ 3 .X ಎದುರಿಗೆ ಸೋಲೊಪ್ಪಿ ತಲೆ ತಗ್ಗಿಸಿದ.
ನಾನು ಡೆಸ್ಕ್ ಗೆ ಬಂದು ಸಿಸ್ಟಮ್ ಆನ್ ಮಾಡಿ ಬೆಳಗ್ಗೆ ಬಂದ ಅಪ್ದೆಟ್ಸ್ ನೋಡಲು ಶುರು ಮಾಡಿದೆ. ಅದರಲ್ಲೇ ಮುಳುಗಿರುವಾಗ ಲಕ್ಷ್ಮಿ ಸರ್ ಕ್ಯುಬಿಕಲ್ ಗೆ ಬಂದು "ಏನಾಯ್ತು ವೈಭು ತಿವಾರಿಯೊಂದಿಗೆ..? ಬಂದ ಎರಡನೇ ದಿನವೇ ಜಗಳ ಆಡಿದ್ಯಾ ..?"
"ನೊಂಸೆನ್ಸ್ ಮಾತಾಡ್ತಿದ್ರು, ಅದಕ್ಕೆ ನಾನು ಸರಿಯಾಗಿ ನನಗೆ ಗೊತ್ತಿರುವ ವಿಷಯ ಹೇಳಿದೆ, ಯಾವ ತಪ್ಪು ಮಾದಡಿದ್ರು ಸೊರ್ರಿ ಕೇಳಬೇಕಾಯ್ತು" ಅಂದೆ.
ಅವರು "ನಿಮ್ಮಿಬ್ಬರ ಮದ್ಯ ಏನು ನಡೀತು ಅಂತ ನಾನು ಕೇಳಲ್ಲ, ಆದ್ರೆ ನೀನು ಅವರ ಎದುರು ಆರೀತಿ ಮಾತಾಡಬಾರದಿತ್ತು, ಪೋಸ್ಟ್ನಲ್ಲೂ, ವಯಸಲ್ಲೂ ನಿನ್ನ ಗಿಂತ ತುಂಬಾ ದೊಡ್ಡವರು ಅವರು, ನೀನಿನ್ನೂ ಇಲ್ಲಿ ಹೆಜ್ಜೆ ಇಡುತಿದ್ದಿಯ ಅಷ್ಟೇ, ಅವರು ಇಂತಹವುಗಳಲ್ಲಿ ಪಳಗಿದ್ದಾರೆ;
ಬೆಂಕಿ ಪತಂಗದಾಟದಲ್ಲಿ ಎರಡೂ ಉರಿದು ಹೋಗುತ್ತವೆ, ಆದರೆ ಅಸ್ತಿತ್ವ ಕಳೆದುಕೊಳ್ಳುವುದು ಪತಂಗ ವಿನಃ ಬೆಂಕಿ ಅಲ್ಲ ,ನೆನಪಿಟ್ಟುಕೋ"
"ಸೊರ್ರಿ ಸರ್, ಬಟ್ ನಿಮಗೆ ಹೇಗೆ ಗೊತಾಯ್ತು ವಿಷಯ" ಅಂದೆ
ಅವರು "ನಿನ್ನಲ್ಲಿ ಅವರು ಮಾತಾಡುವುದನ್ನು ನಾನು ಗಮನಿಸಿದ್ದೆ, ಸಲ್ಪದರಲ್ಲೇ ಕರ್ನಲ್ ಬಿಲ್ಲಿಂಗ್ ಡಿಟೈಲ್ಸ್ ಅನ್ನು ಯಾವುದೇ ಕಾರಣಕ್ಕೂ ಎಂಪ್ಲಾಯಿ ಗಳಿಗೆ ಕೊಡಬಾರದು ಎಂದು ಮೇಲ್ ಕಳಿಸಿದರು, ಆಗ ತಿಳೀತು, ಈ ವಿಷಯಕ್ಕಾಗಿಯೇ ಮಾತಾಗಿರಬಹುದು ಎಂದು, ನಿನ್ನ ಮೊಡ್ಯುಲ್ ಬಿಟ್ಟು ಉಳಿದ ಎಲ್ಲ ಪ್ರಾಜೆಕ್ಟ್ ಮೇನೇಜ್ಮೆಂಟ್ ಲೆವೆಲ್ ನವರ ಸೂಪರ್ ವಿಶನ್ ನಲ್ಲಿ ನಡೆಯುತ್ತಿದ್ದೆ."
