ಆಂಜನೇಯನಿಗೆ ನಲವತ್ತು ಪದ್ಯ ನಮನಗಳು (ಹನುಮಾನ್ ಚಾಲೀಸಾ: ಕನ್ನಡ ಅವತರಣಿಕೆ)
ಮೊನ್ನೆಯ ದಿವಸ ಸಂಪದದಲ್ಲಿ ಪ್ರಕಟಿಸಿದ 'ಲಲಿತಾ (ಪೂಜೆಯ) ಹಾಡು' http://sampada.net/blog/%E0%B2%B2%E0%B2%B2%E0%B2%BF%E0%B2%A4%E0%B2%BE-%E0%B2%AA%E0%B3%82%E0%B2%9C%E0%B3%86%E0%B2%AF-%E0%B2%B9%E0%B2%BE%E0%B2%A1%E0%B3%81/26/07/2012/37659 ನೋಡಿದ ಬಳಿಕ ನನ್ನ ಶ್ರೀಮತಿಯವರು ತನ್ನ ಸಂಗ್ರಹದಲ್ಲಿದ್ದ ಅದಕ್ಕೂ ಹಳೆಯದಾದ ಮತ್ತು ಅದಕ್ಕೂ ಹೆಚ್ಚು ಜೀರ್ಣವಾದ ಹನುಮಾನ್ ಚಾಲೀಸಾದ ಕನ್ನಡ ಅವತರಿಣಿಕೆಯನ್ನು ಕೊಟ್ಟರು. ಬಳ್ಳಾರಿಯ ಸಕ್ರಿ ಕರೆಡೆಪ್ಪ ಬೀದಿಯಲ್ಲಿರುವ ಹನುಮಂತನ ಗುಡಿಯಲ್ಲಿ ಶ್ರೀ ಬಾಲಾಂಜನೇಯ ಸ್ವಾಮಿಯೆಂದೇ ಪ್ರಖ್ಯಾತರಾಗಿರುವ ಸ್ವಾಮಿಗಳ ಆಶೀರ್ವಾದದಿಂದ ಇದನ್ನು ಕನ್ನಡದಲ್ಲಿ ೧೯೬೫ನೇ ಇಸವಿಯಲ್ಲಿ ರಚಿಸಿದವರು ಸಂಸ್ಕೃತ ವಿದ್ವಾಂಸರಾದ ಸಾಧು ಶರ್ಮ ಎನ್ನುವವರು. (ಇತ್ತೀಚೆಗೆ ಶ್ರೀ ಬಾಲಂಜನೇಯ ಸ್ವಾಮಿಗಳು ದೈವವಶರಾದರೆಂದು ತಿಳಿಯಿತು). ಶ್ರೀಯುತ ಸಾಧುಶರ್ಮರವರು ಮುನ್ನುಡಿಯೊಂದಿಗೆ ಹನುಮಾನ್ ಚಾಲೀಸವನ್ನು ಕನ್ನಡದಲ್ಲಿ ರಚಿಸಿರುವುದನ್ನು ಇಲ್ಲಿ ಯಥಾವತ್ತಾಗಿ ಕೊಟ್ಟಿದ್ದೇನೆ. ಇದರಿಂದ ಹನುಮಾನ್ ಚಾಲೀಸನ್ನು ಹೆಚ್ಚು ಅರ್ಥಪೂರ್ಣವಾಗಿ ಗ್ರಹಿಸಲು ಅನುಕೂಲವಾಗುತ್ತದೆನ್ನುವುದು ನನ್ನ ಅಭಿಮತ.
ಶ್ರೀ ರಾಮ
ಶ್ರೀ ಹನುಮತೇ ನಮಃ
ಶ್ರೀ ಹನುಮಾನ್ ಚಾಲೀಸಾ
ಶ್ರೀ ಗೋಸ್ವಾಮಿ ತುಲಸೀದಾಸು
(ಹೊರಗಿನ ರಕ್ಷಾಪುಟ)
-----------------------------------------------
ಶಿವನಾಮ ಮಹಿಮೆ
ವಿಶ್ವೇಶ್ವರ ವಿರೂಪಾಕ್ಷ ವಿಶ್ವರೂಪ ಸದಾಶಿವ
ಶರಣಂ ಭವ ಭೂತೇಶ ಕರುಣಾಕರ ಶಂಕರ.
ಹರಶಂಭೋ ಮಹಾದೇವ ವಿಶ್ವೇಶಾಮರವಲ್ಲಭ,
ಶಿವ ಶಂಕರ ಸರ್ವಾತ್ಮನ್ ನೀಲಕಂಠ ನಮೋಸ್ತುತೇ.
ಮೃತ್ಯುಂಜಯಾಯ ರುದ್ರಾಯ ನೀಲಕಂಠಾಯ ಶಂಭವೇ,
ಅಮೃತೇಶಾಯ ಶರ್ವಾಯ ಮಹಾದೇವಾಯತೇ ನಮಃ.
ಏತಾನಿ ಶಿವನಾಮಾನಿ ಯಃ ಪಠೇನ್ನಿಯತಃ ಸಕೃತ್
ನಾಸ್ತಿ ಮೃತ್ಯುಭಯಂ ತಸ್ಯ ಪಾಪರೋಗಾದಿ ಕಿಂಚನ.
ಪ್ರತಿನಿತ್ಯ ನಿಯಮಪೂರ್ವಕವಾಗಿ ಈ ಶಿವನಾಮಗಳನ್ನು ಪಠಿಸುವುದರಿಂದ ಸಮಸ್ತ ಪಾಪಗಳು, ರೋಗಗಳು, ಮೃತ್ಯುಭಯವು ನಾಶವಾಗುವವು.
(ಒಳಗಿನ ರಕ್ಷಾಪುಟ)
------------------------------------------------------------------------------------------------------
ಮುನ್ನುಡಿ
ಶ್ರೀ ಮದ್ವಾಲ್ಮೀಕಿ ರಾಮಾಯಣದ ಅನುವಾದವಾಗಲಿ ಅಥವ ಅದರಿಂದ ಸ್ಪೂರ್ತಿಗೊಂಡ ಕವಿಗಳ ಸ್ವತಂತ್ರ ಕಾವ್ಯವಾಗಲಿ ಇಲ್ಲದ ಭಾಷೆ ನಮ್ಮ ಭರತ ಖಂಡದಲ್ಲಿಲ್ಲ. ಆದರೂ ಶ್ರೀಮದ್ವಾಲ್ಮೀಕಿ ರಾಮಾಯಣವನ್ನು ಪಾರಾಯಣ ಮಾಡುವಂತೆ ಪ್ರಾಂತೀಯ ಭಾಷೆಗಳ ಯಾವ ರಾಮಾಯಣ ಕಾವ್ಯವನ್ನೂ ಪಾರಾಯಣ ಮಾಡುವ ಸಂಪ್ರದಾಯವಿಲ್ಲ.
