ಆಕೆಗೆ ಡಿಕ್ಕಿ ಹೊಡೆದಿದ್ದೆ !

ಆಕೆಗೆ ಡಿಕ್ಕಿ ಹೊಡೆದಿದ್ದೆ !

ತುಂಬಾ ದಿನ ಆಯ್ತು ನಿಮ್ಮ ಜೊತೆ ಮಾತನಾಡಿ. ಕೆಲಸದ ಒತ್ತಡಗಳು, ಹಬ್ಬದ ಗೌಜಿ ಎಲ್ಲಾ ಮುಗಿದು ಒಂದಿಷ್ಟು ನಿರುಮ್ಮಳನಾಗಿದ್ದೇನೆ. ಹಾಗಾಗಿ ಈಗ ಮತ್ತೆ ಸಂಪದದ ಅಂಗಳಕ್ಕೆ ಬಂದಿದ್ದೇನೆ. ನಾನು ಈಗ ಹೇಳ ಹೊರಟಿರುವುದು ಮತ್ತದೇ ಬಾಲ್ಯದ ಬಗ್ಗೆ. ಅದಕ್ಕೆ ಕಾರಣವೂ ಇಲ್ಲದಿಲ್ಲ. ನಾನು ಬಾಲ್ಯವನ್ನು ಅದೆಷ್ಟು ಆಸ್ವಾದಿಸಿದ್ದೇನೋ, ಅಷ್ಟೇ ಬೇಗ ಬಾಲ್ಯವನ್ನು ಕಳೆದುಕೊಂಡಿದ್ದೇನೆ. ಆಗ ಹಾಕಲು ಇದ್ದದ್ದು ಮೂರೇ ಮೂರು ಚೆಡ್ಡಿ, ನಾಲ್ಕು ಅಂಗಿ. ಬ್ರಾಹ್ಮಣರಾದ ನಮಗೆ ಸರಕಾರದಿಂದ ಸಮವಸ್ತ್ರವೂ ಲಭಿಸುತ್ತಿರಲಿಲ್ಲ. ವಷ೯ಕ್ಕೊಂದು ಹೊಸ ಜೊತೆ ಧಿರಿಸು ತೆಗೆದುಕೊಂಡರೆ, ಹಳೆಯ ಒಂದು ಜೊತೆಗೆ ವಿಆರ್‍ ಎಸ್‌ ಕೊಡ್ತಾ ಇದ್ದೆ. ಆದರೆ, ನನ್ನ ಬಾಲ್ಯದ ಅವಾಂತರಗಳಿಗೆ ಏನೂ ಬರವಿರಲಿಲ್ಲ.

ನಂಗೆ ನಿದ್ದೆ ಮಾಡೋದು ಅಂದ್ರೆ ತುಂಬಾ ಆಸಕ್ತಿ. ಇದರಲ್ಲೇನೂ ವಿಶೇಷ ಇಲ್ಲ ಅಂದ್ಕೋಬೇಡಿ. ಯಾಕಂದ್ರೆ ಅದು ನಂಗೆ ಬರೇ ಆಸಕ್ತಿಯ ವಿಚಾರವಷ್ಟೇ ಆಗಿರಲಿಲ್ಲ, ಒಂದು ರೀತಿಯಲ್ಲಿ ನನಗೆ ನಿದ್ದೆ ಮಾಡೋದು ಚಾಳಿ ! ಪ್ರೈಮರಿಯಲ್ಲಿದ್ದಾಗ ನಿದ್ದೆಯಿಂದಾದ ಅವಾಂತರಗಳ ಬಗ್ಗೆ ಅಷ್ಟೊಂದು ನೆನಪಿಲ್ಲ. ಆದ್ರೆ, ಅದಕ್ಕೊಂದು ವಿಶ್ವವ್ಯಾಪಿ ಮಾನ್ಯತೆ ಸಿಕ್ಕಿದ್ದು ಡಿಗ್ರಿ ಕಾಲೇಜಿಗೆ ಸೇರಿದ ಮೇಲೆಯೇ ! ನನ್ನಿಂದ ಪ್ರಭಾವಿತರಾದವರು, ನನ್ನ ಆಟೋಗ್ರಾಫ್ ತುಂಬಾ ನನ್ನ ನಿದ್ದೆಯ ವಿವಿಧ ಭಂಗಿಗಳ ಚಿತ್ರಗಳನ್ನು ಬಿಡಿಸಿಟ್ಟಿದ್ದಾರೆ. ಅದಕ್ಕೆ ವಿವಿಧ ಹೆಸರುಗಳನ್ನೂ ಇಟ್ಟಿದ್ದಾರೆ. ಅಧ೯ಕಟಿ ನಿದ್ರಾಸನ, ಪದ್ಮ ನಿದ್ರಾಸನ, ಬೆಂಚಾಸನ, ಹೀಗೆ ಯೋಗಾಸನದ ವಿವಿಧ ಭಂಗಿಗಳನ್ನು ನಾನು ನಿದ್ದೆ ಹೊಡೆಯುವ ವಿವಿಧ ಭಂಗಿಗಳ ಜೊತೆ ಸಮೀಕರಿಸಿದ್ದಾರೆ.

