ಅ ಕಪ್ ಓಫ್ ಕಾಫಿ ... ಸಿಪ್- ೭
ಅ ಕಪ್ ಓಫ್ ಕಾಫಿ ... ಒಂದು ಸಿಪ್ ಪ್ರೀತಿಯೊಂದಿಗೆ, ಮತ್ತೊಂದು ಜೀವನ ದೊಂದಿಗೆ....
ಸಿಪ್- ೭
೮ ೩೦ ಕ್ಕೆ ಕಣ್ಣು ಬಿಟ್ಟಾಗ ಹೊರಗಿನ ಬಯಲಿಂದ ಸೂರ್ಯನ ಕಿರಣಗಳು ಕಣ್ಣ ಪರದೆಯನ್ನು ಮುಟ್ಟಿತ್ತು. ಆವರಿಸಿದ ಮಂಜು ಮೆಲ್ಲನೆ ಆವಿಯಾಗಿ ಮಾಯವಾಗುತಿತ್ತು. ಕಾಲೇಜ್ ತರಗತಿಗೆ ಹೊಸವರ್ಷದ ರಜೆ.ಶನಿವಾರ ಬಟ್ಟೆ ಹಾಸ್ಟೆಲ್ ನಲ್ಲಿ ಒಗೆಯಲು ಕೊಡುವ ದಿನ ಅದು ನೆನಪಾಗಿ ಎದ್ದು ನಾನು ರವಿಯ ರೂಂ ನಿಂದ ಹೊರ ಬಂದೆ.ಶೆಟ್ಟಿ ಆಗಲೇ ಎದ್ದಿದ್ದ. ಹಿಂದಿನ ದಿನ ಮಾಡಿದ ಹೊಲಸನ್ನು ಸಾರಿಸಿ ತೆಗೆಯುವುದರಲ್ಲಿ ವ್ಯಸ್ತನಾಗಿದ್ದ. ಬಳಿಯಲ್ಲೇ ಒಂದು ನಾಯಿಮರಿ ತಿಂದು ಬಿಟ್ಟ ಎಲುಬನ್ನು ಕಚ್ಚಿ ತಿನ್ನುತ್ತಿತ್ತು.ಎರಡು ಕಡೆಯಲ್ಲಿ ಅಮಲೇರಿ ಖಾರಿದ ಕೊಕ್ಟೈಲ್ ಭೂಮಿ ಯೊಳಗೆ ಇಳಿಯುತ್ತಿತ್ತು. ಇದರ ನಡುವಲ್ಲಿ ಬಿದ್ದ ಅಪ್ಪಟ ಕುಡುಕರನ್ನು ಅವನು ತನ್ನ ರೂಮಿನೊಳಗೆ ವಿಲಾವರಿ ಮಾಡಿದ್ದ.
ನನ್ನನ್ನು ನೋಡಿ ಕೈಗೊಂದು ಗೋಣಿಚೀಲ ಕೊಟ್ಟು ಅದನ್ನು ಪಕ್ಕದ ಚರಂಡಿಯಲ್ಲಿ ಹಾಕುವಂತೆ ಹೇಳಿದ. ಅದರಲ್ಲಿ ಬರೋಬ್ಬರಿ ೧೦ ರಿಂದ ೧೫ ಕಿಲೋ ಸರಿಯಿದ್ದ, ಒಡೆದು ಚೂರಾದ ಮದ್ಯದ ಬಾಟಲುಗಳಿದ್ದವು.ನಾನು ಸರಿ ಎಂದು ಹೊರಬರಲು ಕಾಂಪೌಂಡ್ ಓನರ್ ಎದುರಾದ.
ಮರೆಮಾಚುವ ಕೆಲಸದಲ್ಲಿ ಬ್ಯುಸಿ ಆಗಿದ್ದ ನಾವು ಅವರನ್ನು ನೋಡಿ ತಬ್ಬಿಬ್ಬಾದೆವು. ಶೆಟ್ಟಿ ಕ್ಷಣ ಮಾತ್ರದಲ್ಲಿ " ಅಂಕಲ್ ಹ್ಯಾಪಿ ನ್ಯೂ ಇಯರ್ !!!" ಅಂದ.