ಆದರೆ ಉತ್ತರ ದೇಶದಲ್ಲಿ ಮಾತ್ರ ಶ್ರೀ ಗೋಸ್ವಾಮಿ ತುಲಸೀದಾಸರ ರಾಮಾಯಣವನ್ನು ಭಕ್ತಿ ಶ್ರದ್ಧೆಗಳಿಂದ ರಾಮ ಭಕ್ತರೆಲ್ಲರೂ ಪಾರಾಯಣ ಮಾಡುತ್ತಾರೆ. ಶ್ರೀ ಮದ್ವಾಲ್ಮೀಕಿ ರಾಮಾಯಣವಾದ ಮೇಲೆ ಹೀಗೆ ಪಾರಾಯಣಾರ್ಥವಾದ ಸ್ಥಾನಮಾನಗಳನ್ನು ಪಡೆದ ರಾಮಾಯಣ ಗ್ರಂಥವೆಂದರೆ ತುಲಸೀದಾಸ ರಾಮಾಯಣ ಒಂದೇ. ಇದರ ಕಾರಣವೇನು?
ಭಕ್ತರ ಅನಿಮಿತ್ತ ಬಂಧುವಾದ ಭಕ್ತಾಗ್ರೇಸರ ನಾರದನ ಪರಮಾನುಗ್ರಹದಿಂದ ಒಬ್ಬ ದಾರಿಗಳ್ಳನು ರಾಮನಾಮದ ಮಹಿಮೆಯಿಂದ ವಾಲ್ಮೀಕಿ ಮಹರ್ಷಿಯಾದಂತೆ ಸರ್ವಸಾಧಾರಣವಾದ ಸಾಂಸಾರಿಕ ಸುಖ ಸೌಭಾಗ್ಯಗಳಲ್ಲಿ ಮುಳುಗಿದ್ದ ತುಲಸೀದಾಸರು ಕೂಡ ಶ್ರೀ ಮದಾಂಜನೇಯನ ಪರಮಾನುಗ್ರಹಕ್ಕೆ ಪಾತ್ರರಾಗಿ ಮಹರ್ಷಿಯಾದರು.
ಪವನತನಯನ ಪ್ರೇರಣೆಯಿಂದ ಮಂತ್ರದ್ರಷ್ಟಾರರಂತೆ ದೈವೀ ಸ್ಪೂರ್ತಿಯನ್ನು ಪಡೆದರು. ಹಿಮಗಿರಿಯಿಂದ ಗಂಗೆ ಹರಿದುಬಂದಂತೆ ಅವರ ಹೃದಯಾಂತರಾಳದಿಂದ "ರಾಮಚರಿತಮಾನಸವು" ಹೊರಹೊಮ್ಮಿತು. ಈ ಕಾರಣದಿಂದಲೇ ವಾಲ್ಮೀಕಿ ರಾಮಾಯಣದಂತೆ ತುಲಸೀದಾಸ ರಾಮಾಯಣವೂ ಕೂಡ ಶ್ರೀ ರಾಮಭಕ್ತರ ಪರಮ ಪವಿತ್ರವಾದ ಪಾರಾಯಣ ಗ್ರಂಥವಾಯಿತು. ಇಂಥ ಗೋಸ್ವಾಮಿ ತುಲಸೀದಾಸರಿಗೆ ಶ್ರೀ ಮದಾಂಜನೇಯನು ಪರಮ ಗುರುವು, ಪರದೈವವೂ ಆಗಿರುವನು. ಶ್ರೀ ತುಲಸೀದಾಸರು ತಮ್ಮ ಗುರುದೇವನಾದ ಪವನತನಯನ ಭಕ್ತಿಪರವಶರಾದಾಗ ದೈವೀಸ್ಫೂರ್ತಿಯಿಂದ "ಈ ಹನುಮಾನ್ ಚಾಲೀಸು" ಅವರ ಹೃದಯದಿಂದ ಗೇಯರೂಪವಾಗಿ ಹೊರಹೊಮ್ಮಿದೆ. ಆದಕಾರಣ ಈ ಹನುಮಾನ್ ಚಾಲೀಸಿಗೆ ಮಹಾಮಂತ್ರ ಶಕ್ತಿಯಿದೆ ಅಂದರೆ ಆಶ್ಚರ್ಯವೇನು?
ಇಂಥ ಪವಿತ್ರ ಹನುಮಾನ್ ಚಾಲೀಸ್ ಮಂತ್ರಗಳನ್ನು ಕನ್ನಡಿಗರು ಕೂಡ ಪಠಿಸಿ ಧನ್ಯರಾಗುವಂತೆ ಕನ್ನಡದಲ್ಲಿ "ಹನುಮಾನ್ ಚಾಲೀಸನ್ನು" ಪ್ರಕಟಿಸಿದ ಶ್ರೀ ಶ್ರೀ ಶ್ರೀ ಬಾಲಾಂಜನೇಯ ಸ್ವಾಮಿಗಳು ಮತ್ತು ಅವರ ಅಂತರಂಗ ಅನುಯಾಯಿಗಳು ಕನ್ನಡದ ಸಾಧುಸಂತರಿಗೆ ಅಭಿನಂದನೀಯರಾಗಿದ್ದಾರೆ.
ಈ ಪುಸ್ತಕವು ಸಣ್ಣದಾದರೂ ಶ್ರೀ ಮದಾಂಜನೇಯನ ಶಾಲಿಗ್ರಾಮದಂತೆ ಆರಾಧ್ಯವಾದದ್ದು, ಅತಿ ಮಹತ್ವವುಳ್ಳದ್ದು.
ಇದನ್ನು ಪಠಿಸುವ ಭಕ್ತರೆಲ್ಲರು ಶ್ರೀ ಪವನ ತನಯನ ಪರಮಾನುಗ್ರಹದದ ಪೂರ್ವಕವಾಗಿ ಭಗವಾನ್ ಶ್ರೀರಾಮಚಂದ್ರ ಮೂರ್ತಿಯ ದಯೆಗೆ ಪಾತ್ರರಾಗಿ ಅಭ್ಯುದಯ ನಿಶ್ಶ್ರೇಯಸಗಳನ್ನು ಪಡೆಯಲಿ.
