ಆಗ್ರಹ

ಆಗ್ರಹ

ಮನದಿ ಬಚ್ಚಿಟ್ಟ ನೆನಪುಗಳು
ಮರುಕಳಿಸುತ್ತವೆ
ನಗೆಯಿಲ್ಲದ ಮುಖಗಳಲ್ಲಿ
ವಿಷಾದದ ಗೆರೆ ಇಣುಕುವಾಗ

ಅತೃಪ್ತ ಮನದಲ್ಲಿ
ನೂರಾರು ಬಯಕೆಗಳು
ಹುಚ್ಚೆದ್ದು ಕುಣಿವಾಗ
ನೆಲ- ಆಗಸಕ್ಕೆ ಅಂತರವಿಲ್ಲವೆನುವಿರಿ
ನೀವು...
ಕಿರುನಗೆಯೊಂದ ಸೂಸಲು
ಅಷ್ಟೊಂದು ಚಿಂತೆಯೇಕೆ?

ಇಹಲೋಕದ ನಾಲ್ಕು ದಿನದ
ಜೀವನದ ಪಯಣದೊಳು
ಬಡವ ಬಲ್ಲಿದನೆಂದು
ಭೇದ ಕಾಣುವಿರೇಕೆ
ಮಂದಹಾಸಕ್ಕೂ ಇದೆಯೇ
ಮೇಲು ಕೀಳು?

ಸ್ವಾರ್ಥಿಗಳು ನೀವು
ತುಟಿಯಂಚಿನ ಮುಗುಳ್ನಗೆಗೂ
ಲಾಭ ಲೆಕ್ಕ ಹಾಕುವಿರಲ್ಲಾ!

ಹಂಬಲದ ಓಟದಲಿ
ಸುಸ್ತಾಗಿ ಕುಳಿತಾಗ
ಬೆವರ ಹನಿ ಇಬ್ಬನಿಯಾಗಿಸಿದ
ನಮ್ಮತ್ತ ಕಣ್ಣು ಹಾಯಿಸಿ ನೋಡಿ
ಕಷ್ಟ ದುಃಖಗಳ ಕಂಬಳಿಯ ಹೊದ್ದಿಹೆವು
ಬಡತನದ ನಡುಕದಲ್ಲಿಯೂ

ಬದುಕ ಬೇಕಿದೆ ನಮಗೆ, ನಿಮ್ಮೆಡೆಯಲಿ
ಮನಸ್ಸು ಕಲ್ಲಾಗಿಸಿ
ಹರಿವ ತೊರೆಯ ಮುಂದಿನ ಹುಲ್ಲಾಗಿ
ನಿಮ್ಮ ಎದೆಯಂಗಳದಿ
ಮುಳ್ಳು ಬೇಲಿಯೊಳು ಕಂಪಸೂಸುವ
ನಗುವ ಮಲ್ಲಿಗೆಯಾಗಿ.

Rating
No votes yet

Comments