ಆಗಾಗ ಬೀಳ್ತಿದ್ದ ಕನಸು ಈಗ ಬೀಳ್ತಾ ಇಲ್ಲ
ಅಜಮಾಸು ಆರು ವರ್ಷದ ಹಿಂದಿನ ಸುದ್ದಿ. ಆವಾಗ ನನಗ ಮ್ಯಾಲಿಂದ ಮ್ಯಾಲೆ ಒಂದು ಕನಸು ಬೀಳ್ತಿತ್ತು. ಒಂದು ಗುಡ್ಡಾ, ಅದರ ಮ್ಯಾಲೇ ದೊಡ್ಡು ದೊಡ್ಡು ಕಲ್ಲುಬಂಡಿ. ಅದರ ಮೇಲೆ ನಾನು. ಕೆಳಗ ನೋಡಿದ್ರ ಅಂಜಿಕಿ ಆಗೋದು . ನಾನು ನಿಂತಿರೋ ಕಲ್ಲುಬಂಡಿ ಉರಳಿದ್ರ? ಅದು ಭದ್ರ ಅದನೋ ಇಲ್ಲೋ ? ಆ ಕಲ್ಲು ಬಂಡಿ ಮ್ಯಾಲೆ ನಿಲ್ಲೋ ಧೈರ್ಯ ಆಗದS ಕೂತು ಬಿಟ್ಟೇನಿ .. ಅಲ್ಲ , ಡಬ್ಬು ಮಲಗಿ ಬಿಟ್ಟೇನಿ , ಹೆದರಿಕೋತ ಕೆಳಗೂ ನೋಡ್ತೀನಿ . ತಗ್ಗಿನ ಕಡೆ . ಅಷ್ಟೊತ್ತಿಗೆ ಎಚ್ಚರ ಆಗ್ತಿತ್ತು .
ಈ ಕನಸು ಒಂದ್ ಸಲ ಅಲ್ಲ, ನಾಕಾರು ಸಲ ಬಿದ್ದಿರ್ಬೇಕು .
ಕನಸಿಗೆ ಅರ್ಥ ಅದ ಅಂತಾರ , ಕೆಲವರು ಇಲ್ಲಾ, ಅವೇನು ಹಳವಂಡ , ಅವಕ್ಕೇನು ಅರ್ಥ ಇರೂದಿಲ್ಲ ಅಂತಾರ. ಏನS ಇದ್ರೂ ನನಗ ಅದರ ಅರ್ಥ ಹೊಳದSದ. ಮತ್ತS ಈಗ ಆ ಕನಸು ಬೀಳೂದಿಲ್ಲ . ಅದಕ್ಕೂ ಕಾರಣ ಅದS. ಯಾಕ ಅಂತ ತಿಳಕೋಳ್ಲಿಕ್ಕೆ ನಿಮಗ ಈಗ ಇಂಟರೆಸ್ಟ್ ಬಂದಿರಬೇಕಲ್ಲಾ ? ಸವಿಸ್ತಾರ ಹೇಳ್ತೀನಿ, ತಡೀರಿ.
ಇಲ್ಲೆ ಸೊಲ್ಪ ನನ್ನ ಬಗ್ಗೆ ಹೇಳಬೇಕು.
ನಾನು ಡಿಗ್ರಿ ಮುಗ್ಸಿದ್ದು , ಮೊದಲ್ನೇ ಕಂಪ್ಯೂಟರ್ ಕೋರ್ಸ್ ಮಾಡಿದ್ದು ’ಸಾವಿರದ ಒಂಭೈನೂರ’ ಎಂಬತ್ನಾಕರೊಳಗ . ( ಬಹುತೇಕ ನೀವು ಆವಾಗಿನ್ನೂ ಹುಟ್ಟಿದ್ರಿ ಅಂತ ಕಾಣಸ್ತದ :) ) ಆಮ್ಯಾಲೇ ಬ್ಯಾಂಕ್ ಸೇರಿ ೧೯೯೨ರಾಗ ( ಹತ್ತೊಂಬತ್ ನೂರಾ ತೊಂಬತ್ತೆರಡು ) ಅದ್ಯಾವ್ದೋ ಹವಾದಾಗ ಕಂಪ್ಯೂಟರ್ ಸಂಬಂಧದ ಆಫೀಸರ್ ಆದೆ . ಆಫೀಸರ್ ಅನ್ನೊದಕಿಂತಾ ಕಂಪ್ಯೂಟರ್ ಮ್ಯಾಲೆ ಕೆಲಸ ಮಾಡಬೇಕಂತ ಇದ್ದ ಆಶಾ ಈಡೇರಿದ್ದು ಸಂತೋಷ ಆಗಿತ್ತು. ಆಮ್ಯಾಲೆ ನೋಡ್ನೋಡ್ತ ಎಂಟು ವರ್ಷ ಹೋದೂ .ಏನೇನೋ ಓದ್ದೆ , ಏನೇನೋ ಕಲ್ತೆ , ಒಮ್ಮೆಲೇ ತಲ್ಯಾಗೊಂದು ಹುಳ ಬಂತು . ಒಂದು ಧೋಡ್ಡ ಸರ್ಟಿಫಿಕೇಟ್ ತಗೋಬೇಕಂತ . ತೋರಿಸ್ಲಿಕ್ಕೆ ಒಂದ್ ಇರ್ಲಿ ಅಂತ . ಅಲ್ಲೆ ಇಲ್ಲೆ ವಿಚಾರ್ಸಿ , ಒಂದ್ ದೊಡ್ಡ ಸರ್ಟಿಫಿಕೇಟೂ ತಗೊಂಡೆ . ’ಏನ್ರೀ ಸಂತಿಗಿ ಹೋಗಿ ಕಾಯಿಪಲ್ಯಾ ತಂದಂಗ ಪರೀಕ್ಷಾಕ್ಕ ಹೋಗಿ ಸರ್ಟಿಫಿಕೇಟ್ ತರ್ತೀರಲ್ಲ ?’ ಅಂತ ಅನ್ನಿಸ್ಕೊಂಡೆ! . ಸರ್ಟಿಫಿಕೇಟ್ ಏನೋ ಬಂತು , ಮುಂದ ? ತತಃಕಿಂ ?