ಇಂತು ಶ್ರೀ ಮಾರುತಿಯನ್ನು ಪ್ರಾರ್ಥಿಸುವ,
ಅನುವಾದಕ
ಸಾಧುಶರ್ಮ,
ತಾರೀಕು: ೨೯-೧-೬೫
--------------------------------------------------------------------------------------------------
ಹನುಮಾನ್ ಚಾಲೀಸಾ
ಉಪೋದ್ಘಾತ
ಶ್ರೀಮದಾಂಜನೇಯನು ಸಮಸ್ತ ದೇವತೆಗಳ ಸ್ವರೂಪವಾಗಿದ್ದಾನೆ. ಸಾಕ್ಷಾತ್ ಪರಮೇಶ್ವರನೇ ಶ್ರೀರಾಮ ಮಹಿಮೆಯನ್ನು, ಅನನ್ಯ ಭಕ್ತಿಯನ್ನು, ಜ್ಞಾನವನ್ನು, ಆದರ್ಶ ಭಕ್ತಿಮಯ ಪವಿತ್ರ ಜೀವನವನ್ನು ಪ್ರಪಂಚಕ್ಕೆ ತೋರಿಸಲು ಹನುಮಂತನಾಗಿ ಅವತರಿಸಿದ್ದಾನೆ.
ರಾಮನಾಮ ಮಹಿಮೆಯನ್ನು ಜಗತ್ತಿಗೆ ಸಾರಿದವನು ಹನುಮಂತನು. ರಾಮನಾಮದ ಮೇಲಿರುವ ನಿರುಪಮ ಶ್ರದ್ಧಾಭಕ್ತಿಯಿಂದಲೇ ಹನುಮಂತನು ಶತಯೋಜನ ವಿಸ್ತಾರವಾದ ಮಹಾಸಮುದ್ರವನ್ನು ಅನಾಯಾಸವಾಗಿ ದಾಟಿದನು. ಶ್ರೀರಾಮನಿಗಿಂತಲೂ ಶ್ರೀರಾಮನಾಮದ ಮಹಿಮೆಯೇ ಹಿರಿದೆಂದು ಸಾರಿದ ಅಸಮಾನ ರಾಮಭಕ್ತನು.
"ರಾಮತ್ವತ್ತೋಧಿಕಂ ನಾಮ ಇತಿ ಮನ್ಯಾಮ ಹೇವಯಂ,
ತ್ವಯೈಕಾತಾರಿತಾಯೋಧ್ಯಾನಾಮ್ನಾತುಭುವನತ್ರಯಂ"
ರಾಮಚಂದ್ರಾ! ನಿನಗಿಂತಲೂ ನಿನ್ನ ನಾಮವು ದೊಡ್ಡದೆಂದು ನಾವು ನಂಬುತ್ತೇವೆ. ಏಕೆಂದರೇ ನೀನು ಅಯೋಧ್ಯಾಪುರವಾಸಿಗಳನ್ನು ಮಾತ್ರ ಉದ್ದರಿಸಿದೆ. ನಿನ್ನ ನಾಮವಾದರೋ ಮೂರು ಲೋಕಗಳನ್ನು ಉದ್ಧರಿಸುತ್ತದೆ. ಶ್ರೀರಾಮನಿಗೆ ಆಂಜನೇಯನು ಅನನ್ಯಭಕ್ತ ಶಿರೋಮಣಿ. "ಯತ್ರ ಯತ್ರ ರಘುನಾಥ ಕೀರ್ತನಂ, ತತ್ರ ತತ್ರ ಕೃತಮಸ್ತಕಾಂಜಲಿಂ, ಬಾಷ್ಪವಾರಿ ಪರಿಪೂರ್ಣ ಲೋಚನಂ". ಎಲ್ಲೆಲ್ಲಿ ರಾಮನಾಮ ಸಂಕೀರ್ತನೆ ನಡೆಯುವುದೋ ಅಲ್ಲೆಲ್ಲ ಹನುಮಂತನು ತಲೆಯ ಮೇಲೆ ಕೈಜೋಡಿಸಿಕೊಂಡು ಆನಂದಬಾಷ್ಪಗಳನ್ನು ಸುರಿಸುವನು.
ಹನುಮಂತನನ್ನು ಕಂಡರೆ ಭೂತಪ್ರೇತ ಪಿಶಾಚಿ ಬ್ರಹ್ಮರಾಕ್ಷಸಾದಿ ದುಷ್ಟ ಶಕ್ತಿಗಳು ಓಡಿ ಹೋಗುವವು. ಇದು ಎಲ್ಲರ ಅನುಭವಕ್ಕೆ ಬಂದ ವಿಷಯ. ಹನುಮಂತನು ಮೈರಾವಣ ವಧೆಯ ಸಂದರ್ಭದಲ್ಲಿ ಕಾಳಿಕಾದೇವಿಯನ್ನು ಕೂಡ ಜಯಿಸಿದ ವಿಷಯ ಜಗದ್ವಿಖ್ಯಾತವಾಗಿದೆ. ಹನುಮಂತನನ್ನು ಮೀರಿದ ಪರದೈವವು ಶ್ರೀರಾಮಚಂದ್ರನ ಹೊರತು ಬೇರೆ ಯಾರೂ ಇಲ್ಲ. ರಾಮಭಕ್ತರಿಗೆ ಹನುಮಂತನು ಅಂಗರಕ್ಷಕನು, ಆಂಜನೇಯನು ರಾಮಭಕ್ತರಿಗೆ ಹೀಗೆ ಹೇಳಿದ್ದಾನೆ:
ಶ್ರುತಿಃ ಐಹಿಕೇಷುಚ ಕಾರ್ಯೇಷು ಮಹಾಪತ್ಸುಚ ಸರ್ವದಾ l
ನೈವ ಯೋಜ್ಯೋ ರಾಮಮಂತ್ರಃ ಕೇವಲಂ ಮೋಕ್ಷಸಾಧಕಃ ll
ಐಹಿಕೇ ಸಮನುಪ್ರಾಪ್ತೇ ಮಾಂ ಸ್ಮರೇದ್ರಾಮಸೇವಕಂ,
ಯೋ ರಾಮಂ ಸ್ಮರೇನ್ನಿತ್ಯಂ ಭಕ್ತೋಮಯ ಪರಾಯಣಃ ll
ತಸ್ಯಾಹ ಮಿಷ್ಟಸಂಸಿದ್ಧ್ಯರ್ತ್ಯೈ ದೀಕ್ಷಿತೋಸ್ಮಿಮುನೀಶ್ವರಾಃ,
ವಾಂಛಿತಾರ್ಥಂ ಪ್ರದಾಸ್ಯಾಮಿ ಭಕ್ತಾನಾಂ ರಾಘವಸ್ಯತು ll
ಸರ್ವದಾ ಜಾಗರೂಕೋಸ್ಮಿ ರಾಮಕಾರ್ಯ ಧುರಂಧರಃ ll
-ರಾಮರಹಸೋಪನಿಷತ್ತು
"ಐಹಿಕ ಪ್ರಯೋಜನಗಳಿಗೆ ಮಾತ್ರ ಮೋಕ್ಷ ಸಾಧಕವಾದ ರಾಮಮಂತ್ರವನ್ನು ಉಪಯೋಗಿಸಬಾರದು. ಐಹಿಕ ಪ್ರಯೋಜನಗಳ ಅಪೇಕ್ಷೆಯಿದ್ದರೆ ರಾಮಸೇವಕನಾದ ನನ್ನನ್ನು ಸ್ಮರಿಸಿರಿ.