ಒಂದಿನ ರಾತ್ರಿ ೭ ಗಂಟೆಗೆ ಹಾಸ್ಟೆಲ್‌ನಲ್ಲಿ ಚೇರ್‌ ಮೇಲೆ ಕುಳಿತುಕೊಂಡು ನಿದ್ದೆ ಮಾಡುತ್ತಿದೆ. ನಮ್ಮ ಹಾಸ್ಟೆಲ್ ಮೇಟ್ ಗಳು ನನ್ನ ಟೇಬಲ್ ಮೇಲೆ ಕಸದ ಬುಟ್ಗಿ, ಊಟದ ತಟ್ಟೆ , ಹಾಸಿಗೆ ಎಲ್ಲಾ ಎತ್ತಿಟ್ಟಿದ್ದರು. ವಾಡ೯ನ್‌ ಬರುವವರೆಗೆ ನಂಗೆ ಎಚ್ಚರವೇ ಇರಲಿಲ್ಲ. ಆಮೇಲೆ ಕಂಟಿನ್ಯೂಸ್ ಆಗಿ ೧೫ ದಿನ ಡೈರಿಯಿಂದ ಸೆಗಣಿ ಎತ್ತಿದ್ದೆ, ಪನಿಷ್‌ಮೆಂಟ್ !

ಅದಾಗಿ ಒಂದು ವಾರ ಕಳೆದಿರಲಿಲ್ಲ. ಸ್ಟಡಿ ಹವರ್‌ನಲ್ಲೇ ಮಲಗಿದ್ದೆ. ಮತ್ತದೇ ಗೆಳೆಯರು ನನ್ನ ಮೇಲೆ ಬಿಳಿ ಪಂಚೆ ಹೊದೆಸಿದರು. ಮತ್ಯಾರೋ ಊದುಬತ್ತಿ ಉರಿಸಿದರು. ಸಣ್ಣ ಶಲ್ಯವನ್ನು ಮಡಚಿ ನನ್ನ ಕತ್ತಿಗೆ ಹಾಕಿದರು. ಪಕ್ಕದಲ್ಲಿ ಕುಳಿತು ಅತ್ತರು. ಸಾಲದ್ದಕ್ಕೆ ಫೋಟೋ ಹೊಡೆದರು. ಇದನ್ನೆಲ್ಲಾ ಕಿಟಕಿ ಮೂಲಕ ವಾಡ೯ನ್ ನೋಡುತ್ತಿದ್ದದ್ದನ್ನು ಯಾರೂ ಗಮನಿಸಿರಲಿಲ್ಲ. ವಾಡ೯ನ್ನೂ ಕೇಳಲಿಲ್ಲ. ಆದರೆ, ಬೆಳಿಗ್ಗೆ ಬಂದವರೇ, ಗೆಸ್ಟ್ ಬಂದಿದ್ದಾರೆ ಎಂದು ಹೇಳಿ ಕ್ಯಾಮೆರಾ ತೆಗೆದುಕೊಂಡು ಹೋದರು. ಪ್ರಿನ್ಸಿಪಾಲ್ ಫೋನ್ ಮಾಡಿ ಕರೆಸಿಕೊಂಡಾಗಲೇ ನಮಗೆ ಜ್ಞಾನೋದಯವಾದದ್ದು.

ಅದು ಡಿಗ್ರಿಯ ಕೊನೆಯ ವಷ೯. ಪರೀಕ್ಷೆಗಳೆಲ್ಲಾ ಮುಗಿದಿತ್ತು. ಕಾಲೇಜಿನ ವಾಷಿ೯ಕ ಸಂಚಿಕೆ ಪೂತಿ೯ ಗೊಳಿಸಲು ನಾವಿನ್ನೂ ಹಾಸ್ಟೆಲ್‌ನಲ್ಲೇ ಇದ್ದೆವು. ಮತ್ತದೇ, ನಿದ್ದೆಯ ಮಂಪರಿನಲ್ಲಿ, ಕಾಲೇಜಿನತ್ತ ಹೆಜ್ಜೆ ಹಾಕುತ್ತಿದ್ದೆ. ಹಾಗೆ ನಡೆಯುತ್ತಿದ್ದಾಗಲೇ ಭಿಕ್ಷುಕಿಯೊಬ್ಬಳಿಗೆ ಡಿಕ್ಕಿ ಹೊಡೆದುಬಿಟ್ಟೆ. ತಗೊಳ್ಲಿ, ಜೀವನ ಪೂತಿ೯ ಖಚಿ೯ಗಾಗುವಷ್ಟು ಬೈಗುಳಗಳನ್ನು ಆಕೆ ದಾನವಾಗಿ ನೀಡಿದ್ದಳು. ಸತತ ೧೩ ದಿನವೂ ಬೆಳಿಗ್ಗೆ ಕಾಲೇಜಿಗೆ ಹೋಗುವಾಗ ಆಕೆಯಿಂದ ಉಗಿಸಿಕೊಳ್ಳುವ ಭಾಗ್ಯ ನನ್ನದಾಗಿತ್ತು ! ಅದೇ ಕೊನೆ, ಆಮೇಲೆ ಯಾವತ್ತೂ ಅತಿರೇಕವಾಗಿ ನಿದ್ದೆ ಮಾಡಿಲ್ಲ. ಪತ್ರಿಕೋದ್ಯಮ ಕ್ಷೇತ್ರದಲ್ಲಿರೋದ್ರಿಂದ ಅದಕ್ಕೆ ಅವಕಾಶವೂ ಕಡಿಮೆಯೇ. ನನ್ನ ನಿದ್ರಾಸನಗಳ ಬಗ್ಗೆ ದೊಡ್ಡ ಪುಸ್ತಕ (?) ಬರೆದು, ಲೋಕಾಪ೯ಣೆ ಮಾಡಬೇಕೆಂದಿದ್ದೇನೆ. ನನ್ನ ಹಾಗೆ ನಿಮಗೂ ನಿದ್ದೆಯಿಂದ ಪ್ರಯೋಜನಗಳಾಗಿದ್ದರೆ, ಬರೆದು ತಿಳಿಸಿ.

Rating
No votes yet

Comments