"ಅಂದ್ರೆ ನಮ್ಮ ಬಿಲ್ಲಿಂಗ್ ನಾಳೆಯಿಂದ ಅವರೇ ಮಾಡ್ತಾರಾ ...?"
"ಹೌದು, ಸೆಂಟರ್ ಹೆಡ್ ಹೇಳಿ ಆಯ್ತು ಅಂದ್ರೆ ಮಾಡಲೇ ಬೇಕು"
"ಆಗಲ್ಲ ಸರ್, ನಮ್ಮನ್ನು ನಾವೇ ಟ್ರಾಕ್ ಮಾಡ್ಬೇಕು, ಇದು ಫಿಕ್ಸೆಡ್ ಕಾಸ್ಟ್ ಪ್ರಾಜೆಕ್ಟ್ ಅಲ್ಲ, ಒಟ್ರಾಶಿ ಬಿಲ್ಲಿಂಗ್ ಅಸ್ಯುಮ್ ಮಾಡಲಾಗುವುದಿಲ್ಲ, ಯಾವ ಕೆಲಸ ಮಾಡ್ತೇವೆ ಎಂದು ನಮಗೆ ಮಾತ್ರ ಗೊತ್ತು ಅದಕ್ಕಾಗಿ ನಾವೇ ಬಿಲ್ಲಿಂಗ್ ಮಾಡಬೇಕಾಗುತ್ತೆ"
"ಐ ಕಾಂಟ್ ಹೆಲ್ಪ್ ವೈಭು, ನೋಡೋಣ ಒಂದು ಕ್ವಾಟರ್ ಈ ತಿವಾರಿ ಯಾವ ರೀತಿ ಪ್ರಾಜೆಕ್ಟ್ ಕೊಂಡು ಹೋಗುತ್ತಾನೆ ಹೇಳಿ, ಅವನಿಂದ ಆಗದಿದ್ರೆ ಮತ್ತೆ ನೀವೇ ಜವಾಬ್ದಾರಿ ತೆಗೆದು ಕೊಳ್ಳಬಹುದು."
"ಶೂರ್ ಸರ್" ಎಂದೇ, ಅವರು ಕ್ಯುಬಿಕಲ್ ಬಿಟ್ರು.
ಮದ್ಯಾಹ್ನ ಊಟದ ಹೊತ್ತಾದರೂ ಕೆಲಸದಲ್ಲಿ ಮುಳುಗಿದ್ದೆ, ಒಂದಕ್ಕೆ 'ಉಟಕ್ಕೆ ಹೋಗುವ' ಎಂದು ಪಿಂಗ್ ಮಾಡುವ ಆಕೃತಿ ಇವತ್ತು ಪಿಂಗ್ ಮಾಡಿರಲಿಲ್ಲ. ಆಫೀಸ್ ಕಮ್ಯುನಿಕೆಟರ್ ನೋಡಿದೆ. ಅವಳು ಇನ್ನೂ ಆಫೀಸ್ ಗೆ ಬಂದಿರಲಿಲ್ಲ, ಮನಸ್ಸು ಅವಳು ಏನಾದರೂ ಹೆಚ್ಚುಕಮ್ಮಿ ಮಾಡಿಕ್ಕೊಂಡಳೋ ಎಂದು ಕೊರಗುತಿತ್ತು.ಮೊಬೈಲ್ ಎತ್ತಿ ಅವಳ ನಂಬರ್ ಗೆ ಕರೆ ಮಾಡಿದೆ.
ರಿಂಗಾಗುತಿತ್ತು, ಕರೆನೂ ಎತ್ತಿದಳು "ಹಲೋ"
ಮೌನದಲ್ಲಿದ್ದಳು, ನಾನು "ರಾಜಾ .. ಸೋರಿ ಕಣೇ..."
ಅವಳು ಇನ್ನೂ ಮೌನದಲ್ಲಿದ್ದಳು, ನಾನು "ಯಾಕೆ ರಾಜ ಮೌನ, ಕೋಪಾನಾ..."