ಮುನೀಶ್ವರರೇ! ಯಾರು ಶ್ರೀರಾಮನನ್ನು ಭಕ್ತಿ ಶ್ರದ್ಧೆಗಳಿಂದ ಸಂಸ್ಮರಿಸುವರೋ ಅವರ ಇಷ್ಟಾರ್ಥಗಳನ್ನು ನೆರವೇರಿಸಲು ಬದ್ಧಕಂಕಣನಾಗಿದ್ದೇನೆ. ನಾನು ಯಾವಾಗಲೂ ರಾಮಕಾರ್ಯಾರ್ಥವಾಗಿ ಜಾಗರೂಕನಾಗಿರುತ್ತೇನೆ.
"ಬುದ್ಧಿರ್ಬಲಂ ಯಶೋ ಧರ್ಯಂ ನಿರ್ಭಯತ್ವಮರೋಗತಾ,
ಅಜಾಡ್ಯಂ ವಾಕ್ಪಟುತ್ವಂಚ ಹನುಮತ್ಸ್ಮರಣಾದ್ಭವೇತ್"
ಹನುಮನ್ನಾಮ ಸ್ಮರಣೆಯಿಂದ ಬುದ್ಧಿ, ಬಲ, ಕೀರ್ತಿ, ಧೈರ್ಯ, ನಿರ್ಭಯತ್ವ, ಆರೋಗ್ಯ, ಅಜಾಡ್ಯ, ವಾಕ್ಪಟುತ್ವ ಅಭಿವೃದ್ಧಿಯಾಗುವವು. ಎಲ್ಲರೂ ಅಪೇಕ್ಷಿಸುವ ದೈವೀ ಗುಣಗಳಿವು. ಇವುಗಳನ್ನು ಅನುಗ್ರಹಿಸುವ ಮಾರುತಿಯ ನಾಮಸ್ಮರಣವು ಎಲ್ಲರಿಗೂ ಪರಮಾದರಣೀಯವಾಗಿದೆ.
ಪ್ರಸ್ತುತ ಈ ಚಿಕ್ಕ ಪುಸ್ತಕದಲ್ಲಿ ಶ್ರೀ ಗೋಸ್ವಾಮಿ ತುಲಸೀದಾಸರು ರಚಿಸಿದ "ಹನುಮಾನ್ ಚಾಲೀಸ್" ಎಂಬುದನ್ನು ಕನ್ನಡ ಅನುವಾದದೊಡನೆ ಪ್ರಕಟಿಸುತ್ತಿದ್ದೇವೆ. ಇದನ್ನು ಭಕ್ತರು ಪ್ರೇಮಾದರಗಳಿಂದ, ಭಕ್ತಿ ಶ್ರದ್ಧೆಗಳಿಂದ ಇದರ ಪರಮ ಪ್ರಯೋಜನವನ್ನು ಪಡೆಯ ಬೇಕೆಂದು ನಮ್ಮ ಮುಖ್ಯವಾದ ಆಶಯ.
---------------------------------------------------------------------------------------------------
ಪಾರಾಯಣದ ಮಹಿಮೆ
"ಹನುಮಾನ್ ಚಾಲೀಸಾ ಪಾರಾಯಣವು ಸುಂದರಕಾಂಡದ ಪಾರಾಯಣಕ್ಕೆ ಸಮಾನ"
ದಿನಕ್ಕೆ ೧೧ ಆವರ್ತಿಯಂತೆ ಮಂಡಲ-೪೦ ದಿನಗಳು ಪಾರಾಯಣ ಮಾಡಿದರೆ ಸರ್ವಕಾರ್ಯಾರ್ಥಸಿದ್ಧಿ. ಒಂದೇ ಪದ್ಮಾಸನದಲ್ಲಿ ಕುಳಿತು ೧೦೮ ಸಲ ಪಠಿಸಿದರೆ ವಿಶೇಷ ಕಾರ್ಯಸಿದ್ಧಿಯಾಗುವುದು.
ಪ್ರತಿದಿವಸ ಮೂರು ಹೊತ್ತು ಒಂದು ಸಲವಾದರೂ ಪಠಿಸಿದ ಭಕ್ತರ ಯೋಗಕ್ಷೇಮಗಳನ್ನು ಭಕ್ತರಕ್ಷಕನಾದ ಹನುಮಂತನೇ ತಾನಾಗಿ ನೋಡಿಕೊಳ್ಳುವನು.
-------------------------------------------------------------------------------------------------
ಜಯಜಯ ಕಪಿ ಶ್ರೀರಾಮಪ್ರಿಯ ಧನ್ಯಧನ್ಯ ಹನುಮಂತl
ನಮೋ ನಮೋ ಶ್ರೀ ಮಾರುತೀ ಬಲಹಾರೀ ಬಲವಂತll
ಶ್ರೀರಾಮಪ್ರಿಯನಾದ ಕಪೀಶ್ವರನಿಗೆ ಜಯವಾಗಲಿ,
ಹನುಮಾ! ನೀನು ಧನ್ಯ! ಬಲವಂತನಾದ ಮಾರುತಿ! ನಮೋ ನಮೋ.
ನಮೋ ನಮೋ ಶ್ರೀ ಮಾರುತೀ ಜಾಕೇ ಬಸ ಶ್ರೀರಾಮl
ಕರಹುಕೃಪಾನಿಶಿದಿನ ಜಪೌಂ ಶ್ರೀಸಿಯಸಿಯಪಿಯನಾಮll
ರಾಮನ ಹೃದಯದಲ್ಲಿರುವ ಮಾರುತೀ! ನಿನಗೆ ನಮಸ್ಕಾರ.
ಶ್ರೀ ಸೀತಾಪ್ರಿಯನಾದ ರಾಮನ ನಾಮವನ್ನು ರಾತ್ರಿ ಹಗಲೂ
ಜಪಿಸುವೆ. ದಯೆ ತೋರು.
ಸಿಯದುಲಾರೇ ಪವನಸುತ ಮಮ ಗುರು ಅಂಜನಿಪೂತl
ಸತಸಂಗತಿ ನಿಜಾಚರಣರತೀ ದೇಹುಮೊಹಿ ಪ್ರಿಯದೂತll
ಸೀತಾದೇವಿಗೆ ನೀನು ಮುದ್ದು ಮಗು. ಅಂಜನೀ ಪವನತನಯನಾದ
ನೀನೆ ನನಗೆ ಪರಮ ಗುರುವು. ಸೀತೆಗೆ ಪ್ರಿಯದೂತನಾದ ನಿನ್ನ ಸಾಂಗತ್ಯವೇ
ಸತ್ಸಾಂಗತ್ಯ. ನಿನ್ನ ಪಾದಸೇವೆಯನ್ನು ನನಗೆ ಅನುಗ್ರಹಿಸು.