ಅವರು "ದಾದಯ ...? ಉಂದು ಮಾತಾ?" (ಏನೋ ...? ಇದೆಲ್ಲಾ ..?)
ಶೆಟ್ಟಿ ಸಲ್ಪ ತಡೆದು " ಜೋಕ್ಳು ಅತ್ತೆ, ಗಮ್ಮತ್ ಮಲ್ಪಾಡ್." ಅಂದ.
"ಗಮ್ಮತ್ ಏತು ಉಪ್ಪೋಡು ಆತ್ ಉಪ್ಪಂಡ ಯಾವು" ಅಂದರು.
ಶೆಟ್ಟಿ ಅವರಲ್ಲಿ "ಅಂಕಲ್, ಈರೆಗ್ಲ ಒಂಜಿ ಗಿಫ್ಟ್ ನಮ ದೆತ್ತದ್ ದೀತ (ನಿಮಗೂ ಒಂದು ಗಿಫ್ಟ್ ತೆಗೆದಿಟ್ಟಿದ್ದೇವೆ)"ಈ ಮಾತು ಕೆಳುತಿದ್ದಂತೆ ಅವರೂ ಮುಗುಳ್ನಕ್ಕರು.
ಶೆಟ್ಟಿ "ಅಂದಾ ಅಲ್ಪ ಉಳೈ ದೆತ್ತದ್ ದೀನ ಬಾಟಲ್ ಇಂಚಿ ಕೊರಿಯಾ"(ಅಲ್ಲಿ ತೆಗೆದಿಟ್ಟ ಬಾಟಲ್ ಇಲ್ಲಿ ತಾ) ಎಂದು ಒಳಗಿನ ಕೋಣೆಗೆ ಬುಲಾವ್ ಇಟ್ಟ.
ಒಳಗಿಂದ ಸ್ಟೀಫನ್ ಆ ಬಾಟಲ್ ನೋಟ್ಟಿಗೆ ಹೊರ ಬಂದ. ಸ್ಟೀಫನ್ ಅನ್ನು ಬಾಟಲ್ ನೊಂದಿಗೆ ನೋಡಲು ಹೊರನಿಂತ ಅವನ ತಂದೆ ಅವಕ್ಕಾದರು.!!!
ಸ್ಟೀಫನ್ ನಮ್ಮ ಜೂನಿಯರ್ ಈ ವರ್ಷ ಕಾಲೇಜ್ ಗೆ ಜೋಯಿನ್ ಆಗಿದ್ದ, ನಿನ್ನೆ ಕಂಬೈನ್ ಸ್ಟಡಿ ಮಾಡೂದಿದೆ ಎಂದು ಹೇಳಿ ಇಲ್ಲಿ ಉಳಿದಿದ್ದ.ಮಗನನ್ನು ಈ ವೇಷದಲ್ಲಿ ನೋಡಿ ಅವರು ಎರಡನೇ ಮಾತಾಡದೆ ತರಕಾರಿ ತೋಟದೆಡೆಗೆ ನಡೆದರು.
ಶೆಟ್ಟಿ ಎಲ್ಲ ಬೂದಿಯನ್ನು ಒಟ್ಟು ಮಾಡಿ ಗಿಡದ ಬುಡಕ್ಕೆ ಸುರುವಿದ.ನಾನು ಕೈಯಲ್ಲಿದ್ದ ಅಸ್ತಿಯನ್ನು ಹೊರಗಿನ ತೋಡಿನಲ್ಲಿ ವಿಸರ್ಜಿಸಿ, ಹಾಸ್ಟೆಲ್ ತಲುಪಿದೆ.