ಇನ್ನೂ ಮೌನ "ಮೂರು ಎಣಿಸ್ತೇನೆ, ಮಾತಾಡದಿದ್ರೆ ಕರೆ ಕಟ್ ಮಾಡ್ತೇನೆ, ಒನ್ ..."
"ಟು ..."
"ತ್ರೀ...."
ಆ ಬದಿಯಿಂದ ಉತ್ತರ ವಿಲ್ಲ ಆದರೂ ಕರೆ ಕಟ್ ಮಾಡಲಿಲ್ಲ.
ನಾನು "ಈಗ ನಿಜವಾಗಲು ಇಡ್ತೇನೆ... ಇಡ್ಲಾ..?"
"ನಾಟಕ ಆಡಬೇಡ , ಇಡ್ತಿದ್ರೆ ಇಡೋ"
"ಮಾತಾಡ್ಬೇಕು, ಎಲ್ಲಿದ್ದಿಯಾ..?"
"ಇದ್ದೇನೆ ಇನ್ನೂ ಜೀವಂತವಾಗಿ"
"ರಾಜ, ಏನಾಯ್ತು ಬಂಗಾರ, ಇನ್ನೂ ಇಳಿಲಿಲ್ವಾ ನಿನ್ ಕೋಪ ..?"
"... ಮತ್ತೆ ಮತ್ತೆ .. ನೀನು ಈ ರೀತಿ ಮಾಡುವುದು ಸರಿಯಾ..?"
"ಏನ್ ಮಾಡಿದೆ .."
"ಮತ್ತೆ ಮತ್ತೆ, ಒಂಬತ್ತು ದಿನದಿಂದ ನಿನ್ನನ್ನು ಯಾವಾಗ ನೋಡ್ತೇನೆ ಅಂತ ಕಾಯ್ತಿದ್ದೆ, ನಿಂಗೆ ನನ್ನನ್ನು ನೋಡ್ಬೇಕು ಅಂತ ಆಗಲೇ ಇಲ್ಲ ಅಲ್ಲಾ, ನಾನು ಕಣ್ಣೆದುರು ಬಂದಾಗಲೂ ಒಂದು ಅಕ್ಷರ ಮಾತಾಡಲು ಪುರುಸೊತ್ತು ಇಲ್ಲದಷ್ಟು ದೊಡ್ಡ ಮನುಷ್ಯ ನಾಗಿ ಬಿಟ್ಟಿ"
"ಇಲ್ಲ ರಾಜ, ನೀನು ಇಲ್ಲೇ ಇರ್ತೀಯ , ಸಂಜೆ ಆರಾಮಾಗಿ ಮಾತಾಡುವ ಅಂದುಕ್ಕೊಂಡಿದ್ದೆ ಅಷ್ಟೇ, ನೀನು ಹೇಳದೆ ಕೇಳದೆ ಈ ರೀತಿ ಕೋಪ ಮಾಡ್ಕೊಂಡು ಹೋದೆ"
"..."
"ಇನ್ನ್ಯವತ್ತು ನಿನ್ನ ನೋಯಿಸಲ್ಲ ,ಸಾರೀ ರಾಜಾ"
"ನಿನಗೇನು ಗೊತ್ತು ನಿನ್ನ ನಾನು ಎಷ್ಟು ಇಷ್ಟ ಪಡ್ತಾ ಇದ್ದೇನೆ ಹೇಳಿ, ರಾತ್ರಿ ಪೂರ್ತಿ ಅಳ್ತಿದ್ದೆ, ನಿನ್ನನ್ನು ಬಿಟ್ಟು ಬಿಡುವ ಹೇಳುವಷ್ಟು ಕೋಪದಲ್ಲಿ ಬೆಂದಿದ್ದೆ, ಆದ್ರೆ ನಿನ್ನನ್ನು ಬಿಟ್ಟಿರಲು ಆಗಲ್ಲ ಕಣೋ.. ಇ ನೀಡ್ ಯು"
"ಐ ಟು "