**********
ಶ್ರೀ ಗುರುದೇವನ ಚರಣ ಸರೋಜದ
ಪುಪ್ಪೊಡಿಯಿಂದೆನ ಮನದ ಕನ್ನಡಿಯ
ಶುದ್ಧಗೊಳಿಸಿ ಪರಿಶುದ್ಧ ಭಾವದಿಂ
ಸಮಸ್ತ ಪುರುಷಾರ್ಥಂಗಳನೀಯುವ
ಶ್ರೀರಾಮನ ಸತ್ ಕೀರ್ತಿ ಬಣ್ಣಿಸುವೆ
ತಣಿಸುವೆ ಮನ್ ಮನವ.
"ಅಷ್ಟ ಕಷ್ಟಗಳ ತವರೂರಾಗಿಹ
ಶರೀರವಜ್ಞಾನದಿ ಬಂತೆಂ"ದು
ತಿಳಿದಜ್ಞಾನದ ಕತ್ತಲು ಕಳೆಯಲು
ಪವನ ಕುಮಾರನ ಧ್ಯಾನಿಸುವೆ. ll೧ll
ಆ ಭಕ್ತಾಗ್ರೇಸರ ಕೇಸರಿ ಕುವರಂ
ಬಲ ಸದ್ವಿದ್ಯಾ ಬುದ್ಧಿ ಧೈರ್ಯಗಳ
ದಯಪಾಲಿಸಿ ಷಡ್ರಿಪು ಭಾದೆಗಳನು
ಪರಿಹರಿಸಲಿ ನಿಶ್ಶೇಷವಾಗಿ ದಯತೋರಿ. ll೨ll
ಜ್ಞಾನ ಸದ್ಗುಣ ಗಣ ಸಮುದ್ರಾ!
ಪವನ ತನಯಾ ಜಯ ಜಯಾ
ಮುಚ್ಚಿಗಂಗಳ ಬೆಳಗುತಿಹಹೇ
ಪವನ ತನಯಾ ಜಯ ಜಯಾ ll೧ll
ರಾಮದೂತಾ! ಅತುಲ ಭುಜಬಲ
ಮೂಲಕಾರಣ ಪುಣ್ಯ ಪುರುಷಾ!
ಅಂಜೀಸುಕುಮಾರ ಶುಭಕರ
ಭಕ್ತನುತನಾಮಾಂಚಿತಾ!
ಪವನ ತನಯಾ ಜಯ ಜಯಾ ll೨ll
ಹೇ ಮಹಾ ವೀರಾಧಿವೀರಾ!
ವಿನುತ ವಿಕ್ರಮ ಸುಂದರಾಕಾರಾ!
ವಜ್ರ ಪರ್ವತ ಸಮ ಶರೀರಾ!
ದುಷ್ಟಬುದ್ಧಿಯ ಕಳೆದು ಸನ್ಮತಿ
ನೀಡಿ ನಿರ್ಮಲ ಹೃದಯದಲಿ ಧ್ಯಾ
ನಿಸುವ ಭಕ್ತರ ಪೊರೆವ ಸ್ವಾಮೀ!
ಪವನ ತನಯಾ ಜಯ ಜಯಾ ll೩ll
ಮೇರು ಪರ್ವತದಂತೆ ಶೋಭಿಪ
ಮಹಿತ ಮೂರ್ತೀ! ಅತಿ ಮನೋಹರ
ವೇಷ ಭೂಷಾ! ಧಿವ್ಯಕುಂಡಲಶೋಭಿ-
ಕರ್ಣದ್ವಯವಿರಾಜಿ ಶ್ರೀ ಕಪೋಲಾ!
ಎತ್ತಿಕಟ್ಟಿದ ಮುಡಿಯುಮೊಪ್ಪುವ ಉತ್ತಮಾಂಗನೆ
ಪವನ ತನಯಾ ಜಯ ಜಯಾ ll೪ll
ವಜ್ರವಂ ಧ್ವಜವನ್ನು ಕರ ಕಮ
ಲಂಗಳಲಿ ಧರಿಸಿರ್ಪ ಮಾರುತಿ!
ಮೌಂಜಿಯಂ ಯಜ್ಞೋಪವೀತದಿ
ರುವೆನ ದಿವ್ಯಸ್ಕಂದನೇ! ಹೇ
ಪವನ ತನಯಾ ಜಯ ಜಯಾ ll೫ll
ಹೇ ಸದಾ ಶಿವ ಪುತ್ರ! ಕೇಸರಿ ಸತ್ ಕುಮಾರಾ!
ಹೇ ಮಹಾದ್ಭುತತೇಜ ಪ್ರಬಲಪ್ರತಾಪಮೂರ್ತೀ!
ಸಕಲ ಜಗದಭಿವಿನುತ ಚರಿತಾ
ಪವನ ತನಯಾ ಜಯ ಜಯಾ ll೬ll
ಸಕಲ ವಿದ್ಯಾಪಾರಗಾ! ಸದ್ಗುಣ ಗರಿಷ್ಠಾ!
ಅತುಲ ಚತುರಾ! ರಾಮ ಸೇವಾ
ಕಾರ್ಯಸಿದ್ಧಿಗೆ ಸತತ ಆತುರಪಡುವ ಮಾರುತಿ!
ಪವನ ತನಯಾ ಜಯ ಜಯಾ ll೭ll
ಶ್ರೀ ರಘೊತ್ತಮ ದಿವ್ಯ ಚರಿತೆಯ
ಸತತ ಕೇಳುವ ಭಕ್ತಿ ರಸಿಕನೆ!
ರಾಮ ಲಕ್ಷ್ಮಣ ಸೀತೆಯರ ಮನದಲ್ಲಿ ಧರಿಸಿಹ
ಪುಣ್ಯಮೂರ್ತೀಶ
ಪವನ ತನಯಾ ಜಯ ಜಯಾ ll೮ll
ತಂದು ಸಂಜೀವಿನಿಯ ಲಕ್ಷ್ಮಣ
ನನ್ನು ಬದುಕಿಸಿದಾಗರಾಮನು
ಬಹಳ ಸಂತಸದಿಂದ ಹೊಗಳುತ
ನಿನ್ನ ಪ್ರೇಮದಿ ಅಪ್ಪಿಕೊಂಡನು
ಪವನ ತನಯಾ ಜಯ ಜಯಾ ll೯ll
ಸೂಕ್ಷ್ಮರೂಪವ ಧರಿಸಿ ಸೀತೆಯ
ಕಂಡು ಮುದದಿಂ ಬಳಿಕ ಭೀಕರ ರೂಪವನು ನೀ
ತಾಳಿ ಲಂಕೆಯ ಬೂದಿ ಮಾಡಿದೆ.
