ಆಟೋದ ಆಟೋಪ

ಆಟೋದ ಆಟೋಪ

ಇಂದು ಆಟೋಗಳು ಹಿಂಗೆಯಾಕ್ಮಾಡಾಕತ್ತಾವ? ಎಲ್ಲಾ ಆಟೋಗಳೂ ಬರೀ ಸುಮ್ಕಾ ಸುಮ್ಕಾ ಖಾಲಿ ಖಾಲಿನೇ ಓಡಾಕ ಹತ್ತಾವ. ಎಷ್ಟು ಕೈಮಾಡಿದರೂ ಕೇರ್ ಮಾಡದೇ ಹೋಗಾಗ ಹತ್ತವಂದ್ರೆ ಏನೋ ಮಜಕೂರು ಇರಬೇಕು.- ನಾನು ತಲೆ ಕೆರೆದುಕೊಂಡೆ. ತಲೆ ಕೆರದಕ್ಕೆ  ತಲ್ಯಾಗಿನ ಹೊಟ್ಟು ಕಿತ್ಗೋ ಬಂತು. ಥೂ ಇದರ!  ಅನ್ಕೋತ್ತ ಕೈ ಝಾಢಿಸಿದೆ.
    ಹಾಂಗತಹೇಳಿ ನನಗೆ ಅಂತಾ ಜರೂರು ಕೆಲಸಾಬೊಗಸೆ ಏನೂ ಇರಲಿಲ್ಲಾ. ಪುರಸೊತ್ತು ಇತ್ತು. ಬಾಳದಿನಾ ಆತು ಕುರಣೇಶನ ಕಾಣದೇ ಅಂದು ಕೊಂಡು, ಅವನಮನೆಗೆ ಹೊರಟಿದ್ದೆ.   ಜೀವಮಾನ ಇಡೀ ಆಪೀಸಿಗೆ ಮನೆಗೆ ನನ್ನನ್ನು ಅಜ್ಜುಗೊಜ್ಜು ಮಾಡುತ್ತ ಮುಟ್ಟಿಸುತ್ತಿದ್ದ ಬಸ್ಸು ಹತ್ತಲು ರಿಟೈರ್ ಆದಮೇಲೆ ಮನಸ್ಸು ಯಾಕೋ ಒಲ್ಲೆ ಅನ್ನುಸಾಕ ಹತ್ತಿದೆ. ಹೀಗಾಗಿ ಆಟೋಕ್ಕೆ ಕಾಯುತ್ತಿದ್ದೆ.
    ಆಟೋ ಹಿಡಿಯುವ ಪ್ರಯತ್ನ ಕೈಬುಟ್ಟ ಮೇಲೆ ಇದ್ದಕ್ಕಿದ್ದಂತೆ ಒಂದು ಆಟೋ ಬಂದು ನಿಂತಿತು. ಲಗೂನೆ ಹತ್ತಿಸಾರ್ ಡ್ರೈವರನು ನುಡಿದಾಗ, ನನಗೆ ಆಶ್ವರ್ಯವಾಯಿತು. ಹತ್ತಿ ಕುಳಿತೆ. ಆಟೋ ಭುರ್ನೆ ಓಡಹತ್ತಿತು. ಎಲಾ ಇವನಾ!  ನನ್ನನ್ನು ’ಎಲ್ಲಿಗೆ’ ಎಂದು ಒಂದು ಮಾತೂ ಕೇಳದೇ ಗಾಡಿ ಓಡಿಸುವ ಇವನಾರಪಾ ಅಂತ ಯೂನೀಫಾರಂ ನಲ್ಲಿಕಂಗೊಳಿಸುವಾತನ ಮುಖಾನೋಡಿ ನನ್ನಿಂದ ತನ್ನಿಂದ ತಾನೇ ಉದ್ಘಾರ ಹೊರಟಿತು  ಲೇ ಕುರುಣೇಶ ನೀನೇನೋ?