***********
ಅವಳು ನಾನು '೧೪ ಮಿನಿಟ್ ೪೫ ಸೆಕೆಂಡ್ಸ್ ಲೇಟ್' ಅನ್ನುವುದು ಬೇಡ ಎಂದು ೭ ನಿಮಿಷ ಮುಂಚಿತವಾಗಿ ೩ : ೫೩ ಕ್ಕೆ ಆ ಮಾಲ್ ತಲುಪಿದೆ. ಬಳಿಯಲ್ಲೇ ಇದ್ದ ಏಟಿಎಂ ಮಷಿನ್ ನಿಂದ ೧೦೦೦ ರುಪಾಯಿ ತೆಗೆದು ಕೊಂಡೆ. ಪಕ್ಕದಲ್ಲೇ ಇದ್ದ ಚಾಕೊಲೆಟ್ ಅಂಗಡಿಯಿಂದ ಒಂದು ಕ್ಯಾಡ್ಬರೀಸ್ ತೆಕ್ಕೊಂಡು ಮಾಲ್ ನ ಹೊರ ಆವರಣದ ಕಾರಂಜಿಯ ಬಳಿ ನಿಂತುಕ್ಕೊಂಡೆ.
ಕಡು ನೀಲಿ ಬಣ್ಣದ ಸಲ್ವಾರ್ನಲ್ಲಿ ಬಂದ ಪ್ರೀತಿಯನ್ನು ನೋಡಿ ಅವಳು ನನ್ನನ್ನು ಇಂಪ್ರೆಸ್ ಮಾಡಲು ನನ್ನ ಇಷ್ಟದ ಬಣ್ಣದ ಉಡುಗೆ ಉಟ್ಟು ಬಂದಿರುವಳು ಅಂದುಕ್ಕೊಂಡೆ. ಅಸಲಿಗೆ ಈ ಲಾಜಿಕ್ ಅನ್ನು ನಾನು ಅನುಸರಿಸಿದ್ದೆ. ಅವಳ ಇಷ್ಟದ ಕಪ್ಪು ಟೀ-ಶರ್ಟ್ ನಾನು ತೊಟ್ಟು ಬಂದಿದ್ದೆ.
ಆಟೋ ದಿಂದ ಇಳಿಯುತ್ತಲೇ ನನ್ನ ನೋಡಿ ಮುಗುಳ್ನಗುತ್ತಾ ಆಟೋ ಅವನಿಗೆ ೧೦೦ ರ ಒಂದು ಗರಿ ಗರಿ ನೋಟನ್ನು ಕೊಟ್ಟಳು.ಅವನು ಚೇಂಜ್ ಕೊಡುವಂತೆ ಹೇಳಲು ತನ್ನ ಕೈಚೀಲವನ್ನೆಲ್ಲಾ ಹುಡುಕಾಡಿದಳು. ಎಲ್ಲೂ ಸಿಗದೇ ನನ್ನಲ್ಲಿ "ವೈಭು ೧೪ ರುಪಾಯೀ ಇದೆಯೇನೋ ..." ಅಂದಳು.
ಅವಳು ಕೇಳಿದ ಮೊದಲ ಸಹಾಯ. ನಾನು ಹೌದೆಂದು ಸೀದಾ ಅವಳಿದ್ದಲ್ಲಿಗೆ ಹೋಗಿ ಆ ಚಾಕೊಲೆಟ್ ಅಂಗಡಿಯವ ಕೊಟ್ಟ ೨೦ ರ ನೋಟನ್ನು ಅವನಿಗೆ ಕೊಟ್ಟೆ. ಅವನು ೫ ರುಪಾಯಿ ಹಿಂತಿರುಗಿಸಿದ. ೧ ರುಪಾಯೀ ಅವನಿಗೆ ಟಿಪ್ಸ್ ಆಗಿ ಬಿಟ್ಟುಕೊಟ್ಟೆ.
ಇಬ್ಬರೂ ನಿನ್ನೆ ಕುಳಿತ ಅದೇ ಟೇಬಲ್ ಮೇಲೆ ಕುಳಿತಿದ್ದೆವು. ಅದೇ ಕೆಂಪು ಕತ್ತಿನ ವೈಟರ್ ಬಳಿ ಬಂದು ಆರ್ಡರ್ ತೆಕ್ಕೊಂಡ. ಅವನಲ್ಲಿ ನಾನು ಏನಾದ್ರೂ ಸ್ಪೆಷಲ್ ಐಟಂ ಸರ್ವ ಮಾಡು ಅಂದೆ.