ಪವನ ತನಯಾ ಜಯ ಜಯಾ ll೧೦ll
ಅತಿ ಭಯಂಕರ ರೂಪವಂ ನೀ
ತಾಳಿ ಅಸುರರ ಕೊಂದು ಕದನದಿ
ಸಫಲಗೊಳಿಸಿದೆ ರಾಮ ಕಾರ್ಯವ
ಪವನ ತನಯಾ ಜಯ ಜಯಾ ll೧೧ll
ರಾಮಚಂದ್ರನು ಪ್ರೇಮಭರದಿಂ
ಪೊಗಳಿ "ಹನುಮಾ ನನಗೆ ನೀ
ಭರತನಿಗೆ ಸಮನೈ" ಎಂದನೈ, ಹೇ
ಪವನ ತನಯಾ ಜಯ ಜಯಾ ll೧೨ll
ರಾಮ ಸಾವಿರ ಮುಖಗಳಿಂಭವ
ದೀಯ ಕೀರ್ತಿಯ ಹೊಗಳಿ ಹರಸುತ
ಅಪ್ಪಿಕೊಂಡನು ನಿನ್ನಹೇ ಸ್ವಾಮೀ!
ಪವನ ತನಯಾ ಜಯ ಜಯಾ ll೧೩ll
ಸನಕ ಮೊದಲಾದಮರ ಋಷಿಗಳು
ಬ್ರಹ್ಮ ಮೊದಲಾದಮರ ಬೃಂದವು
ಸಕಲ ಮುನಿಗಣ ಭಕ್ತ ನಾರದ
ಶಾರದೆಯುಮಾ ಆದಿಶೇಷನು
ಯಮಕುಬೇರ ಪ್ರಭೃತಿ ದಿಕ್ ಪಾ
ಲಕರು ಕವಿಗಳು ಪಂಡಿತೋತ್ತಮ
ರೆಲ್ಲ ನಿನ್ನಯ ದಿವ್ಯ ಕೀರ್ತಿಯ
ಹಾಡಬಲ್ಲರೆ ಪವನ ತನಯಾ ಜಯ ಜಯಾ ll೧೪-೧೫ll
ಭೀತ ಸುಗ್ರೀವನಿಗೆ ಮಹದುಪ
ಕಾರವಂ ನೀ ಮಾಡಿ ರಾಘವ
ನೊಡನೆ ಸುಗ್ರೀವನಿಗೆ ಗೆಳೆತನ ಬೆಳೆಸಿದಾತನೆ
ಪವನ ತನಯಾ ಜಯ ಜಯಾ ll೧೬ll
ನಿನ್ನ ಸಲಹೆಯ ನಾ ವಿಭೀಷಣ
ಕೇಳಿ ಲಂಕೆಗೆ ರಾಜನಾದನು
ಎಂಬ ಸಂಗತಿ ಸಕಲ ಲೋಕಕೆ ವಿಧಿತವಾಗಿದೆ
ಪವನ ತನಯಾ ಜಯ ಜಯಾ ll೧೭ll
ಎರಡು ಸಾವಿರ ಗಾವುದದ ಬಲು
ದೂರದಲ್ಲಿಹ ಅರುಣ ತರಣಿಯ
ಪಕ್ವ ಫಲವೆಂದೆಣಿಸಿ ಲಂಘಿಸಿ
ಲೀಲೆಯೆಂ ನೀ ಹಿಡಿದು ನುಂಗಲು ಹೋದೆಯಲ್ಲವೆ!
ಪವನ ತನಯಾ ಜಯ ಜಯಾ ll೧೮ll
ರಾಮಮುದ್ರಿಕೆಯನ್ನು ಮುಖದಲಿ
ಭಕ್ತಿಯಿಂ ಬಚ್ಚಿಟ್ಟು ಅಂಬುಧಿಯ ದಾಟಿದೊಡೆ
ಆಶ್ಚರ್ಯವೇಸೈ!
ಪವನ ತನಯಾ ಜಯ ಜಯಾ ll೧೯ll
ಜಗದಿ ದುಷ್ಕರ ಕಾರ್ಯವೆಲ್ಲವು
ನಿನ್ನ ಪರಮಾನುಗ್ರಹದ ನಿಸ್ಸೀಮಬಲದಿಂ
ಸುಕುರಮಪ್ಪದು ಆಂಜನೇಯಾ
ಪವನ ತನಯಾ ಜಯ ಜಯಾ ll೨೦ll
ರಾಮಚಂದ್ರನ ದಿವ್ಯ ಮಂದಿರ
ಬಾಗಿಲನು ನೀ ಕಾದುಕೊಂಡಿಹೆ
ನಿನ್ನ ಅಪ್ಪಣೆ ಪಡೆಯದೇ ವೊಳ
ಗಾರು ಹೋಗಲು ಬಲ್ಲರೋ ಹೇ ಪ್ರಾಣದೇವಾ!
ಪವನ ತನಯಾ ಜಯ ಜಯಾ ll೨೧ll
ಶರಣು ಶರಣೆಂದವರಿಗೆಲ್ಲಾ
ಸುಖವ ದಯಪಾಲಿಸುವೆ ಹನುಮಾ!
ನೀನು ರಕ್ಷಕನಾಗಿ ನಮಗಿರೆ
ಮೂರುಲೋಕದೊಳಾರ ಭಯವೂ ಇಲ್ಲವೈ, ಹೇ
ಪವನ ತನಯಾ ಜಯ ಜಯಾ ll೨೨ll
ನಿನ್ನರಿಪುಜನ ಭೀಮ ತೇಜವ
ಸಹಿಸುವನು ನೀನೊಬ್ಬನೇ ಈ
ಜಗದಿ ಹನುಮಾ! ನೀನೆ ಕೇಕೆಯ ಹಾಕಿಹುಂಕರಿ
ಸಿದರೆ ನಡುಗುವುವೆಲ್ಲ ಲೋಕಗಳು
ಪವನ ತನಯಾ ಜಯ ಜಯಾ ll೨೩ll
ಹೇ ಮಹಾ ವೀರಾಧಿವೀರನೆ!