ಆವಾಗ ನಾನು ಇದ್ದದ್ದು ಬೆಂಗ್ಳೂರಾಗ. ನಮ್ಮ ಹೆಡ್ಡಾಫೀಸು/ದೊಡ್ಡಾಫೀಸು ಇದ್ದದ್ದು ಮುಂಬೈದಾಗ . ಒಂದು ಅಪೆಕ್ಸ್ ಟ್ಟ್ರೇನಿಂಗ್ ಸೆಂಟರ್ರೂ ಅದ - ಹೈದ್ರಾಬಾದ್ನಾಗ. ( ಫಾರಿನ್ನೋರ್ಗೂ ಅಲ್ಲೆ ಟ್ರ್ಏನಿಂಗ್ ಕೊಡ್ತಾರ - ಅವ್ವಯ್ಯಾ ಅಂತ ಉದ್ಗಾರ ತಗದ್ರಿ?- ಅಲ್ಲೆ ಬರೋರು ಅಪ್ರಿಕಾದೋರು !). ಎರಡ್ರಾಗ ಒಂದು ನನ್ನ ಡೆಸ್ಟಿನಿ. ಆ ಎರಡೂ ನಾನು ಏರಬಹುದಾದ - ನಮ್ಮ ಸಂಸ್ಥೆಯೊಳಗ ಅತೀ ಎತ್ತರದ -ಜಾಗ. ಆ ಎರಡರಾಗ ಒಂದ್ ಕಡೆ ಹೆಂಗೋ ಮುಟ್ತೀನಿ ಅಂತ ಅನಸ್ಲಿಕ್ಕೆ ಹತ್ತಿತ್ತು . ಹಂಗೇನಾರ ಆದ್ರೆ ? ನಾನು ಇಲ್ಲೀ ತನಕ ಕನ್ನಡದೇಶ ಬಿಟ್ಟು ಹೊರಗ ಹೋಗಿದ್ದೇ ಇಲ್ಲ . ಅಲ್ಲೆ ಬದಕೋದು ಹೆಂಗ ? ಅಂತ ಚಿಂತಿ . ಅದರೊಳಗೂ ಮುಂಬೈ - ಕೋಟಿ ಜನ ಬದಕೋ ಊರು , ಹಿಂದೀನೋ ಮರಾಠಿನೋ , ಕುಖ್ಯಾತ ಲೋಕಲ್ ಟ್ರೇನೋ ? ಅಂತ ಚಿಂತಿ .
ಈ ವ್ಯಾಳ್ಯಾದಾಗ ಈ ಕನಸು ಅವಾಗಾವಾಗ ಬೀಳ್ತಿತ್ತು .
ಆ ಮ್ಯಾಲೆ ಯಾಕ ನಿಂತ್ ಹೋತು ಅಂತ ಕೇಳ್ತೀರಾ ? ಆ ಕನಸಿನ ಪ್ರಕಾರನS
ಮುಂದ ಎಲ್ಲಾ ಆತು. ಈ ಮುಂಬೈಗೆ ಬಂದು ಬಿದ್ದೆ . ಹೆದರಿಕೋತ , ಹೆದರಿಕೋತ ಇಲ್ಲೆ ಬಂದು ಸೇರಿದೆ . ಹೆಂಗೋ ಹೊಂದ್ಕೊಂಡೆ . ಕ್ರಮೇಣ ಈ ಜಾಗ ಭದ್ರ ಆತು ( ನಾನೂ ಮಾಡ್ಕೊಂಡೆ ಅನ್ರಿ) . ಆವಾಗ ಈ ಕನಸು ಬೀಳೋದು ಬಂದ್ ಆತು !.
ಗಮನಿಸಿ - ದಬ್ಬು = ಬೋರಲು
ಅಂಜಿಕೆ =ಹೆದರಿಕೆ
ಸವಿಸ್ತಾರ = ವಿವರವಾಗಿ .
ಬರೊಬ್ಬರ್ ಬರೊಬ್ಬರಿ= ಸರಿ, ಉಚಿತ .
ತತಃಕಿಂ =ಮುಂದೇನು?
Comments
ಉ: ಆಗಾಗ ಬೀಳ್ತಿದ್ದ ಕನಸು ಈಗ ಬೀಳ್ತಾ ಇಲ್ಲ
ಉ: ಆಗಾಗ ಬೀಳ್ತಿದ್ದ ಕನಸು ಈಗ ಬೀಳ್ತಾ ಇಲ್ಲ