    ’ಏನೋ ನಿನ್ನ ಈ ಅವತಾರ?’ ಪ್ರಶ್ನಿಸಿದೆ.  ಗಾಡೀ ಓಡಿಸುತ್ತಲೇ ಕುರುಣೇಶ ಕಥೆ ಹೇಳತೊಡಗಿದ ; ಮೊದಲೆಲ್ಲಾ ಪ್ಯಾಸನ್ನು ಅನ್ನೋದು ಎರಡೇಕಾಲುಗಳಲ್ಲಿ ಓಡುತ್ತಿತ್ತು. ಈಗ ಅದು ಸೈಕಲ್ ಮೇಲೆಕುಳಿತು ಓಡುತ್ತಿದ್ದೆ. ಮುಂದೆ ಅದು ಮೋಟರ್ ಸೈಕಲ್ ಏರಿ ಹೊರಟರೆ, ನಮ್ಮಂತಾ ಹಳೇಕಾಲದ ಸಿಂಪಿಗರಿಗೆ ಆಷ್ಠಾಕ್ಷರೀ ಮಂತ್ರವೇ ಗತಿ ಅಂತ ಅಂದಕೊತ್ತಿದ್ದನಿ. ಅದೇ ಸಮಯದಲ್ಲಿ ಮೂಲೇಮನಿ ಇಬ್ರಾಮ್ ಸಾಬನ್ ಒಂಬತ್ತನೇ ಮಗ, ’ ಯಹಾಂ, ಹಮ್ನಾ ಜಮ್ತಾನಹಿ. ಸೌದಿ ಜಾ ರಹಾ ಹೂಂ. ಏಜೆಂಟ ಐವತ್ತು ಹಜಾರ್  ರುಪಯಾ ಮಾಂಗರಹಾಹೈ. ಮೈ ಆಟೋ ಬೇಚರಹಾಂಹೂಂ. ಚಾಳೀಸಪರ ಪಾಂಚ ಹಜಾರಕೊ ತುಮ್ಮೀಚಿ ಲೆಲೋ’ ಎಂದು ಗಂಟುಬಿದ್ದ. ಅನ್ನವೂ ಹಳಸಿತ್ತು ನಾಯಿಯೂ ಹಸಿದಿತ್ತು ಆಯಿತು.
    ಮಾತನಾಡುತ್ತ ಮಾತನಾಡುತ್ತಾ ಅವ ಆಟೋವನ್ನು ಊರ ಹೊರಗಿನ ಬೈಲಿನಲ್ಲಿ ನಿಲ್ಲಿಸಿದ. ಊರ ಎಲ್ಲಾ ಆಟೋಗಳೂ ಅಲ್ಲೇ ಇದ್ದವು! ಆಟೋ ಮೇಳವೇ? ’ಸಾರ್ ಸುಪ್ರಿಂ ಕೋರ್ಟ್ ನಿರ್ಣಯ ಕೊಟ್ಟೈತಂತಲ್ಲಾ ಅದರ ಮೇಲೆ ಚರ್ಚಿಸಲು ಇಲ್ಲಿ ಗುಪ್ತಸಭೆ ನಡೆಸಲು ಸೇರಿದ್ದೇವೆ’.ಕುರುಣೇಶಿ ಕಾರಣ ನೀಡಿದ. ’ಮತ್ತೆ ನಾನು ಆಟೋ ಡ್ರೈವರ್ ಅಲ್ಲಾ ಎಂದು ನಿಮ್ಮ ಜನಾ ನನಗೆ ಧರ್ಮದೇಟು ಕೊಟ್ಟಾರು. ನಾನು ಮನೆಗೆ ಹೋಗ್ತೀನಿ’ ಅಂದೆ. ’ಸದ್ಯಕ್ಕೆ ನೀವು ಈ ಕ್ಯಾಪು ಹಾಕ್ಕೊಳ್ಳಿ’ ಎಂದು ತನ್ನ ಹ್ಯಾಟನ್ನು ತೆಗೆದು ನನಗೆ ಕೊಟ್ಟ. ತಲೆಕಾಯಲು ಈ ಕ್ಯಾಪು ಸಹಾಯಮಾಡುತ್ತಾ?  ಅಂದಕೋತ್ತ ಭಾಷಣಾ ಕೇಳಾಕ ಹತ್ತಿದೆ.