ನಿನ್ನ ನಾಮವ ನೆನೆದು ಕೇಳ್ದೊಡೆ
ಭೂತಪ್ರೇತ ಪಿಶಾಚಗಳು ಭಯದಿಂದ ಓಡುವವು
ಪವನ ತನಯಾ ಜಯ ಜಯಾ ll೨೪ll
ವೀರ ಹನುಮಾ ನಿನ್ನ ನಾಮವ
ಶ್ರದ್ಧೆಯಿಂ ಸದ್ಭಕ್ತಿಯಿಂದಲಿ
ಸತತ ಜಪಿಸುವ ಸಾಧುಸಂತರ
ರೋಗ ಪೀಡಾದಿಗಳು ತೊಲಗುವವು
ಪವನ ತನಯಾ ಜಯ ಜಯಾ ll೨೫ll
ಮೂರುಕರಣಂಗಳಲಿ ಹನುಮಾ
ಯಾರು ನಿನ್ನನು ಧ್ಯಾನಿಸುವರೋ
ಅವರು ತಮ್ಮ ಸಮಸ್ತ ಸಂಕಟಗಳನು ದಾಟುವರೈ.
ಪವನ ತನಯಾ ಜಯ ಜಯಾ ll೨೬ll
ಸಕಲರಾಜರಮುಕುಟಮಣಿ
ಶ್ರೀ ಸಾಧುರಕ್ಷಕರಾಮಚಂದ್ರನ!
ಸಕಲ ಕಾರ್ಯಂಗಳನು ಸಾಧಿಪಶಕ್ತಿಮೂರ್ತೀ!
ಪವನ ತನಯಾ ಜಯ ಜಯಾ ll೨೭ll
ಯಾರುಯಾರಿಗೆ ಯಾವದಿಷ್ಟವೋ
ನಿನ್ನ ಭಜಿಸುವ ಭಕ್ತಜನರಿಗೆಲ್ಲವುಂ ಅತಿ
ಶೀಘ್ರದಲಿ ಫಲಿಸುವವು ಹನುಮಾ!
ಪವನ ತನಯಾ ಜಯ ಜಯಾ ll೨೮ll
ನಿನ್ನ ಪ್ರಬಲ ಪ್ರತಾಪ ಮಹಿಮೆಯು
ಸುಪ್ರಸಿದ್ಧವು ನಾಲ್ಕು ಯುಗಗಳ ಸಕಲ ಜನರಿಗೆ
ನಿನ್ನ ಪ್ರಕಟಪ್ರತಾಪದಿಂದಲೆ
ಸಂತತೋಜ್ವಲ ಮಾಗಿಮೆರೆವುದು ಹನುಮ ಮುಜ್ಜಗವು
ಪವನ ತನಯಾ ಜಯ ಜಯಾ ll೨೯ll
ಸಾಧುಸಜ್ಜನರನ್ನು ರಕ್ಷಿಸೆ
ಬದ್ಧಕಂಕಣ ನೀನು ಹನುಮಾ!
ಅಸುರರಂ ನೀಕೊಂದು ಶ್ರೀರಾ
ಮನಿಗೆ ಪ್ರಿಯವಂಮಾಡಿ ಪ್ರಿಯನಾದೈ.
ಪವನ ತನಯಾ ಜಯ ಜಯಾ ll೩೦ll
ಅಷ್ಟಸಿದ್ಧಿ ಸಮೇತ ನವನಿಧಿಗಳನು
ಭಜಿಸುವ ಭಕ್ತರಿಗೆ ನೀ ಕೊಡುವವೊಲು
ವೈದೇಹಿ ವರವನು ನಿನಗೆ ಕೊಟ್ಟಳು
ಪವನ ತನಯಾ ಜಯ ಜಯಾ ll೩೧ll
ನಿನ್ನ ಬಳಿ ಶ್ರೀರಾಮಚಂದ್ರ ರ
ಸಾಯನವು ಸುಸಮೃದ್ಧಿಯಾಗಿದೆ
ನಿನ್ನ ನಂಬಿದ ಭಕ್ತರಿಗೆ ನೀ
ನದನು ಕುಡಿಸುವೆ
ಪವನ ತನಯಾ ಜಯ ಜಯಾ ll೩೨ll
ಹನುಮ ನಿನ್ನನುಭಜಿಸಿತಿರ್ದೊಡೆ
ರಾಮ ಬ್ರಹ್ಮಾನಂದ ಪಡುವನು
ಜನ್ಮ ಜನ್ಮಾಂತರದ ದುಃಖಂ
ಗಳನು ದೂರೀಕರಿಸಿ ಕಾಯುವೆ
ಪವನ ತನಯಾ ಜಯ ಜಯಾ ll೩೩ll
ನಿನ್ನ ಭಜಿಸುವ ಭಕ್ತರೆಲ್ಲರು
ಎಲ್ಲಿ ಹುಟ್ಟಿದರೇನು ಹರಿಸದ್
ಭಕ್ತರೇ. ಶ್ರೀರಾಮಧಾಮಕೆ
ಪೋಗುವರು ತಮ್ಮಂತ್ಯಕಾಲದಲಿ
ಪವನ ತನಯಾ ಜಯ ಜಯಾ ll೩೪ll
ಯಾವು ಬೇರೆ ದೇವರಂ ಮನದಲ್ಲಿ ನೆನೆಯದೆ
ನಂಬಿ ನಿನ್ನನು ಧ್ಯಾನಿಸುತ್ತಿರೆ
ಸರ್ವ ಸುಖಗಳನೀವೆ ಕೃಪೆಯಿಂ ಹೇ ಕಪೀಶ್ವರ!
ಪವನ ತನಯಾ ಜಯ ಜಯಾ ll೩೫ll
ಅತುಲ ಭುಜಬಲ ವೀರಹನುಮನ
ಸ್ಮರಿಸುತಿರ್ದೊಡೆ ಸಕಲಸಂಕಟ
ನಾಶವಾಗುವದನಘ ಹನುಮನ
ಕರುಣೆಯಿಂದಲಿ ಪೀಡೆಗಳು ತೊಲಗುವವು ಶೀಘ್ರದಲಿ
ಪವನ ತನಯಾ ಜಯ ಜಯಾ ll೩೬ll
ಹೇ ಪ್ರಭೋ ಹನುಮಂತರಾಯಾ!
