ಆತ್ಮಹತ್ಯೆ

ಆತ್ಮಹತ್ಯೆ

ಮೊನ್ನೆ ಈ ಟೀವಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮಿಂಚು ಧಾರವಾಹಿಯಲ್ಲಿ ಶಂಕರ ದಾಸ್ ಯಾವುದೋ ಆತ್ಮಹತ್ಯೆಯ ಬಗ್ಗೆ ಮಾತಾಡುತ್ತಾರೆ. ಅಂದೇ ಅವರ ಅಳಿಯ ಆತ್ಮಹತ್ಯೆಯ ಪ್ರಯತ್ನ ಮಾಡುತ್ತಾರೆ. ಧಾರವಾಹಿ ಅಲ್ಲವೇ ಸುಖಾಂತ್ಯವಾಯಿತು. ಆದರೆ ನಿಜ ಜೀವನದಲ್ಲಿ ಎಲ್ಲಾ ಪ್ರಯತ್ನಗಳು ವಿಫಲವಾಗೋದಿಲ್ಲ.
ಕೆಲವರು ಪರೀಕ್ಷೆಯಲ್ಲಿ ಫೇಲ್ ಆದೆ ಅಂತ, ಇನ್ನು ಕೆಲವರು ಭಗ್ನ ಪ್ರೇಮದಿಂದ ಇಲ್ಲ ಯಾರೋ ಏನೋ ಹೇಳಿದರು ಅಂತ (ನನ್ನ ಸ್ನೇಹಿತೆಯ ಸಹೋದರಿ ಈ ಕಾರಣದಿಂದ ಆತ್ಮಹತ್ಯೆ ಮಾಡಿಕೊಂಡರು :-( ), ಇಲ್ಲಾ ಸಾಲ ಜಾಸ್ತಿಯಾಯ್ತು ಅಂತ , ಹೀಗೆ ನಾನ ಕಾರಣದಿಂದ ಆತ್ಮಹತ್ಯೆಗೆ ಶರಣಾಗುತ್ತಾರೆ. SSLC, PUC results ಬಂದ ಮೇಲೆ ವೃತ್ತ ಪತ್ರಿಕೆ ತುಂಬಾ ಇಂತಹ ಸುದ್ದಿನೇ ಇರತ್ತೆ.ದುರ್ದೈವ ಅಂದರೆ ಈಗಂತೂ ಆತ್ಮಹತ್ಯೆ ಎಷ್ಟೊಂದು ಸುಲಭದ ಆಯ್ಕೆ ಆಗೋಗಿದೆ :-(. ಕಷ್ಟ ಮನುಷ್ಯನಿಗಲ್ಲದೇ ಮರಕ್ಕೇ ಬರತ್ತಾ ಅನ್ನೋದು ಉಂಟು ( ಮರಕ್ಕೆ ಯಾವ ಕಷ್ಟ ಬರತ್ತೆ ಅಂತ ನಮಗೇನು ಗೊತ್ತು, ಅಷ್ಟೆಲ್ಲಾ ಅರ್ಥ ಮಾಡಿಕೊಳ್ಳು ಸಾಮರ್ಥ್ಯ ಇದ್ದಿದಿದ್ರೆ ಇನ್ನೇನಿತ್ತು ಬಿಡಿ). ಎಲ್ಲಾ ಆತ್ಮಹತ್ಯೆಯ ಕಾರಣಗಳನ್ನು ನೋಡಿದರೆ ಒಂದಲ್ಲಾ ಒಂದು ರೀತಿಯಲ್ಲಿ 'ನಾನು' ಅನ್ನೋ ಅಹಂಗೆ ದಕ್ಕೆ ತಂದಿರೋದೇ.....ನಾನು ಫೇಲ್ ಆದ್ನಾ, ನನ್ನ ಅವಳು/ಅವನು ಬೇಡ ಅಂದ್ರಾ, ನನ್ನ ಮಾತು ನಡೀಲಿಲ್ವಾ, ನನಗೆ ಅವಮಾನವಾಯಿತಾ, ಹೀಗೆ, ನಮ್ಮ ತಪ್ಪಿನಿಂದಾ ಅಥವಾ ಬೇರೆಯವರ ತಪ್ಪಿನಿಂದಲೂ, ಅಹಂಗೆ ದಕ್ಕೆ ಬಂದಿರುತ್ತದೆ.ವಿಪರ್ಯಾಸವೆಂದರೆ 'ನಾನು' ಅನ್ನೋದಕ್ಕೆ ದಕ್ಕೆ ಬಂತು ಅಂತ ಮನುಷ್ಯ ಅವನನ್ನೇ ಕೊಂದುಕೊಲ್ಲುತ್ತಾನೆ!!