ಅವನು ಇಟೆಲಿಯನೋ ಹಾಟ್ ಕಾಫಿ ವಿಥ್ ಚಿಲ್ಲೆಡ್ ವೆನಿಲ್ಲಾ ಕ್ರೀಂ ನ ಹೆಸರು ಹೇಳಿದ . ಅದಕ್ಕೆ ನಾನು ಓಕೆ ಹೇಳಿ ತಿನ್ನಲು ಪೇಸ್ಟ್ರೀ ಯಾವುದಾದರು ಹೇಳಲು ಹೇಳಿದೆ.
ಅವನು ಮೇಡ್ ಫಾರ್ ಈಚ್ ಅದರ್ ಚೋಚೋ ಪೇಸ್ಟ್ರೀ ರೆಕಮೆಂಡ್ ಮಾಡಿದ. ಅದಕ್ಕೂ ಹ್ಮ್ ಅಂದೆ.
"ಸರಿ ಹೇಗಾಯ್ತು ನ್ಯೂ ಇಯರ್ ಪಾರ್ಟಿ" ಇವತ್ತು ನಾನಾಗಿಯೇ ಮಾತು ಶುರು ಮಾಡಿದೆ
"ಚೆನ್ನಾಗಿತ್ತು, ಡಿ ಜೆ ಅಂತೂ ಸೂಪರ್!!! ನಿಂದು ಹೇಗಾಯ್ತು...?"
"ಸುಮಾರಾಗಿಯೇ ಇತ್ತು."
"ಸುಮಾರು ಅಂದ್ರೆ ..? ಏನಾದ್ರು ರೆಗುಲರ್ ಕ್ಕಿಂತ ಹೊಸತ್ತೆನಾದ್ರು ಮಾಡಿದೆಯಾ...?"
"ಹ್ಮ್ ರೆಗುಲರ್ ಇರಲಿಲ್ಲ, ಮೊದಲಬಾರಿಗೆ ಹೊಸ ಅನುಭವ ಪಡೆವ ಹೊಸ್ತಿಲಲ್ಲಿದ್ದೆ!!!"
"ಅಂದ್ರೆ ?"
ನಿದ್ರೆ ಬಾರದೆ ಬರೇ ನಿನ್ನ ನೆನಪಲ್ಲೇ ಕನವರಿಸುತಿದ್ದೆ ಅನ್ನಬೇಕು ಅನ್ನಿಸಿತು ಕೊನೆಗೆ "ಏನು ಇಲ್ಲ" ಅಂದು ಸುಮ್ಮನಾದೆ.
ಅಷ್ಟರಲ್ಲೇ ವೈಟರ್ ಬಂದು ಹೇಳಿದ ಕಾಫಿ ಮತ್ತು ಪೇಸ್ಟ್ರೀ ನಮ್ಮ ಟೇಬಲ್ ಮೇಲಿಟ್ಟ.
ಆರಿಂಚು ಉದ್ದದ ಗಾಜಿನ ಗ್ಲಾಸ್ನಲ್ಲಿ ಐಸ್ ಕ್ರೀಂ ನ ನೊರೆ ಕೆಳಗಿಳಿಯುತ್ತಿತ್ತು. ಹೃದಯದಾಕಾರದ ಮೇಡ್ ಫಾರ್ ಈಚ್ ಆದರ್ ಪೇಸ್ಟ್ರೀ ಯ ನಡುವಲ್ಲಿ ಚೆರ್ರಿ ಸುಂದರವಾಗಿ ಕಾಣುತಿತ್ತು.
ಇಬ್ಬರು ಗ್ಲಾಸನ್ನು ಕೈಯಲ್ಲಿ ಹಿಡುದು ಕರಗುತ್ತಿರುವ ಐಸ್ ಕ್ರೀಮನ್ನು ಸ್ಪೂನ್ ನಲ್ಲಿ ಎತ್ತಿ ಬಾಯಿಗೆ ಹಾಕುತಿದ್ದೆವು.ನಾನು ನಿನ್ನೆ ನಿಲ್ಲಿಸಿದ ಟಾಪಿಕ್ ಮತ್ತೆ ಶುರು ಮಾಡಿದೆ.
"ನಿನ್ನೆ ನೀನು ಇವತ್ತಿಗೆ ಮುಂದೂಡಿದ ಟಾಪಿಕ್ ..." ಅಂದೆ.