"ರಾತ್ರಿ ಹಿಡಿ ನಿದ್ದೆ ಬಂದಿಲ್ಲ, ಸ್ವಿಚೋಫ್ಫ್ ಮಾಡಿ ಬಿಸಾಡಿದ ಮೊಬೈಲ್ ಅನ್ನು ರಾತ್ರಿ ೫ ಕ್ಕೆ ಸಿಂ ಹಾಕಿ ನೀನು ಇಲ್ಲಿ ವರೆಗೆ ಕಳುಹಿಸಿದ ಎಸ್ಸೆಮ್ಮೆಸ್ಸ್ ಓದುತ್ತ ನಿನ್ನ ನೆನಪಿಸುತ್ತಾ ಕುಳಿತಿದ್ದೆ, ನಿನ್ನ ಮೆಸ್ಸೇಜ್ ಗೆ ಕಾಯುತಿದ್ದೆ, ನೀನು ಬ್ಯುಸಿ ಪಾರ್ಟಿ, ಒಂದು ಮೆಸ್ಸೇಜ್ ಇಲ್ಲ ರಾತ್ರಿ ಒಂಬತ್ತಕ್ಕೆ ಕಳುಹಿಸಿದ ಮೆಸ್ಸೇಜ್ ಬಳಿಕ, ಕಡೆ ಪಕ್ಷ ಬೆಳಗ್ಗೆ ಎಬ್ಬಿಸಲು ಕರೆ ಮಾಡ್ತಿ ಅನ್ಕೊಂಡೆ ಅದೂ ಇಲ್ಲ, ಈಗ ದೊಡ್ಡ ಮನುಷ್ಯ ಕರೆ ಮಾಡಿದ್ದಾನೆ, ಪುರಸೊತ್ತು ಸಿಕ್ತಾ ನಿಂಗೆ ನಿನ್ನ ಕ್ರಿಸ್ ಮತ್ತು ಲಕ್ಷ್ಮಿ ಸರ್ ನಿಂದ..?"
"ಹೌದು, ಉಟಕ್ಕೆ ಹೋಗ್ತಾ ಇದ್ದೆ, ಯಾಕಾಗಿ ಬರ್ಲಿಲ್ಲ ಆಫೀಸ್ ಗೆ , ಐ ಮಿಸ್ಸೇಡ್ ಅ ಕಪ್ ಆಫ್ ಕಾಫಿ ಡೀರ್"
"ಇದಕ್ಕೇನು ಕಮ್ಮಿ ಇಲ್ಲ, ಕಾಫಿ ಕುಡೀತ ಕರೆ ಮಾಡಿದ್ರೆ ನಾನು ಓಡೋಡಿ ಬರ್ತಿದ್ದೆ"
"ಫಿಲ್ಮಿ ಡೈಲಾಗ್ ಬಿಡುವುದರಲ್ಲಿ ಹುಡುಗೀರು ಎತ್ತಿದ ಕೈ"
"ಬೆಳಗ್ಗೆ ನಿದ್ದೆ ಹತ್ತಿತು, ಈಗ ನಿನ್ನ ರಿಂಗ್ ಗೆ ಎಚ್ಚರ ಆಯಿತು ವೈಭು"
"ಮತ್ತೆ ಆಫೀಸ್ ..?"
"ಚಕ್ಕರ್, ಸಂಜೆ ಬೇಗ ಬಾ , ಬೈಟು ಕುಡಿತಾ ಮಾತಾಡೋಣಾ.."
"ಸರಿ ರಾಜ..."
"ಲವ್ ಯು"
"ಐ ಟೂ ..." ಮೊಬೈಲ್ ನಲ್ಲಿ ಮಾತನಾಡುವುದನ್ನು ತಿವಾರಿ ನೋಡಿ ಮುಗುಳ ನಕ್ಕರು, ಅವರಿಗೆ ನಗೆಯಲ್ಲೆ ಉತ್ತರ ಕೊಟ್ಟೆ.
ಕೆಫೆಟೇರಿಯಾ ದಲ್ಲಿ ಅವರು "ಲವರ್ ..?"
ನಾನು "ನೋ , ಕಸಿನ್ ಆಫ್ ಮೈನ್" ಅಂದೆ.
ಪ್ರಿಯತಮೆಗೆ ಅನಾವಶ್ಯಕವಾಗಿ ಹಲವುಬಾರಿ ಕಸಿನ್ ಮಾಡಬೇಕಾಗುತ್ತದೆ ಈ ಜಗತ್ತಿನಲ್ಲಿ.