ಈ ಆತ್ಮಹತ್ಯಾ ಯೋಚನೆಯನ್ನು Suicidal Ideation ಅಂತಾರೆ. ಇಂತಹಾ ಅವಸ್ಥೆಯಲ್ಲಿ ಮನಃಶಾಸ್ತ್ರಜ್ಞರಿಂದ ಸಲಹೆ ಸಿಕ್ಕರೆ ಯೋಚನೆಯನ್ನು ಅನಾಹುತಕ್ಕೆ ಮುಂಚೆಯೇ ಚಿವುಟಬಹುದು.
ಇನ್ನೂ ಕೆಲವು ಸಲ ಆತ್ಮಹತ್ಯಾ ಪ್ರಯತ್ನ ನಡೆಯುತ್ತದೆ ಆದರೆ ಸಫಲವಾಗೋದಿಲ್ಲ (ಪಾಪಿ ಸಮುದ್ರಕ್ಕೆ ಹೋದರು ಮೊಣಕಾಲುದ್ದ ನೀರು ;-) ) ಇದನ್ನು Parasuicide ಎಂದು ಕರೆಯುತ್ತಾರೆ. ಒಂದು ಅಧ್ಯಯನದ ಪ್ರಕಾರ, ಇಂತಹ ವ್ಯಕ್ತಿಗಳ ಆತ್ಮಹತ್ಯೆ , ೨೩ ಪಟ್ಟು ಮಿಕ್ಕವರಿಗಿಂತ ಹೆಚ್ಚು!!USA ನಲ್ಲಿ, ಸಾವಿಗೆ , ಆತ್ಮಹತ್ಯೆ ೧೧ನೇ ಸಾಮಾನ್ಯ ಕಾರಣ!
ಸಾಯೋದಕ್ಕೂ ಅದರಲ್ಲೂ ಆತ್ಮಹತ್ಯೆ ಮಾಡಿ ಕೊಳ್ಳುವುದಕ್ಕೆ ಧೈರ್ಯಬೇಕ್ರಿ , ನಿಜ ತುಂಬಾನೇ ಧೈರ್ಯ ಬೇಕು. ಈ ಧೈರ್ಯನ ಬದುಕೋದಕ್ಕೆ ಯಾಕೆ ಉಪಯೋಗಿಸುವುದಿಲ್ಲವೋ ಗೊತ್ತಿಲ್ಲ. ಮನೆಯವರು,ಸ್ನೇಹಿತರು ಇಂತಹ ಯೋಚನೆಯಲ್ಲಿರೋರಿಗೆ ನೆರವು ನೀಡಿದರೆ, ಎಷ್ಟೋ ಆತ್ಮಹತ್ಹ್ಯೆಗಳನ್ನು ತಪ್ಪಿಸಬಹುದು. ಜೀವನದಲ್ಲಿ ಸಾಧಿಸೋದು ಬೇಕಾದಷ್ಟಿದೆ ಹಾಗೇನೇ ಅವಕ್ಕೆ ಅಡೆತಡೆ ಬರುತ್ತಾನೆ ಇರತ್ತೆ. ಹಾಗಂತ ಯಾವತ್ತು ಸೋಲ್ಲೋಪ್ಪ ಬಾರದು. ಸಾಧಿಸೋ ಛಲ ಬಿಡಬಾರದು. ದುರ್ಗುಣ, ದ್ವೇಷ, ಕ್ರೋಧ, ಮಾತ್ಸರ್ಯ....... ಮುಂತಾದವುಗಳ ಹತ್ಯೆಯಾಗಲಿ ಆತ್ಮಹತ್ಹ್ಯೇಯಲ್ಲ.

Rating
No votes yet