ಅವಳು "ಏನದು ಟಾಪಿಕ್"
"ಅದೇ ನಿನ್ನ 1942 A Love Story !!!"
"1942 A Love Story ನಾ ...ಅದೂ ನನ್ಗೆ...?"
ಅವಳ ಈ ಮಾತು ಕೇಳಿ ಹೋದ ಜೀವ ಮತ್ತೆ ಬಂದಂತಾಯಿತು. ನಿನ್ನೆಯ ರಾತ್ರಿ ಇಡೀ ಇವಳ ಲವ್ ಸ್ಟೋರಿಯಲ್ಲಿನ ಹಳೇ ನಾಯಕನ ಕುರಿತು ಆಲೋಚಿಸಿ ನಿದ್ದೆ ಹಾಳು ಮಾಡಿಕ್ಕೊಂಡಿದ್ದೆ. ಇವಳಿಗೆ ಲವ್ ಸ್ಟೋರಿಯೇ ಇಲ್ಲಂತಾದರೆ ಆ ನಾಯಕ ಎಲ್ಲಿಂದ ಬಂದಾನು ಎಂದು ಆಲೋಚಿಸಿ ಮತ್ತೆ ಖುಷಿಯಾಯಿತು.ಅದರೂ ಖಾತ್ರಿ ಪಡಿಸುವ ಸಲುವಾಗಿ ಇನ್ನೊಮ್ಮೆ ಅವಳಲ್ಲಿ "ನಿಜವಾಗಲು ನಿನಗೆ ಲವ್ ಸ್ಟೋರಿ ಇಲ್ಲವಾ " ಅಂದೆ.
ಅವಳು "1942 !!! ಹೇ ನನ್ನ ಅಜ್ಜಿದ್ದು ಲವ್ ಸ್ಟೋರಿ ಇದ್ರೂ ಇರಬಹುದು !!!" ಅನುತ್ತ ಮುಗುಳ ನಕ್ಕಳು.
ನೀಲ ಸುಂದರಿ ಇನ್ನೂ ಸುಂದರವಾಗಿ ಕಾಣುತಿದ್ದಳು ಆದರೂ ಏನೋ ಕೊರತೆ, ಆ ನ್ಯುನ್ಯತೆಯನ್ನು ಹುಡುಕುತ್ತಿರುವ ನನ್ನ ಕಣ್ಣು ಮತ್ತು ಮನಸನ್ನು ಎದುರು ಕಾಫಿ ಹೀರುತ್ತಿರುವ ಪ್ರೀತಿ ಒಂದೇ ಬಾರಿಗೆ ತಡೆದು "ಏನೋ ..? ಏನಾಯ್ತು ಎಲ್ಲಿ ಕಳೆದು ಹೋದಿ.. ಓ ಭಾವ ಜೀವಿ ...!!!" ಅಂದಳು.
ಅಯಿನ್ ಸ್ಟೀನ್ ಗೆ ಸ್ನಾನ ಮಾಡುವಾಗ ಹೊಳೆದ ಸಾಪೇಕ್ಷಿತಾವಾದದಂತೆ ಅವಳ ಸುಂದರತೆಯ ನ್ಯೂನತೆಗೆ ಕಾರಣ ತಿಳಿದು ಗೊಜಲಿನಲ್ಲಿ ಮುಳುಗಿದ್ದ ಮನಸ್ಸು ನಗ್ನವಾಗಿ ಖುಷಿ ಪಟ್ಟಿತು. ಒಳಗೆ ಎದ್ದ ಈ ಅಲೆಯನ್ನು ಗುರುತಿಸಿ ಅವಳು ಕಣ್ಣಿನಲ್ಲೇ ಅದರ ಕಾರಣ ಏನೆಂದು ಕೇಳಿದಳು.
ನಾನು "ನೀನು ಚೆನ್ನಾಗಿ ಕಾಣುತಿದ್ದಿಯ, ನೀನು ಇನ್ನೂ ಚೆನ್ನಾಗಿ ಕಾಣಬಹುದು"
ಅವಳು "ಅಂದ್ರೆ ...?"
