ಆತ್ಮಸ್ಥೈರ್ಯ ಎಂದರೆ ಇದೇನಾ?

ಆತ್ಮಸ್ಥೈರ್ಯ ಎಂದರೆ ಇದೇನಾ?

ಇತ್ತೀಚಿಗೆ ನಾ ಕಂಡ ಒಂದು ಘಟನೆಯ ಸಾರಾಂಶವೇ ಈ ಬರಹದ ವಿಷಯ.

ನನಗೆ ಪರಿಚಯವಿರುವ ಒಬ್ಬ ವ್ಯಕ್ತಿ ಮೂಲತಹ ಕೆ.ಜಿ.ಎಫ್ ನಿವಾಸಿ. ಆತ ಪ್ರತಿದಿನ ಬೆಂಗಳೂರಿಗೆ ಕೆಲಸದ ನಿಮಿತ್ತ ಬಂದು ಹೋಗುತ್ತಾನೆ. ಹೆಚ್ಚು ಕಡಿಮೆ ಪ್ರತಿ ದಿನ ಆತನನ್ನು ಭೇಟಿಯಾಗುತ್ತೇನೆ. ಆತನ ವಯಸ್ಸು ಸುಮಾರು ೪೦-೪೫ ಇರಬಹುದು. ಆದರೆ ಆತನೊಡನೆ ಮಾತನಾಡುತ್ತಿದ್ದಾರೆ ಅಷ್ಟು ದೊಡ್ಡವನೆಂದು ಎಂದೂ ಅನಿಸಿಲ್ಲ. ಏಕೆಂದರೆ ಆತನ ಮಾತಿನ ಶೈಲಿ ಅಂತಹುದು. ಸದಾಕಾಲ ಯಾರನ್ನಾದರೂ ಛೇಡಿಸಿಕೊಂಡು ತಾನು ನಗುತ್ತ ಎಲ್ಲರನ್ನೂ ನಗಿಸುತ್ತಿರುತ್ತಾನೆ. ಆತ ಗಂಭೀರವಾಗಿದ್ದನ್ನು ನೋಡಿದ್ದು ಬಹಳ ಕಡಿಮೆ. ಎಂಥಹ ಸನ್ನಿವೇಶ ಇದ್ದರೂ ಅದನ್ನು ಹಾಸ್ಯಮಯವಾಗಿಯೇ ನಿಭಾಯಿಸಲು ನೋಡುತ್ತಾನೆ. ಅವನ ಚರ್ಯೆಗಳಿಂದ ಕೆಲವೊಮ್ಮೆ ಆತನೇ ನಗೆಪಾಟಲಿ ಗೀಡಾಗಿದ್ದು ಉಂಟು. ಆದರೂ ಆತನ ವ್ಯಕ್ತಿತ್ವ ಬದಲಾಯಿಸಿಲ್ಲ. ಮೊನ್ನೆ ಹೀಗೆ ಮಾತನಾಡುತ್ತಿದ್ದಾಗ ಮಕ್ಕಳ ವಿಷಯ ಬಂದಾಗ ಯಾರೋ ಒಬ್ಬರು ಮಕ್ಕಳಿಗೆ ಬಟ್ಟೆ ತೆಗೆದುಕೊಳ್ಳುತ್ತಿದ್ದರು. ಆಗ ನಾನು ಈತನನ್ನು ಕೇಳಿದೆ ನೀವು ಮಕ್ಕಳಿಗೆ ಬಟ್ಟೆ ತೆಗೆದುಕೊಳ್ಳುವುದಿಲ್ಲವ ಎಂದು. ಅದಕ್ಕೆ ಆತ ಯಾವ ಮಕ್ಕಳಿಗೆ ಎಂದ. ನಾನು ಬೇರೆಯವರ ಮಕ್ಕಳಿಗೆ ನೀವ್ಯಾಕೆ ತೆಗೆದುಕೊಳ್ಳುತ್ತೀರ ನಿಮ್ಮ ಮಕ್ಕಳಿಗೆ ತೆಗೆದುಕೊಳ್ಳುವುದಿಲ್ಲವ ಎಂದು ನಗುತ್ತ ಕೇಳಿದೆ. ಆಗ ಆತ ಹೇಳಿದೆ ನನಗೆಲ್ಲಿ ಮಕ್ಕಳು ಎಲ್ಲರೂ ಮೇಲಕ್ಕೆ ಎಂದು ಆಕಾಶದ ಕಡೆ ಕೈ ಮಾಡಿ ತೋರಿಸಿದ. ನನಗೆ ಒಂದು ಕ್ಷಣ ಏನು ಹೇಳುತ್ತಿದ್ದಾರೆಂದು ಅರಿವಾಗದೆ ಏನು ಮತ್ತೊಮ್ಮೆ ಹೇಳಿ ಎಂದಾಗ ನನ್ನ ಮೂರು ಮಕ್ಕಳು ಹೋಗಿಬಿಟ್ಟರು ಎಂದ. ನನಗೆ ಏನು ಮಾತನಾಡಬೇಕೋ ಗೊತ್ತಾಗದೆ ಸುಮ್ಮನೆ ನಿಂತಿದ್ದಾಗ ಆತನೇ ಮುಂದುವರಿಸಿ ಹೇಳಿದ ನನಗೆ ಎರಡು ಗಂಡು ಒಂದು ಹೆಣ್ಣು ಮಗು ಇತ್ತು ಮೊದಲೆರಡು ಗಂಡು ಮಕ್ಕಳು ಚೆನ್ನಾಗಿಯೇ ಇದ್ದರು ಆದರೆ ಇದ್ದಕ್ಕಿದ್ದಂತೆ ಇಬ್ಬರಿಗೂ ರಕ್ತದೊತ್ತಡ ತೊಂದರೆ ಕಾಣಿಸಿಕೊಂಡಿತು. ಇಬ್ಬರಿಗೂ ಚಿಕಿತ್ಸೆ ಕೊಡಿಸಿದೆವು ಆದರೆ ಫಲಕಾರಿಯಾಗಲಿಲ್ಲ. ರಕ್ತದೊತ್ತಡ ಹೆಚ್ಚಾಗಿ ಇಬ್ಬರೂ ಹೋಗಿಬಿಟ್ಟರು. ಮಗಳು ಹನ್ನೆರಡನೆ ವಯಸ್ಸಿನವರೆಗೂ ಚೆನ್ನಾಗೆ ಇದ್ದಳು ಆದರೆ ಇದ್ದಕ್ಕಿದ್ದಂತೆ ಅವಳಿಗೂ ರಕ್ತದೊತ್ತಡ ಶುರುವಾಯಿತು. ಅವಳಿಗೂ ಮೂರು ವರ್ಷ ಚಿಕಿತ್ಸೆ ಕೊಡಿಸಿದೆವು ಆದರೆ ಫಲಕಾರಿಯಾಗದೆ ಹದಿನಾರನೇ ವಯಸ್ಸಿನಲ್ಲಿ ಹೋಗಿಬಿಟ್ಟಳು. ಸುಮ್ಮನೆ ಮಕ್ಕಳನ್ನು ಹೆತ್ತು ಬೆಳೆಸಿ ಮಣ್ಣಿಗೇಕೆ ಕೊಡಬೇಕೆಂದು ನಂತರ ಮಕ್ಕಳ ಯೋಚನೆಯೇ ಮಾಡಲಿಲ್ಲ. ನಂತರ ಅವರನ್ನು ಕ್ಷಮಿಸಿ ನಾನು ನಿಮಗೆ ಮತ್ತೆ ಹಳೆಯದನ್ನೆಲ್ಲ ನೆನಪಿಸಿ ಬೇಸರ ಉಂಟುಮಾಡಿದೆ ಎಂದಿದ್ದಕ್ಕೆ ಆತ ನಕ್ಕು ಅಯ್ಯೋ ಸುಮ್ಮನಿರಿ ಯಾರು ಏನು ಮಾಡಕ್ಕಾಗತ್ತೆ ನೀವು ಬೇಸರ ಮಾಡಿಕೊಳ್ಳಬೇಡಿ ಎಂದು ನಗುತ್ತಲೇ ಹೊರಟುಹೋದ
Rating
No votes yet

Comments