    ಆ ಸಭೆಯ ತಾತ್ಪರ್ಯವನ್ನು ಮಾತ್ರ ನಿಮಗೆ ನೀಡುತ್ತೇನೆ. ಆಟೋ ಡ್ರೈವರ್‌ರ ಓರಿಜಿನಲ ಭಾಷೆಯಲ್ಲಿ ಅದನ್ನು ನಿಮಗೆ ಹೇಳುವುದಿಲ್ಲ. - ಸರಕಾರ ಪೆಟ್ರೋಲ್ ದರ ಏರಿಸಿದೆ. ಸಿಟಿ ಅನ್ನೋ ಈ ಊರಿನಲ್ಲಿ ರಸ್ತೆಗಳೇ ಇಲ್ಲ. ಎಲ್ಲಾ ಕೆಮ್ಮಣ್ಣಗುಂಡಿಗಳೇ ಆಗಿವೆ. ಫಸ್ಟ್ ಅಥವಾ ಸೆಕೆಂಡ ಗ್ಯಾರಿನಲ್ಲೇ ಗಾಡಿ ಓಡಿಸಬೇಕು. ಹೀಗಾಗಿ ಆನೆ ನೀರು ಕುಡಿದಹಾಗೆ ಆಟೋ ಪೆಟ್ರೋಲ್ ಕುಡಿಯುತ್ತಾ ಇದೆ.  ಸ್ಪೇರ ಪಾರ್ಟ್ ಬೇಗ ಖರಾಬ ಆಗಾಗ ಹತ್ಯಾವು. ದುಕಾನಿನಲ್ಲಿ ವಿಪರೀತ ರೇಟು. ಜೊತೆಗೆ ಅವ್ರೆಗೆ ಇವ್ರಿಗೆ ಲಂಚಾಬೇರೆ ಕೊಡಬೇಕು. ಇಸಲಿಯೇ ಏ ಹಮ್ನಾ ಜಂತಾನಹಿ. ಹೀಗಾಗಿ ನಾವು ಬಾಡಿಗೆ ರೇಟನ್ನು ಏರಿಸಲೇ ಬೇಕು. ಸರಕಾರ ನಮ್ಮ ರೇಟನ್ನು ಒಪ್ಪಿಕೊಳ್ಳುತ್ತಿಲ್ಲ. ನಾವು ಬದುಕುವುದು ಹೇಗೆ? ಇವು ಮಂಡಿತವಾದ ಗೋಳುಗಳು.
    ಇದಕ್ಕೆ ಪರಿಹಾರವಾಗಿ ಬಂದ ಸಲಹೆಗಳು ಧಂಗು ಬಡಿಯುವ ಹಾಂಗಿತ್ತು.  ಎಲ್ಲೆಲ್ಲಿ ಉದ್ದಿಮೆಗಳು ಲುಕ್ಸಾನ್‌ದಾಗೆ ನಡೆಯುತ್ತವೆ ಅದನ್ನೆಲ್ಲಾ ಸರಕಾರವೇ ತೆಗೆದು ಕೊಳ್ಳುತ್ತದೆ. ಹಾಗೆಯೇ ನಮ್ಮನ್ನೂ ಸರಕಾರ ತೆಗೆದುಕೊಂಡು ನೌಕರನೆಂದು ಸಂಬಳ ಪೆನ್ಶನ್ನು ಇತ್ಯಾದಿ ಸಿಗುವ ಹಾಗೆ ಮಾಡಬೇಕು. ಖಾಸಗೀ ಮೆಡಿಕಲ್ ಕಾಲೇಜ್‌ದಾಗ ಫೀಸ್ ಕಟ್ಟಾಕೆ ಆಗದಿದ್ದರೆ ಸರಕಾರವೇ ಅವರ ಫೀಸನ್ನು ಕೊಟ್ಟು, ಕಾಲೇಜ್ ಮ್ಯಾನೇಜ್ ಮೆಂಟ್‌ಗೆ ಲಾಸ ಆಗ್ದೇ ಹೋದಾಂಗ ರಕ್ಷಣೆ ಕೊಡತೈತಿ. ನಾವೂ ಫಿಕ್ಸ್ ಮಾಡಿದ ರೇಟಿನಲ್ಲಿ ಆಟೋದಾಗ ಕುಂಡ್ರಾಕೆ ಆಗದ ಬಡವ  ಆಶಕ್ತ, ರೋಗಿ ಮುಂತದವರ  ಚಾರ್ಜನ್ನು ಸರಕಾರವೇ ನಮಗೆ ನೀಡಿ ನಮ್ಮ ಜೀವನ ನಡೆಯುವ ಹಾಗೆ ಮಾಡಬೇಕು, ಖಾಸಗೀ ಮೆಡಿಕಲ್  ಕಾಲೇಜ್‌ದವರಿಗೆ ತಮ್ಮ ಫೀಸನ್ನು ತಾವೇ  ನಿರ್ಧರಿಸಿಕೊಳ್ಳಲು ಅಧಿಕಾರವಿದೆ. ನಮ್ಮದೂ ಖಾಸಗೀ ದಂಧೆ, ಹೀಗಾಗಿ  ಆ ಅದಿಕಾರ ನಮಗೂ ಸಿಗಬೇಕು.  ಸರಕಾರೀ ಶಾಲೆ ಇದ್ದಹಾಗೆ  ಸರಕಾರೀ  ಆಟೋವನ್ನೂ  ಬೇಕಾದರೆ ಪ್ರಾರಂಭಿಸಿ ತನಗಿಷ್ಟ ಬಂದ ರೇಟಿನಲ್ಲಿ ಸರಕಾರ  ಓಡಿಸಲಿ.
    ನಾವೆಲ್ಲಾ ಒಟ್ಟಾಗಿ ನ್ಯಾಯಾಲಯದ ಬಾಗಿಲಿಗೆ ಹೋಗೋಣ. ನ್ಯಾಯಾಲಯ ಖಾಸಗಿಯವರಿಗೆ ಬೇರೆ ರೂಲ್ಸು ಸರಕಾರಕ್ಕೆ ಬೇರೆ ರೂಲ್ಸು ಮಾಡ್ಕೋಬಹುದು ಅಂತ ಮೊನ್ನೆ ಅಷ್ಟೇ ನಿರ್ಣಯ ಕೊಟ್ಟಿದೆ. ಖಾಸಗೀ ಇಂಗ್ಲೀಶ್ ಸ್ಕೂಲ್ ನವರು ಕೋರ್ಟಿಗೆ ಹೋದದ್ದರಿಂದ ಮೆಡಿಕಲ್ ಕಾಲೇಜಿನವರಿಗಿಂತ  ಜಾದಾ ಪಿಂಡಿ ಪಿಂಡಿಯಾಗಿ  ರೊಕ್ಕಾ ಬಾಚ್ಕೋಳ್ಳೋದಕ್ಕೆ ಅವಕಾಶ ಆಗಿದೆ. ಕೋರ್ಟಿಗೆ ಹೋದರೆ  ನಮ್ಮ್ ಕಷ್ಠಾನೂ ಅದು ಪರಿಹರಿಸಬಹುದು. ಇತ್ಯಾದಿ ಇತ್ಯಾದಿ.
    ’ಕುರುಣ್ಯಾ ನನಗೆ ಇಲ್ಲಿಯೇ ನಿಶೆ ಏರಿದೆ. ಇಂದು ಸೆರ ಅಂಗಡಿಗೆ ಹೋಗೋದು ಬೇಡ. ನೆಟ್ಟಗೆ ನಮ್ಮ ಮನೆಗೇ ಹೋಗಿ ಮಜ್ಜಿಗೆ ಕುಡಿದು ಮಲಗೋಣ’ -ಎಂದು ಕುರುಣೇಶನನ್ನು ಅಲ್ಲಿಂದ ಹೊರಡಿಸಿಕೊಂಡು ಬಂದೆ.     

Rating
No votes yet