"ಒಂದು ಬಿಂಧಿ ನಿನ್ನ ಸೌಂದರ್ಯವನ್ನು ಇನ್ನೂ ಮೇಲಕ್ಕೆ ಎತ್ತಿ ಹಿಡಿಯುತ್ತೆ !!!"
"ಹೋ, ಯಜಮಾನ್ರು ಈ ಅನ್ವೇಷಣೆಗಾ ನನ್ನ ಆರ್ಕುಟ್ ಪ್ರೊಫೈಲ್ ಅನ್ನು ಕಳೆದ ಒಂದು ವಾರದಲ್ಲಿ ಹಲವು ಬಾರಿ ವಿಶ್ಲೇಷಿಸಿದ್ದು.." ಅಂದಳು.
ಮೌನವಾಗಿದ್ದೆ. ಅವಳ ಆರ್ಕುಟ್ ಪ್ರೊಫೈಲ್ ನೋಡಲು ಅದು ಅವಳ ಗಮನಕ್ಕೆ ಬರುವುದು ಎಂಬುದನ್ನು ಮರೆತಿದ್ದ ನನಗೆ ಈಗ ಏನು ಹೇಳಬೇಕೋ ತಿಳಿಯಲಿಲ್ಲ.ಅವಳು ಮುಂದುವರಿಸಿದಳು "ಏನ್ ಯಜಮಾನ್ರೆ ಸಮಾಚಾರ..? ವಿರಹಿ ಯಿಂದ ಮತ್ತೆ ಚಾಕೋಲೆಟ್ ಹೀರೋ ಅಗೋ ಬಯಕೆನಾ ...??" ಅಂದಳು.
ಏನೂ ತೋಚದೆ ಕೈಯಲ್ಲಿದ್ದ ಸ್ಪೂನ್ ನಿಂದ ಆಗಲೇ ಕೆಳಗಿನ ಬಿಸಿ ಕಾಫೀಯಲ್ಲಿ ಅರ್ಧ ಕರಗಿರುವ ಐಸ್ ಕ್ರೀಮ್ ಅನ್ನು ಇನ್ನೂ ಕರಗಿಸಿದೆ. ಅವಳು ಮುಂದುವರಿಸಿದಳು.
"ನೀನು ಕೇಳಿದೆಯಲ್ಲ ನನ್ನ 1942 A Love Story ಬಗ್ಗೆ.. ಹೇಳ್ತೇನೆ ಕೇಳು"
"ನೀನೆ ಅಂದಿಯಲ್ಲ 1942 A Love Story ಏನಿಲ್ಲ ಎಂದು..!!!"
"ಹ್ಮ್ ಹೌದು ಇದು ಅಷ್ಟು ಹಳತಲ್ಲ !!! ತೀರ ಹೊಸದ್ದು ೨೦೦೨ ನದ್ದು !!!"
ಕೈಯಲ್ಲಿದ್ದ ಸ್ಪೂನ್ ತನ್ನ ಚಲನೆಯನ್ನು ನಿಲ್ಲಿಸಿತು, ಗ್ಲಾಸ್ ನಲ್ಲಿ ಕರಗಿ ಬುಡ ಸೇರುತ್ತಿರುವ ಐಸ್ ಕ್ರೀಮ್ ನನಗೆ ಕಾಫೀಯ ಸುಳಿಯಲ್ಲಿ ಸಿಲುಕಿ ಒದ್ದಾಡುವಂತೆ ಕಂಡುಬಂತು. ಇಲ್ಲಿ ಮನಸ್ಸು ಮತ್ತೆ ಗೊಂದಲದ ಗೂಡಿನಲ್ಲಿ ಬೇಗುತ್ತಾ "ಯಾರು ...?" ಅಂದಿತು.
ಅವಳು "ವಿವೇಕ್ , E & E ಫೈನಲ್ ಇಯರ್" ಅಂದಳು.
ವಿವೇಕ್ ಹೆಸರು ಎಲ್ಲೋ ಕೇಳಿದಂತಿತ್ತು. ಹೌದು ಅವನೇ ನಿನ್ನೆ ರಾತ್ರಿ ತೂರಾಡಿದ ಹುಡುಗ, ನನಗೆ ಸ್ಪ್ರೈಟ್ ಹೇಳಿ ವೋಡ್ಕಾ ಕೊಟ್ಟವ.
ನಿನ್ನೆ ಶೆಟ್ಟಿ ಕುಡಿದು ಅಮಲಾಗದಂತೆ ತಡೆದಿದ್ದ, ಇಲ್ಲಿ ಅವನ ಹೆಸರು ಕೇಳುತಿದ್ದಂತೆ ಕಿಕ್ಕು ಏರಿ ಹೋಗಿತ್ತು, ಆದರೆ ಅಮಲಿನ ಕಿಕ್ಕಲ್ಲ, ಮನಸಿನಲ್ಲಿ ಮೂಡಿದ ಪ್ರೇಮವನ್ನು ಕಿತ್ತ ಧ್ವೇಶದ ಕಿಕ್ಕು.
ಎದುರಲ್ಲಿ ಕುಳಿತ ಪ್ರೀತಿ ಮೇಡ್ ಫಾರ್ ಈಚ್ ಆದರ್ ಪೇಸ್ಟ್ರೀಯನ್ನು ಬದಿಯಲ್ಲೇ ಇದ್ದ ಫಾರ್ಕ್ನಿಂದ ನಡುವಲ್ಲಿ ಎರಡು ಭಾಗ ಮಾಡಿದಳು. ಅವಳು ತುಂಡರಿಸಿದ್ದು ಹೃದಯದಾಕಾರದ ಪೇಸ್ಟ್ರೀಯನ್ನೇ, ಆದರೆ ರಕ್ತ ಸುರಿಯುತಿದ್ದದ್ದು ಒಂದು ವಾರದಿಂದ ಅವಳಿಗಾಗಿಯೇ ಬಡಿಯುತಿದ್ದ ನಿಜದ ಹೃದಯದಿಂದ.
ಅವಳಾಗಿಯೇ ಹಲವು ಪ್ರಶ್ನೆಗಳನ್ನು ನನ್ನ ಎದುರಿಗೆ ಇಟ್ಟಳು, ನಾನು ಉತ್ತರಿಸಿದೆ.
ನನ್ನಲ್ಲಿ ಹೇಳಲು ಇರುವ ವಿಚಾರ ನನ್ನಲ್ಲೇ ಉಳಿದು ಹೋಯಿತು.
೧೫ ನಿಮಿಷದಲ್ಲಿ ಪೇಸ್ಟ್ರೀ, ಕಾಫಿ ಮುಗಿಸಿ ಅವಳನ್ನು ಅವಳ ಮನೆವರೆಗೆ ಬಿಟ್ಟು ಪೇಂಟ್ ಜೇಬಿನಲ್ಲಿದ್ದ ಡೈರಿ ಮಿಲ್ಕ್ ಅನ್ನು ಅವಳಿಗೆ ಕೊಟ್ಟು "This is for you my sweet friend, will be sweet friends forever !!!" ಎಂದು ಬೈಕನ್ನು ಸ್ಟಾರ್ಟ್ ಮಾಡಿದೆ.
ಅವಳು ತಿರುಗಿ ನನಗೆ ಬಾಯ್ ಅನ್ನುತ್ತಾಳೆಯೇ ಎಂದು ನೋಡಲು ಕಂಬನಿ ತುಂಬಿಕ್ಕೊಂಡಿರುವ ಕಣ್ಣು ಬಿಡಲಿಲ್ಲ. ವಿಕ್ಟರ್ ನ ವೇಗ ಹೆಚ್ಚಿಸಿಕ್ಕೊಂಡೆ, ಕಂಬನಿಯೂ ತನ್ನ ಒಸರನ್ನು ಹೆಚ್ಚಿಸಿಕ್ಕೊಂಡಿತು.
Comments
ಉ: ಅ ಕಪ್ ಓಫ್ ಕಾಫಿ ... ಸಿಪ್- ೭
In reply to ಉ: ಅ ಕಪ್ ಓಫ್ ಕಾಫಿ ... ಸಿಪ್- ೭ by Chikku123
ಉ: ಅ ಕಪ್ ಓಫ್ ಕಾಫಿ ... ಸಿಪ್- ೭