ಪವನ ತನಯಾ ಜಯ ಜಯಾ
ಸ್ವಾಮಿ ಶ್ರೀ ಗುರುದೇವನಂದದಿ
ಭಕ್ತರಲಿ ದಯೆತೋರಿ ಸಲಹೋ
ಪವನ ತನಯಾ ಜಯ ಜಯಾ ll೩೭ll
ಯಾರು ನೂರಾವರ್ತಿ ಹನುಮಾನ್
ದಿವ್ಯಚಾಲಿಸನ್ನು ಭಕ್ತಿ
ಶ್ರದ್ಧೆಯಿಂ ಪಠಿಸುವರೊ ಅವರಿಗೆ
ಸಕಲ ಭಂದಗಳಿಂದ ಬಿಡುಗಡೆ
ನಿತ್ಯಸುಖಸೌಭಾಗ್ಯಗಳು ಸಿದ್ಧಿಪವು
ಪವನ ತನಯಾ ಜಯ ಜಯಾ ll೩೮ll
ಯಾರು ಹನುಮನ ದಿವ್ಯ ಚಾಲೀ
ಸನ್ನು ಸ್ತೋತ್ರಗೈವರೋ ಆ
ಸಾಧು ಜನರಿಗೆ ಪಾರ್ವತೀಪರ
ಮೇಶ ಸಾಕ್ಷಿಕವಾಗಿ ಸಿದ್ಧಿಪವೆಲ್ಲ ಕಾರ್ಯಗಳು
ಪವನ ತನಯಾ ಜಯ ಜಯಾ ll೩೯ll
ಭಕ್ತ ತುಲಸೀದಾಸ ಸಂತತ ಹರಿಯದಾಸನು
ಮತ್ಪ್ರಭೋ ಶ್ರೀರಾಮಚಂದ್ರಾ! ನನ್ನ ಹೃದಯದಿ
ವಾಸವಾಗಿರು ವಾಸವಾದಿನುತಾ!
ಪವನ ತನಯಾ ಜಯ ಜಯಾ ll೪೦ll
ಕೇಸರಿಪುತ್ರಾ! ಸಂಕಟಹರಣಾ!
ಸಮಸ್ತ ಮಂಗಳಕರ ಶುಭಮೂರ್ತಿ!
ಸೀತಾಲಕ್ಷ್ಮಣ ಸಹಿತ ಶ್ರೀ ರಘು-
ರಾಮನೊಡನೆ ಮೇಣ್ ಸಕಲದೇವತಾ-
ವೃಂದದಿ ಮುದದಿಂ ನನ್ನ ಹೃದಯದಲಿ
ನೆಲಸಿರು ಹನುಮಾ! ಜೈ ಜೈ ಜೈ. ll೪೧ll
ವಾಯುಸುತನೇ ಗತಿಯೊ ಯಾರಿಗೆ
ಅವರ ಪ್ರಜ್ಞಾಬಲಗಳೆಲ್ಲವು
ತಪ್ಪದೇ ಸಂಸಿದ್ಧಿ ಪಡೆವವು
ಇದು ಶಿಲಾ ಶಾಸನವು ವಜ್ರದಿ
ಕೊರೆದ ಶಾಸನವೈ. ll೪೨ll
***
ಕನ್ನಡಿಸಿದವರು: ಸಾಧುಶರ್ಮ, ಸಂಸ್ಕೃತ ಪಂಡಿತರು, ವಾರ್ಡ್ಲಾ ಹೈ ಸ್ಕೂಲ್, ಬಳ್ಳಾರಿ.
ಪ್ರಕಟಣೆ: ಶ್ರೀ ಬಾಲಾಂಜನೇಯ ಸ್ವಾಮಿ ದೇವಾಲಯ, ಸಕ್ರಿ ಕರಿಡೆಪ್ಪ ಬಾವಿ ಬೀದಿ, ಬಳ್ಳಾರಿ
ಮುದ್ರಣ: ನವನೀತ ಪವರ್ ಪ್ರೆಸ್, ಬಳ್ಳಾರಿ
-----------------------------------------------
ಚಿತ್ರಕೃಪೆ: ಗೆಳೆಯನೊಬ್ಬ ಕಳುಹಿಸಿದ ಮಿಂಚಂಚೆಯ ಸಂಗ್ರಹದಿಂದ
Comments
ಉ: ಆಂಜನೇಯನಿಗೆ ನಲವತ್ತು ಪದ್ಯ ನಮನಗಳು (ಹನುಮಾನ್ ಚಾಲೀಸಾ: ಕನ್ನಡ ...
In reply to ಉ: ಆಂಜನೇಯನಿಗೆ ನಲವತ್ತು ಪದ್ಯ ನಮನಗಳು (ಹನುಮಾನ್ ಚಾಲೀಸಾ: ಕನ್ನಡ ... by veena wadki
ಉ: ಆಂಜನೇಯನಿಗೆ ನಲವತ್ತು ಪದ್ಯ ನಮನಗಳು (ಹನುಮಾನ್ ಚಾಲೀಸಾ: ಕನ್ನಡ ...
ಉ: ಆಂಜನೇಯನಿಗೆ ನಲವತ್ತು ಪದ್ಯ ನಮನಗಳು (ಹನುಮಾನ್ ಚಾಲೀಸಾ: ಕನ್ನಡ ...
In reply to ಉ: ಆಂಜನೇಯನಿಗೆ ನಲವತ್ತು ಪದ್ಯ ನಮನಗಳು (ಹನುಮಾನ್ ಚಾಲೀಸಾ: ಕನ್ನಡ ... by dvkini
ಉ: ಆಂಜನೇಯನಿಗೆ ನಲವತ್ತು ಪದ್ಯ ನಮನಗಳು (ಹನುಮಾನ್ ಚಾಲೀಸಾ: ಕನ್ನಡ ...
ಉ: ಆಂಜನೇಯನಿಗೆ ನಲವತ್ತು ಪದ್ಯ ನಮನಗಳು (ಹನುಮಾನ್ ಚಾಲೀಸಾ: ಕನ್ನಡ ...
In reply to ಉ: ಆಂಜನೇಯನಿಗೆ ನಲವತ್ತು ಪದ್ಯ ನಮನಗಳು (ಹನುಮಾನ್ ಚಾಲೀಸಾ: ಕನ್ನಡ ... by sathishnasa
ಉ: ಆಂಜನೇಯನಿಗೆ ನಲವತ್ತು ಪದ್ಯ ನಮನಗಳು (ಹನುಮಾನ್ ಚಾಲೀಸಾ: ಕನ್ನಡ ...
In reply to ಉ: ಆಂಜನೇಯನಿಗೆ ನಲವತ್ತು ಪದ್ಯ ನಮನಗಳು (ಹನುಮಾನ್ ಚಾಲೀಸಾ: ಕನ್ನಡ ... by Premashri
ಉ: ಆಂಜನೇಯನಿಗೆ ನಲವತ್ತು ಪದ್ಯ ನಮನಗಳು (ಹನುಮಾನ್ ಚಾಲೀಸಾ: ಕನ್ನಡ ...
In reply to ಉ: ಆಂಜನೇಯನಿಗೆ ನಲವತ್ತು ಪದ್ಯ ನಮನಗಳು (ಹನುಮಾನ್ ಚಾಲೀಸಾ: ಕನ್ನಡ ... by sathishnasa
ಉ: ಆಂಜನೇಯನಿಗೆ ನಲವತ್ತು ಪದ್ಯ ನಮನಗಳು (ಹನುಮಾನ್ ಚಾಲೀಸಾ: ಕನ್ನಡ ...